ಗ್ರಾಮೀಣ ಪತ್ರಕರ್ತರಿಗೆ ಬಂಪರ್ ಕೊಡುಗೆ

ವಿಜಯಪುರದಲ್ಲಿ ಪತ್ರಕರ್ತರ ಸಮ್ಮೇಳನ.!

ಗ್ರಾಮೀಣ ಪತ್ರಕರ್ತರಿಗೆ ಬಂಪರ್ ಕೊಡುಗೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ!! 

e-ಸುದ್ದಿ ವಿಜಯಪುರ

ಪತ್ರಿಕೆಗಳು ಪ್ರಾದೇಶಿಕವಾಗಿ ಹೊರಬರಬಹುದು. ಆದರೆ ಪತ್ರಕರ್ತರು ಪ್ರಾದೇಶಿಕವಾಗಬಾರದು. ಪತ್ರಕರ್ತರು ಯಾವಾಗಲೂ ಅಖಂಡ ಕರ್ನಾಟಕದ ಪತ್ರಕರ್ತನಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಆಶಯವನ್ನು ವ್ಯಕ್ತಪಡಿಸಿದರು..!

ವಿಜಯಪುರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ‘ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ’ದ 37ನೇ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿ, ಅವರು ಪತ್ರಿಕೋದ್ಯಮದ ವಿಶ್ವಾಸಾರ್ಹತೆಯ ಪುನರ್‌ಸ್ಥಾಪನೆಯ ನಿಟ್ಟಿನಲ್ಲಿಯೂ ತಮ್ಮ ಸಂದೇಶ ನೀಡಿದ ಅವರು, ಉತ್ತರ, ದಕ್ಷಿಣ ಎಂಬ ಬೇಧ ಪತ್ರಕರ್ತರಲ್ಲಿ ಬೇಡವೇ ಬೇಡ ಎಂದು ಹೇಳಿದರು.

ಈ ಬೇಧದಿಂದ ಯಾವ ಪ್ರಯೋಜನವೂ ಇಲ್ಲ. ಪತ್ರಕರ್ತರು ಅಖಂಡ ಕರ್ನಾಟಕದ ಬಗೆಗೆ ಚಿಂತನೆ ನಡೆಸಿದಾಗ ಮಾತ್ರ ಸಂಪೂರ್ಣ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯವೆಂದೂ ಅವರು ಹೇಳಿದರು.
ಓದುಗನೇ ಈಗ ಪತ್ರಕರ್ತನರಾಗಿರುವ ಕಾಲಘಟ್ಟದಲ್ಲಿ ವೃತ್ತಿಯನ್ನು ಗಟ್ಟಿಗೊಳಿಸುವ ಪ್ರಯತ್ನದ ಭಾಗವಾಗಿ ಪತ್ರಕರ್ತರು ವಿಶ್ವಾಸಾರ್ಹತೆ ಹಾಗೂ ಬದ್ಧತೆಯನ್ನು ಪ್ರದರ್ಶಿಸುವ ಆ ಮೂಲಕ ಈ ವೃತ್ತಿಯನ್ನು ಪುನಃ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಯಶಸ್ವಿಯಾಗಬಹುದಾಗಿದೆ ಎಂದೂ ಅವರು ಅಭಿಪ್ರಾಯ ವ್ಯಕ್ತಪಡಿಸಿದರು..!

ಪತ್ರಕರ್ತರು ಹಾಗೂ ರಾಜಕಾರಣಿಗಳು ಗಂಡ — ಹೆಂಡತಿ‌ ಇದ್ದಂತೆ..!

ರಾಜಕಾರಣಿ ಹಾಗೂ ಪತ್ರಕರ್ತರ ನಡುವೆ ಅವಿನಾಭಾವ ಸಂಬಂಧವಿದೆ. ಒಂದು ರೀತಿಯಲ್ಲಿ ಗಂಡ — ಹೆಂಡತಿಯರ ಸಂಬಂಧದಂತೆ.

