ಅಕ್ಕನಡೆಗೆ – ವಚನ – 34
ಚಂಚಲಚಿತ್ತಕ್ಕೆ ಸಮಚಿತ್ತದ ಭಾವ
ಕಲ್ಲ ಹೊತ್ತು ಕಡಲೊಳಗೆ ಮುಳುಗಿದಡೆ
ಎಡರಿಂಗೆ ಕಡೆಚಂಚಲಚಿತ್ತಕ್ಕೆ ಸಮಚಿತ್ತದ ಭಾವಯುಂಟೆ ಅವ್ವಾ?
ಉಂಡು ಹಸಿವಾಯಿತ್ತೆಂದಡೆ ಭಂಗವೆಂಬೆ
ಕಂಡ ಕಂಡ ಠಾವಿನಲ್ಲಿ ಮನ ಬೆಂದಡೆ
ಗಂಡ ಚೆನ್ನಮಲ್ಲಿಕಾರ್ಜುನಯ್ಯನೆಂತೊಲಿವನವ್ವಾ?.
ಉಡುತಡಿಯಿಂದ ಕದಳಿಯವರೆಗಿನ ಪಯಣದಲ್ಲಿ ಮನುಷ್ಯನೊಳಗಿನ ಸ್ವಭಾವಗಳ ಗುಣಧರ್ಮವನ್ನು ಒರೆಗೆ ಹಚ್ಚಿ ನೋಡುವ ಅಕ್ಕಮಹಾದೇವಿ, ಆಧ್ಯಾತ್ಮದ ನೆಲೆಯಲ್ಲಿ ತನ್ನದೇ ಆದ ದೃಷ್ಟಿಕೋನ ಇಟ್ಟುಕೊಂಡು ಪರಿಶೀಲಿಸುತ್ತಾಳೆ. ಅದರೊಂದಿಗೆ ಉಪಮೆಗಳಿಂದ ಕೂಡಿದ ವಚನಗಳ ಸ್ವರೂಪದಲ್ಲಿ ನಿರೂಪಿಸಿರುವುದು ಅವಳ ಕಾವ್ಯ ಕಟ್ಟುವ ಕಲೆ.
ಕಲ್ಲ ಹೊತ್ತು ಕಡಲೊಳಗೆ ಮುಳುಗಿದಡೆ ಎಡರಿಂಗೆ ಕಡೆಯುಂಟೆ ಅವ್ವಾ?
ಕಲ್ಲು ಹೊತ್ತುಕೊಂಡು ಕಡಲಲ್ಲಿ ಮುಳುಗಿದರೆ ಆಪತ್ತು ನಿಶ್ಚಿತ. ಇದು ಇಲ್ಲಿ ರೂಪಕವಾಗಿ ಬಳಕೆಯಾಗಿದೆ. ಮನುಷ್ಯನಲ್ಲಿರುವ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರವೆಂಬ ಅರಿಷಡ್ವರ್ಗಗಳೇ ಭಾರವಾದ ಕಲ್ಲುಗಳು. ಅದನ್ನು ಹೊತ್ತು ಈ ಜೀವನವೆಂಬ ಕಡಲೊಳಗೆ ಈಸಲು ಹೊರಟರೆ, ಎಡರು-ತೊಡರುಗಳು ಎದುರಾಗುತ್ತವೆ. ಅವ್ವನನ್ನು ಸಂಬೋಧಿಸುವ ಅಕ್ಕನ ಈ ವಚನದಲ್ಲಿ ಹೇಳಿರುವಂತೆ ಕಲ್ಲನ್ನು ಹೊತ್ತುಕೊಂಡು ಕಡಲಲ್ಲಿ ಇಳಿದರೆ ಸಾವು ಬಂದೇ ಬರುತ್ತದೆ. ಇಲ್ಲಿ ಎಡರು ಅಂದರೆ ಬಿಟ್ಟು ಹೋಗುವುದು. ಈ ದೇಹದಿಂದ ಪ್ರಾಣ ಹಾರಿ ಹೋಗುತ್ತದೆ. ಸಾವಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವ ಭಾವವಿದೆ.
ಉಂಡು ಹಸಿವಾಯಿತ್ತೆಂದಡೆ ಭಂಗವೆಂಬೆ
ಮನುಷ್ಯನಿಗೆ ಇರುವುದು ಮೂರು ಹಸಿವುಗಳು.
