ಅರಿವು ಮತ್ತು ಸಂತೃಪ್ತಿ

ಅಕ್ಕನೆಡೆಗೆ- ವಚನ 37

ಅರಿವು ಮತ್ತು ಸಂತೃಪ್ತಿ

ಎನ್ನಂತೆ ಪುಣ್ಯಂಗೈದವರುಂಟೆ?
ಎನ್ನಂತೆ ಭಾಗ್ಯಂಗೈದವರುಂಟೆ?
ಕಿನ್ನರನಂತಪ್ಪ ಸೋದರರೆನಗೆ
ಏಳೇಳು ಜನ್ಮದಲ್ಲಿ ಶಿವಭಕ್ತರೆ ಬಂಧುಗಳೆನಗೆ
ಚೆನ್ನಮಲ್ಲಿಕಾರ್ಜುನನ‍ಂತಪ್ಪ ಗಂಡ ನೋಡಾ ಎನಗೆ

ಹನ್ನೆರಡನೇ ಶತಮಾನದಲ್ಲಿ ಅಕ್ಕಮಹಾದೇವಿಯು ಶರಣ ಸಾಂಗತ್ಯವನ್ನು ಅಂತರಾಳದಿಂದ ಬಯಸುತ್ತಾಳೆ. ಅದಕ್ಕೆ ಪೂರಕವಾಗಿ ಅವಳ ಬದುಕಿನ ದಾರಿಯು ಹಾಗೆಯೆ ತೆರೆದುಕೊಳ್ಳುತ್ತ ಹೋಗುತ್ತದೆ. ಇಂದಿನ ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕು ಅಂದಿನ ಕಲ್ಯಾಣ. ಅಕ್ಕ ಉಡುತಡಿಯಿಂದ ಕಲ್ಯಾಣ ತಲುಪುವಷ್ಟರಲ್ಲಿ, ಅವಳ ಆಗಮನದ ಸುದ್ದಿ, ಅಲ್ಲಿಯ ಶರಣರೆಲ್ಲರಿಗೂ ತಿಳಿದು ಬಂದಿರುತ್ತದೆ. ಕಲ್ಯಾಣ ಪ್ರವೇಶ ಮಾಡುವುದಕ್ಕೂ ಮೊದಲು ಊರ ಹೆಬ್ಬಾಗಿಲಿನ ಹೊರಗೆ ಶರಣ ಕಿನ್ನರಯ್ಯನಿಂದ ಪರೀಕ್ಷೆಗೆ ಒಳಗಾಗುತ್ತಾಳೆ.

ಪ್ರಬುದ್ಧ ಮನಸ್ಥಿತಿಯ ಅಕ್ಕನಿಗೆ ಕೇಳಲು, ಅಷ್ಟೇ ಪ್ರಬುದ್ಧ ಕಿನ್ನರಯ್ಯ ಅನೇಕ ಪ್ರಶ್ನೆಗಳನ್ನು ಹೊತ್ತು ತಂದಿರುತ್ತಾನೆ. ಅದಕ್ಕೆ ಸಮರ್ಪಕ ಉತ್ತರ ನೀಡುತ್ತಾಳೆ. ಅವಳ ಅಚಾರ, ವಿಚಾರ ಮತ್ತು ದೇಹಾತೀತ ಚಿಂತನೆ ಅವಳಲ್ಲಿರುವ ಅನುಭಾವದ ಮಟ್ಟವನ್ನು ಸಾಬೀತು ಪಡಿಸುತ್ತವೆ. ಅವಳ ಆಂತರಿಕ ಶಕ್ತಿಯನ್ನು ಒರೆದೊರೆದು ಒರೆಗೆ ಹಚ್ಚಿದಂತೆ ಕಿನ್ನರಯ್ಯನ ಪ್ರಶ್ನೆಗಳ ಸುರಿಮಳೆಯಾಗುತ್ತದೆ.

