ಸ್ವರವಚನಗಳು

ಸ್ವರವಚನಗಳು

ಕನ್ನಡ ರತ್ನಕೋಶದಲ್ಲಿ ಸ್ವರದ ಅರ್ಥವನ್ನು ಈ ತೆರನಾಗಿ ಗುರುತಿಸಲಾಗಿದೆ. ಸ್ವರವೆಂದರೆ ನಾದ. ಸಂಗೀತದಲ್ಲಿ ಸ-ರಿ-ಗ-ಮ-ಪ-ದ-ನಿ ಎಂಬ ಅರ್ಥಗಳು ಈ ಪದಕ್ಕಿವೆ. ವಚನ ಎಂದರೆ ಮಾತು, ಕೊಟ್ಟ ಭಾಷೆ ಎಂದರ್ಥ. ಸ್ವರ ವಚನಕಾರರು ವಚನಗಳನ್ನು ರಾಗ, ತಾಳಗಳಿಗೆ ಹೊಂದುವಂತೆ ರಚನೆ ಮಾಡಿದರು. ಸ್ವರವಚನಗಳನ್ನು ಹಾಡುವುದರ ಮೂಲಕ ಜನರಿಗೆ ತಮ್ಮ ಹಾಡಿನ ಮೂಲಕ ಸಂದೇಶವನ್ನು ನೀಡಲಾಯಿತು. ಹೀಗಾಗಿ ಸ್ವರವಚನಗಳು ಸಹಜವಾಗಿಯೇ ಜನರ ಮೆಚ್ಚುಗೆಯನ್ನು ಪಡೆದುಕೊಂಡಿವೆ.

ಸ್ವರ ಮತ್ತು ವಚನ ಎಂಬ ಎರಡು ಶಬ್ದಗಳಿಂದ ಉಂಟಾದ ಸಮಸ್ತ ಪದ ಸ್ವರ ವಚನವಾಗಿದೆ. ಸ್ವರವೆಂದರೆ ಕಂಠದಿಂದ ಹೊರಡುವ ನಾದ ಧ್ವನಿ ದಾಟಿ ರಾಗದ ಮೂಲಕ ಕವಿತೆಯ ಗೀತವನ್ನು ಹಾಡುವ ಕ್ರಮವೆಂಬ ಅರ್ಥಗಳನ್ನು ಕಾಣಬಹುದು. ವಚನವೆಂದರೆ ನುಡಿ ಮಾತು ಪ್ರಮಾಣ ಅಭಿವ್ಯಕ್ತಿಯ ಅರ್ಥಗಳಿವೆ. ಕನ್ನಡ ಸಾಹಿತ್ಯ ಲೋಕದಲ್ಲಿ ವಚನಕ್ಕೆ ಪ್ರಧಾನವಾಗಿ ನಡೆ ನುಡಿಗೆ ಬದ್ಧರಾದ ಶರಣರ ಅಭಿವ್ಯಕ್ತಿಯೆಂಬ ಅರ್ಥ ಕಾಣುತ್ತೇವೆ.

ಈ ಹಿನ್ನೆಲೆಯಿಂದ ನೋಡಿದಾಗ ಹಾಡಲೆಂದು ರಚಿತವಾದ ಶರಣರ ಕೆಲವು ವಚನಗಳನ್ನು ಸ್ವರ ವಚನಗಳೆಂದು ಕರೆದಿರುವುದು ಸ್ಪಷ್ಟವಾಗುತ್ತದೆ. ಮುಖ್ಯವಾಗಿ ಹಾಡಿನಲ್ಲಿ ಪಲ್ಲವಿ ಚರಣ ಹಾಗೂ ಅಂಕಿತವನ್ನು ಒಳಗೊಂಡು ರಾಗ ಪ್ರಧಾನವಾಗಿರುತ್ತದೆ. ಸ್ವರ ವಚನ ಮೇಲ್ನೋಟಕ್ಕೆ ಶಾಸ್ತ್ರ ಸಂಮಿತ ಸುಮಧುರವಾದ ಸಂಗೀತ ಒಳಗೊಂಡಿರುತ್ತದೆ. ಆಡು ನುಡಿಯ ಆಧ್ಯಾತ್ಮಿಕ ಅನುಭಾವದ ಹಾಡುಗಳೆಂದರೆ ಸ್ವರ ವಚನಗಳೇ ಆಗಿವೆ. ಹೀಗಾಗಿ ಸ್ವರ ವಚನಗಳು ಸೃಜನಶೀಲ ಅನುಸಂಧಾನದ ತಾತ್ವಿಕ ಭಿತ್ತಿಗಳಾಗಿವೆ. ಆತ್ಮ ನಿವೇದನೆಯ ಪದ್ಯಗಳಾಗಿ ಪ್ರಕಟಗೊಂಡಿದೆ.