ಹೊಟ್ಟೆಯ ಹಸಿವು
ದೇಹದ ಹಸಿವು
ಮಾನಸಿಕ ಹಸಿವು
ಇಲ್ಲಿ ಎರಡು ಅರ್ಥದಲ್ಲಿ ಬಳಸಲಾಗಿದೆ. ಊಟ ಮಾಡಿ ಹೊಟ್ಟೆ ತುಂಬಿದ ಬಳಿಕ ಮತ್ತೆ ಹಸಿವೆಂದು ಆಹಾರ ಸೇವಿಸಿದರೆ, ಆರೋಗ್ಯ ಕೆಡುತ್ತದೆ. ಹಾಗೆಯೇ ಗಂಡು ಹೆಣ್ಣು ಬಾಂಧವ್ಯ ಬೆಸೆದುಕೊಂಡು ಕೇವಲ ಕಾಮನೆಗಳೆ ಬದುಕಿನ ಜೀವಾಳವಲ್ಲ. ಇಲ್ಲಿ ಭಂಗ ಎನ್ನುವ ಶಬ್ದ ಬಹಳ ಸೂಕ್ಷ್ಮವಾದುದು. ಭಂಗ ಎಂದರೆ ಕೆಡಿಸುವುದು, ಮುರಿಯುವುದು ಅಥವಾ ಉಲಂಘನೆ ಎಂದರ್ಥ. ಮಿತಿಯನ್ನು ಮೀರಿ ಬಯಸುವ ದಾಹ. ದಾಹಕ್ಕೆ ಒಳಗಾದರೆ ಅದು ವೈಯಕ್ತಿಕ ಬದ್ಧತೆಯ ನೆಲೆಯಲ್ಲಿ ಉಲಂಘನೆಯಾಗುತ್ತದೆ. ಮನದ ಕಾನೂನು ಮುರಿಯಬಾರದೆಂದು ಅಕ್ಕ ಬಹಳ ನವಿರಾಗಿ ಹೇಳಿದ್ದಾಳೆ.
ಹೊಟ್ಟೆ ಹಸಿವನ್ನು ಮತ್ತು ದೈಹಿಕ ಹಸಿವನ್ನು ನಿಯಂತ್ರಣದಲ್ಲಿಡಲು ಮಾನಸಿಕ ಹಸಿವು ಸಹಾಯ ಮಾಡುತ್ತದೆ ಎನ್ನುವ ಅಕ್ಕನ ಸೂಕ್ಷ್ಮ ಸಂದೇಶವನ್ನು ಗಮನಿಸಬಹುದು. ಅದಕ್ಕೆ ಪ್ರತಿಯೊಬ್ಬರು ತಮ್ಮದೇ ಆದ ಮಾರ್ಗ ಅನುಸರಿಸುವ ಸಾಧ್ಯತೆಗಳಿವೆ ಎಂದು ಅಕ್ಕ ಹೇಳುತ್ತಾಳೆ. ನಾವು ಅದನ್ನು ಹೀಗೆ ಅರ್ಥೈಸಿಕೊಳ್ಳಬಹುದು. ಓದು, ಬರಹ, ಚಿತ್ರಕಲೆ, ಶಿಲ್ಪಕಲೆ, ಹಾಡುವ, ಸಕಾರಾತ್ಮಕ ಹವ್ಯಾಸಗಳು ಸಹಕಾರಿ. ಅಲ್ಲದೆ ಯೋಗ, ಧ್ಯಾನ, ಸರಳ ನಡಿಗೆ, ಓಟ ಇತ್ಯಾದಿಯೂ ಮನಸನ್ನು ಹತೋಟಿಯಲ್ಲಿಡಲು ಸಹಾಯ ಮಾಡುತ್ತವೆ.
ಕಂಡ ಕಂಡ ಠಾವಿನಲ್ಲಿ ಮನ ಬೆಂದಡೆ
ಗಂಡ ಚೆನ್ನಮಲ್ಲಿಕಾರ್ಜುನಯ್ಯನೆಂತೊಲಿವನವ್ವಾ?
ಮನಸು ಚಂಚಲ ಎಂದು ಯಾವತ್ತೂ ಹೇಳುತ್ತಲೇ ಬಂದಿದ್ದೇವೆ. ಅದನ್ನೇ ಅಕ್ಕ ಸುಂದರವಾಗಿ ವಿವರಿಸುತ್ತಾಳೆ. ಈ ಜಗದ ವ್ಯಾಪಾರದಲ್ಲಿ ಏನು ಕಂಡರೂ ಮನಸು ಬಯಸುತ್ತದೆ. ಆ ಬಯಕೆಗಳ ಹಿಂದೆ ಹೋಗುವುದೇ ಮನುಷ್ಯನ ಸಹಜ ಸ್ವಭಾವ. ಅದರ ಬದಲಿಗೆ ನಿರಾಕರಣೆ ಮಾಡುತ್ತ ಸಾಗಿದಾಗ ಬರುವ ಅದ್ಭುತ ಪ್ರತಿಫಲ ಆಶ್ಚರ್ಯ ಮೂಡಿಸುತ್ತದೆ. ಅದನ್ನು ಬದಿಗಿಟ್ಟು ಕಂಡ ಕಂಡಲ್ಲಿ ಮನಸ್ಸನ್ನು ಹರಿ ಬಿಟ್ಟರೆ, ಬೆಂಕಿಯಲ್ಲಿ ಬೆಂದಂತೆ ಎಂದು ಅಕ್ಕ ಹೇಳುತ್ತಿದ್ದಾಳೆ.
