ವಚನಗಳನ್ನು ಪರಿಚಯಿಸಿದ ಫ.ಗು ಹಳಕಟ್ಟಿ

ವಚನಗಳನ್ನು ಪರಿಚಯಿಸಿದ ಫ.ಗು ಹಳಕಟ್ಟಿ

ಜುಲೈ 2 ರಂದು ಫ ಗುಹಳಕಟ್ಟಿಯವರು ಹುಟ್ಟಿದ ಸುದಿನ.ವಚನ ಪಿತಾಮಹ ಎಂದು ಪ್ರಖ್ಯಾತರಾದವರು. ಇವರು ಸಾಹಿತ್ಯ ಪ್ರಚಾರಕರು ಮತ್ತು ಸಂಪಾದಕರು ಹೌದು. 143.ನೇಯ ದಿನಾಚರಣೆಯ ಶುಭಾಶಯಗಳು.

ಜೀವನ….

ಫ ಗು ಹಳಕಟ್ಟಿಯವರು ಜುಲೈ 2ನೇ ತಾರೀಕು 1880 ರಂದು ಧಾರವಾಡದಲ್ಲಿ ಜನಿಸಿದರು. ತಂದೆ ಗುರುಬಸಪ್ಪ ಹಳಕಟ್ಟಿ ತಾಯಿ ದಾನಾದೇವಿ. ಹಳಕಟ್ಟಿ ಎಂಬುದು ಇವರ ಮನೆತನದ ಹೆಸರು. ಇವರ ತಂದೆ ವೃತ್ತಿಯಲ್ಲಿ ಶಿಕ್ಷಕರಾಗಿದ್ದರೂ ಪ್ರವೃತ್ತಿಯಲ್ಲಿ ಸಾಹಿತಿಗಳಾಗಿದ್ದರು.

ರಚನೆಗಳು..

ಇಂಗ್ಲೆಂಡಿನ ಇತಿಹಾಸ, ಏಕನಾಥ ಸಾಧುಗಳ ಚರಿತೆ, ಫ್ರಾನ್ಸ್ ದೇಶದ ರಾಜ್ಯಕ್ರಾಂತಿ, ಸಿಕಂದರ ಬಾದಶಹನ ಚರಿತ್ರೆ ಮುಂತಾದ ಕೃತಿಗಳನ್ನು ರಚಿಸಿ ಆ ಕಾಲದಲ್ಲಿ ಸಾಹಿತಿಗಳಾಗಿ ಪ್ರಸಿದ್ಧಿ ಪಡೆದಿದ್ದರು, ಹೀಗಾಗಿ ಪಕೀರಪ್ಪ ನವರಿಗೆ ಸಾಹಿತ್ಯ ರಕ್ತಗತವಾಗಿ ಬಂದಿತ್ತು.
ಫಕೀರಪ್ಪ ನವರ ಶಿಕ್ಷಣ…. ಪಕೀರಪ್ಪ ನವರು ತಮ್ಮ ಹುಟ್ಟೂರಾದ ಧಾರವಾಡದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪ್ರಾರಂಭಿಸಿ 1896ರಲ್ಲಿ ಮೆಟ್ರಿಕ್ ಮುಗಿಸಿದರು.ನಂತರ ಉನ್ನತ ಶಿಕ್ಷಣಕ್ಕಾಗಿ ಮುಂಬೈಗೆ ತೆರಳಿ ಅಲ್ಲಿನ ಸೇಂಟ್ ಝೇವಿಯರ್ ಕಾಲೇಜು ಸೇರಿದರು. ಅಲ್ಲಿ ಕನ್ನಡ ಪುರೋಹಿತ ಆಲೂರು ವೆಂಕಟರಾಯರು ಇವರ ಸಹಪಾಠಿಗಳ ಆದರು. ಆ ಸಂದರ್ಭದಲ್ಲಿ ಮುಂಬಯಿಯ ವಿದ್ಯಾರ್ಥಿಗಳು ಮತ್ತು ಅಲ್ಲಿನ ಜನರಲ್ಲಿದ್ದ ಗುಜರಾತಿ ಮತ್ತು ಮರಾಠಿ ಭಾಷಾಭಿಮಾನ , ಕನ್ನಡದಲ್ಲಿ ತಮ್ಮ ಭಾಷೆಯ ಬಗ್ಗೆ ನಿರಭಿಮಾನ ಇವರ ಮನಸ್ಸಿನ ಮೇಲೆ ತುಂಬಾ ಪರಿಣಾಮ ಬೀರಿತು.

