ಅಕ್ಕನೆಡೆಗೆ -ವಚನ 33 (ವಾರದ ವಿಶೇಷ ವಚನ‌ ವಿಶ್ಲೇಷಣೆ)

ಜರೆಯುವವರ ಜೊತೆಗಿದ್ದರೆ

ಧನದ ಮೇಲೆ ಬಂದವರೆಲ್ಲ ಅನುಸರಿಗಳಲ್ಲದೆ
ಆಗು ಮಾಡ ಬಂದವರಲ್ಲ
ಮನದ ಮೇಲೆ ಬಂದು ನಿಂದು ಜರೆದು ನುಡಿದು
ಪಥವ ತೋರಬಲ್ಲಾತನೇ ಸಂಬಂಧಿ
ಹಾಗಲ್ಲದೆ ಅವರಿಚ್ಛೆಯ ನುಡಿದು ತನ್ನುದರವ ಹೊರೆವ
ಬಚ್ಚಣಿಗಳ ಮೆಚ್ಚುವನೆ ಚೆನ್ನಮಲ್ಲಿಕಾರ್ಜುನ.

ಅಕ್ಕಮಹಾದೇವಿಗೆ ಲೌಕಿಕದ ವ್ಯಾಪಾರವು ಕಾಡುತ್ತಲೇ ಬಂದಿದೆ. ಅನೇಕ ವಚನಗಳಲ್ಲಿ ಅದರ ಪ್ರಭಾವವಿರುವುದನ್ನು ಗುರುತಿಸಬಹುದು. ಅದೇ ತರಹದ ಒಂದು ವಚನ ಮೇಲಿನದು. ಧನಿಕರು, ಪುರೋಹಿತರು, ಮನುಷ್ಯ ಸ್ವಭಾವ, ತಪ್ಪು ಮಾಡಿದಾಗ ಬೈದು ತಿಳಿ ಹೇಳುವ ಸ್ವಭಾವ ಮತ್ತು ಸಂಬಂಧಿಕರು ಕುರಿತು ಈ ವಚನ ಚಿಂತನೆ ಮಾಡುತ್ತದೆ.

‘ಹಣ ನೋಡಿದರೆ ಹೆಣವೂ ಬಾಯಿ ಬಿಡುತ್ತದೆ’, ‘ಮುಖ ನೋಡಿ ಮಣೆ ಹಾಕ್ತಾರೆ’, ‘ದುಡ್ಡಿದ್ದವನೇ ದೊಡ್ಡಪ್ಪ’, ‘ರಾಜ ಇರೋತನಕ ರಾಣಿ ಭೋಗ’ ಮುಂತಾದ ಗಾದೆಗಳು ಹಣ, ಐಶ್ವರ್ಯ, ವೈಭವ ನೆಚ್ಚಿಕೊಂಡವರ ಮನಸ್ಥಿತಿಯನ್ನು ಹೇಳುತ್ತದೆ.

ಈ ಪ್ರಪಂಚದ ಭೌತಿಕ(Materialistic) ಅನುಭವಗಳ ವಿವರಣೆ. ಸಮಾಜದಲ್ಲಿ ಹಣ, ಐಶ್ವರ್ಯ, ಸಂಪತ್ತು, ಆಸ್ತಿಪಾಸ್ತಿಗಳು ನೋಡುವವರ ಕಣ್ಣಿಗೆ ಸಹಜವಾಗಿಯೇ ಕುಕ್ಕುತ್ತವೆ. ಅದನ್ನೇ ನೋಡಿ ಜನ ಹತ್ತಿರ ಬರುತ್ತ, ಸ್ನೇಹ, ಸಂಬಂಧ ಬೆಳೆಸುತ್ತಾರೆ.

