ಬೆಟ್ಟದ ಮೇಲೊಂದು ಮನೆಯ ಮಾಡಿ(ನಾಟಕ)-ಅವಲೋಕನ
ಬೆಟ್ಟದ ಮೇಲೊಂದು ಮನೆಯ ಮಾಡಿ(ನಾಟಕ)
ಲೇಖಕರು:ಡಾ.ಸ್ವಾಮಿರಾವ್ ಕುಲಕರ್ಣಿ
ಪ್ರಕಾಶಕರು:ಶ್ರೀಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ-೧
ಕರ್ನಾಟಕ ಸರಕಾರದ ಕನಕಶ್ರೀ ಪ್ರಶಸ್ತಿ ವಿಜೇತರು, ೨೦೧೪ ರಲ್ಲಿ ಮಸ್ಕಿಯಲ್ಲಿ ನಡೆದಿದ್ದ ೯ನೇ ರಾಯಚೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅರ್ಧಯಕ್ಷರಾಗಿದ್ದ, ದಾಸಾಸಾಹಿತ್ಯ ಪ್ರಮುಖ ವೈಚಾರಿಕ ಚಿಂತಕರಾದ ಡಾ.ಸ್ವಾಮಿರಾವ್ ಕುಲಕರ್ಣಿಯವರದು ಬಹುಮುಖ ವ್ಯಕ್ತಿತ್ವ. ಅಧ್ಯಾಪನ,ಆಡಳಿತ,ಬರವಣಿಗೆ,ಸಂಶೋಧನೆ,ಭಾಷಣ,ನಟನೆ-ನಿರ್ದೇಶನ,ಪ್ರಕಾಶನ ಹೀಗೆ ಹಲವು ರಂಗದಲ್ಲಿ ಗಟ್ಟಿಯಾಗಿ ತಮ್ಮ ಹೆಜ್ಜೆಗಳನ್ನು ಉಳಿಸಿಕೊಂಡಿರುವವರು.
ನಿವೃತ್ತಿಯಾಗಿ ದಶಕಕಗಳು ಕಳೆದರು ಅವರು ಈಗಲೂ ರಂಗನಟನೆಗೆ, ಅಸ್ಕಲಿತ ಭಾಷಣಕ್ಕೆ, ಬರವಣಿಗೆಗೆ ವಯಸ್ಸಾಗಿಲ್ಲ. ಕಳೆದ ದಸರಾ ಉತ್ಸವದ ಸಂದರ್ಭದಲ್ಲಿ ಅವರ ತಮ್ಮ ನಿವೃತ್ತ ಬ್ಯಾಂಕ ಉದ್ಯೋಗಿ ನಾರಾಯಣರಾವ್ ನಿರ್ದೇಶಿಸಿದ ಚಂದ್ರಶೇಖರ ಕಂಬಾರರ ‘ಖರೋ ಖರ’ನಾಟಕವನ್ನು ಹೈದ್ರಾಬಾದನಲ್ಲಿ ಹೋಗಿ ಪ್ರಮುಖ ಪಾತ್ರವೊಂದರಲ್ಲಿ ಅಭಿನಯಿಸಿ ಪ್ರದರ್ಶನ ನೀಡಿ ಬಂದದ್ದು ಅವರ ಕ್ರಿಯಾಶೀಲತೆಯನ್ನು ತೋರಿಸುತ್ತದೆ.
ಜೀವನೋತ್ಸಾಹದ ಪ್ರತೀಕದಂತಿರುವ ಡಾ.ಸ್ವಾಮಿರಾವ್ ಕುಲಕರ್ಣಿಯವರು ದಾಸಸಾಹಿತ್ಯ, ಜಾನಪದ, ವಚನ, ಸಂಶೋದನೆ, ನಾಟಕ, ಕಾದಂಬರಿ, ಕಾವ್ಯ, ಜೀವನ ಚರಿತ್ರೆ,,ವೈಚಾರಿಕ ಚಿಂತನ, ಸಂಪಾದನೆ ವಿವಿಧ ಬರವಣಿಗೆ ಪ್ರಕಾರಗಳಲ್ಲಿ ತಮ್ಮತನ ಮೂಡಿಸಿರುವ ಅವರ ಪ್ರತಿ ವರ್ಷವು ಕನಿಷ್ಟ ಒಂದು ಕೃತಿಯನ್ನು ಕನ್ನಡ ಸಾರಸ್ವತಕ್ಕೆ ಅರ್ಪಿಸಲೇಬೇಕು ಎನ್ನುವ ಪ್ರೀತಿನ್ನು ಇಟ್ಟುಕೊಂಡವರು.
