ಬಡೇಕೊಳ್ಳ (ತಾರಿಹಾಳ) ದ ಶ್ರೀ ನಾಗೇಂದ್ರ ಶಿವಯೋಗಿಗಳು

ಬಡೇಕೊಳ್ಳ (ತಾರಿಹಾಳ) ದ ಶ್ರೀ ನಾಗೇಂದ್ರ ಶಿವಯೋಗಿಗಳು

ರಾಷ್ಟ್ರೀಯ ಹೆದ್ದಾರಿ ನಂಬರ ನಾಲ್ಕರ ಮೇಲೆ ( ಪ್ರಸ್ತುತ ಅದು ರಾಷ್ಟ್ರೀಯ ಹೆದ್ದಾರೆ 48 ಎಂದು ಕರೆಯಲ್ಪಡುತ್ತಿದೆ) ಬೆಳಗಾವಿಯಿಂದ ಧಾರವಾಡಕ್ಕೆ ಹೋಗುವ ಮಾರ್ಗದಲ್ಲಿ ಬೆಳಗಾವಿಯಿಂದ ಸುಮಾರು 19 ಕಿ ಮೀ ಅಂತರದ ಮೇಲೆ ನಮ್ಮ ಎಡಬದಿಗೆ ಶ್ರೀ ಸದ್ಗುರು ನಾಗೇಂದ್ರ ಶಿವಯೋಗಿ ಮಠ ಬಡೆಕೊಳ್ಳ ಆಶ್ರಮವಿದೆ.

ಇದೇ ಮಹಾಮಹಿಮ ನಾಗೇಂದ್ರ ಶಿವಯೋಗಿ ನೆಲೆಸಿದ ಪವಿತ್ರ ಕ್ಷೇತ್ರ.
ಶ್ರೀ ನಾಗೇಂದ್ರ ಶಿವಯೋಗಿಯ ಜೀವನ, ಅನೇಕರಿಗೆ ಲೇಸನ್ನುಂಟು ಮಾಡಿದೆ. ಬದುಕನ್ನು ಹಸನು ಮಾಡಿಕೊಳ್ಳಲು ಸಾಧನವಾಗಿದೆ. ಭಕ್ತರಿಗೆ ಭಾವುಕರಿಗೆ ಮಹಿಮೆಯಾಗಿ ನಿಂತಿದೆ. ಪವಾಡ ಪುರುಷನೆನ್ನುವ ಭಾವನೆ ಜನಮನದಲ್ಲಿ ಮೂಡಿದೆ. ಸಮಸ್ತ ಜನಪದದಲ್ಲಿ ಮೂಡಿ ನಿಂತ ಭಾವನೆಗಳಿಗೆ ಮೂರ್ತ ರೂಪ ಕೊಡಬೇಕೆನ್ನುವ ಉದ್ದೇಶವೇ ಈ ಲೇಖನದ ಭಾಗ ಎನ್ನಬಹುದು.
ನವಿಲಗುಂದ ಅಜಾತ ನಾಗಲಿಂಗ ಸ್ವಾಮಿಗಳ ವಿಷಯದಲ್ಲಿ ಇಲ್ಲಿಯವರೆಗೆ ಪ್ರಕಟವಾದ ಗ್ರಂಥಗಳಲ್ಲಿ ಈ ನಾಗಲಿಂಗ ಸ್ವಾಮಿಗಳು ತಮ್ಮ ಸಂಚಾರದಲ್ಲಿ ಈ ತಾರಿಹಾಳ ಗ್ರಾಮಕ್ಕೆ ಬಂದು ಇಲ್ಲಿಯ ಪೂಜಾರಿ ಮನೆತನದ ಕಲ್ಲಯ್ಯನವರ ಧರ್ಮಪತ್ನಿ ಬಾಳಮ್ಮನಿಗೆ ನಮ್ಮ ಚರಿತ್ರೆ ನಾಯಕ ನಾಗಯ್ಯಜ್ಜನ ಹುಟ್ಟುವ ಬಗೆಗೆ ವರಪ್ರಧಾನಮಾಡಿದ ವಿಷಯವೇ ಇಲ್ಲ. ಅಂತೆಯೇ ಈ ಚರಿತ್ರೆಯ ನಾಯಕನ ಅಜ್ಜ ಹುಲೆಪ್ಪನು ಅಂಕಲಗಿ ಅಡವೀ ಸ್ವಾಮಿಗಳ ದರ್ಶನಕ್ಕೆ ಹೋದಾಗ ಒಂದು ಬೆತ್ತವನ್ನು ಕರುಣಿಸಿ, ಸ್ವಾಮಿಗಳು “ಇದನ್ನು ಹಿಡಿಯುವ ಒಬ್ಬ ಮಹಾಪುರುಷ ದಂಡಧಾರಿ ನಿಮ್ಮ ಮನೆತನದಲ್ಲಿ ಉದಯಿಸುವನೆಂದು” ಹರಿಸಿದ ವಿಷಯವೂ ಈಗ ಪ್ರಕಟವಾಗಿರುವ ಅಂಕಲಗಿಯ ಶ್ರೀ ಅಡವೀ ಸ್ವಾಮಿಗಳ ಚರಿತ್ರೆಯಲ್ಲಿ ಇದ್ದಂತಿಲ್ಲ. ಏನೇ ಇರಲಿ ಅಜಾತ ನಾಗಲಿಂಗ ಸ್ವಾಮಿಗಳ ವರದಿಂದ ಜನಿಸಿದ ಪರಿಣಾಮವಾಗಿ ನಮ್ಮ ಚರಿತ್ರ ನಾಯಕನು ನಾಗಯ್ಯಜ್ಜನೆಂದು ಹೆಸರು ಪಡೆದಿರಬೇಕು. ಇಷ್ಟೇ ಅಲ್ಲ ಆ ಮಹಾಪುರುಷನ ತಪದ ಸಾಮರ್ಥ್ಯವೂ, ಗುಣವಿಶೇಷವೂ, ಪವಾಡಸಿದ್ಧಿಯೂ ಅವರ ವರದ ದಿವ್ಯವಾಣಿಯ ಮುಖಾಂತರ ಜನಿಸಿದ ಈ ಶಿಶು ನಾಗಯ್ಯನಲ್ಲಿ ಇಳಿದು ಬಂದಿರಬೇಕೆಂಬುದಕ್ಕೆ ಮಹಾಪುರುಷರು ಶಕ್ತಿಪಾತ ಪ್ರಯೋಗಕ್ಕೆ ಇದು ನಿದರ್ಶನ ಎಂದು ಜನರಲ್ಲಿ ಚರ್ಚೆಗಳಂತೂ ಇವೆ. ಇಷ್ಟೇ ಅಲ್ಲ, ಈ ನಾಗಯ್ಯಜ್ಜನಿಂದ ಅವರ ಜೀವಮಾನದಲ್ಲಿ ಘಟಿಸಿದ ಪವಾಡಗಳನ್ನು ನೋಡಿದಾಗ ನಾವು ಅಜಾತ ನಾಗಲಿಂಗ ಸ್ವಾಮಿಗಳ ಜೀವನದಲ್ಲಿ ತುಸು ಹೆಚ್ಚು ಕಡಿಮೆಯಾಗಿ ಘಟಿಸಿದ ಪವಾಡಗಳೇ ನಮ್ಮ ಸ್ಮೃತಿಪಥಕ್ಕೆ ಬರುತ್ತವೆ.
ಆತ್ಮಾರ್ಪಣೆಗೈದು, ಸರ್ವಸಮರ್ಪಣಾ ಭಾವವೇ ತಾವಾಗಿ ಅನುಪಮ ಅನನ್ಯಭಕ್ತಿಯಿಂದ ಶರಣುಬಂದ ಭಕ್ತರನ್ನು ಎಂತಹ ಕಾಲಪರಿಸ್ಥಿತಿಗಳಲ್ಲಿಯೂ ಇಂತಹ ಮಹಾಪುರುಷರ ಅಭಯಹಸ್ತವು, ವರದ ಹಸ್ತವು ಅಗೋಚರವಾಗಿ ಎತ್ತಿಹಿಡಿದು ಅವರನ್ನು ಉದ್ಧಾರಪಥದಲ್ಲಿ ಮುನ್ನಡೆಯಿಸುವದೆಂಬುದಕ್ಕೆ ಸಾಕಷ್ಟು ಅನುಭಗಳು ನಿದರ್ಶನಗಳು ನಮಗೆ ದೊರೆಯುತ್ತವೆ.

