ಕೂಗಿನ ಮಾರಯ್ಯನ ಐಕ್ಯಸ್ಥಳ ಮುರುಗೋಡ
ಕೂಗಿನ ಮಾರಿ ತಂದೆಯ ಕಾಯಕ ಅತ್ಯಂತ ವಿಶಿಷ್ಟ ಹಾಗು ಕೌತುಕವಾಗಿತ್ತು ಪರ್ವತೇಶನ ” ಚತುರಾಚಾರ್ಯ ಪುರಾಣದ ಪ್ರಕಾರ ಇವನು ಕಲ್ಯಾಣದ ಅನುಭವ ಮಂಟಪದಲ್ಲಿ
ನಿತ್ಯ ಶಿವಯೋಗ ಸಾಧನೆಯ ಚರ್ಚೆಯಲ್ಲಿ ಭಾಗಿಯಾಗಿದ್ದನು .
ಈತನ ಕಾಯಕ: ಕೂಗು ಹಾಕುವುದು. ಕೃಷಿ ಕಾಯಕದಲ್ಲಿ ಕೂಗು ಹಾಕಿ ಪಕ್ಷಿ ಪ್ರಾಣಿಗಳು ವ್ಯವಸಾಯ ಹಾಳು ಮಾಡುವುದನ್ನು ತಡೆಗಟ್ಟುವ ಕೂಗು ಹಾಕುವ ಕಾಯಕ .
ನಗರದಲ್ಲಿ ಸುದ್ಧಿಯನ್ನು ಮುಟ್ಟಿಸುವ ಓಣಿ ಓಣಿ ತಿರುಗಿ ಕೂಗು ಹಾಕಿ ಜನರಿಗೆ ಅನುಭವ ಮಂಟಪದ ಕಾರ್ಯಕ್ರಮ ಅನುಭವದ ವಿಷಯವನ್ನು ಜನರಿಗೆ ತಲುಪಿಸುವುದು . ಕೂಗಿನ ಮಾರಿ ತಂದೆಯು ಸಂದರ್ಭಕ್ಕೆ ತಕ್ಕಂತೆ ಕೂಗು ಹಾಕುವ ಒಬ್ಬ ಗಣಾಚಾರಿ ಶರಣ ವಚನಕಾರ . ಕಲ್ಯಾಣ ಕ್ರಾಂತಿಯ ನಂತರ ಶರಣರು ಬೇರೆ ಬೇರೆ ತಂಡಗಳಲ್ಲಿ ಚದುರಿದಾಗ ಕೂಗಿನ ಮಾರಿ ತಂದೆ ಚೆನ್ನ ಬಸವಣ್ಣನವರ ನೇತೃತ್ವದಲ್ಲಿ ಉಳವಿಯ ಕಡೆಗೆ ಪ್ರಯಾಣ ಬೆಳೆಸಿದರು. ಸೋವಿದೇವ ಹಾಗೂ ಕಲ್ಯಾಣ ನಾಡಿನ ಸಾಧಕ ಶರಣರ ಮಧ್ಯೆ ಸಂಘರ್ಷವೇರ್ಪಟ್ಟಾಗ ಶರಣರಿಗೆ ಕಾಲ ಕಾಲಕ್ಕೆ ಬಿಜ್ಜಳನ ಸೈನ್ಯದ ಬಗ್ಗೆ ಮಾಹಿತಿ ಕಲೆ ಹಾಕಿ ಕೂಗು ಹಾಕಿ ಶರಣರನ್ನು ಎಚ್ಚರಿಸುತ್ತಿದ್ದನು ಕೂಗಿನ ಮಾರಿತಂದೆ.
ಕಲ್ಯಾಣದ ಬಿಜ್ಜಳನ ಸೈನ್ಯಬಂದಾಗ ಉಚ್ಚ ಧ್ವನಿಯಲ್ಲಿ ಕೂಗುಹಾಕಿ ಶರಣರನ್ನು “ಎಚ್ಚರಿಸುವ ಕಾಯಕ”ವನ್ನು ಕೈಕೊಂಡಿದ್ದ .ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ಈತ ಶರಣರ ರಕ್ಷಣೆಯ ಹೊಣೆಯನ್ನು ಹೊತ್ತು ಬಿಜ್ಜಳನ ಸೈನ್ಯದ ಬರವಿನ ಸೂಚನೆಯನ್ನು ಎತ್ತರದ ಧ್ವನಿಯಲ್ಲಿ ಕೂಗಿ ಹೇಳಿ ಎಚ್ಚರಿಸುತ್ತದ್ದನಂತೆ.
