ಇದಿರು ಹಳಿಯಲು ಬೇಡ – ಸೇಡಂ ಪಾಟೀಲರು
ಅತಿಯಾದ ಸರಳತೆ ಎಂಬುದು ಸೋಗಲಾಡಿತನ ಅಂದುಕೊಳ್ಳುವ ಹಾಗೆ ಕೆಲವರು ವರ್ತಿಸಿ ನನ್ನನ್ನು ಯಾಮಾರಿಸಿದ್ದರು. ಆದರೆ ಅದನ್ನು ಸುಳ್ಳಾಗಿಸುವ ಸರಳತೆ ಮತ್ತು ಕಳಕಳಿಯ ಪ್ರತಿರೂಪದಂತಿರುವ ಹಿರಿಯ ಜೀವಿ, ಕೊತ್ತಲ ಬಸವೇಶ್ವರ ಶಿಕ್ಷಣ ಸಂಸ್ಥೆಯ ರೂವಾರಿ, ಡಾ.ಬಸವರಾಜ ಪಾಟೀಲ ಸೇಡಂ. ಅವರನ್ನು ಮೊದಲ ಬಾರಿಗೆ ಭೇಟಿ ಆಗುವ ಸುಯೋಗ ಲಭಿಸಿತು. ಇದಕ್ಕೆ ಕಾರಣರಾದವರು ದೂರದರ್ಶನದ ಮುಖ್ಯಸ್ಥೆ ನಿರ್ಮಲ ಎಲಿಗಾರ.
ದೂರದರ್ಶನ ಚಂದನ ವಾಹಿನಿ ಆರಂಭ ಮಾಡಿರುವ ವಿನೂತನ ಸಂದರ್ಶನ ಸರಣಿ ‘ಜನನಾಯಕ’ ಕ್ಕೆ ಕಲ್ಯಾಣ ಕರ್ನಾಟಕದ ಅತ್ಯಂತ ಹಿರಿಯ, ಸಜ್ಜನ ಜನಸೇವಕ, ಸ್ವಯಂ ಸೇವಾ ಸಂಸ್ಥೆಯ ಮೂಲಕ ಲಕ್ಷಾಂತರ ಜನರ ಬಾಳಿಗೆ ದಾರಿ ದೀಪವಾದ ಡಾ.ಬಸವರಾಜ ಪಾಟೀಲ ಸೇಡಂ ಅವರನ್ನು ಆಹ್ವಾನಿಸಲು ನಿರ್ಣಯಿಸಲಾಯಿತು.
ಅವರಿಗೆ ಆಪ್ತರಾಗಿರುವ ಡಾ.ಬಾಬಾಸಾಹೇಬ ಗಡ್ಡೆ ಅವರ ಮೂಲಕ ಸಮಯವೂ ನಿಗದಿಯಾಯಿತು. ಅವರ ಶಿಸ್ತು, ಸಮಯ ಪ್ರಜ್ಞೆ ಮತ್ತು ಸರಳತೆ ಬಗ್ಗೆ ತುಂಬಾ ಕೇಳಿದ್ದೆ. ಹಾಗೆ ಅವರ ತಾತ್ವಿಕ ನಿಲುವುಗಳ ಕುರಿತು ಸಣ್ಣ ಪೂರ್ವಗ್ರಹ ಭಾವನೆಯೂ ಇತ್ತು. ಆದರೆ ಅವರ ಅಪರೂಪದ ಭೇಟಿ ಎಲ್ಲ ಗುಮಾನಿ ಮತ್ತು ಪೂರ್ವಗ್ರಹ ಭಾವನೆಗಳನ್ನು ತೊಡೆದು ಹಾಕಿತು. ಅವರು ನಿಗದಿ ಪಡಿಸಿದ ಸಮಯಕ್ಕಿಂತ ಮೊದಲೇ ದೂರದರ್ಶನ ತಲುಪಿ, ಅವರಿಗಾಗಿ ಕುತೂಹಲದಿಂದ ಕಾಯುತ್ತಲಿದ್ದೆ. ಇತ್ತೀಚಿಗೆ ಹೀಗೆ ಕಾದಿದ್ದು ತುಂಬಾ ವಿರಳವೂ ಹೌದು!
