ಮಸಣ ವೈರಾಗ್ಯರು ಲಕ್ಷ ಲಕ್ಷ

ಮಸಣ ವೈರಾಗ್ಯರು ಲಕ್ಷ ಲಕ್ಷ,
ಪುರಾಣ ವೈರಾಗ್ಯರು ಲಕ್ಷ ಲಕ್ಷ,
ಪ್ರಸೂತಿ ವೈರಾಗ್ಯರು ಲಕ್ಷ ಲಕ್ಷ,
ಪಿತ್ತ ವೈರಾಗ್ಯರು ಲಕ್ಷ ಲಕ್ಷ
ಸ್ವಾನುಭವ ಸಮ್ಯಕ್ ಜ್ಞಾನ
ವೈರಾಗ್ಯರನೊಬ್ಬರನೂ ಕಾಣೆ,
ಕೂಡಲ ಚೆನ್ನ ಸಂಗಮದೇವ.

                                -ಚೆನ್ನಬಸವಣ್ಣ

ಮಸಣ ವೈರಾಗ್ಯರು ಲಕ್ಷ ಲಕ್ಷ,

ಸತ್ತವರನು ಸ್ಮಶಾನದಲ್ಲಿ ಹೂಳುವುದು ಸುಡುವುದು ಕಂಡು ಜೀವನ ವ್ಯರ್ಥವೆಂದು ಆ ಕಾಲಕಷ್ಟೆ ವೈರಾಗ್ಯವ ನುಡಿವ ಮಸಣ ವೈರಾಗ್ಯರು ಲಕ್ಷ ಲಕ್ಷ ಜನರು ಇದ್ದಾರೆ ಎನ್ನುತ್ತಾನೆ ಚೆನ್ನ ಬಸವಣ್ಣ

ಪುರಾಣ ವೈರಾಗ್ಯರು ಲಕ್ಷ ಲಕ್ಷ
ಪುರಾಣವ ಕೇಳುವಾಗ ಸಂಸಾರ ಹೇಯತೆ ನಿಸ್ಸಾರವನು ನುಡಿದು ಮತ್ತೆ ಭೋಗಾಸಕ್ತಿಯಲ್ಲಿ ಮುಳುಗುವ ಪುರಾಣ ವೈರಾಗ್ಯರು ಲಕ್ಷ ಲಕ್ಷ ಜನರು. ಪುರಾಣಗಳ ಪವಾಡ ಪುಣ್ಯ ಕಥೆಗಳನ್ನುಕೇಳಿ ಏಕೆ ಈ ಹೇಯ ಸ್ಥಳ ಸಾಕಪ್ಪ ಸಾಕು ಎಂದು ಸಾಂಧರ್ಭಿಕವಾಗಿ ಗುನಗುವ ಜನರು ಲಕ್ಷ ಲಕ್ಷ ಜನರಿದ್ದಾರೆ ಎನ್ನುತ್ತಾನೆ ಚೆನ್ನ ಬಸವಣ್ಣ

ಪ್ರಸೂತಿ ವೈರಾಗ್ಯರು ಲಕ್ಷ ಲಕ್ಷ
ಹೆರಿಗೆಯ ಕಾಲದ ಭಾದೆಯಿಂದ ಭಯಭೀತರಾಗಿ ಬಾಳೆ ವ್ಯರ್ಥವೆಂದು ವೈರಾಗ್ಯ ನೆನೆದು ಹೆರಿಗೆಯಾದೊಡನೆ ಮತ್ತೊಂದು ಶಿಶುವ ಹಡೆಯಲು ಹಂಬಲಿಸುವ ಪ್ರಸೂತಿ ವೈರಾಗ್ಯದವರು ಲಕ್ಷ ಲಕ್ಷ ಜನರು.ಪ್ರಸೂತಿಯ ಸಂದರ್ಭದಲ್ಲಿ ಆಗುವ ಹೆರಿಗೆ ನೋವು ಮತ್ತು ಭೀತಿಗೆ ಸಾಕಪ್ಪ ಸಾಕು ಏಕೆ ಬೇಕು ಮಕ್ಕಳ ಬಯಕೆ ಎನ್ನುವ ತಾತ್ಪೂರ್ತಿಕ ವೈರಾಗ್ಯವನ್ನು ಸಮಾಜದಲ್ಲಿ ಬಹಳಷ್ಟು ಜನರು ಹೊಂದಿದ್ದಾರೆ ಎಂದು ವಿಡಂಬಿಸಿದ್ದಾರೆ ಚೆನ್ನ ಬಸವಣ್ಣ

