ಶರಣೆ ಲಕ್ಷ್ಮಮ್ಮ

ಶರಣೆ ಲಕ್ಷ್ಮಮ್ಮ
ಕೊಂಡೆ ಮಂಚಣ್ಣನವರ ಧರ್ಮ ಪತ್ನಿ

ಆಯುಷ್ಯ ತೀರಲು ಮರಣ
ವ್ರತ ತಪ್ಪಲು ಶರೀರ ಕಡೆ
ಮೇಲು ವ್ರತವೆಂಬ ತೂತರ

ಮೆಚ್ಚ ನಮ್ಮ ಅಗಜೇಶ್ವರ ಲಿಂಗವು

 

ವಚನ ಅನುಸಂಧಾನ

೧೨ನೇ ಶತಮಾನದಲ್ಲಿ ಮಹಿಳೆಗೆ ಸ್ವಾತಂತ್ರ್ಯವೇ ಇರಲಿಲ್ಲ. ಹೆಣ್ಣಿಗೆ ಅತೀವ ಕೀಳು ಮಟ್ಟದ ಸ್ಥಾನ ಇದ್ದ ಆ ಸಮಯದಲ್ಲಿ ಅಪ್ಪ ಬಸವಣ್ಣನವರಿಂದ ಪ್ರತಿ ಕ್ಷೇತ್ರದಲ್ಲೂ ಎಲ್ಲಾ ರೀತಿಯ ಸ್ವಾತಂತ್ರ್ಯ ಕೊಟ್ಟು, ಮಹಿಳೆಗೆ ವಿದ್ಯೆ ಮತ್ತು ಧಾರ್ಮಿಕ ಹಕ್ಕು ದೊರೆತು ಅನೇಕ ಮಹಿಳೆಯರು ಪ್ರತಿ ಕ್ಷೇತ್ರದಲ್ಲೂ ಮೇಲುಗೈ ಸಾಧಿಸಿ ಆಧ್ಯಾತ್ಮಿಕ ವಿಷಯದಲ್ಲಿ ಪ್ರಗತಿಯನ್ನು ಸಾಧಿಸಿದ್ದರೆಂಬು ದಕ್ಕೆ, ಕಲ್ಯಾಣದಲ್ಲಿ ಮಹಾಮನೆಯ ಅನುಭವ ಮಂಟಪದಲ್ಲಿನ ಶರಣೆಯರೇ…. ಸಾಕ್ಷಿಯಾಗಿದ್ದಾರೆ. ಹೆಚ್ಚಿನ ವಚನಕಾರ್ತಿ ಶರಣೆಯರಲ್ಲಿ ‘ವ್ರತನಿಷ್ಠೆ’ ಕಂಡುಬರುತ್ತದೆ. ಈ ಗುಣ; ಒಟ್ಟಾರೆ ಶರಣತತ್ವ ಸಿದ್ಧಾಂತಗಳ ಬಗ್ಗೆ ಅವರಿಗಿರುವ ಅತ್ಯುತ್ಕಟವಾದ ಶ್ರದ್ಧೆ ಮತ್ತು ಬದ್ಧತೆಯ ದ್ಯೋತಕವಾಗಿದೆ. “ಶರಣ ಧರ್ಮ ಬೆಂಕಿಯಲ್ಲಿ ಅರಳಿದ ಹೂ ಇದ್ದ ಹಾಗೆ”

ಮರು ಭೂಮಿಯಲ್ಲಿ ಬೆಳೆದ ಫಲದಂತೆ”

ಅಂದಿನ ಮ್ರತಪ್ರಾಯವಾದ, ಅಜ್ಞಾನ, ಅಂಧಕಾರದ ಮೌಡ್ಯ ವ್ಯವಸ್ಥೆಯ ಕ್ರೌರ್ಯದ ನಡುವೆ ಯೇ

ದಯವೇ ಧರ್ಮದ ಮೂಲವಯ್ಯ”

ಈ ತತ್ವವನ್ನು ಇಂಬಿಟ್ಟುಕೊಂಡು ಕರುಣಾ ರಸವನ್ನು ಹರಿಸಿದ ಶರಣರು, ಇಂತಹ ಶರಣ ಧರ್ಮವನ್ನು ಉಳಿಸಿಕೊಳ್ಳಲು ‘ವ್ರತ’ದಂಥ ಕಠೋರ ನಿಷ್ಠೆಯ ಅಚಲನಿಲುವು ಅತ್ಯಗತ್ಯವಾಗಿತ್ತು.
ಇಲ್ಲಿ ಈ ಮೇಲಿನ ವಚನದಲ್ಲಿ ಶರಣೆ ಲಕ್ಷ್ಮಮ್ಮನವರು ಅದ್ಭುತವಾದ, ಉತ್ಕಟವಾದ ‘ವ್ರತ’ ನಿಷ್ಠೆಯ ಶರಣಭಾವ ವೈಭವವನ್ನು ವಿಜೃಂಭಿಸಿದ್ದಾರೆ.