ಈ ನಾಗಯ್ಯಜ್ಜನ ಪವಾಡಗಳ ಇತಿಹಾಸವೂ ಇದಕ್ಕೆ ಅಪವಾದವಾಗಿಲ್ಲ. ಇಲ್ಲಿ ಒಂದು ಮಾತನ್ನು ಸ್ಪಷ್ಟೀಕರಿಸುವುದು ಅಗತ್ಯವೆಂದೆನಿಸುತ್ತದೆ. ತಪಸ್ಸಿದ್ಧಿಯಿಂದ, ಯೋಗಸಿದ್ಧಿಯಿಂದ, ಅಣಿಮಾದಿ ಅಷ್ಟಸಿದ್ಧಿಯಿಂದ ಕೈವಶವಾಗುವವೆಂದು ಯೋಗವಿಷಯಕ ಗ್ರಂಥಗಳಿಂದ ತಿಳಿದು ಬರುತ್ತವೆ. ತಪಸ್ವಿಗಳ, ಯೋಗಿಗಳ ಜೀವನದಲ್ಲಿ ಇವೆಲ್ಲವೂ ಸಹಜವಾಗಿ ಘಟಿಸುವ ಪವಾಡಗಳು, ಲೀಲೆಗಳು, ಸಿದ್ಧಿಗಳು, ಇಂತಹ ಪವಾಡಗಳನ್ನು ಪ್ರದರ್ಶಿಸಬೇಕೆಂದು ಅವರು ತಿಲಮಾತ್ರವೂ ಉದ್ದೇಶಿಸಿರುವದಿಲ್ಲ. ಪರಮಾತ್ಮನ ಇಚ್ಛೆಯೇ ಅವರಿಚ್ಛೆಯಾಗಿರುವದರಿಂದ ಅವನ ಸಂಕಲ್ಪವೇ ಅವರ ಸಂಕಲ್ಪವಾಗಿರುವದರಿಂದ ಅವರ ಜೀವನದಲ್ಲಿ ಘಟಿಸುವ ಪವಾಡಗಳೆಲ್ಲ ಆ ಪರಮಾತ್ಮನ ಪ್ರೇರಣೆಯೇ ಹೊರತು ಬೇರೆಯಲ್ಲ.
ಆದರೆ ಪವಾಡಗಳನ್ನು ಪ್ರದರ್ಶಿಸಿ ಲೋಕದಲ್ಲಿ ಸ್ಥಾನ, ಮಾನ,ಕೀರ್ತಿ ಕಾಂಚನಗಳನ್ನು ಪಡೆಯಬೇಕೆಂಬ ಸಂಕುಚಿತ ದೃಷ್ಠಿಯ ಮಟ್ಟಕ್ಕಿಳಿದರೆ ಕಾಲಾಂತರದಲ್ಲಿ ಅವರ ಯೋಗ ಶಕ್ತಿಯು ಕ್ಷೀಣಿಸಿ, ಪವಾಡಶಕ್ತಿಯು ಮಸಳಿಸಿ, ಮಹಾವ್ಯಕ್ತಿತ್ವವು ಮಾಯವಾಗಿ ಪತಿತರಾಗುವರು. ಅಧಃಪತಿತರಾಗುವರು. ಲೌಕಿಕದಲ್ಲಿ ಇಂಥವರು ಬರೀ ಜಾದೂಗಾರರು, ಮಾಟಗಾರರು, ಮಾಂತ್ರಿಕರು, ಆದರೆ ಯೋಗಿಗಳಲ್ಲ.
ನಮ್ಮ ಜೀವನದ ಉತ್ಥಾನವೂ, ಪತನವೂ ನಮ್ಮನ್ನೇ ನಮ್ಮ ಮನವನ್ನೇ ಅವಲಂಬಿಸಿದೆ. ತಪೋವಲಯದಲ್ಲಿ ಯೋಗಕ್ಷೇತ್ರದಲ್ಲಿ ಕೂಡಾ ಆರೋಹಣ, ಅವರೋಹಣ ಕ್ರಿಯೆಗಳಿರುವವೆಂಬುದನ್ನು ನಾವು ಮರೆಯಬಾರದು ನಮ್ಮ ದೇಹವೇ ದೇಗುಲವಾಗಿ, ಜೀವವೇ ಶಿವಲಿಂಗವಾಗಬೇಕು. ನಮ್ಮ ಅಂಗವು ಲಿಂಗವಾಗಿ ನಮ್ಮಲ್ಲಿ ಲಿಂಗದ ನುಡಿ, ಲಿಂಗದ ನಡೆ, ಲಿಂಗದ ನೋಟ ಅಳವಟ್ಟು ನಾವು ಲಿಂಗಪ್ರಾಣಿಗಳಾಗಬೇಕು, ಲಿಂಗವೇ ಆಗಬೇಕು. ಆಗ ನಾವು ಬಯಸದೇ ಬಂದುದು ಲಿಂಗಭೋಗವಾಗುವುದು, ಬಯಸಿ ಬಂದುದು ಅಂಗಬೋಗವಾಗುವುದು. ಲಿಂಗಬೋಗದಲ್ಲಿ ನಮ್ಮ ಬಯಕೆಯ ಪ್ರಶ್ನೆಯೇ ಉಳಿಯುವುದಿಲ್ಲ. ಆ ಪರಮಾತ್ಮನ ಇಚ್ಛೆಯೇ , ಸಂಕಲ್ಪವೇ ಪ್ರಮುಖ ಪಾತ್ರವಹಿಸುವುದು. ನಮ್ಮ ವೈಯಕ್ತಿಕ ಬದುಕಿನಿಂದ ನಾವು ಪರಾಣ್ಮುಖರಾದಾಗ, ಅಲಿಪ್ತರಾದಾಗ, ಯಾವುದೇ ಒಂದು ಘಟನೆ ಘಟಿಸಿದರೂ ಅದೆಲ್ಲವೂ ಪರಮಾತ್ಮನ ಇಚ್ಛೆ.! ಪ್ರೆರಣೆ! ಅದರಿಂದ ನಮಗೆ ಹಿಗ್ಗೂ ಇಲ್ಲ, ಕುಗ್ಗೂ ಇಲ್ಲ. ಶ್ರೀ ಅಜಾತ ನಾಗಲಿಂಗ ಸ್ವಾಮಿಯಾಗಲೀ, ಶ್ರೀ ನಾಗಯ್ಯಜ್ಜನಾಗಲೀ ಈ ಅವಸ್ಥೆಯ ಮಟ್ಟದಲ್ಲಿಯೇ, ಹಂತದಲ್ಲಿಯೇ ನಿಂತು, ಲೋಕಕಲ್ಯಾಣಕಾರಿ ಕಾರ್ಯ ಮಾಡಿ ಮಹಾಯೋಗಿಯಾದವರು. ರಾಷ್ಟ್ರಕವಿ ಶ್ರೀ ಕುವೆಂಪುರವರು ಒಂದು ಮಾತನ್ನು ಹೇಳುತ್ತಾರೆ.ʼ ಪರಮಾತ್ಮನ ಸೃಷ್ಠಿಯಲ್ಲಿ, ವಿಶ್ವದಲ್ಲಿ ಕಲ್ಲು ಕಲ್ಲಾಗಿ ಉಳಿದುದೇ ಒಂದು ಪವಾಡ! ಕ್ಷಣಕ್ಷಣಕ್ಕೆ ರೂಪಾಂತರ, ಸ್ಥಾನಾಂತರ, ಸ್ಥಿತ್ಯಾಂತರ ಹೊಂದಿದರೆ ಗತಿಯೇನು? ಆದುದರಿಂದ ನಿಜವಾಸ ಯೋಗಿಯನ್ನು ಅವರ ನಿಸ್ವಾರ್ಥ ಪರ-ಲೋಕೋಪಕಾರಕ, ಲೋಕಕಲ್ಯಾಣಕಾರಕ, ಲೋಕೋದ್ಧಾರಕ ಮಹಾಜೀವನದಿಂದ ಅಳೆಯಬೇಕೇ ಹೊರತು ಬರೀ ಪವಾಡಗಳ ಘಟನೆಗಳಿಂದಲ್ಲ ಎಂಬುದನ್ನು ನಾವು ಮರೆಯಬಾರದು
