ಕರ್ಮಯೋಗಿ ಸಿದ್ಧರಾಮೇಶ್ವರರು

ಸೋಮವಾರದ ವಿಶೇಷ ಲೇಖನ

ಕರ್ಮಯೋಗಿ ಸಿದ್ಧರಾಮೇಶ್ವರರು

ಶರಣ ಸಿದ್ಧರಾಮೇಶ್ವರರ ಬದುಕಿನ ಸುತ್ತಲೂ ಪವಾಡಗಳೇ ಹೆಣೆದು ಕೊಂಡಿದ್ದರೂ ಅವುಗಳನ್ನು ವೈಜ್ಞಾನಿಕ ದೃಷ್ಟಿಕೋನಕ್ಕೆ ಅಳವಡಿಸಿ ಹೇಳುವುದಾದರೆ ಸೊನ್ನಲಿಗೆ ಗ್ರಾಮದ ಮುದ್ದೇಗೌಡ ಸುಗ್ಗವ್ವೆಯರ ಪುಣ್ಯ ಗರ್ಭದಿಂದ ಕೊನೆಯ ಮಗನಾಗಿ ಮುಪ್ಪಿನಲ್ಲಿ ಜನಿಸುತ್ತಾರೆ.

ಹುಟ್ಟುತ್ತಲೇ ಶಿವಭಕ್ತಿ ಅಳವಟ್ಟುದರಿಂದ ಲೌಕಿಕ ವ್ಯವಹಾರದ ಚೆಲುವು ಚಕ್ಕಂದಗಳಿಗೆ ಆಟ -ಪಾಟಗಳಿಗೆ ಮಾರು ಹೋಗದೆ ಶಿವಪೂಜೆ , ಶಿವಧ್ಯಾನಗಳಿಗೆ ಮನಗೊಟ್ಟು ಮೂಕನಂತಿರುತ್ತಾರೆ. ಬಾಲಕ ಸಿದ್ಧರಾಮನ ನಿಜವಾದ ಭಕ್ತಿ ಪರೀಕ್ಷಿಸಲು ಶಿವ ಜಂಗಮ ವೇಷದಲ್ಲಿ ಕಾಣಿಸಿಕೊಂಡು ತನಗೆ ಅಂಬಲಿ -ಮಜ್ಜಿಗೆ ಬೇಕೆಂದು ತಿಳಿಸುತ್ತಾನೆ. ಕಣ್ಣರಿಯದಿದ್ದರೂ ಕರುಳರಿಯಿತೆಂಬಂತೆ ಜಂಗಮನೇ ತನ್ನ ಶ್ರೀಶೈಲದ ಮಲ್ಲಯ್ಯ ಎಂದು ಗುರುತಿಸಿ ಮಜ್ಜಿಗೆ ತರಲು ಮನೆಗೆ ಹೋದಾಗ ಮಲ್ಲಯ್ಯ ಮಾಯವಾಗಿರುತ್ತಾನೆ.

ಸಿದ್ಧರಾಮ ಮಲ್ಲಯ್ಯನನ್ನು ಹುಡುಕಿಕೊಂಡು ಶ್ರೀಶೈಲಕ್ಕೆ ತೆರಳಿ ಅಲ್ಲೆಲ್ಲಿಯೂ ಕಾಣದೆ ಮಲ್ಲಯ್ಯನಿಗಾಗಿ ಭಕ್ತಿ ಉತ್ಕಟೇಚ್ಛೆಯಲ್ಲಿ ರುದ್ರಗಮ್ಮರಿಗೆ ಹಾರಲು ತಯಾರಾದಾಗ ಮಲ್ಲಯ್ಯ ನಿಜ ಸ್ವರೂಪದಿಂದ ದರ್ಶನ ನೀಡಿ ಸಿದ್ಧರಾಮೇಶ್ವರರು ಸೊನ್ನಲಿಗೆಯಲ್ಲಿ ಮಾಡಬೇಕಾದ ಕಾರ್ಯಗಳು ಬಹಳಷ್ಟಿವೆಯೆಂದು ಮನಗಾಣಿಸಿ , ಆತನಿದ್ದಲ್ಲಿ ತಾನಿರುವುದಾಗಿ ಆಶ್ವಾಸನೆಯಿತ್ತು ಸೊಲ್ಲಾಪುರಕ್ಕೆ ಕಳಿಸುತ್ತಾನೆ.