ಕರೋನ ಸಂದರ್ಭದಲ್ಲಿ ಪಾಟೀಲ ಅವರ ತುಂಬ ವೈರಲ್ ಆಗಿದ್ದ ಒಂದು ಪುಟ್ಟ ವಿಡಿಯೋ ನೋಡಿ ಪ್ರಭಾವಿತನಾಗಿ ಲೇಖನ ಕೂಡ ಬರೆದಿದ್ದೆ. ನಂತರ ಅವರನ್ನು ಭೇಟಿ ಮಾಡಲು ಪಟ್ಟ ಪ್ರಯತ್ನಕ್ಕೆ ಯಾಕೋ ಯಶ ದೊರಕಿರಲಿಲ್ಲ. ಇಂದು ದೂರದರ್ಶನ ತಲುಪಿದ ಅವರು ನಿಧಾನವಾಗಿ ಹಲವಾರು ‘ಆಫ್ ದಿ ರೆಕಾರ್ಡ್’ ವಿಷಯಗಳ ಸುರುಳಿ ಬಿಚ್ಚುತ್ತಾ ಹೋದಾಗ ಆಘಾತವಾಯಿತು. ನಾನು ಊಹಿಸಿದ್ದ ಹತ್ತಾರು ಸತ್ಯಗಳನ್ನು ಬಹುದಿನಗಳ ಪರಿಚಿತರೆಂಬಂತೆ ಹೇಳುತ್ತಾ ಸಾಗಿ, ನನ್ನ ದುಗುಡ, ಸಂಶಯ ಮತ್ತು ಆತಂಕಗಳನ್ನು ದೂರ ಮಾಡಿದರು. ಇದು ನನ್ನ ಪಾಲಿನ ಸಡಗರವೂ ಹೌದು.
ಅತ್ಯಂತ ಬಿಗಿ ನಿಲುವಿನ ಸಿದ್ಧಾಂತದ ಮೂಲಕ ಸಂಘ ಪರಿವಾರದಲ್ಲಿ ಬೆಳೆದಿರುವ ಇವರ ರಾಷ್ಟ್ರೀಯತೆಯ ಪರಿಕಲ್ಪನೆ ವಿಭಿನ್ನ ಮತ್ತು ಅರ್ಥಪೂರ್ಣ. ಆದರೆ ಈಗ ಕಾಲ ತುಂಬ ಬದಲಾಗಿದೆ, ಸಿದ್ಧಾಂತ ಒಂದೇ ಆದರೂ, ಅಲ್ಲಿರುವ ಹೊಸ ಪೀಳಿಗೆ, ಪರಿಕಲ್ಪನೆಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿಕೊಂಡಿದ್ದಾರೆ. ಅದು ಕಾಲದ ಮಹಿಮೆ.
ಹೈದರಾಬಾದ್ ಕರ್ನಾಟಕವನ್ನು, ಕಲ್ಯಾಣ ಕರ್ನಾಟಕ ಎಂದು ಅಧಿಕೃತ ಘೋಷಣೆ ಆಗಲು, ೩೭೧-ಜೆ ಆರ್ಟಿಕಲ್ ಜಾರಿಗೆ ಬರಲು, ಅನುಭವ ಮಂಟಪದ ಕಾರ್ಯ ಆರಂಭವಾಗಲು ತಾವು ತೆಗೆದುಕೊಂಡ ನಿರ್ಣಯಗಳ ಕುರಿತು ಪ್ರಾಂಜಲವಾಗಿ ವಿವರಿಸಿದರು. ಪ್ರಾಮಾಣಿಕವಾಗಿ ಹೋರಾಡಿದ ವೈಜನಾಥ ಪಾಟೀಲ ಅವರನ್ನು ನೆನಪಿಸಿಕೊಂಡರು. ಖರ್ಗೆ ಅವರ ಹೆಸರನ್ನು ಪ್ರಸ್ತಾಪ ಮಾಡಿದರು. ಯಡಿಯೂರಪ್ಪ ಅವರು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘಕ್ಕೆ ನೀಡಿದ ನೆರವನ್ನು ಸ್ಮರಿಸಿದರು. ಅದರ ಮೂಲಕ ಕೈಗೊಂಡ ವಿಧಾಯಕ ಕೆಲಸಗಳು ಮತ್ತು ಫಲಾನುಭವಿಗಳ ಯಶೋಗಾಥೆಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದರು. ಮಹಿಳಾಪರ ನಿಲುವು, ರಾಜಕೀಯ ಪ್ರಾಮಾಣಿಕತೆ, ಹೀಗೆ ಹತ್ತಾರು ವಿಷಯಗಳನ್ನು ಅತ್ಯಂತ ಆತ್ಮವಿಶ್ವಾಸದಿಂದ ಮಾತನಾಡಿದರು.
