ಮನಸರಳಿಸೊ ರಂಗೋಲಿ

ಮನಸರಳಿಸೊ ರಂಗೋಲಿ

ರಂಗೋಲಿ ಭಾರತೀಯ ಭವ್ಯ ಪರಂಪರೆಯಲ್ಲಿ ಧಾರ್ಮಿಕ, ಸಂಸ್ಕೃತಿಕ ಹಾಗು ಸಂಪ್ರದಾಯದ ಪ್ರತೀಕ.‌ ರಂಗೋಲಿ ಹಾಕುವದು ಎಂದರೆ ನಾವು ನಿತ್ಯ ಮಾಡುವ ದೇಹ, ಗೇಹ, ದೇವ ಪೂಜೆಯೊಳಗಿನ ಒಂದು ಪವಿತ್ರ ಪದ್ಧತಿ. ಹಿಂದು ಶಾಸ್ತ್ರದಂತೆ ದೇವರು ಮನೆಯ ಮುಖ್ಯ ದ್ವಾರದಿಂದ ಒಳಗೆ ಬರುವನೆಂಬ ನಂಬಿಕೆಯಿಂದಾಗಿ ಕೆಲ ಅಚರಣೆಗಳು ರೂಢಿಯಲ್ಲಿವೆ.

ಬೆಳಗಿನ ಸಮಯಕ್ಕೆ ಮನೆ ಮತ್ತು ಮುಂಬಾಗಿಲಿನ ಕಸ ಗೂಡಿಸಿ ನೀರಿನ ಥಳಿ ಹಾಕಿ ಹೊಸ್ತಿಲು, ಅಂಗಳ ಮತ್ತು ದೇವರ ಮನೆಯಲ್ಲಿ ಅಂದದ ರಂಗೋಲಿ ಬಿಡಿಸಿ ಅರಿಷಿಣ, ಕುಂಕುಮ ಹಚ್ಚುವದರಿಂದ ಮನೆಯಲ್ಲಿ ದೇವರು ಮತ್ತು ಲಕ್ಷ್ಮಿದೇವಿ ಸದಾ ನೆಲೆಸಿ ಸುಖ ನೆಮ್ಮದಿ ನೀಡುವರು ಎಂಬ ನಂಬಿಕೆ.

ರಂಗ ಬರ್ತಾನಂತ ಚಿತ್ತಾರದ ರಂಗೋಲಿ
ಅಂಗಳದ ತುಂಬೆಲ್ಲಾ ನಾಹೊಯ್ದು |ರಂಗೋಲಿ
ರಂಗನ ಬರವ ಕಾಯುತಲಿ ||

ದೇವರನ್ನು ಬರಮಾಡಿಕೊಳ್ಳಲು ರಂಗೋಲಿ‌ ಬಿಡಿಸಿ ಸಿದ್ದರಾಗುವರು ಮನೆ ಹೆಣ್ಣುಮಕ್ಕಳು.
ಅಂತೆಯೆ ಗೃಹಣಿಯರು ಚೆಂದದ ರಂಗೋಲಿ ಬಿಡಿಸುವ ಕಲೆಯನ್ನು ಮೈಗೂಡಿಸಿಕೊಂಡಿರುವರು.

