ಶಿವ ಮೆಚ್ಚಿದ ಕುಂಬಾರ ಗುಂಡಯ್ಯ
ನಾದಪ್ರೀಯ ಶಿವನೆಂಬರು ನಾದಪ್ರಿಯ
ಶಿವನಲ್ಲ ಎಂಬ ಶರಣರ ವಚನದ ಸಾಲುಗಳಿಗೆ ನಿಜ ಅರ್ಥತಿಳಿಸಿದ ಶರಣ ಕುಂಬಾರ ಗುಂಡಯ್ಯನವರು. ವೃತ್ತಿಧರ್ಮವನು ಪಾಲಿಸುತ್ತ ಅದರಲ್ಲಿಯೆ ನಿಜ ಶಿವಸಾನಿಧ್ಯ ಪಡೆದ ಶಿವಶರಣ ಗುಂಡಯ್ಯನವರು ತಾವು ಶಿವಧ್ಯಾನದಲ್ಲಿ ಮಾಡಿದ ಘಟದಲ್ಲಿ ಭಕ್ತಿನಾದವ ತುಂಬಿ ನುಡಿಸಿದ ಲಯಕ್ಕೆ ಕೈಲಾಸದಲ್ಲಿದ್ದ ಶಿವನೆ
ಹೆಜ್ಜೆ ಹಾಕಿದ ಎನ್ನುವ ಪವಾಡ ತೋರಿದ್ದು ಗುಂಡಯ್ಯನವರ ಸತ್ಯನಿಷ್ಠೆಯಾ ಭಕ್ತಿ.
ಭಲ್ಲುಕೆ (ಇಂದಿನ ಭಾಲ್ಕಿ) ಪ್ರದೇಶದ ಮೂಲದವರಾದ ಶರಣ ಗುಂಡಯ್ಯ ಸತಿ ಕೇತಲದೇವಿ ಕುಂಬಾರ ವೃತ್ತಿಯವರಾಗಿದ್ದರು. ಧರ್ಮಾಸಕ್ತಿ, ವೃತನಿಷ್ಠೆ, ಅಚಲಭಕ್ತಿಯಲ್ಲಿ ಶಿವಭಕ್ತರಾಗಿದ್ದ ಈ ಶರಣ ದಂಪತಿಗಳು ತಮ್ಮ ಕಾಯಕದಲ್ಲಿಯೆ ನಿಜಶಿವನನ್ನು ಕಂಡ ಮಹಾಭಕ್ತರು. ಗುಂಡಯ್ಯನವರು ಮಡಿಕೆ ಮಾಡುವಲ್ಲಿ ನಿರತರಾದಾಗಲೂ ಪ್ರಾಣಲಿಂಗಪೂಜೆಯಲ್ಲಿ ತನ್ಮಯರಾಗಿರುತ್ತಿದ್ದರು.ಪ್ರತಿದಿನದ ಕ್ಷಣ ಕ್ಷಣದಲ್ಲಿಯು ಶಿವನಾಮಸ್ಮರಣೆಯಲ್ಲಿ ಮಗ್ನರಾಗಿರುತ್ತಿದ್ದ ಕಾರಣ ತಿರುಗಿ ಚಕ್ರವು ತಮ್ಮಿಂತಾವೆ ಮಡಿಕೆಗಳು ತಯಾರಾಗುತ್ತದ್ದವೆನೋ ಎನ್ನಿಸುವಷ್ಟು
ಅದರಲ್ಲಿ ಲೀನಗೊಂಡಂತೆ ಕಾಯಕ ಹಾಗೂ ಶಿವಧ್ಯಾನವು ಬೆರೆತು ಕೊಂಡಿದ್ದವು. ತಮ್ಮ ಕಾಯವನ್ನೆ ತಿರುಗಣಿಯ ಚಕ್ರಕ್ಕೆ ಹೋಲಿಸಿಕೊಂಡಿದ್ದ ಗುಂಡಯ್ಯನವರು ತಿರುಗಿಯೂ ಚಕ್ರವೆ ಅವರ ಅಂತರಂಗದಲ್ಲಿ ಆಧಾರಚಕ್ರದಂತಿತ್ತು. ತಿಗರಿಯೆ ಷಟ್ ಚಕ್ರವಾಗಿತ್ತು. ನಾಭಿಯೆ ಮಣಿಪೂರಕ ಚಕ್ರವಾಗಿತ್ತು. ಅವರ ದೇಹವೆ ಮಡಿಕೆ ಮಾಡಲು ಬೇಕಾದ ಹದಗೊಂಡ ಮಣ್ಣಾಗಿತ್ತು. ನಿಷ್ಠೆಯೆ ಆ ತಿರುಗಣಿ ತಿರುಗಿಸುವ ಚಕ್ರವಾಗಿತ್ತು. ದೇವನ ನೆನಹೆಂಬ ದಾರದಿಂದ ಚಕ್ರದ ಮೇಲೆ ತಯಾರಾದ ಮಡಿಕೆಯನ್ನು ಬೇರ್ಪಡಿಸಿ ಕರಗಳಿಂದ ಅದನು ರೂಪಗೊಳಿಸಿ ಭಕ್ತಿ ಎಂಬ ಆವುಗೆಯಲಿ ಸುಟ್ಟು ಗಟ್ಟಿಮಾಡುವ ಕಲೆ ಅವರಿಗೆ ಕರಗತವಾಗಿತ್ತು. ಸುಟ್ಟು ಬಳಸಲು ತಯಾರಾದ ಮಡಿಕೆಯ ಹದತಿಳಿಯಲು ಬಾರಿಸಿ ನೋಡುವಾಗಲೆಲ್ಲಾ ಸಂತೋಷದಿಂದ ನಿಜ ಭಕ್ತಿಯ ಆನಂದದಲಿ ಆ ಮಡಿಕೆಗಳನ್ನು ಕೈಯಿಂದ ಬಾರಿಸುತ್ತಾ ತೃಪ್ತಭಾದಲಿ ಕುಣಿದಾಡುತ್ತಿದ್ದರು.
ಈ ತೆರನಾದ ಕಾಯಕ ಪೂಜೆಯಲ್ಲಿ ಶಿವನೊಂದಿಗೆ ಸಾಮರಸ್ಯಭಾವದಲ್ಲಿ ಬೆರೆತು ಬಿಡುತ್ತಿದ್ದ ಗುಂಡಯ್ಯನವರು ಶಿವಮೆಚ್ಚಿದ ಭಕ್ತರಾಗಿದ್ದರು. ಇದಕೆ ಸಾಕ್ಷಿಯಾಗಿ ಒಂದು ಸ್ವಾರಸ್ಯಕರ ಘಟನೆಯು ಕಥಾ ರೂಪದಲ್ಲಿ ಪುರಾಣಗಳಲ್ಲಿ ಉಲ್ಲೇಖವಾಗಿದೆ.
ಶಿವಭಕ್ತಿಯ ಏಕತಾನದಲ್ಲಿ ಬೆರೆತು ಮಡಿಕೆಗಳನ್ನು ಮಾಡುತ್ತ ಮಾಡುತ್ತ
ಮಾಡಿದ ಮಡಿಕೆಗಳನ್ನು ಬಾರಿಸುತ್ತ ಶಿವನಾಮ ಸ್ಮರಣೆಯಲ್ಲಿ ತಲ್ಲಿನನಾದ ಗುಂಡಯ್ಯನ ಘಟವಾದ್ಯದ ನಾದಕ್ಕೆ ಕೈಲಾಸದಲ್ಲಿರುವ ಶಿವನೆ ನಾಟ್ಯ ಮಾಡತೊಡಗಿದಾಗ ಇದನ್ನು ಕಂಡ ದೇವಗಣಂಗಳು ಹಾಗೂ ಪರಶಿವನ ಸತಿ ಪಾರ್ವತಿ ವಿಸ್ಮಯಗೊಂಡು ಶಿವನನ್ನು ಕೇಳಿದಾಗ ಪರಶಿವನು ತನ್ನ ಪರಮಭಕ್ತ ಗುಂಡಯ್ಯ ಭಕ್ತಿಯ ಪರಾಕಾಷ್ಟೆತೆಯಲ್ಲಿ
ತಾ ಮಾಡಿದ ಘಟ (ಮಡಿಕೆ)ವನ್ನೆ ನುಡಿಸತೊಡಗಿದಾಗ ತನಗರಿವಿಲ್ಲದಂತೆ ಭಕ್ತನ ನಿಜಭಕ್ತಿಗೆ ಸೋತು ಆತ ಬಾರಿಸಿದ ಘಟದ ತಾಳಕ್ಕೆ ಹೆಜ್ಜೆ ಹಾಕಿದೆ ಎಂದು ಶಿವನುಡಿದಾಗ ಪಾರ್ವತಿಸಹಿತ ಗಣಂಗಳೆಲ್ಲಾ ಗುಂಡಯ್ಯನವರ ಭಕ್ತಿಯನ್ನು ಕೊಂಡಾಡುತ್ತಾರೆ.
