ವಿಳಾಸವಾದನು ಬಸವಣ್ಣ

ಪುಸ್ತಕ ಪರಿಚಯ

ವಿಳಾಸವಾದನು ಬಸವಣ್ಣ

ಪ್ರಕಾಶಕರು ದೀಪ್ತಿ ಬುಕ್ ಹೌಸ್
ಮೈಸೂರು ಪುಟ 142

ಬಸವಣ್ಣನವರ ಹೆಸರು ಬಳಸಿಕೊಂಡು ಬೆಳೆಯುವವರು, ಆತನ ಹೆಸರನ್ನು ಬಂಡವಾಳವಾಗಿಸಿಕೊಂಡವರು ಎಂದರೆ ಬಸವ ಪ್ರೀಯರಿಗೆ ಆಗದು. ಏನಿದ್ದರೂ ಬಸವ ವಚನಗಳ ಚಿಂತನೆ ಬಸವ ವಿಚಾರಧಾರೆಯ ಅನುಕರಣೆಯಾಗಬೇಕೆಂದು ಬಯಸುವವರು ನಾವು. ಡಾ. ಶಶಿಕಾಂತ ಪಟ್ಟಣ ಸರ್ ಅವರ ವಿಳಾಸವಾದನು ಬಸವಣ್ಣ’ ಎಂಬ ಕೃತಿ ಹೊರ ಬಂದಾಗ ಅಲ್ಲಮನ ವಚನದ ಸಾಲಿನ ಆಧಾರಿತವಾದ ಶೀರ್ಷಿಕೆಯನ್ನು ನೋಡಿ ನನಗನಿಸಿತ್ತು ಇದು ನೂತನ ವಿಚಾರಧಾರೆಯ ಕೃತಿಯೆಂದು.

ಅದನ್ನು ಓದಬೇಕೆಂಬ ಕುತೂಹಲ ಹಂಬಲ ನನ್ನಲ್ಲಿತ್ತು. ನನ್ನ ಆಸೆ ಈಡೇರಿದ್ದು 31-3-2023 ರಂದು ಮಹಾರಾಷ್ಟ್ರದ ‘ಸಂಕ’ ಗ್ರಾಮದಲ್ಲಿ ನಡೆದ ಗಡಿನಾಡ ಉತ್ಸವದ ಸಂದರ್ಭದಲ್ಲಿ ಗಡಿನಾಡ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನನಗೆ ಉಪನ್ಯಾಸಕ್ಕೆ ಅವಕಾಶ ಮಾಡಿಕೊಟ್ಟದ್ದಲ್ಲದೆ, ತಮ್ಮ ಕಾರ್ಯಕ್ರಮ ಹಿಂದಿನ ದಿನವೇ ಮುಗಿದಿದ್ದರೂ ಮರುದಿನದವರೆಗೆ ನಿಂತು ನನಗೆ ತಮ್ಮ ಮೂರು ಕೃತಿಗಳನ್ನು ನೀಡಿದರು ಡಾ ಶಶಿಕಾಂತ ಪಟ್ಟಣ ಸರ್ ಅವರು. ನಿಜವಾಗಿಯೂ ಮೂರೂ ಅಪರೂಪದ ಕೃತಿಗಳೇ ಆಗಿವೆ. ಎರಡು ಕವನ ಸಂಕಲನಗಳು ಇನ್ನೊಂದು ಈಗ ನಾನು ಓದಿ ಅಭಿಪ್ರಾಯ ಹಂಚಿಕೊಳ್ಳುತ್ತಿರುವ ವಿಳಾಸವಾದನು ಬಸವಣ್ಣ’ಎಂಬ ಕೃತಿ. ಈ ಕೃತಿಯು 36 ವೈಚಾರಿಕ ಲೇಖನಗಳ ಸಂಗ್ರಹವಾಗಿದೆ.

