ಸಂಸಾರವೆಂಬ ರಾಹು ಸರ್ವಗ್ರಾಸಿಯಾಗಿ ನುಂಗಿತ್ತಯ್ಯಾ!
ಚಂದ್ರಮನಂತೆ ಕಳೆ ಸಮನಿಸಿತ್ತೆನಗೆ
ಸಂಸಾರವೆಂಬ ರಾಹು ಸರ್ವಗ್ರಾಸಿಯಾಗಿ ನುಂಗಿತ್ತಯ್ಯಾ!
ಇಂದೆನ್ನ ದೇಹಕ್ಕೆ ಗ್ರಹಣವಾಯಿತು,
ಇನ್ನೆಂದಿಗೆ ಮೋಕ್ಷವಹುದೋ ಕೂಡಲಸಂಗಮದೇವಾ ||9||
12 ನೇಯ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ವರ್ಗ, ವರ್ಣ, ಜಾತಿ ಮತ್ತು ಲಿಂಗರಹಿತ ಸಮಾಜವನ್ನು ಕಟ್ಟಿದರು. ಸಾಂಸ್ಥೀಕರಣವಲ್ಲದ ಧರ್ಮ ಸ್ಥಾಪಿಸಿದರು. ಗುರು ಎಂದರೆ ವ್ಯಕ್ತಿ ಅಲ್ಲ, ಲಿಂಗ ಎಂದರೆ ವಸ್ತು ಅಲ್ಲ, ಜಂಗಮ ಎಂದರೆ ಜಾತಿ ಅಲ್ಲ. ಅರಿವೇ ಗುರು ಆಚಾರವೇ ಲಿಂಗ ಅನುಭಾವವೇ ಜಂಗಮ ಎನ್ನುವ ಮೂಲಕ ಸಮಷ್ಠಿ ಭಾವವನ್ನು ಬೆಳೆಸಿದರು. ಪಾಪ, ಪುಣ್ಯ, ಸ್ವರ್ಗ, ನರಕ, ಮೋಕ್ಷ ಎಂಬುದಿಲ್ಲ. ದಯವೇ ಧರ್ಮದ ಮೂಲವಯ್ಯ ಎಂದು ಸಾರಿದರು. ಮಾನವೀಯತೆಯ ಧರ್ಮ ಸ್ಥಾಪನೆಯ ಮೂಲಕ ಜಾಗತಿಕ ಧರ್ಮಕ್ಕೆ ನಾಂದಿಯಾದರು.
ಬಸವಣ್ಣನವರ ಅನೇಕ ವಚನಗಳು ಆತ್ಮವಿಮರ್ಶೆಯ ವಚನಗಳಾಗಿವೆ. ಗುರು ಬಸವಣ್ಣನವರ ಒಂದು ವಿಶೇಷ ಗುಣ ಏನೆಂದರೆ ಎಲ್ಲ ಅವಗುಣಗಳು ತಮ್ಮಲ್ಲಿಯೇ ಇವೆ ಆ ಅವಗುಣಗಳನ್ನು ತಾನು ನಿವಾರಿಸಿಕೊಳ್ಳಬೇಕು, ಅದರಿಂದ ನಿವೃತ್ತಿಯನ್ನು ಪಡೆಯಬೇಕು ಎನ್ನುವಂತಹ ವಿಚಾರವನ್ನು ಬಸವಣ್ಣನವರು ವ್ಯಕ್ತಪಡಿಸಿದ್ದಾರೆ.
ವಾಸ್ತವಾಗಿ ಬಸವಣ್ಣನವರು ಯಾವುದೇ ಒಂದು ಅವಗುಣವನ್ನು ಸಮಾಜದ ಮೇಲೆ ಹಾಕುವದಿಲ್ಲ. ಅವರು ತಮ್ಮಲ್ಲಿಯೇ ಇದೆ ಎಂದು ಹೇಳಿಕೊಳ್ಳುವುದರ ಮೂಲಕ ಎನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲ ಎಂದು ಹೇಳುವ ಮನಸ್ಥಿತಿಯನ್ನು ಎಲ್ಲ ವಚನಗಳಲ್ಲಿಯೂ ಕಾಣಬಹುದು.
