ಅಕ್ಕನಡೆಗೆ ವಚನ – 32

ತನ್ನ ತಾನರಿಯುವ ತಾಣದಲಿ

ಅಮೇಧ್ಯದ ಮಡಿಕೆ
ಮೂತ್ರದ ಕುಡಿಕೆ
ಎಲುವಿನ ತಡಿಕೆ
ಕೀವಿನ ಹಡಿಕೆ ಸುಡಲೀ ದೇಹವ
ಒಡಲುವಿಡಿದು ಕೆಡದಿರು
ಚೆನ್ನಮಲ್ಲಿಕಾರ್ಜುನನನರಿಯದ ಮರುಳೆ.

ಕಾಯ, ಶರೀರ ಅಥವಾ ದೇಹ ಎಂದು ನಾವು ಹೊಂದಿರುವ ಮನುಷ್ಯ ಆಕೃತಿಯನ್ನು ಕರೆಯುತ್ತ ಬಂದಿದ್ದೇವೆ. ಅದರ ಅಸ್ತಿತ್ವದ ಕುರಿತು ಚಿಂತನೆಯೂ ನಡೆದಿದೆ. ಅನೇಕ ಮಹಾನುಭಾವರು ವಿವಿಧ ರೀತಿಯಲ್ಲಿ ಮನುಷ್ಯನ ಹುಟ್ಟು, ಸಾವು, ಜೀವನದ ಬಗೆಗೆ ವಿಶಿಷ್ಟವಾದ ದರ್ಶನ ನೀಡಿದ್ದಾರೆ. ಎಲ್ಲರಿಗಿಂತಲೂ ಭಿನ್ನವಾಗಿ ಅಕ್ಕಮಹಾದೇವಿ ಮನುಷ್ಯನ ದೇಹವನ್ನು ಅರ್ಥೈಸುವ ಪರಿ ಅನನ್ಯ ಅಷ್ಟೇ ಅಲ್ಲ, ಆಶ್ಚರ್ಯವೂ ಆಗುತ್ತದೆ.

ಈ ವಚನದಲ್ಲಿ ಮನುಷ್ಯನ ದೇಹವನ್ನು ಹೋಲಿಸಿದ ರೀತಿ ಅಚ್ಚರಿ ಮೂಡಿಸುವಂತಿದೆ. ಅಮೇಧ್ಯ ಎಂದರೆ ಮಲ. ಈ ದೇಹ ಮಲದಿಂದ ತುಂಬಿದ ಮಡಿಕೆ, ಮೂತ್ರದಿಂದ ತುಂಬಿದ ಕುಡಿಕೆ ಆಗಿದೆ. ಅದಕ್ಕೆ ಚರ್ಮದ ಹೊದಿಕೆ ಇರುವುದರಿಂದ ಸುಂದರವಾಗಿ ಕಾಣುತ್ತದೆ. ಆದರೆ ನಿಜದ ಅಸ್ತಿತ್ವ ಬೇರೆಯಾಗಿದೆ ಎಂದು ಅಕ್ಕ ಹೇಳುತ್ತಾಳೆ.

ಮನುಷ್ಯನ ದೇಹದೊಳಗಿನ ಸಂರಚನೆಯಲ್ಲಿ ಎಲುಬು ಮಹತ್ವದ ಭಾಗ. ಅದರಿಂದಲೇ ಮನುಷ್ಯನ ದೇಹದ ಚಲನವಲನಗಳು ಸಾಧ್ಯ. ಆ ಆಕಾರವನ್ನು ಬಿದಿರಿನಿಂದ ತಯಾರಿಸಿದ ಹಂದರಕ್ಕೆ ಹೋಲಿಸಿ, ಎಲುವಿನ ತಡಿಕೆ ಎಂದಿದ್ದಾಳೆ. ಈ ಶರೀರ ರಕ್ತ, ಮಾಂಸ, ಮಲ, ಮೂತ್ರ, ಕೀವುಗಳಿಂದ ತುಂಬಿದೆ ಎನ್ನುವ ವಾಸ್ತವವನ್ನು ಈ ವಚನ ಕಟ್ಟಿಕೊಡುತ್ತದೆ.

