- ನೆಲದ ಚಿಗುರು (ಸ್ವಗತ)
ಬಿತ್ತಿದ ಭಾವ ಪಡಲೊಡೆದ
ಸವಿ ಮನದ ಚಿಗುರು ನಾನು..
ಪ್ರೀತಿ ಸ್ನೇಹದ ಪಡಿನೆಳಲಲಿ
ಕುಡಿಯೊಡೆದ ನೆಲದ ಚಿಗುರು..
ಗೆಳೆತನದ ತಣ್ಣೆಳಲ ತಂಪಿನಲಿ
ಕಣ್ತೆರೆದ ಹಿಡಿ ಪ್ರೀತಿ ನಾನು..
ಭರವಸೆಯ ಬಿಗಿದಪ್ಪುಗೆಯಲಿ
ಬಿರಿದ ಭಾವ ಮೊಗ್ಗೆ ನಾನು..
ಮುಗಿಲ ಮಲ್ಲಿಗೆ ಮನದ
ಎದೆಬೆಳಕು ಭುವಿ ಹಣತೆ ನಾನು
ನೆಲ ಮುಗಿಲ ಪ್ರೀತಿಯೆಳೆಯ
ಮಳೆ ಬೆಳೆಯ ಒಲವೊಸಗೆ ನಾನು…
ಬಾಗಬೇಕು ಬಾನು ನೀನೇ….
ನೆಲದ ಚಿಗುರನಪ್ಪಿ ನಲಿಯಲು..
ಹಮ್ಮುಬಿಮ್ಮುತೊರೆದು ಮಿಡಿದೆ
ಭುವಿಯ ಹೃದಯ ಸೇರಲು….
ನೆಲದ ಚಿಗುರೆಂದು ಕಡೆಗಣಿಸಿ
ಚಿವುಟಿ ನೋಯಿಸಿ ಅಳಿಸದಿರು..
ಹಸಿರ ಹಣತೆ ಉಸಿರ ಹಂಬಲದಿ
ಪ್ರೀತಿ ಸ್ನೇಹಕೆ ಸೋತಿರುವುದು…
ಉಸಿರ ನೀಡಿ ಹಸಿರ ಹಾದಿ
ರೆಂಬೆ ಕೊಂಬೆ ಚಾಚಿ ನಿಂದು ಆಡಲು
ಹೂ ಹಣ್ಣು ಹಕ್ಕಿ ಪ್ರೀತಿ ಪಾಡಿ
ಮುಗಿಲು ನಗಲು ನೆಲದ ಚಿಗುರು ಹಾಡಲು…
ಇಬ್ಬನಿಯ ಸಿಹಿ ಮುತ್ತಮಣಿಯ
ಜಳಕ ಪುಳಕ ನಿತ್ಯ ಕೊನರು…
ದೇವ ಸೃಷ್ಠಿ ಪ್ರಕೃತಿಯಲ್ಲಿ
ಪ್ರೇಮವೃಷ್ಠಿ ನೆಲದ ಸತ್ಯ ಚಿಗುರು….
—ಇಂದಿರಾ ಮೋಟೆಬೆನ್ನೂರ. ಬೆಳಗಾವಿ
ಭಾವ ಪೂರ್ಣ ಕವಿತೆ