ದೇಶ ಕಂಡ ಧೀಮಂತ ನಾಯಕ ಲಿಂಗೈಕ್ಯ ಶ್ರಿ ಎಸ್ ನಿಜಲಿಂಗಪ್ಪ

ದೇಶ ಕಂಡ ಧೀಮಂತ ನಾಯಕ
ಲಿಂಗೈಕ್ಯ ಶ್ರಿ ಎಸ್ ನಿಜಲಿಂಗಪ್ಪ

ದೇಶ ಕಂಡ ಧೀಮಂತ ನಾಯಕ ಅಪ್ರತಿಮ ಸ್ವಾತಂತ್ರ್ಯ ಸೇನಾನಿ ಕರ್ನಾಟಕದ ಸಮಗ್ರ ಅಭಿವೃದ್ಧಿ ಹರಿಕಾರ ಶ್ರಿ ಎಸ್ ನಿಜಲಿಂಗಪ್ಪನವರ ಜನ್ಮದಿನಾಚರಣೆ ಇಂದು.

ಕರ್ನಾಟಕ ಏಕೀಕರಣದಲ್ಲಿ ಮಹತ್ವದ ಪಾತ್ರವಹಿಸಿ, ಅದರ ಯಶಸ್ಸಿಗೆ ಶಕ್ತಿಮೀರಿ ದುಡಿದ ಎಸ್. ನಿಜಲಿಂಗಪ್ಪನವರು, ಏಕೀಕೃತ ಕರ್ನಾಟಕದ ಮೊದಲ ಮುಖ್ಯಮಂತ್ರಿಯಾಗಿ ಹಾಗೂ ಇನ್ನಿತರ ರಾಜಕೀಯ ಹುದ್ದೆಗಳಲ್ಲಿ ಯಶಸ್ಸನ್ನು ಗಳಿಸಿದವರು.

1902ರಲ್ಲಿ ಕೃಷಿ ಪ್ರಧಾನವಾದ ಬಡ ಶೆಟ್ಟರ ಕುಟುಂಬವೊಂದರಲ್ಲಿ ಜನಿಸಿದ ನಿಜಲಿಂಗಪ್ಪ, ತಮ್ಮ ಬದುಕಿನ ಕೊನೆಯ ದಿನಗಳವರೆಗೂ ಸ್ಪಂದಿಸಿದ್ದು ಜನಸಾಮಾನ್ಯರ ಕಷ್ಟ ಸುಖಗಳಿಗೆ.

ಬಾಲ್ಯ ಮತ್ತು ಶಿಕ್ಷಣ

ಚಿಕ್ಕಂದಿನಲ್ಲಿ ತಮ್ಮ ಹಳ್ಳಿಯ “ವೀರಪ್ಪ ಮಾಸ್ತರ” ರಿಂದ ಸಾಂಪ್ರದಾಯಿಕ ವಾಗಿ ಅಕ್ಷರಾಭ್ಯಾಸ ಮಾಡಿದ ನಿಜಲಿಂಗಪ್ಪನವರು, ಬೆಂಗಳೂರಿನ ಸೆಂಟ್ರಲ್ ಕಾಲೇಜಿನಿಂದ 1924ರಲ್ಲಿ ಪದವೀಧರರಾಗಿ ಉತ್ತೀರ್ಣರಾದರು.1921ರಿಂದ 1924 ರ ಅವಧಿಯಲ್ಲಿ ರಾವ್ ಬಹದ್ದೂರ್ ಧರ್ಮಪ್ರವರ್ತ ಗುಬ್ಬಿ ತೋಟದಪ್ಪ ವಿಧ್ಯಾರ್ಥಿ ನಿಲಯದ ವಿಧ್ಯಾರ್ಥಿಗಳಾಗಿದ್ದರು. ಶ್ರೀ ಬಸವೇಶ್ವರ ಮತ್ತು ಶಿವಶರಣರ ನೀತಿ-ಸಾಧನೆಗಳನ್ನು ಅಭ್ಯಾಸಮಾಡಿ ತಮ್ಮ ಜೀವನದಲ್ಲಿ ಅಳವಡಿಸಿಕೊಂಡ ನಿಜಲಿಂಗಪ್ಪನವರು, ಗಾಂಧೀಜಿಯವರ ವಿಚಾರಧಾರೆಯಿಂದಲೂ ಪ್ರಭಾವಿತರಾದರು. ಚಿತ್ರದುರ್ಗವನ್ನು ತಮ್ಮ ಕರ್ಮಭೂಮಿಯಾಗಿ ಸ್ವೀಕರಿಸಿದ ನಿಜಲಿಂಗಪ್ಪನವರು; ಅಂದಿನ ಚಿತ್ರದುರ್ಗ ಜಿಲ್ಲೆಯ ಏಳಿಗೆಗಾಗಿ ಶ್ರಮವಹಿಸಿದ್ದಾರೆ.