ಫ್ಲೆಕ್ಸ್ ಸಂಸ್ಕೃತಿಯ ರಾಜಕಾರಣದ ಮೂಲಕ ಹಾಳಾಗುವ ಕೋಟ್ಯಂತರ ರೂಪಾಯಿಗಳು ಮತ್ತು ಅದಕ್ಕೆ ಕಾರಣವಾದವರು, ಅದು ಹೇಗೆ ಜನ ನಾಯಕರಾಗುತ್ತಾರೆ? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಅನ್ನ ಬೆಳೆಯುವ ರೈತ, ಕಸ ಗುಡಿಸುವ ಕೂಲಿ ಕಾರ್ಮಿಕ, ತಲೆ ಕೂದಲು ಕತ್ತರಿಸುವ ಕ್ಷೌರಿಕ, ಸುಂದರವಾಗಿ ಬಟ್ಟೆ ಹೊಲಿಯುವ ಟೇಲರ್ ಕೂಡ ನಾಯಕರೇ! ಕೇವಲ ರಾಜಕಾರಣ ಮಾಡುವವರು ಮಾತ್ರ ಜನನಾಯಕರಾಗುವುದಿಲ್ಲ! ಜನನಾಯಕರ ಪರಿಕಲ್ಪನೆಯೇ ಬದಲಾಗಬೇಕಾಗಿದೆ ಎಂದಾಗ, ಬಸವಣ್ಣನವರ ಕಾಯಕ ಸಂಸ್ಕೃತಿ ನೆನಪಾಯಿತು.
ಪಂಚತಂತ್ರದ ಕತೆಗಳನ್ನು ಮಕ್ಕಳಿಗೆ ಓದಿಸಿ, ಅವರ ಜ್ಞಾನವನ್ನು ವಿಸ್ತರಿಸಬೇಕು. ಎಂಟು ನೂರು ಶಾಸ್ತ್ರಗಳನ್ನು ಭಾರತ ಜಗತ್ತಿಗೆ ನೀಡಿದೆ. ಅವುಗಳ ಪರಿಪೂರ್ಣ ವೈಜ್ಞಾನಿಕ ಅಧ್ಯಯನವಾಗಬೇಕು. ಕೃಷಿ ಪದ್ಧತಿಗೆ ಒತ್ತು ಕೊಡಬೇಕು, ತಮ್ಮ ಭಾಗದಲ್ಲಿ ನೂರಾರು ಯುವಕರಿಗೆ ಕೃಷಿಯಲ್ಲಿ ಆಸಕ್ತಿ ಹೆಚ್ಚಿಸಿದ ಕತೆ ಕೇಳುವಾಗ ಯಾವುದೋ ಆದರ್ಶ ಲೋಕದಲ್ಲಿ ತೇಲಾಡಿದ ಅನುಭವ.
‘ಭಾರತೀಯ ಪರಂಪರೆ ಎಂದರೆ ಸೌಹಾರ್ದತೆ, ದಯೆ, ದಾನ ಮತ್ತು ಸ್ನೇಹ ಬರೀ ದ್ವೇಶಾಸೂಯೆ ಅಲ್ಲ. ಅಗತ್ಯ ಬಿದ್ದಾಗ ಮಾತ್ರ ಆತ್ಮ ರಕ್ಷಣೆ ಮಾಡಿಕೊಳ್ಳಲು ಹೋರಾಟ ಮಾಡಬೇಕು. ವಿನಾಕಾರಣ ಸಾಮಾಜಿಕ ಸ್ವಾಸ್ಥ್ಯ ಕೆಡುವ ಮಾತು ಮತ್ತು ಕ್ರಿಯೆ ಒಳ್ಳೆಯದಲ್ಲ’ ಹೀಗೆಯೇ ಗಟ್ಟಿಯಾಗಿ ಹೇಳಿದ ಮಾತುಗಳ ಮಳೆಯಲ್ಲಿ ಒದ್ದೆಯಾದ ಹಿತಾನುಭವ.
ಅವರು ಹೇಳಿದ ಮೂರು ಸೂತ್ರಗಳು ವಿಶೇಷ-
‘ನಾವು ಕಾಯಕ ಮಾಡುವ ಕ್ಷೇತ್ರದಲ್ಲಿ ಎರಡು ತಾಸು ಧ್ಯಾನಸ್ಥರಾಗಿ ಹೆಚ್ಚಿಗೆ ಕೆಲಸಮಾಡಬೇಕು, ಸರಳ ಜೀವನ ನಡೆಸಬೇಕು, ಮಿತ ವ್ಯಯ ಮಾಡಿ, ಆ ಮಿತವ್ಯಯದ ಮೂಲಕ ಉಳಿದ ಹಣವನ್ನು ನಮ್ಮ ಸುತ್ತಲೂ ಇರುವ ಅಸಹಾಯಕರಿಗೆ ಹಂಚುವ ಮೂಲಕ ನೆರವಾಗಬೇಕು.’ ಇವುಗಳನ್ನು ನಿತ್ಯ ಪಾಲಿಸಿದರೆ ನಾವು ಸಮಾಜದಲ್ಲಿ ಬಹುದೊಡ್ಡ ಪರಿವರ್ತನೆಗೆ ಕಾರಣರಾಗುತ್ತೇವೆ.