ಮನುಷ್ಯನ ದೇಹವನ್ನು ಅರ್ಥೈಸಿಕೊಂಡು, ಹಾಗೆಯೇ ಈ ಜೀವನವನ್ನು ಅರ್ಥೈಸಿಕೊಂಡು, ಬದುಕು ನಡೆಸುವ ಕ್ರಮವನ್ನು ಈ ವಚನ ಸ್ಪಷ್ಟಪಡಿಸುತ್ತದೆ. ಅದನ್ನು ತಿಳಿಯಪಡಿಸಲು ಕುಂಬಾರನ ಮಡಿಕೆ ಮಾಡುವ ಪ್ರಕ್ರಿಯೆಯನ್ನು, ಉಪಮೆಯಾಗಿ ಬಳಸಲಾಗಿದೆ. ಮಣ್ಣನ್ನು ಹದಗೊಳಿಸಿ, ಅದಕ್ಕೆ ದುಂಡಾದ ಆಕಾರ ಕೊಟ್ಟು, ನಂತರ ಅದರ ತಾಳ್ಕೆಗಾಗಿ ಬೆಂಕಿಯಲ್ಲಿ ಹಾಕಿ, ಸುಟ್ಟು ಗಟ್ಟಿಗೊಳಿಸುತ್ತಾರೆ. ಅದನ್ನೇ ಇಲ್ಲಿ ಅಕ್ಕ ಹಸಿವು, ನೀರಡಿಕೆ, ತೃಷೆ ಎನ್ನುವ ಅಗ್ನಿಯಲ್ಲಿ ದೇಹವನ್ನು ಸುಡಬೇಕಾಗುತ್ತದೆ. ನಾವು ಅದನ್ನೇ ದೊಡ್ಡದು ಮಾಡಿಕೊಂಡು, ಬದುಕಿನ ಸತ್ಯವನ್ನು ಅರಿಯುವ ಪ್ರಯತ್ನ ಮಾಡುವುದೇ ಇಲ್ಲ. ತನ್ನನ್ನು ತಾನು ಅರಿತು ಜೀವಿಸುವಂತೆ ಅಕ್ಕ ಸೂಕ್ಷ್ಮವಾಗಿ ಸೂಚಿಸುತ್ತ, ಮರುಳೆ ಎಂದು ಎಚ್ಚರಿಸಿದಂತಿದೆ.

ಮನುಷ್ಯ ದೇಹ ನಶ್ವರವಾದುದು ಎಂದು ವೇದಾಂತಿಯಂತೆ ಹೇಳಲು ಬರುತ್ತದೆ. ಆದರೆ ನಿಜಾರ್ಥದಲ್ಲಿ ಅರಿತು ಹೇಳುವುದಿಲ್ಲ. ನಮ್ಮ ದೇಹದೊಳಗೆ ಪ್ರಾಣ ಪಕ್ಷಿ ಇರುವವರೆಗೆ ಮಾತ್ರ ಬೆಲೆ ಎನ್ನುವ ಸಂಗತಿ ಗೊತ್ತಿದ್ದರೂ, ಕ್ಷಣಿಕ ವೈರಾಗ್ಯವನ್ನು ಮಾತ್ರ ಅನುಭವಿಸುತ್ತೇವೆ. ಸದಾ ಆಸೆ, ಆಮಿಷಗಳು ಬಿಡದೆ ಬೆನ್ನು ಹತ್ತಿರುತ್ತವೆ. ನಿರಂತರ ವೈರಾಗ್ಯ ಸಾಧ್ಯವಾಗುವುದೇ ಇಲ್ಲ.

ಮನುಷ್ಯ ಬದುಕೆಲ್ಲಾ ಕೇವಲ ಹಸಿವಿಗಾಗಿಯೇ ಮೀಸಲಿಡುತ್ತಾನೆ. ಹೊಟ್ಟೆ ಹಸಿವು, ದೇಹದ ಹಸಿವು, ಕೂಡಿಡುವ ಹಸಿವು ನಿರಂತರ ಕಾಡುತ್ತಲೇ ಇರುತ್ತವೆ. ಏನೂ ಇಲ್ಲದಿದ್ದಾಗ ‘ಇಲ್ಲ’ ಎಂದು ಬದುಕೋದು ಬಡತನ. ಎಲ್ಲಾ ಇದ್ದಾಗಲೂ ‘ಏನೂ ಇಲ್ಲ’ ಎಂದು ತಿಳಿದು ಬದುಕೋದು ವೈರಾಗ್ಯ. ದೇಹ ಮೋಹ ಬಿಡದ ಹೊರತು ವಿರಕ್ತಭಾವ ಮೂಡುವುದಿಲ್ಲ. ದೇಹವನ್ನು ಅಕ್ಕ ಹೇಳಿದಂತೆ ಅರ್ಥ ಮಾಡಿಕೊಂಡಾಗ ಅಕ್ಕನ ವೈರಾಗ್ಯವನ್ನು ತಿಳಿಯಬಹುದೇ ಹೊರತು ನಾವು ವಿರಕ್ತಿಗಳಾಗುವುದು ಅಷ್ಟು ಸುಲಭವಲ್ಲ. ಬುದ್ಧ, ಬಾಹುಬಲಿ, ಅಲ್ಲಮ, ಅಕ್ಕನಲ್ಲಿ ಈ ಹುಡುಕಾಟ ಇರುವುದನ್ನು ಗ್ರಹಿಸುತ್ತೇವೆ.

