ಅಕ್ಕನೆಡೆಗೆ-ವಚನ – 13
ವಾರದ ವಿಶೇಷ ವಚನ ವಿಶ್ಲೇಷಣೆ
ಅಂತರಂಗ ಬಹಿರಂಗದಲಿ
ಕಲ್ಯಾಣವೆಂಬುದಿನ್ನಾರಿಗೆ ಹೊಗಬಹುದು?
ಹೊಗಬಾರದು ಅಸಾಧ್ಯವಯ್ಯಾ
ಆಸೆ ಆಮಿಷ ಅಳಿದಂಗಲ್ಲದೆ ಕಲ್ಯಾಣದತ್ತಲಡಿಯಿಡಬಾರದು
ಒಳಹೊರಗು ಶುದ್ಧನಾದಂಗಲ್ಲದೆ ಕಲ್ಯಾಣವ ಹೊಗಬಾರದು
ನೀನಾನೆಂಬುದ ಹರಿದಂಗಲ್ಲದೆ ಕಲ್ಯಾಣದ ಒಳಗು ತಿಳಿಯಬಾರದು
ಚೆನ್ನಮಲ್ಲಿಕಾರ್ಜುನಂಗೊಲಿದು ಉಭಯ ಲಜ್ಜೆ ಅಳಿದೆನಾಗಿ
ಕಲ್ಯಾಣವಂ ಕಂಡು ನಮೋ ನಮೋ ಎನುತಿರ್ದೆನು.
ಸಾಮಾನ್ಯ ಅರ್ಥದಲ್ಲಿ ಕಲ್ಯಾಣ ಅಂದರೆ ಶುಭ ಸೂಚಿಸುವ ಪದ. ಮದುವೆ ಕಾರ್ಯಕ್ಕೆ ಕಲ್ಯಾಣ ಮಹೋತ್ಸವವೆಂದು ಕರೆಯುತ್ತಾರೆ. ಇತರರಿಗೆ ಒಳ್ಳೆಯದಾಗಲೆಂದು ಬಯಸುವುದು, ಹಾಗೇ ಒಳ್ಳೆಯದನ್ನು ಮಾಡುವುದು, ಎರಡೂ ಕಲ್ಯಾಣ. ಜನಪದೀಯರು ‘ನಿನ್ ಕಲ್ಯಾಣಾಗ್ಲಿ’ ಎಂದು ಸಿಟ್ಟಿನಿಂದ ಬೈಯುತ್ತಾರೆ. ಇದು ವ್ಯಕ್ತಿಗೆ ವ್ಯಕ್ತಿಯ ಮೇಲಿರುವ ಕೋಪ ಹಾಗೂ ಅದರಲ್ಲೇ ಅಡಗಿರುವ ಪ್ರೀತಿಯ ಸೂಚಕ. ಹೀಗೆ ಕಲ್ಯಾಣ ಶಬ್ದವು ಮನುಷ್ಯನ ದಿನನಿತ್ಯದ ಮಾತುಕತೆಯಾಗಿ ಬಳಕೆಯಲ್ಲಿದೆ.
ಅಕ್ಕಮಹಾದೇವಿಯ ಈ ವಚನದಲ್ಲಿ ಬರುವ ‘ಕಲ್ಯಾಣ’ ಶಬ್ದವನ್ನು ಎರಡು ಅರ್ಥದಲ್ಲಿ ಗ್ರಹಿಸಬಹುದು. ಒಂದು ಲೌಕಿಕ ಇನ್ನೊಂದು ಪಾರಮಾರ್ಥಿಕ. ಅಕ್ಕನ ಕೆಲವು ವಚನಗಳಲ್ಲಿ ‘ಕಲ್ಯಾಣ’ ಮತ್ತು ‘ಕದಳಿ’ ಪದಗಳು ಉಪಮೆಗಳಾಗಿ ಬಳಕೆಯಾಗಿರುವುದನ್ನು ಗಮನಿಸುತ್ತೇವೆ. ಒಂದು ನೆಲೆಯಲ್ಲಿ ಭೂಮಿಗೆ ಹೋಲಿಸಿದರೆ, ಇನ್ನೊಂದು ದೇಹಕ್ಕೆ ಹೋಲಿಸಲಾಗಿದೆ. ಹಡಪದ ಲಿಂಗಮ್ಮನ ವಚನದ ಸಾಲು ‘ಕಾಯವೆಂಬ ಕದಳಿಯ ಹೊಕ್ಕು, ಜೀವಪರಮರ ನೆಲೆಯನರಿದು‘ ಸ್ಪಷ್ಟಪಡಿಸುತ್ತದೆ.
