ಪರಿವರ್ತನೆ
ಹಳ್ಳಿಯಲ್ಲಿ ನೆಲೆಸಿದ್ದ ತನ್ನ ಅತ್ತೆ ನೆನ್ನೆ ತಾನೇ ಊರಿಗೆ ಬಂದಿದ್ದು ಇಂದು ಮುಂಜಾನೆಯಿಂದ ತಮ್ಮ ಕೋಣೆಯಿಂದಲೂ ಹೊರಬರದೆ ಸಿಡಿಮಿಡಿಗುಟ್ಟುತ್ತಿರುವುದನ್ನು ಕಂಡು ಮಾಧವಿ ನಸುನಗುತ್ತಾ ಅತ್ತೆಗೆ ಇಷ್ಟವಾಗುವ ಸ್ಟ್ರಾಂಗ್ ಚಹಾ ತಯಾರಿಸಿ ಎರಡು ಕಪ್ಪಿಗೆ ಸೋಸಿ ಟ್ರೇಯಲ್ಲಿ ಇಟ್ಟುಕೊಂಡು ಅತ್ತೆಯ ಕೋಣೆಯತ್ತ ನಡೆದಳು. ಮಂಚದ ಮೇಲೆ ಕೂತಿದ್ದ ಅತ್ತೆಯ ಕೈಗೆ ಚಹಾದ ಕಪ್ ಇರಿಸಿ ತಾನೊಂದು ಕಪ್ ತೆಗೆದುಕೊಂಡು ಅತ್ತೆಯ ಮುಂದೆ ಕುಳಿತುಕೊಂಡಳು.
ಮಾತನಾಡದೆ ಸುಮ್ಮನೆ ಚಹಾ ಹೀರಿದ ಅತ್ತೆ ಲಕ್ಷ್ಮಮ್ಮ
ಕಪ್ಪನ್ನು ಸೊಸೆಯ ಕೈಗೆ ಹಿಂತಿರುಗಿಸುತ್ತಾ ಈ ಮನೆಯಲ್ಲಿ ಏನು ನಡೆಯುತ್ತಿದೆ ಎಂದು ಸ್ವಲ್ಪವಾದರೂ ಅರಿವಿದೆಯೇ ನಿನಗೆ??. ಎಂದು ಕೇಳಿದರು.
ಅದಕ್ಕುತ್ತರವಾಗಿ ಮಾಧವಿ, ಏನಾಯ್ತು ಅತ್ತೆ ಎಂದು ಕೇಳಿದಳು.
ಈ ಮನೆಯಲ್ಲಿ ಹಿರಿಯರು ಕಿರಿಯರು ಎಂಬ ನಿಯಮಗಳೆಲ್ಲ ಅಳಿಸಿ ಹೋಗಿವೆ. ನಿನ್ನ ಸೊಸೆ ನಿನಗಿಂತ ಮುಂಚೆಯೇ ತಿಂಡಿ ತಿನ್ನುತ್ತಾಳೆ. ನೀನು ಅದು ಹೇಗೆ ಸುಮ್ಮನಿರುವೆಯೋ ನಾ ಕಾಣೆ. ನಿನಗೆ ತಗ್ಗಿ ಬಗ್ಗಿ ನಡೆಯುವುದೂ ಇಲ್ಲ. ಹೇಗೆ ಸಹಿಸಿಕೊಳ್ಳುತ್ತಿರುವೆ ಎಂದು ಮಾಧವಿಯನ್ನು ಪ್ರಶ್ನಿಸಿದರು.