ಆದರೆ ಈ ಸಂಬಂಧ ಪ್ರಾಮಾಣಿಕವಾದ ಕಾರ್ಯನಿರತರವಾದ ಸಂಬಂಧ ಇರಬೇಕು. ಈ ಗಡಿಯನ್ನು ಇಬ್ಬರು ದಾಟಬಾರದು. ಈ ಗಡಿದಾಟದ ಆರೋಗ್ಯ ಸಂಬಂಧವಿದ್ದರೆ ಇಡೀ ರಾಜ್ಯಕ್ಕೆ ಶ್ರೇಯಸ್ಕರ ಎಂದರು.
ರಾಜಕಾರಣಿಗಳು ಹಾಗೂ ಪತ್ರಕರ್ತರು ಒಬ್ಬರನ್ನು ಬಿಟ್ಟು ಇನ್ನೊಬ್ಬರಿಲ್ಲ. ಪತ್ರಕರ್ತರು ಇರದಿದ್ದರೆ ರಾಜಕಾರಣಿಗಳನ್ನು ಮಾತನಾಡಿಸುವವರೂ ಯಾರೂ ಇರುತ್ತಿರಲಿಲ್ಲ. ಇನ್ನೊಂದೆಡೆ ರಾಜಕಾರಣಿಗಳು ಇರದೇ ಇದ್ದರೆ ಪತ್ರಿಕೆಗಳನ್ನು ಯಾರು ಓದಬೇಕು, ಪ್ರಥಮ ಪುಟ ರಾರಾಜಿಸುವುದೇ ರಾಜಕಾರಣ ಸುದ್ದಿಯಿಂದ, ಹೀಗಾಗಿಯೇ ನಮ್ಮದು ಅವಿನಾಭಾವ ಸಂಬಂಧ, ನಾವು ಜಗಳವಾಡಬಹುದು, ಒಂದು ರೀತಿ ಗಂಡ — ಹೆಂಡತಿಯ ಸಂಬಂಧದಂತೆ ಎಂದರು ಅವರು..!

ಸಮ್ಮೇಳನದ ಮೇಲೆ ಸಿದ್ದೇಶ್ವರ ಶ್ರೀಗಳ ಆಶೀರ್ವಾದ ಇದೆ..! 

ಈ ಸಮ್ಮೇಳನಕ್ಕೆ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಆಶೀರ್ವಾದವಿದೆ. ಶ್ರೀಗಳ ಆಶೀರ್ವಾದ ಆತ್ಮಸಾಕ್ಷಿಯನ್ನು ಜಾಗೃತಿ ಮಾಡುವ ಕೆಲಸ ಮಾಡುವಲ್ಲಿ ಪ್ರಧಾನ ಪಾತ್ರವನ್ನು ವಹಿಸುತ್ತದೆ. ಬಸವನ ನಾಡಿನ ಆಶಯ ಹಾಗೂ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಆಶಯಗಳನ್ನು ಮನದಾಳದಲ್ಲಿ ತುಂಬಿಕೊಂಡಾಗ ಮಾತ್ರ ಸಮ್ಮೇಳನವು ಔಚಿತ್ಯ ಪೂರ್ಣವಾಗಲು ಸಾಧ್ಯ ಎಂದರು ಅವರು..!

ವಿಜಯಪುರ ಜನತೆ ಗಟ್ಟಿಜೋಳದಂತೆ ಶ್ರೇಷ್ಠ —

ತಾಯಿ ಕೃಷ್ಣೆ ಹಾಗೂ ಮಣ್ಣಿನ ಭವ್ಯತೆ ಸೊಗಡಿನ ಫಲವಾಗಿ ಬೆಳೆಯುವ ವಿಜಯಪುರ ಜೋಳ ಅತ್ಯಂತ ಶ್ರೇಷ್ಠವಾಗಿದೆ. ಹೈಬ್ರೀಡ್ ಕಾಲದಲ್ಲಿಯೂ ಸಹ ವಿಜಯಪುರ ಜೋಳವನ್ನೇ ಅನೇಕರು ಬಳಸುವುದುಂಟು, ವಿಜಯಪುರ ಜೋಳದ ಶ್ರೇಷ್ಠತೆ, ಸತ್ವ ಹೈಬ್ರೀಡ್ ಜೋಳದಲ್ಲಿ ಇಲ್ಲ, ವಿಜಯಪುರ ಜೋಳದ ರೀತಿಯಲ್ಲಿಯೇ ವಿಜಯಪುರ ಜನತೆ ಶ್ರೇಷ್ಠ, ಗಟ್ಟಿ ಹಾಗೂ ಶುದ್ಧ ಎಂದರು ಅವರು.

ಕೃಷ್ಣೆಯ ಹನಿ ಹನಿ ನೀರು ಕೊನೆಯ ಭಾಗಕ್ಕೆ ತಲುಪಿದಾಗ ಈ ಭಾಗ ಭಾರತ ದೇಶಕ್ಕೆ ಅನ್ನ ಕೊಡುವ ನಂದನವನವಾಗಲಿದೆ..! ಈ ಕನಸು ಸಾಕಾರಗೊಳಿಸಲು ಎಲ್ಲರೂ ಬದ್ಧತೆ ಪ್ರದರ್ಶಿಸಬೇಕಿದೆ ಎಂದು ಬೊಮ್ಮಾಯಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು..!