ವಚನಕಾರರ ಕಾಲದಲ್ಲಿ ವಚನಗಳನ್ನು ಹಾಡಲ್ಪಡುತ್ತಿದ್ದರೆಂಬುದಕ್ಕೆ ಹಲವಾರು ಉದಾಹರಣೆಗಳು ದೊರಕುತ್ತವೆ. ಬಸವಣ್ಣನವರು:
ತಾಳ ಮಾನ ಸರಿಸವನರಿಯೆ,
ಓಜೆ ಬಜಾವಣೆ ಲೆಕ್ಕವನರಿಯೆ,
ಅಮೃತಗಣ ದೇವಗಣವನರಿಯೆ,
ಕೂಡಲಸಂಗಮದೇವಾ,
ನಿನಗೆ ಕೇಡಿಲ್ಲವಾಗಿ ಆನು ಒಲಿದಂತೆ ಹಾಡುವೆ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-47 / ವಚನ ಸಂಖ್ಯೆ-494)

ಅಕ್ಕಮಹಾದೇವಿಯ ಈ ವಚನ
ಅಯ್ಯಾ, ನೀನು ಕೇಳಿದಡೆ ಕೇಳು, ಕೇಳದಡೆ ಮಾಣು
ಆನು ನಿನ್ನ ಹಾಡಿದಲ್ಲದೆ ಸೈರಿಸಲಾರೆನಯ್ಯಾ.
ಅಯ್ಯಾ, ನೀನು ನೋಡಿದಡೆ ನೋಡು, ನೋಡದಡೆ ಮಾಣು
ಆನು ನಿನ್ನ ನೋಡಿ ಹಿಗ್ಗಿ ಹಾರೈಸಿದಲ್ಲದೆ ಸೈರಿಸಲಾರೆನಯ್ಯಾ.
ಅಯ್ಯಾ, ನೀನು ಮೆಚ್ಚಿದೆಡೆ ಮೆಚ್ಚು, ಮೆಚ್ಚದಡೆ ಮಾಣು
ಆನು ನಿನ್ನನಪ್ಪಿದಲ್ಲದೆ ಸೈರಿಸಲಾರೆನ‍ಯ್ಯಾ.
ಅಯ್ಯಾ, ನೀನು ಒಲಿದಡೆ ಒಲಿ, ಒಲಿಯದಡೆ ಮಾಣು
ಆನು ನಿನ್ನ ಪೂಜಿಸಿದಲ್ಲದೆ ಸೈರಿಸಲಾರೆನಯ್ಯಾ.
ಚೆನ್ನಮಲ್ಲಿಕಾರ್ಜುನಯ್ಯಾ, ಆನು ನಿಮ್ಮನರ್ಚಿಸಿ ಪೂಜಿಸಿ
ಹರುಷದೊಳೋಲಾಡುವೆನಯ್ಯಾ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-788 / ವಚನ ಸಂಖ್ಯೆ-32)

ಬಸವಣ್ಣನವರ ಈ ವಚನ
ತನುವ ಬೇಡಿದಡೀವೆ, ಮನವ ಬೇಡಿದಡೀವೆ,
ಧನವ ಬೇಡಿದಡೀವೆ ನಿಮ್ಮ ಶರಣಂಗೆ.
ಎನಗೆ ಬೇಕೆಂಬ ಭಾವ ಮನದಲ್ಲಿ ಹೊಳೆದಡೆ
ಘನಮಹಿಮ, ನಿಮ್ಮ ಪಾದದಾಣೆ.
ಮನ ವಚನ ಕಾಯದಲ್ಲಿ ನೀವಲ್ಲದೆ ಮತ್ತೊಂದನರಿದಡೆ
ಕೂಡಲಸಂಗಮದೇವಾ, ಭವ ಘೋರದಲ್ಲಿಕ್ಕಯ್ಯಾ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-788 / ವಚನ ಸಂಖ್ಯೆ-32)

