ತನುವ ತೋಂಟವ ಮಾಡಿ

ತನುವ ತೋಂಟವ ಮಾಡಿ”

ಅಲ್ಲಮಪ್ರಭುಗಳು ೧೨ನೆಯ ಶತಮಾನದ ವಚನಕಾರರಲ್ಲಿ ಪ್ರಸಿದ್ಧರಾದವರು. ಇವರು ಅನುಭವ ಮಂಟಪದ ಶೂನ್ಯ ಸಿಂಹಾಸನಾಧೀಶ್ವರಾಗಿದ್ದವರು. ಇವರು ‘ಗುಹೇಶ್ವರ‘ ಎಂಬ ಅಂಕಿತದಲ್ಲಿ ವಚನಗಳನ್ನು ರಚಿಸಿದ್ದು ಇವರ ೧೨೯೪ ವಚನಗಳು ಲಭ್ಯವಾಗಿವೆ. ಅತ್ಯಂತ ನೇರ ನಿಷ್ಠುರವಾದಿಯಾಗಿದ್ದ ಇವರು ತಮ್ಮ ವಚನಗಳ ಮೂಲಕ ಶಿವಶರಣ, ಶಿವಶರಣೆಯರಿಗೆ ಭಕ್ತಿ-ವೈರಾಗ್ಯವನ್ನು ಬೋಧಿಸಿದರು. ಇವರು ಬೆಡಗಿನ ವಚನಗಳನ್ನು ಹೆಚ್ಚು ರಚಿಸಿದ್ದು ಇವೆಲ್ಲವೂ ಮನುಷ್ಯರು ಅನುಸರಿಸಬೇಕಾದ ಆಧ್ಯಾತ್ಮಿಕ ನಿಲುವುಗಳನ್ನು ತಿಳಿಸುತ್ತವೆ. ವಚನಗಳ ಮೂಲಕ ಜನರು ತಮ್ಮ ಅಂತರಂಗ, ಬಹಿರಂಗಗಳನ್ನು ಶುದ್ಧೀಕರಣ ಮಾಡಿಕೊಳ್ಳುವ ಪರಿಯನ್ನು ಇವರು ತಮ್ಮ ವಚನಗಳಲ್ಲಿ ವಿವರಿಸುತ್ತಾರೆ.ಇವುಗಳಲ್ಲಿ ” ತನುವ ತೋಂಟವ ಮಾಡಿ” ಈ ವಚನವು ಒಂದಾಗಿದೆ.

ತನುವ ತೋಂಟವ ಮಾಡಿ
ಮನವ ಗುದ್ದಲಿ ಮಾಡಿ,
ಅಗೆದು ಕಳೆದೆನಯ್ಯಾ
ಭ್ರಾಂತಿಯ ಬೇರ,
ಒಡೆದು ಸಂಸಾರದ ಹೆಂಟೆಯ
ಬಗಿದು ಬಿತ್ತಿದೆನಯ್ಯಾ ಬ್ರಹ್ಮ ಬೀಜವ,
ಅಖಂಡ ಮಂಡಲವೆಂಬ ಬಾವಿ ಪವನವೆ ರಾಟಾಳ,
ಸುಷುಮ್ನ ನಾಳದಿಂದ ಉದಕವ ತಿದ್ದಿ,
ಬಸವಗಳೈವರು ಹಸಗೆಡಿಸಹವೆಂದು,
ಸಮತೆ ಸೈರಣೆ ಎಂಬ ಬೇಲಿಯನಿಕ್ಕಿ,
ಆವಾಗಳೂ ಈ ತೋಂಟದಲ್ಲಿ ಜಾಗರವಿದ್ದು.
ಸಸಿಯ ಸಲಹಿದೆ ಕಾಣಾ ಗುಹೇಶ್ವರಾ

. ಅಲ್ಲಮಪ್ರಭುದೇವರು ಮತ್ತು ಗೊಗ್ಗಯ್ಯ ಶರಣರ ನಡುವೆ ನಡೆದ ಸಂವಾದದ ಸಂದರ್ಭದಲ್ಲಿ ಈ ವಚನ ಬರುತ್ತದೆ. ಇಲ್ಲಿ ಅಲ್ಲಮ ಭೌತಿಕ ಮತ್ತು ಆಧ್ಯಾತ್ಮಿಕ ಅನುಭಾವದ ಅನುಭವವನು ಗೊಗ್ಗಯ್ಯ ಶರಣರಿಗೆ ತಿಳಿಸುತ್ತಾರೆ. ಶರಣ ಗೊಗ್ಗಯ್ಯ ಕೃಷಿಕನಾಗಿದ್ದರಿಂದ ಆತನಿಗೆ ಅರ್ಥವಾಗುವ ರೀತಿಯಲ್ಲಿ ಪ್ರಭುದೇವರು ಕೃಷಿ ಪರಿಸರದ ಪಾರಿಭಾಷಿಕ ಪದಗಳ ಮುಖಾಂತರ ತಮ್ಮ ವಿಚಾರಧಾರೆಯನ್ನು ಪರಿಣಾಮಕಾರಿಯಾಗಿ ತಿಳಿಸುತ್ತಾರೆ.