‌‌ಕನ್ನಡಿಗರುಎಚ್ಚರಗೊಳ್ಳದಿದ್ದರೆ ಕನ್ನಡ ಉದ್ಧಾರವಾಗದು ಎಂದು ಆಕ್ಷಣವೇ ಕನ್ನಡ ನಾಡು, ನುಡಿ,ನೆಲ, ಜಲ, ಸಾಹಿತ್ಯ ಸಂಸ್ಕೃತಿಗಾಗಿ ದುಡಿಯಲು ವಿದ್ಯಾರ್ಥಿದೆಸೆಯಲ್ಲಿ ಸಂಕಲ್ಪ ಮಾಡಿದರು, ಕರ್ನಾಟಕ ಏಕೀಕರಣಕ್ಕಾಗಿ ಆಗಲೇ ಹೋರಾಟದಲ್ಲಿ ನಿರತರಾಗಿದ್ದ ಆಲೂರು ವೆಂಕಟರಾಯರು ಇವರಿಗೆ ಸ್ಪೂರ್ತಿಯ ಸೆಲೆಯಾಗಿದ್ದರು.19 04 ರಲ್ಲಿ ಕಾನೂನು ಪದವೀಧರರಾಗಿ ಬೆಳಗಾವಿಯಲ್ಲಿ ವಕೀಲಿ ವೃತ್ತಿ ಪ್ರಾರಂಭಿಸಿದರಾದರೂ ಕೆಲವು ತಿಂಗಳುಗಳಲ್ಲೇ ಕಾರಣಾಂತರಗಳಿಂದ ಬೆಳಗಾವಿಯಿಂದ ವಿಜಯಪುರಕ್ಕೆ ವಾಸ್ತವ ಬದಲಾಯಿಸಿದ್ದರು. ಅಲ್ಲಿಂದೀಚೆಗೆ ವಿಜಯಪುರ ವನ್ನೇ ತಮ್ಮ ಕಾರ್ಯಕ್ಷೇತ್ರ ಮಾಡಿಕೊಂಡರು. ಅದೇ ವರ್ಷ ಅವರ ದಕ್ಷ ವಕೀಲಿವೃತ್ತಿ ನೆನೆದ ಸರಕಾರ ಅವರನ್ನು ಪಬ್ಲಿಕ್ ಪ್ರಾಸಿಕ್ಯೂಟರ್ ಮತ್ತು ಸರಕಾರಿ ಪ್ಲೇಡರರೆಂದು ನೇಮಿಸಿತು. ಹಳಕಟ್ಟಿಯವರು ಎಂಎಂ ಅಧ್ಯಯನ ಮಾಡಿದ್ದರೂ ಪರೀಕ್ಷೆಗೆ ಕುಳಿತು ಕೊಳ್ಳಲು ಆಗಲಿಲ್ಲ. ಇದೇ ಸಂದರ್ಭದಲ್ಲಿ ಕರ್ನಾಟಕದ ಕೃಷಿಕ ಉದ್ಧಾರಕ ವೀರಶೈವ ತತ್ವಾರಾಧಕ ದಾನಿಗಳ ನಿಸಿದ ಸಿರಸಂಗಿ ಲಿಂಗರಾಜರು ವೀರಶೈವ ಮಹಾಸಭಾದ ಅಧಿವೇಶನದ ಅಧ್ಯಕ್ಷರಾದರು. ಅವರ ವಿಚಾರಧಾರೆ ಕೇಳಿ ಫಕೀರಪ್ಪ ನವರ ಮನಸ್ಸು ಸಾಕಷ್ಟು ಗಟ್ಟಿಗೊಂಡಿತು.
ಜನಪ್ರಿಯತೆ::… ಒಂದೆಡೆ ವಕೀಲಿ ವೃತ್ತಿ ಅಪಾರ ಕಾನೂನು ಜ್ಞಾನದಿಂದಾಗಿ ಆ ಭಾಗದ ಪ್ರಸಿದ್ಧ ವಕೀಲರಾಗಿ ರೂಪುಗೊಂಡ ಇವರು ತಮ್ಮ ಜನಪ್ರಿಯತೆ ಇಂದಲೇ 1905 ರಲ್ಲಿ ಬಿಜಾಪುರ್ ನಗರಸಭೆಯ ಶಾಲಾ ಕಾರ್ಯನಿರ್ವಾಹಕ ಮಂಡಳಿಯ ಸಭಾಧ್ಯಕ್ಷರಾಗಿ ಮತ್ತು ಜಿಲ್ಲಾ ಗ್ರಾಮಾಂತರ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿಯಾಗಿ ಆಯ್ಕೆಯಾದರು. ನಂತರದ ದಿನಗಳಲ್ಲಿ ಮುಂಬಯಿ ವಿಧಾನಪರಿಷತ್ತಿನ ಸದಸ್ಯರಾಗಿ ತಮ್ಮ ಶಾಸನಬದ್ಧ ಅಧಿಕಾರದಿಂದ ಕನ್ನಡವನ್ನು ಗಟ್ಟಿಗೊಳಿಸಲು, ಪುಷ್ಟಿ ಗೊಳಿಸಲು ಒಟ್ಟಾರೆ ಸಮೃದ್ಧವಾಗಿ ಕನ್ನಡ ಕಟ್ಟುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿ ಅಜರಾಮರೆನಿಸಿದ್ದಾರೆ.
ಸಾಹಿತ್ಯ