ಇದೊಂದು ಪುರಾಣಕತೆಯಂತೆ ಎನಿಸಿದರೂ ಸಿದ್ಧರಾಮೇಶ್ವರರ ಬಾಲ್ಯ ಜೀವನದಲ್ಲಿ ಹೀಗೆ ನಡೆದಿರಬೇಕು ಎನ್ನುವುದಕ್ಕೆ ಅವರ ವಚನಗಳು ಮತ್ತು ಸ್ಥಳ ಕುರುಹುಗಳು ಸಾಕ್ಷಿಯಾಗುತ್ತವೆ. ಸಿದ್ಧರಾಮೇಶ್ವರರು ಐತಿಹಾಸಿಕ ವ್ಯಕ್ತಿಯೆ0ಬಲ್ಲಿ ಸಂಶಯ ಇಲ್ಲವೇ ಇಲ್ಲ. ಅವರ ಬಗ್ಗೆ ಸಾಕಷ್ಟು ಶಾಸನಗಳು ಮತ್ತು ತಾಮ್ರಪತ್ರಗಳು ದೊರಕಿವೆ. ಅವರು ಬಾಲ್ಯದಲ್ಲಿ ಹಾರಿಕೊಂಡ ರುದ್ರಗಮ್ಮರಿ ಇದೇ ಎಂದು ಈಗಲೂ ಶ್ರೀಶೈಲದಲ್ಲಿ ಜನ ತೋರಿಸುತ್ತಾರೆ. ಆ ಘಟನೆಗೆ ಸಾಕ್ಷಿರ್ಭೂತವಾಗಿ ಸಿದ್ಧರಾಮೇಶ್ವರರ ವಚನಗಳೂ ಇವೆ.

ನಟ್ಟಡವಿಯೊಳಗೆ ಇರುಳು ಹಗಲೆನ್ನದೆ, ನಾನು ಅಪ್ಪಾ ಅಯ್ಯಾ ಎಂದು ಅರಸುತ್ತ ಹೋದರೆ ನಾನಿದ್ದೇನೆ ಬಾ ಮಗನೆ ಎಂದು ಕರೆದೆನ್ನ ಕಂಬನಿಯ ತೊಡೆದು, ತನ್ನ ನಿಜವ ತೋರಿದ “

ಸಿದ್ಧರಾಮೇಶ್ವರರ ಎಲ್ಲ ಜನ ಜಾಗೃತಿಯ, ಜೀವ ಕಲ್ಯಾಣದ ಕಾರ್ಯಗಳ ಹಿಂದೆ ಬೆಂಬಲಾರ್ಥ ತಾನಿರುವುದಾಗಿ ಶ್ರೀಶೈಲ ಮಲ್ಲಿಕಾರ್ಜುನನು ಆಶ್ವಾಸನೆ ನೀಡಿದ ನಂತರ ಸಿದ್ಧರಾಮೇಶ್ವರರು ಸೊನ್ನಲಿಗೆಗೆ ಹಿಂತಿರುಗುತ್ತಾರೆ. ಮುಖದಲ್ಲಿ ಅಸಾಮಾನ್ಯವಾದ ಶಿವಕಳೆ ಶೋಭಿಸುತ್ತಿರುತ್ತದೆ. ಮನದಲ್ಲಿ ಮಹತ್ತಾದುದನ್ನು ಸಾಧಿಸಬೇಕೆನ್ನುವ ಬಯಕೆ ತುಂಬಿ ತುಳುಕುತ್ತಿರುತ್ತದೆ. ಐಹಿಕ ಭೋಗದಲ್ಲಿ ಸ್ವಾರಸ್ಯವಿಲ್ಲವೆಂದು ಕೌಟುಂಬಿಕ ಸಂಬಂಧಗಳನ್ನೆಲ್ಲ ಕಡಿದುಕೊಂಡು ಲಿಂಗ ಸ್ಥಾಪನೆ, ದೇವಾಲಯಗಳ ನಿರ್ಮಾಣ ,ಕೆರೆಗಳ ಕಟ್ಟುವಿಕೆ, ಮಹಾಪರ್ವಗಳ ಆಯೋಜನೆ ಮೊದಲಾದ ಅಧಿಕ ವೆಚ್ಚಗಳ ಬಯಲಾಡಂಬರ ಕಾರ್ಯಗಳಲ್ಲಿ ನಿರತರಾಗುತ್ತಾರೆ. ಜಂಗಮ ತೃಪ್ತಿ, ಸಕಲ ಚರಾಚರ ಸಂತೃಪ್ತಿಯೇ ದೇವನ ಕೂಡುವ ಬಗೆಯೆಂಬುದು
ಅವರ ತಿಳುವಳಿಕೆಯಾಗಿರುತ್ತದೆ. ಇದೆಲ್ಲವನ್ನು ಅವರು ಒಂಟಿಯಾಗಿಯೇ ಸಾಧಿಸುತ್ತಿರುತ್ತಾರೆ. ಶಿವಶರಣ ಹಾವಿನಹಾಳ ಕಲ್ಲಯ್ಯ ಮಾತ್ರ ಅವರ ಬಲಗೈಯಾಗಿ ದುಡಿಯುತ್ತಿರುತ್ತಾನೆ.

