ಒಳಗಣ ಜ್ಯೋತಿಯ ಬೆಳಗ ಬಲ್ಲವರಿಲ್ಲ

ಅಂತರಂಗದ ಅರಿವು ವಿಶೇಷ ಲೇಖನ

ಒಳಗಣ ಜ್ಯೋತಿಯ ಬೆಳಗ ಬಲ್ಲವರಿಲ್ಲ

ಪಾತಾಳದಿಂದತ್ತ ಮಾತ ಬಲ್ಲವರಿಲ್ಲ.
ಗಗನದಿಂದ ಮೇಲೆ ಅನುಭಾವ ತಾನಿಲ್ಲ.
ಒಳಗಣ ಜ್ಯೋತಿಯ ಬೆಳಗಬಲ್ಲವರಿಲ್ಲ.
ಹೊರಗಣ ಹೊರಗನು ಅರಿಯ ಬಲ್ಲವರಿಲ್ಲ.
ಹಿಂದಣ ಹಿಂದನು, ಮುಂದಣ ಮುಂದನು
ತಂದೆ ತೋರಿದ ನಮ್ಮ ಗುಹೇಶ್ವರನು.

                                       -ಅಲ್ಲಮ ಪ್ರಭುದೇವರು

ಸ್ವರ್ಗ ನರಕಗಳ ಕಲ್ಪನೆಯನ್ನು
ಅಲ್ಲಗಳೆದು ಮನುಷ್ಯ ತಾನು ಬದುಕಿರುವ ಪರಿಸರದೊಂದಿಗೆ ತನ್ನ ಅಂತ ಶಕ್ತಿಯಿಂದ ಸರಿಯಾದ ಹೊಂದಾಣಿಕೆ ಮಾಡಿಕೊಂಡು ವಾಸ್ತವದಲ್ಲಿ ಬದುಕಬೇಕು ಎನ್ನುವ ಮಹತ್ತರ ಸಂದೇಶವನ್ನು ಈ ವಚನ ಸಾರುತ್ತದೆ.
ಭೂತಕಾಲದ ಆಧಾರದ ಮೇಲೆ ಮತ್ತು ಭವಿಷ್ಯತ್ಕಾದ ಆಲೋಚನೆಯ ಮೇಲೆ ವರ್ತಮಾನವನ್ನ ನಾವು ಹೇಗೆ ರೂಪಿಸಿಕೊಳ್ಳಬೇಕು ವರ್ತಮಾನದೊಂದಿಗೆ ವ್ಯವಹರಿಸುವಾಗ ನಮ್ಮೊಳಗಿನ ಅಂತ ಶಕ್ತಿಯನ್ನು ಹೇಗೆ ಜಾಗ್ರತಗೊಳಿಸಬೇಕು ಎನ್ನುವುದನ್ನು ಈ ವಚನದಲ್ಲಿ ಅಲ್ಲಮಪ್ರಭುಗಳು ಬಹಳ ಸುಂದರವಾಗಿ ಹೇಳಿದ್ದಾರೆ

