ಅಂತರಂಗ ಅರಿವು-2
ಬೆಲ್ಲದ ನೀರೆರೆದಡೇನು, ಬೇವು ಸಿಹಿಯಪ್ಪದೆ …?
ಬೆಲ್ಲದ ನೀರೆರೆದಡೇನು, ಬೇವು ಸಿಹಿಯಪ್ಪುದೆ
ಕತ್ತುರಿಯ ಲೇಪನವಿತ್ತಡೇನು ನೀರುಳ್ಳೆಯ ದುರ್ಗಂಧ ದೂರಪ್ಪುದೆ ?
ಕಸುಗಾಯ ಹಿಸುಕಿದಡೇನು, ಹಣ್ಣಿಗೆ ಹವಣಪ್ಪುದೆ ?
ಕಿರಿಯ ಮನದ ಮಾನವಂಗೆ ಬಹಿರಂಗದ ಬರಿಯ ಸಂಸ್ಕಾರವಾದಡೇನು
ಭವಿಯಾಗಿಪ್ಪನಲ್ಲದೆ ಭಕ್ತನಪ್ಪನೆ ಕೂಡಲಚೆನ್ನಸಂಗಮದೇವಾ
ಪೂರ್ವಗುಣವಳಿದು ಪುನರ್ಜಾತನಾಗದನ್ನಕ್ಕ?
-ಚೆನ್ನಬಸವಣ್ಣನವರು
ಬೆಲ್ಲದ ನೀರೆರೆದಡೇನು, ಬೇವು ಸಿಹಿಯಪ್ಪುದೆ ?
ಬೆಲ್ಲದ ಗುಣ ಸಿಹಿ. ಅದನ್ನು ಇತರ ಪದಾರ್ಥಗಳ ಜೊತೆಗೆ ಸೇರಿಸಿದರೆ ಆ ಪದಾರ್ಥಕ್ಕೂ ಸಿಹಿ ಗುಣ ಬರುತ್ತದೆ. ಆದರೆ ಬೇವಿಗೆ ಬೆಲ್ಲವನ್ನು ಸೇರಿಸಿದರೆ , ಬೇವು ಸಿಹಿಯಾಗುವುದಿಲ್ಲ. ಅದನ್ನು ಸಿಹಿ ಮಾಡಬೇಕೆಂದು ಬೆಲ್ಲದ ನೀರನ್ನೇ ಎರೆದು ಬೆಳೆಸಿದರೂ, ಅದು ಸಿಹಿಯಾಗುವುದಿಲ್ಲ. ಕಹಿ ಬೇವಿನ ಮೂಲ ಗುಣ. ಮನೋವಿಜ್ಞಾನಿಗಳು ಮಾನವನ ಮೂಲ ಗುಣಕ್ಕೆ ವ್ಯಕ್ತಿತ್ವದ ಸ್ಥಿರ ಗುಣಗಳು ಎಂದು ಕರೆದಿದ್ದಾರೆ. ಈ ಸ್ಥಿರ ಗುಣಗಳುನ್ನು ಪರಿಸರದ ಪ್ರಭಾವದಿಂದ , ಸಂಸ್ಕಾರದಿಂದ ಅಥವಾ ಶಿಕ್ಷಣದಿಂದಲೂ ಬದಲಾಯಿಸಲು ಸಾಧ್ಯವಿಲ್ಲ. ಮನುಷ್ಯನ ವ್ಯಕ್ತಿತ್ವದಲ್ಲಿಯ ಮೂಲ ಗುಣಗಳ ಛಾಯೆ ಅವನ ವರ್ತನೆಯಲ್ಲಿ ಪ್ರತಿಫಲಿಸುತ್ತದೆ.
ಕತ್ತುರಿಯ ಲೇಪನವಿತ್ತಡೇನು, ನೀರುಳ್ಳೆಯ ದುರ್ಗಂಧ
ದೂರಪ್ಪುದೆ ?
ಈರುಳ್ಳಿಗೆ ವಿಶಿಷ್ಟ ಘಾಟು ವಾಸನೆಯಿದೆ. ಈರುಳ್ಳಿ ತಿಂದವರ ಬಾಯಿಯಿಂದ ಬರುವ ದುರ್ವಾಸನೆ
ಅಸಹನೆಯನ್ನುಂಟು ಮಾಡುತ್ತದೆ. ಅದನ್ನು ತಡೆಯಲು ಘಮಘಮಿಸುವ ಕಸ್ತೂರಿಯನ್ನು ಹಚ್ಚಿಕೊಂಡರೆ ಈರುಳ್ಳಿಯ ವಾಸನೆಯನ್ನು ಹೋಗಲಾಡಿಸಲು ಸಾಧ್ಯವಿಲ್ಲ. ಈರುಳ್ಳಿಯ ಮೂಲ ಗುಣ ದುರ್ವಾಸನೆ. ಅದನ್ನು ಕಸ್ತೂರಿಯಿಂದಲೂ ಮುಚ್ಚಿದಡು ಸಾಧ್ಯವಿಲ್ಲ .