ಮುರುಗೋಡು ಉಳವಿಯ ಹೆಬ್ಬಾಗಿಲು . ಅಲ್ಲಿ ಚೆನ್ನ ಬಸವಣ್ಣನವರು ಸಮಸ್ತ ಶರಣರೊಂದಿಗೆ ಕೊನೆಯ ಸಮಾಲೋಚನೆ ನಡೆದ ಕುರುಹುಗಳಿವೆ . ಎಲ್ಲ ಶರಣರು ಬೇರೆ ಬೇರೆ ತಂಡ ರಚಿಸಿಕೊಂಡು ಬೇರೆ ಬೇರೆ ದಿಕ್ಕಿನಲ್ಲಿ ಸಾಗಿ ಶರಣರ ವಚನಗಳನ್ನು ರಕ್ಷಿಸುವ ಹೊಣೆಗಾರಿಕೆಯನ್ನು ಚೆನ್ನ ಬಸವಣ್ಣ ತಿಳಿಸಿಕೊಡುತ್ತಾರೆ .ಇಂತಹ ತಂಡದಲ್ಲಿ ಮಡಿವಾಳ ಮಾರಯ್ಯ ಅಕ್ಕ ನಾಗಮ್ಮ ಕಕ್ಕಯ್ಯ ಆಯ್ದಕ್ಕಿ ಮಾರಯ್ಯ ಲಕ್ಕಮ್ಮ ನುಲಿಯ ಚಂದಯ್ಯ ಅಂಬಿಗರ ಚೌಡಯ್ಯ, ಹೀಗೆ ಸಾವಿರಾರು ಶರಣರು ವಚನ ರಕ್ಷಣೆಗೆಗೆ ಮುಂದಾಗುತ್ತಾರೆ.
ಉಳವಿಯತ್ತ ಹೊರಟ ಶರಣರು ಮತ್ತು ಬಿಜ್ಜಳನ ಸೈನ್ಯದ ಮಧ್ಯ ಮುರುಗೋಡು ಬಳಿ ನಡೆದ ಭೀಕರ ಹೋರಾಟದಲ್ಲಿ ಈತನು ಲಿಂಗೈಕ್ಯನಾಗುತ್ತಾನೆ .ಇಂದಿನ ಸವದತ್ತಿ ತಾಲೂಕಿನ ಮುರುಗೋಡು ಶರಣರು ಭೀಕರ ಸಾವು ನೋವನ್ನು ಅನುಭವಿಸಿದ ಯುದ್ಧ ಭೂಮಿ . ಇಲ್ಲಿ ಕೂಗಿನ ಮಾರಯ್ಯನ ಜೊತೆಗೆ ಅಜ್ಞಾತ ಇನ್ನೂರು ಶರಣರ ಸಮಾಧಿಗಳಿವೆ.
‘ಮಹಾಮಹಿಮ ಮಾರೇಶ್ವರ’ ಎಂಬುದು ಈತನ ವಚನಗಳ ಅಂಕಿತನಾಮ.ಹಾಗೂ ಈತ ರಚಿಸಿದ11ವಚನಗಳು ಮಾತ್ರ ಇದುವರೆಗೆ ದೊರೆತಿವೆ.
ಅವುಗಳಲ್ಲಿ; ಷಡುಸ್ಥಲಗಳ ಸ್ವರೂಪ, ನಿಜಭಕ್ತನ ನಿಲುವು ಮುಂತಾದ ವಿಷಯಗಳ ಪ್ರತಿಪಾದನೆ ಗಳನ್ನು ಮಾಡಲಾಗಿದೆ.
ಅಪ್ಪುವಿನ ಶಿಲೆಯ ಉಳಿಯ ಮೊನೆಯಲ್ಲಿ ಚಿತ್ರಿಸಬಹುದೇ?
ಅರಗಿನ ಘಟವ ಉರಿಯ ಮೊನೆಯಲ್ಲಿ ಅಕ್ಷರವ ಬರೆಯಬಹುದೆ?
ಮೃತ್ತಿಕೆಯ ಹರುಗೋಲನೇರಿ ನದಿಯ ತಪ್ಪಲಿಗೆ ಹೋಗಬಹುದೆ?
