ಪುಸ್ತಕ ಪರಿಚಯ – ಕೃತಿ ಶೀಷಿ೯ಕೆ
ನವಿಲಿಗೆ ಸಾವಿರ ನಯನಗಳು (ಗಜಲ್ ಸಂಕಲನ)
ಲೇಖಕರು………….ಯು ಸಿರಾಜ್ ಅಹ್ಮದ್ ಸೊರಬ
ಪ್ರಕಾಶಕರು…..ಉಡುತಡಿ ಪ್ರಕಾಶನ ನೆಲಮಂಗಲ. ಮೊ.೯೭೪೩೯೦೮೮೭೬
ಪ್ರಕಟನೆಯ ವರ್ಷ……೨೦೨೩…..ಬೆಲೆ ೧೨೦₹
ನೆಲಮಂಗಲದಲ್ಲಿ ವಾಸವಾಗಿರುವ ಯು ಸಿರಾಜ ಅಹ್ಮದ್ ಸೊರಬ ಅವರು ವೃತ್ತಿಯಿಂದ ವ್ಯಾಪಾರಿಗಳಾಗಿದ್ದರೂ ಪ್ರವೃತ್ತಿಯಿಂದ ಸಾಹಿತಿಗಳಾಗಿದ್ದಾರೆ. ಇವರ ಮಾತೃಭಾಷೆ ಉದು೯ವಾದರೂ ನೆಚ್ಚಿನ ಭಾಷೆಯು ಕನ್ನಡವಾಗಿದೆ. ಬಾಲ್ಯದಿಂದಲೇ ಕನ್ನಡ ಸಾಹಿತ್ಯದ ದಿಗ್ಗಜ ಸಾಹಿತಿಗಳ ಬರಹಗಳನ್ನು ಓದಿಕೊಂಡು ,ಕನ್ನಡದ ಅಪ್ಪಟ ಅಭಿಮಾನಿಯಾಗಿ ಕನ್ನಡದಲ್ಲಿಯೇ ಸಾಹಿತ್ಯವನ್ನು ರಚಿಸುತ್ತಿದ್ದಾರೆ . ಈಗಾಗಲೇ ಇವರು ಮನದ ಮಾತು ಎಂಬ ಕವನ ಸಂಕಲವನ್ನು ಪ್ರಕಟಿಸಿದ್ದು ಒಂದೇ ವರ್ಷದ ಅವಧಿಯಲ್ಲಿ ಈ ಸಂಕಲನವು ಮರು ಮುದ್ರಣ ಕಂಡಿದ್ದು ವಿಶೇಷ .
ಇವರು ಉದು೯,ಹಿಂದಿ ,ಮರಾಠಿ ,ಅರೇಬಿಕ್ ,ಫಾರ್ಸಿ ,ಇಂಗ್ಲಿಷ್ ಭಾಷೆಗಳ ಓದು ಬರಹವನ್ನು ಬಲ್ಲವರಾಗಿದ್ದರೂ ಕನ್ನಡವೇ ಇವರ ಹೃದಯ ಪ್ರೀತಿ ,ಅಭಿಮಾನಗಳ ಭಾಷೆಯಾಗಿದೆ.
ವಾಟ್ಸಪ್ ಮತ್ತು ಫೇಸ್ ಬುಕ್ ಗಳಲ್ಲಿ ಇವರು ತಮ್ಮ ಕವಿತೆ ಗಜಲ್ ಗಳನ್ನು ಬರೆಯುತ್ತಾ ಕನ್ನಡ ಮನಸುಗಳಿಗೆ ಚಿರಪರಿಚಿತರಾಗಿದ್ದಾರೆ. ಇವರ ಸಾಹಿತ್ಯ ಸೇವೆಗಾಗಿ ಹಲವು ಪ್ರಶಸ್ತಿಗಳು ಮತ್ತು ಸಾಹಿತ್ಯದ ವಿವಿಧ ಸ್ಪರ್ಧೆಗಳಲ್ಲಿ ಬಹುಮಾನಗಳೂ ಸಹ ದೊರೆತಿವೆ .