1920ರ ಹೊತ್ತಿಗಾಗಲೇ 1 ಸಾವಿರ ಕಟ್ಟು ಸಂಗ್ರಹವಾಯಿತು. ಪಕೀರಪ್ಪ ನವರು ಹಗಲಿರುಳು ಶ್ರಮವಹಿಸಿ ಮಾಡಿದ ಸಂಶೋಧನೆ ವಚನಶಾಸ್ತ್ರ ಪ್ರಸಾರ ಭಾಗ-1 ಗ್ರಂಥ ತಯಾರಾಯಿತು. ಇದನ್ನು ಹೇಗಾದರೂ ಮಾಡಿ ಹೊರತರಬೇಕೆಂಬ ಸಂಕಲ್ಪದೊಂದಿಗೆ ಮಂಗಳೂರಿನ ಬಾಸೆಲ್ ಮಿಷನ್ ಪ್ರೆಸ್ಸಿಗೆ ಐದುನೂರು ರೂಪಾಯಿಗಳೊಂದಿಗೆ ಹಸ್ತಪ್ರತಿ ಕೊಟ್ಟು ಕಳಿಸಿದರು.1925ರಲ್ಲಿ ತಮ್ಮ ಸ್ವಂತ ಮನೆ ಮಾರಿ “ಹಿತಚಿಂತಕ” ಮುದ್ರಣಾಲಯವನ್ನು ಪ್ರಾರಂಭಿಸಿದರು. ಹಳಕಟ್ಟಿಯವರು ತಾಳೆಯೋಲೆ ಗಳನ್ನು ಸಂಗ್ರಹಿಸುವುದಕ್ಕೆ ಮೊದಲು ಕವಿಚರಿತೆಕಾರರು ಗುರುತಿಸಿದ್ದು ಕೇವಲ 50 ವಚನಕಾರರನ್ನು ಮಾತ್ರ ಪಗು ಹಳಕಟ್ಟಿಯವರು ತಮ್ಮ ಸಂಶೋಧನೆಯ ಮೂಲಕ 250 ಕ್ಕೂ ಹೆಚ್ಚು ವಚನಕಾರರನ್ನು ಬೆಳಕಿಗೆ ತಂದರು. ಜೊತೆಗೆ ಹರಿಹರನ 42 ರಗಳೆಗಳನ್ನು ಸಂಶೋಧಿಸಿ ಪ್ರಕಟಿಸಿದ ಸಾಧನೆ ಹಳಕಟ್ಟಿಯವರಿಗೆ ಸಲ್ಲುತ್ತದೆ. 1923 ರಲ್ಲಿ ವಚನ ಶಾಸ್ತ್ರ ಭಾಗ 1ಪ್ರಕಟವಾಯಿತು.1925ರಲ್ಲಿ ತಮ್ಮ ಮನೆ ಮಾರಿ ಸ್ಥಾಪಿಸಿದ ಮುದ್ರಣಾಲಯ ದಿಂದ ಹಗಲಿರುಳು ಮುದ್ರಿಸಿದ ಪ್ರತಿಗಳನ್ನು ಅಧ್ಯಯನಮಾಡಿ ತಿದ್ದಿತೀಡಿ ಮುದ್ರಣಕ್ಕೆ ಅಣಿಗೊಳಿಸುವ ಕಾರ್ಯ ಕೈಕೊಂಡರು.
೧೯೫೬ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯದ ಪ್ರತಿಷ್ಠಿತ ಗೌರವ ಡಾಕ್ಟರೇಟ್ ಪದವಿ ಪ್ರದಾನ ಸಮಾರಂಭ. ಡಾ.ಪಾವಟೆಯವರು ಕುಲಪತಿಗಳಾಗಿದ್ದರು.

