ನೆಹರೂ ನೆನಪು

ನೆಹರೂ ನೆನಪು


ಅನೇಕ ಕಾರಣಗಳಿಂದಾಗಿ ಹಿಂದೆ ಬಿದ್ದಿದ್ದ ಭಾರತ ದೇಶಕ್ಕೆ ಅಂತಾರಾಷ್ಟ್ರೀಯ ಮಹತ್ವ ತಂದುಕೊಟ್ಟವರಲ್ಲಿ ನೆಹರೂ ಅವರಿಗೆ ಮಿಗಿಲಾದ ಸ್ಥಾನವಿದೆ.

ನಿರ್ವಿವಾದವಾಗಿ ಅವರು ವಿಶ್ವದ ಪ್ರಮುಖ ನಾಯಕರರಲ್ಲಿ ಒಬ್ಬರಾಗಿದ್ದರು. ಸ್ವಾತಂತ್ರ್ಯ ಸಿಕ್ಕ ಸಂದರ್ಭದಲ್ಲಿ ಭಾರತದ ರೀತಿ ನೀತಿಗಳನ್ನು ರೂಪಿಸಿದ ಕೀರ್ತಿ ಅವರದು. ರಾಜರ ಮತ್ತು ನಿರಂಕುಶ ಪ್ರಭುತ್ವದ ಬಗ್ಗೆ ಅವರಿಗೆ ಪ್ರೀತಿ-ಗೌರವಗಳಿರಲಿಲ್ಲ. ಹಾಗಾಗಿ ಫ್ಯಾಸಿಸ್ಟರಿಗೂ ನೆಹರೂ ಬಗ್ಗೆ ಒಲವಿರಲು ಸಾಧ್ಯವಿಲ್ಲ. ಮೂವತ್ತರ ದಶಕದಲ್ಲಿ ಅವರ ಒಲವು ಅಬಿಸೀನಿಯ ಮತ್ತು ಸ್ಪೇನ್ ಪ್ರಜಾಪ್ರಭುತ್ವಗಳತ್ತ ಇತ್ತು.

ಒಮ್ಮೆ ಅವರು ಯುರೋಪಿನ ಪ್ರವಾಸದಲ್ಲಿದ್ದಾಗ ಇಟಲಿಯ ಸರ್ವಾಧಿಕಾರಿ ಮುಸ್ಸೊಲೀನಿ ಅವರನ್ನು ಕಾಣಬಯಸಿದ. ಆದರೆ ಪ್ರಜಾಪ್ರಭುತ್ವವಾದಿ ಜವಾಹರರು ಆತನ ಆಮಂತ್ರಣವನ್ನು ನಿರಾಕರಿಸಿದರು.
ಭಾರತದ ಅಲಿಪ್ತ ನೀತಿಗೆ ನೆಹರೂ ಅವರೇ ಕಾರಣರು. ಪ್ರಪಂಚದಲ್ಲಿ ಅಲಿಪ್ತ ರಾಷ್ಟ್ರಗಳ ಸಂಘಟನೆಯಾಗಲು ಇದು ಪೀಠಿಕೆಯಾಯಿತು. ನೆಹರೂ ಸ್ವಭಾವತಃ ಯುದ್ಧವಿರೋಧಿಯಾಗಿದ್ದರು. ಶಾಂತಿಯ ಮೂಲಕ ವಿಶ್ವಭಾೃತೃತ್ವದ ಕಡೆಗೆ ಹೆಜ್ಜೆ ಹಾಕಬೇಕೆಂದು ಅವರು ಬರೆದಿದ್ದಾರೆ. ಅಂತರ ರಾಷ್ಟ್ರೀಯ ಕಲಹಗಳು ಪರಸ್ಪರ ವಿಚಾರವಿನಿಮಯ ಮತ್ತು ಸಂಧಾನಗಳಿಂದ ಇತ್ಯರ್ಥವಾಗಬೇಕೆಂಬುದು ಅವರು ಹೇಳುತ್ತಲೇ ಇದ್ದರು.
ವಸಾಹತುಶಾಹಿಗೆ ಅವರ ಪೂರ್ಣ ವಿರೋಧವಿತ್ತು. ಅದಕ್ಕೆ ಒಳಗಾದ ದೇಶಗಳ ಬಗ್ಗೆ ಅವರಿಗೆ ಸಹಾನುಭೂತಿಯಿತ್ತು. ಕ್ರೌರ್ಯ ದಬ್ಬಾಳಿಕೆಗಳು ಪ್ರಪಂಚದ ಯಾವುದೇ ಭಾಗದಲ್ಲಿ ನಡೆಯುತ್ತಿದ್ದರೂ ನೆಹರೂ ಅದಕ್ಕೆ ತಮ್ಮ ತೀವ್ರ ವಿರೋಧ ಪ್ರಕಟಿಸುತ್ತಿದ್ದರು. ನೆಹರೂ ಮಹಾನ್ ಪ್ರಜಾಪ್ರಭುತ್ವವಾದಿಯಾಗಿದ್ದರು. ಬಹಳ ಜನಪ್ರಿಯರಾಗಿದ್ದ ಅವರು ಬಯಸಿದ್ದರೆ ಭಾರತದ ಸರ್ವಾಧಿಕಾರಿಯಾಗಲು ಯಾವ ಅಡ್ಡಿಯೂ ಇರಲಿಲ್ಲ. ಆದರೆ ಅವರೆಂದೂ ಸರ್ವಾಧಿಕಾರವನ್ನು ಬಯಸಲಿಲ್ಲ. ಅವರ ಸಂಪುಟದ ಸದಸ್ಯರಲ್ಲಿ ಅವರ ಸಮಾಜವಾದಿ ಆರ್ಥಿಕ ಕಾರ್ಯಕ್ರಮ ಮತ್ತು ನೀತಿಗಳ ಬಗ್ಗೆ ಭಿನ್ನಾಭಿಪ್ರಾಯ ತಳೆದವರಿದ್ದರು. ಆದರೂ ಅವರು ಎಲ್ಲರನ್ನೂ ವಿಶ್ವಾಸ ಆದರಗಳಿಂದ ಕಾಣುತ್ತಿದ್ದರು. ಅವರ ಕಟು ವಿಮರ್ಶಕರಾಗಿದ್ದ ಲೋಹಿಯಾ ಸಂಸತ್ತಿನಲ್ಲಿ ಭಾಷಣ ಮಾಡುವಾಗ ನೆಹರೂ ಎಂದೂ ತಪ್ಪಿಸಿಕೊಳ್ಳುತ್ತಿರಲಿಲ್ಲವಂತೆ.
ಅವರಲ್ಲಿ ಅಪಾರ ಮಾನವೀಯತೆಯಿತ್ತು. ಇತರರ ಕುಂದುಕೊರತೆಗಳನ್ನು, ತಪ್ಪುಗಳನ್ನು ಕ್ಷಮಿಸುವ ಉದಾರಗುಣ ಅವರಿಗಿತ್ತು. ತಮ್ಮನ್ನು ನಂಬಿದವರ ಮತ್ತು ತಾವು ನಂಬಿದವರ ಕೈಬಿಡುವುದು ಅವರಿಗೆ ಬಹಳ ಕಷ್ಟವಾಗುತ್ತಿತ್ತಂತೆ. ಚೀನದೊಡನೆ ಗಡಿಯುದ್ಧದ ಸೋಲಿನ ಆನಂತರವೂ ಅವರು ಆಗ ರಕ್ಷಣಾಮಂತ್ರಿಯಾಗಿದ್ದ ಕೃಷ್ಣ ಮೆನನ್ನರನ್ನು ಬಿಟ್ಟುಕೊಡಲು ಒಪ್ಪಿರಲಿಲ್ಲ.
