ಮತ ಹಾಕುತ್ತೇವೆ
ಯಾರು ಏನೆಂದು ತಿಳಿಯದೆ
ನೋಡದೇ ಸುಮ್ಮನೆ
ಮತ ಹಾಕುತ್ತೇವೆ….
ಗಾಂಧಿ ಅಜ್ಜನಮುಂದೆ ಕುಳಿತ
ಮೂರು ಮಂಗಗಳಂತೆ….
ಒಳ್ಳೆಯದನ್ನು ಕೇಳಲಾರದ
ಕಿವುಡರಾಗಿ…..
ಒಳ್ಳೆಯದನ್ನು ಕಾಣಲಾರದ
ಕುರುಡರಾಗಿ….
ಒಳ್ಳೆಯದನ್ನು ಮಾತನಾಡಲಾರದ
ಮೂಗರಾಗಿ…
ಮೌನವಾಗಿ…ನರಸತ್ತವರಂತೆ …
ಮತ ಹಾಕುತ್ತೇವೆ….
ಮಾರಿ ಕೊಳ್ಳುತಿದ್ದೇವೆ ಮತಗಳ
ಮೂರು ಕಾಸಿನ ಆಸೆಗೆ…
ಮಾರು ಹೋಗುತ್ತಿದ್ದೇವೆ
ಸುಳ್ಳು ಆಶ್ವಾಸನೆಯ
ಗಾಳಿ ಮಾತಿನ ಭಾಷೆಗೆ ….
ಸೋತು ಹೋಗುತ್ತಿದ್ದೇವೆ
ಕುಕ್ಕರ್ ಮಿಕ್ಸರ್ ಪಾತ್ರೆಗಳ
ಜಾಲದ ರಾಶಿಗೆ……
ಮತ ಹಾಕುತ್ತೇವೆ ….
ಕುರಿಗಳ ಹಿಂಡಿನಲ್ಲಿ ನಡೆಯುತ್ತಾ…
ಮತ ಹಾಕುತ್ತೇವೆ….
ಜೊಳ್ಳು ಕಾಳುಗಳ ಬಣವೆಗೆ…
ಐದು ವರ್ಷಕ್ಕೊಮ್ಮೆಬರುವ
ಚುನಾವಣೆಯ ಜಾತ್ರೆಯಲಿ….
ಮತದಾರರ ಯಾತ್ರೆಯಲ್ಲಿ…
ಮತ ಹಾಕುತ್ತೇವೆ…..
ಕೊಂಡುಟ್ಟು ಉಂಡು ಹೋದವನೇ
ಜಾಣ….ಇಲ್ಲಿ
ಬಿಕರಿಯಾಗುತಿವೆ ಮತಗಳು
ಸುಳ್ಳು ಆಶ್ವಾಸನೆಯ ತಾಣದಲ್ಲಿ….
ಮೌಲ್ಯ ರೀತಿ ನೀತಿಯ ಬದುಕು
ಎಲ್ಲವೂ ಇಲ್ಲೀಗ ಗೌಣವಿಲ್ಲಿ…
ಕೌಲೆತ್ತಿನಂತೆ ಗೋಣು ಹಾಕುತ
ನಡೆದಿರುವ ಮತದಾರ…
ಗಾಣದ ಸುತ್ತ ತಿರುಗುವ
ಎತ್ತಿನಂತೆ ಕತ್ತು ಎತ್ತದೆ…..
ಮತದಾರನೆಲ್ಲಿಯೂ ಕಾಣಲೊಲ್ಲ.. ..
ಮತಗಳ ಬಿಕರಿ ಬಲು ಜೋರು…
ಸೀರೆ ಪಂಚೆಗಳದೇ ಕಾರುಬಾರು…
ಹಣ ಹೆಂಡ.. ತುಂಡು ಗುಂಡುಗಳ
ಸುರಿಮಳೆ….
ವೋಟಿಗಾಗಿ ಗರಿ ಗರಿ ನೋಟಿನ
ಸುರಿಮಳೆ….
ಚುನಾವಣೆಯ ಮಾರುಕಟ್ಟೆಯಲ್ಲಿ
ವ್ಯಾಪಾರ ಬಲು ಜೋರು….
…ಮತಗಳ ಹರಾಜು….
ಎತ್ತ ಏನು ಎನ್ನದೇ ಎಚ್ಚೆತ್ತು ಕೊಳ್ಳದೇ
ಸುಮ್ಮನೇ ಬೆಪ್ಪರಂತೆ
ಮತ ಹಾಕುತ್ತೇವೆ….
ಮಂದೆಯಲ್ಲಿಯ ಕುರಿಗಳಂತೆ…
ಮತಗಳ ಮಾರಾಟ ನಿಲ್ಲಲಿ…
ಅರಿತು ನಡೆದು ಮತವ ಹಾಕಿ…
ಭವ್ಯ ಭಾರತ ಕನಸು ನನಸಾಗಿಸಿ..
ರಾಷ್ಟ್ರ ಕ್ರಾಂತಿ ಶಾಂತಿ ನೆಲೆಸಲಿ…
ವಿಕಾಸಶೀಲ ರಥವನೇರಿ
ಅಭಿವೃದ್ಧಿ ಪಥದೀ ಸಾಗಲಿ….