ಶಂಕರ ದಾಸಿಮಯ್ಯ

ಶಂಕರ ದಾಸಿಮಯ್ಯ

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕಂದಗಲ್ಲು ಗ್ರಾಮದಲ್ಲಿ ಗೋವಿಂದಭಟ್ಟನೆಂಬ ನಾಮದಿಂದ ಜನಿಸಿ ದುಮ್ಮವ್ವೆಯೆ0ಬ ಸತಿಯೊಡನೆ ಕಾಶೀಯಾತ್ರೆಗೆಂದು ಹೊರಟು ಕೃಷ್ಣಾತೀರದ ನವಿಲೆಗೆ ಬಂದು ಅಲ್ಲಿ ಜಡೆಯ ಶಂಕರನ ಕೃಪೆಯಿಂದ ಶಂಕರ ದಾಸಿಮಯ್ಯನಾಗಿ ಹೊಸ ಹುಟ್ಟನ್ನು ಪಡೆದು ಆನಂದಭಾಷ್ಪವನ್ನು ಸುರಿಸುತ್ತಾನೆ. ಎಂಥ ಭಕ್ತಿ ಸುಖವಿದು ! ಇಂಥ ಭಕ್ತಿ ಸುಖವನ್ನಿತ್ತ ಜಡೆಯ ಶಂಕರಸ್ವಾಮಿಯನ್ನು ತೊರೆದು ವಾರಣಾಸಿಗೆ ಹೋಗುವುದೇ ? ಸಾಧ್ಯವಿಲ್ಲ ! ಎಂದು ತುಂಬಿದೆದೆಯಿಂದ ಹೇಳುತ್ತಾನೆ. ಸ್ವಾಮಿ ತನ್ನ ಸಧ್ಭಕ್ತನ ನಿಷ್ಕಲ0ಕ ಭಕ್ತಿಗೆ ಮೆಚ್ಚಿದ. ಒಂದು ರಾತ್ರಿ ಅವನ ಕನಸಿನಲ್ಲಿ ಕಾಣಿಸಿಕೊಂಡು ಹೇಳಿದ. ” ನೀನು ಪ್ರತಿನಿತ್ಯ ಕಂದಶಿಲೆಯಿಂದ ನವಿಲೆಗೆ ಬಂದು ಹೋಗುವುದು ಬೇಡ, ನೀನು ನವಿಲೆಯಲ್ಲಿಯೇ ನೆಲೆಯಾಗಿ ನಿಲ್ಲು .ನಾನು ನಿನಗೆ ನಿಜಭೋದನೆಯನ್ನಿತ್ತು ಕರುಣಿಸುವೆನು ”

ಶಂಕರ ದಾಸಿಮಯ್ಯನ ಹೃದಯದಲ್ಲಿ ಹರುಷದ ಹಾಲ್ಗಡಲು ಉಕ್ಕಿತು. ಕಂದಶಿಲೆಯನ್ನು ಬಿಟ್ಟು ನವಿಲೆಯಲ್ಲಿಯೇ ಮನೆಮಾಡಿದ. ಹಗಲಿರುಳೆನ್ನದೆ ಜಡೆಯ ಶಂಕರನ ಸೇವೆಯಲ್ಲಿ ತನ್ಮಯನಾಗಿಬಿಟ್ಟ. ಸಕಲ ಲೋಕೈಕ ಗುರು ಶಂಕರನು ಮೆಚ್ಚಿ ಭಕ್ತನ ಮೇಲೆ ವರದ ಹಸ್ತವನ್ನಿರಿಸಿದ. ” ತನ್ನುಮ0 ಭಕ್ತಿಯಂ ಪಂಚಾಕ್ಷರಿ ” ಯನ್ನರುಹಿದ ; ಉನ್ನತ ಜ್ಞಾನವನ್ನಿತ್ತ ; ಅವನ ಅಂತಸ್ಥದಲ್ಲಿ ಸಾಮರ್ಥ್ಯಮ0 ಬಿತ್ತಿದ ; ಸಕಲ ಕಾರುಣ್ಯಮ0 ನೀಡಿ ನೊಸಲೊಳಗೆ ನೊಸಲಿಟ್ಟು ಭರದಿಂದ ಆಶೀರ್ವದಿಸಿದ. ಗೋವಿಂದದೇವ ಶಂಕರ ದಾಸಿಮಯ್ಯನಾಗಿ , ದುಮ್ಮವ್ವೆ ಶಿವದಾಸಿಯಾಗಿ ಅವರಿಬ್ಬರ ಹೊಸಬಾಳು ಹಸನಾಗಿ ಮುಂದುವರೆಯಿತು.

