ವಚನ – 18- ಅಕ್ಕನಡೆಗೆ ವಿಶೇಷ ವಚನ ವಿಶ್ಲೇಷಣೆ
ಅಕ್ಕನ ಲಿಂಗಾಂಗ ಸಾಮರಸ್ಯ
ಜಲದ ಮಂಟಪದ ಮೇಲೆ ಉರಿಯ ಚಪ್ಪರವನಿಕ್ಕಿ
ಆಲಿಕಲ್ಲ ಹಸೆಯ ಹಾಸಿ ಬಾಸಿಗವ ಕಟ್ಟಿ
ಕಾಲಿಲ್ಲದ ಹೆಂಡತಿಗೆ ತಲೆಯಿಲ್ಲದ ಗಂಡ ಬಂದು ಮದುವೆಯಾದನು
ಎಂದೆಂದೂ ಬಿಡದ ಬಾಳುವೆಗೆ ಕೊಟ್ಟರೆನ್ನ
ಚೆನ್ನಮಲ್ಲಿಕಾರ್ಜುನನೆಂಬ ಗಂಡಂಗೆನ್ನ
ಮದುವೆಯ ಮಾಡಿದರೆಲೆ ಅವ್ವಾ.
ಶರಣ ಸಾಹಿತ್ಯದ ಶರಣರ ವಚನಗಳಲ್ಲಿ, ಬೆಡಗಿನ ವಚನಗಳು ದೊರೆಯುತ್ತವೆ. ಹಾಗೆ ಬರೆದ ಬೆಡಗಿನ ವಚನಗಳ ಸಾಲಿನಲ್ಲಿ ಅಕ್ಕನ ಈ ವಚನವೂ ಒಂದು. ಹಾಗಾದರೆ ಬೆಡಗಿನ ವಚನ ಎಂದರೇನು? ಪ್ರಶ್ನೆ ಹುಟ್ಟುವುದು ಸಹಜ.
ಮೊದಲ ಓದಿಗೆ ನಿಲುಕದ, ಅರ್ಥದ ಆಳದಲ್ಲಿ ಇನ್ನೊಂದು ಗೂಡಾರ್ಥವಿರುತ್ತದೆ. ಅಂತಹ ನಿಗೂಢ ಅರ್ಥವನ್ನು ತನ್ನೊಡಲಲ್ಲಿ ಇಟ್ಟುಕೊಂಡಂಥ ವಚನಗಳೇ ಬೆಡಗಿನ ವಚನಗಳು.
ಹಾಗಾದರೆ ಇನ್ನೊಂದು ಪ್ರಶ್ನೆ ಹುಟ್ಟುತ್ತದೆ. ಶರಣರು ನಿಗೂಢವಾದ ಅರ್ಥವನ್ನೇ ಒಳಗಿಟ್ಟುಕೊಂಡು ವಚನ ರಚಿಸಿರಬಹುದೆ? ಇಲ್ಲ. ಇಂದು ನಾವು ಆಧುನಿಕತೆಯ ಸೋಗಿನಲ್ಲಿ ಬದುಕುತ್ತಿದ್ದೇವೆ. ಹಾಗಾಗಿ ಈ ಜೀವನದ ಮೇಲ್ಪದರವನ್ನು ಮಾತ್ರ ಅನುಭವಿಸುತ್ತಿದ್ದೇವೆ. ಈ ಅನುಭವವನ್ನು ಮೀರಿದ ಅನುಭಾವದ ಸ್ಥಿತಿ ಶರಣರಲ್ಲಿ ಸಹಜವಾಗೇ ಮೈದಳೆದಿತ್ತು. ಆದುದರಿಂದ ಅವರೆಲ್ಲ ಆಧ್ಯಾತ್ಮದ ಆಳಕ್ಕಿಳಿದು ರಚಿಸುತ್ತಿದ್ದುರಿಂದ, ಇಂದಿನ ಜನಸಾಮಾನ್ಯರಾದ ನಮಗೆ ನಿಗೂಢ ಎನಿಸುವುದು ಸಹಜ.
ನಮಗೆಲ್ಲಾ ತಿಳಿದಂತೆ ಅಕ್ಕಮಹಾದೇವಿಯು ಅಧ್ಯಾತ್ಮ ಸಾಧಕಳು. ಅಕ್ಕನ ವಚನಗಳು, ಲೌಕಿಕದ ವಿಷಯಗಳನ್ನು ಹಿನ್ನೆಲೆಯಾಗಿಟ್ಟು, ಸಮಾಜ ಪರಿರ್ವತನೆಯ ನಿಟ್ಟಿನಲ್ಲಿ ರಚಿತವಾಗಿವೆ. ವ್ಯಷ್ಟಿಯಿಂದ ಸಮಷ್ಟಿಗೆ ಸಾಗುವ ಗುಣಧರ್ಮವನ್ನು ಅಕ್ಕನ ವಚನಗಳು ಹೊಂದಿವೆ.
