ಪುಸ್ತಕ ಪರಿಚಯ
ಕೃತಿ ಶೀಷಿ೯ಕೆ……. ಕಣ್ಣೆಂಜಲ ಕನ್ನಡಿ
ಲೇಖಕರು….. ನೂರಅಹ್ಮದ್ ನಾಗನೂರ ೯೯೮೬೮೮೬೯೦೭
ಪ್ರಕಾಶಕರು……..ನೇರಿಶಾ ಪ್ರಕಾಶನ ಕಡೂರು ಮೊ.೮೨೭೭೮೮೯೫೨೯
ಪ್ರಕಟಿತ ವರ್ಷ….೨೦೨೧. ಬೆಲೆ ೧೧೦₹
ಹಾವೇರಿ ಜಿಲ್ಲೆಯ ಬ್ಯಾಡಗಿ ಪಟ್ಟಣದವರಾದ ಉತ್ಸಾಹಿ ಯುವ ಬರಹಗಾರರಾದ ನೂರು ಅಹ್ಮದ್ ನಾಗನೂರ ಅವರು ಪ್ರಸ್ತುತ ಗದಗ ನಗರದ ಶಾಸ್ತ್ರಿ ಮಹಾವಿದ್ಯಾಲಯದಲ್ಲಿ ಆಂಗ್ಲ ಭಾಷೆ ಶಿಕ್ಷಕರಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ವೃತ್ತಿಯಲ್ಲಿ ಶಿಕ್ಷಕರಾಗಿದ್ದರು ಪ್ರವೃತ್ತಿಯಲ್ಲಿ ಸಾಹಿತ್ಯ ಅಸಕ್ತರಾಗಿದ್ದು ಈಗಾಗಲೇ ನನೂರ್-ಏ-ತಬಸ್ಸುಮ್ ಎಂಬ ಗಜಲ್ ಸಂಕಲನವನ್ನು ಲೋಕಾರ್ಪಣೆ ಮಾಡಿದ್ದಾರೆ.
ಗಜಲ್ ಕಾವ್ಯದಲ್ಲಿಯೇ ಸಂಶೋಧನೆ ಮಾಡುತ್ತಿರುವರು .ಶಾಯಿರಿ ರುಬಾಯಿ, ಕವಿತೆ ಗಳ ಅನುವಾದದಲ್ಲಿಯೂ ಕೃಷಿ ಮಾಡುತ್ತಿರುವರು. ಜೊತೆಗೆ ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸುತ್ತಾ ವಾಟ್ಸಪ್ ಗುಂಪುಗಳಲ್ಲಿ ನಡೆಯುವ ಚಟುವಟಿಕೆಗಳಲ್ಲಿಯೂ ಭಾಗವಹಿಸುತ್ತಾರೆ. ಈಗ ತಮ್ಮ ಎರಡನೇ ಗಜಲ್ ಸಂಕಲನ ಕಣ್ಣೆಂಜ ಕನ್ನಡಿ ಎಂಬ ಗಜಲ್ ಕೃತಿಯನ್ನು ಲೋಕಾರ್ಪಣೆ ಮಾಡಿ ಓದುಗರ ಬೊಗಸೆಯಲ್ಲಿ ಇಟ್ಟಿದ್ದಾರೆ .
ನೂರ್ ಅಹ್ಮದ್ ನಾಗನೂರ ಅವರು ಇಂಗ್ಲಿಷ್ ,ಕನ್ನಡ ,ಹಿಂದಿ ,ಉರ್ದು ,ಫಾರ್ಸಿ, ಹೀಗೆ ಪಂಚಭಾಷೆ ಗಳನ್ನು ಬಲ್ಲವರಾಗಿದ್ದು ಇವರು ಆ ಭಾಷೆಯಲ್ಲಿಯ ಗಜಲ್ ಗಳನ್ನು ಅಭ್ಯಾಸ ಆ ಭಾಷೆಗಳಲ್ಲಿಯ ಗಜಲ್ ಗಳನ್ನು ಅಭ್ಯಾಸಿಸಿ ಆಯಾ ಭಾಷೆಗಳಲ್ಲಿ ಗಜಲ್ ಕಟ್ಟುವ ತಂತ್ರಗಳನ್ನು ಅರಿತು ಇವರು ಕನ್ನಡದಲ್ಲಿಯೂ ಆ ತಂತ್ರ ಬಳಸಿ ಉತ್ತಮವಾದ ಗಜಲ್ ಗಳನ್ನು ರಚಿಸುತ್ತಿದ್ದಾರೆ .