ವಿಚಿತ್ರವಾದರೂ ವ್ಯಸನಕರವಾದ ಇನ್ನೊಂದು ಸಂಗತಿಯೆಂದರೆ ಎಷ್ಟೋ ಡಾಂಭಿಕ ಭಕ್ತಜನರು ಸುಪ್ರೀಕವಾದ, ಫಲವತ್ತಾದ ತಮ್ಮ ಕಲ್ಪನಾ ವಿಲಾಸದ ಮೂಲಕ ಇಂಥ ಯೋಗಿಗಳ ಜೀವನದ ಸುತ್ತ ಮುತ್ತ ಸುಳ್ಳು ಪವಾಡಗಳ ಸುಳ್ಳು ಸೃಷ್ಠಿಯನ್ನು ನಿರ್ಮಿಸಿ, ಹೆಣೆದು ತಮ್ಮ ಭ್ರಮೆಯ ಮೂಲಕ ಲೋಕದ ಕಣ್ಣಲ್ಲಿ ಅವರ ಜೀವನದ ಘನತೆಯನ್ನು, ಸ್ತರವನ್ನು ಎತ್ತರಿಸಲು, ಬಿತ್ತರಿಸಲು ಯತ್ನಿಸುತ್ತಾರೆ. ಇದೂ ಒಂದು ಅಪಾಯಕಾರಕ ಸ್ಥಿತಿಯು. ಇಂಥ ಯೋಗಿಗಳ ಜೀವನದ ಘಟನೆಗಳ, ಪವಾಡ ವಿಷಯಗಳನ್ನು ಸಂಗ್ರಹಿಸುವಾಗ, ಅವರ ನಿಜವಾದ ಪವಾಡಗಳ ಜೊತೆಗೆ ಇಂಥ ಸುಳ್ಳು ಪವಾಡಗಳೂ ಸೇರಿಕೊಂಡು ಪರಿಸ್ಥಿತಿಯನ್ನು ಗೊಂದಲಕ್ಕೀಡು ಮಾಡುತ್ತದೆ. ಹದಗೆಡಿಸುತ್ತವೆ. ಆದುದರಿಂದ ಮಹಾಯೋಗಿಯ ಮಹಾಜೀವನದ ನಿಜವಾದ ಜೀವನ ಚರಿತ್ರೆಯನ್ನುಹೇಳುವಾಗ ಅಥವಾ ಬರೆಯುವಾಗ ಡಾಂಭಿಕ ಭಕ್ತರಿಂದ ಸೃಷ್ಠಿಗೊಂಡ ಇಂಥ ಸುಳ್ಳು ಪವಾಡಗಳು ಒಂದು ಮಹಾ ಸಮಸ್ಯೆಯಾಗುತ್ತದೆ. ಅಹ್ವಾನವಾಗುತ್ತದೆ. ಮಾಡುವದೇನು? ಇಂಥ ಪ್ರಸಂಗದಲ್ಲಿ ಮೈತುಂಬ ಕಣ್ಣಾಗಿ ಅಪಾರ ದಕ್ಷತೆಯಿಂದ ಕಾರ್ಯ ನಿರ್ವಹಿಸುವುದು ಅನಿವಾರ್ಯವೂ ಹಾಗೂ ಅಗತ್ಯವೂ ಆಗಿದೆ.
ಈ ಸ್ಥಾನಕ್ಕೆ ಬಡೆಕೊಳ್ಳ ಎಂಬ ಹೆಸರು ಬರಲು ಕಾರಣವೇನೆಂದರೆ, ಈ ಪ್ರದೇಶವು ಕೊಳ್ಳದ ತೆಗ್ಗಿನ ಪ್ರದೇಶದಲ್ಲಿ ಬರುವುದು. ಸುತ್ತೆಲ್ಲ ಗುಡ್ಡವೇ ಕಂಡು ಬರುವುದು. ಈ ಗುಡ್ಡದ ಪ್ರದೇಶದಲ್ಲಿ ವಿಶೇಷವಾಗಿ ಹುಲ್ಲು ಬೆಳೆಯುವುದು. ಆದುದರಿಂದ ಸುತ್ತಲಿನ ಗ್ರಾಮಗಳ ದನಕರಗಳು, ಕುರಿಗಳು ಇಲ್ಲಿಗೆ ಮೇಯಲು ಬರುವವು. ದನಗಾಹಿಗಳ, ಕುರುಬರ ಕಣ್ಣು ತಪ್ಪಿಸಿ ದನಕರಗಳನ್ನೂ, ಕುರಿಗಳನ್ನೂ ಕದಿಯಲು ಕದ್ದು ಅಡಗಿಕೊಳ್ಳಲು ಇದೊಂದು ಸುರಕ್ಷಿತ ಸ್ಥಾನವು. ಅಂತೆಯೇ ಈ ಪ್ರದೇಶದಲ್ಲಿ ಕಳ್ಳರ ತಂಡಗಳು ವಾಸಿಸುತ್ತಿದ್ದವು. ಹೆದ್ದಾರಿಯಿಂದ ಹಾಯ್ದು ಹೋಗುವವರನ್ನು ಬಡೆದು ಅವರಲ್ಲಿಯ ವಸ್ತುಗಳನ್ನು ದೋಚಿಕೊಂಡು ಮರೆಯಾಗಲು ವಿಶೇಷ ಅನುಕೂಲ ಸ್ಥಳವಿದಾಗಿದ್ದಿತು. ಕಳ್ಳರ ತಂಡಗಳು ಇಲ್ಲಿ ವಾಸವಾಗಿದ್ದರಿಂದ ಈ ಪ್ರದೇಶಕ್ಕೆ “ಬಡೆಯುವ ಕೊಳ್ಳ” “ಬಡ್ಯೋಕೊಳ್ಳ” ಎಂಬ ಹೆಸರು ಬಂದಿತ್ತು. ಅದನ್ನೇ ಮುಂದೆ “ ಬಡೆಕೊಳ್ಳ” ಎಂದು ಕರೆದರು.
ಮಹಾಮಹಿಮ ಸದ್ಗುರು ನಾಗೇಂದ್ರ ಶಿವಯೋಗಿಯು ಈ ತಾಣದತ್ತ ಸಾಗಿಬಂದನು. ತಾರಿಹಾಳ ಗ್ರಾಮವನ್ನು ತೊರೆದು ಶಾಂತಿಯ ನೆಲೆವೀಡಾದ ಬಡೆಕೊಳ್ಳಕ್ಕೆ ಬಂದು ಅಲ್ಲಿಯೇ ನೆಲೆಸಿದನು. “ ಅಯ್ಯಾ ನಿಮ್ಮ ಶರಣರ ಮೆಟ್ಟಿದ ಧರೆ ಪಾವನ, ಅದುವೇ ಅವಿಮುಕ್ತ ಕ್ಷೇತ್ರ” ಎಂಬುಕ್ತಿಗನುಗುಣವಾಗಿ ನಾಗಯ್ಯನ ನೆಲೆಸುವಿಕೆಯಿಂದ ಬಡೆಕೊಳ್ಳವು ಪಾವನ ಕ್ಷೇತ್ರವಾಯಿತು.