ಕಸುಗಾಯ ಹಿಸುಕಿದಡೇನು, ಹಣ್ಣಿಗೆ ಹವಣಪ್ಪುದೆ ?
ಯಾವುದನ್ನು ಒತ್ತಾಯ ಪೂರ್ವಕವಾಗಿ ಪಡೆಯಲು ಸಾಧ್ಯವಿಲ್ಲ. ಮನುಷ್ಯ ಹಣ್ಣಿನ ಮರದಲ್ಲಿ ಬಿಟ್ಟ
ಕಸುಗಾಯಿಯನ್ನು ತಿನ್ನಬೇಕು ಎಂದು ಆಸೆಪಡುತ್ತಾನೆ.ಅದನ್ನು ಒತ್ತಿ ಒತ್ತಿ ಮೆತ್ತಗೆ ಮಾಡುತ್ತಾನೆ.
ಕಸುಕಾದ ಕಾಯಿಯನ್ನು ಹಿಚುಕಿದರೆ
ಮೆತ್ತಗಾಗುತ್ತದೆ.ಆದರೆ ಅದರಲ್ಲಿ ಹಣ್ಣಿನ ರುಚಿ ಬರಲಾರದು.
ನೈಸರ್ಗಿಕವಾಗಿ ಗಿಡದಲ್ಲಿಯೆ ಹಣ್ಣು
ಮಾಗಿ ಹಣ್ಣಾದ, ಹಣ್ಣಿನ ರುಚಿಯೇ ಬೇರೆ. ಆ ರುಚಿ ಕಸುಕು ಕಾಯಿಯನ್ನು ಒತ್ತಿ ಮೆತ್ತಗೆ ಮಾಡಿದ ಕಾಯಿಗೆ ಬರಲಾರದು. ಒತ್ತಾಯ ಪೂರ್ವಕವಾಗಿ ಕಾಯಿಯಲ್ಲಿ ರುಚಿಯನ್ನು ತುಂಬಲಾಗದು.ತಾನಾಗಿಯೆ ಮಾಗುವ ಪ್ರಕ್ರಿಯೆಗೆ ಹಣ್ಣು ಒಳಗಾಗಬೇಕು.ಅಂತೆಯೆ ಒತ್ತಾಯ ಪೂರ್ವಕವಾಗಿ ಯಾರನ್ನು ಬದಲಿಸಲು ಸಾಧ್ಯವಿಲ್ಲ.ಆ ಬದಲಾವಣೆ ಅವರ ಆಂತರ್ಯದಿಂದಲೇ ಬರಬೇಕು .
ಕಿರಿಯ ಮನದ ಮಾನವಂಗೆ ಬಹಿರಂಗದ ಬರಿಯ ಸಂಸ್ಕಾರವಾದಡೇನು,
ಭವಿಯಾಗಿಪ್ಪನಲ್ಲದೆ ಭಕ್ತನಪ್ಪನೆ ?
ಸಾಮಾನ್ಯವಾಗಿ ನಾವು ಮನುಷ್ಯರನ್ನು ದೊಡ್ಡ ಮನುಷ್ಯ ಮತ್ತು ಸಣ್ಣಮನುಷ್ಯ ಎಂದು ವರ್ಗೀಕರಣವನ್ನು ಮಾಡುತ್ತೇವೆ.ಈ ವರ್ಗೀಕರಣ ಕಣ್ಣಿಗೆ ಕಾಣುವ ಅವನ ಆಕಾರ ಗಾತ್ರ ಮತ್ತು ಎತ್ತರದಿಂದ ಅಲ್ಲ . ಅವನಲ್ಲಿಯ ಒಳ್ಳೆಯ ಗುಣಗಳಿಂದ.