ಇದೇ ದೃಷ್ಟಿಯನ್ನಿಟ್ಟುಕೊಂಡು ಮೇಲಿನ ವಚನದ ಆಳ ತಿಳಿಯಲು ಪ್ರಯತ್ನಿಸಿದರೆ, ಮೇಲ್ನೋಟಕ್ಕೆ ಕಾಣುವ ಪ್ರತಿಯೊಂದಕ್ಕೂ ಒಳಾರ್ಥ ಲಭಿಸುತ್ತದೆ.
ಜಲದ ಮಂಟಪದ ಮೇಲೆ ಉರಿಯ ಚಪ್ಪರವನಿಕ್ಕಿ
ಅಂದು ಬಸವಾದಿ ಶರಣರು ‘ಲಿಂಗ ಪೂಜೆ’ಯನ್ನು ಅರಿವಿನ ‘ಕುರುಹು’ ಆಗಿ ನೀಡಿದರು. ಅಂದರೆ ಧ್ಯಾನಸ್ಥವಾಗಿ ಕುಳಿತುಕೊಳ್ಳುವ ಶಿವಯೋಗದ ಜ್ಞಾನ. ಹೀಗೆ ಒಂದು ಸ್ಥಳದಲ್ಲಿ ಸ್ವಯಂ ನಿಯಂತ್ರಣಗೊಳ್ಳುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಸಾಮಾನ್ಯ ಮನುಷ್ಯನ ಬುದ್ಧಿ, ಚಿಂತನೆ, ಆಲೋಚನೆ, ಚಂಚಲತೆ ಮುಂತಾದವು ಕ್ಷಣ ಕ್ಷಣಕ್ಕೂ ಬದಲಾವಣೆಯನ್ನು ಬಯಸುತ್ತದೆ. ಹಾಗೆ ಬಯಸುವ ಗುಣವನ್ನು ನಾಶ ಪಡಿಸಿದಾಗ ಮಾತ್ರ ಏಕಾಗ್ರತೆ ಸಾಧ್ಯ. ಇಲ್ಲಿ ನೀರಿನಂತೆ ಹರಿದಾಡುವ ಮನಸು, ಚಿತ್ತ, ಏಕಾಗ್ರತೆಯನ್ನು ಒಂದೇ ಕಡೆ ನಿಲ್ಲುವಂತೆ ಮಾಡಬೇಕಾಗಿದೆ ಎನ್ನುವ ಆಶಯವನ್ನು ‘ಜಲದ ಮಂಟಪದ ಮೇಲೆ ಉರಿಯ ಚಪ್ಪರವನಿಕ್ಕಿ’ ನಿಯಂತ್ರಿಸುವುದೆಂದು ಅಕ್ಕನ ಭಾವನೆ.
ಆಲಿಕಲ್ಲ ಹಸೆಯ ಹಾಸಿ ಬಾಸಿಗವ ಕಟ್ಟಿ
ಕಣ್ಣಿನ ದೃಷ್ಟಿಯನ್ನು ಅಂಗೈಯಲ್ಲಿರುವ ಲಿಂಗದ ಮೇಲೆ ನೆಟ್ಟು, ಏಕಾಗ್ರತೆಯನ್ನು ಕಟ್ಟಿ ಹಾಕಲು ಬಳಸಿದ ಉಪಮೆ, ಆಲಿಕಲ್ಲಿನ ಹಸೆಯನು ಹಾಸಿ, ಮೇಲೆ ಬಾಸಿಂಗವ ಬಿಗುದು. ಧ್ಯಾನಸ್ಥ ಸ್ಥಿತಿಯಲ್ಲಿ ಲೀನವಾಗಲು, ಆಲಿಕಲ್ಲಿನ ಕರಗುವ ಗುಣವಿರಬೇಕು ಎನ್ನುವ ಭಾವ ಅಡಗಿದೆ.