ಆಯುಷ್ಯ ತೀರಲು ಮರಣ

ಅಂದ್ರೆ ಭೂಮಿಯಲ್ಲಿ; ‘ಹುಟ್ಟಿದ ಪ್ರತಿಯೊಂದು ಜೀವಿಯೂ ಒಮ್ಮೆ ಸಾಯಲೇಬೇಕು. ಹುಟ್ಟು ಸಾವಿನ ಮಧ್ಯೆ ಇರುವ ಬದುಕಿಗೆ ಆಯುಷ್ಯವೆಂಬ ಅವಧಿ ನಿಗದಿ ಯಾಗಿರುತ್ತದೆ. ಈ ಆಯುಷ್ಯದ ಅವಧಿ ತೀರಿದ ಮೇಲೆ ಸಾವು ಶತಸಿದ್ಧವಾಗಿರುತ್ತದೆ. ಬೆಲೆಯುಳ್ಳ ಬದುಕಿಗಿರುವ ಆಯುಷ್ಯದ ನಿಜ ಮೌಲ್ಯವನ್ನು ಶರಣರು ತಿಳಿದಿದ್ದರು. ಹಾಗಾಗಿ ಅದನ್ನು ಸತ್ವಯುತವಾಗಿ ಇರಿಸಲು ಭಕ್ತನು;ಕಾಯಕ ದಾಸೋಹ ತತ್ವ ಸಿದ್ಧಾಂತಗಳ ಅರಿವು ಆಚರಣೆಯನ್ನು ಮಾಡಲೇ ಬೇಕಿತ್ತು. ಆಗ ಮಾತ್ರ ಶರಣ ಸಾಧನೆ ಮಾಡಿ ಮರಣ ಗೆಲ್ಲುವ ತತ್ವ ಸಿದ್ಧಾಂತ ಶರಣರದ್ದು. ಇಲ್ಲಿ ವಚನಕಾರ್ತಿ ಲಕ್ಷ್ಮಮ್ಮನವರು ಆಯುಷ್ಯ ಮತ್ತು ಮರಣಕ್ಕೆ ಹೆಚ್ಚಿನ ಒತ್ತು ಕೊಟ್ಟಿದ್ದಾರೆ. ಆಯುಷ್ಯ ತೀರಲು ಮರಣ ನಿಶ್ಚಿತ ಬರುವುದು. ಅಲ್ಲಿಗೆ ಆ ವ್ಯಕ್ತಿ /ಜೀವಿಯ ಅಸ್ತಿತ್ವ ಈ ಭೂಮಿ ಮೇಲೆ ಪರಿ ಸಮಾಪ್ತಿ ಆದಂತೆಯೇ ಸರಿ!
ಎನ್ನುವ ದೃಢ ನಿಲುವು ಶರಣದಾಗಿತ್ತು ಶರಣರ ನಿಲುವಿಗೆ ಶರಣರೇ ಸಾಟಿ.

ವೃತ ತಪ್ಪಲು ಶರೀರ ಕಡೆ

ಶರಣ ಧರ್ಮದಲ್ಲಿ; ಭಕ್ತ ಭಕ್ತಿಯ ನಿಷ್ಠಾವಂತ ‘ವೃತ’ದಲ್ಲಿ ತನ್ನ ‘ಪ್ರಾಣ’ದಷ್ಟೇ ಅನನ್ಯ ಪ್ರೀತಿಯ ಹೊಂದಿರಬೇಕು. ಈ ನಿಷ್ಠೆಯ ನೇಮದಲ್ಲಿ ಸ್ವಲ್ಪ ಸಡಿಲಾದರೂ ‘ಪ್ರಾಣ’ವನ್ನೇ ಕಳಕೊಂಡ ಶವದಂತೆ’ ಎಂದು ಹೇಳುವ ಮೂಲಕ ಶರಣ ಧರ್ಮಕ್ಕೆ ಪ್ರಾಣಕ್ಕಿಂತ ನಿಷ್ಠೆಯ ‘ವೃತ’ ಅತ್ಯಂತ ಮುಖ್ಯವಾಗಿದೆ ಎಂಬುದನ್ನು ವಚನದ ಈ ಸಾಲು ಧ್ವನಿಸುತ್ತದೆ.