ಪಾತಾಳದಿಂದತ್ತ ಮಾತ ಬಲ್ಲವರಿಲ್ಲ.
ಭಾರತೀಯ ಧರ್ಮಗಳಲ್ಲಿ ಪಾತಾಳವೆಂದರೆ ಬ್ರಹ್ಮಾಂಡದ ನೆಲದಡಿಯ ಪ್ರಾಂತ್ಯ.
ಹಿಂದೂ ವಿಶ್ವವಿಜ್ಞಾನದಲ್ಲಿ ಬ್ರಹ್ಮಾಂಡವನ್ನು ಮೂರು ಜಗತ್ತುಗಳಾಗಿ ವಿಂಗಡಿಸಲಾಗಿದೆ. ಸ್ವರ್ಗ; ಮೇಲಿನ ಪ್ರದೇಶಗಳು. ಪೃಥ್ವಿ; ಭೂಮಿ ಮತ್ತು ಪಾತಾಳ. ಪಾತಾಳವೂ ಏಳು ಪ್ರದೇಶಗಳು ಅಥವಾ ಏಳು ಲೋಕಗಳಿಂದ ಕೂಡಿದೆ ಅವುಗಳಲ್ಲಿ 7ನೇ ಮತ್ತು ಅತ್ಯಂತ ಕೆಳಗಿನದನ್ನು ಪಾತಾಳ ಅಥವಾ ನಾಗಲೋಕ ಎಂದು ಕರೆಯಲಾಗುತ್ತದೆ ದಾನವರು ದೈತ್ಯರು ಯಕ್ಷರು ಮತ್ತು ನಾಗರು ಪಾತಾಳ ಪ್ರದೇಶದಲ್ಲಿ ಇರುತ್ತಾರೆ ಎನ್ನುವ ನಂಬಿಕೆ ಇದೆ. ಆದರೆ ವಾಸ್ತವವಾಗಿ
ಪಾತಾಳದಿಂದ ಆಚೆಗೆ ಇರುವವರ ಜೊತೆಗೆ ನಾವು ಯಾವುದೇ ರೀತಿಯ ಸಂವಹನವನ್ನು ಮಾಡಲು ಸಾಧ್ಯವಿಲ್ಲ ಅದಕ್ಕೆ ಪಾತಾಳದಿಂದತ್ತ
ಮಾತು ಬಲ್ಲವರಿಲ್ಲ ಅಂದರೆ.ಸಾಗರದ ಆಳದಲ್ಲಿ ಅಗಾಧ ಜೀವರಾಶಿಗಳು ಇವೆ. ಆದರೆ ಅವುಗಳ ಜೊತೆಗೆ ಮಾತನಾಡಲು ಸಾಧ್ಯವಿಲ್ಲ.

ಗಗನದಿಂದ ಮೇಲೆ ಅನುಭಾವ ತಾನಿಲ್ಲ.
ಗಗನದಿಂದ ಮೇಲೆ ಹೋದ ಹಾಗೆ ನಿರ್ವಾತ ಪ್ರದೇಶವಿದೆ. ಅಲ್ಲಿ ವಾಯುವಿನ ಸಂಚಲನವಿಲ್ಲ ವಾಯು ಇಲ್ಲದೆ ಜೀವ ರಾಶಿಗಳು ಇರಲಾರವು ಜೀವರಾಶಿಗಳ ಇಲ್ಲದೆ ಅನುಭವವು ಇರಲಾರದು. ಹಾಗಾಗಿ ಗಗನದಿಂದ ಮೇಲೆ ಅನುಭಾವ ತಾನಿಲ್ಲ ಎಂದು ಹೇಳಿದ್ದಾರೆ.
ಸ್ವರ್ಗದ ಕಲ್ಪನೆಯನ್ನು ವೈಜ್ಞಾನಿಕವಾಗಿ ನಿರಾಕರಿಸುತ್ತಾರೆ

ಒಳಗಣ ಜ್ಯೋತಿಯ ಬೆಳಗಬಲ್ಲವರಿಲ್ಲ
ಹೊರಗಣ ಕತ್ತಲೆಯನ್ನ ಓಡಿಸಲು ನಾವು ಜ್ಯೋತಿಯನ್ನು ಬೆಳಗುತ್ತವೆ.
ಹಣತೆ ಎಣ್ಣೆ ಬತ್ತಿ ಇದ್ದರೆ. ಬೆಂಕಿಯ ಸಹಾಯದಿಂದ ಯಾರಾದರೂ ಜ್ಯೋತಿಯನ್ನು ಬೆಳಗಿಸಬಹುದು.
ಆದರೆ ನಮ್ಮೊಳಗಣ ಇರುವ ಜ್ಞಾನದ ಜ್ಯೋತಿಯನ್ನ ಬೆಳಗಿಸಲು ಅರಿವು
ಬೇಕು. ಅರಿವು ಎನ್ನುವ ಅಂತಪ್ರಜ್ಞ ಜಾಗ್ರತವಾದಾಗ ನಮ್ಮೊಳಗಣ ಜ್ಯೋತಿಯನ್ನ ಬೆಳಗಿಸಿಕೊಳ್ಳಲು ಸಾಧ್ಯ. ಅದನ್ನು ಬೇರೆಯವರು ಬೆಳಗಲು ಸಾಧ್ಯವಿಲ್ಲ. ವಾಸ್ತವ ಸತ್ಯಗಳನ್ನ ನಾವೇ ಅರ್ಥ ಮಾಡಿಕೊಳ್ಳಬೇಕು.

