ಹಾಡಿದಡೆನ್ನೊಡೆಯನ ಹಾಡುವೆ,


ಹಾಡಿದಡೆನ್ನೊಡೆಯನ ಹಾಡುವೆ,
ಬೇಡಿದಡೆನ್ನೊಡೆಯನ ಬೇಡುವೆ,
ಒಡೆಯಂಗೊಡಲ ತೋರಿ ಎನ್ನ ಬಡತನವ ಬಿನ್ನೈಸುವೆ.
ಒಡೆಯ ಮಹಾದಾನಿ ಕೂಡಲಸಂಗಮದೇವಂಗೆ ಸೆರಗೊಡ್ಡಿ ಬೇಡುವೆ.

                -ವಿಶ್ವಗುರು ಬಸವಣ್ಣನವರು

ವಿಶ್ವ ಗುರು ಕ್ರಾಂತಿ ಪುರುಷ ಬಸವಣ್ಣ ಭಾರತ ನೆಲದಲ್ಲಿ ಒಂದು ಅಭೂತ ಪೂರ್ವ ಕ್ರಾಂತಿ ಮಾಡಿದರು. ಹನ್ನೆರಡನೆಯ ಶತಮಾನದಲ್ಲಿ ವರ್ಗ ವರ್ಣ ಲಿಂಗ ಭೇದ ಆಶ್ರಮ ರಹಿತ ಸಾಂಸ್ಥಿಕರಣವಲ್ಲದ ಮುಕ್ತ ಸಮ ಸಮಾಜದ ಕಟ್ಟುವ ಕನಸು ಕಂಡವನು ಬಸವಣ್ಣ. ಗುರು ಲಿಂಗ ಜಂಗಮ ಮತ್ತು ಸಮಷ್ಟಿಯ ಸಂಪೂರ್ಣ ಅಭಿವೃದ್ಧಿ ವಿಕಾಸ ಕಡೆಗೆ ಗಮನ ಹರಿಸಿ ಅರಿವೆ ಗುರು ಆಚಾರವೇ ಲಿಂಗ ಅನುಭಾವ ಜಂಗಮ ಎಂಬ ದಿಟ್ಟ ನಿರ್ಧಾರ ಕೈಗೊಂಡು ವ್ಯಕ್ತಿ ಕೇಂದ್ರಿತ ಧರ್ಮದ ಆಚರಣೆ ವಿರೋಧಿಸಿ ಸಮಷ್ಟಿಯ ಸಮಗ್ರ ಅಭಿವೃದ್ಧಿ ವಿಕಾಸ ಕಡೆಗೆ ಚಿಂತಿಸಿ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ಮಹಾ ಘೋಷಣೆ ಮಂತ್ರವಾಯಿತು. ಬಸವಣ್ಣನಿಗೆ ಸಮಾಜ ಜಂಗಮವೆ ಮುಖ್ಯ . ಒಂದು ಅರ್ಥದಲ್ಲಿ ಜಂಗಮ ತನ್ನ ಲಿಂಗ ಒಡೆಯ ಎಂಬ ಅರ್ಥದಲ್ಲಿ ಹೇಳುವ ಪ್ರಾಮಾಣಿಕ ಭಾವಗಳ ಕಾರಣಿ ಪುರುಷ

ಹಾಡಿದಡೆನ್ನೊಡೆಯನ ಹಾಡುವೆ,
ಬಸವಣ್ಣ ಅಂದಿನ ಕಪೋಲ ಕಲ್ಪಿತ ದೇವರನ್ನು ಕಲ್ಲು ಮಣ್ಣು ಲೋಹದಿಂದ ಮಾಡಿದ ದೇವರನ್ನು ಸ್ತುತಿಸದೆ ತನಗೆ ಒಡೆಯನಾದ ಸಂಗಮನಾಥ ಎಂಬ ಜಂಗಮ ಚೈತನ್ಯದ ಬಗ್ಗೆ ಹಾಡುವೆ ಎಂದು ಹೇಳಿ ತನಗೆ ಸಮಾಜದ ರೂಪದಲ್ಲಿರುವ ಒಡೆಯ ದೇವರ ಬಗ್ಗೆ ಅತೀವ ಗೌರವ ನೀಡಿ ಅತ್ಯಂತ ಸಂತಸ ಸಂಭ್ರಮದಿಂದ ಹಾಡುವೆ ಎಂದು ಹೇಳಿದ್ದಾರೆ. ಇಲ್ಲಿ ಒಡೆಯ ಅಂದ್ರೆ ಸಮಾಜ. ಕಲ್ಯಾಣ ದೇವರಿಗೆ ಮೊರೆ ಹೋಗುವ ಪ್ರಸಂಗ ಬಂದರೆ ತಾವು ಸಮಾಜದ ಮೊರೆ ಹೋಗುವೆ .ಸಮಾಜದ ಘನತೆ ಕೀರ್ತಿಯ ಬಗ್ಗೆ ಹಾಡುವೆ ಗುಣ ಗಾನ ಮಾಡುವೆ ಎಂದಿದ್ದಾನೆ.

