ವಿಜಯಪುರದಲ್ಲೊಂದು ಚಂದದ ಗಾಂಧಿ ಭವನ*

ವಿಜಯಪುರದಲ್ಲೊಂದು ಚಂದದ ಗಾಂಧಿ ಭವನ


ಇಲ್ಲಿ ಒಳಗೆ ಕಾಲಿಟ್ಟರೆ ಗಾಂಧೀಜಿ ನಮ್ಮನ್ನು ಆವರಿಸಿಕೊಳ್ಳುತ್ತಾರೆ. ಹಸಿರು ಉದ್ಯಾನ, ಶಿಸ್ತಾದ ಕಟ್ಟಡ, ಗಾಂಧೀಜಿಯವರ ಮಾತುಗಳು ನಮ್ಮನ್ನು ಸೆಳೆಯುತ್ತವೆ. ಗೇಟಿಂದ ಒಳ ಹೋದ ತಕ್ಷಣ ಬಲ ಭಾಗಕ್ಕೆ ಉಪ್ಪಿನ ಸತ್ಯಾಗ್ರಹದ ಗಾಂಧಿ.. ಅವರೊಂದಿಗೆ ಹೆಜ್ಜೆ ಹಾಕುತ್ತಿರುವ ಬೆಂಬಲಿಗರು ಕಾಣುತ್ತಾರೆ. ಪಕ್ಕ ಮಗುವಿನೊಂದಿಗೆ ಗಾಂಧಿ, ಅವರು ಹೇಳಿದ ಮೂರು ಮಂಗಗಳು, ಅಲ್ಲೇ ಮಧ್ಯೆ ಕುಳಿತ ಗಾಂಧಿ ಮೂರುತಿ.. ಸುತ್ತ ಅವರ ‘ಸತ್ಯ’ ಮಾತುಗಳು ಇವೆ. ಒಳಗೂ ಮೂರುತಿ, ಕಸ್ತೂರಬಾ ಅವರೊಂದಿಗಿನ ಗಾಂಧೀಜಿ, ಇನ್ನೊಂದು ಕಡೆ ಚರಕ ಸುತ್ತುತ್ತಿರುವ ಮಹಾತ್ಮನಿದ್ದಾನೆ. ಸಭಾಂಗಣ, ಗ್ರಂಥಾಲಯವಿದೆ. ಸ್ವಚ್ಛ, ಸುಂದರ ಪರಿಸರದಲ್ಲಿ ಬರಿ ಮೈಯ ಫಕೀರನೊಂದಿಗೆ ನಾವು ಲೀನವಾಗುತ್ತೇವೆ.

ನನ್ನ_ಜೀವನವೇ_ನನ್ನ_ಸಂದೇಶ ಎನ್ನುವ ಅವರ ಮಾತು, ಸರಳತೆ ನಮ್ಮನ್ನು ಅಲುಗಾಡಿಸುತ್ತದೆ; ಪ್ರೇರೇಪಿಸುತ್ತದೆ. ರಾಷ್ಟ್ರಪಿತನ ಅಂಗಳ ನಮ್ಮ ಹೊರ ಜಗತ್ತನ್ನು ಮರೆಸುತ್ತದೆ, ಅವರ ಆದರ್ಶ ನಮಗೆ ತಾಗುತ್ತವೆ.
ಕ್ರಿಯಾಶೀಲ ಜಿಲ್ಲಾಧಿಕಾರಿ ವಿಜಯ ಮಹಾಂತೇಶ್ ದಾನಮ್ಮನವರ ಅವರ ಒತ್ತಾಸೆ ಮೇರೆಗೆ ನಿರಂತರ ‘ಗಾಂಧೀ ಪ್ರೀತಿ’ಯ ನೇತಾಜಿ ಗಾಂಧಿಯವರು ತುಂಬ ಆಸ್ಥೆಯಿಂದ ಇದು ರೂಪುಗೊಳ್ಳಲು ತುಂಬ ಶ್ರಮಿಸಿದ್ದಾರೆ. ಇವರು ಪ್ರತಿ ದಿನ ಗಾಂಧೀಜಿಯನ್ನೇ ಉಸಿರಾಡುತ್ತಾರೆ. ಇವರು ತಮ್ಮ ಹೆಸರನ್ನೇ ಬದಲಿಸಿಕೊಂಡು ‘ನೇತಾಜಿ ಗಾಂಧಿ’ ಅಂತ ಮಾಡಿಕೊಂಡಿದ್ದಾರೆ. ಇವರು ನಮ್ಮ ಪತ್ರಕರ್ತ ಮಿತ್ರರು ಎನ್ನುವುದು ನಮಗೆ ಹೆಮ್ಮೆ. ಮಹಾತ್ಮನ ಪ್ರತಿ ಮಾಹಿತಿ ಇವರ ನಾಲಗೆ ತುದಿಯಲ್ಲೇ ಇರುತ್ತೆ. ಇನ್ನು ಕಲಾವಿದ ಮೋಹನ ಬಡಿಗೇರ್ ಬಹಳ ಅಂದದ ಮೂರ್ತಿಗಳನ್ನು ನಿರ್ಮಿಸಿದ್ದಾರೆ.

ಇದು ವಾರ್ತಾ ಇಲಾಖೆಯ ಸುಪರ್ದಿಯಲ್ಲಿದೆ. ಜಿಲ್ಲಾಧಿಕಾರಿಯೇ ಇದರ ಅಧ್ಯಕ್ಷರಾಗಿದ್ದಾರೆ. ವಾರ್ತಾ ಇಲಾಖೆಯ ವಿಶುಕುಮಾರ್ ಅವರ ಗಾಂಧಿ ಪ್ರೇಮವೂ ಅನನ್ಯ. ನಿರ್ಮಿತಿಯವರು ಇದನ್ನು ಕಟ್ಟಿದ್ದಾರೆ. ಪ್ರತಿ ಜಿಲ್ಲೆಯಲ್ಲಿ ಗಾಂಧಿ ಪಸರಿಸಲು ಎಲ್ಲೆಡೆ ‘ಗಾಂಧಿ ಭವನ’ಗಳಿವೆ ಇಲ್ಲಿನದು ಮಾತ್ರ ನಿಜಕ್ಕೂ ಅದ್ಭುತವಾಗಿದೆ. ಇದು ಬಾಗಲಕೋಟೆ ರಸ್ತೆಯ ಜಿಲ್ಲಾ ಪಂಚಾಯತ್ ಕಚೇರಿ ಹತ್ತಿರ ಇದೆ. ನೀವೂ ಒಮ್ಮೆ ಈ ಬಿಜಾಪುರದ ಗಾಂಧಿ ಭವನಕ್ಕೆ ಭೇಟಿ ನೀಡಿ.

ಶಿವಕುಮಾರ್ ಉಪ್ಪಿನ, ಪತ್ರಕರ್ತ

Don`t copy text!