ಅವಳು ತನ್ನೊಳಗೆ ಅಪ್ಪಿತಪ್ಪಿಯೂ ‘ಕಾಮ’ ಉಳಿದುಕೊಂಡಿದ್ದರೆ, ಅದನ್ನು ಮತ್ತು ಅದರ ಹಣೆಬರಹವನ್ನೇ ಅಳಿಸಿಬಿಡುವೆ ಎಂದು ಪ್ರಜ್ಞಾಪೂರ್ವಕವಾಗಿ ಉತ್ತರಿಸುತ್ತಾಳೆ.
ಜವ್ವನದ ಹೊರಮಿಂಚಿನಲ್ಲಿ ನಿಮ್ಮ ಕಣ್ಣಿಂಗೆ ತೋರುವ
ಕಾಮನ ಸುಟ್ಟುರುಹಿದ ಭಸ್ಮವ ನೋಡಯ್ಯಾ!
ಹೀಗೆ ಕಿನ್ನರಯ್ಯನಿಗೆ ಸ್ಪಷ್ಟ ಉತ್ತರ ನೀಡುತ್ತಾಳೆ.

ಕಿನ್ನರಯ್ಯ ಅಕ್ಕಮಹಾದೇವಿಯನ್ನು ಪರೀಕ್ಷಿಸಿದ ನಂತರ ಅವನೊಳಗೂ ಅನೇಕ ಬದಲಾವಣೆಗಳಾಗುತ್ತವೆ. ತನ್ನ ಆ ಅನುಭವವನ್ನು ಅನೇಕ ವಚನಗಳಲ್ಲಿ ದಾಖಲಿಸಿರುವುದನ್ನು ಗಮನಿಸಬಹುದು. ಅವುಗಳಲ್ಲಿ ಈ ವಚನ ಗಮನ ಸೆಳೆಯುತ್ತದೆ.

ಮಸ್ತಕವ ಮುಟ್ಟಿ ನೋಡಿದಡೆ
ಮನೋಹರದಳಿವು ಕಾಣ ಬಂದಿತ್ತು!
ಮುಖಮಂಡಲವ ಮುಟ್ಟಿ ನೋಡಿದಡೆ
ಮೂರ್ತಿಯ ಅಳಿವು ಕಾಣ ಬಂದಿತ್ತು!
ಕೊರಳ ಮುಟ್ಟಿ ನೋಡಿದಡೆ
ಗರಳಧರನ ಇರವು ಕಾಣಬಂದಿತ್ತು!
ತೋಳುಗಳ ಮುಟ್ಟಿ ನೋಡಿದಡೆ
ಶವನಪ್ಪುಗೆ ಕಾಣಬಂದಿತ್ತು!
ಉರಸ್ಥಲವ ಮುಟ್ಟಿ ನೋಡಿದಡೆ
ಪರಸ್ಥಲದಂಗಲೇಪ ಕಾನ ಬಂದಿತ್ತು!
ಬಸಿರ ಮುಟ್ಟಿನೋಡಿದಡೆ
ಬ್ರಹ್ಮಾಂಡವ ಕಾಣಬಂದಿತ್ತು!
ಗುಹ್ಯವ ಮುಟ್ಟಿನೋಡಿದಡೆ
ಕಾಮದಹನ ಕಾಣಬಂದಿತ್ತು!
ಮಹಾಲಿಂಗ ತ್ರಿಪುರಾಂತಕದೇವಾ
ಮಹಾದೇವಿಯಕ್ಕನ ನಿಲುವನರಿಯದೆ ಅಳುಪಿ ಕೆಟ್ಟೆನು”

ಹೀಗೆ ಅಕ್ಕಮಹಾದೇವಿಯ ಪರೀಕ್ಷೆ ನಡೆಸಿದ ನಂತರ, ಅವಳು ಕಿನ್ನರಯ್ಯನನ್ನು ತನ್ನ ಸಹೋದರನೆಂದು ಸ್ವೀಕರಿಸುತ್ತಾಳೆ. ಆಗ ಕಿನ್ನರಯ್ಯ ಅವಳಿಗೆ ಶರಣು ಹೋಗುತ್ತಾನೆ. ಆ ವಚನ ಹೀಗಿದೆ,