ಗಜಲ್ ಉರ್ದು ಸಾಹಿತ್ಯದಲ್ಲಿ ಕಾವ್ಯದ ರಾಣಿಯಂದು ಗುರುತಿಸಲ್ಪಟ್ಟಿದ್ದು, ಉರ್ದು ಭಾಷೆಯ ಸೌಂದರ್ಯ ಮೃದುವಾದ ಭಾವನೆ, ಲಾಲಿತ್ಯ ,ಲಯಾ ,ಗೇಯತೆ ,ರಮ್ಯಾತೆ ಮತ್ತು ಭವ್ಯತೆಗಳನ್ನು ಪಡೆದುಕೊಂಡಿದೆ .ಇಂತಹ ಸುಂದರವಾದ ಗಜಲ್ ಸಾಹಿತ್ಯಕ್ಕೆ ಅನೇಕರು ಮೋಹಗೊಂಡು ಕನ್ನಡ ಕವಿಗಳು ಕನ್ನಡದಲ್ಲಿ ಗಜಲ್ ಗಳನ್ನು ರಚಿಸಿ ಪ್ರಕಟಿಸುತ್ತಿದ್ದಾರೆ . ಯಾವುದೇ ಪ್ರಕಾರದ ಕಾವ್ಯವಾದರೂ ಅದರ ರಚನೆಯಲ್ಲಿ ಒಂದು ನಿಯಮಬದ್ಧವಾದ ಛಂದಸ್ಸು ಇರುತ್ತದೆ .ಆ ಛಂದಸ್ಸಿನಂತೆಯೇ ರಚನೆ ಮಾಡಿದರೆ ಆ ಕಾವ್ಯವು ಹೃದಯಕ್ಕೆ ಹತ್ತಿರವಾಗಿ ಪ್ರಚಲಿತವಾಗಿರುತ್ತದೆ .ಉರ್ದು ಗಜಲ್ ರಚನೆಯಲ್ಲಿ ಮೂಲವಾಗಿ ಪ್ರಮುಖ 19 ಪ್ರಕಾರದ ಛಂದಸ್ಸುಗಳಿವೆ ಎಂದು ಹೇಳುವ ಶ್ರೀಯುತ ಸಿರಾಜ್ ಅಹ್ಮದ್ ಅವರು ಅವುಗಳನ್ನು ಅಭ್ಯಾಸ ಮಾಡಿ ತಮ್ಮ ಗಜಲ್ ಸಂಕಲನದ ಶೀರ್ಷಿಕೆಯಾದ ನವಿಲಿಗೆ ಸಾವಿರ ನಯನಗಳು ಎಂಬ ಪುಸ್ತಕದಲ್ಲಿ ವಿಸ್ತಾರವಾಗಿ ವಿವರಿಸಿದ್ದಾರೆ .
ಒಂದು ಉತ್ತಮವಾದ ಗಜಲ್ ರಚನೆಯಾಗಬೇಕಾದರೆ ಅದರಲ್ಲಿ ಮಿಸ್ರ,ಮತ್ಲಾ, ಕಾಫಿಯ, ರವಿ ,ರದೀಫ್ ,ಮಕ್ತಾ ಮತ್ತು ಬೆಹರ್ ಎಂಬ ಅಷ್ಟ ಸೂತ್ರಗಳ ಸಂಪನ್ಮೂಲಗಳು ಇರಬೇಕಾಗುತ್ತದೆ ಎಂದು ಇವರು ತಮ್ಮ ಸಂಕಲನದಲ್ಲಿ ತಿಳಿಸಿದ್ದಾರೆ. ಆದರೆ ಕೆಲವು ಗಜಲ್ ಕಾರರು ಈ ಎಲ್ಲಾ ಅಂಶಗಳನ್ನು ಗಮನಿಸದೇ ಕನ್ನಡ ಗಜಲ್ಗಳನ್ನು ರಚಿಸುತ್ತಿದ್ದಾರೆ .