ಇಲ್ಲಿಯ ಭಾಷೆ ಶೃತಿ ರಾಗ ತಾಳ ಭಕ್ತಿಯ ಆಧ್ಯಾತ್ಮಿಕ ನಿವೇದನೆಯ ಮೂಲಕ ಪ್ರಕಟವಾಗುತ್ತದೆ. ಎನಗಿಂತ ಕಿರಿಯರಿಲ್ಲ ಶಿವ ಭಕ್ತರಿಗಿಂತ ಹಿರಿಯರಿಲ್ಲ ಎಂಬ ವಿನಯವಂತಿಕೆ ವಿಶೇಷವಾಗಿ ಕಾಣಬಹುದು. ರಾಗಬದ್ಧತೆ ಶರಣರ ಸ್ವರ ವಚನಗಳಾಗಿವೆ. ರಾಗ ತಾಳಗಳು ಸಮನ್ವಯವಾಗಿ ಹಾಡಲು ಯೋಗ್ಯವಾದ ಪದ್ಯ ಪ್ರಕಾರ.

ಇಂತಹ ಹಾಡುವ ಮತ್ತು ಕೇಳುವ ವಚನಗಳು ವಚನಕಾರಲ್ಲಿ ಮಾತ್ರ ದೊರಕುತ್ತವೆ. ಆದರೆ ಅನೇಕ ಸಂಶೋಧಕರು ವಚನಗಳೆ ಹಾಡುಗಳೆಂದು ತೀರ್ಮಾನಿಸಿ ಅವು ಹನ್ನೆರಡನೆಯ ಶತಮಾನದ ವಚನಗಳಿಗಿಂತ ಭಿನ್ನವಾದವುಗಳೆಂದು ಅಭಿಪ್ರಾಯ ಪಟ್ತಿದ್ದಾರೆ. ಶೈವರ ತೇವಾರಂ ಹಾಡುಗಳು ಶಿವ ಶರಣರ ಹಾಡುಗಳಿಗೆ ಮಾದರಿಯಾಗಿರಬಹುದು. ತೇವಾರಂ ಹಾಡುಗಳನ್ನು ಹೋಲುವ ರಚನೆಗಳಿದ್ದರೆ, ವಚನ ಸಾಹಿತ್ಯದಲ್ಲಿ ಅಲ್ಲಮ. ಬಸವಣ್ಣ, ಚೆನ್ನಬಸವಣ್ಣ, ಸಿದ್ದರಾಮ ಮುಂತಾದವರು ಹಾಡಿದರೆಂದು ರಾಗ ನಿರ್ದೇಶನದೊಂದಿಗೆ ಅವರವ ಅಂಕಿತಗಳೊಂದಿಗೆ ಶೂನ್ಯಸಂಪಾದನೆಯಲ್ಲಿ ಸಿಗುವ ಪದಗಳಾಗಿವೆ. ಎಂದು ಎಂ ಚಿದಾನಂದ ಮೂರ್ತಿಯವರು ಅಭಿಪ್ರಾಯ ಪಡುತ್ತಾರೆ.

ವಚನಕಾರರ ತತ್ವಗಳು ತೋಂಡಿಯಾಗಿ ಹರಿದಾಡಿದ ನುಡಿಗಳು. ಅವು ಸ್ವರವಚನಗಳು, ಗೀತ, ವಚನ ಹಾಡು, ಸ್ವರ ಪದದ ಹಾಡು ಎಂದು ಖ್ಯಾತಗೊಂಡು ಬಳಕೆಯಾಗಿವೆ. ನಂತರ ಛಂದೋಬದ್ದವಾದ ರಾಗ ತಾಳ ಸಹಿತವಾದ ಸ್ವರಪದ ಹಾಡುಗಳಾಗಿ ಭಾವ ಗೀತೆಗಳಂತೆ ಹೆಚ್ಚು ವ್ಯಾಪಕವಾಗಿ ಭಜನಾ ಮಾಧ್ಯಮದಲ್ಲಿ ಖ್ಯಾತಗೊಂಡಿವೆ.