ದೀನದುರ್ಬಲರ ಧ್ವನಿಯಾಗಿ
ಶೋಷಿತರ ಶಕ್ತಿಯಾಗಿ
ಅಬಲೆಯರಿಗೆ ಅಭಯ ನೀಡಿ
ಕಂದಾಚಾರಗಳೆಲ್ಲ ಕತ್ತಲೆಗೆ ದೂಡಿ
ನೀ ಬಂದೆ ಬಸವ ತಂದೆ”
ಎಂಬ ಅಪ್ಪ ಬಸವರ ಕುರಿತ ನನ್ನದೇ ಕವನದ ಸಾಲುಗಳನ್ನು ನೆನಪಿಸಿಕೊಳ್ಳುತ್ತೇನೆ. ಅಪ್ಪಬಸವರು ಹೊಸ ಸಮಾಜ ನಿರ್ಮಿಸಿದ ನಿರ್ಮಾತೃಗಳು ತಾವು ಕಟ್ಟಿದ ಸಮ ಸಮಾಜದಲ್ಲಿ ಸಕಲ ಜೀವಾತ್ಮರಿಗೆ ಲೇಸನೇ ಬಯಸಿದ ಮಹಾತ್ಮರು. ಸರ್ವರೂ ಸುಖದ ಜೀವನ ನಡೆಸಬೇಕೆಂದು ಕಾಯಕದ ಮಂತ್ರ ಬೋಧಿಸಿದವರು. ಬಸವಣ್ಣನವರ ವಿಚಾರಧಾರೆಗಳು 12ನೇ ಶತಮಾನಕಷ್ಟೆಯಲ್ಲ ಇಂದಿಗೂ ನಿತ್ಯ ಸತ್ಯ ನುಡಿಗಳು, ಸಾರ್ವಕಾಲಿಕ ಮೌಲ್ಯಗಳನ್ನು ಶರಣರ ವಚನಗಳು ಸಾರುತ್ತವೆ, ಬಸವಣ್ಣ ಇಂದಿಗೂ ಹೇಗೆ ಪ್ರಸ್ತುತವಾಗಿದ್ದಾರೆ, ಪ್ರತಿಯೊಬ್ಬರಲ್ಲಿಯೂ ವೈಚಾರಿಕ ಪ್ರಜ್ಞೆ ಬೆಳೆಯಬೇಕು ಎಂಬ ಆಶಯವನ್ನು  ಇಲ್ಲಿನ ಲೇಖನಗಳು ತಿಳಿಸಿಕೊಡುತ್ತವೆ. ಪ್ರಚಲಿತ ವಿದ್ಯಮಾನಗಳನ್ನು ನೋಡಿದಾಗ ಬಸವಾದಿ ಶಿವ ಶರಣರ ಚಿಂತನೆಗಳು ಈ ರೋಗಗ್ರಸ್ತ ಸಮಾಜಕ್ಕೆ ಔಷಧಿಗಳಾಗಿವೆ ಎಂಬ ಸತ್ಯವನ್ನು ಇಲ್ಲಿನ ಲೇಖನಗಳು ಸಾರಿ ಸಾರಿ ಹೇಳುತ್ತವೆ. ಈ ಕೃತಿಯ ಉತ್ಕೃಷ್ಟ ಬರಹಗಳು ನೋಂದವರ ನೋವಿನ ಗಾಯಕ್ಕೆ ಮಲಾಮುಗಳಾಗಿವೆ ಎಂದು ಹೆಮ್ಮೆಯಿಂದ ಹೇಳಬಹುದು.
ಶರಣರು ಕಂಡ ಜಂಗಮ’ ಎಂಬ ಲೇಖನದಿಂದ ಪ್ರಾರಂಭವಾದ ಈ ಕೃತಿಯು ಕಪ್ಪು ಹಣ ಧಿಕ್ಕರಿಸಿದ ಕಲ್ಯಾಣದ ಶರಣರು, ಶರಣರ ದೃಷ್ಟಿಯಲ್ಲಿ ಪಾದೋದಕ ಮತ್ತು ಪ್ರಸಾದ, ಶರಣರು ಕಂಡ ಸಹಜ ಧರ್ಮ ,ಶರಣರು ಕಂಡ ಮುಕ್ತ ಸಮಾಜ ಮತ್ತು ಇಂದಿನ ಮಠಗಳು ,ಗಾಳದ ಕಣ್ಣಪ್ಪನಾಗಬೇಕಾದಾಗ ಗಾಣದ ಕಣ್ಣಪ್ಪ,? ಶೂನ್ಯ ಸಂಪಾದನೆಯ ಚಿಂತನೆ, ಬಸವಣ್ಣ ನಮಗೆ ಏಕೆ ಬೇಕು? ಆದಯ್ಯನವರ ಚರಿತೆ, ಶರಣರ ಆಹಾರ ಪದ್ಧತಿ, ವಚನಗಳಲ್ಲಿ ವಿಜ್ಞಾನ ಶೋಧನೆ, ಆರೋಗ್ಯ ,ಸಿದ್ಧಾಂತ, ಅಷ್ಟಾವರಣದ ಕುರಿತ ಮಹತ್ವದ ಲೇಖನಗಳನ್ನು ನೋಡುತ್ತೇವೆ. ಪ್ರಚಾರಕ್ಕಾಗಿ ಬಸವಣ್ಣನನ್ನು ಬಳಸಬೇಡಿ ,ಇಷ್ಟಲಿಂಗ ಪೂಜೆಯ ಮಹತ್ವ ಬಸವಣ್ಣನಿದ್ದ ಕ್ಷೇತ್ರ ಅವಿಮುಕ್ತ ಕ್ಷೇತ್ರ ಹೀಗೆ ‘ಲಿಂಗವು ಅಂಗಗುಣ ಆಚಾರದ ರೂಪಕ’ ಎಂಬ ಲೇಖನದೊಂದಿಗೆ ಈ ಕೃತಿಯು ಕೊನೆಗೊಳ್ಳುತ್ತದೆ.