ಪ್ರಾರಂಭದಲ್ಲಿ ಅಲ್ಲಮಪ್ರಭು ‘ತನುವ ತೋಂಟವ ಮಾಡಿ
ಮನವ ಗುದ್ದಲಿ ಮಾಡಿ’ ಎನ್ನುತ್ತಾರೆ.
ಮನುಷ್ಯ ಯಾವುದೇ ರೀತಿಯಲ್ಲಿ ಸಾಧನೆಯನ್ನು ಮಾಡಬೇಕಾದರೆ ಶ್ರಮ ಪಡಬೇಕು. ಅಂದಾಗ ಪ್ರತಿಫಲ ಪಡೆಯಬಹುದು. ಇದಕ್ಕೆ ಆಧ್ಯಾತ್ಮಿಕ ಸಾಧನೆಯು ಹೊರತಲ್ಲ. ಆ ಫಲವನ್ನು ಪಡೆಯಬೇಕಾದರೆ ಮೊದಲು ಬಿತ್ತಲು ಸೂಕ್ತ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಬೇಕು. ಆಧ್ಯಾತ್ಮಿಕ ಸಾಧನೆಗೆ ಅಲ್ಲಮ ಆಯ್ಕೆ ಮಾಡಿಕೊಂಡ ಸ್ಥಳವೇ ತನ್ನ ದೇಹ. ನಾವು ಆಧ್ಯಾತ್ಮಿಕ ಜ್ಞಾನ ಅಥವಾ ಅರಿವನ್ನು ಪಡೆಯುವುದು ನಮ್ಮ ಅಂತರಂಗದಲ್ಲಿ. ಹೀಗಾಗಿ ನಮ್ಮ ದೇಹವೇ ಇದಕ್ಕೆ ಸೂಕ್ತ ಸ್ಥಳ.ಭೂಮಿ ಆಯ್ಕೆ ನಂತರ ಭೂಮಿಯನ್ನು ಉಳುಮೆ ಮಾಡುವಂತೆ ಮನಸ್ಸನ್ನು ಸೂಕ್ತ ಉಪಕರಣಗಳಿಂದ ಅಗೆದು ಬಿತ್ತನೆಗೆ ಸಿದ್ಧಮಾಡಬೇಕು.ಅದಕ್ಕೆ ದೇಹದ ಶುದ್ದಿಗೆ ಅವರು ಆಯ್ಕೆ ಮಾಡಿಕೊಂಡ ಉಪಕರಣ ಮನದ ಗುದ್ದಲಿ.ದೇಹವು ಮನಸ್ಸಿನ ನಿಯಂತ್ರಣದಲ್ಲಿ ಇರುವುದರಿಂದ ದೇಹದ ಆಕಾಂಕ್ಷೆಗಳನ್ನು ಕಿತ್ತೊಗೆಯಲು ಮನವೇ ಸೂಕ್ತ ಸಾಧನ.

ನಂತರ ಅಲ್ಲಮ ”ಅಗೆದು ಕಳೆದೆನಯ್ಯಾ
ಭ್ರಾಂತಿಯ ಬೇರ‘ ಎನ್ನುತ್ತಾರೆ.
ಭೂಮಿಯನ್ನು, ಹರಗಿ, ಸಮತಟ್ಟು ಮಾಡಿ ಉಳುಮೆ ಮಾಡಬೇಕಾದರೆ ಅಲ್ಲಿರುವ ಕಳೆಯನ್ನು ಕಿತ್ತೊಗೆಯಬೇಕು. ಕಳೆ ಇದ್ದರೆ ಬೆಳೆಯನ್ನು ನಾಶ ಮಾಡುತ್ತವೆ. ಅದೇ ರೀತಿ ನಮ್ಮಲ್ಲಿರುವ ಭ್ರಮೆ- ಭ್ರಾಂತಿಯೆಂಬ ಕಳೆಯು ಸಹ ನಮ್ಮ ಆಧ್ಯಾತ್ಮಿಕ ಸಾಧನೆಗೆ ತೊಡಕಾಗಿ ಪರಿಣಮಿಸುತ್ತದೆ. ಅದಕ್ಕಾಗಿ ನಮ್ಮ ಸುತ್ತಲೂ ಹಬ್ಬಿರುವ ಜಾತಿ, ವರ್ಣ, ಆಶ್ರಮ, ಕುಲ, ಗೋತ್ರ, ನಾಮಗಳೆಂಬ ಭ್ರಮೆಯ ಕಳೆಗಳನ್ನು ಸಹ ಬೇರು ಸಮೇತ ಕಿತ್ತೊಗೆಯಬೇಕಾಗಿದೆ ಎನ್ನುತ್ತಾರೆ.

