ಪುಸ್ತಕ ಪರಿಚಯ
ಜೀವ ನೀಡುವ ಜೀವ ಅಪಾಯದಲ್ಲಿದೆ
ಲೇಖಕರು :ಜಯಶ್ರೀ ಜಯಪ್ರಕಾಶ್ ಅಬ್ಬಿಗೇರಿ
ಪ್ರಕಾಶಕರು: ಯೋಗಿತ್ ಪ್ರಕಾಶನ ಮೈಸೂರು
ಜಯಶ್ರೀ ಜಯಪ್ರಕಾಶ ಅಬ್ಬಿಗೇರಿ ೧೦ ಪುಸ್ತಕ ಮತ್ತು ಜಯಪ್ರಕಾಶ ಅಬ್ಬಿಗೇರಿ ಅವರು ಬರೆದಿರುವ ೫ ಪುಸ್ತಕ ಸತಿ ಪತಿಗಳಿಬ್ಬರ ಒಟ್ಟು ೧೫ ಪುಸ್ತಕಗಳು ದಿನಾಂಕ ೧೦-೧೨-೨೩ ಭಾನುವಾರ ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಲೋಕಾರ್ಪಣೆಗೊಳ್ಳುತ್ತಿವೆ.
ಜಯಶ್ರೀ ಅವರ ನಾಲ್ಕು ಪುಸ್ತಕಗಳನ್ನು ಸಭಿಕರಿಗೆ ಪರಿಚಯಿಸುವ ಜವಾಬ್ದಾರಿಯನ್ನು ಪ್ರೀತಿಯಿಂದ ನನ್ನ ಹೆಗಲಿಗೇರಿಸಿದ್ದಾರೆ. ಅದರಲ್ಲಿ ಒಂದು ಪುಸ್ತಕದ ಪರಿಚಯ ಇಲ್ಲಿದೆ.
ಜೀವನ ಇಡುವ ಜೀವ ಅಪಾಯದಲ್ಲಿದೆ ಎನ್ನುವ ಮಹಿಳಾ ಪರ ಲೇಖನಗಳು ಪುಸ್ತಕ ಇದು. ತಮ್ಮ ದಣಿವಿಲ್ಲದ ಬರಹದ ಮೂಲಕ ನಾಡಿನ ಅಪಾರ ಓದುಗ ಬಳಗವನ್ನು ತಲುಪಿರುವ ಜಯಶ್ರೀ ಅವರ ಈ ಪುಸ್ತಕವನ್ನು ಓದುಗರಿಗೆ ಪರಿಚಯಿಸುವ ಕೆಲಸ ಇಂದು ನನ್ನದಾಗಿದೆ.
ಜೀವ ನೀಡುವ ಜೀವ ಅಪಾಯದಲ್ಲಿದೆ ಎನ್ನುವ ಶೀರ್ಷಿಕೆ ಮೇಲ್ನೋಟಕ್ಕೆ ತಾಯಿಯಾಗುವ ಮಹಿಳೆಯ ಕುರಿತಾಗಿ ಲೇಖನಗಳಿರಬಹುದು ಎಂದು ಊಹಿಸಿದರೆ, ನಮ್ಮ ಊಹೆ ತಪ್ಪಾಗುತ್ತದೆ. ಜೀವ ನೀಡುವ ಜೀವ ಹೆಣ್ಣು ಎನ್ನುವ ವಿಶಾಲ ಅರ್ಥದಲ್ಲಿ ಶಿರ್ಷಿಕೆಯಿದೆ. ಇಂದಿನ ಆಧುನಿಕ ಯುಗದಲ್ಲಿಯೂ ಹೆಣ್ಣಮಕ್ಕಳ ಸ್ಥಿತಿಗತಿಗಳು ಅಪಾಯದಲ್ಲಿದೆ ಎನ್ನುವುದನ್ನು ಬಹುಮುಖ ಆಯಾಮಗಳಲ್ಲಿ ಈ ಲೇಖನಗಳಲ್ಲಿ ಚರ್ಚಿಸಿದ್ದಾರೆ.