ಶರಣರು ಕಂಡ ಜಂಗಮ ಈ ಲೇಖನವು ಚಾಮರಸನ ಪ್ರಭುಲಿಂಗಲೀಲೆಯ “ಕಾಯದೊಳು ಗುರುಲಿಂಗ ಜಂಗಮ….. ರಾಯಪೂರ್ವಾಚಾರ್ಯ ಸಂಗನಬಸವ ಶರಣಾರ್ಥಿ” ಎಂಬ ಪ್ರಸಿದ್ಧ ಸಾಲುಗಳೊಂದಿಗೆ ಪ್ರಾರಂಭ ಜಂಗಮ ಪದದ ನಿಜ ಅರ್ಥವನ್ನು ತಿಳಿಸುತ್ತಾ ಶರಣರ ದೃಷ್ಟಿಯಲ್ಲಿ ಜಂಗಮ ಎಂದರೆ ಏನು ಎಂಬುದನ್ನು ಸ್ಪಷ್ಟಪಡಿಸಿದ್ದಾರೆ ಬಸವಣ್ಣನವರ ಮರಕ್ಕೆ ಬಾಯಿ ಬೇರೆಂದು ತಲೆ ಇಂಕೆ ನೀರಿದೆ ಎಂಬ ವಚನವನ್ನ ಉಲ್ಲೇಖಿಸಿ ಜಂಗಮ ಒಂದು ಚೈತನ್ಯ ಅದು ಜ್ಞಾನ ಅದು ಸಮಾಜ ಹೀಗೆ ಅನೇಕ ಪಾರಿಭಾಷಿಕ ಪದಗಳ ಅರ್ಥವನ್ನು ಕಂಡುಕೊಳ್ಳುವ ಶ್ರೇಷ್ಠ ಸುಂದರ ವ್ಯವಸ್ಥೆಯಾಗಿದೆ ಎನ್ನುತ್ತಾರೆ.

15 ನೆಯ ಶತಮಾನದ ಶೈವ ಪ್ರಭೇದಗಳು ಜಂಗಮವನ್ನು ಜಾತಿ ಮಠ ಆಶ್ರಮಗಳಿಗೆ ಸೀಮಿತಗೊಳಿಸಿದರು ಎಂಬುದನ್ನು ನೋವಿನಿಂದ ಹೇಳುತ್ತಾ, ಹದಿನಾರನೆಯ ಶತಮಾನದ ಆರಾಧ್ಯರ ಗುಂಪು ಅನಗತ್ಯವಾಗಿ ಲಿಂಗಾಯತ ಧರ್ಮದಲ್ಲಿ ವ್ರತಗಳನ್ನು ತುರುಕಿದರು ಎಂಬುದನ್ನು ಸ್ಪಷ್ಟಪಡಿಸುತ್ತಾರೆ. ಜಂಗಮದ ಕುರಿತಾದ ಶಿವಲೆಂಕ ಮಂಚಣ್ಣನ, ಶಿವಯೋಗಿ ಸಿದ್ದರಾಮ, ಚನ್ನಬಸವಣ್ಣನವರ ಹಾಗೂ ಜೇವರ್ಗಿಯ ಷಣ್ಮುಖ ಶಿವಯೋಗಿಗಳ ವಚನಗಳನ್ನು ಉಲ್ಲೇಖಿಸಿದ್ದಾರೆ. ಚಲನಶೀಲ ಗುಣವು ಜಂಗಮತ್ವದ ಜೀವಾಳವಾಗಿದೆ ಎಂಬುದು ಈ ಲೇಖನದಿಂದ ನಾವು ತಿಳಿದುಕೊಳ್ಳಬೇಕಾದ ಅಂಶವಾಗಿದೆ. ಜಂಗಮ ಪದದ ಬಗ್ಗೆ ಮೌಢ್ಯ ಬೆಳಸಿಕೊಂಡ ಜನರ ಜಾಡ್ಯವನ್ನು ದೂರ ಮಾಡುವ ವೈಚಾರಿಕ ಲೇಖನ ಇದು ಎಂದರೆ ತಪ್ಪಾಗಲಾರದು. ‘ಆಶೆ ಯೆಂಬುದು ಅರಸಿಂಗಲ್ಲದೆ ಶಿವಭಕ್ತರಿಗುಂಟೆ ಅಯ್ಯಾ’ ಎಂಬ ಲಕ್ಕಮ್ಮನವರ ಸುಪ್ರಸಿದ್ಧ ವಚನ. ಆ ವಚನಕ್ಕೆ ಬೆಲೆ ಕೊಟ್ಟವರು ಮಾರಯ್ಯನವರು. ‘ನನಗೆ ಮನೆ ಇಲ್ಲ ನಿನಗೆ ಧನವಿಲ್ಲ’ ಎಂಬ ಮಾರಯ್ಯನವರ ವಚನವನ್ನು ವ್ಯಾಖ್ಯಾನಿಸಿದ್ದಾರೆ. ಶರಣರ ತತ್ವದಂತೆ ನಾವು ಬದುಕುವುದಾದರೆ ಸರಿಯಾದ ಸುಂಕವನ್ನ ಸರ್ಕಾರಕ್ಕೆ ಕಟ್ಟಬೇಕು ಎಂಬ  ವಿಷಯ ಹೇಳುತ್ತಾ ಜೇಡರ ದಾಸಿಮಯ್ಯನವರ ಬಸವಣ್ಣನವರ ವಚನಗಳನ್ನು ಉದಾಹರಣೆಸುತ್ತಾರೆ. ಕಾಯಕದಿಂದ ಬಂದ ಹೆಚ್ಚಿನ ಆದಾಯವನ್ನು ಜಂಗಮ ದಾಸೋಹಕ್ಕಾಗಿ ಬಳಸಿದವರು ಶರಣರು.
Religion is a way of life, but not a view of life’ ಎಂಬ ಮಾತಿಗೆ ಅರ್ಥ ಒದಗಿಸಿದವರು ಶರಣರು ಎಂದು ಹೇಳುತ್ತಾ ಶರಣರು ಕಂಡ ಸಹಜ ಧರ್ಮ, ಮುಕ್ತ ಸಮಾಜ ,ಶರಣರ ಆಹಾರ ಪದ್ಧತಿ, ಆರೋಗ್ಯ ಅವರ ಸಿದ್ಧಾಂತ ಅಷ್ಟಾವರಣದಲ್ಲಿ ಮಂತ್ರ ಎಂಬ ಎಲ್ಲ ಲೇಖನಗಳಲ್ಲಿ ಶರಣರ ವಿಚಾರಧಾರೆಗಳು ಸ್ವಸ್ಥ ಸಮಾಜಕ್ಕೆ ಹೇಗೆ ಪ್ರೇರಕವಾಗಿವೆ ಹಾಗು ಮಾನವ ಬದುಕಿನಲ್ಲಿ ಆರೋಗ್ಯಕರ ವಾತಾವರಣ ನಿರ್ಮಾಣವಾಗಬೇಕಾದರೆ ವಚನಗಳಲ್ಲಿನ ಅಂಶಗಳು ಸ್ಪೂರ್ತಿ ನೀಡುತ್ತವೆ ಎಂಬ ವಿವರಣೆ ಇಲ್ಲಿದೆ.

ಒಡಲ ಕಳವಳಕೆ ಬಾಯ ಸವಿಗೆ ಬಯಸಿ ಉಂಡೆನಾದಡೆ ನಿಮ್ಮ ತೊತ್ತಿನ ಮಗನಲ್ಲ‘ ಎಂಬ ವಚನದ ಸಾಲುಗಳು ಶರಣರ ಆಹಾರ ಪದ್ಧತಿಯ ಬಗ್ಗೆ ಇದ್ದ ಗೌರವವನ್ನು ತಿಳಿಸುತ್ತವೆ. ಉರಿಲಿಂಗ ಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ ಆಹಾರ ಪದ್ಧತಿಯನ್ನು ಗೌರವಿಸಿದವರು ಎಂಬುದು ಹೆಮ್ಮೆಯ ವಿಷಯ.