ಸ್ವರವಚನಗಳು ವಚನಗಳಲ್ಲಿ ಬರುವ ಆಧ್ಯಾತ್ಮಿಕ ಸಹಿತವಾದ ಮೌಖಿಕ ರೂಪದ ಹಾಡುಗಳೆಂದು ಹೇಳಬಹುದು. ಕ್ರಿ.ಶ. 16 ನೆ ಶತಮಾನದ ಪ್ರೌಢದೇವರಾಯನ ಕಾಲದ ಸ್ವರವಚನಕಾರರನ್ನು ಶೂನ್ಯ ಸಂಪಾದನೆಯಲ್ಲಿ ಬರುವ ನೂರೊಂದು ವಿರಕ್ತರೆಂದು ಗುರುತಿಸಿದ್ದೇವೆ.

1. ಧರ್ಮದ ಅನುಸಂದಾನ
2. ಸೃಜನ ಅನುಸಂದಾನ

ಆದಿ ಯುಗದ ಮಹಾಘನ ಲಿಂಗವು
ಇನ್ನೇನಿನ್ನೇನು ಸಾಧಿಸಿಹನೆಂದಡೆ
ಸಾಧಿಸಳವೆಲ್ಲ ಇನ್ನೆನಿನ್ನೆನು

ಮುಕ್ತಕ ರೂಪಕದ ಶರಣರ ವಚನಗಳನ್ನು ವಚನವೆಂದು ಸ್ವರ ಸಹಿತವಾದ ಹಾಡುಗಳನ್ನು ಸ್ವರ ವಚನವಾಗಿ ಬಳಸಲ್ಪಡುವುದರಿಂದ ಸ್ವರ ವಚನಗಳಾಗಿ ಗುರಿತಿಸಲು ಸಾಧ್ಯವಾಗುತ್ತದೆ. ವಚನಕಾರರು ವಾಗ್ಗೇಯಕಾರರಾಗಿ ಸಂಗೀತ ಬಳಸಿದರು. ಸಂಗೀತ ಶಾಸ್ತ್ರವನ್ನು ಗಟ್ಟಿಗೊಳಿಸುವ ಪ್ರಯತ್ನ ಮಾಡಿದರು. ವಚನಗಳು ಮತ್ತು ಸ್ವರವಚನಗಳು ಭಿನ್ನವಾದ ಕಾಲದ ಒತ್ತಡದಲ್ಲಿ ರಚನೆಯಾದ ಸಾಹಿತ್ಯವಾಗಿದೆ.

15 ನೇ ಶತಮಾನದಲ್ಲಿ ವಚನಧರ್ಮ ಶರಣ ಧರ್ಮವಾಗಲು ಅಂದು ಸಾಧ್ಯವಾಗಿರಲಿಲ್ಲ. ವಚನಗಳನ್ನು ವೇದ ಆಗಮಗಳ ಮಟ್ಟಕ್ಕೆ ಕೊಂಡೊಯ್ದು ವೈದಿಕ ಧರ್ಮದಂತೆ ಶರಣ ಧರ್ಮಕ್ಕೆ ಒಂದು ಸಾಂಸ್ಥಿಕ ಚೌಕಟ್ಟನ್ನು ಕಟ್ಟುವುದು ಆ ಕಾಲದ ಕವಿಗಳಿಗಿತ್ತು. ಹೀಗಾಗಿ ವಚನಗಳ ರಚನೆಗಳು ಸ್ವರ ವಚನಗಳಾಗಿ ಹುಟ್ಟಿಕೊಂಡವು.

-ಡಾ. ಸರ್ವಮಂಗಳ ಸಕ್ರಿ.
ಕನ್ನಡ ಉಪನ್ಯಾಸಕರು
ರಾಯಚೂರ.

Don`t copy text!