ಬಸವನಕೊಳ್ಳ,ಮಾರಿಹಾಳ, ಕರಡಿಗುದ್ದಿ ಗ್ರಾಮಗಳಲ್ಲಿನ ಆಗಿನ ಕಾಲದಲ್ಲಿ ಹೆರಾಂತ ಕಳ್ಳರಿದ್ದರು. ಅವರು ಆ ಕೊಳ್ಳದಲ್ಲಿ ಆಗಾಗ ಇರುತ್ತಿದ್ದರು. ನಾಗಯ್ಯನವರು ಬಡೇಕೊಳ್ಳಕ್ಕೆ ಬಂದು ನೆಲೆಸಿದ್ದರಿಂದ ಅವರ ಕಳ್ಳತನಕ್ಕೆ ಆತಂಕವಾಗಲಾರಂಭಿಸಿತು. ಅಂತೇ ಅವರೆಲ್ಲರೂ ಒಂದೆಡೆ ಸೇರಿ ಮಠದಲ್ಲಿಯ ದನಕರುಗಳನ್ನೆಲ್ಲ ಕದ್ದರೆ ಸ್ವಾಮಿಯು ಇಲ್ಲಿಂದ ತಾನಾಗಿಯೇ ಓಡಿಹೋಗುವನೆಂದು ವಿಚಾರಿಸಿ ಒಂದು ದಿನ ಸುಮಾರು ಮೂವತ್ತು ನಾಲ್ವತ್ತು ಜನಕಳ್ಳರು ಮಠಕ್ಕೆ ಬಂದು ಉಗ್ರಾಣ ಮನೆಯಲ್ಲಿಯ ಕೆಲ ಸಾಮಾನುಗಳನ್ನು ತೆಗೆದುಕೊಂಡು ನಂತರ ದನದ ಮನೆಗೆ ಹೋಗಿ ಎಮ್ಮೆ ಆಕಳುಗಳನ್ನು ಬಿಚ್ಚಿಕೊಂಡು ಶಿವಯೋಗಿಗಳ ಎದುರಿಗೇನೇ ಅವುಗಳನ್ನು ಹೊಡೆದುಕೊಂಡು ನಡೆದರು. ಆಗ ಶಿವಯೋಗಿಗಳು ಅವರಿಗೆ ಏನನ್ನೂ ಅನ್ನದೇ ಮೌನದಿಂದಿದ್ದರು. ಸುಮಾರಿ ಐದಾರಿ ಸಾವಿರ ರೂಪಾಯಿಗಳ ಸಾಮಾನು ದೊರೆಯಿತೆಂಬ ಹಿಗ್ಗಿನಲ್ಲಿ ಭರದಿಂದ ಮುಂದೆ ಸಾಗಿದ್ದರು. ಮಠದಿಂದ ಸುಮಾರು ನಾಲ್ಕೈದು ಫರ್ಲಾಂಗು ಮುಂದೆ ಹೋಗಿರಬಹುದು, ಚಕ್ಕನೇ ಅವರೊಂದು ವಿಚಿತ್ರ ದೃಶ್ಯವನ್ನು ಕಂಡರು. ದನಗಳೆಲ್ಲ ಹಿಂದೆ ಸರಿಯ ಹತ್ತಿದವು. ದನಗಳು ಏಕೆ ಹೀಗೆ ಹಿಂದೆ ಸರಿಯಲಾರಂಭಿಸಿದವು ಎಂದು ಚಿಂತಿಸುತ್ತ ಮುಂದೆ ಬಂದು ನೋಡಿದರು. ಎದುರಿಗೆ ಸರ್ಪಗಳೇ ಕಾಣಿಸಿಕೊಂಡವು. ಅವುಗಳನ್ನು ತಪ್ಪಿಸಿ ಒಂದೆಡೆಯಿಂದ ಇನ್ನೊಂದಡೆಗೆ ಹೋದರೆ ಅಲ್ಲಿಯೂ ಹಾವುಗಳ ಹಾವಳಿ. ಹೀಗೆ ಒಂದೆಡೆಯಿಂದ ಇನ್ನೊಂದೆಡೆ ಹೋಗುವಾಗ ತಾವರಿಯದಂತೆ ಗುಡಿಗೆ ಪ್ರದಕ್ಷಿಣೆ ಹಾಕಿದರು. ಎಲ್ಲೆಡೆ ನಾಗರ ಹಾವುಗಳ ದರ್ಶನವಾಗುವುದು ಸದ್ಗುರು ನಾಗಯ್ಯನ ಲೀಲೆಯೇ ಅಂದರಿತ ಅವರು ಶಿವಯೋಗಿಗಳು ಇದ್ದ ತಾಣದತ್ತ ಪೋಗಿ ಅವರ ಚರಣಕಮಲಗಳ ಮೇಲೆ ಬಿದ್ದು ಉರುಳಾಡಿ “ ಯಪ್ಪಾ ನಮ್ಮದು ತಪ್ಪಾಯ್ತು ಕ್ಷಮಿಸೆಂದು ಪರಿಪರಿಯಿಂದ ಬೇಡಿಕೊಂಡರು. ಪಶ್ಚಾತಾಪಪಟ್ಟ ಅವರ ಮೇಲೆ ದಯೆತೋರಿ, ಮಕ್ಳಾ ಇಂಥ ಬುದ್ಧಿಗೇಡಿ ಕೆಲಸಾ ಇನ್ನೊಮ್ಮೆ ಮಾಡಬ್ಯಾಡ್ರಿ ಮಠಕ್ಕ ಬರುವ ಭಕ್ತರಿಗೆ ತೊಂದರೆ ಕೊಡಬೇಡಿ ಎಂದು ಎಚ್ಚರಿಸಿದರು. ಅಪ್ಪಿ ತಪ್ಪಿಯಾದರೂ ಕಳ್ಳತನ ಮಾಡಿದರೆ ನಿಮಗೆ ಬಹಳ ಕಷ್ಟವಾಗುವದೆಂದು ಹೇಳಿದರು, ಗುರುವಿನ ಮಾತಿನ ಮರ್ಮವನ್ನು ಅರಿತು ಅಂದಿನಿಂದ ಕಳ್ಳತನಕ್ಕೆ ಶರಣು ಹೊಡೆದರು. ಪಶ್ಚಾತಾಪ ಎಂಬ ಅಗ್ನಿಯಲ್ಲಿ ಬೆಂದ ಅವರ ಮನವು ಪುಟಕೊಟ್ಟ ಚಿನ್ನದಂತೆ ಕಂಗೊಳಿಸಿತು.ಅವರ ಹೃದಯ ಪರಿವರ್ತನವಾಗಿ ಅವರೆಲ್ಲರೂ ಒಳ್ಳೆಯರೀತಿಯಿಂದ ಬಾಳಲಾರಂಭಿಸಿದರು. ಈ ರೀತಿ ಬಡೆಯುವ ಕೊಳ್ಳವು ಬಡೆಕೊಳ್ಳ ಪಾವನ ಕ್ಷೇತ್ರವಾಯಿತು.
ಇತ್ತೀಚಿಗೆ ಮಾಸ್ತಮರ್ಡಿಯಲ್ಲಿಯೂ ಶ್ರೀ ಸದ್ಗುರು ನಾಗೇಂದ್ರ ಯೋಗಿಯ ಒಂದು ಮಂದಿರವನ್ನು ಕಟ್ಟಿದ್ದಾರೆ. ಶಿವಯೋಗಿ ಸೇವೆಯನ್ನು ಬಹುದಿನಗಳವರೆಗೆ ಗೈದ ಶ್ರೀ ರುದ್ರಗೌಡ ಬಸನಗೌಡ ಪಾಟೀಲ ಇವರು ಸ್ವತಃ ಕಲ್ಲು ಕಟೆದು, ಬಡಿಗತನ ಕೆಲಸಮಾಡಿ ಒಂದು ಭವ್ಯ ಮಂದಿರವನ್ನು ನಿರ್ಮಿಸಿರುವರು. ಮಂದಿರ ನಿರ್ಮಾಣ ಎಲ್ಲಿ ಮಾಡಬಹುದೆಂಬ ಪ್ರಶ್ನೆ ಬರಲು, ಅದೇ ಊರಿನ ಶ್ರೀ ತಮ್ಮಣ್ಣಾ ಬಸವಣ್ಣೆಪ್ಪಾ ಗೊಲಾಯಿ ಎಂಬ ಪರಮ ಭಕ್ತರು ಮುಂಬಂದು ಸ್ಥಳವನ್ನು ಕೊಟ್ಟಿದ್ದಾರೆ.

*ಶ್ರೀ ನಾಗಯ್ಯ ಶಿವಯೋಗಿಗಳ ಪೂರ್ವಜರು*
ನಾಗಯ್ಯನ ಪೂರ್ವಜರು ದಿಲ್ಲಿಯಲ್ಲಿ ವಾಸಿಸುತ್ತಿದ್ದರು. 12 ನೇಯ ಶತಮಾನದಲ್ಲಿ ದಿಲ್ಲಿಯಲ್ಲಿ ಗುಲಾಮ ಮನೆತನದ ಅರಸನಾದ ಅಲ್ತಮಿಶಹನು ಆಳುತ್ತಿದ್ದನು. ಆ ಕಾಲಕ್ಕೆ ಅಂದರೆ ಶ್ರೀ ಶಾಲಿವಾಹನ ಶಕೆ 1126 ರಲ್ಲಿ ಮತ್ತು ಶ್ರಿ ಶಕೆ 1206 ರಲ್ಲಿ ಶಾಂತಯ್ಯನವರೆಂಬ ಮಹಾಮಹಿಮರು ದಿಲ್ಲಿಯಲ್ಲಿ ವಾಸಿಸುತ್ತಿದ್ದರು. ಅವರು ಜೋತಿಷ್ಯ ವಿದ್ಯೆಯಲ್ಲಿ ಪ್ರಾವಿಣ್ಯವನ್ನು ಪಡೆದಿದ್ದರು. ಅವರು ಹೇಳಿದ ಭವಿಷ್ಯವು ಎಂದೂ ಸುಳ್ಳಾಗುತ್ತಿರಲಿಲ್ಲ. ಆದ್ದರಿಂದ ಪ್ರತಿದಿನ ಅವರ ಮನೆಯ ಮುಂದೆ ಭವಿಷ್ಯ ಕೇಳಲು ಜನರು ಕಿಕ್ಕಿರಿದು ನೆರೆಯುತ್ತಿದ್ದರು. ಒಂದು ದಿನ ಅಲ್ತಮಿಶಹನು ತನ್ನ ಅಂಗರಕ್ಷಕನೊಂದಿಗೆ ಸಂದರ್ಶನ ಮಾಡುತ್ತಿರುವ ಸಮಯದಲ್ಲಿ ಶಾಂತಯ್ಯನವರ ಮನೆಯ ಮುಂದೆ ಕಿಕ್ಕಿರಿದು ನೆರೆದ ಜನಸಮುದಾಯವನ್ನು ಕಂಡು ʼ ಇಲ್ಲಿ ಹೀಗೇಕೆ ಜನರು ನರೆದಿರುವರು ಎಂದು ಕೇಳಲು, ಪ್ರಭುಗಳೇ ಇಲ್ಲಿ ಶಾಂತಯ್ಯನವರೆಂಬ ಜ್ಯೋತಿಷ್ಯಗಳಿದ್ದಾರೆ ಅವರ ಭವಿಷ್ಯ ಎಂದೂ ಸುಳ್ಳಾಗಿಲ್ಲʼ ಎಂದು ಅಂಗರಕ್ಷಕನು ಹೇಳಿದ. ಈ ಮಾತನ್ನು ಕೇಳಿ ಅವನ ಭವಿಷ್ಯವಾಣಿಯನ್ನು ಪರೀಕ್ಷಿಸಬೇಕೆಂಬ ಬಯಕೆ ಅಲ್ತಮಿಶಹನಲ್ಲಿ ಮೂಡಿತು.. ಕೂಡಲೇ ದೂತನನ್ನು ಕರೆದು ಜೋತಿಷ್ಯನನ್ನು ಸಾಧನಗಳೊಂದಿಗೆ ದರ್ಬಾರಕ್ಕೆ ಕರೆತರಬೇಕೆಂದು ಹೇಳಿ ಕಳಿಸಿದನು. ರಾಜಾಜ್ಞೆಯಂತೆ ಶಾಂತಯ್ಯನವರು ದರಬಾರಿಗೆ ಬಂದರು. ಅರಸನು ಅವರನ್ನು ಆದರದಿಂದ ಬರಮಾಡಿಕೊಂಡು, ತನ್ನ ಲಾಯದೊಳಗಿನ ಒಂದು ಹೆಣ್ಣು ಕುದುರೆ ಗರ್ಭಿಣಿ. ಇದು ಹೆಣ್ಣು ಈಯುವದೋ ಅಥವಾ ಗಂಡು ಈಯುವುದೋ ಎಂದು ಅರಸರು ಕೇಳಿದನು. ಇದು ಗಂಡು ಕುದುರೆಯನ್ನು ಈಯುವುದು. ಪಂಚಕಲ್ಯಾಣಿ ಮರಿ ಇರುವದು. ಇದಲ್ಲದೇ ಇನ್ನೆರೆಡು ತಾಸುಗಳಲ್ಲಿ ಕುದುರೆಗೂ, ಮರಿಗೂ ಮೃತ್ಯುಯೋಗವಿದೆ ಎಂದು ಹೇಳಿದರು. ಶಾಂತಯ್ಯನವರ ಭವಿಷ್ಯವಾಣಿಯನ್ನು ಪರೀಕ್ಷೆ ಮಾಡಬಯಸಿದ ಅಲ್ತಮಿಷನು ನಿರ್ದಯನಾದನು. ಕೂಡಲೇ ಕಟುಕರನ್ನು ಕರೆಯಿಸಿ, ಕುದುರೆಯನ್ನು ಕೊಂದು, ಅದರ ಹೊಟ್ಟೆಯನ್ನು ಬಗಿದು ಮರಿಯನ್ನು ಹೊರದೆಗೆದರು. ಶಾಂತಯ್ಯನವರು ಹೇಳಿದಂತೆ ಗಂಡು ಮರಿ ಇದ್ದಿತ್ತಲ್ಲದೇ, ಪಂಚಕಲ್ಯಾಣಿಯೂ ಆಗಿದ್ದಿತು. ಇದರಿಂದ ಅಲ್ತಮಿಷನು ಶಾಂತಯ್ಯನವರ ಮಹಿಮೆ ಅರಿತನು. ಅಲ್ಲದೇ ರಾಜನು ತನ್ನ ಭವಿಷ್ಯದ ಬಗ್ಗೆ ಕೇಳಿದಾಗ ರಾಜನು ಮಲಗುವ ಮಂಚದ ಬುಡದಲ್ಲಿ ಮಿಡಿನಾಗರ ಹಾವು ಇರುವದನ್ನು ತಿಳಿಸಿದನು. ಅಲ್ಲಿ ಹೋಗಿ ನೋಡಿದಾಗ ಅದು ಗಮನಕ್ಕೆ ಬಂದಿತ್ತು.ಆಗ ರಾಜನು ಹಾವಿನ ಮರಿಯನ್ನು ಬಡಿಯಲು ಸೇವಕರಿಗೆ ಹೇಳಿದನು. ಈ ಮಾತನ್ನಾಲಿಸಿದ ಶಾಂತಯ್ಯನವರು ಅದನ್ನು ಬಡಿಯಬೇಡಿರೆಂದು ಹೇಳಿ, ತಮ್ಮಲ್ಲಿರುವ ಸಿದ್ಧಿಯ ಬಲದಿಂದ ಅದನ್ನು ಹಿಡಿದು ದಿಗ್ಬಂಧನೆ ಮಾಡಿ ದೂರಬಿಟ್ಟು ಬಂದರು. ಇದರಿಂದ ಹರ್ಷಿತನಾದ ಅಲ್ತಮಿಶನು ಶಾಂತಯ್ಯನವರಿಗೆ ಒಂದು ಪರಾತ ತುಂಬ ಬಂಗಾರದ ನಾಣ್ಯಗಳನ್ನು ಕೊಟ್ಟನು. “ ಆಸೆ ಅರಸರಿಗಲ್ಲದೆ ಶಿವಭಕ್ತರಿಗಿರುವದಿಲ್ಲವೆನ್ನುತ್ತ “ ಇದು ನಮ್ಮ ದೇಶದ ಹಣ ಜನತೆಯ ಹಿತಕ್ಕಾಗಿ ಇದನ್ನು ಉಪಯೋಗಿಸಬೇಕೆಂದು ಸವಿನಯದಿಂದ ಭಿನ್ನವಿಸಿದನು.
ಶಾಂತಯ್ಯನವರ ದಿವ್ಯಜ್ಞಾನ ಹಾಗೂ ಆಶೆ ಆಮಿಷಗಳಿಲ್ಲದುದನ್ನು ಕಂಡು ಪ್ರಭಾವಿತನಾದ ಅಲ್ತಮಿಶನ ಹೃದಯದಲ್ಲಿ ಅವರ ಬಗ್ಗೆ ಅಪಾರ ಭಕ್ತಿ ಮೂಡಿತು. ದಯಮಾಡಿ ತಾವು ಪ್ರತಿದಿನ ನಾನು ಸಮರ್ಪಣೆ ಭಾವದಿಂದ ಕಳುಹುವ ಸೀದಾ ಸ್ವೀಕರಿಸಿದ ಮೇಲೆಯೇ ನಾನು ಊಟಮಾಡುವೆನೆಂದು ಹೇಳಿ ಅದರಂತೆ ನಡೆಯಲು ಯತ್ನಿಸಿದನು.