ಮೊದಲೆಲ್ಲ ಸಗಣಿಯಿಂದ ಅಂಗಳ ಸಾರಿಸುತ್ತಿದ್ದರು. ಹಸಿ ಸೆಗಣಿಗೆ ಒಂದು ವಿಶಿಷ್ಟ ಪರಿಮಳವಿರುತ್ತದೆ. ಅದರ ಮೇಲೆ ಅಕ್ಕಿಹಿಟ್ಟಿನಿಂದ ರಂಗೋಲಿ ಬಿಡಿಸುತ್ತಿದ್ದರು. ಇದು ಆಹ್ಲಾದಕರ ವಾತಾವರಣ ಸೃಷ್ಟಿಸುತ್ತದೆ. ಮನೆ ಮುಂದೆ ನಿತ್ಯವು‌ ಹೊಸ ತೆರನಾದ ರಂಗೋಲಿ ಬಿಡಿಸುವದು ಮಹಿಳೆಯರಿಗೆ ಅಚ್ಚುಮೆಚ್ಚು. ಬೆಳಗಾಗೆದ್ದು ರಂಗೋಲಿ ಹಾಕುವದು ವಿನೂತನತೆ. ಹೊಸತನಕ್ಕೆ ತೆರೆದುಕೊಳ್ಳುವ ಸಂದೇಶ. ಇದಕ್ಕೆ ವೈಜ್ಞಾನಿಕ ಕಾರಣವು ಇದೆ. ಸಗಣಿಗೆ ಕ್ರಿಮಿ‌ಕೀಟಗಳು ಸಾಯುತ್ತವೆ. ವಿಷಜಂತುಗಳು ಒಳಗೆ ಪ್ರವೇಶಿಸುವದಿಲ್ಲ. ಅಷ್ಟೇ ಅಲ್ಲ ಸಗಣಿ ಸಾರಣೆಯಿಂದ ಮಣ್ಣಿನ ಸವಕಳಿ ತಡೆದಂತಾಗುತ್ತದೆ. ಇನ್ನು ಅಕ್ಕಿಹಿಟ್ಟು ಕ್ರಿಮಿಕೀಟಗಳಿಗೆ ಆಹಾರ ಒದಗಿಸಿದ ಪುಣ್ಯ.

ಇಂದು ಕೂಡ ರಂಗೋಲಿಗೆ ತನ್ನದೇ ಆದ ವಿಶಿಷ್ಟತೆ ಇದೆ. ಹಬ್ಬ ಹರಿದಿನಗಳಲ್ಲಿ ದೊಡ್ಡ ದೊಡ್ಡ ರಂಗೋಲಿ ಬಿಡಿಸಿ ವಿವಿಧ ಬಣ್ಣತುಂಬಿ ಚಿತ್ತಾಕರ್ಷಕಾವಾಗಿಸುವದು. ಇದೊಂದು ಕಲೆ ಮಾತ್ರವಾಗಿರದೆ ಮನಸ್ಸನ್ನು ಪ್ರಫುಲ್ಲಗೊಳಿಸುವ ಸೌಂದರ್ಯದ ಖಣಿ. ಮಹಿಳೆಯರ ಕಲಾ ಪ್ರತಿಭೆಯ ಅನಾವರಣ. ಕೈಚಳಕದ ಪ್ರದರ್ಶನ. ಮನಸ್ಸು ಮತ್ತು ಕೈಗಳ ಸಮತೋಲನ, ಏಕಾಗ್ರತೆಯ ಸಿಂಚನ.

ರಂಗೋಲಿ ಶುಭದ ಸಂಕೇತ. ರಾಮಾಯಣ ಮತ್ತು ವೇದಗಳಲ್ಲು ರಂಗೋಲಿಯ ಉಲ್ಲೇಖವಿದೆ. ಇದು ಭಾರತದ ಪುರಾತನ‌ ಕಲೆ. ಉಪಾಸನಾ ಕ್ರಮದಲ್ಲಿ ರಂಗೋಲಿ ಒಂದು ಅವಿಭಾಜ್ಯ ಅಂಗ.

ಜನಪದರು ರಂಗೋಲಿ ಕುರಿತಾಗಿ‌ ತಮ್ಮ‌ ಪದಗಳಲ್ಲಿ ಹಾಡಿದ್ದಾರೆ. ತವರು ಮನೆ ನೆನಪಾದಾಗ ತಾನಿಡುತ್ತಿದ್ದ ರಂಗೋಲಿ ಮೊದಲಿಗೆ ನೆನಪಾಗಿ ಹಾಡಿದ ರೀತಿ‌ ಹೀಗಿದೆ.