‘ಸಂತೆಗಳನ್ನು ನಾಶ ಮಾಡಿ, ಮಾಲ್ ಸಂಸ್ಕೃತಿ ಮೂಲಕ ಜನರನ್ನು ದಾರಿ ತಪ್ಪಿಸುವ ಕೆಲಸ ನಡೆದಿದೆ. ‘ಬೈ ಒನ್ ಗೆಟ್ ಟು’ ಎಂಬ ಹುಚ್ಚು ಹೋಗಿಸಿ, ಅನಗತ್ಯ ವಸ್ತುಗಳನ್ನು ಕೊಳ್ಳಲು ಪ್ರೇರೇಪಿಸುವ ‘ಕೊಳ್ಳುಬಾಕ ಸಂಸ್ಕೃತಿ’ ಜನರ ದಿವಾಳಿತನದ ಪ್ರತೀಕ…’ ಹೀಗೆ ಅನೇಕ ವಿಚಾರಧಾರೆಗಳ ವಿವರಣೆಯಲ್ಲಿ ಸಂಪೂರ್ಣ ಪ್ರಾಮಾಣಿಕತೆ ಇತ್ತು. ಮಾತುಗಳು ಮನದಿಂದ ಹರಿಯುತ್ತಿದ್ದವು. ನಡೆ, ನುಡಿ ಒಂದಾದ ಶರಣ ಚೈತನ್ಯ ಕಂಗೊಳಿಸುತ್ತಿತ್ತು.
ಬಿಳಿ ಜುಬ್ಬಾ, ಪೈಜಾಮ ಅವರ ನಿತ್ಯ ವೇಷಭೂಷಣ. ಮೃದು ಮಾತಿನ ಆಳವಾದ ಕಳಕಳಿ ಅವರ ಶಕ್ತಿ. ಮುಖ್ಯಮಂತ್ರಿಗಳಾಗುವ ಅವಕಾಶ ನಿರಾಕರಿಸಲು ನೀಡಿದ ಕಾರಣಗಳು, ಎಲ್ಲವೂ ಅಪ್ಯಾಯಮಾನ ಸತ್ಯಗಳು. ಲೊಕಸಭೆ, ರಾಜ್ಯಸಭೆ ಮತ್ತು ವಿಧಾನ ಪರಿಷತ್ತಿನ ಮೂಲಕ ಅಧಿಕಾರ ಅನುಭವಿಸಿದರೂ, ಅಧಿಕಾರದ ಸೋಂಕು ತಗುಲಿಸಿಕೊಳ್ಳದ ನಿರ್ಲಿಪ್ತ ಮನಸ್ಥಿತಿ.
ಶಿಕ್ಷಣ ಕ್ಷೇತ್ರದ ಗುಣಮಟ್ಟ ಹೆಚ್ಚಿಸಲು ಹಂತ ಹಂತವಾಗಿ ಮಾಡಿದ ಪ್ರಯತ್ನ ಮತ್ತು ಯಶಸ್ಸು ನಮಗೆ ಮಾರ್ಗಸೂಚಿ. ಎಂಬತ್ತರ ಹರೆಯದ ಯುವ ಚೇತನ ಪಾಟೀಲ ಅವರನ್ನು ಬೀಳ್ಕೊಡುವ ಮನಸಾಗಲಿಲ್ಲ.
‘ಇದಿರು ಹಳಿಯದೇ ನಿಮ್ಮ ಪಾಡಿಗೆ ನೀವು ಕೆಲಸ ಮಾಡಿ, ತುಂಬಾ ಟೀಕೆ ಮಾಡಬೇಕು ಎನಿಸಿದರೆ ಮೌನಕ್ಕೆ ಮೊರೆ ಹೋಗಿ, ಆಗ ನಿಮ್ಮಲ್ಲೇ ಒಂದು ಬದಲಾವಣೆ ಸಾಧ್ಯ’ ಎಂಬ ಕಿವಿಮಾತು ಇನ್ನೂ ರಿಂಗಣವಾಡುತ್ತದೆ.
ಇದಿರು ಹಳಿಯಲು ಬೇಡ, ತನ್ನ ಬಣ್ಣಿಸಬೇಡ…
ಇಷ್ಟು ಸಾಕಲ್ಲ ನಮ್ಮ ನಾವು ಅರಿಯಲು.
ಧನ್ಯವಾದಗಳು ಸರ್ ನಿಮಗೆ.
–ಪ್ರೊ.ಸಿದ್ದು ಯಾಪಲಪರವಿ, ಕಾರಟಗಿ
9448358040