ಗಜಲ್ ಎಂಬುವುದು ಉರ್ದು ಭಾಷೆಯ ವಿಶಿಷ್ಟ ಪ್ರಕಾರವಾದ ಪ್ರೇಮ ಕವಿತೆ, ಗಜಲ್ ರಚನೆಗೆ ತನ್ನದೇ ಆದ ಛಂದಸ್ಸು ಮತ್ತು ಭಾಷೆಯಿದೆ .ಗಜಲ್ ಹೃದಯದ ಕಾವ್ಯ ವಾಗಿದ್ದು ಒಂದು ಹೃದಯ ಇನ್ನೊಂದು ಹೃದಯದೊಂದಿಗೆ ತನ್ನ ನೋವು ನಲಿವು ಗಳನ್ನು ಮೃದು ಮಧುರ ಭಾಷೆಯಲ್ಲಿ ಪಿಸು ಮಾತುಗಳಿಂದ ನಿವೇದಿಸಿಕೊಳ್ಳುವುದು. ಗಜಲ್ ರಚನೆಗೆ ಮೃದು ಮಧುರ ,ಲಯ, ಗೇಯತೆಯ ಭಾಷೆ ಬೇಕಾಗುತ್ತದೆ. ಇದು ದೀರ್ಘವಾದ ಭಾವಗೀತೆ ಅಥವಾ ಪ್ರೇಮಗೀತೆಯಂತೆ ಅಲ್ಲ, ಕೇವಲ ಎರಡು ಸಾಲಿನ ಒಂದು ದ್ವಿಪದಿಯಲ್ಲಿ ಕವಿ ತಾನು ಹೇಳಬೇಕಾದದ್ದನ್ನು ನಿಖರವಾಗಿ ರೂಪಕ ಪ್ರತಿಮೆಗಳೊಂದಿಗೆ ಹೇಳಬೇಕು. ಇಲ್ಲಿ ಕವಿ ಮಾತಾಡುವುದಿಲ್ಲ ರೂಪಕ ಪ್ರತಿಮೆಗಳು ಮಾತಾಡುತ್ತಿರಬೇಕು . ಸಾಧಾರಣವಾಗಿ ಒಂದು ಗಜಲ್ 5 ದ್ವಿಪದಿಗಳಿಂದ 25 ದ್ವಿಪತಿಗಳ ವರೆಗೆ ಬರಿಯಬಹುದು .ಹೇಳಬೇಕಾದ ವಿಷಯವನ್ನು ನಿಖರವಾಗಿ ಕಡಿಮೆ ಶಬ್ದಗಳಲ್ಲಿ ಸಮ ಮಾತ್ರಾಗಣದಲ್ಲಿ ಹೇಳಬೇಕು. ಅದು ಓದುಗನ ಮನ ತಟ್ಟುವಂತೆ ಹಾಗೂ ಹಾಡಲು ಬರುವಂತೆ ಗೇಯತೆಯಿಂದ ಕೂಡಿರಬೇಕು.