ಶಂಕರ ದಾಸಿಮಯ್ಯ ‘ ಗರ್ವವ ನುಡಿದು, ದುರಿತಕುಲಮ0 ಜಡಿದು , ಭವ ವೃಕ್ಷಮ0 ಕಡಿದು , ಪುಣ್ಯಪರಿಮಳ0ಗಳ0 ಮುಡಿದು, ನಂದಿಯ ಮೊಗವಾಡವ0 ಪಡೆದು, ಪರರರ್ಥವ0 ಪೊರ್ದುವ ಪಿರಿಯತನ0 ಬೇಡ , ಆರಾಧಿಸಿ ಕೊಂಬ ಭಾರಾಕ್ಕಾನಾರೆ0 ‘ ಎಂದು ಭ್ರತ್ಯನಾಗಿದ್ದ ವಕ್ರಪಾದನಿಂದ ನಿತ್ಯ ಒಂದು ಮನೆಯ ಧಾನ್ಯದ ಭಿಕ್ಷ ತರಿಸಿ ತನ್ನ ಹೊಲಿಗೆಯ ಕಾಯಕದಿಂದ ಬಂದ ಹಣ ಮತ್ತು ಭಿಕ್ಷದ ಧಾನ್ಯ – ಇವುಗಳಿ0ದ ಗಣಾರಾಧನೆಯನ್ನು ಸಾಗಿಸುತ್ತ ಸಂತೋಷವಾಗಿದ್ದನು.

ಅವನ ಸೂಜಿಕಾಯಕದ ಪರಿಯೇ ಬೇರೆ. ದೇಹಿಯಾದ ಜೀವಾತ್ಮನನ್ನೇ ಸೂಜಿಯನ್ನಾಗಿ ಮಾಡಿ , ಮಾಯಾಪಾಶಗಳನ್ನು ಸೂತ್ರಮಾಡಿ , ಕಾಲತ್ರಯಗಳೆ0ಬ ಕತ್ತರಿಯಿಂದ ಭವ ಬಂಧ ವಸ್ತ್ರಗಳನ್ನು ಕತ್ತರಿಸುವನು ; ಮೋಹವೆಂಬ ಸರಿಯನ್ನು ಹಚ್ಚಿ ಅಜ್ಞಾನವೆಂಬ ಹತ್ತಿಯನ್ನು ಅಂತರಂಗದೊಳಗೆ ತುಂಬುವನು ; ತಲೆಗೆ ಕಿರೀಟವಾಗುವಂತೆ ಚಿಪ್ಪುಗಳನ್ನು ಕೂಡಿಸಿ ಆಸೆಗಳೆ0ಬ ಕಸಿಗಳಿಂದ ಕಟ್ಟುವನು ; ಸಪ್ತ ಧಾತುಗಳೆ0ಬ ಪಟ್ಟಿಗಳಲ್ಲಿ ಆಯು:ಕರ್ಮಗಳೆ0ಬ ಎಳೆಗಳನ್ನು ಸೇರಿಸಿ ಆಕಾಶರೂಪವಾದ ಗುಡಾರವನ್ನು ಮಾಡಿ ಕನಕಾದ್ರಿಯೆ0ಬ ಕಂಬದಿಂದ ನಿಲ್ಲಿಸುವನು. ಇಂಥ ಚಿತ್ರಪತ್ರವನ್ನು ಹೊಲಿಯುವ ವಸ್ತ್ರಭಿನ್ನಕನಾಗಿ ಶಂಕರ ದಾಸಿಮಯ್ಯ ಸಂತೋಷ ಸಾಮ್ರಾಜ್ಯವನ್ನು ಸೂರೆಗೊಂಡಿದ್ದನು.

ಅಹಂಭಾವವನ್ನು ಬಿಡು ; ದಾಸೋಹಿಯಾಗು ; ಲಿಂಗದೇಹಿಗಳೆಲ್ಲರನ್ನೂ ಶಿವಲಿಂಗವೆಂದೇ ತಿಳಿ ; ಭಕ್ತರು ಮನೆಗೆ ಬಂದರೆ ಪೂಜೆಯಲ್ಲಿದ್ದರೂ ಎದ್ದು ಹೋಗಿ ಸತ್ಕರಿಸು, ಪರಧನವ, ಪರವಧುವ, ವಿಷವೆಂದು ತಿಳಿ ; ಸುಳ್ಳನ್ನು ತ್ಯಜಿಸು ; ಸತ್ಯವನ್ನು ಪಾಲಿಸು ; ಪರನಿಂದೆಯನ್ನು ಸನಿಹಕ್ಕೆ ಸುಳಿಯಗೊಡದಿರು ; ಹಿಡಿದ ನೇಮವನ್ನು ನಡೆಸು ; ಸಧ್ಭಕ್ತರ ಸಂಗವನ್ನು ಬಿಡದಿರು ; ಮುಖಕ್ಕೆ ಹತ್ತಿದ ಮಲಿನವನ್ನು ಮುಕುರದಲ್ಲಿ ನೋಡಿ ಕಳೆದುಕೊಳ್ಳುವಂತೆ ಆತ್ಮನಿಗಂಟಿದ ಮಲತ್ರಯಗಳನ್ನು ಲಿಂಗದಲ್ಲಿ ಕಂಡು ನಿರಹಂಕಾರ ಹಸ್ತದಿಂದ ಒರೆಸಿ ಕಳೆದುಕೋ ” ಎಂಬ ಜಡೆಯ ಶಂಕರ ಸ್ವಾಮಿಯ ಸುಭೋಧಸಾರದಂತೆಯೇ ಶಂಕರ ದಾಸಿಮಯ್ಯನು ಶರಣ ಜೀವನ ಸಾಗಿಸಿದನು.