*ರಾಜಕೀಯ ರಂಗ ಪ್ರವೇಶ

1936 ರಲ್ಲಿ ತಮ್ಮ ರಾಜಕೀಯ ಜೀವನವನ್ನು ತಡವಾಗಿಯೇ ಪ್ರಾರಂಭಿಸಿದ ನಿಜಲಿಂಗಪ್ಪನವರು, ಎನ್.ಎಸ್. ಹರ್ಡೀಕರರ ಸಹಾಯದಿಂದ ಕಾಂಗ್ರೆಸ್ ಸೇರಿದರು.

ಇಂಡಿಯನ್ ಆಯಿಲ್ ಸಂಸ್ಥೆಯ ಅಧ್ಯಕ್ಷರಾಗಿ 1956ರಿಂದ 1962 ರ ವರೆಗೆ ದುಡಿದರು.

ಪ್ರಾರಂಭದಲ್ಲಿ ಸಾಮಾನ್ಯ ಸದಸ್ಯನಾಗಿ ಸೇರಿ ನಂತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ಕೊನೆಗೆ 1968 ರಲ್ಲಿ ಅಖಿಲ ಭಾರತ ಕಾಂಗ್ರೆಸ್ ಪಾರ್ಟಿಯ ಅಧ್ಯಕ್ಷರಾದರು. ಇಂದಿರಾ ಗಾಂಧಿಯವರ ಜೊತೆ ರಾಜಕೀಯ ಬಿನ್ನಾಭಿಪ್ರಾಯ ಹೊಂದಿ ಅಂದಿನ ಅನೇಕ ಹಿರಿಯ ಕಾಂಗ್ರೆಸಿನ ನಾಯಕರೊಂದಿಗೆ ಕಾಂಗ್ರೆಸ್ ಓ ಸ್ಥಾಪಿಸಿದರು.
ಮುಂದೆ ಜಯಪ್ರಕಾಶ ನಾರಾಯಣ ಅವರ ನೇತೃತ್ವದಲ್ಲಿ ಜನತಾ ಪಕ್ಷದ ಸ್ಥಾಪನೆಗೂ ಕಾರಣಕರ್ತರಾದರು. ಪ್ರಧಾನಿ ನೆಹರೂ ವಲ್ಲಭ ಭಾಯಿ ಪಟೇಲ್ ಡಾ ಬಾಬಾಸಾಹೇಬ ಅಂಬೇಡ್ಕರ್ ಕೆ ಕಾಮರಾಜ ಇವರಲ್ಲದೆ ಇನ್ನೂ ಅನೇಕರ ಜೊತೆಗೆ ಅತ್ಯಂತ ನಿಕಟ ಸಂಬಂಧ ಹೊಂದಿದ ಪ್ರಾಮಾಣಿಕ ದಕ್ಷ ಪಾರದರ್ಶಕ ರಾಜಕಾರಣಿ.

ಸ್ವಾತಂತ್ರ್ಯ ಪೂರ್ವದಲ್ಲಿ ಗಾಂಧೀವಾದದ ದೀಕ್ಷೆ ಕೈಗೊಂಡು ಬದುಕಿನುದ್ದಕ್ಕೂ ಅದನ್ನು ಪಾಲಿಸಿಕೊಂಡು ಬಂದ ನಿಜಲಿಂಗಪ್ಪನವರ ನಡೆ-ನುಡಿಗಳ ನಡುವೆ ಎಂದೂ ಅಂತರವಿರಲಿಲ್ಲ.