ನೂರ್ ಅಹ್ಮದ್ ನಾಗನೂರು ಅವರ ಕೃತಿ ಶೀರ್ಷಿಕೆ *ಕಣ್ಣೆಂಜಲೆ ಕನ್ನಡಿ* ಗಜಲ್ ಸಂಕಲನದಲ್ಲಿ ಒಟ್ಟು 66 ಗಜಲ್ ಗಳಿವೆ. ಈ ಸಂಕಲನಕ್ಕೆ ಶ್ರೇಷ್ಠ ಗಜಲ್ಕಾರರಾದ ಗಿರೀಶ್ ಜಕಾಪುರೆ( ಅಲ್ಲಮ) ಮೈಂದಗಿ೯ ಯವರು ಅರ್ಥಪೂರ್ಣವಾದ ಮತ್ತು ಮೌಲಿಕವಾದ ಮುನ್ನುಡಿಯನ್ನು ಬರೆದು ಸಂಕಲನದ ಮೌಲ್ಯ ಹೆಚ್ಚಿಸಿದ್ದಾರೆ .ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಹಾಗೂ ದೈತ್ಯ ಲೇಖಕರೆಂದು ಹೆಸರು ಪಡೆದ ಸಿದ್ದರಾಮ ಹೊನ್ಕಲ್ ಅವರು ತುಲನಾತ್ಮಕವಾದ ಬೆನ್ನುಡಿಯನ್ನು ಬರೆದು ಬೆನ್ನು ತಟ್ಟಿದ್ದಾರೆ .ನೂರ್ ಅಹ್ಮದ್ ಅವರೇ ತಮ್ಮ ಗಜಲ್ ಗಳಲ್ಲಿ *ನೂರ್ * ಎಂದು ತಖಲ್ಲುಸ್ ನ್ನು ಇಟ್ಟುಕೊಂಡಿದ್ದಾರೆ .ಸಂಕಲನದ ಮುಖಚಿತ್ರ ಟಿ ಎಫ್ ಹಾದಿಮನಿ ಯವರು ಅರ್ಥಪೂರ್ಣವಾಗಿ ಸುಂದರವಾಗಿ ಚಿತ್ರಿಸಿದ್ದು ಸಂಕಲನಕ್ಕೆ ಶೋಭೆ ತಂದಿದೆ.
ನೂರ್ ಅಹ್ಮದ್ ನಾಗನೂರವರು ಪಂಚಭಾಷೆ ಪ್ರವೀಣರಾಗಿದ್ದು ಬೇರೆ ಭಾಷೆಗಳಲ್ಲಿ ಬರೆದ ಗಜಲ್ ಗಳನ್ನು ಓದಿಕೊಂಡು ಅವುಗಳ ರಚನಾ ತಂತ್ರವನ್ನು ಅರಿತು ಕನ್ನಡ ಗಜಲ್ ಗಳಲ್ಲಿ ಕನ್ನಡ ಭಾಷೆಯ ಜಾಯಮಾನಕ್ಕೆ ಒಗ್ಗುವಂತೆ ಗಜಲ್ ಗಳನ್ನು ಬರೆದಿದ್ದಾರೆ .ಗಜಲ್ ದ ಸ್ಥಾಯಿ ಗುಣವಾದ ಪ್ರೀತಿ ,ಪ್ರೇಮ ,ವಿರಹ ,ಕಾಯುವಿಕೆ ,ಆಧ್ಯಾತ್ಮಿಕ ಹಾಗೂ ಸಾಮಾಜಿಕ ಮಹಿಳಾ ಸಂವೇದನೆ ಹೀಗೆ ಎಲ್ಲಾ ವಿಷಯದ ಮೇಲೆ ಗಜಲ್ ಗಳನ್ನು ಗಟ್ಟಿಯಾಗಿ ಮಾರ್ಮಿಕವಾಗಿ ರಚಿಸಿದ್ದಾರೆ.