ಶರಣಾರ್ಥಿ ಶರಣಾರ್ಥಿ ಎಲೆ ನಮ್ಮವ್ವ
ಶರಣಾರ್ಥಿ ಶರಣಾರ್ಥಿ ಕರುಣಸಾಗರ ನಿಧಿಯೆ
ದಯಾಮೂರ್ತಿ ತಾಯೆ ಶರಣಾರ್ಥಿ!
ಮಹಾಲಿಂಗ ತ್ರಿಪುರಾಂತಕನೊಡ್ಡಿದ ತೊಡಕು
ನೀವು ಬಿಡಿಸಿದವರಾಗಿ ನಿಮ್ಮ ದಯದಿಂದ
ನಾನು ಹುಲಿನೆಕ್ಕಿ ಬದುಕಿದೆನು
ಶರಣಾರ್ಥಿ ಶರಣಾರ್ಥಿ ತಾಯೆ”

ಇದಾದ ನಂತರ ಅಕ್ಕ ಅನುಭವ ಮಂಟಪದಲ್ಲಿ ಅಲ್ಲಮನ ಪರೀಕ್ಷೆಗೆ ಒಳಗಾಗುತ್ತಾಳೆ. ಅದರಲ್ಲೂ ಗೆದ್ದು ಕೆಲ ಕಾಲ ಎಲ್ಲಾ ಶರಣರೊಂದಿಗೆ ತಂಗುತ್ತಾಳೆ. ಆಗ ಅಲ್ಲಿ ಆದ ಅನುಭವದಿಂದ ತನ್ನ ಹುಡುಕಾಟದ ಗಮ್ಯ ಕಂಡುಕೊಳ್ಳುತ್ತಾಳೆ. ಶಿವಯೋಗದ ಲಿಂಗಧ್ಯಾನ ಅವಳೊಳಗಿನ ಅಂತಃ ಶಕ್ತಿಯನ್ನು ಇನ್ನಷ್ಟು ಸ್ಪಷ್ಟತೆಯೆಡೆಗೆ ಕೊಂಡೊಯ್ಯುತ್ತದೆ. ಲಿಂಗಾಂಗ ಸಾಮರಸ್ಯದ ಅನುಭೂತಿಗೆ ಬೆರೆಗಾಗಿ ಮೈ ಮರೆಯುತ್ತಾಳೆ. ‘ನಿಮ್ಮನಗಲದ ಪೂಜೆ ಇಂದು ಅನುವಾಯಿತ್ತೆನಗೆ’ ಎಂದು ಹೇಳುವಲ್ಲಿ ಆ ಸಂತೃಪ್ತ ಭಾವವನ್ನು ಗುರುತಿಸಬಹುದು. ಅವಳ ಆ ಸಂತೃಪ್ತ ಭಾವವೇ ಮೇಲಿನ ವಚನದಲ್ಲಿ ಅನಾವರಣಗೊಂಡಿದೆ.

ಶರಣರ ಸಾಂಗತ್ಯ ಲಭಿಸಿದುದರಿಂದ ಈ ಜಗತ್ತಿನಲ್ಲಿ ತನ್ನ ಹಾಗೆ ಪುಣ್ಯ ಮಾಡಿದವರು ಯಾರಾದರೂ ಇದ್ದಾರೆಯೆ? ತನ್ನ ಹಾಗೆ ಭಾಗ್ಯವಂತರು ಇದ್ದಾರೆಯೆ? ಎಂದು ಪ್ರಶ್ನೆ ಮಾಡುತ್ತ, ತನ್ನ ಈ ಪುಣ್ಯ ಮತ್ತು ಭಾಗ್ಯಕ್ಕೆ ಕಾರಣವೇನು ಎನ್ನುವುದನ್ನು ಸ್ಪಷ್ಟ ಪಡಿಸುತ್ತಾಳೆ.

