ಮಾತು ಕತೆ

ಮಾತು ಕತೆ

ಭಾವಗಳನ್ನು ಅಭಿವ್ಯಕ್ತಿ ಪಡಿಸುವ ಮಾಧ್ಯಮ ಮಾತು. ಒಮ್ಮೊಮ್ಮೆ ಮಾತು ಮುತ್ತು ಕೆಲವೊಮ್ಮೆ ಮಾತು ಮೃತ್ಯು. ಸಣ್ಣ ಮಕ್ಕಳ ಮಾತು ಬಹಳ ಮಧುರ ಅದರಲ್ಲಿ ತೊದಲು ನುಡಿಗಳು ಮನಸ್ಸಿಗೆ ಮುದ ನೀಡುತ್ತವೆ. ನಮ್ಮ ಪ್ರೀತಿ ಪಾತ್ರರ ಮಾತುಗಳನ್ನು ಅವರ ಯೋಗ ಕ್ಷೇಮವನ್ನು ತಿಳಿಯಲು ಮನಸ್ಸು ಮಿಡಿಯುತ್ತಿರುತ್ತದೆ. ಮೊದಲೆಲ್ಲಾ ಪತ್ರ ಮುಖೇನ ಸಂದೇಶ ಬರುತ್ತಿದ್ದರೆ ಈಗ ಮೊಬೈಲ್‌ ಸಂದೇಶ ಫೋನುಗಳು ಬಂದಿವೆ.

ಈಗಿನ ಕಾಲದ ಜನರಿಗೆ ತಮ್ಮ ಸ್ನೇಹಿತರರೊಂದಿಗೆ, ಸಹ ಕೆಲಸಗಾರರೊಂದಿಗೆ ಮಾತನಾಡಲು ಸಮಯವಿರುತ್ತದೆ. ಆದರೆ ಮನೆಯ ಜನರೊಂದಿಗೆ ಸಂಬಂಧಿಕರೊಂದಿಗೆ ಮಾತನಾಡಲು ಸಮಯ ಕಡಿಮೆ ಇರುತ್ತದೆ. ಅದರಲ್ಲೂ ತಂದೆ ತಾಯಿ ಅಣ್ಣ ತಮ್ಮಂದಿರು, ಅಕ್ಕ ತಂಗಿಯರು ಅಂದರೆ ಸ್ವಲ್ಪ ಅಸಡ್ಡೆಯೇನು? ಎಂಬ ಅನುಮಾನ ಬರುವಷ್ಟು. ಅದಕ್ಕೆ ಕಾರಣ ನಮ್ಮ ಇಂದಿನ ಯಾಂತ್ರಿಕ ಬದುಕೂ ಆಗಿರಬಹುದು. ಆದರೂ ಕೂಡ ದಿನಕ್ಕೊಮ್ಮೆ ಸಮಯ ಮಾಡಿಕೊಂಡು ತಂದೆ-ತಾಯಿಯರೊಂದಿಗೆ ಮಾತನಾಡಿದರೆ ಅವರ ಮನಸ್ಸಿಗೂ ಸಮಾಧಾನವಾಗುತ್ತದೆ. ಇದು ಬರೇ ಫೋನಿನಲ್ಲಿ ಮಾತನಾಡುವ ಪ್ರಶ್ನೆಯಲ್ಲ, ಈಗಿನ ಕಾಲದಲ್ಲಿ ಜನರಿಗೆ ಮನೆಯಲ್ಲಿಉವವರನ್ನು ಮಾತನಾಡಿಸಲೂ ಸಮಯವಿರುವುದಿಲ್ಲ. ಹಿರಿಯರು ಅಂದರೆ 60-70 ವಯಸ್ಸಿನವರಿಗೆ ಮಕ್ಕಳು, ಸಂಬಂಧಿಕರು ಎಲ್ಲರ ಜೊತೆಗೆ ಮಾತನಾಡುತ್ತಾ ಇರಬೇಕೆಂದು ಬಯಕೆ ಆದರೆ ಅವರಿಗೆ ತಮ್ಮ ಮಕ್ಕಳೇ ಮಾತನಾಡುವುದು ಕಡಿಮೆ ಇನ್ನು ಅಕ್ಕ ತಂಗಿಯರ ಅಣ್ಣ ತಮ್ಮಂದಿರ ಮಕ್ಕಳು ಮಾತನಾಡಿಸುವುದು ಯಾವಾಗ? ಕೆಲವೊಮ್ಮೆ ಅವರೇ ಮಾತನಾಡಿದಾಗಲೂ ಇವರ ಕರೆ ಸ್ವೀಕರಿಸುವುದಿಲ್ಲ ಅಥವಾ ನಾವು ಬಹಳ ಬಿಸಿ ಎಂಬ ಉತ್ತರ ಸಿದ್ಧವಾಗಿರುತ್ತದೆ.