ಇತ್ತೀಚಿಗೆ ಮಸ್ಕಿಗೆ ಬಂದಾಗ ಮಸ್ಕಿಯ e-ಸುದ್ದಿಯ ಸಂಪಾದಕರಾದ ವೀರೇಶ ಸೌದ್ರಿಯವರಿಗೆ, ನನಗೆ ಕೆಲ ಪುಸ್ತಕಗಳನ್ನು ಓದಲು ಕೊಟ್ಟಾಗ ಸೌದ್ರಿಯವರಿಗೆ ಕೊಟ್ಟ ಪುಸ್ತಕದಲ್ಲಿ ಅವರ ‘ಬೆಟ್ಟದ ಮೇಲೊಂದು ಮನೆಯ ಮಾಡಿ’ ನಾಟಕ ಸಂಕಲನ ನನಗೆ ಗಮನ ಸೆಳೆಯಿತು. ವೀರೇಶ ಸೌದ್ರಿಯವರು ನೀವು ನನಗೆ ಓದಿ , ನಮ್ಮ ಪತ್ರಿಕೆಗೆ ಪರಿಚಯ ಮಾಡಿ ಆಮೇಲೆ ನನಗೆ ಕೊಡಿ ಎಂದಾಗಲೆ ಬರೆಯಲು ಸಾಧ್ಯವಾಯಿತು.
ಅಕ್ಕಮಹಾದೇವಿಯವರ ಬದುಕು , ಸಾಧನೆಯ ಹಿನ್ನಲೆಯಲ್ಲಿ ಮೂಡಿ ಬಂದ ‘ಬೆಟ್ಟದ ಮೇಲೊಂದು ಮನೆಯ ಮಾಡಿ’ ನಾಟಕವನ್ನು ಮನೆಗೆ ಬಂದು ಓದಲು ಕುಳಿತೆ. ಒಂದು ಗುಟಿಕಿಗೆ ಚಹಾವನ್ನು ಹೀರುವಂತೆ ಹಿಡಿದ ಒಂದೆ ಗಂಟೆಯೊಳಗೆ ಮುಗಿಸಲು ಸಾಧ್ಯವಾಗಿದ್ದು ಎಲ್ಲಿಯೂ ನಿಲ್ಲಸದೆ ತಡೆರಹಿತವಾಗಿ ಓದಿಸಿಕೊಂಡು ಹೋಗುವ ಸ್ವಾಮಿರಾವ್ ಕುಲ್ಕರ್ಣಿಯವರ ಬರವಣಿಗೆ.
ಸರಳವಾಗಿ ಲಾಲಿತ್ಯ ಪೂರ್ಣವಾಗಿ ವಿಶೇಷವಾಗಿ ಸೂತ್ರಧಾರ- ಪ್ರೇಕ್ಷಕ ಪಾತ್ರದ ಮೂಲಕ ಹಾಸ್ಯದ ಮೂಲಕ ಹೊಸ ಚಿಂತನೆಗಳನ್ನು ಕಟ್ಟಿಕೊಟ್ಟ ನಾಟಕ ಎಲ್ಲರನ್ನು ಸೆಳೆಯ ಬಲ್ಲುದಾಗಿದೆ. ನನ್ನ ಸೀಮಿತ ನಾಟಕ ಅಧ್ಯಯನ ವ್ಯಾಪ್ತಿಯಲ್ಲಿ ಸೂತ್ರದಾರರು ಎಲ್ಲಾ ನಾಟಕಕಗಳ್ಲಿ ಬರುತ್ತಾರೆ ಆದರೆ ಪ್ರೇಕ್ಷಕನನ್ನು ನಾಟಕದ ಭಾಗವಾಗಿ ಬಳಸಿಕೊಂಡಿದ್ದು ನನಗೆ ವಿಶೇಷವೆನಿಸಿತು.
ನಾಟಕದಲ್ಲಿ ಅಕ್ಕಮಹಾದೇವಿಯವರ ಅಧ್ಯಾತ್ಮದ ಬದುಕಿನ ಒಳಚಿತ್ರಣಗಳ ನೋಟ, ಕುಟುಂಬದೊಂದಿಗಿನ ಸಂವಾದ, ಕೌಶಿಕನ, ಅರಮನೆಯ ದಾಸಿಯರ ನಡುವಿನ ಸಂಭಾಷಣೆಗಳಲ್ಲಿ ಹೊಸ ಹೊಳವನ್ನು ಬಿಚ್ಚಿಟ್ಟಿದ್ದಾರೆ. ‘ಕೂಸು ಕೊಡದಿರ್ದೊಡೆ ದೊರೆಗಳ್ ಕೊಲಲ್ ಬೆಸಸಿದಂ’ ಎಂಬ ಮಂತ್ರಿಗಳ ಆದೇಶಕ್ಕೆ ಮನನೊಂದು ನನ್ನ ಮನವನ್ನು ಬಲಿಕೊಡುತ್ತಿರುವೆ’ ಎಂದು ಅಕ್ಕನ ಮಾತುಗಳಲ್ಲಿ ಆಕೆ ಬದುಕಿನ ಮಾರ್ಗ ಯಾವುದಿದೆ ಎಂದು ಸೂಕ್ಷ್ಮವಾಗಿ ತಿಳಿಸಿಕೊಡುತ್ತಾರೆ.