ಗಜಲ್ ಒಂದು ಹಾಡು ಗಬ್ಬವಾಗಿದ್ದು ಅದನ್ನು ಸಂಗೀತದಲ್ಲಿ ಬಳಸಿಕೊಳ್ಳಲು ಸುಲಭವಾಗಿ ಕೇಳಲು ಮೃದುವಾಗಿರುತ್ತದೆ ಎಂದು ಅರಿತು ಸಿರಾಜ್ ಅಹ್ಮದ್ ಸೊರಬ ಅವರು ಈ ಸಂಕಲನದಲ್ಲಿ ಬೆಹರ್ ಅಥವಾ ಮೀಟರ್ ಮಾಪನವೆಂದರೇನು ಇದರ ಬಗ್ಗೆ ಅರ್ಥವಾಗುವ ಹಾಗೆ ವಿವರಿಸಿದ್ದಾರೆ . ಉರ್ದು ಸಾಹಿತ್ಯದ ಗಜಲ್ ಕಾವ್ಯ ಪ್ರಕಾರಕ್ಕೆ ಮೂಲ 19 ಛಂದಸ್ಸುಗಳಿವೆ ಅವೆಲ್ಲವಗಳನ್ನು ಕನ್ನಡದ ಗಜಲ್ ಗಳಲ್ಲಿ ತರಲು ಕಷ್ಟವಾಗುತ್ತದೆ ಎಂದು ಅವರಿಗೂ ತಿಳಿದಿರುವ ವಿಷಯವಾಗಿದ್ದು ಕನ್ನಡ ಗಜಲ್ ರಚನೆಯ ಹರಿಕಾರರಾದ ಡಾ.ಶಾಂತರಸರವರ ಅಭಿಪ್ರಾಯದಂತೆ ಮಾತ್ರಾಗಣಗಳ ಲೆಕ್ಕದಿಂದಲೇ ಮೀಟರ್ ಗಳಲ್ಲಿ ಬರಿಯುವುದು ಸೂಕ್ತವೆಂದು ತಿಳಿದು “ನವಿಲಿಗೆ ಸಾವಿರ ನಯನಗಳು “ಎಂಬ ತಮ್ಮ ಸಂಕಲನದಲ್ಲಿ ಎಲ್ಲಾ 67 ಗಜಲ್ ಗಳನ್ನು ಮಾತ್ರಾಗಣದಲ್ಲಿ ಸುಂದರವಾದ ರೀತಿಯಲ್ಲಿ ರಚಿಸಿದ್ದು ವಿಶೇಷವಾಗಿದೆ .ಬೆಹರ್ ಎಂದರೆ ಏನೆಂದು ಸಾಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿ ಹಲವು ಆಕಾರ ಕೃತಿಗಳನ್ನು ಮತ್ತು ಆಕಾರ ಉಪನ್ಯಾಸ ಮಾಲ್ಕೆಗಳನ್ನು ಅಧ್ಯಯನ ಮಾಡಿ ಸೊಗಸಾಗಿ ವಿವರಿಸುತ್ತಾರೆ .
ಸಿರಾಜ್ ಅಹ್ಮದ್ ಸೊರಬ ರವರ ಈ 67 ಗಜಲ್ ಗಳ ಸಂಕಲನದಲ್ಲಿ ಇವರ ತಖಲ್ಲುಸ್( ಕಾವ್ಯನಾಮ) ಉಸಿರಾ ಎಂಬುವುದು *ನವಿಲಿಗೆ ಸಾವಿರ ನಯನಗಳು* ಎಂಬ ಶಿರೋನಾಮಕೆ ಮಧುರವಾಗಿ ಹೊಂದಿಕೊಂಡಿದೆ.