ಅಕ್ಕ ಕೌಶಿಕ ಮಹಾರಾಜ ಮತ್ತವನ ಅರಮನೆಯನ್ನು ಧಿಕ್ಕರಿಸಿ ಬಂದವಳು. ಆಧ್ಯಾತ್ಮವೇ ಅವಳ ಸಾಧನೆಯ ಮಾರ್ಗ. ಅದಕ್ಕೆ ಶರಣರ ಒಡನಾಟ ಅಗತ್ಯವೆಂದು, ತನಗೆ ಅವರೇ ಮಾರ್ಗ ತೋರಲು ಸಾಧ್ಯವೆಂದು, ಕಲ್ಯಾಣದ ಹೆಬ್ಬಾಲಿಗೆ ಬಂದು ನಿಲ್ಲುತ್ತಾಳೆ. ‘ಅನುಭವ ಮಂಟಪ’, ‘ಮಹಾಮನೆ’, ಶೂನ್ಯ ಪೀಠದ ಅಲ್ಲಮ ಪ್ರಭುಗಳು, ಬಸವಣ್ಣನ ವಿಚಾರಧಾರೆ, ಎಲ್ಲವನ್ನೂ ತಿಳಿದಿದ್ದ ಅಕ್ಕ ಆತ್ಮಾವಲೋಕನ, ಆತ್ಮಾನುಸಂಧಾನದ ತೀವ್ರತೆಯಿಂದ ಕಲ್ಯಾಣದ ಶರಣರನ್ನು ಕಾಣಲು ಹಾತೊರೆದು ಬಂದಿರುತ್ತಾಳೆ.
‘ದೇಹವೇ ದಿವ್ಯಾಂಬರವೆನಗೆ’ ಎಂದು ಹೇಳುವ ಅಕ್ಕ ಕಲ್ಯಾಣ, ಕದಳಿಯಂಥ ಕಾಯದಾಚೆಗಿನ ಭಾವದೊಂದಿಗೆ ಬಂದಿರುತ್ತಾಳೆ. ಉಟ್ಟ ಉಡುಗೆ ತೊಟ್ಟ ತೊಡುಗೆಯ ವ್ಯಾಮೋಹದಿಂದ ಮುಕ್ತಳಾಗಿರುತ್ತಾಳೆ. ಕಲ್ಯಾಣದ ಮುಖ್ಯ ದ್ವಾರದಲ್ಲಿ ನಿಂತು ‘ಕಾಯ ಕಲ್ಯಾಣ’ ಮತ್ತು ’ಭೂಮಿ ಕಲ್ಯಾಣ’ ಕುರಿತು ಅಕ್ಕ ಈ ವಚನದಲ್ಲಿ ಹೇಳಿದ್ದಾಳೆ.
‘ಕಲ್ಯಾಣ ನಾಡು’ ಅನೇಕ ದಿಕ್ಕುಗಳಿಂದ ಬಂದ ಶರಣರ ಸಮೂಹ ನೆಲೆಸಿದ ಪುಣ್ಯ ಭೂಮಿ. ಅಲ್ಲಿಗೆ ಹೋಗುವಂತವರು ಯಾರು? ಸಾಮಾನ್ಯರು ಹೋಗಲು ಸಾಧ್ಯವಿಲ್ಲ. ಅವರೊಂದಿಗೆ ಇರಬೇಕಾದರೆ, ತಕ್ಕ ಗುಣ ಹೊಂದಿರಬೇಕು. ಇಲ್ಲವಾದರೆ ಹೋಗಲೇಬಾರದು ಎನ್ನುವ ಎಚ್ಚರಿಕೆಯೂ ಈ ವಚನದಲ್ಲಿದೆ. ಹಾಗಾದರೆ ಕಲ್ಯಾಣದೊಳಗೆ ಹೋಗಬೇಕಾದರೆ ಮನುಷ್ಯ ಹೇಗಿರಬೇಕು? ಅದನ್ನೂ ಇಲ್ಲಿ ಅಕ್ಕ ಒಂದೊಂದಾಗಿ ವ್ಯಕ್ತ ಪಡಿಸುವಳು.
ಮಾನವನಲ್ಲಿ ಅರಿಷಡ್ವರ್ಗಗಳು ಹುಟ್ಟಿದಾಗಿನಿಂದ ಸಾಯುವವರೆಗೂ ಸಹಜವಾಗಿಯೇ ಇರುತ್ತವೆ. ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ. ಅಸೆ ಆಮಿಷಗಳನ್ನು ಮೀರಿ ಬದುಕುವ ರೀತಿಯನ್ನು ರೂಢಿಸಿಕೊಂಡ ಸರಳ ವ್ಯಕ್ತಿತ್ವ ಶರಣರದು.
‘ಆಸೆ ಎಂಬುದು ಅರಸಂಗಲ್ಲದೆ ಶಿವಭಕ್ತರಿಗುಂಟೆ ಆಯ್ಯಾ?’ ಎಂದು ಪ್ರಶ್ನಿಸಿದ ಆಯ್ದಕ್ಕಿ ಲಕ್ಕಮ್ಮ, ರಾಜಸತ್ತೆ ಮತ್ತು ತನ್ನ ಗಂಡನಿಗೆ ಸವಾಲು ಹಾಕುತ್ತಾಳೆ. ಹಾಗೆ ಅತಿಯಾದುದನ್ನು ನಿರಾಕರಿಸುವಂತೆ ಆಜ್ಞೆಯನ್ನೂ ಮಾಡುತ್ತಾಳೆ.