ಈ ನಾಟಕದಲ್ಲಿ ನನಗೆ ಕಾಡಿದ್ದು ಅಲ್ಲಮ ಪ್ರಭು ಹಾಗೂ ಅಕ್ಕಮಹಾದೇವಿಯವರ ಸಂಭಾಷಣೆಯಲ್ಲಿ ಅಲ್ಲಮಪ್ರಭುಗಳು ‘ಭಾವ ಶುದ್ಧವಾಗಿದ್ದಲ್ಲಿ ಸೀರೇಯನು ಬಿಟ್ಟು ಕೂದಲಿನಿಂದ ಮರೆ ಮಾಡಿರುವುದೇತಕ್ಕೆ, ನಿನ್ನ ಅಂತರಂಗದ ದಂದ್ವ ಬಾಹ್ಯದಲಿ ತೋರಿದಂತೆ ಈ ದ್ವಂದ್ವದ ಹರ ಮೆಚ್ಚನು ತಾಯೆ’ ಎಂದಾಗ ‘ನನ್ನ ಮನದ ದ್ವಂದ್ವವಲ್ಲ. ಕಾಮನ ಮುದ್ರೆಯ ಕಂಡು ನಿಮಗೆ ನೋವಾದೀತೆಂಬ ಅರಿವು ನನ್ನ ಮನದಲ್ಲಿ’ ಎನ್ನುವ ಅಕ್ಕನ ಮಾತು ಚಿಂತನೆಗೆ ಹಚ್ಚುವಂತಹದ್ದು.
ಎಲ್ಲರ ಪ್ರಶ್ನೆಗಳಿಗೆ ದಿಟ್ಟತನದಿಂದ ಉತ್ತರಿಸಿ ಎಲ್ಲರ ಮನಗೆದ್ದ ಮೇಲೆ ಬಸವಣ್ಣನವರು ‘ನಮ್ಮ ಅನುಭವಮಂಟಪಕ್ಕೆ ಬಂದು ನಮಗೆ ಹೋಸ ಚೈತನ್ಯ, ಆನೆ ಬಲಬಂದಂತಾಗಿದೆ. ತಾವು ಇಲ್ಲೆ ಇದ್ದು ಶರಣ ಚಳುವಳಿಗೆ ಯೋಗ್ಯ ಮಾರ್ಗದರ್ಶನ ನೀಡಬಹುದು’ ಎಂದಾಗ
‘ನಿಮ್ಮ ಪ್ರೀತಿಯ ಗೌರವಕ್ಕರ ಕೃತಜ್ಞಳು. ನಮ್ಮ ಗುರಿ ಒಂದಾದರೂ ಮಾರ್ಗಗಳು ಬೇರೆ ತಮ್ಮದು ಸಮಾಜ ಮುಖಿ ಧೋರಣೆ ನನ್ನದು ಪರಮುಖಿ ಸ್ವಭಾವ. ತಮ್ಮದು ಸಮಾಜಿಕ ಚಿಂತನೆ ನನ್ನದು ಪರಮುಖಿ ಚಿಂತನೆ ನಿಮಗೆ ಸಮಾಜಬೇಕು ನನಗೆ ಚೆನ್ನಮಲ್ಲಿಕಾರ್ಜುನ ಬೇಕು’ ಎಂದು ನಿರ್ಭಯವಾಗಿ ಹೇಳುತ್ತಾಳೆ.
ಅಕ್ಕಮಹಾದೇವಿಯ ಈ ನಾಟಕದಲ್ಲಿ ಅಕ್ಕನ ಭಕ್ತಿ ಹಾಗೂ ಆಧ್ಯಾತ್ಮಿಕ ಮಾರ್ಗವೆ ನಾಟಕದ ಕೇಂದ್ರಬಿಂದುವಾಗಿದೆ. ನಮ್ಮ ಭಾಗದ ಭಾಷೆಯ ಬಳಕೆಯಿಂದ ಬಲು ಆಪ್ತವಾಗುತ್ತದೆ. ಓದುವಾಗಲೆ ಮುಗಿಯಿಲ್ಲ ಎನ್ನುವ ಪ್ರಶ್ನೆ ಕಾಡದೆ ಇರುವುದು.