ಯುವ ಜನರಲ್ಲಿ ನನ್ನ ಒಂದು ವಿನಂತಿ ನಿಮ್ಮ ಸಮಯ ಅತ್ಯಮೂಲ್ಯ ಆದರೆ ನಿಮ್ಮವರಿಗಾಗಿ ನಿಮ್ಮ ಸಮಯವನ್ನು ಮೀಸಲಿಡಿ. ಎರಡು ಒಳ್ಳೆಯ ಮಾತು ನಿಮ್ಮ ಧ್ವನಿ ಕೇಳಿದಾಗ ನಿಮ್ಮವರಿಗಾಗುವ ಸಂತಸಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನಿಮ್ಮ ಗಡಿಬಿಡಿಯ ಸಮಯದಲ್ಲಿ ಸಮಯವನ್ನು ನೀಡಿದಾಗ ಅವರು ನಿಮ್ಮನ್ನು ಹೆಚ್ಚು ಪ್ರೀತಿಸುತ್ತಾರೆ, ಇನ್ನು ಹೊಸದಾಗಿ ಪೋಷಕರಾಗಿರುವವರು, ಆಗುವವರು, ಹದಿ ವಯಸ್ಸಿನ ಮಕ್ಕಳಿರುವವರಿಗೆ ಸಲಹೆ ಎಂದರೆ ನಮ್ಮ ಆಚರಣೆಗಳಮನ್ನು ನೋಡಿಯೇ ನಮ್ಮ ಮಕ್ಕಳು ಕಲಿಯುತ್ತಾರೆ, ನಾಳೆ ನಿಮ್ಮ ವೃದ್ಧಾಪ್ಯದಲ್ಲಿ ನಿಮ್ಮ ಮಕ್ಕಳು ನಿಮ್ಮ ಜೊತೆ ನಾಲ್ಕು ಮಾತನಾಡಲಿ ಎಂಬ ಬಯಕೆ ಬಂದಾಗ ಅವರು ಸಿಗದೇ ಹೋಗುವ ಸಂದರ್ಭ ಬರುವುದು ಬೇಡ. ನಿಮ್ಮ ಪೋಷಕರನ್ನು, ಸಂಬಂಧಿಕರನ್ನು ಸ್ನೇಹಿತರನ್ನು ಎಲ್ಲರನ್ನ ಪ್ರೀತಿಸಿ ದಿನ ನಿತ್ಯವೂ ಸಂಪರ್ಕದಲ್ಲಿರಲು ಮಾತನಾಡಲು ಸಾಧ್ಯವಿಲ್ಲ ಆದರೆ ಒಂದೊಮ್ಮೆ 15 ದಿನಕ್ಕೊ ತಿಂಗಳಿಗೋ ಮಾತನಾಡಿ. ನೀವು ಸಂತಸದಿಂದಿರಿ. ಅವರನ್ನೂ ಸಂತಸದಿಂದಿರಲು ಸಹಾಯ ಮಾಡಿ. ಸವಿ ಮಾತು ಮನದಲ್ಲಿ ಸಂತಸವನ್ನುಂಟು ಮಾಡಿ ಜಿವನಕ್ಕೆ ಚೈತನ್ಯ ತುಂಬುತ್ತದೆ.

ಮಾಧುರಿ

Don`t copy text!