ಈ ಸಂಕಲನಕ್ಕೆ ಸಾವನ್ ಕೆ ಸಿಂಧನೂರು ಅವರು ಅರ್ಥಪೂರ್ಣವಾದ ಮೌಲಿಕವಾದ ಮುನ್ನುಡಿಯನ್ನು ಬರೆದಿದ್ದಾರೆ. ಹಾಗೂ ವಿಮರ್ಶಕರು ,ಸಾಹಿತಿಗಳು ,ಕವಿಗಳು ಆದ ಅಬ್ದುಲ್ ಹೈ ತೋರಣಗಲ್ ತೂಕ ಬದ್ಧವಾದ ಬೆನ್ನುಡಿಯನ್ನು ಬರೆದಿದ್ದಾರೆ. ಸಂಕಲನದ ಮುಖಪುಟ ಚಿತ್ರವನ್ನು ಟಿ ಎಫ್ ಹಾದಿಮನಿಯವರು ಚಿತ್ರಿಸಿ ಸಂಕಲನದ ಸೊಬವನ್ನು ಹೆಚ್ಚಿಸಿದ್ದಾರೆ .
ನವಿಲಿಗೆ ಸಾವಿರ ನಯನಗಳು ಎಂಬ ಗಜಲ್ ಸಂಕಲನದಲ್ಲಿ ಗಜಲ್ ಗಳ ಜೀವಾಳವಾದ ಪ್ರೇಮ ,ವಿರಹ ,ಧ್ಯಾನ ,ಆರಾಧನೆ ,ಕಾಯುವಿಕೆ ,ಇವುಗಳಲ್ಲದೆ ಕನ್ನಡ ನಾಡು ನುಡಿ ಸಾಮಾಜಿಕ ಚಿಂತನೆಗಳ ಬಗ್ಗೆಯೂ ಗಜಲ್ ರಚನೆಯಾಗಿವೆ. ಸಿರಾಜ್ ಅಹ್ಮದ್ ಸೊರಬ ಅವರು ಗಜಲ್ ಕಾವ್ಯದ ಮೂಲ ಛಂದಸ್ಸಿನ ಪ್ರಕಾರವಾದ ಬೆಹರ್ (ಮೀಟರ್ )ಗಳ ಆಧಾರದಲ್ಲಿಯೇ ಗಜಲ್ ಗಳನ್ನು ರಚಿಸಿ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ . ಇಂಥಹ ವಿಶಿಷ್ಟ ಹಾಗೂ ಉಪಯುಕ್ತವಾದ ಗಜಲ್ ಸಂಕಲನವನ್ನು ಓದುವುದು ಸಂತೋಷದ ವಿಷಯವಾಗಿದೆ.
ಉಲ್ಲಾಸದ ನವಿಲು ಗರಿಬಿಚ್ಚಿ ಕುಣಿಯುತಿದೆ ನೀ ಬಂದಮೇಲೆ
ಒಲವಿನ ಕೋಗಿಲೆ ಮನವ ತುಂಬಿ ಉಲಿಯುತಿದೆ ನೀ ಬಂದಮೇಲೆ (ಗಜಲ್ ೦೩)
ಪ್ರತಿಯೊಬ್ಬರ ಜೀವನದಲ್ಲೂ ಹೃದಯಕ್ಕೆ ಹತ್ತಿರವಾದವರು ಬಾಳಿನಲ್ಲಿ ಪ್ರವೇಶಿಸಿ ಬಾಳ ಸಂಗಾತಿಯಾದ ಮೇಲೆ ಬದುಕಿನ ದಿಕ್ಕು ದೆಸೆ ಬದಲಾಗುತ್ತದೆ ಎಂದು ಕವಿ ಸುಂದರವಾದ ರೂಪಕದಿಂದ ವಿವರಿಸಿದ್ದಾರೆ .ನೀನು ನನ್ನ ಬಾಳಿನಲ್ಲಿ ಪ್ರವೇಶ ಮಾಡಿದ ಮೇಲೆ ನನ್ನ ಬದುಕು ಸಂತಸದಲ್ಲಿ ತೇಲಾಡುತ್ತಿದೆ .ಅದು ಹೇಗೆಂದರೆ ಮುಂಗಾರು ಮಳೆ ಬಂದಮೇಲೆ ನವಿಲು ಗರಿಬಿಚ್ಚಿ ಕುಣಿಯುವಂತೆ ,ವಸಂತ ಬಂದಾಗ ಕೋಗಿಲೆ ಒಲವಿಂದ ಪಂಚಮದಲ್ಲಿ ಉಲ್ಲಾಸವಾಗಿ ಹಾಡುವಂತೆ ನನ್ನ ಹೃದಯವು ಹಿಗ್ಗಿನಿಂದ ಕುಣಿಯುತ್ತಿದೆ ,ನೀನು ಬಂದ ಮೇಲೆ ನನ್ನ ಜೀವನವು ಬಲು ಸುಂದರವಾಗಿ ಕಂಗಳಿಸುತ್ತಿದೆ ಎಂದು ಶೃಂಗಾರಮಯವಾಗಿ ಬರೆದಿದ್ದಾರೆ.