ಸಮಾಜದಲ್ಲಿ ವಿವಿಧ ಸ್ಥರಗಳಲ್ಲಿ ಕಾರ್ಯ ನಿರ್ವಹಿಸುವ ಹೆಣ್ಣು ಮಗಳು ತನ್ನ ಅಸ್ತಿತ್ವ ಕಟ್ಟಿಕೊಳ್ಳಲು, ಉಳಿಸಿಕೊಳ್ಳಲು, ಮತ್ತು ಗಟ್ಟಿಯಾಗಿ ಸ್ಥಾಪಿಸಲು ಮಹಿಳೆಯರು ಕೌಟುಂಬಿಕವಾಗಿ ಮತ್ತು ಸಾಮಾಜಿಕವಾಗಿ ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಅವುಗಳನ್ನು ಎಳೆ ಎಳೆಯಾಗಿ ಈ ಲೇಖನ ಮಾಲಿಕೆಯಲ್ಲಿ ಚರ್ಚಿಸಿದ್ದಾರೆ. ಮಹಿಳಾ ಪರವಾದ 19 ಲೇಖನಗಳನ್ನು ಈ ಪುಸ್ತಕ ಒಳಗೊಂಡಿದೆ ಮಹಿಳೆ ಮನೆ ಕೆಲಸಕ್ಕೆ ಮಾತ್ರ ಸೀಮಿತಳೆ ಎನ್ನುವ ಪ್ರಶ್ನೆಯ ಮೂಲಕ ದೇಶದ ಆರ್ಥಿಕ ಅಭಿವೃದ್ಧಿಯಾಗಲು ಮಹಿಳಾ ಉದ್ಯೋಗಿಗಳ ಪಾತ್ರ ಹಿರಿದಾಗಿದೆ ಎಂದು, ಸ್ತ್ರೀ ಮತ್ತು ಪುರುಷರ ನಡುವಿನ ಉದ್ಯೋಗಿಕ ಅಸಮಾನತೆ ಕಡಿಮೆಯಾದರೆ ಮಹಿಳೆ ಆರ್ಥಿಕವಾಗಿ ಅಭಿವೃದ್ಧಿ ಸಾಧಿಸಲು ದೇಶದ ಬೆನ್ನೆಲುಬಾಗಬಲ್ಲಳು ಎನ್ನುವ ಸಾಧ್ಯತೆಯನ್ನು ವಿವರಿಸುತ್ತಾರೆ .
ವೈಯಕ್ತಿಕ ಬದುಕಿನಲ್ಲಿ ಅರಳಲ್ಲಿ ಹೂ ನಗೆಯ ಗೊಂಚಲು ಎನ್ನುವ ಲೇಖನವೂ ದುಡಿಯುವ ಮಹಿಳೆಯರ ಜೀವನ ಚಿತ್ರಣವನ್ನು ನೀಡುತ್ತದೆ ಬದಲಾದ ಮನೋಭಾವ ಮತ್ತು ಪ್ರಸ್ತುತ ಸಾಮಾಜಿಕ ಅಗತ್ಯತೆಗಳು ಬದುಕಿನ ಮೇಲೆ ಹೇಗೆ ಪ್ರಭಾವಿಸುತ್ತವೆ ಎನ್ನುವುದನ್ನು ಅರ್ಥವಾಗಿ ತೆರೆದಿಟ್ಟಿದ್ದಾರೆ ಜೀವ ನೀಡುವ ಜೀವ ಅಪಾಯದಲ್ಲಿದೆ ಎನ್ನುವ ಲೇಖನವೂ ಹೆಣ್ಣು ಬ್ರೂಣ ಹತ್ಯೆಯ ಮೇಲೆ ಬೆಳಕು ಚೆಲ್ಲುತ್ತದೆ . ಅಂಕಿ ಅಂಶಗಳ ಮೂಲಕ ವಿಷೃತವಾದ ಮಾಹಿತಿಯನ್ನು ನೀಡುವ ಮೂಲಕ ನಮ್ಮ ದೇಶದಲ್ಲಿ ನಿರಂತರವಾಗಿ ನಡೆಯುತ್ತಿರುವ ಭ್ರೂಣ ಹತ್ಯೆಯ ವಾಸ್ತವ ಚಿತ್ರಣ ತೆರೆದಿಡುತ್ತಾರೆ .ಸುಮಧುರ ಸಂಬಂಧದ ಬಳ್ಳಿ ಬೆಳೆಯಲಿ ಎನ್ನುವ ಲೇಖನವೂ ಕೌಟುಂಬಿಕ ಮತ್ತು ಸಾಮಾಜಿಕ ಸಂಬಂಧಗಳನ್ನ ಉಳಿಸಿಕೊಳ್ಳುವ ಮತ್ತು ಬೆಳೆಸಿಕೊಳ್ಳುವ ಜವಾಬ್ದಾರಿಯ ಕಿರೀಟವನ್ನು ಹೆಣ್ಣಿನ ಮುಳುಗೇರಿಸಿದ್ದೇವೆ ಎನ್ನುವ ಲೇಖಕಿ ಸಂಬಂಧವನ್ನ ಉಳಿಸಿಕೊಳ್ಳಲು ಹೇಗೆ ಹೆಣ್ಣುಮಕ್ಕಳು ಹೆಣಗಾಡಬೇಕಾಗುತ್ತದೆ ಎನ್ನುವುದನ್ನು ವಿವರಿಸುತ್ತಾರೆ.