ಕಲ್ಯಾಣದಲ್ಲಿ ತನ್ನನ್ನು ಸ್ವಾಗತಿಸಲು ಬಂದಿರುವ ಕಿನ್ನರಯ್ಯನಂಥವರು ಅನೇಕ ಸೋದರರಿದ್ದಾರೆ. ಅಂದರೆ ಸಮಗಾರ ಹರಳಯ್ಯ, ಮಡಿವಾಳ ಮಾಚಿದೇವ, ಕೂಗಿನ ಮಾರಿತಂದೆ, ಅಂಬಿಗರ ಚೌಡಯ್ಯ, ಮುಂತಾದವರೆಲ್ಲರೂ ತನ್ನ ಸಹೋದರರು ಎನ್ನುವ ಭಾವ ಅಕ್ಕನಲ್ಲಿ ಮೂಡುತ್ತದೆ. ಇದಕ್ಕೆಲ್ಲಾ ಕಾರಣ ಕಲ್ಯಾಣದಲ್ಲಿ ನೆಲೆಸಿರುವ ಶಿವಭಕ್ತರು, ಅಂದರೆ ಶರಣರು. ಆ ಕಾರಣಕ್ಕಾಗಿ ಈ ಜನ್ಮ ಅಷ್ಟೇ ಅಲ್ಲ ಏಳೇಳು ಜನ್ಮಕ್ಕೂ ಶಿವಭಕ್ತರೇ ತನಗೆ ಬಂಧು ಬಳಗವೆಂದು ಹೇಳಿಕೊಳ್ಳುತ್ತಾಳೆ.

ಎಲ್ಲಕ್ಕಿಂತ ಮುಖ್ಯವಾಗಿ ಸ್ವಾಸ್ಥ್ಯ ಸಮಾಜದ ಲಕ್ಷಣವೆಂದರೆ ಈ ಸೋದರತ್ವ, ಸೋದರತ್ವ ಭಾವ ಮೂಡದೆ ಗಂಡು, ಹೆಣ್ಣಿನ ಮಧ್ಯ ವಿಶ್ವಾಸ ಒಡ ಮೂಡದು. ನಮ್ಮೊಂದಿಗೆ ಇರುವ ಪ್ರತಿಯೊಬ್ಬ ಹೆಣ್ಣನ್ನು ಗೌರವಿಸುವುದು ಆರೋಗ್ಯಕರ ಸಮಾಜದ ಲಕ್ಷಣ. ಅದನ್ನು ಶರಣರು ಸರಿಯಾಗಿ ಅರಿತು, ಆಚರಿಸಿದರು ಕೂಡ. ಅದಕ್ಕೆ ಬಹುದೊಡ್ಡ ಉದಾಹರಣೆ ಸುಂದರ, ಬೆತ್ತಲೆ ಸಂಚರಿಸಿದ ಮಹಾದೇವಿ ಅಕ್ಕ. ಇಂದು ಆಧುನಿಕ ಸಂದರ್ಭದಲ್ಲಿ ಹೆಣ್ಣಿನ ರಕ್ಷಣೆ ಸಾಧ್ಯವಾಗದೆ ಇರುವುದಕ್ಕೆ ಈ ಭಾತೃತ್ವ ಭಾವದ ಕೊರತೆಯೇ ಕಾರಣ.‌ ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಹೆಣ್ಣು ಎಷ್ಟೇ ಸುಂದರವಾಗಿದ್ದರೂ, ಒಂಟಿಯಾಗಿದ್ದರೂ ಅವಳಿಗೆ ವೈಯಕ್ತಿಕ ಅಧ್ಯಾತ್ಮ ಬದುಕಿದೆ, ಅವಳನ್ನು ಅವಳ ಪಾಡಿಗೆ ಬಿಟ್ಟು, ಅಕ್ಕ-ತಮ್ಮ ಭಾವದಿಂದ ಬದುಕುವುದು ಇಂದಿನ ಅಗತ್ಯ ಎಂಬುದನ್ನು ಈ ವಚನ ಧ್ವನಿಸುತ್ತದೆ.