ಚುಂಬಕದ ಉಷೆಯಲ್ಲಿ ಮುತ್ತು ಮರೆಯ ಬೇಡ
ಹಡೆದವ್ವಳ ಮಮತೆಯ ತುತ್ತು ಮರೆಯ ಬೇಡ (ಗಜಲ್ ೦೭)
ಮೇಲಿನ ಗಜಲ್ ಪೂರ್ಣಓದಿದಾಗ ಇದು ಒಂದು ಸಾಮಾಜಿಕ ಕಳಕಳಿಯ ಗಜಲ್ ಎಂದು ಓದುಗರು ತಿಳಿಯ ಬಹುದು.ಇಂದು ಸಮಾಜದಲ್ಲಿ ನಡೆಯುತ್ತಿರುವ ಅನಿಷ್ಠ ಪದ್ದತಿಯ ಬಗ್ಗೆ ಎಚ್ಚರಿಕೆಯನ್ನು ನೀಡುವ ಗಜಲ್ ಇದಾಗಿದೆ.ಇಂದಿನ ಯುವ ಜನಾಂಗ ದೊಡ್ಡವರಾಗಿ ಉನ್ನತ ಹುದ್ದೆಗೆ ಹೋದ ಮೇಲೆ ಹೆತ್ತ ತಂದೆ ತಾಯಿಗಳನ್ನು ಜೋಪಾನ ಮಾಡಲಾಗದೇ ವೃದ್ಧಾಶ್ರಮಕ್ಕೆ ಕಳುಹಿಸುತ್ತಿರುವುದು ಸಾಮಾನ್ಯವಾದ ಅಸಹನೀಯ ಸಂಗತಿಯಾಗಿ ಬಿಟ್ಟಿದೆ.ಅಂಥವರಿಗೆ ಎಚ್ಚರಿಕೆ ಕೊಡುವ ಗಜಲ್ ಇದಾಗಿದ್ದು ಮುತ್ತು ಕೊಡುವಳು ಬಂದಾಗ ತುತ್ತು ಕೊಟ್ಟು ಸಾಕಿದ ಹೆತ್ತವರನ್ನು ಮರೆಯಬೇಡ ಎಂದು ಸೊಗಸಾದ ರೂಪಕ ಆಧಾರದಲ್ಲಿ ವಿವರಿಸಿದ್ದಾರೆ .
ವೀರ ಮರಣದ ಕಲಿಗಳಿಗಾಗಿ ಮಿಡಿಯದ ಅದೆಂಥ ಹೃದಯ
ಸಿಡಿಲ ಮರಿಗಳ ಸಾಹಸ ನೆನೆದು ನುಡಿಯದ ಅದೆಂಥ ಹೃದಯ (ಗಜಲ್ ೧೫)
ಇದು ಒಂದು ಸಾಮಾಜಿಕ ಕಳಕಳಿಯ ಮತ್ತು ದೇಶಪ್ರೇಮದ ಗಜಲ್ ಎಂದು ಪರಿಗಣಿಸಬಹುದು ದೇಶಕ್ಕಾಗಿ ತಮ್ಮ ಜೀವನವನ್ನೇ ಕೊಟ್ಟ ವೀರ ಸೈನಿಕರು ವೀರ ಮರಣ ಹೊಂದಿದ ಹುತಾತ್ಮರಾದ ಕಲಿಗಳಿಗಾಗಿ ನಾವು ಯೋಚಿಸದೆ ಕೇವಲ ನಮ್ಮ ಸುಖಕ್ಕಾಗಿ ಚಿಂತಿಸುತ್ತೇವೆ .ಯೋಧರು ದೇಶಭಕ್ತರು ದೇಶಕ್ಕಾಗಿ ದುಡಿಯುವ ಜನರಿಗಾಗಿ ನಮ್ಮ ಹೃದಯದಲ್ಲಿ ಗೌರವ ಕರುಣೆ ಇರಲಿ ಎಂದು ರೂಪಕ ಪ್ರತಿಮೆಗಳೊಂದಿಗೆ ಗಜಲ್ ಹೆಣೆದಿದ್ದಾರೆ.