ತವರೂರ ಮನೆ ನೋಡ ಬಂದೆ
ತಾಯಿ ನೆನಪಾಗಿ ಕಣ್ಣೀರ ತಂದೆ ||

ಬಾಗಿಲ ಮುಂದೆ ರಂಗೋಲಿ
ಬಾಗಿ ಇಡುತಿದ್ದೆ ನಾನಾ ತರದಲ್ಲಿ
ಬಾಗಿಲ ಮುಂದೆ ರಂಗೋಲಿ
ಬಾಗಿ ಇಡುತಿದ್ದೆ ನಾನಾ ತರದಲ್ಲಿ
ಅದು ಹೇಗೆ ಮರೆಯಲಿ ಮನಸಲಿ
ಅದು ಮರೆಯದು ಈ ಬಾಳಿನಲ್ಲಿ ||

ರಂಗೋಲಿ‌ ಬಿಡಿಸುವಲ್ಲಿ‌ ಮಾನಿನಿಯರ ಬೆರಳುಗಳ ಕೈಚಳಕ‌ ಅದ್ಭುತ. ರಂಗೋಲಿ‌ ಪುಡಿಯನ್ನು ಹೆಬ್ಬೆರಳು ಮತ್ತು ತೋರು ಬೆರಳಿನಲ್ಲಿ ಹಿಡಿದು ಚುಕ್ಕಿ ಇಟ್ಟು ನಿಧಾನವಾಗಿ ಅವುಗಳನ್ನು ಎಳೆಗಳ‌ ಮೂಲಕ‌ ಕೂಡಿಸಿ ವಿಶಿಷ್ಟ ರಂಗೋಲಿ ಚಿತ್ರಕ್ಕೆ ಬಣ್ಣ ತುಂಬುವದು ಎಲ್ಲರ ಮನಸ್ಸನ್ನು ಆಕರ್ಷಿಸುವದು. ಇದರಲ್ಲಿ ಸೃಜನಾತ್ಮಕತೆ ಇದೆ, ಮನದ ಚಿತ್ತಾರದ ಪ್ರದರ್ಶನವಿದೆ. ಬದುಕಿಗೆ ಸವಿತನ, ಚೈತನ್ಯ ತುಂಬುವ ಶಕ್ತಿ ರಂಗೋಲಿಗಿದೆ. ದೇಹಕ್ಕೆ ವಿಶೇಷವಾಗಿ ಕೈಬೆರಳುಗಳಿಗೆ ವ್ಯಾಯಾಮವಿದೆ. ಏಕತಾನತೆ ನೀಗಿ ತನ್ಮಯತೆ‌ ಮೂಡಿಸುತ್ತದೆ.

ರಂಗೋಲಿಗಾಗಿ ಬೆಣಚಗಲ್ಲಿನ ಪುಡಿ, ಅಕ್ಕಿಹಿಟ್ಟು, ಸುಣ್ಣದ ಪುಡಿ ಇತ್ಯಾದಿ ಉಪಯೋಗಿಸುತ್ತಾರೆ. ಚುಕ್ಕಿ ರಂಗೋಲಿ, ಎಳೆ ರಂಗೋಲಿ, ಸಂಸ್ಕಾರ ಭಾರತಿ ರಂಗೋಲಿ, ಪ್ರೀಹ್ಯಾಂಡ್ ರಂಗೋಲಿ‌, ವೃತ್ತಾಕಾರದ ರಂಗೋಲಿ, ಚೌಕಾಕಾರದ ರಂಗೋಲಿ ಹೀಗೆ ಇದು ವೈವಿಧ್ಯಮಯ ಚಿತ್ತಾರದ‌ ಲೋಕ. ಆಕರ್ಷಕ ಬಣ್ಣ ತುಂಬಿದ ರಂಗೋಲಿ ಮೇಲೆ‌ ಮಿಂಚು‌ ಉದುರಿಸಿ ಇನ್ನೂ ಆಕರ್ಷಣೀಯಗೊಳಿಸುವರು. ಈಗಂತು ಬಹಳ ತೆರನಾದ ಬಣ್ಣಗಳು ಸಿಗುತ್ತಿವೆ. ಬಣ್ಣಗಳಿಂದ ಮಾತ್ರವಲ್ಲದೆ ಬೇಳೆಕಾಳುಗಳಿಂದ, ಹೂವಿನಿಂದ, ತರಕಾರಿಗಳಿಂದ ಬಿಡಿಸುವ ರಂಗೋಲಿಗಳು ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತವೆ.