ವಚನಗಳಲ್ಲಿ ವಿಜ್ಞಾನ ಶೋಧನೆ ಎಂಬ ಲೇಖನವಂತೂ ಶರಣರು ಸಾಮಾನ್ಯ ಪ್ರತಿಮೆಗಳ ಮೂಲಕ ವಿಜ್ಞಾನದ ವಿಷಯ ತಿಳಿಸಿದ್ದನ್ನು ವಿವರಿಸುತ್ತದೆ. ಉದಕ ದೊಳಗೆ ಕಿಚ್ಚು ಹತ್ತಿ ಸುಡುತ್ತಿರ್ದುದ ಕಂಡೆ’ ಎಂಬ ಅಲ್ಲಮರ ಬೆಡಗಿನ ವಚನ ವಿಜ್ಞಾನದ ಅಂಶಗಳನ್ನು ತನ್ನಲ್ಲಿ ಅಡಗಿಸಿಕೊಂಡಿವೆ. ಅವನವರ ಅಕ್ಕಮಹಾದೇವಿಯವರ ಅಕ್ಕಮ್ಮನವರ ವಚನಗಳಲ್ಲಿಯೂ ವೈಜ್ಞಾನಿಕ ಅಂಶಗಳನ್ನು ಕಾಣುತ್ತೇವೆ.
ಅನೇಕ ಶರಣರ ಕುರಿತ ಸಂಶೋಧನಾತ್ಮಕ ಲೇಖನಗಳು ಇಲ್ಲಿವೆ. ಬಹಳ ಜನ ಗಾಳದ ಕಣ್ಣಪ್ಪಯ್ಯನನ್ನು ಗಾಣದ ಕಣ್ಣಪ್ಪಯ್ಯ ಎಂದೇ ತಿಳಿದಿದ್ದರು. ಅಂತಹ ಸಂಶಯ ನಿವಾರಣೆ ಮಾಡುವ ಕೆಲಸ ಇಲ್ಲಿ ಮಾಡಲಾಗಿದೆ. ಗಾಣದ ಕಣ್ಣಪ್ಪಯ್ಯ ಅಲ್ಲ ಅವರು ಗಾಳದ ಕಣ್ಣಪ್ಪಯ್ಯ ಎಂಬುದನ್ನು ಅವರ ವಚನಗಳ ಆಧಾರದಿಂದ ಬರೆದ ಸಂಶೋಧನಾತ್ಮಕ ಲೇಖನವೂ ಇಲ್ಲಿದೆ. ಜೇಡರ ದಾಸಿಮಯ್ಯ ನವರು ಆದ್ಯವಚನಕಾರರು, ದೇವರದಸಿಮೆಯ್ಯನವರೇ ಬೇರೆ. ಜೇಡರ ದಾಸಿಮಯ್ಯ ದೇವರ ದಾಸಿಮಯ್ಯ ಒಬ್ಬರೇ ಅಲ್ಲ ಎಂಬ ಚರ್ಚೆಯು ಈ ಕೃತಿಯಲ್ಲಿದೆ. ಡಾ. ಎಮ್ ಚಿದಾನಂದಮೂರ್ತಿ, ಡಾ ಎಂ ಎಂ ಕಲಬುರ್ಗಿ ಮುಂತಾದ ಸಂಶೋಧಕರ ವಿಚಾರಗಳನ್ನು ಮಂಡಿಸಿದ್ದಾರೆ. ಜೇಡರ ದಾಸಿಮಯ್ಯನ ಪತ್ನಿ ದುಗ್ಗಳೆ ಇದು ಸಂಶೋಧನೆಗಳಿಂದ ಸಾಬೀತಾಗಿದೆ ಎಂಬ ಸತ್ಯ ಇಲ್ಲಿದೆ. ಶರಣ ಆದಯ್ಯನವರ ಕುರಿತ ಲೇಖನದಲ್ಲಿ ಆತನ ಮೂಲ ಸ್ಥಾನ ಗುಜರಾತದ ಸೌರಾಷ್ಟ್ರ. ಸೋಮನಾಥನ ಸನ್ನಿಧಿಯಲ್ಲಿ ಇದ್ದಂತಹ ವ್ಯಕ್ತಿ ಮೂಲತಃ ಬಣಜಿಗ ಸಮುದಾಯಕ್ಕೆ ಸೇರಿದ ಆದಯ್ಯ ಬಸವಾದಿ ಶರಣರ ಮಹಿಮೆಯನ್ನು ಕೇಳಿ ಕಲ್ಯಾಣಕ್ಕೆ ಬಂದು ಶರಣರ ಸಂಘದಲ್ಲಿ ನೆಲೆಸುತ್ತಾನೆ ಶರಣರ ಸಂಪರ್ಕದಲ್ಲಿ ಬಂದ ಆದಯ್ಯ ವಚನ ರಚನೆಗೆ ತೊಡಗಿದರು. ಜೈನ ಕನ್ಯೆಯನ್ನು ವಿವಾಹವಾದ ಆದಯ್ಯನ ಸಮಾಧಿ ಲಕ್ಷ್ಮೇಶ್ವರದಲ್ಲಿದೆ ಎನ್ನುವುದನ್ನು ಲೇಖಕರು ಉಲ್ಲೆಖಿಸಿದ್ದಾರೆ. ‘ವೇದಂಗಳ ಹಿಂದೆ ಹರಿಯದಿರು ಹರಿಯದಿರು… ‘ ವೇದಾಗಮಂಗಳು ಹೋದ ಸರಣಿಯಲ್ಲಿ ಹೋದರಲ್ಲದೆ ದೈತಾದ್ವೈತಕ್ಕೆ ನಿಲುಕದ ನಿಜವ ಕಂಡವರಾರನೂ ಕಾಣೆ’ ಎಂದು ಹೇಳುವ ಆದಯ್ಯನವರು ವೈಶಾ ಆಚರಣೆಗಳ ವಿರೋಧಿ ಎನ್ನುವುದು ಈ ವಚನಗಳ ನೋಡಿದಾಗ ತಿಳಿಯುತ್ತದೆ ಮಂಗಲಿಂಗ ತನ್ಮಯ ವಾಗಬೇಕು ಎಂಬುದನ್ನು ನಿರಾಕಾರ ಸಾಕಾರಗಳ ವಿಚಾರದ ಕುರಿತ ವಚನಗಳನ್ನು ಇಲ್ಲಿ ಉಲ್ಲೇಖಿಸಲಾಗಿದೆ. ಆದಯ್ಯನವರ ‘ಬ್ರಹ್ಮವೆಂಬ ವೃಕ್ಷದಲ್ಲಿ ಫಲ ಪತ್ರ ಕುಸುಮಂಗಳೆಂಬ’ ವಚನ ಸೃಷ್ಟಿಯ ರಹಸ್ಯವನ್ನು ತಿಳಿಸುತ್ತದೆ.
ವರ್ಗಬೇಧ ,ವರ್ಣಬೇಧ ,ಲಿಂಗಬೇಧಗಳನ್ನು ತಿರಸ್ಕರಿಸಿ ಸಮ ಸಮಾಜ ನಿರ್ಮಿಸಿದ ಅಪ್ಪಬಸವರ ಅವಶ್ಯಕತೆ ಹಿಂದೂ ಇತ್ತು ಮುಂದು ಇರುತ್ತದೆ ಇಂದಿಗೂ ಇದೆ ಎಂದು ಸಾರುವ ‘ಬಸವಣ್ಣ ನಮಗೆ ಬೇಕು?’ ಎಂಬ ಶೀರ್ಷಿಕೆಯ ಅಡಿಯಲ್ಲಿ ಚರ್ಚಿಸಿದ್ದಾರೆ. ಕಾರ್ಲಮಾಕ್ಸನಿಗಿಂತ ಹಿಂದೆ ಬಸವಣ್ಣ ಜಗತ್ತಿಗೆ ಕಾಯಕದ ಗೌರವವನ್ನು ತಿಳಿಸಿಕೊಟ್ಟವರು. ಕಾಯಕದಲ್ಲಿ ದೈವತ್ವವನ್ನು ಕಂಡವರು ಎಂದಿದ್ದಾರೆ. ಈ ಲೇಖನದಲ್ಲಿ ಇಂದಿನ ವಿಕ್ಷಿಪ್ತ ಪರಿಸ್ಥಿತಿಗೆ ಬಸವಣ್ಣನ ವಿಚಾರಧಾರೆಗಳ ಅವಶ್ಯಕತೆ ಇದೆ ಬಸವಣ್ಣ ಬೇಕೇ ಬೇಕು. ಆತನನ್ನು ಮತ್ತೆ ಮತ್ತೆ ನಾವು ನೆನಪಿಸಿಕೊಳ್ಳಬೇಕು ಎಂದಿದ್ದಾರೆ. ‘ವಿಳಾಸವಾದನು ಬಸವಣ್ಣ’ ಎಂಬ ಕೃತಿಯ ಶೀರ್ಷಿಕೆಯನ್ನು ಹೊಂದಿರುವ ಲೇಖನದ ಅಡಿಯಲ್ಲಿ ಅಲ್ಲಮ ಪ್ರಭುದೇವರ ವಚನವನ್ನು ಸಂಪೂರ್ಣವಾಗಿ ವಿಶ್ಲೇಷಿಸಿದ್ದಾರೆ. ಆ ವಚನದ ಕೊನೆಯ ಸಾಲು “…ನಮ್ಮ ಗುಹೇಶ್ವರ ಲಿಂಗಕ್ಕೆ ವಿಳಾಸವಾದೆಯಲ್ಲ ಸಂಗನಬಸವಣ್ಣ” ಎಂಬುದು ಪ್ರೇರಣೆಯೊದಗಿಸಿದ ಸಾಲು ಎಂಬುದರಲ್ಲಿ ಎರಡು ಮಾತಿಲ್ಲ. ಅಲ್ಲಮರಂತಹ ಜ್ಞಾನಿ ಬಸವಣ್ಣನವರ ಮಹಿಮೆಯನ್ನು ತಮ್ಮ ಅನೇಕ ವಚನಗಳಲ್ಲಿ ಸಾರಿದರು. ಆದರೆ ಈ ವಚನ ವಿಶಿಷ್ಟ ಎಂಬುದು ಡಾ ಪಟ್ಟಣ ಸರ್ ಅವರ ವಿಚಾರಧಾರೆಗಳಿಂದ ಅರ್ಥವಾಗುತ್ತದೆ. ‘ಬಸವಣ್ಣನಿದ್ದ ಕ್ಷೇತ್ರ ಅವಿಮುಕ್ತ ಕ್ಷೇತ್ರ’ ಎಂಬ ಅಕ್ಕನ ವಚನದ ಸಾಲುಗಳನ್ನ ವಿಶ್ಲೇಷಣೆ ಮಾಡುತ್ತಾರೆ. ಬಸವಣ್ಣನವರ ಆಶಯ ಸಮಯೊಚಿತ ಲಿಂಗಪೂಜೆ ಸಾಂಧರ್ಭಿಕ ಜಂಗಮಸೇವೆ ಆಗಿತ್ತು ಎಂಬ ” …ಆ ಸಮಯೋಚಿತದಲ್ಲಿ ಬಂದ ಜಂಗಮದ ಶಬ್ದವಾಗಿ ಕೇಳಿ ಪ್ರಸಾದಕ್ಕೆ ಕೈದೆಗೆದೆಡೆ ಅದು ಲಿಂಗಕ್ಕೆ ಬೋನ” . ಬಸವಣ್ಣ ಬದುಕಿದ್ದು 36 ವರ್ಷ ಎಂಬುದು ಬಸವಣ್ಣನ ಕಾಲಾವಧಿಯ ಕುರಿತ ಸಂಶೋಧನಾ ಲೇಖನವಾಗಿದೆ. ಬಸವಣ್ಣನವರ ಕುರಿತು ಇರುವ ಹಲವು ಊಹಾಪೋಹಗಳಿಗೆ ಉತ್ತರ ನೀಡುವ ಬರಹ ಇದಾಗಿದೆ. ಹೀಗೆ ಕಲ್ಯಾಣ ಕ್ರಾಂತಿಯ ಕೇಂದ್ರ ಪುರುಷ ,ವಿಶ್ವಮಾನವ, ಮಹಾಮಾನವತಾವಾದಿ, ಕ್ರಾಂತಿಯೋಗಿ ಅಪ್ಪ ಬಸವಣ್ಣನವರ ಕುರಿತು ಅನೇಕ ಲೇಖನಗಳನ್ನು ಈ ಕೃತಿಯಲ್ಲಿ ಓದುತ್ತೇವೆ.
ಶೂನ್ಯ ಸಂಪಾದನೆಗಳ ಕುರಿತ ಚಿಂತನೆ ನಡೆಸಿದ ಲೇಖಕರು ಶೂನ್ಯ ಸಂಪಾದನೆಯ ಕೆಲ ಸನ್ನಿವೇಶಗಳು ಪುರಾಣ ಕಲ್ಪಿತ ಸಂಗತಿಗಳಾಗಿರುವುದರ ಬಗ್ಗೆ ಚರ್ಚೆಯಾಗಬೇಕು ಎಂದಿದ್ದಾರೆ. ವೈಭೀಕರಣದ ಬದಲಾಗಿ ಶುದ್ಧೀಕರಣ ಆಗಬೇಕು ಅಂದಾಗ ಮಾತ್ರ ವಚನ ಸಾಹಿತ್ಯದ ಕಾಲಘಟ್ಟ ಇಂದಿನ ಯುವ ಜನಾಂಗಕ್ಕೆ ಅರ್ಥವಾಗುತ್ತದೆ. ವಚನಗಳ, ಲಿಂಗಾಯತ ಧರ್ಮದ ಆಚರಣೆಗಳ, ಲಿಂಗ ಸಾಮರಸ್ಯದ ,ಜಂಗಮತ್ವದ ,ಇಂದಿನ ಮಠಮಾನ್ಯಗಳ ಸ್ಥಿತಿಗತಿ ಕುರಿತಾದ ಲೇಖನಗಳು, ವೈಚಾರಿಕ ಚಿಂತನೆಗಳು ಇನ್ನೂ ಸಂಶೋಧನೆ ಯಾಗಬೇಕಾದ ಶರಣರ ಕುರಿತ ಅನೇಕ ಸಂಗತಿಗಳು ಈ ಎಲ್ಲ ವಿಚಾರಗಳನ್ನು ಈ ಕೃತಿ ತನ್ನಲ್ಲಿ ಗರ್ಭಿಕರಿಸಿಕೊಂಡಿದೆ ಎಂದು ಹೆಮ್ಮೆಯಿಂದ ಹೇಳಬಯಸುತ್ತೇನೆ. ಮುಂದಿನದನ್ನು ತಾವೆಲ್ಲ ಕೃತಿಯನ್ನು ಓದಿ ತಿಳಿದುಕೊಳ್ಳಬೇಕು.