ಕೀಟಕೆ ಬಲಿಯಾದ ಹೆತ್ತವರ ಶವಗಳು ಮುಕುತಿಗಾಗಿ ಕಾಯುತಿವೆ
ನಶೆಯಲಿ ಮುಳುಗಿದ ಧನಗಾಹಿ ಸುತರು ನೈತಿಕ ಗುಣಗಳು ಸಾಯುತಿವೆ ( ಗಜಲ್ ೨೫)
ಮೇಲಿನ ಗಜಲ್ ಓದಿದಾಗ ಎರಡು ವರ್ಷಗಳ ಹಿಂದೆ ಕೊರೋನಾ ಬಂದು ಲಕ್ಷಗಟ್ಟಲೆ ಜನ ಮರಣ ಹೊಂದಿದ ಸಮಯದಲ್ಲಿ ಬರೆದ ಗಜಲ್ ಅನಿಸುತ್ತದೆ . ಅನೇಕರು ಈ ಮಹಾಮಾರಿಯಿಂದ ಆ ಕಾಲಘಟ್ಟದಲ್ಲಿ ಸಾವಿಗೆ ತುತ್ತಾದರು,ಈ ಮಾರಣ ಹೋಮಕ್ಕೆ ಜಗತ್ತೇ ಬೆರಗಾಗಿತ್ತು, ನೋವಿನ ಕಡಲಲ್ಲಿ ಮುಳುಗಿತ್ತು, ಆಗ ತೀರಿಕೊಂಡವರ ಶವ ಸಂಸ್ಕಾರ ಮಾಡುವುದೇ ಕಷ್ಟವಾಗಿ ವಾರಗಟ್ಟಲೆ ಅಂತ್ಯಕ್ರಿಯೆಗಾಗಿ ಕಾಯುವ ಪರಿಸ್ಥಿತಿ ಒಂದು ಕಡೆಯಾದರೆ ಹಣದ ಆಸೆಗಾಗಿ ತಮ್ಮ ನೈತಿಕ ಮಟ್ಟವನ್ನೇ ಕಳೆದುಕೊಂಡ ಸ್ವಾರ್ಥ ಜನಾಂಗವು ಮತ್ತೊಂದು ಕಡೆ, ಈ ಪರಿಸ್ಥಿತಿಯನ್ನು ಕಂಡ ಕವಿವರಿಯರು ನೊಂದು ಈ ಗಜಲ್ ರಚನೆ ಮಾಡಿದ್ದಾರೆ. ಇದು ಒಂದು ಮನ ಕಲುಕುವ ಗಜಲ್ ಆಗಿ ಪರಿಣಮಿಸಿದೆ.