ಪುರುಷರ ಜೊತೆಗೆ ಮಹಿಳೆಯರು ದುಡಿದರೆ ಎನ್ನುವ…? ಪ್ರಶ್ನೆಗೆ ಹಲವಾರು ಉತ್ತರಗಳನ್ನ ಲೇಖಕಿ ನೀಡುತ್ತಾ ಹೋಗುತ್ತಾರೆ. ಮಹಿಳೆಯರ ಉದ್ಯೋಗವು ವೃತ್ತಿ ದಂಪತಿಗಳನ್ನು ಸೃಷ್ಟಿಸುತ್ತದೆ ವಿವಾಹಿತ ತಾಯಂದಿರ ಉದ್ಯೋಗವು ದ್ವಿ ವೃತ್ತಿ ಕುಟುಂಬಗಳನ್ನು ರೂಪಿಸುತ್ತದೆ. ಇನ್ನೊಂದೆಡೆ
ಮಹಿಳೆಯರು ಪುರುಷರ ಮೇಲೆ ಕಡಿಮೆ ಆರ್ಥಿಕ ಅವಲಂಬಿತರಾಗುವುದರಿಂದ, ಒಂಟಿತನ ಮಹಿಳೆಯರಿಗೆ ಹೆಚ್ಚು ಆಕರ್ಷಕವಾಗಿ ಮತ್ತು ವಿಚ್ಛೇದನ ಹೆಚ್ಚು ಕಾರ್ಯಸಾಧ್ಯವಾದ ಆಯ್ಕೆಗಳನ್ನು ಮಾಡುತ್ತದೆ.
ಹೀಗೆ ಸಾಧಕ ಬಾದಕಗಳನ್ನ ಚರ್ಚಿಸಿದ್ದಾರೆ
ಸಮಸ್ಯೆಗಳ ಸುಳಿಯಿಂದ ಹೊರ ಬರಬೇಕಿದೆ ಮಹಿಳೆ ಎನ್ನುವ ಲೇಖನದಲ್ಲಿ ಹೆಣ್ಣು ಮಕ್ಕಳ ಮೇಲೆ ನಡೆಯುವ ಕೌಟುಂಬಿಕ ದೌರ್ಜನ್ಯ, ಲಿಂಗ ತಾರತಮ್ಯ, ವೇತನದ ವ್ಯತ್ಯಾಸ ಈ ವಿಷಯಗಳ ಮೇಲೆ ಬೆಳಕು ಚೆಲ್ಲುತ್ತಾರೆ.
ನಮ್ಮ ದೇಶದ ಸುಮಾರು ಸಾವಿರ ಮಹಿಳೆಯಲ್ಲಿ , 26 ಪ್ರತಿಶತದಷ್ಟು ಮಹಿಳೆಯರು ತಮ್ಮ ಜೀವಿತಾವಧಿಯಲ್ಲಿ ತಮ್ಮ ಸಂಗಾತಿಯಿಂದಲೇ ದೈಹಿಕ ಹಿಂಸೆಯನ್ನ ಅನುಭವಿಸಿದ್ದಾರೆ ಎನ್ನುವುದನ್ನು ದತ್ತಾಂಶಗಳ ಮೂಲಕ ತೆರೆದಿಡುತ್ತಾರೆ.
ಮಹಿಳೆಯರ ಮೇಲೆ ದೌರ್ಜನ್ಯ ಕುಟುಂಬ, ಸಾರ್ವಜನಿಕ ಸ್ಥಳ, ಸಾರಿಗೆ, ಮತ್ತು ಕೆಲಸದ ಸ್ಥಳಗಳಲ್ಲಿ ದೌರ್ಜನ್ಯಗಳು ಹೇಗೆ ನಡೆಯುತ್ತವೆ ಎನ್ನುವುದನ್ನು ವಿಶ್ಲೇಷಿಸುತ್ತಾರೆ.