ಮುಂದುವರಿದು ‘ಒಡೆದು ಸಂಸಾರದ ಹೆಂಟೆಯ
ಬಗಿದು ಬಿತ್ತಿದೆನಯ್ಯಾ ಬ್ರಹ್ಮ ಬೀಜವ’ ಎನ್ನುತ್ತಾರೆ. ಹೊಲದಲ್ಲಿ ಬಿತ್ತುವ ಪೂರ್ವದಲ್ಲಿ ಅಲ್ಲಿರುವ ರೆಂಟೆಯ ಗಂಟುಗಳನ್ನು ಒಡೆಯಬೇಕು. ಇಲ್ಲದಿದ್ದರೆ ಭೂಮಿಯಲ್ಲಿ ನೀರು ಸರಿಯಾಗಿ ಇಂಗದೆ ಬೆಳೆಯ ಬೇರುಗಳು ಆಳಕ್ಕೆ ಇಳಿಯಲು ತೊಡಕಾಗುತ್ತವೆ. ಅದೇ ರೀತಿ
ಈ ಪ್ರಾಪಂಚಿಕ ಬದುಕೆಂಬುದು ಹೆಂಟೆಗಳ ರಾಶಿಯಿದ್ದಂತೆ. ಅಂತಹ ಅಡೆತಡೆಗಳನ್ನು ಒಡೆದು, ಹುಡಿಮಾಡಿ ನೆಲವನ್ನು ಹದಗೊಳಿಸಿ ಜ್ಞಾನವೆಂಬ ಬೀಜ ಬಿತ್ತಬೇಕು. ಅಂದಾಗ ಆಧ್ಯಾತ್ಮಿಕ ಅರಿವಿನ ಬೇರು ಮನದಲ್ಲಿ ಚಿಗುರಲು ಸಾಧ್ಯ.