ಪಿತ್ತ ವೈರಾಗ್ಯರು ಲಕ್ಷ ಲಕ್ಷ,
ದೇಹಕ್ಕೆ ಪಿತ್ತದಿ ದೋಷಗಳಿಂದ ರೋಗ ಆವರಿಸಿ ಭಾದಿಸುವಾಗ ಬೇಡಪ್ಪ ಬೇಡ ಈ ಬಾಳೆಂದು ವೈರಾಗ್ಯವ ನೆನೆದು, ರೋಗ ವಾಸಿಯಾದೊಡನೆ ಭೋಗಾಸಕ್ತರಾಗುವ ಪಿತ್ತ ವೈರಾಗ್ಯದವರು ಲಕ್ಷ ಲಕ್ಷ ಜನರುಂಟು. ಆಹಾರದಲ್ಲಿ ವ್ಯತ್ಯವು ಉಂಟಾದಲ್ಲಿ ಎಲ್ಲವನ್ನೂ ಬಿಡಬೇಕು ಎನ್ನುವ ಹುಸಿ ನಿರ್ಧಾರಕ್ಕೆ ಮನುಷ್ಯ ಮೊರೆ ಹೋಗುತ್ತಾನೆ. ಪಿತ್ತ ದೋಷ ಉಂಟಾದಲ್ಲಿ ಹುಳಿ ಉಪ್ಪು ಖಾರ ಪದಾರ್ಥವನ್ನು ಬಿಡಬೇಕು ಎನ್ನುವ ಮನುಷ್ಯನ ಕೃತಕ ಮನಸ್ಸು ಮತ್ತೆ ಅಂತಹ ಪದಾರ್ಥಗಳಿಗೆ ಹಾತೊರೆಯುತ್ತಾನೆ.

ಸ್ವಾನುಭವ ಸಮ್ಯಕ್ ಜ್ಞಾನ ವೈರಾಗ್ಯರನೊಬ್ಬರನೂ ಕಾಣೆ, ಕೂಡಲ ಚೆನ್ನ ಸಂಗಮದೇವ.
ಆದರೆ ಸ್ವಾನುಭಾವ ಸುಖವನ್ನಿವ ತನ್ನ ತಾನರಿವ ಸಮ್ಯಕ್ ಜ್ಞಾನೋದಯವಾಗಿ ವಿಷಯ ಭೋಗದಲ್ಲಿ ವಿರತಿಯುದಿಸಿದ ನಿಜ ವೈರಾಗ್ಯದವರೊಬ್ಬರೂ ಇಲ್ಲ. ಪಾರಮಾರ್ಥಿಕ ಸುಖವನ್ನು ಪಡೆಯುವ ಸಾಧನ ಯೋಗ ಸಮತೆ ಸಮರತಿ ನಿಧಾನ ಶಾಂತಿ ಮುಂತಾದ ಮೌಲ್ಯಗಳನ್ನು ಅಳವಡಿಸಿಕೊಂಡು ಮಾಡುವಂತೆ ಮಾಡದಂತೆ ಮಾಡುವ ಮಾಟದೊಳಗೆ ತಾನಿಲ್ಲದಂತೆ ಇರುವ ಉದಾತ್ತೀಕರಣದ ಉರಿಯುಂಡ ಕರ್ಪುರ ಶಿಶುಕಂಡ ಕನಸು ಮೂಕನ ಬಾಯಲ್ಲಿ ಕೇಳಿದ ಕಾವ್ಯ .ಸತ್ತ ಹಾಗೆ ಇರಬೇಕಲ್ಲದೆ ತತ್ವದ ಮಾತು ನನಗೇಕೆ ಎನ್ನುವ ದಿಟ್ಟ ನಿರ್ಧಾರ ಮತ್ತು ಅವುಗಳಿಂದ ವಿಮುಖವಾಗುವ ಅನುಭಾವವನ್ನು ಶರಣರು ಹೊಂದಿದ್ದರು ಇಂತಹ ವೈರಾಗ್ಯದ ಬಗ್ಗೆ ಯಾರೂ ಚಿಂತಿಸುವುದಿಲ್ಲ ಎನ್ನುವ ನೋವನ್ನು ಚೆನ್ನ ಬಸವಣ್ಣ ವ್ಯಕ್ತಪಡಿಸಿದ್ದಾರೆ.

-ಡಾ ಶಶಿಕಾಂತ ಪಟ್ಟಣ ರಾಮದುರ್ಗ

Don`t copy text!