ಒಂದು ದಿನ ಸಿದ್ಧರಾಮೇಶ್ವರರಲ್ಲಿಗೆ ಅಲ್ಲಮ ಪ್ರಭುಗಳು ಬರುತ್ತಾರೆ. ಬಯಲಾಡಂಬರದ ಧಾರ್ಮಿಕ ಕಾರ್ಯಗಳಿಗೋಸುಗ ನೊಂದುಕೊಳ್ಳುತ್ತಾರೆ. ಸಿದ್ಧರಾಮೇಶ್ವರರಿಗೂ ಅಲ್ಲಮಪ್ರಭುಗಳಿಗೂ ವಾದ ವಿವಾದವೇ ನಡೆಯುತ್ತದೆ.ಖ್ಯಾತಿ-ಪೂಜಾ-ಲಾಭ ದಾಸೆಯಿಂದ ದಾನ, ಧರ್ಮ , ಸಮಾರಾಧನೆ ನಡೆಸಿದರೆ ಬಿತ್ತಿದ್ದನ್ನು ಬೆಳೆದುಂಡಂತಾಗುತ್ತದೆ
ಹೊರತು ಶಾಶ್ವತವಾದ ಬ್ರಹ್ಮಾನಂದ ಲಭಿಸುವುದಿಲ್ಲ. ಮನಸ್ಸನ್ನು ಅಳಿಯುವ ತಂತ್ರವನ್ನು ಕಲ್ಯಾಣದ ಬಸವಣ್ಣನಿಂದ ತಿಳಿದುಕೊಳ್ಳಬೇಕೆಂದು ಪ್ರಭುಗಳು ಹೇಳಿ ಸಿದ್ಧರಾಮೇಶ್ವರರನ್ನು ಕಲ್ಯಾಣಕ್ಕೆ ಕರೆಯುತ್ತಾರೆ.

ಕಲ್ಯಾಣದಲ್ಲಿ ಸಿದ್ಧರಾಮೇಶ್ವರರಿಗೆ ಷಟಸ್ಥಲ ಬ್ರಹ್ಮಿ ಚೆನ್ನಬಸವಣ್ಣನವರಿಂದ ಲಿಂಗದೀಕ್ಷಾ ಕಾರ್ಯಕ್ರಮ ನೆರವೇರುತ್ತದೆ. ಅಲ್ಲಿಂದ ಸಿದ್ಧರಾಮೇಶ್ವರರ ಜೀವನದ ಮೂರನೆಯ ಘಟ್ಟ ಆರಂಭವಾಗುತ್ತದೆ. ಅಷ್ಟು ದಿನ ಸೊಲ್ಲಾಪುರದಲ್ಲಿ ತನಗೆ ಸೈಯೆನಿಸಿದ ಮಾರ್ಗದಲ್ಲಿ ನಡೆಯುತ್ತಿದ್ದ ಸಿದ್ಧರಾಮೇಶ್ವರರು ವನದ ಕೋಗಿಲೆ ವನಕೆ ಬಂದಿತೆಂಬಂತೆ ಶರಣ ಸಮೂಹದಲ್ಲಿ ತಮ್ಮ ವಿಶಿಷ್ಟ ಸ್ಥಾನಮಾನವನ್ನು ಗುರುತಿಸಿಕೊಳ್ಳುತ್ತಾರೆ.