ತರುವಾಯ ಅಖಂಡ ಮಂಡಲವೆಂಬ ಬಾವಿ ಪವನವೆ ರಾಟಾಳ,
ಸುಷುಮ್ನ ನಾಳದಿಂದ ಉದಕವ ತಿದ್ದಿ,’.ಬೀಜ ಮೊಳಕೆಯೊಡೆಯಲು, ಬೆಳೆಯ ಸಂದಿಗ್ಧ ಹಂತದಲ್ಲಿ ನೀರನ್ನೊದಗಿಸುವದು ಅವಶ್ಯಕ. ಇಲ್ಲದಿದ್ದರೆ ಬೆಳೆ ಮುರುಟಿ ಹೋಗುತ್ತದೆ.ಹಾಗೆಯೇ ಆಧ್ಯಾತ್ಮಿಕ ಸಾಧನೆಯ ಹಂತದಲ್ಲಿಯೂ ನೀರಿನ ಅವಶ್ಯಕತೆ ಇದೆ. ಆದರೆ ಅದು ಭೌತಿಕ ನೀರಲ್ಲ. ಅಖಂಡ ಮಂಡಲವೆಂಬ ಅನಂತದ ಬಾವಿಯ ಸಮತೆಯ ನೀರು. ಆ ನೀರು ಸೇದುವ ಚಕ್ರ ಪ್ರತಿನಿತ್ಯವೂ ನಾವು ಉಸುರಾಡುವ ಪ್ರಾಣವಾಯು. ಅದು ಸುಷುಮ್ನ ನಾಡಿಯ ಮಾರ್ಗವಾಗಿ ನಮ್ಮ ಅಂತರಂಗದ ಅಳಕ್ಕಿಳಿದು ಸಮ ಚಿತ್ತದ ಶಾಂತಿಯ ಜಲವ ಹೊರಹಾಕಿ ಅಧ್ಯಾತ್ಮಾನಂದವನ್ನು ಪೋಷಿಸುತ್ತದೆ. ಜೀವ ಜಲವಾದ ನೀರು ತನ್ನಲ್ಲಿ ನಾನಾ ಬಗೆಯ ಸತ್ವಾಂಶಗಳನ್ನು ಅರಗಿಸಿಕೊಂಡು ಪ್ರತಿಹಂತದ ಬೆಳವಣಿಗೆಗೆ ಕಾರಣವಾಗುವಂತೆ ಸಮತೆಯ ಜಲ ಆಧ್ಯಾತ್ಮಿಕ ಭಾವವನ್ನು ಪೋಷಣೆ ಮಾಡುತ್ತದೆ.
ಮುಂದುವರಿದು ‘ಬಸವಗಳೈವರು ಹಸಗೆಡಿಸಹವೆಂದು,
ಸಮತೆ ಸೈರಣೆ ಎಂಬ ಬೇಲಿಯನಿಕ್ಕಿ ಆವಾಗಳೂ ಈ ತೋಂಟದಲ್ಲಿ ಜಾಗರವಿದ್ದು. ಸಸಿಯ ಸಲಹಿದೆ ಕಾಣಾ ಗುಹೇಶ್ವರಾ ‘ ಎನ್ನುತ್ತಾರೆ. ಹೀಗೆ ಹಚ್ಚಹಸುರಾಗಿ ಬೆಳೆದು ನಿಂತ ಬೆಳೆಯನ್ನು ಹೊಕ್ಕು ಮೇಯಲು ಸುತ್ತಮುತ್ತಲ ತುಡುಗುಣಿಗಳು ಕಾಯುತ್ತಿರುತ್ತವೆ.ದನಕರುಗಳು ಬರದಂತೆ ಕಾಯ್ದು ಅವುಗಳಿಂದ ಬೆಳೆಯನ್ನು ರಕ್ಷಿಸಿಕೊಳ್ಳುವದು ಅನಿವಾರ್ಯ.ಅಂತೆಯೇ ಪಂಚೇಂದ್ರಿಯಗಳೆಂಬ ಪಶುಗಳು ನಮ್ಮ ಅರಿವನ್ನು ಹದಗೆಡಿಸುವವೆಂಬ ಭಯವಿದೆ. ಅದಕ್ಕೆ ನಮ್ಮ ವಿಚಾರಗಳ ಸುತ್ತ ಸಮತೆ_ಮತ್ತು_ಸ್ಮರಣೆಗಳೆಂಬೆರಡು ಸುತ್ತಿನ ಬೇಲಿಯನ್ನು ಬಿಗಿದಿರುವೇನು.ಜೊತೆಗೆ ನನ್ನ ಆಂತರಿಕ ಪ್ರಜ್ಞೆಯನ್ನು ಸದಾಕಾಲ ಜಾಗ್ರತವಾಗಿಟ್ಟುಕೊಂಡು ಆಧ್ಯಾತ್ಮಿಕ ಅರಿವಿನ ಸಸಿಯನ್ನು ಸದಾಕಾಲ ಕಾಯ್ದು ಅದನ್ನು ಬೆಳಸುತ್ತಿದ್ದೆನೆ ಎನ್ನುತ್ತಾರೆ ಅಲ್ಲಮ.

ಸಾಧಕ ವ್ಯಕ್ತಿಗಳನ್ನು ಅಂತರಂಗದ ಸಾಧನೆಗೆ ತೊಡಗಿಸುವ ಅಲ್ಲಮನ ರೀತಿ ಅಮೋಘವಾಗಿದೆ.ವ್ಯವಸಾಯದ ಕ್ರಮಗಳನ್ನು ಹೇಳುತ್ತ ಅಲ್ಲಮ ಮನುಷ್ಯನ ಮನೋಧರ್ಮದಲ್ಲಾಗಬೇಕಾದ ಪರಿವರ್ತನೆಗಳನ್ನು ಪ್ರತಿಪಾದಿಸುತ್ತಿದ್ದಾನೆ. ದೇಹವೆಂಬ ತೋಟದಲ್ಲಿ ಅಧ್ಯಾತ್ಮದ ಸಸಿಯನ್ನು ನೆಟ್ಟು ಅನುಭಾವದ ಪೈರು ತೆಗೆಯುವ ಪರಿಯನ್ನು ಮನೋಜ್ಞವಾಗಿ ಕಟ್ಟಿಕೊಡುತ್ತಾನೆ ಅಲ್ಲಮ.

ಡಾ.ರಾಜೇಶ್ವರಿ ವೀ.ಶೀಲವಂತ

Don`t copy text!