ಮನೆ ಎದರು, ದೇವರ‌ಮನೆಗಳಲ್ಲಿ‌ ಮಾತ್ರವಲ್ಲದೆ, ಯಜ್ಞ, ಹೋಮ, ದೇವರಪೂಜೆ
ಸಭೆ ಸಮಾರಂಭಗಳಲ್ಲಿ ರಂಗೋಲಿಗೆ ಮಹತ್ವದ‌ ಸ್ಥಾನ. ಈಗೀಗ ಪುರೋಹಿತರು ರಂಗವಲ್ಲಿಗೆ ಹೆಚ್ಚು ಪ್ರಾಧಾನ್ಯತೆ ನೀಡಿ ಮೊದಲಿಗೆ ತಾವೇ ನಿರ್ದಿಷ್ಟ ರಂಗವಲ್ಲಿ‌ ಬಿಡಿಸಿ ಅರಿಷಿಣ ಕುಂಕುಮ ತುಂಬಿ ಎಲ್ಲರ ಕಣ್ಮನ‌ ಸೆಳೆಯುವಂತ ಬಣ್ಣಗಳನ್ನು ಉಪಯೋಗಿಸುತ್ತಿರುವದನ್ನು‌ ಕಾಣುತ್ತಿದ್ದೇವೆ. ನಂತರವೆ ಪೂಜಾ ವಿಧಾನ‌ ಪ್ರಾರಂಭ. ಮನೆಗೆ ಅತಿಥಿಗಳು ಬರುವಾಗಲು ಸ್ವಾಗತಕ್ಕೆ ರಂಗೋಲಿ ಬಿಡಿಸುವದಿದೆ. ತಟ್ಟೆಯಲ್ಲಿ ರಂಗೋಲಿ ಬಿಡಿಸಿ ಬಣ್ಣ‌, ಮಿಂಚು ಹಾಕಿ ಆರತಿ ತಟ್ಟೆ ಅಂದಗೊಳುಸುವರು. ನೆಲದ ಮೇಲಷ್ಟೆ ಅಲ್ಲ ನೀರಿನ‌ ಮೇಲೆ ರಂಗೋಲಿ ಬಿಡಿಸುವದು‌ ಒಂದು ಅದ್ಬುತ‌ ಕಲೆ. ಮದುವೆ ಸಮಾರಂಭದಲ್ಲಿ ಹಾಸಕ್ಕಿ ಹೊಯ್ಯುವದು ರಂಗೋಲಿಯ ಅದ್ಭುತ ಕಲೆ ಅಂತ ಹೇಳಬಹುದು.

ಕರಿಯ ಕಂಬಳಿ‌ ಹಾಸಿ ಮೇಲೆ ಹಾಸಕ್ಕಿ ಹೊಯ್ದು
ಬಾಗೂತ ಬಳಕೂತ ಬಲಗಾಲ ನಿಡುತ
ಬಾರೆ ಲಕುಮಿ ( ಮದುಮಗಳ ಹೆಸರು)ಹಸೆಗೆ ||