ನಸುನಕ್ಕ ಮಾಧವಿ… ಅತ್ತೆ, ನಿಮಗೆ ನೆನಪಿಲ್ಲದಿರಬಹುದು ಆದರೆ ಸುಮಂತನ ಬಸಿರಿಯಲ್ಲಿ ನನಗೆ ಹಸಿವಿನಿಂದ ಪ್ರಾಣ ಸಂಕಟವಾಗುತ್ತಿತ್ತು ಆದರೆ ನೀವು ತಿನ್ನದ, ಉಣ್ಣದ ವಿನಾ ನಮಗೆ ತಿನ್ನುಣ್ಣಲು ಅವಕಾಶ ಇರಲಿಲ್ಲ. ಹಸಿವು ತಾಳದೆ ಅದೊಮ್ಮೆ ನಾನು ಊಟ ಮಾಡಲು ಪ್ರಯತ್ನಿಸಿದಾಗ ನೀವು ಮಾಡಿದ ರಂಪಾಟ ನನ್ನ ಹಸಿವೆಯನ್ನೇ ಸುಟ್ಟು ಹಾಕಿತ್ತು. ಮುಂದೆಂದು ಆ ಸಾಹಸ ಮಾಡಲಿಲ್ಲ ನಾನು. ಆದರೆ ನೀವು ಒಂದರ ಹಿಂದೊಂದು ಕಪ್ಪು ಚಹಾ ಸೇವಿಸುತ್ತಾ ತಡವಾಗಿ ಸ್ನಾನ ಮಾಡಿ ತಿಂಡಿ ಸೇವಿಸುವ ಹೊತ್ತಿಗೆ 11ರ ಗಡಿ ದಾಟುತ್ತಿತ್ತು. ನಿಮಗಾಗಿ ಕಾಯುತ್ತಾ ಮನೆಯ ಎಲ್ಲರ ಬೇಕು ಬೇಡಗಳನ್ನು ನೋಡಿಕೊಂಡು, ಮಕ್ಕಳನ್ನು ಶಾಲೆಗೆ ಕಳುಹಿಸಿ ಸ್ನಾನ ಪೂಜೆ ಮುಗಿಸಿ ತಿಂಡಿ ತಿನ್ನಬೇಕೆಂದರೂ ನಿಮಗಾಗಿ ಕಾಯಲೇಬೇಕಿತ್ತು. ಅದೇ ಎಷ್ಟೇ ಸಿರಿ ಸಂಪತ್ತಿದ್ದರೂ ಫ್ರಿಜಿನಲ್ಲಿ ಹಣ್ಣುಗಳಿದ್ದರೂ, ಕೈಗೆಟಕುವಂತೆ ತಿಂಡಿ ತಿನಿಸುಗಳು ಮಾಡಿನಲ್ಲಿದ್ದರೂ ತಿನ್ನದ ಪರಿಸ್ಥಿತಿ. ಎಷ್ಟೋ ಬಾರಿ ನೀವು ಬರುವ ಮುನ್ನ ಮಕ್ಕಳಿಗೆ ಹಾಲು ಕೊಡುವಾಗ ಹಸಿವು ತಾಳದೆ ಚಹಾದಲ್ಲಿ ಬ್ರೆಡ್ ಅದ್ದಿ ತಿಂದದ್ದು ಉಂಟು. ಆಗೆಲ್ಲ ನನ್ನ ಮನೆಯಲ್ಲಿ ನಾನೇ ಕದ್ದು ತಿಂದಂತಹ ಹತಾಶೆಯ ಭಾವ.
ಇದೀಗ ಅತ್ತೆಯಾಗಿ ನನ್ನ ಸರದಿ. ನಾನು ಅನುಭವಿಸಿದ ನೋವು ಸಂಕಟ ನನ್ನ ಸೊಸೆಗೆ ಬೇಡ. ಬೆಳಗಿನ ಜಾವ ನಮ್ಮ ನಮ್ಮ ಕೆಲಸಗಳ ಗಡಿಬಿಡಿ ಯಲ್ಲಿ ನಾವೆಲ್ಲರೂ ಒಟ್ಟಿಗೆ ತಿಂಡಿ ತಿನ್ನಲು ಆಗದು. ನಾನು ಕೂಡ ನನ್ನ ಬೆಳಗಿನ ಕೆಲಸಗಳು ಮುಗಿದರೆ ಆಕೆಗಾಗಿ ಕಾಯದೆ ತಿಂಡಿ ತಿನ್ನುತ್ತೇನೆ ಒಂದೊಮ್ಮೆ ಆಕೆ ನನಗಿಂತ ಮುಂಚೆ ಸ್ನಾನ ಪೂಜೆ ಮಾಡಿದ್ದರೆ ಆಕೆಯು ಕೂಡ ನನಗೆ ಕಾಯದಂತೆ ತಿನ್ನಲು ಹೇಳುತ್ತೇನೆ.
