ಸರ್ವಜನಾಂಗದ ಶಾಂತಿಯ ತೋಟ – ಡೇರ್ ಡೆವಿಲ್ ಮುಸ್ತಫಾ

ಸರ್ವಜನಾಂಗದ ಶಾಂತಿಯ ತೋಟ –

ಡೇರ್ ಡೆವಿಲ್ ಮುಸ್ತಫಾ

ಸರ್ವಜನಾಂಗದ ಶಾಂತಿಯ ತೋಟದಲಿ ಹೂ ಬಾಡಿದ ಹೊತ್ತಿನಲ್ಲಿ ಅನೇಕ ಬದಲಾವಣೆಗಳು ನಡೆದು ಹೋಗಿವೆ.‌ ‘ಕೋಮುವಾದದ ಮಾತುಗಳ ಮೂಲಕ ಒಂದು ಜನಾಂಗವನ್ನು ಗೆಲ್ಲಬಹುದು’ ಎಂಬ ಮಾತು ಕರ್ನಾಟಕದ ವಿಷಯಕ್ಕೆ ಸತ್ಯವಾಗಲಾರದು.

ಬಸವ-ಕನಕ-ಕುವೆಂಪು ಅವರು ಬಿತ್ತಿ ಹೋದ ಸಮಾನತೆ, ಅಧ್ಯಾತ್ಮಿಕ ಬೋಧನೆ ಮತ್ತು ವೈಚಾರಿಕ ಸಾಮರ್ಥ್ಯವನ್ನು ಅಷ್ಟು ಬೇಗ ಅಳಿಸಿ ಹಾಕಬಹುದು ಎಂಬುದೊಂದು ಕೇವಲ ಭ್ರಮೆ. ‌ಬಸವಣ್ಣನ ಸಮಾನತೆ, ಕನಕನ ಅರಿವು ಮತ್ತು ಕುವೆಂಪು ಅವರ ವೈಚಾರಿಕ ಶಕ್ತಿ, ನಮ್ಮ ನೆಲದಲಿ ಇನ್ನೂ ಜೀವಂತ. ‌ಕುವೆಂಪು ಅವರ ಮಗ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರು ಅದ್ಭುತ ಬರಹಗಾರರು. ಅವರ ಗದ್ಯ ಬರಹಗಳ ತಾಜಾತನ ಲಕ್ಷಾಂತರ ಅಭಿಮಾನಿಗಳನ್ನು ಸೆಳೆದಿದೆ.‌ ಅವರ ಕತೆಗಳ ಪಾತ್ರ ಪೋಷಣೆ ಮತ್ತು ದೇಸಿ ವಿನೋದ ಪ್ರಜ್ಞೆ ಕಣ್ಣ ಮುಂದೆ ವಿಜ್ರಂಭಿಸುವುದು ಅಷ್ಟೇ ಸಹಜ.

ತೇಜಸ್ವಿ ಅವರು ಕುವೆಂಪು ಅವರ ಮಗ ಎಂಬುದು ಅವರಿಗೆ ಬಹುದೊಡ್ಡ ನಷ್ಟ, ಇದು ಬಹುಪಾಲು ಸೆಲೆಬ್ರಿಟಿ ಮಕ್ಕಳ ದುರದೃಷ್ಟವೂ ಹೌದು. ದೊಡ್ಡವರ ಮಕ್ಕಳಾಗಿ ಹುಟ್ಟುವುದು ಅವರ ಮೂಲ ಅಸ್ಮಿತೆಯನ್ನು ಅಳಿಸಿ ಹಾಕುತ್ತದೆ. ಆದರೆ ಅದನ್ನು ಮೀರಿ, ಅಪ್ಪನ ಕೀರ್ತಿಯ ಆಸರೆ ಪಡೆಯದೇ, ಸ್ವತಂತ್ರವಾಗಿ, ಗ್ರಾಮೀಣ ಪ್ರದೇಶದ ಪರಿಸರದಲ್ಲಿ ಕಾಲ ಕಳೆಯುವ ‘ಪೂಚಂತೆ’ ಅವರ ನಿರ್ಣಯ ಅಪರೂಪ ಮತ್ತು ಅನುಕರಣೀಯ.