ಇದರಲ್ಲಿ ಬಂದ ಕೆಲ ಮಾತುಗಳು ಬಹಳ ವಿಶೇಷವಾಗಿರುವಂತಹವು.
‘ಬದುಕಿಗಾಗಿ ಚಿನ್ನ ಬೇಡ, ನಮ್ಮ ಬದುಕೆ ಚಿನ್ನವಾಗಬೇಕು’
‘ಬದುಕಿನ ಬಯಕೆಗಳು ಕಡಿಮೆಯಾದಂಗ , ಆನಂದ ಹೆಚ್ಚಾಗತದಂತ’
‘ನಮ್ಮ ಶರಣರು ಚರಿತ್ರೆಗಿಂತ ಚಾರಿತ್ರ್ಯಿಗೆ ಹೆಚ್ಚು ಮಹತ್ವ ಕೊಟ್ಟವರು’
‘ಕಾಯಕ ಎಂದರೆಪ್ರಾಮಾಣಿಕತೆಯಿಂದ ದುಡಿದು ಗಳಿಸುವುದು ದಾಸೋಹ ಎಂದರೆ ಇತರರೊಂದಿಗೆ ಹಂಚಿಕೊಂಡು ಉಣ್ಣುವುದು’
‘ನೋವೆ ಸುಖದ ಮೂಲ,, ಕಟ್ಟಿಗೆ ತಾನು ಸುಟ್ಟುಗೊಳ್ಳದೆ ಬೆಂಕಿ ಸಿಗದು, ಗಂಧದ ಕಡ್ಡಿ ತಾನು ಸುಟ್ಟುಕೊಳ್ಳದೆ ನಮಗೆ ಸುಹಾಸನೆ ಸಿಗದು. ದೀಪ ತಾನು ಸುಟ್ಟುಕೊಳ್ಳದೆ ಬೆಳಕು ಕೊಡದು’
ಇಂತಹ ಹಲವಾರ ವಿಶೇಷ ಮಾತುಗಳ ನಾಟಕದ ಉದ್ದಕ್ಕೂ ಕಾಣುತ್ತವೆ. ಮಕ್ಕಳಾದಿಯಾಗಿ ಎಲ್ಲರಿಗೂ ಇಷ್ಟವಾಗುವ ನಾಟಕ ಇದಾಗಿದೆ. ಹದಿನೇಳು ಅಧ್ಯಾಯಗಳನ್ನೊಳಗೊಂಡ ಈ ನಾಟಕದಲ್ಲಿ ಪ್ರತಿ ಅಧ್ಯಾಯದ ಕೊನೆಗೆ ‘ಬೆಟ್ಟದಾ ಮೇಲೊಂದು ಮನೆಯ ಮಾಡಿ’ ಹಾಡಿನ ವಾಚನ ಮೂಡಿಬರುವುದು ನಾಟಕಕ್ಕೆ ಒಂದು ಶಕ್ತಿ ಕೊಟ್ಟಂತಾಗಿದೆ. ನಾಟಕದ ಓದು ಮುಗಿದ ಮೇಲೆ ಅದೆ ಗುನುಗುತ್ತದೆ. ದೆವ್ವನದ ಭಾವಿ ಯಂತಹದ ಮಹತ್ವದ ನಾಟಕ ಬರೆದಿರುವ ಸ್ವಾಮಿರಾವ್ ಕುಲಕರ್ಣಿಯವರ ಈ ನಾಟಕ ಸೀಮಿತ ವ್ಯಾಪ್ತಿಹೊಂದಿರುವುದರಿಂದ ಸರಳ ಎನಿಸುವುದು ಸಹಜವು ಆಗಿದೆ..
ನಿವೃತ್ತ ನಂತರದಲ್ಲೂ ಕ್ರಿಯಾಶೀಲತೆಯನ್ನು ಹೊಂದಿರುವ ಕುಲಕರ್ಣಿ ಗುರುಗಳಿಂದ ಅನೇಕ ಕೃತಿಗಳು ಹೊರಹೊಮ್ಮಿ ಓದುಗರ ಮನವನ್ನು ತಣಿಸಲಿ ಎನ್ನುವುದು ನನ್ನ ಆಶಯ
ಗುಂಡುರಾವ್ ದೇಸಾಯಿ