ಔಷಧ ವಿಜ್ಞಾನಿಯಾಗಿ ಮಹಾರಾಷ್ಟ್ರದಲ್ಲಿ ನೆಲೆ ನಿಂತಿರುವ ಕನ್ನಡದ ವೀರ ಕುವರ ಡಾಕ್ಟರ್ ಶಶಿಕಾಂತ ಪಟ್ಟಣ ಸರ್ ಬಸವ ತತ್ವವನ್ನು ಜೀವನದಲ್ಲಿ ರೂಢಿಸಿಕೊಂಡು ತಮ್ಮ ಇಡೀ ಜೀವನವನ್ನು ಶರಣ ಸಾಹಿತ್ಯದ ಉಳಿವಿಗಾಗಿ ಮುಡುಪಾಗಿಟ್ಟಿದ್ದಾರೆ. ಕನ್ನಡ ಸಾಹಿತ್ಯ ಲೋಕಕ್ಕೆ ಅಮೂಲ್ಯ ಕೃತಿ ರತ್ನಗಳನ್ನ ನೀಡಿದ ಇವರ ಸೇವೆ ಅನುಪಮ. ‘ಸತಿಪತಿಗಳೊಂದಾದ ಭಕ್ತಿ ಹಿತವಪ್ಪುದು ಶಿವಂಗೆ’ ಎನ್ನುವಂತೆ ಇವರ ಸಹಧರ್ಮನಿಯವರು ಕೂಡ ಶರಣ ಸಾಹಿತ್ಯದಲ್ಲಿ ಆಸಕ್ತಿಯುಳ್ಳವರು ಪತಿಗೆ ಬೆನ್ನೆಲುಬಾಗಿ ನಿಂತವರು .
ಬಸವಣ್ಣ ಅಲ್ಲಮಪ್ರಭು ಚನ್ನಬಸವಣ್ಣ ಅಕ್ಕಮಹಾದೇವಿ ಮುಂತಾದ ದಿವ್ಯ ಚೇತನಗಳು ಕೇವಲ ತಮ್ಮಷ್ಟಕ್ಕೆ ತಾವೇ ಬೆಳೆಯದೆ ಶರಣಪಡೆಯನ್ನೇ ನಿರ್ಮಿಸಿದ ಹಾಗೆ ಡಾ. ಪಟ್ಟಣ ಸರ್ ವಚನ ಅಧ್ಯಯನ ಕೇಂದ್ರ, ಅಂತರಾಷ್ಟ್ರೀಯ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ ಮತ್ತು ಅಕ್ಕನ ಅರಿವು ತಂಡದ ಮೂಲಕ ನನ್ನಂತಹ ಎಷ್ಟೋ ಜನರಿಗೆ ಪ್ರೇರಣೆ ಒದಗಿಸಿದ್ದಾರೆ ಅವರ ಬಸವ ಸೇವೆ ನಿರಂತರ ಸಾಗಲಿ, ಬಸವಾದಿ ಶಿವ ಶರಣರ ಶರಣೀಯರ ಆಶೀರ್ವಾದ ಸದಾ ಅವರ ಕುಟುಂಬದ ಮೇಲಿರಲಿ. ಅವರಿಂದ ಇನ್ನೂ ಸಾವಿರಾರು ಕೃತಿಗಳು ಹೊರಬರಲಿ ಎಂದು ಬಸವಣ್ಣನವರಲ್ಲಿ ಪ್ರಾರ್ಥಿಸುವೆ.
ಜೈ ಬಸವೇಶ
ಶರಣು ಶರಣಾರ್ಥಿ

  -ಡಾ. ಪ್ರಿಯಂವದಾ ಮ ಹುಲಗಬಾಳಿ
  (ಅಣೆಪ್ಪನವರ) ಅಥಣಿ
೯೪೪೮೯೨೧೦೯೭.

Don`t copy text!