ಹೊರಗಣ ಹೊರಗನು ಅರಿಯ ಬಲ್ಲವರಿಲ್ಲ.
ಯಾವಾಗ ನಾವು ನಮ್ಮೊಳಗಣ ಜ್ಯೋತಿಯನ್ನ ಬೆಳಗಿಸಿಕೊಳ್ಳಲು ಸಾಧ್ಯವಿಲ್ಲವೋ. ನಮ್ಮನ್ನು ನಾವು ಅರಿತುಕೊಳ್ಳಲು ಸಾಧ್ಯವಿಲ್ಲ. ಆವಾಗ ನಮ್ಮ ಹೊರಗಿನ ಪ್ರಪಂಚವನ್ನ ಅರಿಯುವುದು ಕೂಡ ಸಾಧ್ಯವಿಲ್ಲ ಹೊರಗಣ ಹೊರಗೂ ಎಂದರೆ ನಮ್ಮ ಬಾಹ್ಯ ಪ್ರಪಂಚದೊಂದಿಗೆ ನಾವು ವ್ಯವಹರಿಸುವಾಗ ಅದನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಭ್ರಮೆ ಕಲ್ಪನೆ ನಂಬಿಕೆಗಳಿಗೆ ಜೋತು ಬೀಳುತ್ತೇವೆ.

ಹಿಂದಣ ಹಿಂದನು, ಮುಂದಣ ಮುಂದನು
ಯಾವಾಗ ಮನುಷ್ಯ ತನ್ನ ಒಳಗನ್ನ ಅಂದರೆ ತನ್ನನ್ನು ತಾನು ಅರ್ಥಮಾಡಿಕೊಳ್ಳಲು ಸೋಲುತ್ತಾನೋ .ಯಾವಾಗ ತನ್ನ ಪರಿಸರವನ್ನ ಅರ್ಥಮಾಡಿಕೊಳ್ಳಲು ಸೋಲುತ್ತಾನೆ ಆವಾಗ ಅವನಿಗೆ ಭೂತಕಾಲದ ತಾರ್ಕಿಕ ಆಲೋಚನೆಗಳು, ಭವಿಷ್ಯತ್ತದ ದೂರದೃಷ್ಟಿ ಕೋನಗಳು ದೊರಕುಲಾರವು. ಭೂತ ಭವಿಷ್ಯತ್‌ಗಳ ಸರಿಯಾದ ಕಲ್ಪನೆ ಇಲ್ಲದ ಮನುಷ್ಯ ವರ್ತಮಾನದಲ್ಲಿ ಸರಿಯಾದ ಹೊಂದಾಣಿಕೆಯನ್ನು ಮಾಡಿಕೊಳ್ಳುವಲ್ಲಿ ವಿಫಲನಾಗುತ್ತಾನೆ.

ತಂದೆ ತೋರಿದ ನಮ್ಮ ಗುಹೇಶ್ವರನು.

ತನ್ನನ್ನು ತಾನು ಅರಿಯುವದರ ಜೊತೆಗೆ ವರ್ತಮಾನದಲ್ಲಿ ತನ್ನ ಅಸ್ತಿತ್ವ ,ಭವಿಷತ್ ನಲ್ಲಿ ತನ್ನ ಯೋಜನೆಗಳು ದೃಷ್ಟಿಕೋನಗಳನ್ನು ರೂಪಿಸಲು ಇತಿಹಾಸವನ್ನು ಆಧರಿಸಬೇಕಾಗುತ್ತದೆ. ಅಂತಹ ಜ್ಞಾನವನ್ನು ಕೊಡುವವನು ಗುಹೇಶ್ವರ ಲಿಂಗನಾಗಿರುತ್ತಾನೆ. ಅವನಲ್ಲಿ ಶರಣಾದರೆ ಇಂಥ ಜ್ಞಾನ ಭಕ್ತನಿಗೆ ಲಭ್ಯವಾಗುತ್ತದೆ. ಭಕ್ತನಾದವನು ಭೂತಭವಿಷತ್ ಮತ್ತು ವರ್ತಮಾನಗಳ ಕುರಿತು ಜ್ಞಾನವನ್ನು ಹೊಂದಿ ವಾಸ್ಥವವಾದಿಯಾಗಿ ಬದುಕುತ್ತಾನೆ ಎನ್ನುವ ಆಶಯವನ್ನು ಈ ವಚನ ವಿವರಿಸುತ್ತದೆ.

ಡಾ. ನಿರ್ಮಲ ಬಟ್ಟಲ

Don`t copy text!