ಶ್ರೇಷ್ಠ ಶಿಲ್ಪಿ ಮಾನಯ್ಯ ಬಡಿಗೇರ’
e-ಸುದ್ದಿ ಸುರಪುರ:
ದೇಶದ ಶ್ರೇಷ್ಠ ಶಿಲ್ಪಿಗಳು ಮಾನಯ್ಯ ಬಡಿಗೇರ ಅವರು . ಇದೀಗ ಅಯೋಧ್ಯೆಯಿಂದ ನೇರವಾಗಿ ಇಲ್ಲಿಗೆ ಬಂದಿದ್ದಾರೆ. ಇವರು ಸಾವಿರಾರು ಮೂರ್ತಿಗಳನ್ನು ತಯಾರಿಸಿದ್ದಾರೆ. ಅವು ದೇಶ ವಿದೇಶಗಳಲ್ಲಿ ಪೂಜೆಗೊಳ್ಳುತ್ತಿವೆ. ಇದೆಲ್ಲಕ್ಕೂ ಕಳಸವಿಟ್ಟಂತೆ ಈಗ ಅಯೋಧ್ಯೆಯ ರಾಮಮಂದಿರದ ರಾಮಲಲ್ಲಾನ ಮೂರ್ತಿ ತಯಾರಿಸುವ ರಾಷ್ಟ್ರದ ನಾಲ್ಕು ಜನ ಪರಿಣಿತರ ತಂಡದಲ್ಲಿದ್ದು, ಅದರ ತಯಾರಿಯಲ್ಲಿದ್ದಾರೆ. ಇವರು ನಮ್ಮ ಸುರಪುರದ ಹೆಮ್ಮೆ. ಸುರಪುರದ ಹೆಸರನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಎತ್ತರಕ್ಕೋಯ್ದ ಕೀರ್ತಿ ಮಾನಯ್ಯ ಬಡಿಗೇರ ಅವರಿಗೆ ಸಲ್ಲುತ್ತದೆ’ ಎಂದು ಸಾಹಿತಿ ಶ್ರೀನಿವಾಸ ಜಾಲವಾದಿ ಹೇಳಿದರು.
ಅವರು ಇಂದು ಸುರಪುರದ ಕನ್ನಡ ಸಾಹಿತ್ಯ ಸಂಘದಲ್ಲಿ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ಈ ಸಂದರ್ಭದಲ್ಲಿ ಮಾನಯ್ಯ ಬಡಿಗೇರ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ನೆರವೇರಿಸಿ ಮಾತನಾಡಿದ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಬಸವರಾಜ ಜಮದ್ರಖಾನಿ,’ ಮಾನಯ್ಯ ಬಡಿಗೇರ ಅವರ ಮೇಲೆ ಈಗ ಅತ್ಯಂತ ಮಹತ್ತರ ಜವಾಬ್ದಾರಿ ಇದೆ. ಇಡೀ ಜಗತ್ತು ಈಗ ಅವರ ಕಡೆ ಅತ್ಯಂತ ಕುತೂಹಲದಿಂದ ನೋಡುತ್ತಿದೆ. ಅವರು ತಮ್ಮ ಕಾರ್ಯದಲ್ಲಿ ಯಶಸ್ವಿ ಆಗುತ್ತಾರೆ. ಸಗರನಾಡು ಹಾಗೂ ಸುರಪುರದ ಕೀರ್ತಿ ಹೆಚ್ಚಿಸುತ್ತಾರೆ’ ಎಂದು ಹೇಳಿದರು.
ಪಿಎಸ್ಐ ಕೃಷ್ಣ ಸುಭೇದಾರ ಮಾತನಾಡಿದರು. ಇವರಿಗೆ ಪದ್ಮಶ್ರೀ ಪ್ರಶಸ್ತಿ ಸಿಗಲಿ ಎಂದು ಎಲ್ಲರೂ ಆಶಯ ವ್ಯಕ್ತಪಡಿಸಿದರು. ನ್ಯಾಯವಾದಿ ಜಯಲಲಿತಾ ಪಾಟೀಲ,ಕನಕಪ್ಪ ವಾಗನಗೇರಿ, ಎ.ಕೆ.ಕಮಲಾಕರ, ವೆಂಕಣ್ಣ ದಾಯಿ, ಕುಮಾರ ಬಡಿಗೇರ ಹಾಗೂ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಮಾಜಿ ಸಚಿವ ಸಾಂಸ್ಕೃತಿಕ ರಾಯಭಾರಿಯಾಗಿದ್ದ ರಾಜಾ ಮದನಗೋಪಾಲ ನಾಯಕರ ಎರಡು ಪ್ರತಿಮೆಗಳನ್ನು ಶಿಲ್ಪಿ ಮಾನಯ್ಯ ಬಡಿಗೇರ ಅವರು ಸುರಪುರದ ಪಬ್ಲಿಕ್ ರಿಕ್ರಿಯೇಶನ್ ಕ್ಲಬ್ ಗೆ ಹಾಗೂ ಕನ್ನಡ ಸಾಹಿತ್ಯ ಸಂಘಕ್ಕೆ ತಯಾರು ಮಾಡಿ ಕೊಟ್ಟಿದ್ದಾರೆ. ಪ.ರಿ.ಕ್ಲಬ್ ನ ಶತಮಾನೋತ್ಸವದ ಸಂದರ್ಭದಲ್ಲಿ ಮೂರ್ತಿಯನ್ನು ಪ. ರಿ. ಕ್ಲಬ್ ಅಧ್ಯಕ್ಷ ರಾಜಾ ಮುಕುಂದ ನಾಯಕರ ನೇತೃತ್ವದಲ್ಲಿ ಅನಾವರಣಗೊಳಿಸಲಾಗಿದೆ.