ಈ ಮೇಲಿನ ವಚನದಲ್ಲಿಯೂ ಕೂಡ ಏನು ಹೇಳುತ್ತಿದ್ದಾರೆಂದರೆ, ಸಮಾಜದಲ್ಲಿ ಇರುವ ದೋಷಗಳನ್ನು ತಮ್ಮಲ್ಲಿಯೇ ಇರುವುದೆಂದು ಭಾವಿಸಿ ಅಂತಹ ದೋಷಗಳನ್ನು
ನಿವಾರಣೆ ಮಾಡಿಕೊಳ್ಳಬೇಕೆಂದು ಸಮಾಜವನ್ನು ತಿದ್ದುವ ವಿಚಾರ ಇಲ್ಲಿದೆ.
ಹೀಗಾಗಿ ಬಸವಣ್ಣನವರ ವಿಶೇಷ ಗುಣ ಏನೆಂದರೆ ತಮ್ಮ ಮೇಲೆಯೇ ಆರೋಪಗಳನ್ನು ತಾವೇ ಮಾಡಿಕೊಳ್ಳತಕ್ಕಂತಹದ್ದು, ಅದರಿಂದ ಸಮಾಜವನ್ನು ತಿದ್ದತಕ್ಕಂತಹ ಒಂದು ವಿಶೇಷವಾದ ವ್ಯಕ್ತಿತ್ವ ಹಾಗೂ ನಾಯಕತ್ವದ ಗುಣ ಇರುವುದನ್ನು ಕಾಣುತ್ತೇವೆ. ಆದರೆ ನಾವು ಏನ ಮಾಡುತ್ತಿದ್ದೆವೆ ಎಂದರೆ ನಾವು ಸರಿ ಇದ್ದೇವೆ ಸಮಾಜ ಸರಿ ಇಲ್ಲ, ಬೇರೆಯವರು ಸರಿ ಇಲ್ಲ ಎನ್ನುವಂತಹ ವಿಚಾರವನ್ನು ಮೊದಲು ಹೇಳುತ್ತಾ, ನೀವು ಸರಿಯಾಗಿ ಎಂದು ಹೇಳುವುದನ್ನು ನಾವು ನೋಡುತ್ತೇವೆ. ಹಾಗಾಗಿ ಎದುರುಗಡೆ ವ್ಯಕ್ತಿ ಅಥವಾ ಸಮಾಜಕ್ಕೆ ಎನಾಗುತ್ತದೆ ಎಂದರೆ ತಾನು ಸರಿ ಇದ್ದೇನೆ ಬೇರೆಯವರು ಸರಿ ಇಲ್ಲ ಎನ್ನುವ ಮನೋಭಾವ ಬೆಳೆಯುತ್ತದೆ. ಆದರೆ ಬಸವಣ್ಣನವರ ವಿಶೇಷ ಗುಣ ಎಂದರೆ ನಾನೇ ಸರಿ ಇಲ್ಲ ಎಂದು ಹೇಳುವ ಮೂಲಕ ಸಮಾಜವನ್ನು ಅಥವಾ ಎದುರಿಗಿನ ಬೇರೆ ಜನಗಳನ್ನು ತಿದ್ದುವ ಪ್ರಯತ್ನ ಇದು ನಿಜವಾದ ನಾಯಕನ ಗುಣ.
ಈ ನಾಯಕತ್ವಕ್ಕೆ ಒಲಿದು ೧೨ ನೇ ಶತಮಾನದಲ್ಲಿ ಲಕ್ಷಾಂತರ ಜನ ಅಖಂಡ ಭಾರತದಿಂದ ನಾನಾ ದಿಕ್ಕಿನಿಂದ ಇಂದಿನ ಅಫಘಾನಿಸ್ತಾನದಿಂದ ಶ್ರೀಲಂಕಾದವರೆಗೆ ಎಲ್ಲ ಭೂಭಾಗದಿಂದ ಜನ ಬಂದು ಬಸವಣ್ಣನವರ ಹತ್ತಿರ ಸಮಾವೇಶವಾಗಿದ್ದನ್ನು ಕಾಣಬಹುದು, ಇದು ಏಕೆ ಸಾಧ್ಯವಾಯಿತು ಎಂದರೆ ಬಸವಣ್ಣನವರ ಈ ಕಿಂಕರತ್ವ ಗುಣವೇ ಕಾರಣ ಎನ್ನಬಹುದು
ಈ ವಚನವು ಷಟಸ್ಥಲದಲ್ಲಿಯ ಭಕ್ತಸ್ಥಲದ ಸಂಸಾರ ಹೇಯ ಸ್ಥಲದ ವಚನವಾಗಿದೆ. ಇನ್ನು ಈ ವಚನದ ಅರ್ಥವನ್ನು ಅನುಸಂಧಾನ ಮಾಡೋಣ.