ಅಕ್ಕರೆಯ ಅಕ್ಕನ ವಚನದ ಹಿರಿಮೆ ಗರಿಮೆ ನಿತ್ಯ ನೂತನ ಎನ್ನುವ ಲೇಖನ ಕನ್ನಡದ ಮೊಟ್ಟಮೊದಲ ಕವಯತ್ರಿ ಅಕ್ಕಮಹಾದೇವಿಯ ಜೀವನ, ಅವಳ ಸ್ತ್ರೀಪರ ನಿಲುವು ವೈಚಾರಿಕ ಚಿಂತನೆಯನ್ನು ಈ ಲೇಖನದಲ್ಲಿ ಚರ್ಚಿಸಿದ್ದಾರೆ. ಬೇಗುದಿಗಳ ಬೆಂಕಿಯಲ್ಲಿ ಬೇಯುತ್ತಿರುವ ಮಹಿಳೆ ಎನ್ನುವ ಲೇಖನವೂ, ಅನಿವಾರ್ಯತೆಗಳು ಹೇಗೆ ಹೆಣ್ಣನ್ನು ಬಲಿ ಪಡೆಯುತ್ತವೆ ಎನ್ನುವುದನ್ನು ವಿಶ್ಲೇಷಿಸುತ್ತಾ ವೇಶ್ಯಾವೃತ್ತಿಗೆ ಬಲಿಯಾದ ಮಹಿಳೆಯರ ಅಂತರಂಗವನ್ನು ಹೊಕ್ಕು ನೋಡಿದ್ದಾರೆ. ಯಾವುದೇ ಸಂಬಂಧ ಬೇಕಿಲ್ಲ ಸ್ನೇಹವೂ ಎಲ್ಲ ಎಲ್ಲೆಯ ಮೀರಿದ್ದು ಎನ್ನುವ ಲೇಖನದಲ್ಲಿ ಸ್ನೇಹದ ಮಹತ್ವವನ್ನ ತಮ್ಮ ವೈಯಕ್ತಿಕ ಅನುಭವದ ಮೂಲಕ ತೆರೆದಿಡುತ್ತಾರೆ. ಕೌಟುಂಬಿಕ ರಕ್ಷಣೆ ಮತ್ತು ಮಹಿಳೆ ಎನ್ನುವ ಲೇಖನದಲ್ಲಿ ಬಾಲ್ಯ ವಿವಾಹ ಮತ್ತು ಪ್ರೇಮ ವಿವಾಹ ಹಾಗೆ ಈ ಎರಡು ವೈವಾಹಿಕ ಸಂಬಂಧಗಳಲ್ಲಿ ನಡೆಯುವ ಕೌಟುಂಬಿಕ ದೌರ್ಜನ್ಯಗಳನ್ನು ದತ್ತಾಂಶಗಳ ಮೂಲಕ ವಿಶ್ಲೇಷಿಸುತ್ತಾರೆ ಉದ್ಯೋಗಸ್ಥ ಮಹಿಳೆಯರ ಸ್ಥಿತಿಗತಿ ಎನ್ನುವ ಲೇಖನದಲ್ಲಿ ಹೆಣ್ಣು ಮಕ್ಕಳ ಶಿಕ್ಷಣ ಉದ್ಯೋಗ ಮತ್ತು ಅಸುರಕ್ಷಿತ ಔದ್ಯೋಗಿಕ ವಾತಾವರಣ ಕಾರಣಗಳಿಂದಾಗಿ ಹೆಣ್ಣು ಮಕ್ಕಳು ಔದ್ಯೋಗಿಕವಾಗಿ ಮುಂದುವರೆಯಲು ಸಾಧ್ಯವಾಗುತ್ತಿಲ್ಲ ಎನ್ನುವ ಅಂಶಗಳನ್ನು ತೆರೆದಿಡುವುದರ ಜೊತೆಗೆ ಇಂದು ನಡೆಯುತ್ತಿರುವಂತಹ ಡಿಜಿಟಲ್ ದೌರ್ಜನ್ಯದ ಮೇಲೆ ಬೆಳಕು ಚೆಲ್ಲುತ್ತಾರೆ. ಇತ್ತೀಚೆಗೆ ನಾವು ಸಾಮಾಜಿಕ ಜಾಲತಾಣಗಳಲ್ಲಿ ಗಮನಿಸುತ್ತಾ ಇದ್ದೇವೆ. ಈ ಡಿಜಿಟಲ್ ದೌರ್ಜನ್ಯ ವಿಶೇಷವಾಗಿ ಹೆಣ್ಣು ಮಕ್ಕಳ ಬರವಣಿಗೆ ಪೋಸ್ಟ್ ಗಳು ರೀಲ್ಗಳು ವಿಡಿಯೋಗಳನ್ನು ವಿಕೃತಗೊಳಿಸಿ ದೌರ್ಜನ್ಯವೆಸಗುವ ಒಂದು ದೊಡ್ಡ ಜಾಲವೇ ಅವ್ಯಾಹತವಾಗಿ ಕಾರ್ಯ ನಿರ್ವಹಿಸುತ್ತಿದೆ. ಮಹಿಳೆಯರ ರಕ್ಷಣೆಗೆ ಹಕ್ಕುಗಳು ಎನ್ನುವ ಲೇಖನವೂ ಮಾತೃತ್ವ ಹಕ್ಕು, ಸಮಾನ ವೇತನ ,ಕೆಲಸದ ಸ್ಥಳಗಳಲ್ಲಿ ಕಿರುಕುಳ ತಡೆಗೆ ಇರುವ ಕಾನೂನು, ಹಿಂಸೆಯಿಂದ ರಕ್ಷಣೆ, ಭೂರ್ಣ ಹತ್ಯೆ ವಿರುದ್ಧ ಹಕ್ಕು ಘನತೆ ಮತ್ತು ಸಭ್ಯತೆಯ ಹಕ್ಕು ನೆರವಿನ ಹಕ್ಕು ಹಾಗೂ ಮಹಿಳೆಯರಿಗೆ ಕಷ್ಟಕಾಲದಲ್ಲಿ ಒದಗಬಹುದಾದ ಸಹಾಯವಾಣಿಗಳ ಅರಿವನ್ನು ಈ ಲೇಖನ ಮೂಡಿಸುತ್ತದೆ. ಅಳು ಬಂದರು ಅಳಬಾರದು ಎನ್ನುವ ಲೇಖನದಲ್ಲಿ ಅಳು ಸಹಜ ಸಂವೇದನೆ ಆದರೂ ಹೆಣ್ಣು ಮಕ್ಕಳು ಈ ಸೂಕ್ಷ್ಮ ಪರಿಭಾವದಿಂದ ಹೊರಬಂದು ಸವಾಲುಗಳನ್ನು ಎದುರಿಸಬೇಕು ಎನ್ನುವ ಪ್ರೇರಣಾತ್ಮಕ ಲೇಖನ ಇದಾಗಿದೆ.
ಮಕ್ಕಳ ರಜೆ ಹೀಗೆ ಕಳೆಯಲಿ ಎನ್ನುವ ಲೇಖನದಲ್ಲಿ ರಜಾ ದಿನಗಳಲ್ಲಿ ಮಕ್ಕಳನ್ನು ಹೇಗೆ ಕ್ರಿಯಾತ್ಮಕವಾಗಿ ತೊಡಗಿಸಬೇಕು ಎನ್ನುವ ಆಪ್ತ ಸಲಹೆಗಳನ್ನು ನೀಡಿದ್ದಾರೆ .