ಅಕ್ಕನ ದೇಹದ ಕುರಿತಾದ ಅನೇಕ ವಚನಗಳು ಅವಳ ದೇಹಾತೀತವಾದ ಆಂತರಿಕ ಶಕ್ತಿಯನ್ನು ಅನಾವರಣಗೊಳಿಸುತ್ತವೆ. ಉದಾಹರಣೆಗಾಗಿ,

ಕಾಯ ಕರ್ರನೆ ಕಂದಿದಡೇನು? ಕಾಯ ಮಿರ್ರನೆ ಮಿಂಚಿದಡೇನು?’

‘ಎನ್ನ ಕಾಯದ ಕತ್ತಲೆಯ ಕಳೆಯಯ್ಯಾ’

‘ಕಾಯಕ್ಕೆ ನೆಳಲಾಗಿ ಕಾಡಿತ್ತು ಮಾಯೆ’

‘ಕಾಯ ಮೀಸಲಾಗಿ ನಿನಗರ್ಪಿತವಾಯಿತ್ತು’

‘ಚೆನ್ನಮಲ್ಲಿಕಾರ್ಜುನನೊಲಿದ ಶರಣರಿಗೆ
ದೇಹವಿಲ್ಲ ಮನವಿಲ್ಲ ಅಭಿಮಾನವಿಲ್ಲ ಕಾಣಾ ಮರುಳೆ’

ಅಂಗ ಮನ ಭಾವವಳಿದ ಕಾರಣ ಕಾಯ ಅಕಾಯವಾಯಿತ್ತು’

‘ಅಂಗದ ಭಂಗವ ಲಿಂಗಮುಖದಿಂದ ಗೆಲಿದೆ’

ಅಕ್ಕ ತನ್ನ ಅನುಭಾವದ ಸಾಧನೆಗಾಗಿ, ಕಲ್ಯಾಣದ ಶರಣರ ಸಂಗದಿಂದ ಸ್ಪಷ್ಟತೆ ಪಡೆಯುತ್ತಾಳೆ. ಇಷ್ಟಲಿಂಗ ಪೂಜಾ ಪ್ರಕ್ರಿಯೆಯಲ್ಲಿ ನಿರತಳಾದಾಗ, ಆಗುವ ಲಿಂಗಾಂಗ ಸಾಮರಸ್ಯದ ಗುಟ್ಟನ್ನು ಅನಾನುಭವಿಗಳಾದ ನಾವು ಸಾಮಾನ್ಯರು ತಿಳಿದುಕೊಳ್ಳುವುದು ಸುಲಭವಲ್ಲ. ಅದಕ್ಕೊಂದು ತಪಸ್ಸಿನ ಅಗತ್ಯವಿದೆ. ಆ ತಪಸ್ಸಿನಾಳಕ್ಕಿಳಿದು ಅರ್ಥೈಸಿಕೊಂಡು, ರೂಢಿಸಿಕೊಂಡು, ಆ ಆಳ… ಆ ಎತ್ತರ… ಆ ವಿಶಾಲತೆಯನ್ನು ಅವಲೋಕಿಸುವ, ಅನುಭವಿಸುವ, ಅನುಭಾವಿಸುವ ಸಾಮರ್ಥ್ಯ ಹೆಚ್ವಿಸಿಕೊಳ್ಳ ಬೇಕಾಗಿದೆ. ಆಗ ಅಕ್ಕನನ್ನು ಅರಿಯುವ ಪ್ರಯತ್ನ ಮಾಡಬಹುದು, ಹಾಗೆಯೇ ನಮ್ಮನ್ನು ನಾವು ಅರಿಯುವ ಮಾರ್ಗ ತೆರೆಯಬಹುದು.

ಸಿಕಾ

One thought on “

Comments are closed.

Don`t copy text!