ನಿಜನಿಶ್ಚಯವನರಿಯದವನ ವಾಚಾರಚನೆ ಇಷ್ಟಲ್ಲದಿಲ್ಲ.
ನಿಜತತ್ತ್ವವನರಿದವನ ವಾಚಾರಚನೆಯ ಕುರುಹೆಂತುಟೆಂದಡೆ:
ಶಿಲೆಯೊಳಗಣ ಸುರಭಿಯಂತೆ
ಪ್ರಳಯದೊಳಗಾದ ನಿಜನಿವಾಸದಂತೆ
ಆಯದ ಘಾಯದಂತೆ, ಸುಘಾಯದ ಸುಖದಂತೆ
ಇಂತೀ ಭಾವರಹಿತವಾದ ಭಾವಜ್ಞನ ತೇರ ಕೂಗಿಂಗೆ
ಹೊರಗು ಮಹಾಮಹಿಮ ಮಾರೇಶ್ವರಾ
ಅತ್ಯಂತ ಅರ್ಥ ಗರ್ಭಿತ ಆಧ್ಯಾತ್ಮಿಕ ಉನ್ನತ ನಿಲುವಿನಲ್ಲಿ ಕೂಗಿನ ಮಾರಿ ತಂದೆ ತಮ್ಮ ವಚನವನ್ನು ನಿರೂಪಿಸಿದ್ದಾರೆ .ಪ್ರಕಾರವಾದ ಬೆಳಕಿನ ಶಿಲೆಯಲಿ ಉಳಿಯ ಮೊನೆಯಲ್ಲಿ ಚಿತ್ರಿಸಲು ಸಾಧ್ಯವೇ? ಅರಗಿನ ಮೂರ್ತಿಯನ್ನು ಉರಿಯ ಕೆಂಡದ ಮೊನೆಯಲ್ಲಿ ಅಕ್ಷರಗಳನ್ನು ರಚಿಸಬಹುದೇ? ಮಣ್ಣಿನಿಂದ ಮಾಡಿದ ಮಡಿಕೆಯ ಹರುಗೋಲಿನಿಂದ ನದಿಯ ತಪ್ಪಲಿಗೆ ಹೋಗಬಹುದೇ ಮಡಿಕೆ ತೇಲುತ್ತದೆ ಎಂದ ಮಾತ್ರಕ್ಕೆ ಅದು ಜಲಪಾಯನಕ್ಕೆ ಅದು ಕಾಡಿನ ತಪ್ಪಲು ತರಲು ಸಾಧ್ಯವೇ ? ನಿಜನಿಶ್ಚಯವನರಿಯದವನ ವಾಚಾರಚನೆ ಇಷ್ಟಲ್ಲದಿಲ್ಲಇವುಗಳನ್ನು ಭಾವರಹಿತವಾದ ಭಾವ ತೇರಿನ ಪಯಣಕ್ಕೆ ಹೊರಗೂ ಎಂದಿದ್ದಾರೆ. ಅಂತರಂಗ ಮತ್ತು ಬಹಿರಂಗದ ಶುದ್ಧಿಗೆ ಮಹತ್ತರ ಪ್ರಾಧಾನ್ಯತೆ ನೀಡಿದ್ದಾರೆ.