ಬೇಡಿದಡೆನ್ನೊಡೆಯನ ಬೇಡುವೆ
ನನಗೆ ಏನಾದರೂ ಬೇಡುವದಿದ್ದರೆ ಅಂದ್ರೆ ಇಲ್ಲಿ ಭಿಕ್ಷೆ ಬೇಡುವ ಅರ್ಥದಲ್ಲಿ ತೆಗೆದುಕೊಳ್ಳದೆ ಕೆಲಸ ಕಾರ್ಯ ಮಾಡಲು ಸಮಾಜವನ್ನು ಕೇಳುವೆ ಎಂದು ಹೇಳಿ ಸಮಾಜ ತನ್ನ ಸಲುಹುವ ಹಿರಿತನ ಹೊಂದಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಬಸವಣ್ಣ. ನಾನು ಯಾರನ್ನೂ ಬೇಡುವದಿಲ್ಲ ಆದರೆ ಅಂತಹ ಪ್ರಸಂಗ ಬಂದರೆ ವಿಗ್ರಹಗಳ ರೂಪದಲ್ಲಿರುವ ಜಡ ದೇವರನ್ನು ಬೇಡುವದಿಲ್ಲ ಆದರೆ ಅದರ ಬದಲಾಗಿ ಜೈವಿಕ ವಿಕಾಸಕ್ಕೆ ಪೂರಕವಾಗುವ ಜಂಗಮ ರೂಪದ ಒಡೆಯನನ್ನು ಬೇಡುವೆ ಕೆಲಸ ಮಾಡುವ ಅವಕಾಶಕ್ಕಾಗಿ ಬೇಡುವೆ ಎಂದಿದ್ದಾರೆ ಬಸವಣ್ಣನವರು.

ಒಡೆಯಂಗೊಡಲ ತೋರಿ ಎನ್ನ ಬಡತನವ ಬಿನ್ನೈಸುವೆ.
ನನ್ನ ಒಡೆಯನಿಗೆ ತಾನು ಹೊರೆವ ಒಡಲ ಅಂದ್ರೆ ಹೊಟ್ಟೆ ಉಪ ಜೀವನಕ್ಕಾಗಿ ಸಮಾಜಕ್ಕೆ ಸಮುದಾಯಕ್ಕೇ ತನ್ನ ಹಸಿವು ನೀಗಿಸುವ ನಿಟ್ಟಿನಲ್ಲಿ ಕೆಲಸ ಕೊಡಲು ಮನವಿ ಮಾಡಿ ತನ್ನ ಬಡತನವನ್ನು ನಿರ್ಮೂಲನೆ ಮಾಡಲು ಬಿನ್ನೈಸುವೇ ಎಂದಿದ್ದಾರೆ.
ಇಲ್ಲಿ ಕರುಣೆ ಅಥವಾ ಕನಿಕರ ಭಾವದಿಂದ ಕೇಳದೆ ಧನ್ಯತಾ ಭಾವದಿಂದ ಹಾಗು ಕಾಯಕ ನಿಷ್ಟೆಯಿಂದ ಸಮಾಜವನ್ನು ಹಕ್ಕಿನಿಂದ ಕೇಳಿ ತನ್ನ ಬಡತನ ಆರ್ಥಿಕ ಬಿಕ್ಕಟ್ಟಿನಿಂದ ಪಾರಾಗಲು ಒಡೆಯ ರೂಪದ ಸಮಾಜ ಕೇಳಿ ಕೊಳ್ಳುವ ನಿರ್ಧಾರಕ್ಕೆ ಬಸವಣ್ಣ ಮುಂದಾಗುತ್ತಾರೆ.