ಚಡಪಡಿಸಿವೆ ಕಣ್ಣುಗಳು ಆ ಒಂದು ಕನಸಿಗೆ
ನೆನಪಾಗಿದೆ ನೆನಪುಗಳು ಆ ಒಂದು ಕನಸಿಗೆ
ಮನಸ್ಸಿನ ಕನ್ನಡಿ ಕಣ್ಣುಗಳು ಎಂಬುವುದು ಪ್ರತಿಯೊಬ್ಬರಿಗೂ ಗೊತ್ತಿರುವ ವಿಷಯ. ನಮ್ಮ ಮನದ ಭಾವಗಳು ಕಣ್ಣಲ್ಲಿ ಮೂಡುತ್ತವೆ. ನಮ್ಮ ಬೇಕುನಬೇಡಗಳನು ಕಣ್ಣು ಪ್ರತಿಬಿಂಬಿಸುತ್ತದೆ.ಒಲವಿನ ಕನಸಿಗಾಗಿ ಕಣ್ಣುಗಳು ಚಡಪಡಿಸುತ್ತವೆ .ಪ್ರತಿಯೊಬ್ಬರಿಗೂ ತಮ್ಮದೇ ಆದ ಕನಸು ಬಾಳಿನ ಗುರಿ ಆಗಿರುತ್ತದೆ .ಆ ಕನಸು ನನಸಾಗಲು ಮನ ಸದಾ ಚಡಪಡಿಸುತ್ತದೆ .ಆ ಒಲವಿನ ನೆನಪುಗಳು ಮತ್ತೆ ಮತ್ತೆ ನೆನಪಿಗೆ ಬಂದು ಮನಕ್ಕೆ ನೆನಪು ಮಾಡಿ ಎಚ್ಚರಿಸುತ್ತದೆ.
ಹಗಲಿನಲ್ಲಿಯೂ ಸಂಜೆಯಾಗಿದೆ ನೀ ನಿಲ್ಲದ ಹೊತ್ತಿನಲ್ಲಿ
ಅರಳುವ ಮೊಗ್ಗು ಬಾಡಿ ಹೋಗಿದೆ ನೀನಿಲ್ಲದ ಹೊತ್ತಿನಲ್ಲಿ
ನೀ ನಿಲ್ಲದ ಹೊತ್ತಿನಲ್ಲಿ ಎಂಬ ರಜೀಫ್ ದ ಈ ಗಜಲ್ ದ ಮತ್ಲಾವು ಪ್ರೀತಿಯಲ್ಲಿ ಬಿದ್ದ ಪ್ರೇಮಿಯ ವಿರಹವನ್ನು ವ್ಯಕ್ತ ಪಡಿಸುತ್ತದೆ. ಪ್ರಿಯತಮೆ ಇಲ್ಲದೆ ಸಮಯ ದಿನ ಕಳೆಯುವುದೇ ಕಷ್ಟವಾಗಿ ಹಗಲೂ ಸಹ ಸಂಜೆಯ ಹಾಗೆ ಮಬ್ಬಾಗಿ ಕಾಣುತ್ತದೆ .ಅಂಗಳದ ಮೊಗ್ಗು ಅರಳದೆ ಕಮರಿ ಹೋಗಿದೆಂದು ಕವಿ ವಿರಹದ ತಾಪವನ್ನು ಸುಂದರವಾಗಿ ವಿವರಿಸಿದ್ದಾರೆ .
ಕಾಯುತಿರುವ ಸಂದೇಶಕ್ಕೆ ಆತುರವೇಕೆ ಹೇಳಬಹುದೇ ಸಾಕಿ
ಕಾಣದ ಮನಸಿಗೆ ಕಾಯಿಸುವ ಕನಸು ನೋಡಬಹುದೇ ಸಾಕಿ
ಪ್ರಿಯತಮೆಯು ಬರುತ್ತಾಳೋ ಇಲ್ಲವೋ ಎಂಬ ಸಂದೇಶಕ್ಕಾಗಿ ಪ್ರಿಯಕರನು ಕಾಯುತ್ತಿರುತ್ತಾನೆ. ಆ ಸಂದೇಶ ಏನೆಂದು ಬೇಗ ಹೇಳು ಸಾಕಿ ,ಕಾಣದ ಈ ಕಣ್ಣುಗಳು ಅವಳ ಬರುವ ಕನಸು ಕಾಣುತ್ತೇವೆ ಸಾಕಿ, ಅವಳ ಮಧುರ ಮಾತಿಗೆ ಮನವು ಸೋತು ಹೋಗಿದೆ ಸಾಕಿ ,ನಾನು ಅವಳಿಗೆ ಗೆಳೆಯನಾಗ ಬಹುದೇ ಸಾಕಿ ಎಂದು ತನ್ನ ಮನದ ಕಾತುರತೆ ಕಾಯುವಿಕೆ ಕಳವಳವನ್ನು ಪ್ರಿಯತಮ ಸಾಕಿ ಮುಂದೆ ನಿವೇದಿಸಿಕೊಳ್ಳುತ್ತಾನೆ