ಸಂಸ್ಕೃತದಲ್ಲಿ ಒಂದು ಮಾತಿದೆ,
‘ನ ವಿದ್ಯಯಾ ನೈವ ಕುಲೇನ ಗೌರವಂ
ಜನಾನುರಾಗೋ ಧನಿಕೇಷು ಸರ್ವದಾ
ಕಪಾಲಿನಾ ಮೌಲಿ ಧೃತಾಪಿ ಜಾಹ್ನವೀ
ಪ್ರಯಾತಿ ರತ್ನಾಕರಮೇವ ಸರ್ವಾದಾ’

ಅಂದರೆ, ‘ವಿದ್ಯೆ, ಅರಿವು ಪಡೆದರೂ ಮನೆತನಕ್ಕೆ ಹಿರಿಮೆ ತರಲಾರವು. ಎಂದಿಗೂ ಹಣ ಉಳ್ಳವರೇ ಜನರ ಒಲುಮೆಗೆ ಪಾತ್ರರಾಗುತ್ತಾರೆ. ಶಿವನ ತಲೆಯ ಮೇಲೆ ಗಂಗೆ ಇದ್ದರೂ, ಕೊನೆಗೆ ಸೇರುವುದು ಸಾಗರದಲ್ಲಿ. ಅಂದರೆ ಸಮುದ್ರದಲ್ಲಿರುವ ಬೆಲೆ ಬಾಳುವ ಮುತ್ತು ರತ್ನಗಳಲ್ಲಿಯೇ ಗಂಗೆಯು ಲೀನವಾಗುತ್ತಾಳೆ’.
ಮನುಷ್ಯನಲ್ಲಿ ಸಹಜವಾಗಿಯೇ ಹಣದ ಆಕರ್ಷಣೆ ಹೊಂದಿರುತ್ತಾನೆ ಎಂದು ಮೇಲಿನ ಸಾಲುಗಳು ಹೇಳುತ್ತವೆ.

‘ನೀ ರೊಕ್ಕದ ಮಾರಿ ನೋಡ್ ಬ್ಯಾಡ, ಮನ್ಷಾನ ಮನ್ಸ್ ನೋಡು’ ಎಂದು ಗ್ರಾಮ್ಯ ಸಂಸ್ಕೃತಿಯ ಜನರು ಹೇಳುವುದನ್ನು ಕೇಳಿರುತ್ತೇವೆ. ಹಾಗೆಯೇ ಹಣಕ್ಕಿಂತ ಮುಖ್ಯವಾದುದು ‘ವ್ಯಕ್ತಿ’ ಮತ್ತು ‘ಮನಸು’. ಯಾರು ಹಣ ನೋಡಿ ಬಂದಿರುತ್ತಾರೋ ಅವರು ಒಳಿತನ್ನು ಮಾಡಲಾರರು.

ಮನುಷ್ಯನಲ್ಲಿರುವ ಅರಿಷಡ್ವರ್ಗಗಳು ಮನಸಿನ ಶಾಂತಿ ಕದಡುತ್ತವೆ. ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳಲ್ಲಿ ‘ಮತ್ಸರ’ವು ಇತರರ ಒಳಿತನ್ನು ಬಯಸುವುದಿಲ್ಲ.

ಮನುಷ್ಯ ಮನುಷ್ಯನ ನಡುವೆ ಮಾನವೀಯ ಸಂಬಂಧವಿದ್ದರೆ ಮಾತ್ರ ಇತರರನ್ನು ತಿದ್ದಲು ಸಾಧ್ಯ. ನಮ್ಮನ್ನು ತಿದ್ದಿಕೊಳ್ಳುತ್ತ ಇತರರನ್ನು ತಿದ್ದುವುದು ದೊಡ್ಡ ಗುಣ. ಆದರೆ ನಮ್ಮವರು ತೊಂದರೆಯಲ್ಲಿದ್ದರೆ, ಅವರಿಗೆ ಹಾನಿಯಾಗುವಂತಿದ್ದರೆ, ಅವರಿಗೆ ನೆರೆವಾಗಲು ಮುಂದಾಗುವುದು ಮಾನವೀಯತೆ. ಯಾರಿಗೆ ತಿಳಿಯುವುದಿಲ್ಲೊ ಅವರಿಗೆ ಬೈದು ಹೇಳಬೇಕು. ಹಾಗೆ ಕಠೋರವಾಗಿ ನಡೆದುಕೊಳ್ಳುವವರೇ ನಿಜವಾದ ಸಂಬಂಧಿಕರು. ಅವರೇ ಹಿತೈಷಿಗಳು ಎನಿಸಿಕೊಳ್ಳುತ್ತಾರೆ. ‘ಬೈದವರೆನ್ನ ಬಂಧುಗಳೆನ್ನಿ’ ಎನ್ನುವ ಶರಣರ ಮಾತು ಅಕ್ಷರಶಃ ಸತ್ಯ.

