ನಿಮ್ಮನರಿವ ಮದಕರಿಗಲ್ಲದೆ ಕುರಿ ಬಲ್ಲದೆ

ಅಂತರಂಗದ ಅರಿವು -೧೧

ನಿಮ್ಮನರಿವ ಮದಕರಿಗಲ್ಲದೆ ಕುರಿ ಬಲ್ಲದೆ

 

ಕುರಿವಿಂಡು ಕಬ್ಬಿನ ಉಲಿವ ತೋಟವ ಹೊಕ್ಕು
ತೆರನನರಿಯದೆ ತನಿರಸದ
ಹೊರಗಣ ಎಲೆಯನೆ ಮೆಲಿದುವು !
ನಿಮ್ಮನರಿವ ಮದಕರಿಯಲ್ಲದೆ
ಕುರಿ ಬಲ್ಲುದೆ ಕೂಡಲಸಂಗಮದೇವಾ
                                                       – ಬಸವಣ್ಣ
ಸಮಾಜದಲ್ಲಿ ವ್ಯಕ್ತಿ ಎಂತಹ ಪರಿಸರದಲ್ಲಿದ್ದರೂ, ತನ್ನ ಶಕ್ತಿ ಸಾಮರ್ಥ್ಯಗಳಿಗೆ ಅನುಗುಣವಾದ ಆಯ್ಕೆಗಳನ್ನೇ ಮಾಡುತ್ತಾನೆ. ಉನ್ನತವಾದ ಆಯ್ಕೆಗಳು ಅವನಿಂದ ಸಾಧ್ಯವಿಲ್ಲ. ಅದನ್ನು ಅವನಿಂದ ನಿರೀಕ್ಷಿಸಬಾರದು ಎನ್ನುವ ಸಂದೇಶ ಈ ವಚನದಲ್ಲಿದೆ

ಕುರಿವಿಂಡು ಕಬ್ಬಿನ ಉಲಿವ ತೋಟವ ಹೊಕ್ಕು-
ತೆರನನರಿಯದೆ ತನಿರಸದ-
ಹೊರಗಣ ಎಲೆಯನೆ ಮೆಲಿದುವು !
ಕುರಿಯ ಹಿಂಡೂ ಕಬ್ಬಿನ ತೋಟಕ್ಕೆ ಹೊಕ್ಕರು ಅದು ಕಬ್ಬನ್ನು ತಿನ್ನಲಾರದು. ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ, ರಸ ಪೂರ್ಣವಾದ ಕಬ್ಬನ್ನು ಬಿಟ್ಟು ಎಲೆಗಳನ್ನು ಮಾತ್ರ ತಿನ್ನುತ್ತ ಖುಷಿ ಪಡುತ್ತದೆ. ಕಬ್ಬಿನಲ್ಲಿ ಸಿಹಿಯಾದ ರಸ ಇದೆ ಎನ್ನುವ ತಿಳುವಳಿಕೆ ಅದಕ್ಕಿಲ್ಲ ಹಾಗಾಗಿ ಅದರ ಆಯ್ಕೆ ಕಬ್ಬು ಆಗಲಾರದು. ಕಬ್ಬಿನ ಎಲೆಗಳು ಮಾತ್ರ ಅದರ ಆಯ್ಕೆ.

ನಿಮ್ಮನರಿವ ಮದಕರಿಯಲ್ಲದೆ
ಕುರಿ ಬಲ್ಲುದೆ
ಕೂಡಲಸಂಗಮದೇವ

ಹೇಗೆ ಕಬ್ಬಿನ ಮಧುರ ರುಚಿಯನ್ನು ಆನೆ ಮಾತ್ರ ತಿಳಿದಿರುತ್ತದೆಯೋ.ಅದು ಕಬ್ಬಿನ ತೋಟಕ್ಕೆ ಹೊಕ್ಕರ ಕಬ್ಬನ್ನು ಮೇಯುತ್ತದೆ. ಹಾಗೆಯೇ ದೇವರನ್ನು ಅಸ್ತಿತ್ವವನ್ನು ಶರಣ ಮಾತ್ರ ತಿಳಿಯಬಲ್ಲ. ಅದು ಸಾಮಾನ್ಯರಿಂದ ಸಾಧ್ಯವಿಲ್ಲ.ನಡೆ-ನುಡಿಗಳಲ್ಲಿ ಒಂದಾಗಿ ಕಾಯಕದಲ್ಲಿ ನಿರತನಾದವನು ಶರಣ. ಅವನು ತನ್ನ ಕಾಯಕದಲ್ಲಿಯೇ ಕೂಡಲಸಂಗಮದೇವನ ಇರುವನು ಕಾಣುತ್ತಾನೆ. ಸಾಮಾನ್ಯರಿಗೆ ಕಾಯಕವೆಂದರೆ ಕೇವಲ ಕೆಲಸ ಮಾತ್ರ. ಆ ಕೆಲಸದಲ್ಲಿ ದೇವರನ್ನು ಕಾಣುವ ಅರಿವು ಅವರಿಗೆ ಇರಲಾರದು. ಕಬ್ಬಿನ ತೋಟಕ್ಕೆ ಹೊಕ್ಕ ಕುರಿಯಂತೆ ಅವರ ನಿಲುವು
ಎನ್ನುವದನ್ನ ಸುಂದರವಾಗಿ ಕುರಿ ಮತ್ತು ಮುದುಕರಿಗೆ ಹೋಲಿಕೆ ಮಾಡಿ ಹೇಳಿದ್ದಾರೆ.

-ಡಾ. ನಿರ್ಮಲ ಬಟ್ಟಲ

Don`t copy text!