ಚಂದ್ರಮನಂತೆ ಕಳೆ ಸಮನಿಸಿತ್ತೆನಗೆ
ಹುಣ್ಣಿಮೆಯ ಚಂದ್ರನನ್ನು ನೋಡಿದಾಗ ನಮಗೆ ಗೊತ್ತುಗುತ್ತದೆ. ಎಷ್ಟು ಕಳಾಭರಿತನಾಗಿ, ನೋಡಿದವರ ಮನಸ್ಸಿಗೆ ಮುದ ಎನಿಸುವಂತೆ ಇರುತ್ತದೆ. ಯಾವುದೇ ಕ್ಷೇಶ, ಗೊಂದಲ,ಇಲ್ಲದೇ ಕಳಾಭರಿತ, ನಿರ್ಮಲವಾಗಿ ಇರುತ್ತದೆ. ಹಾಗೆಯೇ ಹುಟ್ಟಿದ ಪ್ರತಿಯೊಂದು ಮಗುವೂ ಕೂಡ ಇರುತ್ತದೆ. ಹುಟ್ಟಿದ ಮಗುವಿನ ಮುಖವನ್ನು ನೋಡಿದಾಗ ಅತ್ಯಂತ ನಿರ್ಮಲ ಭಾವ ಬರುತ್ತದೆ. ಅಂತಹ ಕಳೆಯನ್ನು ಹೊಂದಿರುತ್ತದೆ. ಆದರೆ ಬೆಳೆಯುತ್ತಾ ಬೆಳೆಯುತ್ತಾ ಅವಗುಣಗಳು ಪ್ರಾರಂಭವಾಗುತ್ತವೆ. ಹೇಗೆ ಹುಣ್ಣುಮೆ ಚಂದ್ರ ದಿನೇ ದಿನೇ ಕಳೆದಂತೆ ಚಂದ್ರನ ಪರಿಪೂರ್ಣತೆ ಕಡಿಮೆ ಆಗುತ್ತಾ ಹೋಗುತ್ತದೆಯೋ, ಕೊನೆಗೆ ಅಮವಾಸೆ ದಿನ ಪೂರ್ತಿ ಕಾಣದಂತೆ ಆಗುತ್ತದೆಯೋ ಹಾಗೆಯೇ ಇಲ್ಲಿ ಮನುಷ್ಯ ಬೆಳೆಯುತ್ತಾ ಬೆಳೆಯುತ್ತಾ ಅವಗುಣಗಳು ಆತನನ್ನು ಆಕ್ರಮಿಸಿಕೊಳ್ಳುವುದಕ್ಕೆ ಪ್ರಾರಂಭಿಸುತ್ತವೆ. ಹಾಗಾಗಿ ಹುಟ್ಟುತ್ತಾ ಹುಟ್ಟುತ್ತಾ ಜನ ಹೇಗಿದ್ದರೆಂದರೆ, ಚಂದ್ರಮನಂತೆ ಕಳೆ ಸಮನಿಸಿತ್ತು . ತದನಂತರ
ಸಂಸಾರವೆಂಬ ರಾಹು ಸರ್ವಗ್ರಾಸಿಯಾಗಿ ನುಂಗಿತ್ತಯ್ಯಾ!
ಬೆಳೆಯುತ್ತಾ ಬೆಳೆಯುತ್ತಾ ಸಂಸಾರ ಎಂಬ ರಾಹು ನಮ್ಮನ್ನು ಸರ್ವಗ್ರಾಸಿಯಾಗಿ ಅಂದರೆ ನಮ್ಮ ಜೀವನವನ್ನು ಇಡಿಯಾಗಿ ನುಂಗುತ್ತದೆ ಎಂದರ್ಥ. ಸಂಸಾರ ಎಂದರೆ ಅರಿಷಡ್ವರ್ಗ, ಮಾನಸಿಕ ಕ್ಷೇಶ, ಮಾನಸಿಕ ತುಮಲುಗಳು, ದ್ವಂದ್ವ ಎಂದರ್ಥ. ರಾಹು ಎಂದರೆ ಸರ್ಪ. ಕೆಟ್ಟ ಸಮಯ, ಗ್ರಹಣ ಎಂಬೆಲ್ಲ ಅರ್ಥ ಬರುತ್ತದೆ. ಆದರೆ ಇಲ್ಲಿ ರಾಹು ಎಂದರೆ ಅಂಧಕಾರ ಎಂದು ಅರ್ಥೈಸಿಕೊಳ್ಳಬಹುದು. ಅದೇನೇ ಇರಲಿ ಇಲ್ಲಿ ಸಂಸಾರ ಎಂಬುವಂತಹದ್ದು ನಮ್ಮ ಮನಸ್ಸಿನಲ್ಲಿರುವ ಕ್ಲೇಷಗಳು, ಮನೋವಿಕಾರಗಳು. ಮನಸ್ಸಿನಲ್ಲಿ ನೆಲೆಗೊಂಡಿರತಕ್ಕಂತಹ ತಾಮಸ, ಅರಿಷಡ್ವರ್ಗಗಳು, ಅಷ್ಟ ಮದಗಳು, ಸಪ್ತವ್ಯಸನಗಳು, ಷಡೂರ್ಮಿಗಳು ಮಾನಸಿಕ ಕ್ಷೋಭೆ, ಮಾನಸಿಕ ದ್ವಂದ್ವ, ದುಗುಡ, ಆಶೆ, ಆಮಿಷ, ರೋಷ, ಹರುಷ, ಒಂದೇ ಎರಡೇ. ಇವೆಲ್ಲವಕ್ಕೂ ಕೂಡ ಶರಣರು ಸಂಸಾರ ಎಂದು ಕರೆದಿದ್ದಾರೆ. ಇಲ್ಲಿ ಗಂಡ ಹೆಂಡತಿ ಮಕ್ಕಳೊಂದಿಗೆ ಇರುವುದು ಸಂಸಾರ ಅಲ್ಲ. ಈ ಮಾನಸಿಕ ಕ್ಷೋಭೆಗಳು ಏನು ಉಂಟಾಗುತ್ತವೆಯೋ ಅವುಗಳನ್ನು ಸಂಸಾರ ಎಂದು ಶರಣರು ಕರೆದಿದ್ದಾರೆ.
ಈ ಸಂಸಾರಿಕ ಗುಣಗಳು ನಮ್ಮನ್ನು ಯಾವ ರೀತಿ ನುಂಗುತ್ತಿವೆ ಎಂದರೆ ರಾಹು ಸರ್ವಗ್ರಾಸಿಯಾಗಿ ನುಂಗಿತ್ತಯ್ಯು ಅಂದರೆ ಇಡೀಯಾಗಿ ನಮ್ಮನ್ನು ನುಂಗುತ್ತಿವೆ ನಮ್ಮ ಜೀವನವನ್ನೇ ನುಂಗುತ್ತಿವೆ. ನಮ್ಮನ್ನು ಅಂಧಕಾರದಲ್ಲಿ ಇಡುತ್ತವೆ.
