ಅಕ್ಕನೆಡೆಗೆ- ವಚನ – 28
ಭವದ ಮುಕ್ತಿ – ಐಕ್ಯದ ಸಾಕ್ಷಾತ್ಕಾರ
ಮುತ್ತು ನೀರಲಾಯಿತ್ತು
ವಾರಿಕಲ್ಲು ನೀರಲಾಯಿತ್ತು
ಉಪ್ಪು ನೀರಲಾಯಿತ್ತು
ಉಪ್ಪು ಕರಗಿತ್ತು
ವಾರಿಕಲ್ಲು ಕರಗಿತ್ತು
ಮುತ್ತು ಕರಗಿದುದನಾರೂ ಕಂಡವರಿಲ್ಲ
ಈ ಸಂಸಾರಿಮಾನವರು ಲಿಂಗವಮುಟ್ಟಿ ಭವಭಾರಿಗಳಾದರು
ನಾ ನಿಮ್ಮ ಮುಟ್ಟಿ ಕರಿಗೊಂಡೆನಯ್ಯಾ ಚೆನ್ನಮಲ್ಲಿಕಾರ್ಜುನಯ್ಯಾ
ಅಕ್ಕಮಹಾದೇವಿ ನಿಸರ್ಗ ಪ್ರಿಯೆ. ಈ ಸುಂದರ ಪ್ರಕೃತಿಯನ್ನು ಅನನ್ಯವಾಗಿ ಪ್ರೀತಿಸುವ ಭಾವನಾತ್ಮಕ ಮನಸು. ಅವಳ ಅನೇಕ ವಚನಗಳಲ್ಲಿ ಪ್ರಕೃತಿಯೇ ಪ್ರತಿಮೆಗಳಾಗಿ ನಿಲ್ಲುತ್ತವೆ. ಅಂತಹುದೇ ಒಂದು ವಚನ ಮೇಲಿನದು. ಇಲ್ಲಿ ನೈಸರ್ಗಿಕವಾಗಿ ಲಭ್ಯವಾಗುವ ವಸ್ತುಗಳನ್ನು ಮನುಷ್ಯನ ಅಸ್ಮಿತೆಗೆ ಹೋಲಿಸಲಾಗಿದೆ.
ಈ ವಚನದಲ್ಲಿ ಸಮುದ್ರದ ನೀರಿನಿಂದ ಸಿಗುವ ಮೂರು ವಸ್ತುಗಳ ಕುರಿತು, ಅನೂಹ್ಯವಾದ ಸಂಗತಿಗಳನ್ನು ಅಕ್ಕ ಅನಾವರಣಗೊಳಿಸುತ್ತಾಳೆ. ಮುತ್ತು, ವಾರಿಕಲ್ಲು ಮತ್ತು
ಉಪ್ಪು, ಇವುಗಳು ಸಮುದ್ರದಿಂದಲೇ ದೊರೆಯುತ್ತವೆ.
‘ಮುತ್ತು ನೀರಲಾಯಿತ್ತು’ ಎಂದರೆ ಸಮುದ್ರದಲ್ಲಿ ಮುತ್ತು ಹುಟ್ಟುವ ಬಗೆಯನ್ನು ವಿವರಿಸುತ್ತಾಳೆ. “ಸ್ವಾತಿ ಮಳೆ ಬಂದಾಗ ಜಾತಿ ಮತ್ತು ಹುಟ್ಟುತ್ತದೆ” ಎನ್ನುವ ಅನುಭವದ ಮಾತಿದೆ. ಅದರಂತೆ ಸ್ವಾತಿ ಮಳೆ ಸುರಿಯುವಾಗ ಕಪ್ಪೆ ಚಿಪ್ಪುಗಳು ಬಾಯ್ದೆರೆದಿರುತ್ತವೆ. ಮಳೆಯ ಆ ಹನಿಗಳು ಅದರೊಳಗೆ ಬೀಳುತ್ತವೆ. ನಂತರ ಕಪ್ಪೆ ಚಿಪ್ಪು ಮುಚ್ಚಿಕೊಳ್ಳುತ್ತದೆ. ಮುಂದೆ ಕೆಲ ತಿಂಗಳ ನಂತರ ಅದು ಸುಂದರವಾದ ಮುತ್ತಾಗಿ ರೂಪಾಂತರಗೊಳ್ಳುತ್ತದೆ.
‘ವಾರಿಕಲ್ಲು ನೀರಲಾಯಿತ್ತು’ ಎಂದರೆ ಸಮುದ್ರದ ಅತೀ ಶೀತಲವಾದ ತಾಪಮಾನಕ್ಕೆ, ನೀರು ಮಂಜುಗಡ್ಡೆಯ ರೂಪ ಪಡೆಯುತ್ತದೆ.