ಒಡೆಯ ಮಹಾದಾನಿ ಕೂಡಲಸಂಗಮದೇವಂಗೆ ಸೆರಗೊಡ್ಡಿ ಬೇಡುವೆ.
ಇಡಿ ಜಗತ್ತೇ ಒಂದು ಸುಂದರ ಬಾಳಿಗೆ ವೇದಿಕೆ ಅದನ್ನು ಸಲುಹುವವ ಸೃಷ್ಟಿಕರ್ತ ಆತ ಮಹಾದಾನಿ . ಗಾಳಿ ಬಿಸಿಲು ಮಳೆ ನೀರು ಭೂಮಿ ಹಸಿರು ಬೆಳೆ ಹೀಗೆ ಎಲ್ಲವನ್ನೂ ಕೊಟ್ಟಿದ್ದಾನೆ. ಹೀಗಿದ್ದಾಗ ತನ್ನ ಒಡಲ ಹಸಿವು ಬಡತನ ಆರ್ಥಿಕ ಮುಗ್ಗಟ್ಟನಿಂದ ಬಳಲುವುದು ಏತಕ್ಕೆ. ಮಹಾದಾನಿ ಕೂಡಲಸಂಗಮದೇವ ತನ್ನ ಒಡೆಯ ಜಂಗಮ ಸಮಾಜ ತನ್ನ ಅಭಿವೃದ್ಧಿ ಶರಣರ ಕಾಳಜಿ ಮಾಡುವ ದಿವ್ಯ ಸ್ಪಂದನ ಮತ್ತು ನಿರಂತರ ಪ್ರಕ್ರಿಯೆ ಎಂದು ಸೂಚ್ಯವಾಗಿ ಪರಿಸರದ ಮೇಲೆ ಕಾಳಜಿ ಪ್ರೀತಿ ನಂಬಿಕೆ ವಿಶ್ವಾಸ ಇಟ್ಟು ಅಂತಹ ದಿವ್ಯ ಪ್ರಭೆ ಸಮಾಜ ಸ್ವರೂಪದ ಕೂಡಲಸಂಗಮದೇವ ಈತನಿಗೆ ಅತ್ಯಂತ ಪ್ರಾಮಾಣಿಕ ಭಕ್ತಿಯಿಂದ ತನ್ನ ನಿವೇದನೆಯನ್ನು ಸೆರಗೊಡ್ಡಿ ಬೇಡಿಕೊಳ್ಳುವ ಅತ್ಯಂತ ವೈಚಾರಿಕ ಪರಿಪೂರ್ಣ ಮಾನವ ಸಂಬಂಧಗಳ ನಿರ್ವಹಣೆ ಕುರಿತು ಸೆರಗೊಡ್ಡಿ ಬೇಡಿಕೊಳ್ಳುವ ಬಸವಣ್ಣ ಎಂತಹ ಅನುಪಮ ನಿರಂಜನ ಜಂಗಮಪ್ರೇಮಿ ಎಂದು ತಿಳಿಯುತ್ತದೆ.
ಇಲ್ಲಿ ಬಸವಣ್ಣ ತಾನು ಸಮಷ್ಟಿಯ ಚಲನಶೀಲತೆಯನ್ನು ಕಾಪಾಡುವ ಹೊಣೆಗಾರಿಕೆ ಮತ್ತು ಅದರಿಂದ ಸಿಗುವ ಕಾರ್ಯದಿಂದ ಸಕಲ ರೀತಿಯಲ್ಲೂ ಸಂಪತ್ತು ಧನ ಕಾಳು ದೊರೆತು ಬಡತನ ರೇಖೆಗಿಂತ ಕೆಳಗಿರುವ ಜನರು ತಮ್ಮ ತಮ್ಮ ಕಾಯಕದಿಂದ ತಮ್ಮ ತಮ್ಮ ಸಮಸ್ಯೆಗೆ ಬಡತನ ನಿರ್ಮೂಲನೆ ಮಾಡುವ ಸರಳ ಸೂತ್ರ ನೀತಿಯನ್ನು ಹೇಳಿದ್ದಾರೆ ಎನ್ನಲಾಗಿದೆ. ಅದುವೇ ಕಾಯಕ ಮತ್ತು ದಾಸೋಹ


ಡಾ ಶಶಿಕಾಂತ ಪಟ್ಟಣ ರಾಮದುರ್ಗ

Don`t copy text!