ಕಲ್ಯಾಣದಲ್ಲಿ ಬಸವಣ್ಣನವರ ಮಹಾತ್ಮೆಯಿಂದಲೂ ಸಿದ್ಧರಾಮೇಶ್ವರರು ಅಷ್ಟೇ ಪ್ರಭಾವಿತರಾಗುತ್ತಾರೆ. ಶ್ರೀಗುರು ಚೆನ್ನಬಸವಣ್ಣನವರಾದರೂ, ಕಲ್ಯಾಣಕ್ಕೆ ಕರೆತಂದವರು ಪ್ರಭುದೇವರಾದರೂ ಬಸವಣ್ಣನನ್ನು ಕುರಿತು ” ಬಸವ ಸ್ತೋತ್ರ ತ್ರಿವಿಧಿ ” ಎಂಬ ಪ್ರತ್ಯೇಕ
ಗ್ರಂಥ ರಚಿಸಬೇಕಾದರೆ ಬಸವಣ್ಣನವರ ವ್ಯಕ್ತಿತ್ವ ಎಂತಹ ಮೋಡಿ ಮಾಡಿತ್ತೆಂಬ ಕಲ್ಪನೆ ನಮಗೆ ಮೂಡುತ್ತದೆ. ಕಲ್ಯಾಣಕ್ಕೆ ಬರುವ ಪೂರ್ವದಲ್ಲಿ ಸಿದ್ಧರಾಮೇಶ್ವರರಿಗೆ ಬಸವಣ್ಣನವರ ವಾರ್ತೆ ಗೊತ್ತಿರಲಿಲ್ಲವೆಂದೇನೂ ಅಲ್ಲ. ಪರಸ್ಪರ ಪರಿಚಯ ಇರಲಿಲ್ಲ ಅಷ್ಟೇ. ಪ್ರಭುದೇವರು ಕರಸ್ಥಲದನುವನು ಕಲ್ಯಾಣದಲ್ಲಿ ಶರಣ ಬಸವಣ್ಣನಿಂದ ಹೇಳಿಸುವುದಾಗಿ ಬಾರಾ ಎಂದಾಗ
ನಿಮ್ಮ ಕರಸ್ಥಲದ ಘನ ಅತ್ತಿರಲಿ
ನಿಮ್ಮ ಪರಸ್ಥಲದ ಘನ ಇತ್ತಿರಲಿ, ಸಂಗನ ಬಸವಣ್ಣನ ಶ್ರೀ ಪಾದವ ತೋರಿಹೆನೆಂಬ ಮಾತಿಗೆ ಮಾರು ಹೋದೆನು ” ಎಂದು ಉತ್ಸಾಹದಿಂದ ತಯಾರಾಗುತ್ತಾರೆ. ಅಂದರೆ ಆ ಮುಂಚೆ ಬಸವಣ್ಣನವರ ಕೀರ್ತಿವಾರ್ತೆಯಿಂದ ಸಿದ್ಧರಾಮೇಶ್ವರರು ಆಕರ್ಷಿತರಾಗಿದ್ದರೆಂಬುದು ಇದರಿಂದ ಸ್ಪಷ್ಟವಾಗುತ್ತದೆ.

ಅಲ್ಲಮ ಪ್ರಭುಗಳು ಕದಳಿಗೆ ತೆರಳಿದನಂತರ , ಚೆನ್ನಬಸವಣ್ಣನವರು ಶೂನ್ಯ ಸಿಂಹಾಸನದ ಎರಡನೆಯ ಪೀಠಾಧಿಕಾರಿಗಳಾಗಿ , ಅವರು ಉಳುವಿಯಲ್ಲಿ ಲಿಂಗಕ್ಯವಾದ ನಂತರ ಮೂರನೆಯ ಪೀಠಾಧಿ ಕಾರಿಗಳಾಗಿ ಸಿದ್ಧರಾಮೇಶ್ವರರು, ಭಾರ ಹೊರಬೇಕಾಯಿತೆಂದರೆ ಅವರೇ ಕಲ್ಯಾಣದ ಕ್ರಾಂತಿಯ ನಿಜವಾದ ವಾರಸುದಾರರೆನಿಸುತ್ತದೆ.