‘ಉಪ್ಪು ನೀರಲಾಯಿತ್ತು‘ ಎಂದರೆ ಸಮುದ್ರದ ಸೌಳು ನೀರನ್ನು ಸಂಸ್ಕರಿಸಿದಾಗ, ಉಪ್ಪಿನ ರೂಪ ಪಡೆಯುತ್ತದೆ. ಅಕ್ಕ ಹೇಳುವ ಈ ಮೂರು ಉದಾಹರಣೆಗಳನ್ನು ಗಮನಿಸಿದಾಗ, ಇದಲಿರುವ ಸತ್ಯ ವೈಜ್ಞಾನಿಕವಾದುದು ಎನ್ನುವುದು ವಿಶೇಷ.
ವಚನದ ಮುಂದಿನ ಸಾಲುಗಳು ಮುತ್ತು, ವಾರಿಕಲ್ಲು ಮತ್ತು ಉಪ್ಪು, ಇವುಗಳ ಗುಣಧರ್ಮವನ್ನು ಸೂಚಿಸುತ್ತದೆ. ನೀರಿನಿಂದಲೇ ತಯಾರಾದ ಉಪ್ಪು, ನೀರಿಗೆ ಹಾಕಿದರೆ ಕರಗುತ್ತದೆ. ತಂಪು ವಾತಾವರಣದಲ್ಲಿ ನೀರಿನಿಂದಲೇ ಶಿಥಿಲಗೊಂಡ ವಾರಿಕಲ್ಲು, ಉಷ್ಟಾಂಶ ಹೆಚ್ಚಾದಾಗ ಕರಗಿ ಹೋಗುತ್ತದೆ. ಆದರೆ ಅದೆ ನೀರಿನಿಂದಲೇ ಮುತ್ತು ರೂಪ ಪಡೆಯುತ್ತದಾದರೂ, ಗಟ್ಟಿಯಾಗಿರುತ್ತದೆ. ಅದು ಕರಗಿ ಹೋದುದನ್ನು ಯಾರೂ ನೋಡಿಲ್ಲ.
ಈ ಮೂರು ವಸ್ತುಗಳ ಮೂಲ ರೂಪ ನೀರು. ಆದರೆ ಅದು ರೂಪಾಂತರವಾದ ಮೇಲೆ ಉಪ್ಪು, ವಾರಿಕಲ್ಲು, ಮುತ್ತು ಆಗುತ್ತವೆ. ಉಪ್ಪು ಹಾಗೂ ವಾರಿಕಲ್ಲು ನೀರಲ್ಲಿ ನೀರಾದರೆ, ಮುತ್ತು ಹಾಗೇ ಉಳಿಯುತ್ತದೆ. ಒಡೆದರೂ, ಒಡೆಯದಂತೆ ಗಟ್ಟಿಯಾಗಿ ನಿಲ್ಲುತ್ತದೆ.
ಈ ವಚನದ ಕೊನೆಯ ಸಾಲುಗಳು,
‘ಈ ಸಂಸಾರಿಮಾನವರು ಲಿಂಗವ ಮುಟ್ಟಿ ಭವಭಾರಿಗಳಾದರು, ನಾ ನಿಮ್ಮ ಮುಟ್ಟಿ ಕರಿಗೊಂಡೆನಯ್ಯಾ ಚೆನ್ನಮಲ್ಲಿಕಾರ್ಜುನಯ್ಯಾ’ ಎಂದಿದೆ.
ಇದರಲ್ಲಿ ಪ್ರಾಪಂಚಿಕ ಸುಖದಲ್ಲಿ ಮುಳುಗಿದವರ ಕುರಿತು ಮತ್ತು ತನ್ನ ಬಗ್ಗೆ ಅಕ್ಕ ಹೇಳಿಕೊಂಡಿದ್ದಾಳೆ. ನಾವು ಸಂಸಾರಿಗಳು ಯಾವತ್ತೂ ಸಂಸಾರದಲ್ಲೇ ಇರುತ್ತೇವೆ. ನಿತ್ಯ ಲಿಂಗ ಪೂಜೆ ಮಾಡಿಕೊಂಡರೂ ಅದು ಯಾಂತ್ರಿಕವಾಗಿರುತ್ತದೆ. ಕೈಯಲ್ಲಿ ಲಿಂಗ ಹಿಡಿದಿದ್ದರೂ ಅದರ ಮಹತ್ವವನ್ನು ಗುರುತಿಸುವಲ್ಲಿ, ಆಂತರಿಕ ದರ್ಶನ ಪಡೆಯುವಲ್ಲಿ, ವಿಫಲರಾಗುತ್ತೇವೆ. ಹಾಗಾಗಿ ಅನುಭಾವದ ಹಂತ ತಲುಪುವುದು ಸಾಧ್ಯವಾಗುವುದಿಲ್ಲ. ಭವ ಬಂಧನದಲ್ಲಿ ಸಿಲುಕಿ ಒದ್ದಾಡುತ್ತ ಆಯುಷ್ಯ ಕ್ಷೀಣಿಸಿಕೊಳ್ಳುತ್ತೇವೆ.