ನಿಜಲಿಂಗಪ್ಪನವರು ತೆರಿಗೆದಾರರ ಹಣ ಅವರ ಅಭ್ಯುದಯಕ್ಕೆ ಹೊರತು, ಅವರೇ ಆರಿಸಿ ಕಳುಹಿಸಿದ ಜನಪ್ರತಿನಿಧಿಗಳಿಗಲ್ಲ ಎಂಬ ನಿಲುವುವಿನಲ್ಲಿ ಅಚಲ ವಿಶ್ವಾಸವಿರಿಸಿಕೊಂಡಿದ್ದರು. ಎರಡು ಬಾರಿ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ನಿಜಲಿಂಗಪ್ಪನವರು, ಸ್ವಂತಕ್ಕಾಗಿ ಅಧಿಕಾರವನ್ನು ಬಳಸಲಿಲ್ಲ.

ಕರ್ನಾಟಕದ ಏಕೀಕರಣ ಮತ್ತು ಅಭಿವೃದ್ಧಿಗಾಗಿ ದುಡಿದ ನಿಜಲಿಂಗಪ್ಪನವರಿಗೆ 1999 ರಲ್ಲಿ ಕರ್ನಾಟಕ ಸರ್ಕಾರವು ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಿ ಗೌರವಿಸಿದೆ.

ಕರ್ನಾಟಕದ ಏಕೀಕರಣ, ಶರಾವತಿ ಜನವಿದ್ಯುತ್ ಯೋಜನೆ, ಕೃಷ್ಣಾ ಮೇಲ್ಡಂಡೆ ಯೋಜನೆಗಳು ಹೀಗೆ ಹಲವಾರು ಯೋಜನೆಗಳು ನಿಜಲಿಂಗಪ್ಪನವರ ನೆನಪು ನಾಡಿನ ಜನಮನದಲ್ಲಿ ಹಚ್ಚ ಹಸಿರಾಗಿ ಇಡಬಲ್ಲವು.

ನಿಜಲಿಂಗಪ್ಪನವರ ಮತ್ತೊಂದು ಪ್ರಮುಖವಾದ ಕೆಲಸವೆಂದರೆ, ಟಿಬೇಟ್ ಸಮುದಾಯದವರಿಗೆ ಕರ್ನಾಟಕದಲ್ಲಿ ಆಶ್ರಯ ಒದಗಿಸಿದ್ದು. ಕರ್ನಾಟಕದಲ್ಲಿನ ಟಿಬೇಟಿಯನ್ನರು ಮನಗಳಲ್ಲಿ ನಿಜಲಿಂಗಪ್ಪನವರು ಸದಾ ನೆಲೆಸಿರುತ್ತಾರೆ. ಈ ಕಾರಣಕ್ಕಾಗಿಯೇ, ಚಿತ್ರಗುರ್ಗದಲ್ಲಿನ ಅವರ ಸ್ಮಾರಕವನ್ನು ‘ದಲಾಯಿ ಲಾಮ’ರವರು ಉದ್ಘಾಟಿಸಿದರು.

ಸಂಕ್ಷಿಪ್ತ ಪರಿಚಯ

ಹೆಸರು ಸಿದ್ದವನಹಳ್ಳಿ ನಿಜಲಿಂಗಪ್ಪ
ಜನನ 1902 ಡಿಸೆಂಬರ್ 10
ಮರಣ 2000 ಆಗಸ್ಟ್ 8

ತಂದೆ ಅಡಿವಪ್ಪ
ತಾಯಿ ಮರಿಗಮ್ಮ
ಜನ್ಮ ಸ್ಥಳ ಹಲುವಾಗಲು ಗ್ರಾಮ, ಹರಪನಹಳ್ಳಿ ತಾಲ್ಲೂಕು, ಬಳ್ಳಾರಿ ಜಿಲ್ಲೆ.