ನೀರಾವರಿ ಖಾತೆ ನಿಭಾಯಿಸಿದ ಅನುಭವ ಹಂಚಿಕೊಂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು..! 

ತಾವು ನೀರಾವರಿ ಸಚಿವನಾಗಿದ್ದ ಸಂದರ್ಭದಲ್ಲಿನ ಅನುಭವ ಹಂಚಿಕೊಂಡ ಬಸವರಾಜ ಬೊಮ್ಮಾಯಿ ಅವರು, ಗುತ್ತಿ ಬಸವಣ್ಣ, ಚಿಮ್ಮಲಗಿ ಯೋಜನೆ ಬೇಡ, ಅವುಗಳು ಬಿ-ಸ್ಕೀಂ ಅಡಿಯಲ್ಲಿ ಬರುತ್ತವೆ ಎಂದು ಸಲಹೆಯನ್ನು ನೀಡಿದರು. ಆಗ ನಾನು ಮಹಾರಾಷ್ಟ್ರ– ಆಂಧ್ರ ಪ್ರದೇಶದಲ್ಲಿ ಈ ರೀತಿಯ ಸ್ಕೀಂಗಳಿಲ್ಲ, ನಮ್ಮಲ್ಲಿ ಏಕೆ ಇದು? ಈ ಯೋಜನೆಗಳಗೆ ನ್ಯಾಯಾಧೀಕರಣದ ತೀರ್ಪು ಅಡ್ಡಿಯಾಗುವುದಿಲ್ಲ ಎಂದೂ ಮನವರಿಕೆ ಮಾಡಿಕೊಟ್ಟೆನು ಎಂದರು.
ಆಡಳಿತದಲ್ಲಿರುವವರಿಗೆ ಸ್ಪಷ್ಟತೆ ಇರಬೇಕು, ಕರ್ತವ್ಯ ವ್ಯಾಪ್ತಿಯ ಬಗ್ಗೆ ಅರಿವು ಇರಬೇಕು, ಆಗ ಮಾತ್ರ ಕಟ್ಟಕಡೆಯ ವ್ಯಕ್ತಿಗೆ ಸಹಾಯ ಲಭಿಸುತ್ತದೆ ಎಂದರು ಅವರು..!

ಗ್ರಾಮೀಣ ಪತ್ರಕರ್ತರಿಗೆ ಬಂಪರ್ ಕೊಡುಗೆ..! 

ಗ್ರಾಮೀಣ ಪತ್ರಕರ್ತರಿಗೂ ಉಚಿತ ಬಸ್ ಪಾಸ್ ಸೌಲಭ್ಯಗಳನ್ನು ನೀಡುವ ಭರವಸೆಯನ್ನೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ನೀಡಿದರು.

ಮಾಶಾಸನ ಹೆಚ್ಚಳ ಸೇರಿದಂತೆ ಅನೇಕ ಬೇಡಿಕೆಗಳಿಗೆ ಅಸ್ತು ಎನ್ನುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಪತ್ರಕರ್ತರಿಗೆ ಬಂಪರ್ ಕೊಡುಗೆ ನೀಡಿದರು..!

ಗ್ರಾಮೀಣ ಪತ್ರಕರ್ತರಿಗೂ ಉಚಿತ ಬಸ್ ಸೇವೆ ಒದಗಿಸಲು ಬದ್ಧನಾಗಿದ್ದು, ನೈಜ ಗ್ರಾಮೀಣ ಪತ್ರಕರ್ತರಿಗೆ ಈ ಸೌಲಭ್ಯಗಳನ್ನು ದೊರಕಿಸುವ ಆಶಯದ ಹಿನ್ನೆಲೆಯಲ್ಲಿಯೇ ಸಂಘ ನೀಡುವ ಸಮರ್ಪಕ ಮಾಹಿತಿ ಆಧರಿಸಿ ಈ ಸೌಲಭ್ಯವನ್ನು ಜಾರಿಗೊಳಿಸಲಾಗುವುದು ಹಾಗೂ ನಿವೃತ್ತ ಪತ್ರಕರ್ತರಿಗೆ ಮಾಶಾಸನ ಹೆಚ್ಚಿಸುವ ನಿಟ್ಟಿನಲ್ಲಿ ಬಜೆಟ್‌ನಲ್ಲಿ ಅನುದಾನ ಮೀಸಲಿರಿಸಲಾಗುವುದು ಎಂದೂ ಭರವಸೆಯನ್ನು ನೀಡಿದರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು..!