ಇಂದೆನ್ನ ದೇಹಕ್ಕೆ ಗ್ರಹಣವಾಯಿತು
ಈ ಮಾನಸಿಕ ಕ್ಲೇಷಗಳಿಂದ ನಮ್ಮ ದೇಹಕ್ಕೆ ನಮ್ಮ, ಜೀವನಕ್ಕೆ ಗ್ರಹಣ ಹಿಡಿದಂತೆ ಆಗಿದೆ. ಹಾಗಾಗಿ ಇನ್ನು ಮುಂದಕ್ಕೆ ಇನ್ನೆಂದಿಗೆ ಮೋಕ್ಷವಹುದೋ ಕೂಡಲಸಂಗಮದೇವಾ
ಇದರಿಂದ ಬಿಡುಗಡೆ, ಮೋಕ್ಷ ಎಂದು ಎಂಬ ಆತ್ಮಾವಲೋಕನ, ಅಂತರಾಳದ ಪ್ರಶ್ನೆ. ಇಲ್ಲಿ ಮೋಕ್ಷ ಎಂದರೆ ಮಾನಸಿಕ ಕ್ಷೋಭೆಗಳಿಂದ, ಕ್ಲೇಷಗಳಿಂದ ಯಾವಾಗ ನನಗೆ ಬಿಡುಗಡೆ ಆಗುತ್ತದೆ ಎಂಬುದಾಗಿದೆ, ಇಲ್ಲಿ ನನಗೆ ಎಂದರೆ ಬಸವಣ್ಣನವರಿಗೆ ಎಂದು ನಾವು ಖಂಡಿತ ಅರ್ಥ ಮಾಡಿಕೊಳ್ಳಬಾರದು. ಬಸವಣ್ಣನವರು ಯಾವತ್ತೂ ಕೂಡ ಈ ಕ್ಷೋಭೆಗಳಿಗೆ ಒಳಗಾಗಿರಲಿಲ್ಲ ಎಂಬುದು ನಮ್ಮ ಮನಸ್ಸಿನಲ್ಲಿ ನಾವು ಅಚ್ಚೊತ್ತಿಸಿಕೊಳ್ಳಬೇಕು . ಇದನ್ನು ನಮ್ಮಂತಹ ಈ ಸಾಮಾಜಿಕ, ಲೌಕಿಕದಲ್ಲಿ ಬಿದ್ದು ಒದ್ದಾಡುತ್ತಿರುವಂತಹ ಜನರಿಗೆ ಹೇಳುತ್ತಿದ್ದಾರೆ. ಒಟ್ಟಾರೆಯಾಗಿ ನಾವು ಮಾನಸಿಕ ಕ್ಷೇಷಕ್ಕೆ ,ಸಂಸಾರದ ಬಂಧನಕ್ಕೆ, ಮನೋವಿಕಾರಕ್ಕೆ , ಅರಿಷಡ್ವರ್ಗಗಳಿಗೆ, ವ್ಯಸನಗಳಿಗೆ ಒಳಗಾಗಿದ್ದೇವೆ. ಈ ಎಲ್ಲವುಗಳಿಂದ ಮುಕ್ತಿಯನ್ನು ಪಡೆಯಬೇಕು ಮೋಕ್ಷವನ್ನು ಪಡೆಯಬೇಕು ಎನ್ನುವುದು ಈ ವಚನದ ಸಾರಾಂಶವಾಗಿದೆ.
ಒಟ್ಟಾರೆ ಈ ವಚನವು ನಮಗೆ ಅರಿಷಡ್ವರ್ಗ, ವ್ಯಸನ, ಮಾನಸಿಕ ಮನೋವಿಕಾರ, ಮತ್ತು ಮಾನಸಿಕ ದ್ವಂದ್ವಗಳ ನಿಯಂತ್ರಣದಿಂದ ನಮಗೆ ಹಿಡಿದಂತಹ ಗ್ರಹಣದ ಛಾಯೆಯನ್ನು ಬಿಡಿಸಿಕೊಳ್ಳಲು ಮಾರ್ಗದರ್ಶನ ಮಾಡುತ್ತಿದೆ. ಇದು ಅಂತರಂಗದ ಪರಿವೀಕ್ಷಣೆಯ ಒಂದು ಮಜಲು. ಇದು ಮಾನಸಿಕವಾದ ಆಪ್ತಸಮಾಲೋಚನೆಯನ್ನು ಒಳಗೊಂಡಿದೆ ಎನ್ನಬಹುದು.
–ಡಾ.ದಾನಮ್ಮ ಝಳಕಿ