ಅತ್ತು ಬಿಡು ಬಸವಣ್ಣ
ಅತ್ತು ಬಿಡು ಬಸವಣ್ಣ, ಅತ್ತು ಬಿಡು
ನೀ ಕಟ್ಟಿದ ಸಮಾಜ ಬಂದು ನೋಡು
ಗುರು-ಜಗದ್ಗುರುಗಳ ಹುಚ್ಚಾಟ
ರಾಜಕಾರಣಿಗಳ ಹಾರಾಟ ಚೆಲ್ಲಾಟ
ಬಡವ-ಬಗ್ಗರ ಹಸಿವಿನ ಗೋಳಾಟ
ಧರ್ಮ-ಧರ್ಮಗಳ ಹೋರಾಟ.
ಮೇಲು-ಕೀಳಿಲ್ಲವೆಂದೆ ಅಂದು ನೀನು
ವರ್ಗ-ವರ್ಣವಿರದ ಜೀವನ ಹಾಲ್ಜೇನು
ಕಾಯಕ-ದಾಸೋಹ ಕಲಿಸಿದವನು
ಕರ್ಮಠವು ತೆಗಳುವುದು ನಿನ್ನನು
ಲಿಂಗ-ವಿಭೂತಿಗಳಿರದ ಭವಿಗಳು ನಾವು
ವಚನ-ಪಚನ ಮಾಡಿಕೊಳ್ಳೆವು ನಾವು
ಕುರಿದೊಡ್ಡಿಯ ಕುರಿಗಳು ನಾವು
ಬದಲಾಯಿಸಲು ಬರಬೇಡಿ ನೀವು.
ಕಿತ್ತು ತಿನ್ನುತ್ತಿವೆ ರಣಹದ್ದುಗಳು
ರಕ್ಷಣೆಗೆ ನಿಂತಿವೆ ಗಿಡುಗಗಳು
ಸುಳಿದಾಡುತಿವೆ ಸರಿಸೃಪಗಳು
ಹೊಂಚುಹಾಕಿ ನಿಂತಿವೆ ಮೃಗಗಳು
ಅಪ್ಪ ನಿನ್ನ ಹೆಸರು ಬಳಸಿ ವ್ಯಾಪಾರ
ಪ್ರಶಸ್ತಿ- ಸನ್ಮಾನಗಳ ಹಾರ, ಜೈಕಾರ
ತಂದಿಹರು ನಿನ್ನ ಕನಸಿಗೆ ಸಂಚಕಾರ
ಬಲ್ಲವರು ಮಾಡುತಿಹರು ಅನಾಚಾರ
ಕಲ್ಲದೇವರು ನೀನು, ಕಳ್ಳ ಭಕ್ತರಿಗೆ
ಕಾವಿ-ಖಾದಿ-ಖಾಕಿ ಹಾಕಿದ್ದಾರೆ ಬಲೆಗೆ
ಬೆಲೆಯಿಲ್ಲ ನಿಜ ಶರಣ-ಶರಣೆಯರಿಗೆ
ಕೊನೆಯಿಲ್ಲವೇ ತಂದೆ ಈ ದುಸ್ಥಿತಿಗೆ ?
–ರವೀಂದ್ರ ಆರ್ ಪಟ್ಟಣ
ಮುಳಗುಂದ—ರಾಮದುರ್ಗ