ದೇವಸ್ಥಾನದ ಆವರಣದಲ್ಲಿ, ರಸ್ತೆಗಳಲ್ಲಿ ಅನೇಕ ಕಲಾಕಾರರು ಶಿವ, ಗಣಪತಿ, ಹನುಮಂತ,ಕೃಷ್ಣ ಹೀಗೆ ದೇವರುಗಳ‌ ರಂಗೋಲಿ ಬಿಡಿಸಿ ಅತ್ಯಾಕರ್ಷಕ‌ ರಂಗು ತುಂಬಿ ಜನರೆಲ್ಲ ನೆರೆದು‌ ನೋಡುವಂತೆ ಮಾಡುತ್ತಾರೆ. ಇನ್ನು ಇತ್ತೀಚಿನ‌ ದಿನಗಳಲ್ಲಿ ಸಮಾರಂಭಗಳಲ್ಲಿ ಗಾಯಕರು ಒಂದು ಹಾಡು ಹಾಡುವದರೊಳಗಾಗಿ ಅಂದದ ರಂಗೋಲಿ‌ ಬಿಡಿಸುವ ಕೌಶಲ ಪ್ರದರ್ಶನ‌‌ ನೋಡುತ್ತಿದ್ದೇವೆ. ಇದು ರಂಗೋಲಿ ಕಲೆಗೆ ನೀಡುವ ಪ್ರೋತ್ಸಾಹ. ಇನ್ನು ವಿಶೇಷ ಸಂದರ್ಭಗಳಲ್ಲಿ ಶಾಲಾ ಕಾಲೇಜುಗಳು, ಸಂಘ ಸಂಸ್ಥೆಗಳು ಮಂಡಳಗಳು ರಂಗೋಲಿ ಸ್ಪರ್ಧೆ ಏರ್ಪಡಿಸಿ ಕಲೆಯನ್ನು‌ ಪೋಷಿಸಲು‌ ಪ್ರಯತ್ನಿಸುತ್ತಿವೆ. ರಂಗೋಲಿ ಕಲಿಕಾ ಶಿಬಿರಗಳು, ತರಬೇತಿಗಳು ನಡೆಯುತ್ತಿರುವದು ಸಂತಸದ‌ ವಿಷಯ.

ಅಂಗಳದ ತುಂಬೆಲ್ಲ ಅರಳೇತಿ ರಂಗೋಲಿ
ಸಂತಸ ತುಂಬಿ ಮನಕೆಲ್ಲ | ಜಗಕೆಲ್ಲ
ತಂದೈತಿ ರಂಗೋಲಿ ಶುಭಗಳಿಗೆ ||

ಹಿಂದೆ ಗರತಿಯರು ಪದಗಳನ್ನ ಹೇಳುತ್ತಾ ಹಬ್ಬ ಹರಿದಿನಗಳಲ್ಲಿ ಮನೆಯ ಹೊರಗಿನ ಗೋಡೆಗಳ ಮೇಲೆ, ಕುಡಿಯುವ ನೀರಿನ ಮಡಿಕೆಗಳ ಮೇಲೆ
ಸುಣ್ಣ, ಕೆಮ್ಮಣ್ಣಿನಿಂದ ತೇರು, ಸ್ವಸ್ತಿಕ, ಸೂರ್ಯ, ಚಂದ್ರ ಮುಂತಾದ ರಂಗೋಲಿ ಬಿಡಿಸುತ್ತಿದ್ದರು.
ಅವರಿಗೆ ಹೆಚ್ಚಿನ ಸಮಯ ಇತ್ತೆಂದು ಅಲ್ಲ, ಅದರಲ್ಲಿಯ ತನ್ಮಯತೆಯಿಂದಾಗ ಕಷ್ಟ ಮರೆತು ಏಕತಾನತೆಯ ಬದುಕಿನಿಂದ ಬೇಸತ್ತ ಮನಸ್ಸಿಗೆ ಆಹ್ಲಾದವುಂಟು ಮಾಡುವ ಕಲೆಯಾಗಿತ್ತು. ಮನೆಯ ಅಂದವನ್ನು ಹೆಚ್ಚಿಸುವ ( decorate) ಮಾದರಿಯು ಆಗಿತ್ತು. ಅಷ್ಟೇ ಅಲ್ಲ ಪರಂಪರೆಯ ಜನಪದ ಕಲೆಯೂ ಆಗಿತ್ತು.