ಪುರಾಣದ ಈ ಕಥೆ ಗುಂಡಯ್ಯನವರ ಕಾಯಕ ಹಾಗೂ ನಿಜಭಕ್ತಿಯ ನಿಷ್ಠೆಯನ್ನು
ಅರಹುತ್ತದೆ. ಇಂತಹ ಘನಮಹಿಮ ಗುಂಡಯ್ಯನವರ ಬದುಕಿನ ಕಾಲಾವಧಿ ಕುರಿತು ಸಂಶೋಧಕರಲ್ಲಿ ಭಾನ್ನಾಭಿಪ್ರಾಯಗಳಿವೆ.ಕೆಲ ವಿದ್ವಾಂಸರ ಪ್ರಕಾರ ಗುಂಡಯ್ಯನವರು ಬಸವಣ್ಣನವರಿಗಿಂದ ಮೊದಲಿನವರು ಎಂಬ ಅಭಿಪ್ರಾಯ ಪಡುತ್ತಾರೆ.
ಆದರೆ ಯಾವ ಸಂಶೋಧಕರಿಗೂ ಗುಂಡಯ್ಯ ನವರ ಯಾವ ವಚನಗಳು ದೊರಕಿಲ್ಲಾ. ಬದಲಿಗೆ ಗುಂಡಯ್ಯ ನವರ ಧರ್ಮಪತ್ನಿ ಕೇತಲಾದೇವಿಯ ವಚನಗಳು ದೊರಕಿವೆ .ಅವರ ವಚನಗಳಲ್ಲಿ ಅವರು ಮಾಡುತ್ತಿದ್ದ ಕುಂಬಾರ ವೃತ್ತಿಗೆ ಸಂಬಂಧಿಸಿದ ಉಲ್ಲೇಖಗಳಿವೆ.
ಆದರೆ ಜಾನಪದ ಸಾಹಿತ್ಯದಲ್ಲಿ ಹಾಗೂ ಬೇರೆ ಶರಣರ ವಚನಗಳಲ್ಲಿ ಗುಂಡಯ್ಯ ನವರ ಕುರಿತು ಹಾಗು ಅವರ ಘನಶಿವಭಕ್ತಿಯ ಕುರಿತು ಉಲ್ಲೇಖಗಳಿವೆ.
ಜಾನಪದ ತ್ರಿಪದಿಗಳಲ್ಲಿ ಗುಂಡಯ್ಯ ನವರ ಕುರಿತಾದ ಸಾಲುಗಳು ಹೀಗಿವೆ.
ಮಡಿಕೆಯನ್ನು ನುಡಿಸುವೆನು,ನುಡಿಯು ಕೇಳಲಿ ನಿಮಗೆ
ಮಿಡಿಯುದಕೆ ಕೊಡತಿ ಬೆರಳಾಗಿ | ವರನೀಡು ಮಿಡಿದು ಶಿವನಾದ ಬೆರೆಯುದಕೆ||
ತೊಂಡಲವು ಶಿವಗಣಕೆ,ಗುಂಡಯ್ಯ ನೀನಾದಿ
ಇಂಡೆ ಕೊರಳೊಳಗೆ ಶಿವನಾದಿ| ಶಿವಭಕ್ತ ಗುಂಡ ನೀನೆಂದು ಜನಭಜಿಸಿ||
ಕಣಕಣಿಸಿ ಕರಡಿಗಳು,ಝಣಝಣಿಸಿ ತಾಳಗಳು
ದಣ ಧಣ್ಣ ಧಿತ್ತ ಮದ್ವಲೆಯು| ಕಿವಿಯೊಳಗೆ ಘನ ಸೂರು ಹಾಡಿಯೆ ಗುಂಡನಿಗೆ||
ಮಡಿಕೆಗಳ ಬಾರಿಸುತ ,ತೊಡಗಿದ್ದ ಕುಣಿತದೊಳು
ಹೆಡೆಯೆತ್ತಿ ನಾಗಮಣಿದಂತೆ| ಗುಂಡಯ್ಯ
ತಡೆತಡೆದು ಹೆಜ್ಜೆ ಹಾಕುತಲಿ||
ಜಾನಪದ ಸಾಹಿತ್ಯದ ಹಂತಿ ಹಾಡುಗಳಲ್ಲಿ ಗುಂಡಯ್ಯನವರ ಶಿವಭಕ್ತಿ ಕುರಿತಾದ ತ್ರಿಪದಿಗಳು ದೊರಕುವ ಹಾಗೆ ಅನೇಕ ಶರಣರ ವಚನಗಳಲ್ಲಿ ಕೂಡಾ ಗುಂಡಯ್ಯನವರ ಶಿವಭಕ್ತಿಯ ಪ್ರಸ್ತಾಪವಿದೆ.