ಆದರೆ ಅಕ್ಕ ತನ್ನ ಬಗ್ಗೆ ಬಹಳ ಆತ್ಮವಿಶ್ವಾಸದಿಂದ ಹೇಳಿಕೊಳ್ಳುತ್ತಾಳೆ. ಇಲ್ಲಿ ‘ಕರಿಗೊಂಡೆನಯ್ಯಾ’ ಎಂದರೆ ಮುತ್ತಿನಂತೆ ಗಟ್ಟಿಯಾಗುವುದು. ವೈಜ್ಞಾನಿಕವಾದ ಇಷ್ಟಲಿಂಗ ಪೂಜೆಯಿಂದ ಅಕ್ಕ ಅಂತರಂಗದ ಪಯಣ ಬೆಳೆಸಿ, ಅನುಭವದಿಂದ ಅನುಭಾವಕ್ಕೇರಿದ ಸ್ಥಿತಿಯನ್ನು ನಮಗೆ ತಿಳಿಸುತ್ತಾಳೆ.
‘ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ
ಪಾತಾಳದಿಂದವೆ ಅತ್ತತ್ತ ನಿಮ್ಮ ಶ್ರೀಚರಣ
ಬ್ರಹ್ಮಾಂಡದಿಂದವೆ ಅತ್ತತ್ತ ನಿಮ್ಮ ಶ್ರೀಮಕುಟ
ಅಗಮ್ಯ ಅಗೋಚರ ಅಪ್ರತಿಮ ಲಿಂಗವೆ
ಕೂಡಲಸಂಗಮದೇವಯ್ಯಾ
ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ’
ಬಸವಣ್ಣನ ಮೇಲಿನ ವಚನದಿಂದ ಎಲ್ಲದರ ಮೂಲ ಲಿಂಗವೆಂದು ತಿಳಿದು ಬರುತ್ತದೆ. ನಾವು ಮನುಷ್ಯರೆಲ್ಲರೂ ಲಿಂಗ ಮೂಲದಿಂದಲೇ ಹುಟ್ಟಿದ್ದರೂ, ಅದನ್ನು ಅರಿಯುವುದು ಸುಲಭವಲ್ಲ. ಹಾಗೆ ಅರಿತವಳು ತಾನು ಎಂದು ಅಕ್ಕ ಹೇಳಿಕೊಂಡಿದ್ದಾಳೆ.
‘ಆನು ನಿಮ್ಮನ್ನು ನನ್ನೊಳಗೆ ಅರಿದರಿದು ಹೆಪ್ಪುಗಟ್ಟಿದೆನಯ್ಯ ಚೆನ್ನಮಲ್ಲಿಕಾರ್ಜುನ’ ಎಂದು ಚೆನ್ನಮಲ್ಲಿಕಾರ್ಜುನನ ಮುಖಾಂತರ ನಮಗೆ ಹೇಳುತ್ತಾಳೆ.
ತನ್ನನ್ನು ತಾನು ಅರಿಯುವುದರ ಮೂಲಕ, ತನ್ನ ಲಿಂಗವನ್ನೇ ತಾನು ಸ್ವಯಂ ದರ್ಶನ ಮಾಡಿಕೊಂಡು, ಭವದ ಬಂಧನದಿಂದ ಬಿಡುಗಡೆಗೊಂಡು, ಐಕ್ಯದ ಸಾಕ್ಷಾತ್ಕಾರವಾದುದನ್ನು ಅನಾವರಣಗೊಳಿಸುತ್ತಾಳೆ.
ಈ ವಚನವನ್ನು ಒಟ್ಟಾರೆಯಾಗಿ ಗ್ರಹಿಸಿದಾಗ, ಅಕ್ಕ ತನ್ನ ಸಾಧನೆ ಕುರಿತು ಹೇಳಿಕೊಂಡಿರುವುದು ವೇದ್ಯವಾಗುತ್ತದೆ. ಯಾರು ತನ್ನನ್ನು ತಾನು ಅರಿತು ತನ್ನ ಮೂಲ ಸ್ವರೂಪವನ್ನು ತಿಳಿದುಕೊಂಡು, ತನ್ನಲ್ಲಿಯೇ ತಾನಾಗಿ ಇರುತ್ತಾರೋ, ಅವರು ಕಪ್ಪೆ ಚಿಪ್ಪಿನೊಳಗಿನ ಮುತ್ತಿನಂತೆ ಇರುತ್ತಾರೆ. ಇಲ್ಲಿ ಅಕ್ಕನಿಗಿರುವ ಪ್ರಕೃತಿ ಪ್ರೀತಿ ಮತ್ತು ಪ್ರಜ್ಞೆ ಎರಡೂ ಮುಖ್ಯ. ಅವಳದನ್ನು ಸಮೀಕರಿಸಿ ಚಿಂತನೆ ಮಾಡುವ ಬಗೆಯೇ ಅನುಭಾವ ಪಡೆಯಲು ಹೆದ್ದಾರಿಯಾಗುತ್ತದೆ. ಆ ಕಾರಣಕ್ಕಾಗಿ ಈ ವಚನ ಅಕ್ಕನಿಗಿರುವ ಪ್ರಕೃತಿ ಜ್ಞಾನಕ್ಕೆ ಕೈಗನ್ನಡಿ.
ಸಿಕಾ