ಸಾವು ಖಚಿತವೆಂದರಿತ ಜಿಂಕೆಯ ಕೊನೆಯ ದನಿಯೇ ಗಜಲ್
ವಿರಹದಲಿ ಸುರಿಸುವ ಜೋಡಿಗಳ ನೋವಿನ ಹನಿಯೇ ಗಜಲ್ ( ಗಜಲ್ ೪೭)
ಈ ಗಜಲ್ ನಲ್ಲಿ ಕವಿಯು ಗಜಲ್ ಎಂದರೇನೆಂದು ವಿವರಿಸಿದ್ದಾರೆ .ಕೆಲವರು ಹೇಳುತ್ತಾರೆ ಗಜಲ್ ಎಂದರೆ ಬೇಟೆಗಾರನ ಬಾಣವು ತಗಲಿದ ಆ ಜಿಂಕೆಯು ನೋವಿನಿಂದ ಭಯದಿಂದ ಯಾತನೆಯಿಂದ ಅರಚುವ ದನಿಯೇ ಗಜಲ್ ಎಂದು ಇಲ್ಲಿ ಕೃತಿಕಾರರು ಹೇಳಿದ್ದಾರೆ ವಿರಹಿಗಳು ಸುರಿಸುವ ಕಂಬನಿಗಳ ಧಾರೆಯೇ ಗಜಲೆಂದು ಮತ್ತು ಪ್ರೇಮಿಗಳ ಪಿಸು ಮಾತುಗಳು, ಪ್ರೇಮಿಗಳ ಸಂವಾದ ಮಧುರ ಭಾವನೆಗಳೇ ಗಜಲ್ ಎಂದು ಬಣ್ಣಿಸಿದ್ದಾರೆ.
ಘಮವಿಲ್ಲದ ಸುಮಕೂ ಬೆಲೆ ಇದೆ ಕಡೆಗಣಿಸಬೇಡ
ಬಿರುದಿಲ್ಲದ ಉರಕೂ ಕಲೆಯಿದೆ ಕಡೆಗಣಿಸಬೇಡ (ಗಜಲ್ ೫೮)
ಇದೊಂದು ಸಾತ್ವಿಕ ಉಪದೇಶ ಕೊಡುವ ಗಜಲ್ ನಂತೆ ಇದ್ದು ಪ್ರಪಂಚದಲ್ಲಿ ಎಲ್ಲಾ ವಸ್ತುಗಳಿಗೂ ಬೆಲೆಯಿದೆ. ಬೆಲೆ ಇಲ್ಲವೆಂದು ಇತರರನ್ನು ಕಡೆಗಣಿಸದಿರೆಂದು ಉತ್ತಮವಾದ ಪ್ರತಿಮೆಗಳೊಂದಿಗೆ ಬರೆದಿದ್ದಾರೆ. ಘಮ ವಿಲ್ಲದ ಸುಮಕೆ ಬೆಲೆ ಇಲ್ಲವೆಂದು ತಿಳಿಯಬೇಡ, ಕಲಿತವನಿಗೂ ಬೆಲೆ ಇರುವಷ್ಟೆ ಕಲಿಯದಿದ್ದವನ ಪ್ರತಿಭೆಗೂ ಸಮಾಜದಲ್ಲಿ ಬೆಲೆಯಿದೆ ಕಡೆಗಣಿಸಬೇಡ. ಕಪ್ಪು ಹೆಣ್ಣೆಂದು ಹೀಯಾಳಿಸಿ ನಗಬೇಡ ಅವಳಲ್ಲಿಯೂ ಸೌಂದರ್ಯದ ರಮ್ಯಾ ಕಾಂತಿ ಇದೆ ಎಂದು ಹೇಳುತ್ತಾರೆ.
ಬದುಕಿನ ಅವಧಿಯಲಿ ಬದುಕಲು ಬಿಡದೆ ಸಾವಿನಲಿ ಹಾರ ಹಾಕುವರೇ
ಮಣ್ಣಿನ ಅಡಿಯಲಿ ಮಲಗಿರುವಾಗ ಸಂಕಟಗಳ ಭಾರ ಹಾಕುವರೇ ( ಗಜಲ್ ೬೨)
ಇದೊಂದು ವಿಡಂಬನಾತ್ಮಕ ಗಜಲ್ ಆಗಿದ್ದು ಸಮಾಜದಲ್ಲಿ ಬದುಕಿರುವಾಗ ವ್ಯಕ್ತಿ ಕಷ್ಟಗಳಿಂದ ನರಳುತ್ತಿರುವಾಗ ಸಹಾಯಕ್ಕೆ ಬಾರದವರು ಅವನ ತೊಂದರೆಗಳನ್ನು ಕೇಳಿ ಪರಿಹಾರಕ್ಕೆ ಮುಂದಾಗದವರು ವ್ಯಕ್ತಿಯು ಸತ್ತಾಗ ಎಲ್ಲರೂ ಬಂದು ಹಾರ ಹಾಕಿ ನೋವಿನ ಕೃತಕ ಪ್ರದರ್ಶನ ಮಾಡಿ ಮೊಸಳೆ ಕಣ್ಣೀರನ್ನು ಸುರಿಸುವವರು ಈ ಸಮಾಜದಲ್ಲಿ ಹೆಚ್ಚಾಗಿದ್ದಾರೆ ಎಂದು ಅರ್ಥ ಗಂಭೀರವಾಗಿ ಬಿಂಬಿಸಿದ್ದಾರೆ .