ಅವರ ಸಣ್ಣ ಕತೆಗಳಿಗೆ ದೊಡ್ಡ ಸಿನೆಮಾಗಳನ್ನು ಮಾಡುವ ಸಾಮರ್ಥ್ಯ ಇದೆ ಎಂಬುದು ಈಗ ಮತ್ತೊಮ್ಮೆ ಸಾಬೀತಾಗಿದೆ. ಯುವ ನಿರ್ದೇಶಕ ಶಶಾಂಕ್ ಸೋಗಲ್ ತೇಜಸ್ವಿ ಅವರ ಕತೆಯ ಎಳೆ ಹಿಡಿದು, ಅದ್ಭುತ ಚಿತ್ರಕಥೆ ಹೆಣೆದಿದ್ದಾರೆ. ತೇಜಸ್ವಿ ಅವರ ಸಂದರ್ಶನದ ತುಣುಕೊಂದನ್ನು ನೋಡಿ ಪ್ರಭಾವಿತರಾಗಿ ಸಿನೆಮಾ ನಿರ್ದೇಶನಕ್ಕೆ ಪ್ರೇರಣೆ ಪಡೆದದ್ದು ಕನ್ನಡದ ವೈಚಾರಿಕ ಪ್ರಜ್ಞೆಗೆ ಸಾಕ್ಷಿ.

ಕೋಮುವಾದದ ವಿಷ ನುಂಗಿ, ಪ್ರತಿಯೊಂದು ವಿಷಯಕ್ಕೆ ಧರ್ಮ ಮತ್ತು ಜಾತಿಯನ್ನು ಎಳೆದು ತಂದು ಬೆಂಕಿ ಹಚ್ಚುವ ಮನಸುಗಳಿಗೆ ಸ್ಪಷ್ಟ ಸಂದೇಶ ರವಾನಿಸುವಲ್ಲಿ ಶಶಾಂಕ್ ಮತ್ತವರ ಇಡೀ ತಂಡ ಯಶಸ್ವಿಯಾಗಿದೆ.‌ ಕಾಲೇಜು ಮತ್ತು ವಿದ್ಯಾರ್ಥಿಗಳ ಸೂಕ್ಷ್ಮ ಮನಸ್ಥಿತಿಯನ್ನು ನಿರೂಪಿಸುವಲ್ಲಿ ಸಿನೆಮಾ ಸಂಪೂರ್ಣ ಗೆದ್ದಿದೆ.

ತಾರಾಗಣ ಮತ್ತು ತಾಂತ್ರಿಕ ವರ್ಗದ ಪರಿಶ್ರಮ ಮತ್ತು ಪರಕಾಯದ ಅಭಿನಯ ಖುಷಿ ಕೊಡುತ್ತದೆ. ಸಿನೆಮಾ ನಿರ್ಮಾಣ ಟೀಮ್ ವರ್ಕ್, ಕೇವಲ ಒಬ್ಬರಿಗೆ ಕ್ರೆಡಿಟ್ ಕೊಡಲಾಗದು, ಆದರೆ ನಿರ್ದೇಶಕ ಮಾತ್ರ ಟೀಮ್ ಕ್ಯಾಪ್ಟನ್.

ಹಿಂದಿಯ ಲಗಾನ್ ಮತ್ತು ರಾಷ್ಟ್ರದ ಅನೇಕ ದೇಸಿ ಸಂಸ್ಕೃತಿಯನ್ನು ಪ್ರತಿಬಿಂಬಿಸಿದ, ಹತ್ತಾರು ಸಿನೆಮಾ ಕತೆಗಳು ಕಣ್ಣ ಮುಂದೆ ಹಾಯ್ದು ಹೋಗುವುದು ಸಹಜ, ಆದರೆ ಈ ಸಿನೆಮಾ ಅಂತಹ ಮಿತಿಯನ್ನು ದಾಟಿ ತನ್ನತನವನ್ನು ಕಾಪಾಡಿಕೊಂಡಿದೆ.‌