ಕರ್ನಾಟಕ ವಿಶ್ವವಿದ್ಯಾನಿಲಯದ ಘಟಿಕೋತ್ಸವದಲ್ಲಿ ‘ವಚನ ಸಾಹಿತ್ಯದ ಪಿತಾಮಹ’ನೆಂಬ ಬಿರುದಿಗೆ ಪಾತ್ರರಾಗಿದ್ದ ಫ. ಗು. ಹಳಕಟ್ಟಿಯವರಿಗೆ ಗೌರವ ಡಾಕ್ಟರೇಟ್ ನೀಡಲಾಯಿತು. ಘಟಿಕೋತ್ಸವ ಕಾರ್ಯಕ್ರಮದ ನಂತರ ಅತಿಥಿಗಳಿಗೆ ವಿಶ್ವವಿದ್ಯಾನಿಲಯದ ಅತಿಥಿಗೃಹದಲ್ಲಿ ಭೋಜನಕೂಟ ಏರ್ಪಡಿಸಲಾಗಿತ್ತು. ಡಾಕ್ಟರೇಟ್ ಪದವಿ ಸ್ವೀಕರಿಸಲು ಕೋಟು, ಕಚ್ಚೆ, ಪೇಟ ಧರಿಸಿ ಬಂದಿದ್ದ ಹಳಕಟ್ಟಿಯವರು ಔತಣಕೂಟದಲ್ಲಿ ಪಾಲ್ಗೊಂಡು ಊಟಕ್ಕೆ ಕುಳಿತರು. ಆಗ ಡಾ.ಪಾವಟೆಯವರು ರಿಜಿಸ್ಟ್ರಾರ್ ಆಗಿದ್ದ ಪ್ರೊ. ಎಸ್.ಎಸ್. ಒಡೆಯರ್‌ರವರನ್ನು ಕರೆದು ಡಾ. ಫ. ಗು. ಹಳಕಟ್ಟಿ ಅವರಿಗೆ ಕೋಟು ಕಳಚಿ ಊಟ ಮಾಡಲು ಸೂಚಿಸಿದರು. ಪ್ರೊ ಎಸ್. ಎಸ್. ಒಡೆಯರ್ ಅವರು ಹಳಕಟ್ಟಿಯವರನ್ನು ಉದ್ದೇಶಿಸಿ ‘‘ಸಾರ್ ಸೆಖೆ ಬಾಳಾ ಇದೆ. ಕೋಟ್ ತೆಗೆದು ಆರಾಮಾಗಿ ಊಟ ಮಾಡ್ರಲಾ’’ ಎಂದರು. ಆಗ ಹಳಕಟ್ಟಿಯವರು ಒಡೆಯರ್‌ರವರನ್ನು ಹತ್ತಿರ ಕರೆದು ‘‘ತಮ್ಮಾ ಕೋಟಿನ ಒಳಗ ಅಂಗಿ ಪೂರಾ ಹರಿದು ಹೋಗದ, ಅದಕ್ಕ ನಾ ಕೋಟ್ ಹಾಕ್ಕಂಡಿದೀನಿ. ನಾನು ಸೆಖೆ ತಡಕೋತೀನಿ ತಮ್ಮಾ, ಆದರ ಅವಮಾನ ತಡಿಯಾಕಾಗುವುದಿಲ್ಲ’’ ಎಂದಾಗ ಒಡೆಯರ್ ಮೂಕವಿಸ್ಮಿತರಾಗಿ ನಿಂತಿದ್ದರು