ಒಂದು ದಿನ ಶಾಂತಯ್ಯನವರು ಭಕ್ತರ ಆಗ್ರಹದ ಮೇರೆಗೆ ನೆರೆಹಳ್ಳಿಗೆ ಹೋಗಿದ್ದರು. ತಿರುಗಿ ಬರಲು ಅವರಿಗೆ ತಡವಾಯಿತು. ಶಾಂತಯ್ಯನವರಿಗೆ ಸೀದಾ ಸಮರ್ಪಿತವಾಗದೇ ಅಲ್ತಮಿಶಹನು ಊಟಮಾಡುವಂತಿಲ್ಲ ಹಸಿವೆಯಿಂದ ಬಳಲಲಾರಂಭಿಸಿದನು. ಹಸಿದ ಹೊಟ್ಟೆ ಅವನಲ್ಲಿ ಸಿಟ್ಟನ್ನು ಕೆರಳಿಸಿತು. ಸಿಟ್ಟಿನ ಭರದಲ್ಲಿ ವಿವೇಕವನ್ನು ಕಳೆದುಕೊಂಡ. ಆತನ ನಾಲ್ಕು ಜನ ಸೈನಿಕರನ್ನು ಕಳಿಸಿ ಶಾಂತಯ್ಯನನ್ನು ಬಂಧಸಿ ತರಲು ಆಜ್ಞಾಪಿಸಿದನು. ತಮ್ಮ ದಿವ್ಯಜ್ಞಾನದಿಂದ ಗುರುಗಳು ಇದನ್ನರಿತು ಕೂಡಲೇ ದಿಲ್ಲಿಯನ್ನು ಬಿಡದಿದ್ದರೆ ಸೆರೆಮಾನೆವಾಸ ನಿಶ್ಚಿತವೆಂದು ದಿಲ್ಲಿ ಬಿಟ್ಟು ದಕ್ಷಿಣದತ್ತ ಸಾಗಿದರು. ಅಲ್ತಮಿಶನ ಸೈನಿಕರು ಅವರನ್ನು ಬೆನ್ನೆಟ್ಟಿದರು ದಾರಿಯಲ್ಲಿ ಯಮಿನಾ ನದಿಗೆ ಮಹಾಪೂರ ಬಂದಿತ್ತು. ಗಂಗಾಸ್ತೋತ್ರ ಗೈಯಲು ಮಹಾಪೂರ ಇಳಿಯಿತು. ಯಮುನಾ ನದಿಯನ್ನಿ ದಾಟಿ ಆಚೆ ಹೋದರು. ಇವರು ದಾಟಿದ ನಂತರ ಮೊದಲಿನಂತೆ ನದಿಯು ತುಂಬಿ ಹರಿಯಹತ್ತಿತು. ಇವರನ್ನು ಬೆನ್ನಟ್ಟಿ ಬಂದ ಸೈನಿಕರು ಇದನ್ನು ಕಣ್ಣಾರೆ ಕಂಡು ಶಾಂತಯ್ಯನವರ ಅಸಾಮಾನ್ಯತೆಯನ್ನು ಅರಿತು ತಿರುಗಿ ಹೋದರು.ಶಾಮತಯ್ಯನವರು ಹಾಗೂ ಅವರ ಮುಂದಿನ ತಲೆಮಾರಿನವರು ಸುಮಾರು 415 ವರ್ಷಗಳಲ್ಲಿ ಬನೆಸಿ, ತಂಬಾವಿ, ಬಾಕಾವಿ,ಶಿಂದಗಿ,ಯಡ್ರಾವಿ,ಬನಾಸಂಬರಗಿ ಮೊದಲಾದ ಊರುಗಳಲ್ಲಿ ಉಳಿದುಕೊಂಡರು ಇವರ ಒಬ್ಬ ವಂಶಜರಾದ ಜಡೆತಲೆ ಬಸಲಿಂಗಯ್ಯನವರು ಕ್ರಿ. ಶ. 1610 ರಲ್ಲಿ ಕಾಗತಿ ಗ್ರಾಮಕ್ಕೆ ಬಂದು ಅಲ್ಲಿಯೇ ಉಳಿದುಕೊಂಡರು.
ಜಡೆತಲೆ ಬಸಲಿಂಗಯ್ಯನವರ ನಿಯಮಾಚರಣೆಗಳನ್ನು ಕಾಗತಿ ಗ್ರಾಮದ ದೈವದವರು ಮೆಚ್ಚಿ ಅವರಿಗೆ ಸಿದ್ದೇಶ್ವರ ಮಂದಿರದ ಪೂಜೆಯನ್ನು ನಿಯಮಿಸಿ ವರ್ಷಾಸನ ಹಾಕಿಕೊಟ್ಟರು. ಇವರ ತಲೆಮಾರಿನವರಾದ ಈರಯ್ಯ, ಕಲ್ಲಯ್ಯನವಋಉ, ಬಸಲಿಂಗಯ್ಯನವರ ಕಾರ್ಯವನ್ನು ಮುಂದುವರೆಸಿದರು. ಒಂದು ದಿನ ಈರಯ್ಯನವರು ಒಂದು ಕನಸನ್ನು ಕಂಡರು.ಕನಸಿನಲ್ಲಿ ಸಿದ್ಧೇಶ್ವರನು ಪ್ರತ್ಯಕ್ಷನಾಗಿ ನೀವು ಇಲ್ಲಿಂದ ಆಗ್ನೇಯ ದಿಕ್ಕಿಗೆ ಮೂರು ಹರದಾರಿ ಆಚೆಗೆ ಇರುವ ಪಡಗಳ್ಳಿ ಮತ್ತು ತಾರೇಗಿಡಗಳಿಂದ ಕೂಡಿದ ಸ್ಥಾನಕ್ಕೆ ಹೋಗಿ ವಾಸಿಸಿರಿ ಇಲ್ಲಿರುವವನೂ ನಾನೇ ಅಲ್ಲಿರುವವನೂ ನಾನೇ. ಅಲ್ಲಿ ನನ್ನನ್ನು ರಾಮೇಶ್ವರನೆಂದು ಕರೆಯಿರಿ ಎಂದು ಹೇಳಿ ಮಾಯವಾದನು ಕನಸಿನ ಮಾತನ್ನು ನಂಬಿ ಈರಯ್ಯ, ಕಲ್ಲಯ್ಯನವರು ಕಾಗತಿಯನ್ನು ಬಿಟ್ಟು ತಾರಿಗಿಡಗಳಿಂದ ಕೂಡಿದ ತಾರಿಹಾಳ ಎಂಬ ಗ್ರಾಮಕ್ಕೆ ಬಂದು ನೆಲೆಸಿದರು. ಇವರು ಇಲ್ಲಿ ಕೆ ಆಕಳಗಳನ್ನು ಸಾಕಿದ್ದರು. ಅವುಗಳಲ್ಲಿ ಒಂದು ಆಕಳುಪ್ರತಿದಿನ ಹಿಂಡುತ್ತಿರಲಿಲ್ಲ ಹೀಗೆಕಾಗುವದು ಎಂಬುದನ್ನು ತಿಳಿಯಲು ಕಲ್ಲಯ್ಯನು ಒಂದು ದಿನ ಆಕಳ ಹಿಂದೆ ಸಾಗಿದನು. ಆಕಳು ಒಂದು ಪಡಗಳ್ಳಿಯಮೆಳೆಯನ್ನು ಹೊಕ್ಕಿತು. ಹಾಲು ಕರೆಯಲಾರಂಭಿಸಿತು. ಇಲ್ಲೇನಿದೆ ಎಂದು ಕಲ್ಲಯ್ಯನು ಪಡಗಳ್ಳಿಯನ್ನು ಕಡಿದು ಬಯಲು ಮಾಡಿದನು. ಅಲ್ಲಿ ಒಂದಿ ಈಶ್ವರ ಲಿಂಗವನ್ನು ಕಂಡು ಬೆಕ್ಕಸ ಬೆರಗಾದನು ಸಿದ್ದೇಶ್ವರನ ಕನಸಿನಲ್ಲಿ ಕಾಣಿಸಿಕೊಂಡ ಉಸುರಿದ ಮಾತುಗಳನ್ನು ನೆನೆಸಿಕೊಂಡು ಅದಕ್ಕೆ ರಾಮಲಿಂಗೇಶ್ವರನೆಂದು ಹೆಸರಿಟ್ಟನು. ಈಗಲೂ ಆ ರಾಮಲಿಂಗೇಶ್ವರ ಮಂದಿರ ತಾರಿಹಾಳದಲ್ಲಿದೆ. ಈ ಕಲ್ಯ್ಯನವರ ಮಗನೇ ನಮ್ಮ ಚರಿತ್ರನಾಯಕ ಅಜಾತ ನಾಗಯ್ಯ ಸ್ವಾಮಿಗಳು.