ಹಾಗೆ ಶ್ರೀಶೈಲದ ಚೆನ್ನಮಲ್ಲಿಕಾರ್ಜುನನೇ ತನ್ನ ಚೆಲುವಿನ, ಒಲವ ಪತಿಯೆಂದು ಅಭಿಮಾನದಿಂದ ಹೇಳಿಕೊಳ್ಳುತ್ತಾಳೆ. ಇಲ್ಲಿ ಚೆನ್ನಮಲ್ಲಿಕಾರ್ಜುನ ‘ಜ್ಞಾನೋದಯ‘ದ ಸಂಕೇತ.

ಬಸವಣ್ಣ ತಿಳಿಸಿ ಕೊಟ್ಟ ‘ಅರಿವಿನ’ ಪ್ರತೀಕ. ಆ ಅರಿವೇ ತನ್ನ ಪತಿ ಎಂದು ಹೇಳುವ ಅಕ್ಕನ ವೈಚಾರಿಕತೆ ನಮ್ಮನ್ನು ಆಳಕ್ಕಿಸಿಬಿಡುತ್ತದೆ. ಜ್ಞಾನದಿಂದಲೇ ಮೊದಲ ಸ್ವಾವಲಂಬನೆ ಸಾಧ್ಯ ಎನ್ನುವ ಮಹತ್ವದ ಸಂದೇಶವನ್ನೂ ಈ ವಚನ ರವಾನಿಸುತ್ತದೆ.

ಅಕ್ಕನ ಇಂತಹ ಅನೇಕ ವಚನಗಳು ಅವಳ ಬದುಕಿನ ಪಯಣಕ್ಕೆ ಅದ್ಭುತ ಉದಾಹರಣೆಗಳು. ಉಡುತಡಿಯಿಂದ ಕಲ್ಯಾಣಕ್ಕೆ, ಕಲ್ಯಾಣದಿಂದ ಕದಳಿಯ ಪಯಣ ಮನುಷ್ಯನ ಹುಟ್ಟಿನಿಂದ ಅರಿವಿನವರೆಗಿನ ಪಯಣ ಎಂದು ಹೇಳಬಹುದು. ಈ ಅರಿವಿನ ಪಯಣಕ್ಕಾಗಿ ಅಂತರಂಗ ಪ್ರವೇಶಿಸುವ ‘ಕಾಯ ಪಯಣ‘ ಬಹಳ ಮಹತ್ವದ್ದು. ಹೊರಗೆ ಕಾಣುವ ಭೌತಿಕ ಅಂಶಗಳೆಲ್ಲವನ್ನೂ ಮೀರಿ ಅಕ್ಕನನ್ನು ಅರಿಯುವ ಅವಶ್ಯಕತೆಯಿದೆ. ಅವಳ ವೈಯಕ್ತಿಕ ಜೀವ ಪಯಣ, ಶರಣರ ಒಡನಾಟ, ಅನುಭಾವದ ಹಾದಿ, ಎಲ್ಲವೂ ಓರ್ವ ಮಹಿಳೆಯ ಔನತ್ಯದ ಪಯಣವನ್ನು ಎತ್ತಿ ತೋರಿಸುತ್ತದೆ.

ಅಕ್ಕನಿಗೊಂದು ದಿವ್ಯ ದೃಷ್ಟಿ ಇರುತ್ತದೆ. ತನ್ನ ಇಡೀ ಬದುಕಿಗೆ ಏನು ಬೇಕಾಗಿದೆ? ತಾನು ಏನನ್ನು ಸಾಧಿಸಲು ಹೊರಟಿರುವೆ? ತನ್ನ ಇಚ್ಛೆ ಏನು? ತನಗೆ ಯಾವುದರ ಹಸಿವಿದೆ? ಅದಕ್ಕಾಗಿ ಏನು ಮಾಡಬಲ್ಲೆ? ತನಗೆ ಯಾರ ಸಾಂಗತ್ಯ ಬೇಕು? ಯಾರ ಸಂಗ ಬೇಡ? ಇಂತಹ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರವಿತ್ತು. ಅದು ನಮಗೆ ಅನುಕರಣೀಯ.

ಸಿಕಾ

Don`t copy text!