ಕಾಲಿಲ್ಲದ ಹೆಂಡತಿಗೆ ತಲೆಯಿಲ್ಲದ ಗಂಡ ಬಂದು ಮದುವೆಯಾದನು
‘ಲಿಂಗಾಂಗ ಸಾಮರಸ್ಯ’, ‘ಶರಣಸತಿ ಲಿಂಗಪತಿ’ ಎನ್ನುವ ಈ ಎರಡು ವಾಕ್ಯಗಳನ್ನು ಅರ್ಥೈಸಿಕೊಂಡಾಗ, ಮೇಲಿನ ವಚನದ ಸಾಲು ಸ್ಪಷ್ಟವಾಗುತ್ತದೆ. ಲಿಂಗ ಪೂಜೆಗೆ ಕುಳಿತಾಗ ನಡೆಯುವ ‘ಕ್ರಿಯೆ’ ಇದೆಯಲ್ಲಾ ಅದನ್ನು ಕಾಲಿಲ್ಲದ ಹೆಂಡತಿಗೆ ಹೋಲಿಸಲಾಗಿದೆ. ‘ಅಂಗ’ ಮತ್ತು ‘ಲಿಂಗ’ ಎರಡೂ ಬೇರೆಯಲ್ಲದಂತೆ ಒಂದಾದಾಗ ವೇದ್ಯವಾಗುವ ‘ಅರಿವು’ ತಲೆಯಿಲ್ಲದ ಗಂಡ ಎನ್ನುವ ಗ್ರಹಿಕೆ ಇದರಲ್ಲಿದೆ.
ಲಿಂಗ ಮತ್ತು ಅಂಗದ ಸಾಮರಸ್ಯ ದಾಂಪತ್ಯದ ಅನುಬಂಧಕ್ಕೆ ಸಮೀಕರಿಸಲಾಗಿದೆ. ಲಿಂಗ ಪೂಜೆಗೆ ಕುಳಿತ ಭಂಗಿ, ಅಲ್ಲಿಯ ಏಕಾಗ್ರತೆ, ಶಿವಯೋಗದ ಧ್ಯಾನದಲ್ಲಿ ಲೀನವಾಗುವುದು, ಜಗತ್ತಿನ ಪ್ರತಿಯೊಬ್ಬ ವ್ಯಕ್ತಿಯು ಶರಣ, ಅಗೋಚರ ಶಕ್ತಿಯಾದ ಅರಿವು ಪತಿಯ ಸ್ವರೂಪನಾದಾಗ ಆಗುವ ಸಾಮರಸ್ಯವು ‘ಶರಣಸತಿ ಲಿಂಗಪತಿ’ ಭಾವನೆಯನ್ನು ಗಾಢವಾಗಿ ಮೂಡಿಸುತ್ತದೆ. ‘ಅಂಗ-ಲಿಂಗ’, ‘ಧ್ಯಾನ-ಅರಿವು’ ಗಳ ನಡುವೆ ಮದುವೆಯಾಯಿತೆಂದು ಅಕ್ಕ ನಿರೂಪಿಸಿರುವುದು ತಿಳಿದು ಬರುತ್ತದೆ.
ಎಂದೆಂದೂ ಬಿಡದ ಬಾಳುವೆಗೆ ಕೊಟ್ಟರೆನ್ನ
ಚೆನ್ನಮಲ್ಲಿಕಾರ್ಜುನನೆಂಬ ಗಂಡಂಗೆನ್ನ
ಮದುವೆಯ ಮಾಡಿದರೆಲೆ ಅವ್ವಾ.
ಅಕ್ಕನ ಇನ್ನಿತರ ವಚನಗಳಲ್ಲಿ ಕಾಣುವಂತೆ, ‘ಚೆನ್ನಮಲ್ಲಿಕಾರ್ಜುನ’ ಅವಳ ಗಂಡನೆಂದು ತಿಳಿದು ಬರುತ್ತದೆ. ಉದಾಹರಣೆಗೆ,
‘ಇದುಕಾರಣ ಚೆನ್ನಮಲ್ಲಿಕಾರ್ಜುನ ಚೆಲುವ ಗಂಡನೆನಗೆ ಈ ಸಾವ ಕೆಡುವ ಗಂಡರನೊಯ್ದು ಒಲೆಯೊಳಗಿಕ್ಕು ತಾಯೆ’
‘ಚೆನ್ನಮಲ್ಲಿಕಾರ್ಜುನನೆಂಬ ಗಂಡಗೆನ್ನ ಮದುವೆಯ ಮಾಡಿದರು’
‘ನನ್ನ ಗಂಡ ಚೆನ್ನಮಲ್ಲಿಕಾರ್ಜುನದೇವರಲ್ಲದೆ ಮಿಕ್ಕಿದ ಗಂಡರೆಲ್ಲ ಮುಗಿಲ ಮರೆಯ ಬಣ್ಣದ ಬೊಂಬೆಯಂತೆ’
‘ಇಂತಾಗಿ ಚೆನ್ನಮಲ್ಲಿಕಾರ್ಜುನನೆನ್ನ ಮದುವಣಿಗ ಆನು ಮದುವಣಿಗಿ ಕೇಳಾ ತಾಯೆ’
‘ಹರನೆ ನೀನೆನಗೆ ಗಂಡನಾಗಬೇಕೆಂದು ಅನಂತ ಕಾಲ ತಪಿಸಿದ್ದೆ ನೋಡಾ’
‘ನೀನಲ್ಲದೆ ಪೆರತೊಂದ ನೆನೆದರೆ ಆಣೆ ನಿಮ್ಮಾಣೆ ಚೆನ್ನಮಲ್ಲಿಕಾರ್ಜುನ’
‘ಎನ್ನ ಅಕಾಯದ ಸುಖವ ಲಿಂಗ ಭೋಗಿಸುವನಾಗಿ
ಶರಣಸತಿ-ಲಿಂಗಪತಿಯಾದೆನು!