ರಾಜಕೀಯ ಸಿದ್ಧಾಂತಗಳನ್ನು ಉತ್ತೇಜಿಸಲು, ಪರಿಣಾಮಕಾರಿ ಪ್ರಭಾವಿ ಮಾಧ್ಯಮ ಸಿನೆಮಾವನ್ನು ಬಳಸಿಕೊಳ್ಳುತ್ತಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆ. ಆದರೆ ಅಂತಹ ಕೀಳು ಪ್ರಯತ್ನವನ್ನು ಮುರಿದು ಹಾಕುವಲ್ಲಿ ಶಶಾಂಕ್ ಯಶಸ್ವಿಯಾಗಿದ್ದಾರೆ. ಚಿತ್ರದಲ್ಲಿ ಎಲ್ಲರೂ ನಾಯಕರೇ! ಎಲ್ಲಾ ಪಾತ್ರಗಳಿಗೆ ಜೀವ ತುಂಬಲು ನಿರ್ದೇಶಕ ಸಫಲರಾಗಿದ್ದಾರೆ.‌ ಮುಖ್ಯವಾಗಿ ಯುವಕರು ಕೋಮುವಾದದ ತೊಳಲಾಟದಲಿ ಬದುಕಿನ ನೆಮ್ಮದಿ ಕಳೆದುಕೊಂಡಿದ್ದಾರೆ. ಜನಾಂಗೀಯ ದ್ವೇಷದ ಕಿಡಿ ಆರಿಸಲು ಡೇರ್ ಡೆವಿಲ್ ಯಶ ಕಂಡಿದೆ. ಸುಂದರ ಕ್ಯಾಮರಾ ಕೈಚಳಕ, ಹಿತಕರ ಸಂಗೀತ ಮತ್ತು ಕಲಾವಿದರ ಆತ್ಮವಿಶ್ವಾಸದ ಅಭಿನಯ ಅನನ್ಯ.

ವಿಶೇಷ ಏನು- ಇದು ಅಂದಿನ ಕಾಲೇಜು ದಿನಗಳ ಕತೆ. ಮೊಬೈಲ್ ಇಲ್ಲದ ಹುಡುಗರು, ಲಂಗ, ದಾವಣಿ ಹಾಕಿದ ಹುಡುಗಿಯರು, ಗತ್ತು- ಗಮ್ಮತ್ತಿನ ಹಳೆ ಕಾಲದ ಮೇಷ್ಟ್ರುಗಳು, ಐದು ದಶಕಗಳ ಹಿಂದಿನ ಜಾತಿ ವೈಷಮ್ಯವನ್ನು ನೈಜವಾಗಿ ಚಿತ್ರಿಸಲಾಗಿದೆ. ಆ ಕಾಲದ ಟೈಮ್ ಸೆನ್ಸ್ ಎದ್ದು ಕಾಣುತ್ತದೆ. ಉದಾಹರಣೆಗೆ ಸೈಕಲ್ ಸವಾರಿ, ವಾಹನಗಳು, ಪೋಲಿಸ್ ಉಡುಗೆ, ತೊಡುಗೆ, ಲಜ್ಜೆ, ಪ್ರಣಯವಿಲ್ಲದ ಪ್ರೀತಿ, ಮಕ್ಕಳ ಸಿಟ್ಟು, ಕೊನೆಗೆ ಬಂದು ನುಸುಳುವ ರಂಜನೀಯ ಕ್ರಿಕೆಟ್, ಜಾತಿ ಸೂಕ್ಷ್ಮತೆ ಹೀಗೆ ಹೀಗೆ…

ಮನುಷ್ಯನ ಮನಸ್ಥಿತಿಗೆ ಜಾತಿ ಕಾರಣವಾಗುವ ಬಗೆಯಲ್ಲಿ ಅಯ್ಯಂಗಾರಿ ಮತ್ತು ಇಸ್ಲಾಂ ಹುಡುಗರು ದಟ್ಟವಾದ ಗ್ರಹಿಕೆಗೆ ಸಿಗುತ್ತಾರೆ.‌ ಪರ-ವಿರೋಧಗಳ ಆಚೆಗೆ ವಾಸ್ತವವನ್ನು ಚಿತ್ರಿಸಲು ಈಗ ಹಿಂದಿಗಿಂತ ನೈತಿಕ ಧೈರ್ಯದ ಅಗತ್ಯವಿದೆ ಎಂಬ ಸೂಕ್ಷ್ಮ ನಿರ್ದೇಶಕರಿಗೆ ಗೊತ್ತಿದೆ.