ಶಂಕರದಾಸಿಮಯ್ಯನವರ ಬಗೆಗೆ ತೆಲುಗು ಬಸವ ಪುರಾಣ, ಸೋಮೇಶ್ವರ ಪುರಾಣ , ಭೈರವೇಶ್ವರ ಕಾವ್ಯ, ರಗಳೆ , ಶಂಕರ ದಾಸಿಮಯ್ಯನ ಪುರಾಣಗಳಲ್ಲಿ ಮಾಹಿತಿ ಲಭ್ಯವಾಗುತ್ತದೆ.
ಶಿವನಿಂದ ಹಣೆಗಣ್ಣು ಪಡೆದ ಸಂಗತಿ, ಕಲ್ಯಾಣದಲ್ಲಿ ವಿಷ್ಣುವಿನ ವಿಗ್ರಹ ದಹಿಸಿದ ಘಟನೆ, ಮುದೇನೂರಿನಲ್ಲಿ ಜೇಡರ ದಾಸಿಮಯ್ಯನವರ ಅಹಂಕಾರವನ್ನು ಮುರಿದ ಪ್ರಸಂಗಗಳು , ಚರಿತ್ರೆಯ ರೂಪದಲ್ಲಿ ಪುರಾಣಗಳಲ್ಲಿ ಕಾಣಸಿಗುತ್ತವೆ.
ಇವರ ” ನಿಜಗುರು ಶಂಕರ ದೇವಾ” ವಚನಾ0ಕಿತದಲ್ಲಿ ಐದು ವಚನಗಳು ದೊರೆತಿವೆ.

ವಚನ ವಿಶ್ಲೇಷಣೆ

ಎನ್ನ ಕಾಯಕ್ಕೆ ಗುರುವಾದನಯ್ಯಾ ಬಸವಣ್ಣನು
ಎನ್ನ ಜೀವಕ್ಕೆ ಲಿಂಗವಾದನಯ್ಯಾ ಚೆನ್ನಬಸವಣ್ಣನು
ಎನ್ನ ಪ್ರಾಣಕ್ಕೆ ಪ್ರಸಾದವಾದನಯ್ಯಾ ಮರುಳಶಂಕರದೇವರು
ಎನ್ನ ಜ್ಞಾನಕ್ಕೆ ಜಂಗಮವಾದನಯ್ಯಾ ಪ್ರಭುದೇವರು
ಇಂತಿವರ ಕರುಣದಿಂದಲಾನು
ಬದುಕಿದೆನಯ್ಯಾ , ನಿಜಗುರು ಶಂಕರದೇವಾ.

ಶಂಕರ ದಾಸಿಮಯ್ಯನವರಿಗೆ ತಮ್ಮ ಅನುಭಾವದ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಬಸವಣ್ಣ , ಚೆನ್ನಬಸವಣ್ಣ , ಮರುಳಶಂಕರ ದೇವರು , ಪ್ರಭುದೇವರು ನೆರವಾದರು, ಸ್ಫೂರ್ತಿಯಾದರು ಎಂದು ನೆನೆದಿದ್ದಾನೆ. ತಮ್ಮ ಕಾಯಕಕ್ಕೆ ಪಾವಿತ್ರ್ಯ ಒದಗಿಸಿದ ಮಹಾಮಹಿಮ ಬಸವಣ್ಣ , ತನಗೆ ಕಾಯಕದ ಮಹತ್ವ ಕಲಿಸಿದ ಗುರು ಎಂದಿದ್ದಾರೆ. ಅದೇ ರೀತಿ ತಮ್ಮ ಜೀವಕ್ಕೆ ಲಿಂಗವಾದನು ಚೆನ್ನಬಸವಣ್ಣ ಎಂದು ಲಿಂಗವನ್ನು ಜ್ಞಾನಕ್ಕೆ ಹೋಲಿಸಿದ್ದಾನೆ. ಮರುಳಶಂಕರದೇವರು ತನ್ನ ಪ್ರಾಣಕ್ಕೆ ಪ್ರಸಾದದ ರೀತಿಯಲ್ಲಿ ನಿಂದರು ಎಂದು ಹೇಳಿದ್ದಾರೆ. ತಮ್ಮ ಅರಿವನ್ನು ವಿಸ್ತಾರಗೊಳಿಸಲು ಪ್ರಭುದೇವರು ಜಂಗಮನಂತೆ ಸಲುಹಿದರು ಎನ್ನುವ ಅರ್ಥ ಬರುವಂತೆ ಅರುಹಿದ್ದಾರೆ. ಇವರೆಲ್ಲರ ಕರುಣೆಯಿಂದ ತಾನು ಬದುಕಿದೆ ಎಂಬ ಸಾರ್ಥಕ ಮನೋಭಾವನೆ ಈ ವಚನದಲ್ಲಿ ಎದ್ದು ಕಾಣುತ್ತದೆ.

ಸುಧಾ ಪಾಟೀಲ್
ಬೆಳಗಾವಿ

Don`t copy text!