*ಶಿವಯೋಗಿಗಳ ಜನನ, ವೈವಾಹಿಯ ಜೀವನ ಮತ್ತು ಶರಣತ್ವದ ನಡೆ*
ಸದ್ಗುರುನಾಗೇಂದ್ರ ಸ್ವಾಮಿಗಳು ತಾರಿಹಾಳದ ಕಲ್ಲಯ್ಯಯನವರು ಮತ್ತು ಬಾಳಮ್ಮನವರ ಪುತ್ರರಾರಗಿ 1850 ನೇ ಈಶ್ವಿಯಲ್ಲಿ ಜನ್ಮ ತಾಳಿದರು. ಇಬ್ಬರೂ ಆದರ್ಶ ದಂಪತಿಗಳು ಇವರ ಮನೆತನದ ಹೆಸರು ಪೂಜಾರಿ ಎಂದಿತ್ತು. ಮಹಾಮಹಿಮರ ಜನನ, ಮಹಾಮಹಿಮರ, ಮಹಾತ್ಮರ ತಪಸ್ವಿಗಳ ಆಶೀರ್ವಾದದಿಂದಲೇ ಆಗುವುದು. ಪೂಜಾರಿ ಮನೆತನದ ಹುಲೆಪ್ಪನೆಂಬುವನು ಅಂಕಲಗಿಯ ಅಡಿವೆಪ್ಪ ಸ್ವಾಮಿಗಳ ದರ್ಶನಕ್ಕೆ ಹೋಗಿದ್ದನು. ಅಡಿವೆಪ್ಪ ಸ್ವಾಮಿಗಳು ಹುಲೆಪ್ಪನಿಗೆ ಒಂದು ಬೆತ್ತವನ್ನು ಕರುಣಿಸಿ, ಇದನ್ನು ಹಿಡಿಯುವ ಒಬ್ಬ ವ್ಯಕ್ತಿ ನಿಮ್ಮ ಮನೆತನದಲ್ಲಿ ಹುಟ್ಟುವನೆಂದು ಹರಸಿದ್ದನು. ಈ ಹುಲೆಪ್ಪನ ಮೊಮ್ಮಗನೇ ನಾಗಯ್ಯಜ್ಜ. ನಾಗೇಂದ್ರ ಸ್ವಾಮಿಗಳನ್ನು ನಾಗಯ್ಯಜ್ಜ, ಬಡೇಕೊಳ್ಳದ ನಾಗಯ್ಯಜ್ಜ ಎಂದೇ ಜನಮನದಲ್ಲಿ ಉಳಿದವರು.
ಅವರ ತಾಯಿಯಾದ ಬಾಳಮ್ಮನವರು ಸಿಂದೊಳ್ಳಿಯವರು. ಆ ಸಿಂದೊಳ್ಳಿಯಲ್ಲಿ ಹುಟ್ಟಿದವರು ಇವರು.
ಒಂದ ಸಾರಿ ನವಲಗುಂದದ ಅಜಾತ ನಾಗಲಿಂಗ ಮಹಾಸ್ವಾಮಿಗಳು ಬಿಕ್ಷೆಯನ್ನು ಬೇಡುತ್ತಾ ತಾರೀಹಾಳಕ್ಕೆ ಬಂದರಂತೆ, ಕಲ್ಲಯ್ಯನವರ ಮನೆಗೆ ಬೀಕ್ಷೆಯನ್ನು ಬೇಡುತ್ತಾ ಬಂದು ಭವತೀ ಭೀಕ್ಷಾಂದೆಹೀ ಎಂದಾಗ ಕಲ್ಲಯ್ಯನವರ ಧರ್ಮ ಪತ್ನಿಯಾದ ನಾಗೇಂದ್ರ ಸ್ವಾಮಿಗಳ ತಾಯಿ ಬಾಳಮ್ಮನವರು ರಾಮೇಶ್ವರನ ಆರಾಧಕರಾಗಿದ್ದು, ಗರ್ಭವತಿ ಇದ್ದಳು. ಆವಾಗ ಬಿಸಿ ರೊಟ್ಟಿ ಮಾಡಿದ್ದಳು, ರೊಟ್ಟಿ ಮ್ಯಾಲ ಪಲ್ಯ ಹಚ್ಚಿಕೊಂಡು ಬಂದು ಎರಡು ರೊಟ್ಟಿ ನವಲಗುಂದದ ಅಜಾತ ನಾಗಲಿಂಗ ಮಹಾಸ್ವಾಮಿಗಳ ಕೈಲ್ಲಿ ಇಟ್ಟು ಸಾಷ್ಟಾಂಗ ನಮಸ್ಕಾರ ಮಾಡಿದಳು. ಆಗ ನಾಗಲಿಂಗ ಸ್ವಾಮಿಗಳು ಅವಳಿಗೆ ಹೇಳಿದರಂತೆ ನಿನ್ನ ಹೊಟ್ಟ್ಯಾಗ ಹುಲಿಯಂತಹ ಮಗ ಹುಟ್ಟುತ್ತಾನೆ ಅವನಿಂದ ಜಗತ್‌ ಕೀರ್ತಿ ಹಬ್ಬತ್ತೈತಿ ಅಂತ ಹೇಳಿ ಆಶೀರ್ವಾದ ಮಾಡಿ ಹೋಗಿಬಿಟ್ಟರಂತೆ ಹೀಗೆ ನಾಗಲಿಂಗನ ಕೃಪೆಯಿಂದ 1850 ರಲ್ಲಿ ಜನ್ಮ ತಾಳಿದವರೇ
ಅರುಹಿನ ಕುರುವನ್ನು ಜಗತ್ತಿಗೆ ಉಣಬಡಿಸಿದ ಶಿವಯೋಗಿಗಳಾದ ನಾಗಯ್ಯಜ್ಜನವರು
ನಾಗೇಂದ್ರ ಎಂದು ಹೆಸರನ್ನು ಇಡಲು ನಾಗಲಿಂಗ ಅಜ್ಜನವರೇ ಹೇಳಿದ್ದರಂತೆ.
ಹುಟ್ಟಿದ ಕೂಡಲೇ ಮಗುವನ್ನು ಸ್ನಾನ ಮಾಡಿಸಿ ತಾಯಿಯನ್ನು ಸ್ನಾನ ಮಾಡಿಸುವವರೆಗೆ ಅಳುವುದನ್ನು ನಿಲ್ಲಸಲಿಲ್ಲವಂತೆ ಹೀಗೆ ಸುಚೀರ್ಭೂತಿ. ಚಿಕ್ಕ ಮಗು ಇದ್ದಾಗ ಸಹ ತಾಯಿ ಸ್ನಾ ಆಗುವವರೆಗೆ ತಾಯಿಯ ಹಾಲನ್ನು ಕುಡಿಯುತ್ತಿರಲಿಲ್ಲವಂತೆ. ರಾತ್ರಿ 12 ರ ನಂತರ ಹಾಲನ್ನು ಕುಡಿಯುತ್ತಿರಲಿಲ್ಲವಂತೆ ಅಂದರೆ ಈ ದೈವೀ ಗುಣದ ಸಂಸ್ಕಾರ ಹುಟ್ಟಿನಿಂದಲೇ ಬಂದಿತ್ತು ಎನ್ನುತ್ತಾರೆ.