ಅಧಿಕಾರ/ಹುದ್ದೆ
ಕ್ರ. ಸಂ. ಅಧಿಕಾರ/ಹುದ್ದೆ ಅವಧಿ
1. ಮೈಸೂರು ವಿಧಾನ ಪರಿಷತ್ತು
1937 – 1938
2. ಅಧ್ಯಕ್ಷರು, ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ
1936 – 1940
3. ಸದಸ್ಯರು, ಮೈಸೂರು ಕಾಂಗ್ರೆಸ್ ಕಾರ್ಯಕಾರಿ ಸಮಿತಿ 1938 – 1950
4. ಪ್ರಧಾನ ಕಾರ್ಯದರ್ಶಿ, ಮೈಸೂರು ಪ್ರದೇಶ ಕಾಂಗ್ರೆಸ್ ಸಮಿತಿ
1942 – 1945
5. ಅಧ್ಯಕ್ಷರು, ಮೈಸೂರು ಪ್ರದೇಶ ಕಾಂಗ್ರೆಸ್ ಸಮಿತಿ 1945 – 1946
6. ಅಧ್ಯಕ್ಷರು, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ 1946
7. ಸದಸ್ಯರು, ಭಾರತದ ಸಂವಿಧಾನ ಸಭೆ ಮತ್ತು ತಾತ್ಕಾಲಿಕ ಸಂಸತ್ತು 1946
8. ಸದಸ್ಯರು ಮತ್ತು ಅಧ್ಯಕ್ಷರು, ಮೈಸೂರು ಸಂವಿಧಾನ ಸಭೆ 1948 – 1950
9. ಸದಸ್ಯರು, ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ 1949
10. ಸದಸ್ಯರು, ಗೋಪಾಲ್ ರಾವ್ ವಿಚಾರಣಾ ಸಮಿತಿ, ಮೈಸೂರು ಸರ್ಕಾರ
11. ಅಧ್ಯಕ್ಷರು, ಇಂಡಿಯನ್ ಆಯಿಲ್ ಸಂಸ್ಥೆ 1959 – 1962
12. ಅಧ್ಯಕ್ಷರು, ಅಖಿಲ ಭಾರತ ಕಾಂಗ್ರೆಸ್ 1968
13. ಮುಖ್ಯಮಂತ್ರಿಗಳು, ಕರ್ನಾಟಕ ರಾಜ್ಯ 1956 – 1958
14. ಮುಖ್ಯಮಂತ್ರಿಗಳು, ಕರ್ನಾಟಕ ರಾಜ್ಯ 1962 – 1968
14. ಸದಸ್ಯರು, ಚಿತ್ರದುರ್ಗ ಕ್ಲಬ್ 1929
15. ಕಾರ್ಯದರ್ಶಿ, ಚಿತ್ರದುರ್ಗ ಕ್ಲಬ್ 1935 – 1937
16. ಸದಸ್ಯ, ಸಂವಿಧಾನ ಕ್ಲಬ್, ನವದೆಹಲಿ. 1948 1950

ಹಿಂದಿನ ಕೇಂದ್ರ ರೈಲ್ವೇ ಸಚಿವ ಶ್ರಿ ಜಾಫರ ಶರೀಫ ಅವರು ಶ್ರಿ ಎಸ ನಿಜಲಿಂಗಪ್ಪ ಅವರನ್ನು ತಮ್ಮ ರಾಜಕೀಯ ಗುರು ಎಂದು ಹೇಳಿಕೊಂಡಿದ್ದಾರೆ.
ಶ್ರಿ ವೀರೇಂದ್ರ ಪಾಟೀಲ ರಾಮಕೃಷ್ಣ ಹೆಗಡೆ ದೇವರಾಜ ಅರಸು ಮುಂತಾದ ಅನೇಕರು ಶ್ರಿ ನಿಜಲಿಂಗಪ್ಪನವರ ಗರಡಿಯಲ್ಲಿ ಪಳಗಿದ ರಾಜಕೀಯ ಧುರೀಣರು.
ಇಂತಹ ಅಪರೂಪದ ಸಜ್ಜನ ರಾಜಕಾರಣಿ ಈಗ ಬರೀ ನೆನಪು ಮಾತ್ರ.

ಡಾ ಶಶಿಕಾಂತ ಪಟ್ಟಣ ರಾಮದುರ್ಗ

Don`t copy text!