ಸಿದ್ಧರಾಮೇಶ್ವರರು ಮಹಾನ್ ಪವಾಡ ಪುರುಷರೂ ಆಗಿದ್ದರು. ಸತ್ತವರನ್ನು ಉಜ್ಜೀವಿಸುವ , ಚಿಂತಿತಾರ್ಥವನ್ನು ಭಕ್ತರಿಗೀಯುವ ಸಾಮರ್ಥ್ಯವನ್ನು ಹೊಂದಿದ್ದರೂ ಪರಮ ಶಕ್ತ ಪರಮಾತ್ಮನ ಸೃಷ್ಟಿ -ಲಯ ಕಾರ್ಯದಲ್ಲಿ ತಾನು ಮಧ್ಯ
ಪ್ರವೇಶಿಸುವುದು ಸಲ್ಲದೆಂದು ತಾವಾಗಿ ತಿಳಿದುಕೊಂಡು ಬಾಳುತ್ತಾರೆ. ಪ್ರಾಣಿದಯೆ ಮತ್ತು ಪರೋಪಕಾರ ಅವರ ಜೀವನ ಧ್ಯೇಯವಾಗಿರುತ್ತದೆ. ತಾವು ಪ್ರತಿ ಶ್ರೀಶೈಲವೆಂಬ ರೀತಿಯಲ್ಲಿ ಶ್ರದ್ಧಾ ಭಕ್ತಿಯಿಂದ ನಿರ್ಮಿಸಿದ ಸೊನ್ನಲಪುರದಲ್ಲಿ ವಾಸಿಸಿದವರೆಲ್ಲರಿಗೂ ಸುಖ ಸಮೃದ್ಧಿಗಳು ಉಂಟಾಗಲಿಯೆ0ಬ
ವಿಶಾಲ ಮನೋಭಾವ ಸಿದ್ಧರಾಮೇಶ್ವರರದು. ಕಲ್ಯಾಣ ಕ್ರಾಂತಿಯ ನಂತರ ಕೆಲಕಾಲ ಬಾಳಿ ಕಲ್ಯಾಣದ ಶರಣರ ಮಹಾಮಣಿಹ ಕಾರ್ಯವನ್ನು ಸಾಧ್ಯವಾದಷ್ಟು ಮುಂದುವರೆಸಿ ಈ ಲೋಕದಾಟ ಸಾಕೆನಿಸಿದಾಗ ತಾವು ನಿರ್ಮಿಸಿದ ಕೆರೆಯ ಮಧ್ಯ ದಲ್ಲಿಯೇ ಗುಹೆಯೊಂದನ್ನು ನಿರ್ಮಿಸಿಕೊಂಡು ಸಜೀವ ಸಮಾಧಿಯನ್ನು ಸ್ವೀಕರಿಸುತ್ತಾರೆ. ಅವರು ಬಾಳಿದ ಕಾಲ ಕ್ರಿ.ಶ.1125 ರಿಂದ ಕ್ರಿ. ಶ. 1200 ರವರೆಗೆ. ” ಅರವತ್ತೊಂದು ಸಾವಿರ ವಚನಗಳ ಹಾಡಿ ಹಾಡಿಸೋತಿತೆನ್ನ ಮನ ನೋಡಯ್ಯ ” ಎಂದು ಅವರೇ ಹೇಳಿಕೊಂಡಿದ್ದರೂ 1600 ರಷ್ಟು ವಚನಗಳು ಮಾತ್ರ ಸಿಕ್ಕಿವೆ. ಅವರ ವಚನಾಂಕಿತ ” ಕಪಿಲ ಸಿದ್ಧ ಮಲ್ಲಿಕಾರ್ಜುನಯ್ಯ

ವಚನ ವಿಶ್ಲೇಷಣೆ

ತಾನು ಮಾಡಿದ ಹೆಣ್ಣು ತನ್ನ ತಲೆಯನೇರಿತ್ತು,
ತಾನು ಮಾಡಿದ ಹೆಣ್ಣು ತನ್ನ ತೊಡೆಯನೇರಿತ್ತು,
ತಾನು ಮಾಡಿದ ಹೆಣ್ಣು ಬ್ರಹ್ಮನ ನಾಲಿಗೆಯನೇರಿತ್ತು,
ತಾನು ಮಾಡಿದ ಹೆಣ್ಣು ನಾರಾಯಣನ ಎದೆಯನೇರಿತ್ತು,
ಇದು ಕಾರಣ , ಹೆಣ್ಣು ಹೆಣ್ಣಲ್ಲ , ಹೆಣ್ಣು ಸಾಕ್ಷಾತ್ ಕಪಿಲ ಸಿದ್ಧ ಮಲ್ಲಿಕಾರ್ಜುನ.