ಇಂದಿನ ಧಾವಂತ ಯುಗದಲ್ಲಿ ಇದಕ್ಕೆಲ್ಲ ಸಮಯವೆಲ್ಲಿದೆ? ಅದಕ್ಕಾಗಿ ರಂಗೋಲಿ ಹಿಟ್ಟು ಉದುರಿಸುವ ಕೊಳವೆ, ಪ್ಲೇಟಗಳನ್ನು ಉಪಯೋಗಿಸುತ್ತಾರೆ. ಈಗಂತು ರೆಡಿ ಪ್ರಿಂಟೆಡ್ ಸ್ಟಿಕರಗಳು ಸಿಗುತ್ತವೆ. ಅವುಗಳನ್ನು ಹೊಸ್ತಿಲಿಗೆ ಮನೆ ಮುಂದೆ ದೇವರ ಜಗುಲಿಗೆ ಅಂಟಿಸಿದರಾಯಿತು. ಕೆಲವರಂತು ಪೇಂಟನಲ್ಲೆ ರಂಗೋಲಿ ಬಿಡಿಸಿಟ್ಟು ಬಿಡುತ್ತಾರೆ. ಈಗಿನ ಯುವತಿಯರಂತು ಮಂಡಿಯೂರಿ‌ ಕೂತು ರಂಗೋಲಿ ಬಿಡಿಸುವದು ಅಸಹ್ಯವೆಂದುಕೊಳ್ಳುವರು. ತನಗೆ ರಂಗೋಲಿ ಹಾಕಲು ಬರದು ಎಂದು ಹೇಳುವದೆ ದೊಡ್ಡಸ್ತಿಕೆ ಎಂದುಕೊಂಡಿದುವದರಿಂದ ನಮ್ಮ ಈ ಪಾರಂಪರಿಕ ಕಲೆ ನಶಿಸುತ್ತಿದೆ.

ಇಂದು ದೊಡ್ಡ ದೊಡ್ಡ ನಗರಗಳಲ್ಲಿ ಎಲ್ಲರ ಮನೆಯಂಗಳದಲ್ಲಿ ಒಂದೆ ತೆರನಾದ ರಂಗೋಲಿ ಕಾಣುತ್ತೇವೆ. ಕಾರಣ ಸಂಬಳಕೊಟ್ಟು ನಿಯಮಿಸಿದ ಕೆಲಸದಾಕೆ ಎಲ್ಲರ ಮನೆ ಅಂಗಳ ಗುಡಿಸಿ ರಂಗೋಲಿ ಹಾಕಿರುತ್ತಾಳೆ.
ಇದರಲ್ಲಿ ಶ್ರದ್ದೆ, ಭಕ್ತಿ, ಭಾವುಕತೆ ಎಲ್ಲಿದೆ.
ಶ್ರೇಷ್ಟ ಕಲೆಯಾದ ರಂಗೋಲಿ ಅಧುನಿಕತೆಯ ಭರಾಟೆಯಲ್ಲಿ ಮರೆಯಾಗದಂತೆ‌ ಉಳಿಸಲು ಹಿರಿಯರು ಕಿರಿಯರಿಗೆ ಇದರ ಮಹತ್ವದೊಂದಿಗೆ ರಂಗೋಲಿ ಹಾಕುವದನ್ನು ತಿಳಿಸಿಕೊಡಬೇಕಿದೆ. ಮಕ್ಕಳಲ್ಲಿ ಆಸಕ್ತಿ ಮೂಡಿಸಿದರೆ ಮಾತ್ರ ರಂಗೋಲಿ ಕಲೆ ಉಳಿಯಬಹುದಾಗಿದೆ.

-ಶಾರದಾ ಕೌದಿ
ಧಾರವಾಡ
8951491838

Don`t copy text!