ಖ್ಯಾತಿಲಾಭಕ್ಕೆ ಮಾಡೂದು ಎಂಬುದನರಿದು
ಭೂತಹಿತ ದಯದಾಕ್ಷಿಣ್ಯಕ್ಕೆ ಇಕ್ಕುವಾತನೆಂಬುದನರಿದು
ಮಹಿಮಾಸ್ಪದರಿಂದ ವೀರವೈರಾಗ್ಯಂಗಳಿಂದ
ಇಕ್ಕುವಾತನೆಂಬುದನರಿದು
ಮಾಡಿಕೊಂಡ ಕೃತ್ಯಕ್ಕೆ ಬಿಟ್ಟಡೆ ನುಡಿದಹರೆಂದು
ಗುತ್ತಗೆಯಲ್ಲಿ ಇಕ್ಕುವಾತನೆಂಬುದನರಿದು
ಅರ್ತಿ ತಪ್ಪದೆ ಬಾಹ್ಯದ ಭಕ್ತಿ ತಪ್ಪದೆ
ಅರ್ಚನೆ ಪೂಜನೆಗಳಲ್ಲಿ ನಿತ್ಯನೇಮ ತಪ್ಪದೆ
ಸುಚಿತ್ತ ಧರ್ಮದಲ್ಲಿ ಮಾಡುವವನರಿದು
ಇಂತೀ ವರ್ಮಧರ್ಮಂಗಳಲ್ಲಿ ಅರಿದು
ಸುಮ್ಮಾನದ ಸುಖತರದಲ್ಲಿ ಮಾಡುವ ವರ್ಮಿಗನನರಿದು
ಆರಾರ ಭಾವದ ಕಲೆಯನರಿದು,
ಗುಣವೆಂದು ಸಂಪಾದಿಸದೆ
ಅವಗುಣವೆಂದು ಭಾವದಲ್ಲಿ ಕಲೆಗೆ ನೋವ ತಾರದೆ
ಇಂತೀ ಸರ್ವಗುಣ ಸಂಪನ್ನನಾಗಿ
ಪೂಜಿಸಿಕೊಂಬ ಗುರುವಿಂಗೆ ಚರಿಸುವ ಜಂಗಮಕ್ಕೆ
ಉಪಾಧಿ ನಷ್ಟವಾದ ವಿರಕ್ತಂಗೆ
ಕೂಗಿಂದಿತ್ತ ನಮೋ ಎಂದು ಬದುಕಿದೆ
ಮಹಾಮಹಿಮ ಮಾರೇಶ್ವರಾ.
ಖ್ಯಾತಿ ಲಾಭದ ಬೆನ್ನು ಹತ್ತಿ ಗುಣವನ್ನು ಕಡೆಗಣಿಸುವವನು ಪೂಜೆ ಅರ್ಚನೆಯನ್ನೇ ನೇಮವೆಂದರಿತು ತತ್ವವನ್ನು ಮರೆತವನಿಗೆ ಕೂಗಿನ ಮಾರಯ್ಯನ ವಚನಗಳು ತುಂಬಾ ಎಚ್ಚರಿಕೆ ನೀಡುತ್ತವೆ.
ಉಪಾಧಿ ನಷ್ಟವಾದ ಉಧಾತೀಕರಣದ ತತ್ವವನರಿತ ವಿರಕ್ತನಿಗೆ ನಮೋ ನಮೋ ಎನ್ನುತ್ತಿರ್ದೆನು ಎಂದಿದ್ದಾರೆ.ಇಲ್ಲಿ ಲಿಂಗವು ಉಪಾಧಿತವಲ್ಲ ,ಪೂಜಿಸಿಕೊ0ಬ ಗುರುವಿಂಗೆ ಚರಿಸುವ ಜಂಗಮಕ್ಕೆ ಮಹತ್ವವನ್ನು ನೀಡಲಾಗಿದೆ.ಇಲ್ಲಿ ವ್ಯಕ್ತಿ ಪೂಜಿತನಾಗುವನಿಗಿಂತಲ್ಲೂ ಹೆಚ್ಚು ಚರಿಸುವ ಜಂಗಮ ಅಂದರೆ ಸಮಾಜದ ಹಿತವನ್ನು ಬಯಸುವವನು ನಿಜ ವಿರಕ್ತನಾಗುತ್ತಾನೆ ಎಂದು ಕೂಗಿನ ಮಾರಯ್ಯನವರು ಹೇಳುತ್ತಾರೆ .
ಶರಣರು ತಮ್ಮ ಜೀವವನ್ನೇ ತೇಯ್ದು ಮುಂಬರುವ ಸಮಾಜಕ್ಕೆ ಅಮೂಲ್ಯವಾದ ವಚನಗಳ ಸಾಹಿತ್ಯ ನಿಘಂಟನ್ನು ಕೊಟ್ಟು ಹೋಗಿದ್ದಾರೆ.ವಚನಗಳ ಆಶಯ ಹಾಗು ಶರಣರ ಮುಕ್ತ ಸಮಾಜದ ನಿರ್ಮಾಣದ ಹೆಗ್ಗುರಿ ಈಗ ನಮ್ಮೆಲ್ಲರ ಮೇಲಿದೆ.
–ಡಾ.ಶಶಿಕಾಂತ, ರುದ್ರಪ್ಪ ಪಟ್ಟಣ -ಪುಣೆ -9552002338