ಜವಾಹರರು ವ್ಯಕ್ತಿಸ್ವಾತಂತ್ರ್ಯ ಮತ್ತು ಗೌರವಗಳ ಬಗ್ಗೆ ಅಪಾರ ನಿಷ್ಠೆಯುಳ್ಳವರಾಗಿದ್ದರು. ಸಂವಿಧಾನದಲ್ಲಿ ಹೇಳಲಾಗಿದ್ದ ಮೂಲಭೂತ ಹಕ್ಕುಗಳ ಮತ್ತು ನ್ಯಾಯಾಂಗದ ಸ್ವಾತಂತ್ರ್ಯಗಳನ್ನು ಮೊಟಕುಗೊಳಿಸುವ ಯಾವುದೇ ಕ್ರಮವನ್ನೂ ಅವರು ಕೈಗೊಳ್ಳಲಿಲ್ಲ. ಸ್ವಾತಂತ್ರ್ಯದೊಡನೆ ಸಮಾಜವಾದವನ್ನೂ ಅವರು ಬಯಸಿದ್ದರು. ಇದುವೇ ಅವರ ಎಲ್ಲ ಕಾರ್ಯಕ್ರಮಗಳಿಗೆ ಅಡಿಗಲ್ಲಾಗಿತ್ತು. ಅವರು ಬಯಸುತ್ತಿದ್ದುದು ಪ್ರಜಾಸತ್ತಾತ್ಮಕ ಸಮಾಜವಾದ. ಅತ್ಯುತ್ತಮವಾದ ಹಲವು ಸಂಸ್ಥೆಗಳನ್ನು ಸ್ಥಾಪಿಸಿ ಪ್ರಜಾಪ್ರಭುತ್ವದ ಬೇರುಗಳನ್ನು ಬಲಗೊಳಿಸುತ್ತಲೇ ಆಧುನಿಕ ಭಾರತವನ್ನು ಕಟ್ಟಲು ಅವರು ನಿರಂತರವಾಗಿ ಪ್ರಯತ್ನಿಸಿದರು. ನೆಹರೂ ಕಾಲದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಬಹಳ ವೇಗವಾಗಿ ಬೆಳೆದುವು. ಉಕ್ಕಿನ ಕಾರ್ಖಾನೆಗಳು ಅಸ್ತಿತ್ವಕ್ಕೆ ಬಂದುವು. ವಿದ್ಯುತ್ತಿನ ಉತ್ಪಾದನೆ ಮತ್ತು ನೀರಾವರಿಗಾಗಿ ದೊಡ್ಡ ಅಣೆಕಟ್ಟುಗಳ ನಿರ್ಮಾಣವಾಯಿತು.
ಜಾತೀಯತೆ. ಸಂಕುಚಿತ ರಾಷ್ಟ್ರೀಯತೆ, ಧರ್ಮಾಂಧತೆಯನ್ನು ಅವರು ಇಷ್ಟಪಡುತ್ತಿರಲಿಲ್ಲ. ಇವತ್ತಿನ ಕೆಲವರು ನೆಹರೂವನ್ನು ದ್ವೇಷಿಸಲು ಇದುವೇ ಮುಖ್ಯ ಕಾರಣ. ನೆಹರೂ ಅವರ ಇತಿಹಾಸ ಪ್ರಜ್ಞೆಯೂ ಅಸಾಧಾರಣವಾಗಿತ್ತು. ಬುದ್ಧ, ಮತ್ತು ಅಶೋಕರನ್ನು ಅವರು ಬಹಳ ಇಷ್ಟ ಪಡುತ್ತಿದ್ದರು. ಬರ್ನಾರ್ಡ್ ಷಾ ಮತ್ತು ಬಟ್ರ್ರಂಡ್ ರಸಲ್ ಅವರ ಮಿತ್ರರಾಗಿದ್ದರು. ಒಂಬತ್ತು ಸಾರಿ ಸೆರೆಮನೆ ಸೇರಿದ್ದ ನೆಹರೂ ಅಲ್ಲಿಯ ಸಮಯವನ್ನು ಬರೆವಣಿಗೆ ಮತ್ತು ಅಧ್ಯಯನಗಳಿಗೆ ಉಪಯೋಗಿಸಿಕೊಂಡರು.
ಇಂದಿನ ಬದಲಾದ ಕಾಲಘಟ್ಟದಲ್ಲಿ ನೆಹರೂ ಆಡಳಿತದ ಅನೇಕ ದೌರ್ಬಲ್ಯಗಳು ನಮಗೆ ಗೋಚರಿಸಬಹುದು. ಆದರೆ ಸ್ವಾತಂತ್ರ್ಯ ಹೋರಾಟದಿಂದ ಬಸವಳಿದಿದ್ದ, ವಿಭಜನೆಯಿಂದ ಕಂಗಾಲಾಗಿದ್ದ ಭಾರತವನ್ನು ಅವರು ಆ ಕಾಲದಲ್ಲಿ ಮುನ್ನಡೆಸಿದ ರೀತಿ ಮಾತ್ರ ಐತಿಹಾಸಿಕವಾದುದು.
ನೆಹರೂ ಯೋಗ್ಯತೆಯನ್ನು ತಿಳಿದುಕೊಳ್ಳಬಯಸುವವರಿಗೂ ಒಂದು ಯೋಗ್ಯತೆ ಬೇಕು.

ಪುರುಷೋತ್ತಮ ಬಿಳಿಮಲೆ

Don`t copy text!