ಯು ಸಿರಾಜ್ ಅಹ್ಮದ್ ಸೊರಬ ಅವರ *ನವಿಲಿಗೆ ಸಾವಿರ ನಯನಗಳು* ಎಂಬ ಗಜಲ್ ಸಂಕಲದಲ್ಲಿ ಇನ್ನೂ ಅನೇಕ ಸುಂದರವಾದ ಮನೋಜ್ಞಾನವಾದ ಮಾತ್ರಾಗಣದಲ್ಲಿ ಸಮಂಜಸವಾಗಿ ಹೊಂದಿಕೊಂಡು ಇರುವ ಅನೇಕ ಗಜಲ್ ಗಳಿದ್ದು ಓದುಗರಿಗೆ ಅನಿರ್ವಚನೀಯ ಸಾತ್ವಿಕ ಅಭಿರುಚಿಯನ್ನು ಕೊಡುತ್ತವೆ .ಬಹಳ ಮುತುವರ್ಜಿಯಿಂದ ಬೆಹರ್ (ಮೀಟರ್ ಮಾಪನ)ಗಳಿಗೆ ಅತ್ಯಂತ ಮಹತ್ವವನ್ನು ಕೊಟ್ಟು ಎಲ್ಲಾ ಗಜಲ್ ಗಳನ್ನು ಮಾತ್ರಾಗಣಗಳ ಲೆಕ್ಕವನ್ನು ಹಾಕಿ ರಚನೆ ಮಾಡಿದ್ದಾರೆ . ಇದು ಒಂದು ಬಹು ಮುಖ್ಯವಾದ ಮಹತ್ವವಾದ ಛಂದೋಬದ್ಧತೆಯಿಂದ ಕೂಡಿದ ಕೃತಿಯಾಗಿದ್ದು ಹೊಸಬರಿಗೂ ಮತ್ತು ಗಜಲ್ ಕಾರರಿಗೂ ಒಂದು ಆಕರ ಗ್ರಂಥವಾಗಿವೆ. ಪ್ರತಿಯೊಬ್ಬ ಗಜಲ್ ಕಾರರು ಓದಲೇ ಬೇಕಾದ ಪುಸ್ತಕ ಇದಾಗಿದೆ ಎಂದು ನಾನು ಬಹಳ ಹೆಮ್ಮೆ ಮತ್ತು ಸಂತೋಷದಿಂದ ಹೇಳ ಬಯಸುತ್ತೇನೆ. ಇವರಿಂದ ಇನ್ನೂ ಅನೇಕ ಉಪಯುಕ್ತವಾದ ಸುಂದರ ಗಜಲ್ ಸಂಕಲನಗಳು ಕನ್ನಡ ಗಜಲ್ ಸಾಹಿತ್ಯ ಲೋಕದಲ್ಲಿ ಪ್ರಕಟವಾಗಲೆಂದು ಶುಭ ಹಾರೈಸುತ್ತಾ ನನ್ನ ಬರಹಕ್ಕೆ ವಿರಾಮ ಕೊಡುತ್ತೇನೆ.
–ಪ್ರಭಾವತಿ ಎಸ್ ದೇಸಾಯಿ
ವಿಜಯಪುರ.