ಮೇಲು ವೃತವೆಂಬ ತೂತರ ಮೆಚ್ಚ
ನಮ್ಮ ಅಗಜೇಶ್ವರ ಲಿಂಗವು.

ಹೀಗೆ ‘ವೃತ’ ದಂಥಾ ಆ ಕಠಿಣ ನಿಲುವಿನ ನಿಷ್ಠುರ ಸಾಧ್ಯತೆಯು ಅತ್ಯಂತ ಪ್ರಾಮಾಣಿಕವಾಗಿ ಇದ್ದರೆ ಮಾತ್ರವೇ ಇಷ್ಟಲಿಂಗದ ಒಲುಮೆಗೆ ಪಾತ್ರವಾಗಲು ಸಾಧ್ಯ. ಆದರೆ ಹಾಗೇ ಮಾಡದೇ ಭಂಡ ಬದುಕನ್ನು ಬದುಕುವವರೇ….. ಹೆಚ್ಚು. ಅಂಥವರನ್ನು ಶರಣೆ ಲಕ್ಷ್ಮಮ್ಮನವರು ತೂತರು ಅಂದರೆ ಅಳಿಮನದವ ಡಂಬಾಚಾರದ ವೇಷಗಾರರೆಂದು ವಿಡಂಬನೆಯ ಮಾಡಿದ್ದಾರೆ. ಅಷ್ಟೇ ಅಲ್ಲದೇ ಇಂಥವರನ್ನ ತಮ್ಮ ಇಷ್ಟಲಿಂಗ ಅಗಜೇಶ್ವರಲಿಂಗ ಎಂದಿಗೂ ಮೆಚ್ಚುವದಿಲ್ಲ ಎನ್ನುವರು ಶರಣೆ ಲಕ್ಷ್ಮಮ್ಮ. ಆಯುಷ್ಯ ತೀರುವರೆಗೆ ಅರಿವು ಮತ್ತು ಆಚರಣೆಯ ಬದುಕನ್ನು ಮಾಡುತ್ತಾ ನಿಶ್ಚಿಂತೆಯ ಬಾಳನ್ನು ಬದುಕ ಬೇಕೆಂದು ಭಕ್ತನಾದವನ ಬಗ್ಗೆ ವಚನಕಾರ್ತಿ ತಮ್ಮ ಸೂಕ್ಷ್ಮ ಸಂವೇದನಾಶೀಲ ನಿಷ್ಠುರ ನಿಲುವಿನ ಮನೋಭಾವವನ್ನು ಪ್ರಸ್ತುತ ವಚನದಲ್ಲಿ ಶರಣ ಧರ್ಮದ ಜೀವ ಜೀವಾಳವನ್ನು ಶರಣೆ ಲಕ್ಷ್ಮಮ್ಮ ಹುದುಗಿಸಿದ್ದಾರೆಂದು ಹೇಳಬಹುದಾಗಿದೆ.