ಜೇಡರ ದಾಸಿಮಯ್ಯನವರ ಒಂದು ವಚನದಲ್ಲಿ,
ನಂಬಿದ ಚೆನ್ನನ ಅಂಬಲಿಯನುಂಡ|
ಕೆಂಭಾವಿ ಭೋಗಯ್ಯನ ಹಿಂದಾಡಿ ಹೋದ|
ಕುಂಭದ ಗತಿಗೆ ಕುಕಿಲಿರಿದು ಕುಣಿದ|
ನಂಬದೆ ಕರೆದವರ ಹಂಬಲವನೊಲ್ಲೆಂದ
ರಾಮನಾಥಾ
ಸಿದ್ಧರಾಮಯ್ಯ ನವರು ತಮ್ಮ ವಚನದಲ್ಲಿ
ಕುಂಬಾರೆಲ್ಲರು ಗುಂಡಯ್ಯನಾಗಬಲ್ಲರೆ|
ಮಡಿವಾಳರೆಲ್ಲರು ಮಾಚಯ್ಯನಾಗಬಲ್ಲರೆ|
ಜೇಡರೆಲ್ಲರು ದಾಸಿಮಯ್ಯನಾಗಬಲ್ಲರೆ|
ಎನ್ನಗುರು ಕಪೀಲಸಿಧ್ಧಮಲ್ಲೇಶ್ವರಯ್ಯ|
ಪ್ರಾಣಿಗಳ ಕೊಂದು ಪರಿಹರಿಸಿಬಲ್ಲಡೆ|
ತೆಲುಗ ಬೊಮ್ಮಾಯ್ಯನಾಗಬಲ್ಲರೆ|
ಹೀಗೆ ಶರಣರ ವಚನಗಳಲ್ಲಿ ,ಜಾನಪದ ಕವಿಗಳ ನುಡಿಸಾಲುಗಳಲ್ಲಿ , ಕವಿಶ್ರೇಷ್ಠ
ಹರಿಹರನ ರಗಳೆಗಳಲ್ಲಿ ಕುಂಬಾರ ಗುಂಡಯ್ಯನವರ ಕಾಯಕ ನಿಷ್ಠೆ ಶಿವಭಕ್ತಿ ಪರಿಯನ್ನು ಅರುಹುವ ಉಲ್ಲೇಖಗಳಿವೆ.ಇಂತಹ ಮಹಾನ್ ಶಿವಭಕ್ತರ ಜಯಂತಿಯನ್ನು ಕಾರಹುಣ್ಣಿವೆ ದಿನದಂದು ಭಕ್ತಿ ಶೃದ್ಧೆಯಿಂದ ಆಚರಿಸುವುದರ ಮೂಲಕ ಅವರಿಗೆ ನಿಜ ಗೌರವ ಸಲ್ಲಿಸುವುದರೊಂದಿಗೆ ಶಿವನಲ್ಲಿ ಅವರಿಗಿದ್ದ ಅನುಪಮ ಭಕ್ತಿ ಮಾರ್ಗದಲ್ಲಿ ನಡೆಯುವ ಸಂಕಲ್ಪ ಮಾಡಿಕೊಂಡರೆ ಅದೆ ಆ ಶಿವನಿಗೂ ಹಾಗು ಶಿವಭಕ್ತ ಗುಂಡಯ್ಯನವರಿಗೂ ಸಲ್ಲಿಸುವ ಮಹಾಗೌರವವಾಗಿದೆ.
ಲೇಖಕರು : ಶ್ರೀಮತಿ ಆಶಾ ಎಸ್ ಯಮಕನಮರಡಿ