ಮುಸ್ತಾಫಾ ಪಾತ್ರಧಾರಿ ಶಿಶಿರ್ ಬೈಕಾಡಿ ಸಿಂಪ್ಲಿ ಸೂಪರ್, ಅಷ್ಟೇ ವಂಡರ್ ಫುಲ್!
ಅಯ್ಯಂಗಾರಿ ಪಾತ್ರದ ಆದಿತ್ಯ ಆಶ್ರೀ, ಆಟದ ಮೇಷ್ಟ್ರು ವಿಜಯ್ ಶೋಭರಾಜ್, ಉಳಿದ ಪಾತ್ರಗಳ ನಟರೂ ಅಷ್ಟೇ ಅದ್ಭುತ. ಚೈತ್ರಾ ಶೆಟ್ಟಿ, ಪ್ರೇರಣಾ ಮಂಡ್ಯ ರಮೇಶ್, ಉಮೇಶ್, ಕಾಮಿಡಿಯನ್ ಮೈಸೂರು ಆನಂದ, ಪೂರ್ಣಚಂದ್ರ ಮೈಸೂರು ಹಾಗೂ ಗೆಳೆಯರ ಪಾತ್ರಧಾರಿಗಳ ನೆನೆಯದಿರಲಾಗದು.
ತಂತ್ರಜ್ಞರಾದ ರಮ್ಯ ಛಾಯಾಗ್ರಾಹಕ ರಾಹುಲ್ ರಾಯ್, ಸಂಗೀತ ನಿರ್ದೇಶಕ ನವನೀತ ಶ್ಯಾಮ್ ಹಾಗೂ ‘ಸಿನಿಮಾಮರದ’ ಎಲ್ಲಾ ಕೋಗಿಲೆಗಳಿಗೆ ಅಭಿನಂದನೆಗಳು.

ಕೊನೆ ಮಾತು- ಬಹಳ ದಿನಗಳ ನಂತರ ಕನ್ನಡದ ಪ್ರಮುಖ ಸಾಹಿತಿಯೊಬ್ಬರಿಗೆ ಸ್ಟಾರ್ ವಾಲ್ಯೂ ದಕ್ಕಿದೆ, ಹದಗೆಟ್ಟ ವಾತಾವರಣದಲ್ಲಿ ಕೋಮುಸೌಹಾರ್ದತೆಯ ಗಟ್ಟಿ ಸಂದೇಶ ರವಾನೆಯಾಗಿದೆ. ಉತ್ತಮ ಸಿನೆಮಾಗಳನ್ನು ರಾಜ್ಯದ ಪ್ರತಿಯೊಬ್ಬ ವಿದ್ಯಾರ್ಥಿಯೂ ತಪ್ಪದೇ ನೋಡುವಂತೆ ಸರಕಾರ, ಸಾಹಿತಿಗಳು, ಜನಪರ ಚಿಂತಕರು ವೇದಿಕೆ ಕಲ್ಪಿಸಿ, ಪ್ರಚಾರ ಮಾಡಿ ಸಮಾಜದ ಸ್ವಾಸ್ಥ್ಯ ಕಾಪಾಡುವ ನೈತಿಕ ಹೊಣೆ ಹೊರಬೇಕು.

ಕ್ರೌಡ್ ಫಂಡಿಂಗ್ ಮೂಲಕ ಹಣ ಹೊಂದಿಸಿದ ತೇಜಸ್ವಿ ಅವರ ಅಭಿಮಾನಿಗಳ ಜೊತೆಗೆ, ನೆರವಾಗಲು ಕೈ ಜೋಡಿಸಿದ ಮಾನವೀಯ ಮೌಲ್ಯಗಳ ‘ನಟರಾಕ್ಷಸ’ ಡಾಲಿ ಧನಂಜಯ ಅವರ ‘ದೇವಗುಣಕ್ಕೆ’ ಸಾವಿರದ ಶರಣು. ಸಿನೆಮಾ ಗೆದ್ದಿದೆ, ಆದರೆ ಈಗ ಪ್ರೇಕ್ಷಕ ಗೆಲ್ಲುವುದೊಂದೇ ಬಾಕಿ.‌ ಇದಕೆ ಕಾರಣರಾದ ಎಲ್ಲರಿಗೂ ನಮೋ ನಮಃ.

ಪ್ರೊ.ಸಿದ್ದು ಯಾಪಲಪರವಿ.
9448358040.

Don`t copy text!