ಇದೇ ವಚನವನ್ನು ಇನ್ನೊಂದು ಅರ್ಥದಲ್ಲಿಯೂ ಗ್ರಹಿಸಬಹುದು. ಪುರೋಹಿತ ಶಾಹಿ ವ್ಯವಸ್ಥೆಯ ದೃಷ್ಟಿಕೋನದ ಹಿನ್ನೆಲೆಯಲ್ಲಿ ಅರ್ಥೈಸಬಹುದು. ಪುರೋಹಿತ್ಯವ ಮಾಡುವವರೇ ಬಚ್ಚಣಿಗರು. ತಮ್ಮ ಉದರ ಪೋಷಣೆಗಾಗಿ ಹಗಲಿರುಳು ಆಲೋಚಿಸುವವರು. ಸಿರಿವಂತರ ಮನೆಗಳಿಗೆ ಹೋಗಿ ಪೂಜೆಯ ನೆಪದಲ್ಲಿ, ಹಣ ಮತ್ತು ವಸ್ತುಗಳನ್ನು ಪಡೆಯುವ ಹುನ್ಅರದಲ್ಲಿರುತ್ತಾರೆ.
ಅಂಥವರನ್ನು ನೋಡಿ ಅಕ್ಕ ಖಂಡಿಸುತ್ತಾಳೆ. ಇನ್ನೊಬ್ಬರಿಂದ ಹಣ ಸೆಳೆಯುತ್ತ, ಮೇಲ್ನೋಟಕ್ಕೆ ದೇವ ಕಾರ್ಯ ಮಾಡುತ್ತ, ತಮ್ಮ ಸ್ವಾರ್ಥಕ್ಕಾಗಿ, ತಮ್ಮ ಸುಖಕ್ಕಾಗಿ ಜೀವಿಸುವವರನ್ನು ಅಕ್ಕ ವಿರೋಧಿಸುತ್ತಾಳೆ.

ಪ್ರಸ್ತುತ ಸಮಾಜದಲ್ಲಿ ಇಂತಹ ಅನೇಕ ಪ್ರಸಂಗಗಳು ಎದುರಾಗುತ್ತವೆ. ಅಷ್ಟೆ ಅಲ್ಲ ಕೇಳಿದ್ದೇವೆ, ಕಂಡಿದ್ದೇವೆ. ಇಂದಿನ ಬಹಳಷ್ಟು ಮಠ, ಮಂದಿರಗಳು ಅನೇಕ ಗೋಮುಖ ವ್ಯಾಘ್ರಗಳಾಗಿರುವುದು ವಿಷಾದಕರ.

ದೇವರು ಮತ್ತು ನಂಬಿಕೆಯ ಹೆಸರಿನಲ್ಲಿ ಜನರನ್ನು ಮೂಢ್ಯತೆಗೆ ಎಳೆಯುತ್ತಿರುವುದು ಸಾಮಾಜಿಕ ಹಾನಿ. ಅಕ್ಕನ ಈ ವಚನದಿಂದ ಜನಸಾಮಾನ್ಯರು ಖಂಡಿತ ಜಾಗ್ರತರಾಗಬಹುದು. ಈ ಜಾಗ್ರತಿಯ ಸಂದೇಶವನ್ನು ಎಲ್ಲೆಡೆ ತಲುಪಿಸುವ ಜವಾಬ್ದಾರಿ ಪ್ರತಿಯೊಬ್ಬರದಾಗಿದೆ.

ಸಿಕಾ

Don`t copy text!