ಜಿಲ್ಲೆಯಲ್ಲಿರುವ ಪತ್ರಿಕಾ ಭವನಗಳನ್ನು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನಿರ್ವಹಣೆ ಒದಗಿಸುವ ನಿಟ್ಟಿನಲ್ಲ ಚಿಂತನೆ ನಡೆಸಲಾಗುವುದು. ಈ ನಿರ್ವಹಣೆಯನ್ನು ಸಂಘದಿಂದ ಸಾಧ್ಯವೇ ಎಂಬುದನ್ನು ಸಂಘವೂ ಸಹ ಇನ್ನೊಮ್ಮೆ ಪುನರ್ ಪರಿಶೀಲನೆ ನಡೆಸುವುದು ಅಗತ್ಯ ಎಂದರು..!

MLC ಗೆ ಪತ್ರಕರ್ತರ ಆಯ್ಕೆ ವಿಚಾರ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಮುಗುಳನಗೆ ಮೂಲಕ ಉತ್ತರ..! 

ಪತ್ರಕರ್ತರನ್ನು ಮೇಲ್ಮನೆಗೆ ನಾಮಕರಣ ಮಾಡುವ ಬೇಡಿಕೆಯನ್ನು ನಗುತ್ತಲೇ ಸ್ಪಂದಿಸಿ, ನಮ್ಮಲ್ಲಿಯೇ ಪೈಪೋಟಿ ಅಧಿಕವಾಗಿದೆ, ಎಲ್ಲ ರಂಗದಲ್ಲಿರುವ ಮುಖಂಡರು ಬಂದು ನಿಲ್ಲುತ್ತಾರೆ, ಪತ್ರಕರ್ತರು ಮೇಲ್ಮನೆಯಲ್ಲಿ ಸದಸ್ಯರಾಗಬೇಕು ಎಂಬುದು ನನ್ನ ಭಾವನೆವೂ ಕೂಡಾ ಹೌದು ಎಂದರು..!

ಪತ್ರಕರ್ತರಿಗೆ ಸೈಟ್ ಹಂಚಿಕೆ ಶೀಘ್ರ ತೀರ್ಮಾನ ಎಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು..! —

ಪತ್ರಕರ್ತರು ಕಾರ್ಮಿಕರು ಅಲ್ಲ ಎಂಬುದು ನನ್ನ ಭಾವನೆ, ಹೀಗಾಗಿಯೇ ಪತ್ರಕರ್ತರನ್ನು ಕಾರ್ಮಿಕ ಪಟ್ಟಿಗೆ ಸೇರ್ಪಡೆ ಬಗೆಗೆ ಸಂಘ ಇರಿಸಿದ ಬೇಡಿಕೆಯನ್ನು ಇನ್ನೊಮ್ಮೆ ಪರಿಶೀಲಿಸಿ ಎಂದರು

ಸಿಎ ಸೈಟ್ ಹಂಚಿಕೆ ಸಮಯದಲ್ಲಿ ಪತ್ರಕರ್ತರಿಗೂ ನಿವೇಶನಗಳನ್ನು ಮೀಸಲಿರಿಸುವ ನಿಟ್ಟಿನಲ್ಲಿ ಸರ್ಕಾರ ಶೀಘ್ರ ನಿರ್ಧಾರ ಕೈಗೊಳ್ಳಿದೆ ಎಂದು ಭರವಸೆ ನೀಡಿದರು.

ದಯಮಾಡಿ ದೊರೆ ಎನ್ನಬೇಡಿ ಎಂದ ಸಿಎಂ ಬೊಮ್ಮಾಯಿಯವರು..! 

ನನಗೆ ರಾಜ್ಯದ ದೊರೆ ಎನ್ನಬೇಡಿ, ದೊರೆ ಎಂದರೆ ನನಗೆ ಕಸಿವಿಸಿಯಾಗುತ್ತದೆ. ಈಗ ಪ್ರಜಾಪ್ರಭುತ್ವದ ಕಾಲ, ದಯಮಾಡಿ ದೊರೆ ಎನ್ನಬೇಡಿ, ನಾಡಿನ ದೊರೆ ಎಂದು ರೂಪಿಸುವುದು ಬೇಡ, ಜನರೇ ಇಲ್ಲಿ ದೊರೆಗಳು, ನಾನಿರುವುದು ಜನರ ಸೇವಕನ ಸ್ಥಾನದಲ್ಲಿ. ಈ ಭಾವನೆ ಇದ್ದರೆ ಮಾತ್ರ ಜನರಿಗೆ ನ್ಯಾಯ ಒದಗಿಸಲು ಸಾಧ್ಯವಿದೆ. ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಅಭಿಪ್ರಾಯವನ್ನು ಪಟ್ಟರು..!

ಕೆ.ಶಿವು.ಲಕ್ಕಣ್ಣವರ, ಹಾವೇರಿ

Don`t copy text!