ನಿನ್ನ ಮೇಲಿರುವ ಹುಚ್ಚು ಪ್ರೀತಿ ಸಾಯಿಲೇ ಇಲ್ಲ ಹುಡುಗಿ
ನೆನಪಿನ ಚಿತ್ರವು ಜೊತೆಗೆ ಒಂಟಿಯಾಗಲೇ ಇಲ್ಲ ಹುಡುಗಿ
ಹದಿಹರೆಯದಲ್ಲಿ ಯುವಕರಿಗೆ ಪ್ರೀತಿಯ ಹುಚ್ಚು ಹಿಡಿಯುವುದು ಸಹಜ ,ಆ ಪ್ರೀತಿಯ ಗುಂಗಿನಲ್ಲಿಯೇ ಹುಡುಗರು ಸುತ್ತುತ್ತಿರುತ್ತಾರೆ. ಅವಳನ್ನು ಮರೆಯಲು ಸಾಧ್ಯವೇ ಆಗುವುದಿಲ್ಲ ವೆಂದು ತಾವು ಪ್ರೀತಿಸಿದ ಹುಡುಗಿಯರಿಗೆ ನಿನ್ನ ಬಿಟ್ಟು ನಾನು ಬದುಕಲಾರೆ ಎಂದು ಹೇಳುವುದು ಮತ್ತು ಅವಳ ಭಾವಚಿತ್ರವನ್ನು ತನ್ನ ಜೊತೆಯಲ್ಲಿ ಇಟ್ಟುಕೊಂಡು ಹುಚ್ಚನಂತೆ ಪ್ರಿಯತಮೆಯ ಗುಂಗಿನಲ್ಲಿಯೇ ಇರುತ್ತಾನೆ.ಇದು ಒಂದು ಹದಿಹರೆಯದ ಪ್ರೇಮಿಯ ವಿರಹದ ಗಜಲ್ ಆಗಿದೆ .
ನನ್ನ ಪ್ರತಿಯೊಂದು ಉಸಿರಿನ ಖುಷಿಯು ನಿನಗಿರಲಿ
ನಿನ್ನದೆಲ್ಲವೂ ನೋವಿನ ಕಹಿ ಕಂಬನಿಯು ನನಗಿರಲಿ
ಇದು ಒಂದು ಲೌಕಿಕ ಪ್ರೀತಿಯಿಂದ ಅಲೌಕಿಕ ಪ್ರೀತಿಯ ಕಡೆಗೆ ಕರೆದುಕೊಂಡು ಹೋಗುವ ಅಧ್ಯಾತ್ಮಿಕದ ಗಜಲ್ ಆಗಿದೆ. ಪ್ರಿಯಕರ ತನ್ನ ಪ್ರಿಯತಮೆಗೆ ಹೇಳುತ್ತಾನೆ ನನ್ನ ಪ್ರತಿಕ್ಷಣದ ಖುಷಿ ಸಂತೋಷ ನಿನಗಿರಲಿ ನೀನು ಸದಾ ಸಂತೋಷದಲ್ಲಿ ಬಾಳಬೇಕೆಂದು ಬಯಸುತ್ತೇನೆ ಎಂದು ಹೇಳುತ್ತಾನೆ ,ಮತ್ತು ನಿನ್ನ ನೋವು ಕಷ್ಟಗಳೆಲ್ಲ ನನಗಿರಲಿ ಎಂದು ಬಯಸುತ್ತಾನೆ. ಜಗವೆಲ್ಲ ನಗುತಿರಲಿ ಜಗದ ಅಳು ನನಗಿರಲಿ ಎಂದು ಹೇಳಿದ ಈಶ್ವರ ಸಣಕಲ್ ಅವರ ಕವಿತೆ ನೆನಪಿಸುವ ಗಜಲ್ ಇದಾಗಿದೆ. ಮಕ್ತಾದಲ್ಲಿ ಸಾವು ಯಾರನ್ನು ಬಿಡುವುದಿಲ್ಲ ಎಲ್ಲರ ಬದುಕಿನಲ್ಲಿ ಒಂದು ಅಂತ ಇರುತ್ತದೆ ಆಗ ನನ್ನ ಪ್ರಾಣಪಕ್ಷಿಯು ಮಣ್ಣಲ್ಲಿ ಮಣ್ಣಾಗುತ್ತದೆ ಎಂದು ಹೇಳುತ್ತಾ ಈ ಜಗದಲ್ಲಿ ಎಲ್ಲವೂ ನಶ್ವರ ಎಂಬ ಅಧ್ಯಾತ್ಮದ ತತ್ವವನ್ನು ಕವಿ ವಿವರಿಸಿದ್ದಾನೆ .