ಬಸವಣ್ಣನವರ ಜನಪ್ರಿಯ ವಚನ ಅರ್ಥಪೂರ್ಣ.
‘ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ
ತನ್ನ ಬಣ್ಣಿಸಬೇಡ ಇದಿರ ಹಳಿಯಲಿ ಬೇಡ
ಇದೇ ಅಂತರಂಗ ಶುದ್ಧಿ ಇದೇ ಬಹಿರಂಗ ಶುದ್ಧಿ
ಇದೇ ನಮ್ಮ ಕೂಡಲಸಂಗಮದೇವನೊಲಿಸುವ ಪರಿ’.
ಏಳು ಸಪ್ತ ಸೂತ್ರಗಳಿವೆ. ಇಲ್ಲಿ ‘ಬೇಡ’ ಎನ್ನುವ ಎಲ್ಲವೂ ಮನುಷ್ಯನ ಮಿತಿ. ಅದನ್ನು ಸವಾಲಾಗಿ ತೆಗೆದುಕೊಂಡು, ತನ್ನನ್ನು ತಾನು ನಿಯಂತ್ರಣ ಮಾಡಿಕೊಳ್ಳುವುದೇ ವ್ಯಕ್ತಿತ್ವದ ಅಭ್ಯುದಯ. ಈ ದೇಹ ಮತ್ತು ಮನಸು ಎರಡೂ ವಿಕಾಸವಾಗಿ, ಶುದ್ಧವಾದವರು ಮಾತ್ರ ಕಲ್ಯಾಣ ಪ್ರವೇಶ ಮಾಡಬಹುದು.
ಮನುಷ್ಯ ಆಸ್ತಿ, ಸಂಪತ್ತಿಗಾಗಿ ಸಂಬಂಧಗಳನ್ನು ಮರೆಯುವ ಹಂತ ತಲುಪುತ್ತಾನೆ. ‘ನಾನು’ ಎನ್ನುವುದು ಮುಖ್ಯವಾಗಿ ತನ್ನ ಒಣ ಪ್ರತಿಷ್ಠೆಗಾಗಿ ಒದ್ದಾಡುತ್ತಾನೆ. ಈ ರೀತಿ ‘ನಾನು’ ‘ನೀನು’ ಎನ್ನುವುದು ಹರಿದು ಹೋಗಬೇಕು. ಅಂತಹವರು ಕಲ್ಯಾಣದೊಳಗೆ ಏನಿದೆ? ಏನು ನಡೆಯುತ್ತಿದೆ? ಎಂದು ತಿಳಿದುಕೊಳ್ಳಬಹುದು. ಅಕ್ಕ ದೇಹಾತೀತವಾದ ಭಾವದೊಂದಿಗೆ ಕಲ್ಯಾಣದ ಬಾಗಿಲಲ್ಲಿ ಬಂದು ನಿಂತಿದ್ದಾಳೆ.
ಹಾಗೆ ನಿಂತ ಅಕ್ಕನಲ್ಲಿ ಒಳಗೂ ಕಲ್ಯಾಣ ಹೊರಗೂ ಕಲ್ಯಾಣ ಗೋಚರಿಸುತ್ತದೆ. ಕಲ್ಯಾಣದಷ್ಟೇ ಪರಿಶುದ್ಧವಾದ ದೇಹ ಮಾತ್ರ ಕಲ್ಯಾಣದ ಒಳಗೆ ಪ್ರವೇಶಿಸಲು ಸಾಧ್ಯ ಎನ್ನುವ ಮಾತು ಸ್ಪಷ್ಟವಾಗುತ್ತದೆ. ಹಾಗೆಯೆ ಕಾಯ ಕಲ್ಯಾಣದ ಪ್ರವೇಶವನ್ನೂ ಸೂಕ್ಷ್ಮವಾಗಿ ಗ್ರಹಿಸಬಹುದು.
ಇಂದು ನಾವು ಆಧುನಿಕ ಯುಗದಲ್ಲಿ ನಮ್ಮ ಮನಸು, ದೇಹವನ್ನು ಕಲ್ಯಾಣವಾಗಿಸಿಕೊಳ್ಳುವತ್ತ ಗಮನ ಹರಿಸಬಹುದು. ಮೊದಲು ನಮ್ಮ ಮನಸು ಕಲ್ಯಾಣವಾಗಿಸಿ, ನಂತರ ನಮ್ಮ ಮನೆ, ತದನಂತರ ನಾವು ನಿತ್ಯ ಓಡಾಡುವ ಮನೆ, ಶಾಲೆ, ಕಾಲೇಜು, ಆಫೀಸ್, ಬ್ಯಾಂಕ್ ಮುಂತಾದ ಸ್ಥಳಗಳನ್ನು ಕಲ್ಯಾಣವಾಗಿಸುವ ಪ್ರಯತ್ನ ಮಾಡಿದಲ್ಲಿ ಈ ವಚನ ಸಾರ್ಥಕ ಅಲ್ಲವೆ?
ಸಿಕಾ