ಶಿವಶರಣರು ಮಾನವೀಯ ಸದ್ಭಾವನೆಗಳಿಂದ ಹೆಣ್ಣಿಗೆ ನೀಡಿದ ಪರಮೋಚ್ಚ ಸ್ಥಾನವನ್ನು ಸೊನ್ನಲಿಗೆಯ ಸಿದ್ಧರಾಮೇಶ್ವರರ ಪ್ರಸ್ತುತ ವಚನ ಎತ್ತಿ ಹೇಳುತ್ತದೆ. ಕಲ್ಯಾಣದ ಶಿವಶರಣರ ಕಾಲದಲ್ಲಿಯೂ , ಅದಕ್ಕೆ ಪೂರ್ವದಲ್ಲಿಯೂ ಹೆಣ್ಣಿನ ಜೊತೆ ಬಹಳ ನಿಕೃಷ್ಟ ವರ್ತನೆ ಇದ್ದಿತು. ಹೆಣ್ಣು ಅಬಲೆ , ಹೆಣ್ಣು ಬಹಿಷ್ಟೆ , ಹೆಣ್ಣು ಶೂದ್ರಳು , ಹೆಣ್ಣು ಮಾಯೆ ಎಂದೆಲ್ಲ ಹೇಳಿ , ಧರ್ಮ ಗ್ರಂಥಗಳಲ್ಲಿ ಬರೆದು , ಪುರಸ್ಕಾರ ದೂರಳೆಂದು ಸಾರಿದ್ದರು. ಅಂಥ ದುರ್ಧರ ಪ್ರಸಂಗದಲ್ಲಿ ಹೆಣ್ಣನ್ನು ಸಮೀಪಕ್ಕೆ ಕರೆದುದಲ್ಲದೆ ಧಾರ್ಮಿಕ ಸಂಸ್ಥೆಯೆನಿಸುವ ಅನುಭವ ಮಂಟಪದಲ್ಲಿ ಹೆಣ್ಣಿಗೆ ಗಂಡಿನ ಸರಿಸಮಾನ ಸ್ಥಾನ ನೀಡಿದುದು ಆಗಿನ ಕಾಲದಲ್ಲಿ ಅದ್ಭುತ ಕ್ರಾಂತಿಕಾರಕ ವಿಚಾರವಾಗಿದೆ. ಇಷ್ಟೇ ಅಲ್ಲ ಸನ್ಯಾಸಿ ಶಿವಯೋಗಿಯಾಗಿದ್ದ ಸೊಲ್ಲಾಪುರದ ಸಿದ್ಧರಾಮೇಶ್ವರರು ಇನ್ನೂ ಮುಂದೆ ಹೋಗಿ ಹೆಣ್ಣು ಕೇವಲ ಹೆಣ್ಣಲ್ಲ , ಸಾಕ್ಷಾತ್ ಕಪಿಲ ಸಿದ್ಧ ಮಲ್ಲಿಕಾರ್ಜುನನೆಂದು ಹೇಳಿ ಹೆಣ್ಣಿಗೆ ದೇವರ ಸ್ಥಾನಮಾನವನ್ನು ನೀಡಿದ್ದಾರೆ. ನಿಜವಾಗಿಯೂ ಇದೊಂದು ಎಂಟು ನೂರು ವರ್ಷಗಳ ಪೂರ್ವದಲ್ಲಿಯೇ ತೋರಿದ ಕ್ರಾಂತಿಕಾರಕ ದೃಷ್ಠಿಕೋನವಾಗುತ್ತದೆ ಮಾತ್ರವಲ್ಲ ಪ್ರಗತಿಶೀಲ ವಿಚಾರಧಾರೆಯಾಗುತ್ತದೆ.

ಕಲ್ಯಾಣದ ಶಿವಶರಣರು ಜನ ಮೆಚ್ಚುಗೆ ಗಳಿಸಲೆಂದು ಹೆಣ್ಣಿನ ಬಗ್ಗೆ ಕೇವಲ ಬಾಯುಪಚಾರದ ಮಾತುಗಳನ್ನು ಹೇಳಿದವರಲ್ಲ . ಹೇಳಿದಂತೆ ನಡೆದು ತೋರಿಸಿದವರು. ಅಂತೆಯೇ ಮಹಾದೇವಿಯಕ್ಕನಂತಹ ಗಂಡು ಶಿವಶರಣೆ ಎತ್ತರೆತ್ತರ ಬೆಳೆಯಲು ಸಾಧ್ಯವಾಯಿತು. ನೀಲಮ್ಮನಂಥ ಶಿವಶರಣೆ ತಾನು ಬಸವಣ್ಣನವರಿಗೆ ವಿಚಾರ ಪತ್ನಿ ಎಂದು ಕರೆದುಕೊಳ್ಳಲು ಶಕ್ಯವಾಯಿತು. ಶಿವಶರಣರು ತೆರೆದ ಹೃದಯದಿಂದ , ನೈಜ ಕಳಕಳಿಯಿಂದ ಹೆಣ್ಣಿಗೆ ಪೂರ್ಣ ಸ್ವಾತಂತ್ರ್ಯ ನೀಡಿದರೆಂದೇ ಏಕಕಾಲದಲ್ಲಿ ಎಪ್ಪತ್ತೇಳು ಜನ ವಚನಕಾರ್ತಿಯರು ಸಾಹಿತ್ಯ ರಚನೆ ಮಾಡುವಂಥ ಜಾಗೃತಿಯನ್ನು ತೋರಿದರು. ಆ ಒಂದು ಕಾಲ ಬಿಟ್ಟರೆ ಮಹಿಳೆಯರ ಸಾಹಿತ್ಯ ವನ್ನು ದೊಡ್ಡ ಪ್ರಮಾಣದಲ್ಲಿ ಓದಲು ಆಧುನಿಕ ಕಾಲಕ್ಕೇ ಬರಬೇಕಾಗುತ್ತದೆ. ಇದು ಸಾಮಾನ್ಯ ಸಂಗತಿಯಲ್ಲ.