ಕರ್ನಾಟಕದ ಇತಿಹಾಸದಲ್ಲಿಯೇ ಸಂಶೋಧನೆ ಪ್ರಕಟಿಸಲು ಮುದ್ರಣಾಲಯ ಸ್ಥಾಪಿಸಿದ ಉದಾಹರಣೆ ಇಲ್ಲ ಅಂತಹ ಮುಂದಾಲೋಚನೆ, ತೀಕ್ಷ್ಣ ಬುದ್ಧಿ, ಚಿಂತನೆ ಹಳಕಟ್ಟಿಯವರದಾಗಿತ್ತು. ಪತ್ರಿಕಾ ಮಾಧ್ಯಮದಿಂದ ಏಕಕಾಲಕ್ಕೆ ಎರಡು ಪತ್ರಿಕೆ ಸಂಪಾದಿಸಿ ಪ್ರಕಟಿಸಿ ಜನಸಮೂಹದ ಜವಾಬ್ದಾರಿ ತಿಳಿಸುವ ಕಾರ್ಯಕ್ಕೆ ಕೈಹಾಕಿದರು. 1926 ರಲ್ಲಿ ಆರಂಭಿಸಿದ ಶಿವಾನುಭವ ಮಾಸಿಕ ಪತ್ರಿಕೆ 35 ವರ್ಷ ನಿರಂತರ ನಡೆಸಿದ “ಕನ್ನಡ ಪತ್ರಿಕೆ”ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

1927ರಲ್ಲಿ ನವಕರ್ನಾಟಕ ಎಂಬ ವಾರಪತ್ರಿಕೆ ಆರಂಭಿಸಿದರು. “ವಚನ ಸಾಹಿತ್ಯ ಸಾರ” ವಂತೂ ಅಪೂರ್ವ ವಚನಗಳಲ್ಲಿ ಒಂದು ಅದ್ಭುತ ಕೃತಿ. ಶೂನ್ಯ ಸಂಪಾದನೆ, ಶಿವಾನುಭವ, ಕೃಷಿ ವಿಜ್ಞಾನ, ಹರಿಹರನ ರಗಳೆ, ಪ್ರಭುದೇವರ ವಚನಗಳು, ಪ್ರದೀಪಿಕೆ, ಶಬ್ದಕೋಶ, ಆದಿಶಕ್ತಿ ಪುರಾಣ ಮುಂತಾದವುಗಳು ಇವರ ಪ್ರಮುಖ ಕೃತಿಗಳು.
ಇವರು ವಚನ ಸಾಹಿತ್ಯ ರಕ್ಷಿಸದೆ ಹೋಗಿದ್ದರೆ ನಾವಿಂದು ‌‌ಅಮೂಲ್ಯ ನಿಧಿಯಿಂದ ವಂಚಿತರಾಗುತ್ತಿದ್ದೆವು. ಸರಳ,ವಿರಳ ನಿಗರ್ವಿ ಡಾ.ಫ.ಗು.ಹಳಕಟ್ಟಿಯವರನ್ನು ಕೇವಲ ಅವರ ಜನ್ಮದಿನದಂದು ‌‌‌‌‌‌‌‌‌‌‌‌ಸ್ಮರಿಸದೆ ಪ್ರತಿದಿನ,ಪ್ರತಿಕ್ಷಣ ನೆನೆಯುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ

ಅದಕ್ಕೆಂದೆ ನಮ್ಮ ಘನ ಸರ್ಕಾರ ಅವರ ಜನ್ಮದಿನಾಚರಣೆಯನ್ನು ” ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ”ಯನ್ನಾಗಿ ಕಳೆದ ವರ್ಷದಿಂದ ಆಚರಿಸಲಾಗುತ್ತಿದೆ. ಎಲ್ಲರೂ ವಚನ ಸಂರಚನಾ ದಿನಾಚರಣೆ ಆಚರಿಸಿ ಪುನೀತರಾಗೋಣ.ಮುಂದಿನ ಪೀಳಿಗೆ ಮತ್ತೆ ಮತ್ತೆ ಸ್ಮರಿಸುವಂತೆ ಸದಾ ಕಾರ್ಯ ತತ್ಪರರಾಗೋಣ. ‌‌ವ‌ಚನಗಳು ಅಂದಿಗೂ,ಇಂದಿಗೂ ಎಂದೆಂದಿಗೂ ನಮ್ಮೆಲ್ಲರಿಗೂ ದಾರಿದೀಪಗಳು.
ಜೀವನಾಡಿಗಳು ಅಂದರೂ ಅತಿಶಯೋಕ್ತಿಯಲ್ಲ.

ಜಯಶ್ರೀ.ಭ.ಭಂಡಾರಿ.
ಬಾದಾಮಿ

Don`t copy text!