ಹೆಣ್ಣು ಮಕ್ಕಳ ಮದುವೆಗೆ ಇಷ್ಟೇಕೆ ಅವಸರ…
ಎನ್ನುವ ಲೇಖನದಲ್ಲಿ ಮದುವೆಯ ಅವಸರಕ್ಕೆ ಕೌಟುಂಬಿಕ ಕಾರಣಗಳನ್ನು ಪಟ್ಟಿ ಮಾಡುತ್ತಾರೆ ಜೊತೆಗೆ ಈ ರೀತಿ ಅವಸರದಿಂದ ಮದುವೆ ಮಾಡಿದರೆ ಆಗುವ ಅನಾಹುತಗಳ ಪಟ್ಟಿ ನೀಡುವುದರ ಜೊತೆಗೆ ಮದುವೆಗೆ ಅವಸರಿಸದಿರಿ ಎಂದು ಸಲಹೆಗಳನ್ನು ನೀಡುತ್ತಾರೆ
ಕಂದಮ್ಮಗಳ ರಕ್ಷಣೆಯಲ್ಲಿರಲಿ ಎಚ್ಚರ ಎನ್ನುವ ಲೇಖನವೂ ಮಕ್ಕಳನ್ನು ರಕ್ಷಿಸುವ ಕುರಿತು ಮಾರ್ಗದರ್ಶನವನ್ನ ನೀಡುತ್ತಾರೆ. ಮಕ್ಕಳಿರುವ ಮನೆಗಳಲ್ಲಿ ಮಕ್ಕಳ ಜೀವಕ್ಕೆ ಕುತ್ತು ತರಬಹುಬಹುದಾದಂತಹ ಆಪತ್ತು, ಗೋಳನ್ನು ನಿವಾರಿಸುವ ಕ್ರಮಗಳನ್ನು ವಹಿಸಬಹುದಾದ ಮುಂಜಾಗ್ರತೆಯ ಕ್ರಮಗಳ ಕುರಿತು ಮಾರ್ಗದರ್ಶನ ನೀಡಿದ್ದಾರೆ
ಟ್ರಬಲ್ಸ್ ಗೆ ಗುಡ್ ಬೈ ಹೇಳಬಹುದು ಎನ್ನುವ ಲೇಖನದಲ್ಲಿ ಪ್ರವಾಸದಲ್ಲಿ ಎದುರಾಗಬಹುದಾದ ಕಿರಿಕಿರಿಗಳನ್ನು ಬಗೆಹರಿಸಿಕೊಳ್ಳುವ ಕ್ರಮಗಳನ್ನ ಇಲ್ಲಿ ಚರ್ಚಿಸುತ್ತಾರೆ. ಇನ್ನು ಕೊನೆಯ ಲೇಖನ ಹತ್ತಿರವಿದ್ದರೂ ದೂರ ನಿಲ್ಲುವ ಸಂಬಂಧಗಳು ಎನ್ನುವ ಲೇಖನವು ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ಎನ್ನುವಂತೆ ಮನೆಯಲ್ಲಿರುವ ರಕ್ತ ಸಂಬಂಧಗಳನ್ನು ಸುತ್ತಮುತ್ತಲಿನ ಸ್ನೇಹ ಸಂಬಂಧಗಳನ್ನು ಅಲಕ್ಷಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಸಂಬಂಧಗಳಲ್ಲಿ ಹುಡುಕಾಟ ನಡೆಸುವ ಇಂದಿನ ನಮ್ಮ ಮನಸ್ಥಿತಿಯನ್ನು ತುಲನಾತ್ಮಕವಾಗಿ ಚರ್ಚಿಸುತ್ತಾರೆ
ಹೀಗೆ 19 ಉಪಯುಕ್ತ ಲೇಖನಗಳನ್ನು ನೀಡಿರುವ ಜಯಶ್ರೀ ಅಬ್ಬಿಗೇರಿಯವರು ಓದುಗನಿಗೆ ಮಹಿಳೆಯರ ಸ್ಥಿತಿಗತಿಗಳ ಕುರಿತು ಚಿಂತನೆಗೆ ಹಚ್ಚುತ್ತಾರೆ.
ಇನ್ನು ಹೆಚ್ಚು ಹೆಚ್ಚು ಮಹಿಳಾಪರ ವೈಚಾರಿಕ ಚಿಂತನೆಯ ಲೇಖನ ಮಾಲಿಕೆಗಳು ಅವರಿಂದ ಮೂಡಿ ಬರಲಿ ಎಂದು ಶುಭ ಹಾರೈಸುತ್ತಾ….
-ಡಾ.ನಿರ್ಮಲಾ ಬಟ್ಟಲ
ಬೆಳಗಾವಿ
೧೦.೧೨.೨೦೨೩
ವಾಸ್ತವಿಕ ನೆಲೆಗಟ್ಟಿನ ವಿಮರ್ಶೆ ಸುಂದರವಾಗಿದೆ ಮೇಡಂ ಆದರೆ ಲೇಖಕಿ ಪ್ರಸ್ತುತ ದಿನಮಾನಗಳಲ್ಲಿಯೂ ಕೂಡ ಮಹಿಳೆಯರ ಸ್ಥಿತಿಗತಿಗಳ ಗಂಭೀರ ಚಿಂತನೆ ಮಾಡಿದ್ದಾರೆ ಲೇಖನಗಳು ಕೂಡ ಹೃದಯಕ್ಕೆ ಹತ್ತಿರವಾದಂತಿವೆ. ಇಬ್ಬರಿಗೂ ಅಭಿನಂದನೆಗಳು, ಮೇಡಂ