ಅಡುಗೆ ಮನೆಯಲ್ಲಿಯೂ ಅಷ್ಟೇ ನಾವಿಬ್ಬರೂ ಸೇರಿ ಹರಟುತ್ತಾ ಅಡುಗೆ ಮಾಡುತ್ತೇವೆ. ಮನೆಯ ಎಲ್ಲ ಸದಸ್ಯರೂ ಕುಳಿತು ಒಟ್ಟಿಗೆ ಮಧ್ಯಾಹ್ನ ಮತ್ತು ರಾತ್ರಿಯ ಊಟವನ್ನು ಮಾಡುತ್ತೇವೆ. ಇದರಿಂದ ಯಾರಿಗೆ ಯಾವ ಪದಾರ್ಥ ಇಷ್ಟ, ಏನು ತಿನ್ನುವರು ಯಾವುದನ್ನು ತಿನ್ನುವುದಿಲ್ಲ ಎಂಬುದನ್ನು ಅರಿಯಲು ಸಾಧ್ಯ. ಜೊತೆಗೆ ನಾವೆಲ್ಲ ಕೂಡಿ ಊಟ ಮಾಡುವುದರಿಂದ ಒಂದು ರೀತಿಯ ಸಮಾಧಾನ ನೆಮ್ಮದಿ ಉಂಟಾಗುತ್ತದೆ.
ಈಗ ಹೇಳಿ ಅತ್ತೆ, ಅಂದು ನೀವು ನಡೆಸಿಕೊಂಡ ರೀತಿಯನ್ನು ನಾನು ದೂಷಿಸುವುದಿಲ್ಲ ಆದರೆ ನಾನು ಕೂಡ ಹಾಗೆಯೇ ನಡೆಯಲು ನನಗೆ ಮನಸ್ಸಿಲ್ಲ. ಪ್ರತಿಯೊಬ್ಬರಿಗೂ ವ್ಯಕ್ತಿಗತ ಆಸೆ ಆಕಾಂಕ್ಷೆಗಳು ಇರುತ್ತವೆ. ನಮಗೆ ಹೆದರಿ ತಗ್ಗಿ ಬಗ್ಗಿ ನಡೆಯುವುದರ ಬದಲು ನಮ್ಮೊಂದಿಗೆ ಪ್ರೀತಿ ವಿಶ್ವಾಸದಿಂದ ನಡೆಯುವವರು ಬೇಕಲ್ಲವೇ?? ಎಂದು ಮಾಧವಿ ಹೇಳಿದಳು.
ಕಣ್ಣಂಚಿನಲ್ಲಿ ಹನಿಯುತ್ತಿದ್ದ ಕಣ್ಣೀರನ್ನು ತೊಡೆದು ಅಯ್ಯೋ ಕಂದ! ಅತ್ತೆತನದ ಹಮ್ಮಿನಲ್ಲಿ ನಿಮ್ಮನ್ನು ಅರ್ಥಮಾಡಿಕೊಳ್ಳದೆ ಹೋದೆ. ಅತ್ತೆ ಅಂದರೆ ದರ್ಪದಿಂದ ಇರಬೇಕು ಎಂಬ ಹಳೆಯ ಕಾಲದ ಆಚಾರಕ್ಕೆ ಜೋತು ಬಿದ್ದು ನಿಮ್ಮೊಂದಿಗೆ ಸಲಿಗೆಯಿಂದ ವರ್ತಿಸಲೇ ಇಲ್ಲ. ನನ್ನ ಕಣ್ಣು ತೆರೆಸಿದೆ ನೀನು! ಇನ್ಯಾವತ್ತೂ ನೀವಿಬ್ಬರೂ ಅತ್ತೆ ಸೊಸೆಯರ ನಡುವೆ ನಾನು ಬರುವುದಿಲ್ಲ ನನ್ನನ್ನು ಕ್ಷಮಿಸಿ ಬಿಡು ಎಂದು ಗದ್ಗದಿತರಾದರು.
ಅತ್ತೆಯ ಎರಡೂ ಕೈಗಳನ್ನು ತನ್ನ ಕೈಯಲ್ಲಿ ಹಿಡಿದು ಅತ್ತೆ ಇದರಲ್ಲಿ ನನ್ನ ತಪ್ಪೂ ಇದೆ, ನಾನು ಕೂಡ ಪರಂಪರೆಗೆ ಜೋತು ಬಿದ್ದು ನಿಮಗೆ ಅರ್ಥ ಮಾಡಿಸಲು ಹೋಗಲೇ ಇಲ್ಲ. ನಿಮಗೆ ಸರಿಯಾಗಿ ಅರ್ಥ ಮಾಡಿಸದೆ ನನ್ನನ್ನು ನಾನು ಅಮಾಯಕಳು ಎಂಬಂತೆ ಸ್ವಾನುಕಂಪದ ಬೇಗೆಯಲ್ಲಿ ಬೆಂದು ಹೋದೆ. ಮುಂದೆ ನನ್ನ ತವರಿನಲ್ಲಿ ನನ್ನ ಅತ್ತಿಗೆ ತನ್ನ ಅತ್ತೆ ಅಂದರೆ ನನ್ನ ಅಮ್ಮನಿಗೆ ನಿಸೂರಾಗಿ ಅತ್ತಿಯರ …ಹಸಿವಾಗುತ್ತಿದೆ ಊಟ ಮಾಡೋಣ ಬನ್ನಿ ಅಂತ ಹೇಳಿ ಅದಕ್ಕೆ ನನ್ನಮ್ಮ ಕೂಡ ಒಪ್ಪಿ ಅವರೆಲ್ಲರೂ ಒಟ್ಟಿಗೆ ಊಟ ಮಾಡುತ್ತಿದ್ದದ್ದನ್ನು ಕಂಡಾಗ ನನಗೆ ನಾನು ಮಾಡಿದ ತಪ್ಪಿನ ಅರಿವಾಯಿತು. ನಾನೆಂದು ನನ್ನ ಹಸಿವನ್ನು ನಿಮಗೆ ತೋರಗೊಡಲೇ ಇಲ್ಲ. ಅದು ನನ್ನ ತಪ್ಪಲ್ಲವೇ ಎಂದು ಕೇಳಿದಳು.