ಅಕ್ಕನ ಅನುಭಾವದ ಗಮ್ಯ ಚೆನ್ನಮಲ್ಲಿಕಾರ್ಜುನನನ್ನು ಒಲಿಸಿಕೊಳ್ಳುವುದು. ಅಂದರೆ ತನ್ನನ್ನು ತಾನು ಅರಿಯುವ ಮಾರ್ಗ. ಇಡೀ ಶರಣ ಚಳುವಳಿಯನ್ನು ಅವಲೋಕಿಸಿದಾಗ, ಶರಣರ ಸಂಸ್ಕೃತಿ ಎದ್ದು ಕಾಣುತ್ತದೆ. ಅಲ್ಲಿ ಅನುಭವಿಸಿದ ಲಿಂಗಪೂಜಾ ವಿಧಾನ ಅನೇಕ ಶರಣರನ್ನು ಅನುಭಾವದ ಸ್ಥಿತಿಗೆ ಕೊಂಡೊಯ್ದಿದೆ. ಆ ಹಂತ ತಲುಪಿದವರಿಗೆ ಲಿಂಗಾಂಗ ಸಾಮರಸ್ಯದ ಅನುಭೂತಿ ಪಡೆಯಲು ಸಾಧ್ಯವಾಯಿತು. ಅಂತಹ ದವ್ಯ ಅನುಭೂತಿ ಅನುಗ್ರಹಿಸಿದವರು ಶರಣ ಸತಿಗಳಾದರು. ಅವರಿಗೆಲ್ಲಾ ಆ ಪರಮಾತ್ಮ ಲಿಂಗ ಪತಿಯಾದನು. ಆ ಲಿಂಗಪತಿಯನ್ನು ಅಂತರಂಗದಲ್ಲಿ ಕಂಡು ಸಂಭ್ರಮಿಸಿ ಸಾರ್ಥಕ್ಯದ ಭಾವ ತಳೆದರು. ಅಂತಹ ಇಹ ಪರದ ಸಾಕ್ಷಾತ್ಕಾರವೇ ಅರಿವಿನ ಬೆಳಕು. ಆ ಬೆಳಕಿನ ದರ್ಶನವಾಗ ಬೇಕಾದರೆ ಮನಸು ಕಂಡ ಕಂಡ ಕಡೆಯೆಲ್ಲಾ ಹರಿದಾಡದೆ ತದೇಕ ಚಿತ್ತದಿಂದ ಸಾಗುವುದು ಅವಶ್ಯಕ. ಎಲ್ಲರಿಗೂ ದಕ್ಕದ ಅಂತಹ ಆತ್ಮ ವಿದ್ಯೆ ಅಕ್ಕನಿಗೆ ದಕ್ಕಿತ್ತು. ಹಾಗಾಗಿ ಇಂದಿಗೂ ಅಕ್ಕನನ್ನು ಜಗದ ಅಕ್ಕ ಜಗನ್ಮಾತೆ ಎಂದು ಸ್ಮರಿಸಲಾಗುತ್ತಿದೆ.
ನಮ್ಮ ಬದುಕಿನ ಪ್ರತಿಯೊಂದು ಆಗು ಹೋಗುಗಳು ಗೊತ್ತಿದ್ದರೂ ಮನದ ದಾಹದಿಂದ ನಾವು ಮನೋ ನಿಯಂತ್ರಣ ಕಳೆದುಕೊಂಡು ದುಃಖಕ್ಕೆ ಒಳಗಾಗುತ್ತೇವೆ. ಇಂತಹ ವಾಸ್ತವಿಕ ಸಂಗತಿಗಳನ್ನು ಅರಿಯಲು ಈ ವಚನ ಕೈ ದೀವಿಗೆ.
ಲೌಕಿಕ ಬದುಕಿನ ಆಸೆ ಆಮಿಷಗಳು ನಮನ್ನು ಆಳಲು ನಮ್ಮ ಮನೋದೌರ್ಬಲ್ಯಗಳೇ ಕಾರಣ ಆದರೆ ಅವುಗಳನ್ನು ಗೆದ್ದ ಅಕ್ಕ ಅಲೌಕಿಕ ಜಗದ ವಿರಾಗಿಣಿಯಾಗಿ ನಮ್ಮನ್ನು ನಿರಂತರ ಎಚ್ಚರಿಸುತ್ತಾಳೆ.
ಸಿಕಾ