ನಮ್ಮ ತ್ರಿಮೂರ್ತಿ ದೇವತೆಗಳು ಹೆಣ್ಣಿಗೆ ವೈಯಕ್ತಿಕವಾಗಿ ಆಯಕಟ್ಟಿನ ಸ್ಥಾನಗಳನ್ನು ನೀಡುವುದಕ್ಕೆ ಹೆಣ್ಣಿನ ತ್ಯಾಗ, ಪರಿಶ್ರಮ , ಸಹನೆ , ವಾತ್ಸಲ್ಯ , ಸರ್ವಸಮರ್ಪಣೆ ಭಾವವೇ ಕಾರಣ. ಅಂಥ ಆದರ್ಶ ಪ್ರಾಯ ಗುಣಗಳು ಹೆಣ್ಣಿನಲ್ಲಿವೆ. ಹೆಣ್ಣಾದ ಗಂಗೆಯನ್ನು ಶಿವ ತಲೆಯ ಮೇಲೆ ಕೂಡಿಸಿಕೊಂಡಿದ್ದಾನೆ. ಏಕೆಂದರೆ ಆಕೆಯ ಸರ್ವಾರ್ಪಣ ಗುಣ ಅದ್ವೀತಿಯ. ಇನ್ನೊಬ್ಬಳು ಹೆಂಡತಿ ಪಾರ್ವತಿಯನ್ನು ತೊಡೆಯ ಮೇಲೆ ಕೂಡಿಸಿಕೊಂಡಿದ್ದಾನೆ.ಕಾರಣವೆಂದರೆ ಪಾರ್ವತಿಯದು ನಿಷ್ಠಾಪೂರ್ವಕವಾದ ಭಕ್ತಿ. ಬ್ರಹ್ಮನು ಸರಸ್ವತಿಯನ್ನು ನಾಲಿಗೆಯ ಮೇಲೆ ಕೂಡಿಸಿಕೊಂಡಿದ್ದುದಕ್ಕೆ ಆಕೆ ಅತ್ಯಗಾಧ ಜ್ಞಾನಿಯೆಂಬುದೇ ಕಾರಣ. ಲಕ್ಷ್ಮಿಯನ್ನು ವಿಷ್ಣು ತನ್ನ ಎದೆಯಲ್ಲಿ ತುಂಬಿಸಿಕೊಳ್ಳಲು ಆಕೆಯ ಅಪೂರ್ವ ಸೇವಾಭಾವನೆಯೇ ಮುಖ್ಯ ಕಾರಣ. ಹೀಗಿರುವಾಗ ಸ್ವಾರ್ಥ ಲಾಲಸಿಗಳಾದ ಹುಲುಮಾನವರು ಪುರುಷ ಬಲವನ್ನು ತೋರಿಸಿ ಹೆಣ್ಣು ಕೀಳು , ಕಲ್ಮಶ ಪೂರ್ಣಳು, ಆಕೆ ಮೋಕ್ಷಕ್ಕೆ ಅನರ್ಹಳು. ಅದಕ್ಕಾಗಿ ಅವಳಿಗೆ ದೇವರ ಪೂಜಾ ಹಕ್ಕು ನೀಡಬಾರದು ಎಂದು ಮಸಲತ್ತು ನಡೆಸಿದರೆ ಈ ಬುದ್ಧಿಗೇಡಿತನಕ್ಕೆ ಏನೇನ್ನಬೇಕು ? ಹೆಣ್ಣು ದೈಹಿಕವಾಗಿ ಬಲಹೀನಳು ಎಂಬ ಒಂದೇ ಒಂದು ಕಾರಣಕ್ಕೆ ಪುರುಷ ಪ್ರಧಾನ ಸಮಾಜವು ಅವಳನ್ನು ಶೂದ್ರಳೆಂದು ಅವಮಾನಿಸಲು ಕಾರಣವಾಗಿದೆ. ಒಂದು ವೇಳೆ ಆಕೆ ಶಾರೀರಿಕವಾಗಿ ಶಕ್ತಿಶಾಲಿಯಾಗಿದ್ದರೆ ಗಂಡುಗಳ ಸ್ಥಾನ ಇಂದಿನ ಹೆಣ್ಣಿನ ಸ್ಥಾನದಲ್ಲಿರುತ್ತಿತ್ತು.