ಸಣ್ಣ ಮನದ ಮನುಷ್ಯ ಸದಾ ತನ್ನ ಸ್ವಾರ್ಥದ ಬಗೆಗೆ ಯೋಚಿಸುತ್ತಾನೆ. ಸ್ವಹಿತ, ಸ್ವಚಿಂತನೆ, ಸ್ವಪ್ರತಿಷ್ಠೆಯ ಕಡೆಗೆ ಅವನ ಮನಸ್ಸು ಕೇಂದ್ರೀತವಾಗಿರುತದೆ. ಅದು ಅವನ
ಮೂಲ ಗುಣ. ಆ ಗುಣವನ್ನು ಬರಿ ಬಹಿರಂಗದ ಸಂಸ್ಕಾರಗಳಿಂದ ಬದಲಾಯಿಸಲು ಸಾಧ್ಯವಿಲ್ಲ.
ಅಂಥವನು ಸಾಮಾನ್ಯ ಮನುಷ್ಯನಂತೆ ವರ್ತಿಸುತ್ತಾನೆ.
ಅಂಥವನಲ್ಲಿ ದೇವರನ್ನು ಕಾಣುವ ಉತ್ಕಟ ಬೆಂಬಲವಾಗಿ, ಸಕಲ ಜೀವಿಗಳಿಗೆ ಲೇಸು ಬಯಸುವ ಮನಸ್ಸಾಗಲಿ, ಸಾಮಾಜಿಕ ಹಿತಚಿಂತನೆಯಾಗಲಿ ಇರುವುದಿಲ್ಲ. ಅವನಲ್ಲಿ ಭಕ್ತನನ್ನು ಕಾಣಲು ಸಾಧ್ಯವಾಗದು.
ಕೂಡಲಚೆನ್ನಸಂಗಮದೇವಾ
ಪೂರ್ವಗುಣವಳಿದ ಪುನರ್ಜಾತನಾಗದನ್ನಕ್ಕ ?
ಚೆನ್ನಬಸವಣ್ಣನವರು
ಕೂಡಲ ಚನ್ನಸಂಗಯ್ಯನಿ ಭಕ್ತನಾಗುವವನು ಹೇಗಿರಬೇಕು ಎಂದು ಹೇಳುತ್ತಾರೆ.
ಬೆಲ್ಲದ ಸಹಯೋಗದಲ್ಲಿ ಬೇವು ತನ್ನ ಕಹಿಯನ್ನು ಕಳೆದುಕೊಳ್ಳಬೇಕು.
ಕಸ್ತೂರಿಯ ಸಹವಾಸದಲ್ಲಿ ಈರುಳ್ಳಿ ತನ್ನ ದುರ್ವಾಸನೆ ಕಳೆದುಕೊಳ್ಳಬೇಕು. ಮನಸೆಂಬ ಕಸಗಾಯಿ ಮಾಗಿ ರುಚಿಯಾದ ಫಲವಾಗಬೇಕು. ಅಂತೆಯೇ
ಭಕ್ತನಾಗುವವನ ಅಂತರಂಗಕ್ಕೆ
ಸಂಸ್ಕಾರವಾಗಬೇಕು.
ಅವನಲ್ಲಿ ಸಾಮಾನ್ಯ ಮನುಷ್ಯನಲ್ಲಿಯ ಗುಣಗಳು ಅಳಿಯಬೇಕು.ಮೂಲ ಗುಣಗಳು ನಾಶವಾಗುವ ಪ್ರಕ್ರಿಯೆಗೆ ಮನವನ್ನು ಹದಗೊಳಿಸಿ ಕೊಳ್ಳಬೇಕು . ಹೊಸಹುಟ್ಟು ಪಡೆದವನಂತೆ ತನ್ನನ್ನು ಬದಲಾಯಿಸಿಕೊಳ್ಳಬೇಕು.
ದೌರ್ಬಲ್ಯಗಳನ್ನು ಮೀರಬೇಕು.ಅಂತರಂಗ ಶುದ್ದವಾಗಬೇಕು.ದೈವತ್ವದ ಕಡೆಗೆ ಸಾಗಬೇಕು.ಅಂಥವನು ಮಾತ್ರ
ಭಕ್ತನಾಗಲು ಸಾಧ್ಯ ಎಂದು ಚೆನ್ನಬಸವಣ್ಣ ನವರು ಹೇಳಿದ್ದಾರೆ. ಬೇವಿಗೆ ಮನುಷ್ಯನ ಮಾಲಗಣವನ್ನು,
ಹಣ್ಣಿನ ಪಕ್ವತೆಗೂ ಅಂತರಂಗ ಪಕ್ವತೆಗೂ ಸುಂದರ ಹೋಲಿಕೆಯನ್ನು ಮಾಡಿ ಹೇಳಿದ್ದಾರೆ.