ಹೌದು ಮಾಧವಿ, ನನಗೆಂದೂ ಈ ಬಗ್ಗೆ ವಿಚಾರ ಮಾಡಲು ಆಸ್ಪದ ಸಿಕ್ಕೇ ಇಲ್ಲ. ನನಗೆ ಕೈ ಕಾಲು ಗಟ್ಟಿ ಇದ್ದರೂ ನಿನ್ನಿಂದಲೇ ಮನೆ ಕೆಲಸ ಮಾಡಿಸುತ್ತಿದ್ದೆ. ಒಂದು ಬಾರಿಯೂ ಸಹಾಯಕ್ಕೆ ಬರಲೇ ಇಲ್ಲ. ಆದರೆ ಈ ಬಗ್ಗೆ ನೀನೆಂದು ಎದುರಾಡಲೇ ಇಲ್ಲ. ಆದ್ದರಿಂದಲೇ ನಾನು ತಪ್ಪು ಮಾಡುತ್ತಿದ್ದೇನೆ ಎಂದು ನನಗೆ ಅನಿಸಲಿಲ್ಲ. ನನ್ನ ತಪ್ಪನ್ನು ಹೊಟ್ಟೆಗೆ ಹಾಕಿಕೊಂಡು ಬಿಡು ತಾಯಿ ಎಂದು ಎರಡು ಕೈಗಳನ್ನು ಎತ್ತಿ ಮುಗಿಯುತ್ತಾ ಮತ್ತೊಮ್ಮೆ ಹನಿಗಣ್ಣಾದರು.
ಮುಗಿದ ಎರಡು ಕೈಗಳನ್ನು ಕೈಯಲ್ಲಿ ಹಿಡಿದ ಮಾಧವಿ ಇರಲಿ ಬಿಡಿ ಅತ್ತೆ, ಕೂಸು ಅಳದ ಹೊರತು ತಾಯಿಯೇ ಹಾಲು ಕುಡಿಸುವುದಿಲ್ಲ, ನಿಮ್ಮ ತಪ್ಪಿನಲ್ಲಿ ನನ್ನ ಪಾಲೂ ಇದೆಯಲ್ಲ ಎಂದು ಹೇಳಲು ಸೊಸೆಯನ್ನು ಮೆಲ್ಲನೆ ತಬ್ಬಿ ಹಿಡಿದರು ಮಾಧವಿಯ ಅತ್ತೆ.
ನಡೆ, ಮಧ್ಯಾಹ್ನದ ಅಡುಗೆಗೆ ಅದೇನು ತರಕಾರಿಗಳು ಬೇಕೋ ಹೆಚ್ಚಿಕೊಡುತ್ತೇನೆ ಎಂದು ಕಪ್ಪುಗಳನ್ನು ಕೈಯಲ್ಲಿ ಹಿಡಿದು ಅಡುಗೆ ಮನೆಯತ್ತ ನಡೆದ ಸೊಸೆಯನ್ನು ಹಿಂಬಾಲಿಸಿದರು. ಅಲ್ಲೆಲ್ಲೋ ಎಫ್ ಎಂ ನಲ್ಲಿ ಹಳೆ ಬೇರು ಹೊಸ ಚಿಗುರು ಕೂಡಿದರೆ ಮರ ಸೊಗಸು ಎಂಬ ಹಾಡು ಇಂಪಾಗಿ ಕೇಳಿಸುತ್ತಿತ್ತು.
–ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