ಇಂದಿನ ವೈಜ್ಞಾನಿಕ ಮತ್ತು ಯಾಂತ್ರಿಕ ಯುಗದಲ್ಲಿ ನಿಂತು ಆಲೋಚಿಸಿದಾಗಲೂ ಆಕೆ ಸಹನೆಯ ಸಾಕಾರಮೂರ್ತಿಯಾಗಿ ತೋರುತ್ತಾಳೆ. ತ್ಯಾಗದ ಪ್ರತ್ಯಕ್ಷ ಪ್ರತಿಮೆಯಾಗಿಯೂ ಗೋಚರಿಸುತ್ತಾಳೆ. ಒಂದು ಮನೆಯಲ್ಲಿ ಹುಟ್ಟಿ, ಆ ಮನೆಯ ಮೇಲೆ ತನ್ನದೇನೂ ಹಕ್ಕಿಲ್ಲವೆಂಬಂತೆ ತೊರೆದು, ಇನ್ನೊಂದು ಮನೆಯಲ್ಲಿ ಪೂರ್ಣ ಲಕ್ಷ ಕೊಟ್ಟು ತನ್ನದಾಗಿ ಮಾಡಿಕೊಳ್ಳುವುದು ಅಸಾಮಾನ್ಯ ಕೃತಿಯಾಗಿ ಕಂಡುಬರುತ್ತದೆ. ಆದರೆ ಸೇವೆ -ಸಹನೆಯ ಉತ್ಕೃಷ್ಟ ಗುಣಗಳನ್ನು ಹೊಂದಿದ ಹೆಣ್ಣು ಇದನ್ನು ಸಹಜವೆಂಬಂತೆ ಸಾಧಿಸಿ ತೋರುತ್ತಾಳೆ. ಇಂತಹ ಸಿದ್ಧಿ ಯಾವ ಶೂರ ಗಂಡುಗಳಿಗೂ ಸಾಧ್ಯವಿಲ್ಲ. ಹುಟ್ಟಿದ ಮನೆಗೂ ಕೊಟ್ಟ ಮನೆಗೂ ಹೆಸರು ತರುವುದಂತೂ ಗಂಡಸಿನ ಸಾಮರ್ಥ್ಯಕಕ್ಕೆ ಮೀರಿದ ಕೆಲಸ. ” ನಸ್ತ್ರೀ ಸ್ವಾತಂತ್ರ್ಯ ಮರ್ಹತಿ “ಎಂಬ ಮನುವಿನ ಸೂತ್ರವನ್ನು ಬೇರೆಯಾಗಿಯೇ ಅರ್ಥೈಸಬೇಕೆಂಬುದು ನನ್ನ ಭಾವನೆ. ಹೆಣ್ಣು ಸ್ವಾತಂತ್ರ್ಯಕ್ಕೆ ಅರ್ಹಳಲ್ಲ ಎಂದು ಆತ ಹೇಳಲಿಲ್ಲ. ಹೆಣ್ಣಿಗೆ ಸ್ವಾತಂತ್ರ್ಯ ಕೊಡುವ ಪ್ರಸಂಗವಿಲ್ಲ ಎಂದು ಆತ ಹೇಳಿರಬಹುದು . ಆ ಸ್ವಾತಂತ್ರ್ಯವನ್ನು ಅವಳು ಹುಟ್ಟಿನಿಂದ ಪಡೆದೇ ಇರುತ್ತಾಳೆ. ಬಾಲ್ಯದಲ್ಲಿ ಯೋಗ್ಯ ಮಗಳಾಗಿ ತನ್ನ ಸ್ವಾತಂತ್ರ್ಯವನ್ನು ಬೀರುತ್ತಾಳೆ. ಹರೆಯದಲ್ಲಿ ಅನುರೂಪ ಸತಿಯಾಗಿ ಸಹಜ ಸ್ವಾತಂತ್ರ್ಯ ಅನುಭವಿಸುತ್ತಾಳೆ. ಮುಪ್ಪಿನಲ್ಲಿ ಮಕ್ಕಳಿಗೆ ಯೋಗ್ಯ ತಾಯಿಯಾಗಿ . ಮಾರ್ಗದರ್ಶನ ನೀಡುತ್ತಾ ಸ್ವಾತಂತ್ರ್ಯದಲ್ಲಿ ಲೋಲಾಡುತ್ತಾಳೆ. ಈ ದೃಷ್ಟಿಯಿಂದ ಆಕೆ ದೇವರಿಗೆ ಸಮಾನಳು.

ಸುಧಾ ಪಾಟೀಲ್
ಬೆಳಗಾವಿ

Don`t copy text!