ಸಂಕ್ಷಿಪ್ತ ಪರಿಚಯ

ಶರಣೆ ಲಕ್ಷ್ಮಮ್ಮನವರು ಕೊಂಡೆ ಮಂಚಣ್ಣನವರ ಧರ್ಮಪತ್ನಿಯಂದು ತಿಳಿದು ಬರುತ್ತದೆ. ಕೊಂಡೆ ಯ ಮಂಚಣ್ಣ ಬಿಜ್ಜಳನ ಆಸ್ಥಾನದಲೊಬ್ಬ ಮಂತ್ರಿ.
‘ಅಪ್ಪ ಬಸವಣ್ಣನವರ ಬಗ್ಗೆ’ ಬಿಜ್ಜಳನಿಗೆ ಸದಾ ಚಾಡಿ ಹೇಳುತ್ತಿದ್ದಾ’ ಎಂದು ಶೈವಪುರಾಣ ಕಾವ್ಯ ಗಳಲ್ಲಿ ಉಕ್ತವಾಗಿರುವ ಸಂಗತಿ ಮೂಲಕ ಹಾಗೆ ಜನರನ್ನು ನಂಬಿಸಲಾಗಿದೆ. ಆದರೆ, ಇವರು ನಿಜವಾಗಿಯೂ ಅಪ್ಪಬಸವಣ್ಣನವರ ವಿರೋಧಿಯಾಗಿರದೇ, ಅತ್ಯಂತ ಗುಪ್ತಭಕ್ತಿಯುಳ್ಳ ಶರಣಾಗಿದ್ದು, ಬಹಿರಂಗದಲ್ಲಿ ವಿಷ್ಣುಭಕ್ತನಂತೆ ನಟಿಸುತ್ತ ಬಸವ ಭಕ್ತಿಯ ಮೆರೆಯಲು ಪರೋಕ್ಷ ಸಹಾಯಮಾಡುತಿ ದ್ದರೆನ್ನಲಾಗುತ್ತದೆ. ಹೀಗಿರಲಾಗಿ,ಗುಪ್ತ ಭಕ್ತರಾದ ಕಾರಣದಿಂದ ಇವರಿಗೆ ಗುಪ್ತ ಮಂಚಣ್ಣನೆಂದೂ, ಧೂಪದಿಂದ ಶಿವನನ್ನು ಅರ್ಚಿಸುತ್ತಿದ್ದುದರಿಂದ ಧೂಪದ ಮಂಚಣ್ಣನೆಂದೂ, ಬಹಿರಂಗದಲ್ಲಿ ಆತ ಚಾಡಿಯನ್ನು ಹೇಳುತ್ತಿದ್ದರಿಂದ ಕೊಂಡಿಮಂಚಣ್ಣ
ನೆಂದೂ ಕರೆಯಿಸಿಕೊಳ್ಳುತ್ತಿದ್ದರೆನ್ನಲಾಗಿದೆ.

ಗುಪ್ತ ಮಂಚಣ್ಣ’ನಾರಾಯಣಪ್ರಿಯ ರಾಮನಾಥ’ನೆಂಬ ಅಂಕಿತದಲ್ಲಿ ವಚನ ರಚಿಸಿದ್ದು, ಈ ವಚನಕಾರನೆ ಕೊಂಡೆಯ ಮಂಚಣ್ಣನಾಗಿದ್ದು,ಇವರ ಪುಣ್ಯಸ್ತ್ರೀ ಯೇ ಲಕ್ಷ್ಮಮ್ಮ ಎನ್ನಲಾಗಿದೆ. ‘ಸಕಲ ಪುರಾತನರ ವಚನಗಳು’ ಎನ್ನುವ ವಚನ ಕಟ್ಟುಗಳಲ್ಲಿ ಬಹುತೇಕ ಶರಣೆಯರನ್ನು ಹಾಗೆಯೇ ಕೊಂಡೆಯ ಮಂಚಣ್ಣನವರ ಪುಣ್ಯಸ್ತ್ರೀ’ ಯಂದು ಕರೆದಿರುವುದು ಯಾವ ಮತ್ತು ಯಾರ ಷಡ್ಯಂತ್ರ ಗೊತ್ತಿಲ್ಲಾ ಕಾರಣ ಅದನ್ನೇ ಒಪ್ಪಿಕೊಂಡು ಶರಣೆ ಲಕ್ಷ್ಮಮ್ಮನವರು ಕೊಂಡೆ ಮಂಚಣ್ಣನವರ (ಧರ್ಮ ಪತ್ನಿ) ಪುಣ್ಯಸ್ತ್ರೀ ಎಂದೇ ನಂಬಲಾಗಿದೆ. ಆದರೆ ಅನುಭವ ಮಂಟಪದ ೭೭೦ ಅಮರ ಗಣಂಗಳಲ್ಲಿ ಇವರು ಒಬ್ಬ ವಚನಕಾರ್ತಿ ಶರಣೆಯಾಗಿದ್ದು ಈ ಸಾರ್ವಕಾಲಿಕ ಸತ್ಯವನ್ನು ನಾವು ಎಂದೂ ಅಲ್ಲಗಳೆಯುವಂತಿಲ್ಲ.
ಕಲ್ಯಾಣದಲ್ಲಿ ಕಂಗೋಳಿಸಿದ ಹಲವು ಕುಸುಮಗಳಲ್ಲಿ ಶರಣೆ ಲಕ್ಷ್ಮಮ್ಮ ನವರು ಒಬ್ಬರಾಗಿದ್ದರು.
ಮೇಲಿನ ಅವರ ಈ ಒಂದೇ ಒಂದು ವಚನ ಲಭ್ಯವಾಗಿದೆ .

ಸುಜಾತಾ ಪಾಟೀಲ ಸಂಖ

Don`t copy text!