ನಿನ್ನದೇ ಒಣ ನೆನಪು ಬರುತಿದೆ ರಾತ್ರಿಯಲ್ಲಿ
ಚಾಂದಿನಿ ಬೆಳಕು ಕಳೆಯುತಿದೆ ರಾತ್ರಿಯಲ್ಲಿ
ರಾತ್ರಿಯಾದಾಗ ಬಾಳ ಸಂಗಾತಿಯ ನೆನಪು ಬರುತ್ತದೆ ,ಒಂಟಿ ಜೀವ ಇರಳು ಕಳೆಯುವುದು ಕಷ್ಟವಾಗಿ ಅವಳನ್ನು ನೆನಪು ಮಾಡಿಕೊಳ್ಳುತ್ತದೆ. ಅವಳಿಲ್ಲದೆ ಬೆಳದಿಂಗಳ ಬೆಳಕು ಸರಿಯುತ್ತಿದೆ ರಾತ್ರಿಯಲಿ ,ಈ ವಿರಹದ ಯಾತನೆ ಸಹಿಸಲು ಆಗುತ್ತಿಲ್ಲ. ಅವಳು ಬರುತ್ತಾಳೋ ಇಲ್ಲವೋ ಎಂದು ಮನ ತಳಮಳಗೊಳ್ಳುತ್ತಿದೆ ಎಂದು ಕವಿ ರೂಪಕದೊಂದಿಗೆ ವಿರಹದ ಗಜಲ್ ನ್ನು ಸುಂದರವಾಗಿ ರಚಿಸಿದ್ದಾರೆ.
ನೂರಾ ಅಹ್ಮದ್ ನಾಗನೂರು ಅವರ ಕೃತಿ *ಕಣ್ಣೆಂಜಲ ಕನ್ನಡಿ* ಸಂಕಲನದ ಗಜಲ್ ಗಳು ಓದಿಸಿಕೊಂಡು ಹೋಗುತ್ತವೆ. ಮತ್ತು ಕೆಲವು ಗಜಲ್ ಗಳು ಚಿಂತನೆಗೆ ಹಚ್ಚಿದರೆ ಮತ್ತೆ ಕೆಲವು ಗಜಲ್ ಗಳ ಸಾಲುಗಳು ಧ್ಯಾನದ ಕಡೆ ಕರೆದುಕೊಂಡು ಹೋಗುತ್ತವೆ, ಕೆಲವು ಗಜಲ್ ಗಳು ಪ್ರತಿಸಾರೆ ಓದಿದಾಗ ಬೇರೆ ಬೇರೆ ಅರ್ಥಗಳನ್ನು ಕೊಡುತ್ತವೆ. ಇವರ ಗಜಲ್ ಗಳು ಪ್ರೌಢತೆಯಿಂದ ಕೂಡಿವೆ.ಇನ್ನು ಉತ್ತಮವಾದ ಗಜಲ್ ರಚಿಸುತ್ತಾರೆಂಬ ಭರವಸೆಯನ್ನು ಕವಿ ಹುಟ್ಟಿಸುತ್ತಾನೆಂದು ಹೇಳುತ್ತಾ ನನ್ನ ಬರವಣಿಗೆಗೆ ವಿರಾಮವನ್ನು ಕೊಡುವೆ.
–ಪ್ರಭಾವತಿ ಎಸ್ ದೇಸಾಯಿ
ವಿಜಯಪುರ