ಇದು ಕಾರಣ ಚೆನ್ನಮಲ್ಲಿಕಾರ್ಜುನಯ್ಯನೆಂಬ
ಗಂಡನ ಒಳಹೊಕ್ಕು ಬೆರೆಸಿದೆನು!’
‘ಚೆನ್ನಮಲ್ಲಿಕಾರ್ಜುನ, ನಿಮ್ಮ ಒಲುಮೆಯ ಸಂಗದಲ್ಲಿರ್ದು
ಸ್ವಯಂಲಿಂಗಿಯಾದೆನು’
‘ಇಂತೀ ಅಸಂಖ್ಯಾತಗಣಂಗಳೆಲ್ಲರೂ ತಮ್ಮ ಕರುಣದ ಕಂದನೆಂದು ತಲೆದಡಹಿ ರಕ್ಷಿಸಿದ ಕಾರಣ
ಚೆನ್ನಮಲ್ಲಿಕಾರ್ಜುನನ ಪಾದಕ್ಕೆ ಯೋಗ್ಯಳಾದೆನು’
‘ಬೆಚ್ಚು ಬೇರಾಗದ ಭಾವವಾಗೆ ಚೆನ್ನಮಲ್ಲಿಕಾರ್ಜುನಯ್ಯ ಒಳಗೆ ಗಟ್ಟಿಗೊಂಡನವ್ವ’
‘ಚೆನ್ನಮಲ್ಲಿಕಾರ್ಜುನಯ್ಯ ಆತ್ಮಸಂಗಾತಕ್ಕೆ ನೀನೆನಗುಂಟು’
‘ಇದು ಕಾರಣ ಚೆನ್ನಮಲ್ಲಿಕಾರ್ಜುನ ಗಂಡನೆನಗೆ! ಜನನ ಮರಣಕ್ಕೊಳಗಾಗದವನ ಬಲುಹನೇನ ಬಣ್ಣಿಪೆನವ್ವ!?’
‘ಎನ್ನ ದೇವ ಶ್ರೀಶೈಲ ಚೆನ್ನಮಲ್ಲಿಕರ್ಜುನನುಳ್ಳೊಡೆ ಮರಳಿ ಸಂಸಾರದ ಹಂಗೇಕೆ?’
ಆಧ್ಯಾತ್ಮದ ಪರಿಯ enlightenment ಅನುಭೂತಿಯ ಬಗೆಯನ್ನು, ವಿರೋಧಾಭಾಸದ ಪ್ರತಿಮೆ ಮತ್ತು ರೂಪಕಗಳ ಮೂಲಕ, ಅತೀಂದ್ರಿಯ ಲೋಕವನ್ನು ಈ ಲೌಕಿಕ ಜಗತ್ತಿಗೆ ತೋರಿಸಿ, ಬೆರಗಿನ ಬೆಡಗನ್ನು ಸೃಷ್ಟಿ ಮಾಡಿದ ಮಹಾಕಾವ್ಯದ ಭವ್ಯತೆ ಈ ವಚನದ ಶಕ್ತಿ ಮತ್ತು ಸಾಮರ್ಥ್ಯ. ಹೀಗೆ ಅಕ್ಕಮಹಾದೇವಿಯು ತನ್ನ ಆಧ್ಯಾತ್ಮ ಸಾಧನೆಯಲ್ಲಿ ಲಿಂಗಪೂಜೆಯನ್ನು ಒಂದು ಮಾರ್ಗವಾಗಿ ಕಂಡುಕೊಂಡು, ಅಂತರಂಗದ ಪಯಣದಲ್ಲಿ ಯಶಸ್ವಿಯಾಗುತ್ತ, ಅಪಾರ ವಚನಗಳ ಭಂಡಾರವನ್ನು ಮನುಕುಲಕ್ಕೆ ಬಿಟ್ಟು ಹೋಗಿರುವುದು ಸಾರ್ಥಕವೆನಿಸುತ್ತದೆ.
ಸಿಕಾ