ಬೇಂದ್ರೆ

ಬೇಂದ್ರೆ

ಬದುಕು ಬೆಂದರೂ
ಬಾಳು ರುಚಿಸಿತು
ನುಡಿದು ಬರೆದ
ಅಕ್ಕರದೊಳು,
ನಡದೆ ನಡೆದರು
ಜಗವ ಸುತ್ತುತ
ಸಾಧನಕೇರಿಯ
ಗಮ್ಯಕೆ ಸಂದರು.

ವರದ ಅಕ್ಕರ
ಒರೆದು ಉಲಿಯುತ
ಅಂಬಿಕೆಯ ಮಡಿಲನು
ತುಂಬಲು,
ಬಡವ ರಾಮಗೆ
ಚಂದ್ರನಾದರು
ಕಾವ್ಯದೇವಿಗೆ ದತ್ತವಾಗಲು.

ಅತ್ತಿಕೊಳ್ಳದ ಚೆಲುವ ತಂದು
ಕಾವ್ಯಚೆನ್ನೆಗೆ ಸುರಿದರು,
ಸ್ವರದ ಸೀರೆಯ
ಲಯದ ಬಳುಕಿನ
ಚೆಲುವೆ ಲಕ್ಷ್ಮಿಗೆ ಒಲಿದರು.

ಹುಣ್ಣಿಮೆ ಚಂದ್ರನ
ಹೆಣನ ಕಂಡರೂ
ಬಾಳಿನ ಹಾಡನು ಹಾಡಿದರು
ಮೂಡಲಮನೆಯ
ಸೂರ್ಯನ ಕಾಣುತ
ನೋವಿನ ಪಾಡನು ನೂಕಿದರು

ಮರಮರಕೂ ಒಂದು
ಮಾತನು ಕಲಿಸಿ
ಗಿಳಿಕೋಗಿಲೆ ಕಂಠದಿ
ಹಾಡಿದರು
ಪಾತರಗಿತ್ತಿಯ ಹಾರಿಸಿ
ಕುಣಿಸುತ
ಲೋಕಕೆ ಬಣ್ಣವ ತುಂಬಿದರು.

ಮಲ್ಲಿಗೆ ಹೂವಿನ
ಗಂಧದ ಕೂಡ
ಕನಸನು ತೂರಿಸಿ
ಚಿಮ್ಮಿದರು
ನಿದ್ದೆಯನಪ್ಪುವ
ರೆಪ್ಪೆಯ ಬಿಡಿಸುತ
ರಸಲೋಕದ ಬೆಳಕನು
ಕಣ್ಣೊಳು ತುಂಬಿದರು.

ಇಲ್ಲಿಯೇ ಇದ್ದರು
ಕೆರೆಯ ಅಂಗಳದಿ
ಜಗವ ಮರಳಾಗಿಸಿದ
ಗಾರುಡಿಗರು
ಮರಳುವುದಾಗಿ ಎದ್ದು
ಹೋದರು
ಮಳೆತಾಯಿಯ ಬಸಿರಲಿ
ಹೂತಿಹರು ,
ಶ್ರಾವಣ ಮಾಸದಿ
ಜಿಟಿ ಜಿಟಿ ಜಿನುಗುತ
ಬಾಳಿಗೆ ರೌದ್ರ ರಮ್ಯವ
ತುಂಬಿಹರು.

ಬೆಂದವರು ಬೇಂದ್ರೆ
ಬಂದವರು ಬೇಂದ್ರೆ
ಜ್ಞಾನಪೀಠಕೆ ಕಳೆಗಟ್ಟಿ
ನಿರುತ ಎಲ್ಲರ
ನಗಿಸುವ ನಲಿಸುವ
ಜೇನಿನ ಹನಿಯ ರಸಗಟ್ಟಿ.


-ಕೆ.ಶಶಿಕಾಂತ
ಲಿಂಗಸೂಗೂರ

Don`t copy text!