ಶೇಷ ಘಟನೆ
ಒಂದು ಅವಿಸ್ಮರಣೀಯ ಕ್ಷಣ
e-ಸುದ್ದಿ ಸುರಪುರ
ಶಕುಂತಲಾ ಜಾಲವಾದಿ, ರಂಗಂಪೇಟ ಜ್ಯೂನಿಯರ್ ಕಾಲೇಜಿನ ಉಪನ್ಯಾಸಕಿ ಅವರ ನಿವೃತ್ತಿ ನಿಮಿತ್ತ ಕಾಲೇಜಿನಲ್ಲಿ ಒಂದು ಬೀಳ್ಕೊಡುಗೆ, ಅಭಿನಂದನಾ ಸಮಾರಂಭ ಆಯೋಜಿಸಲಾಗಿತ್ತು.
ಈಗಿನ ವಿದ್ಯಾರ್ಥಿಗಳು, ಹಳೆಯ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು, ಬಂಧುಗಳು ಎಲ್ಲ ಸೇರಿ ಚಂದ ಕಾಯ೯ಕ್ರಮ ಮಾಡಿದರು. ಇದು ಒಂದು ಹೃದಯಸ್ಪರ್ಶಿ ಕಾರ್ಯಕ್ರಮವಾಗಿತ್ತು. ಇದರ ನಡೆದದ್ದೇ ಅತ್ಯಂತ ಅವಿಸ್ಮರಣೀಯ ಘಟನೆ.
ಕಾರ್ಯಕ್ರಮದ ನಂತರ ಎಲ್ಲರೂ ಊಟ ಸವಿದು ಹೋಗಿದ್ದರು. ಕೆಲವಷ್ಟು ಜನ ಒಳಗೆ ಇದ್ದೇವು. ಆಗ ಒಮ್ಮಿಂದೊಮ್ಮೆಲೆ ರಾಶೀದಾ ಮೇಡಂ ಹೊರಗಡೆ ಬಂದಿದ್ದಾರೆ ಎಂದು ಯಾರೋ ಕೂಗಿ ಹೇಳಿದಾಗ ಅಲ್ಲಿದ್ದವರಿಗೆ
ವಿದ್ಯುತ್ ಸಂಚಲನವಾಯಿತು. ಯಾಕೆಂದರೆ ಅವರಿಗೆ, 14 ಅಕ್ಟೋಬರ್ 2005 ರಲ್ಲಿ ಅವರು ಸುರಪುರದ ಬಾಲಕರ ಸರಕಾರಿ ಪ್ರೌಢ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುವ ಸಮಯದಲ್ಲಿ, ಅಂದು ಮಳೆ ಬರುತ್ತಿತ್ತು. ಅವರು ನಡೆದು ಹೋಗುತ್ತಿರುವಾಗ, ಅಲ್ಲಿಯೇ ಸಮೀಪದಲ್ಲಿದ್ದ ಹಳೆಯ ಸರಕಾರಿ ದವಾಖಾನೆಯಲ್ಲಿದ್ದ ಅತ್ಯಂತ ದೊಡ್ಡ ಮರವೊಂದು ಇವರ ಮೇಲೆ ಬಿದ್ದು ಅವರ ಶರೀರದ ಅರ್ಧ ಭಾಗವೇ ಸ್ಪರ್ಶ ಜ್ಞಾನ ಕಳೆದುಕೊಂಡಿತು. ಅವರಿಗೆ ತುಂಬ ಚಿಕಿತ್ಸೆ ಕೊಡಿಸಿದರು.
ಈಗ 18 ವರ್ಷಗಳಿಂದಲೂ ಅವರು ಹಾಗೆಯೇ ಇದ್ದಾರೆ. ಅವರ ಪತಿ ಸಜ್ಜಾದ ಜಹೀರ ಸೌದಿಯಲ್ಲಿ ಎಂಜನೀಯರ ಆಗಿದ್ದಾರೆ. ಅವರು ಅಂದಿನಿಂದ ಇಂದಿನವರೆಗೂ ಟ್ರೀಟ್ಮೆಂಟ್ ಕೊಡಿಸ್ತಾನೆ ಇದ್ದಾರೆ – ಅವರಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ, ಸೈಫ್ ರಿಯಾನ ಹಾಗೂ ರುಮಾನಾ ಸದಾಫ. ಇಬ್ಬರೂ ಎಂಬಿಬಿಎಸ್ ಓದುತ್ತಿದ್ದಾರೆ.
ಇಂತಹ ತಮ್ಮ ದೈಹಿಕ ತೊಂದರೆಯ ಸಂದರ್ಭದಲ್ಲಿಯೂ ತಮ್ಮ ಒಂದು ಕಾಲದ ಸಹೋದ್ಯೋಗಿ ಶಿಕ್ಷಕಿಯಾಗಿದ್ದ ಶಕುಂತಲಾ ಜಾಲವಾದಿ ಅವರ ಈ ನಿವೃತ್ತಿ ಸಂದರ್ಭದ ಸಮಾರಂಭಕ್ಕೆ ಆಗಮಿಸಿದ್ದು, ಅಲ್ಲಿ ಶಾಲೆಯ ಹೊರ ಆವರಣದಲ್ಲಿ ಸೇರಿದ್ದ ಎಲ್ಲರ ಕಣ್ಣು ತೇವು ಮಾಡಿತು.
ಶಕುಂತಲಾರಿಗಂತೂ ಮಾತೇ ಬರಲಿಲ್ಲ. ಕಣ್ಣು ಮಾತಾಡಿದವು, ಹೃದಯ ಸಂವಾದಿಸಿತು, ಮನಸು ಹೊಸ ಬೆಳಕನ್ನು ಕಂಡಿತು. ಈ ಅಪರೂಪದ ಅವಿಸ್ಮರಣೀಯ ಘಟನೆಗೆ ಏನು ಬೆಲೆ ಕಟ್ಟುತ್ತಿರಿ? ಇದು ಒಂದು ಅನುಭೂತಿ. ಅಲ್ಲಿ ಭಾವೈಕ್ಯತೆಯ ಸಂಗಮ ನದಿಯಾಗಿ ಹರಿಯಿತು. ಸಂತಸದಿ ಪುಳುಕಿತಗೊಂಡ ಬಾನು ತುಂತುರು ಸುರಿಸಿತು.