ಅವ್ವ

ಅವ್ವ

ಅವ್ವ,ಅವ್ವ, ನನ್ನವ್ವ,ಹೆತ್ತವ್ವ,ಹಡೆದವ್ವ
ನೀ, ನೆತ್ತರವನು ಹಾಲಾಗಿ ಉಣಿಸಿದವ್ವ

ಅವ್ವ, ಮಲ ಮೂತ್ರ ಅಂಗೈಯಲ್ಲಿ ಬಳಿದಾಕೆ
ಬಿದ್ದು ಅತ್ತಾಗ ಕಣ್ಣೀರ ಮುಲಾಮು ಹಾಕಿದಾಕೆ
ಕಾಯಿಲೆ ಬಂದಾಗ ಬಿಗಿದಪ್ಪಿ ಸಂಕಟ ಪಟ್ಟಾಕೆ
ಅತ್ತಾಗ-ನಕ್ಕಾಗ ಸ್ವರ್ಗ ಸುಖ ಕಂಡಾಕೆ

ಮೊದಲ ಹೆಜ್ಜೆಯಿಂದ ಇಂದಿನ ಹೆಜ್ಜೆ ಗಮನಿಸಿದಾಕೆ
ಹೆಜ್ಜೆ ಹೆಜ್ಜೆಗೂ ಹೆಜ್ಜೆ ತಪ್ಪದಂತೆ ನಡಿಸಿದಾಕೆ
ಬಡತನಕೆ ನನ್ನ ಬಡೆದು ಬಿಕ್ಕಿ ಬಿಕ್ಕಿ ಅತ್ತಾಕೆ
ಹರಿದ ಸೀರೆಯಲಿ ರವಿಯನ್ನು ತೋರಿಸಿದಾಕೆ

ಆಟ-ಪಾಠವ ಕಂಡು ಸಂತಸ ಪಟ್ಟಾಕೆ
ಕುದುರೆ,ಆನೆಯಾಗಿ ಕತ್ತೆಯಂತೆ ದುಡಿದಾಕೆ
ಅಂಗೈ ಅಗಲದಲಿ ಆಕಾಶ ತೋರಿಸಿದಾಕೆ
ತುತ್ತು ಅನ್ನ ಉಣಿಸಲು ತಾರಾಗಣ ತಂದಾಕೆ

ಹಣ್ದೊಗಲಿನ ಮುಪ್ಪಿನಲಿ ಮರುಗುವಾಕೆ
ಅಂದಿನಂತೆ ಇಂದೂ ಮಗುವಾಗಿ ಕಂಡಾಕೆ
ಚಿಕ್ಕ- ಪುಟ್ಟ ಹೆಜ್ಜೆಯನಿಡುತ ಮಗುವಾದಾಕೆ
ಮಲಮೂತ್ರ ಮಾಡಿ ಮಗುವಂತೆ ಅತ್ತಾಕೆ

ದೇವರ ಶಪಿಸುತ್ತ ಕಣ್ಣೀರು ಹಾಕಿದಾಕೆ
ಮಕ್ಕಳ ಸಂಕಟಕೆ ಮರಣ ಬಯಸಿದಾಕೆ
ಮಿತಿಯಿರಲಿ ನಿನ್ನ ಎಲ್ಲ ಬಗೆಯ ತ್ಯಾಗಕೆ
ಸಾವಿನಂಚಿನಲೂ ಹರುಷ ಮೂಡಿಸಿದಾಕೆ

ನಮಗಾಗಿ ಕಾಣದ ದೇವರಿಗೆ ಮೊರೆಯಿಟ್ಟಾಕೆ
ಏನೆಂದು ಹೇಳಲಿ ನಿನ್ನ ನಿಸ್ವಾರ್ಥ ಭಾವಕೆ
ದೇವತೆಯಾಗಿ ವರ ನೀಡಿ ಸಲುಹಿದಾಕೆ
ನೀ ಕೊಟ್ಟ ಪ್ರೀತಿ ಈ ಜನ್ಮಕೆ ಇಷ್ಟೇ ಸಾಕೆ

ಮುಪ್ಪಡರಿ ಬಳಲುವಾಗ ಬಾಗಿಲಾಚೆ ನಿಲ್ಲಿಸಿದಾಕೆ
ಜೀವನದುದ್ದಕ್ಕೂ ಮಾನ-ಅವಮಾನ ನುಂಗಿದಾಕೆ
ನೀನೀಗ ಮಗುವೆಂದು ಅರಿಯಬಾರದೇಕೆ?
ನನ್ನ ದೂರ ಮಾಡುತಿರುವುದೇತಕೆ?

ರವೀಂದ್ರ.ಆರ್.ಪಟ್ಟಣ
ಮುಳಗುಂದ–ರಾಮದುರ್ಗ

Don`t copy text!