ದಿನೇ ದಿನೇ ಬೆಳವಣೆಗೆ ಹೊಂದುತ್ತ ಮೂರು ನಾಲ್ಕು ವರ್ಷನಾದಾಗ ಉಳಿದ ಬಾಲಕರಂತೆ ಆಟಗಳನ್ನಾಡಲಿಲ್ಲ. ದೇವರ ಗುಡಿ ಕಟ್ಟಿ ಅದರಲ್ಲಿ ದೇವರನ್ನಿಟ್ಟು ಪೂಜಿಸುವ ಆಟವನ್ನೇ ಆಡುತ್ತಿದ್ದರು. ಕಾವಿಯ ಬಟ್ಟೆ ಧರಿಸಿದ ಮಹಾತ್ಮರನ್ನು ಪರಮಾತ್ಮನೆಂದರಿತು ನಮಿಸುತ್ತಿದ್ದರು. ರಾತ್ರಿ ಭಜನೆಯನ್ನು ಕೇಳುತ್ತ ಕುಳಿತು ಬಿಡುತ್ತಿದ್ದರು.
ಮಗನು ಆರು ವರ್ಷದವನಾಗಲು ತಂದೆ ಕಲ್ಲಯ್ಯನವರು ಇವರನ್ನು ಶಾಲೆಗೆ ಕಳಿಸಿದರು. ಶಾಲೆಯಲ್ಲಿ ಪಾಟಿಯ ತುಂಬೆಲ್ಲ ಓಣ ನಮಃ ಸಿದ್ಧಾಯ ಎಂದು ಬರೆಯುತ್ತಾ ಕುಳಿತುಕೊಳ್ಳುತ್ತದ್ದರಂತೆ. ಶಾಲಾ ಗುರುಗಳಿಂದ ಮೂಲಾಕ್ಷರಗಳನ್ನು ಅಭ್ಯಸಿಸಿ ನಂತರ ಬಳ್ಳಿಗಳನ್ನು ಕಲಿತರು. ನ ನಾ ಬಳ್ಳಿಯವರೆಗೆ ಕಲಿತು “ ನಾನೇ ನೀನು, ನೀನೇ ನಾನು” ಎಂದೆನುತ ಇದನ್ನು ಮೀರಿದ ವಿದ್ಯೆಯೇ ಇಲ್ಲ ಇನ್ನು ಮೇಲೆ ನನಗೆ ಶಾಲೆಯ ಅವಶ್ಯಕತೆಯೇ ಇಲ್ಲವೆಂದು ಶಾಲೆ ಬಿಟ್ಟು ಹೊಹೊರಟರು.
ನಂತರ ವಯಸ್ಸಿನ ಮಕ್ಕಳನ್ನು ಸೇರಿಸಿ ಗೆಳೆಯರ ಬಳಗ ಕಟ್ಟಿ ಅಡವಿಯಲ್ಲಿ ಹೋಗಿ ಒಂದೇ ಸವನೇ ʼಓಂ ನಮಃ ಶಿವಾಯ” ಎನ್ನುತ್ತಾ ಕೂಡ್ರುತ್ತಿದ್ದರಂತೆ.
ಶಾಲೆ ಬಿಟ್ಟು ತಿರುಗುತ್ತಿದ್ದ ನಾಗಯ್ಯನನ್ನು ದನಕಾಯಲು ಬಾಯಲ್ಲಿ ಕೊಳಲನ್ನಿಟ್ಟು ನಾಗಯ್ಯನು ಮುಂದೆ ಹೋಗಲು ದನಗಳು ಇವರನ್ನು ಹಿಂಬಾಲಿಸುತ್ತಿದ್ದವು. ನೀರು ಕುಡಿಸುವ ಹೊತ್ತಿಗೆ ಕೊಳಲನ್ನೂದುತ್ತ ಹಳ್ಳದತ್ತ ಸಾಗುತ್ತಿದ್ದರು. ನಡುವೆ ಮನೆಗೆ ಊಟಕ್ಕೆ ಹೋಗುವದಿದ್ದಾಗ ದಂಟನ್ನು ತೆಗೆದುಕೊಂಡು ದುಂಡಗೆ ಗೆರೆಕೊರೆದು ಆ ದುಂಡುಗೆರೆಯೊಳಗನೇ ಮೇಯಲು ಹೇಳಿ ಹೋಗುತ್ತಿದ್ದರಂತೆ. ಹೀಗೆ ದುಂಡುಗುಂಪಿಯಲ್ಲಿ ದನಗಳನ್ನು ಬಿಟ್ಟು ಧ್ಯಾನಮಗ್ನನಾಗಿ ಅನೇಕ ತಾಸುಗಳವರೆಗೆ ಭಜನೆ ಮಾಡುತ್ತ ಕುಳಿತುಕೊಳ್ಳುತ್ತಿದ್ದರು. ದನಕಾಯ್ದುಕೊಂಡು ತಿರುಗಿ ಮನೆ ಮರುಳುವಾಗ ಕಟ್ಟಿಗೆ ಹೊರೆಯನೊಂದನು ತರುವುದು ಅವರ ಕಾರ್ಯ. ಒಂದು ದಿನ ಮನೆಯಿಂದ ಹೋಗುವಾಗ ಹಗ್ಗವನ್ನು ಮರೆತು ಹೋದರು. ಗುಡ್ಡದಲ್ಲಿ ಹರಿದು ಹೋಗುತ್ತಿದ್ದ ನಾಗರ ಹಾವೊಂದನ್ನು ತೆಗೆದುಕೊಂಡು ಕಟ್ಟಿಗೆ ಕಟ್ಟಿಕೊಂಡು ಬಂದರು. ಊರವರೆಲ್ಲ ಈ ದೃಶ್ಯವನ್ನು ನೋಡಲು ನೆರೆದರು. ಅವರನ್ನು ಕಂಡು ನಾಗಯ್ಯನು “ಈ ನಾಗವ್ವ ಈ ದುಷ್ಟ ಜನರನ್ನು ಬಿಟ್ಟು ಹೋಗು” ಎನ್ನಲು ಹಾವು ಹೋಗುವ ಪರಿಯನು ಕಂಡು ಜನರೆಲ್ಲ ಬೆರಗಾದರು. ಮುಂದೆ ಕೆಲ ದಿನಗಳು ಗತಿಸಲು ನಾಗಯ್ಯನನ್ನು ಅವನ ತಂದೆ ತಾಯಂದಿರು ಕೂಲಿಯ ಕೆಲಸಕ್ಕೆ ಹಚ್ಚಿದರು. ಅದೇ ಊರಿನ ಪತ್ತಾರ ವೆಂಕಜ್ಜನ ಹೊಲದಲ್ಲಿ ಕೂಲಿಯ ಕೆಲಸ ಮಾಡಲಾರಂಭಿಸಿದರು. ಹೊಲದಲ್ಲಿ ಕೆಲಸ ಮಾಡುವುದು ಇವರಿಗೆ ತುಂಬ ಇಷ್ಟ “ ನೆಲ ಲಿಂಗನ ಭಜನಿ ಮಾಡ್ರಿ” “ಹಸ್ತ ಆಡಿದರ ಮಸ್ತ” ಎಂದು ಜನರಿಗೆ ಉಪದೇಶಿಸಿದರು. ಅಂದರೆ ಶರಣರು ಕಟ್ಟಿಕೊಟ್ಟ ಕಾಯಕ ಪರಿಕ್ಲಲ್ಪನೆಯನ್ನು ದೃಢವಾಗಿ ನಂಬಿದ್ದರು ಎಂಬುದು ತಿಳಿದು ಬರುತ್ತದೆ.
ಬರಬರುತ್ತ ನಾಗಯ್ಯನ ಒಲವು ಭಜನೆ. ಸಾಧು ಸಂಗದತ್ತ ವಿಶೇಷವಾಗಿ ಕಂಡುಬಂದಿತು. ಪತ್ತಾರ ಕಾಳಪ್ಪಜ್ಜನ ಮನೆಯಲ್ಲಿಯೇ ಹೆಚ್ಚಿಗೆ ಇರುವದರಿಂದ ಅವನ ಮನೆಗೆ ಆಗಮಿಸುತ್ತಿದ್ದ ಸಾಧುಗಳ ಸಂಗದಲ್ಲಿಯೇ ಹೆಚ್ಚಿನ ವೇಳೆ ಕಳೆಯಲಾರಂಭಿಸಿದರು. ವಡಗಾವಿಯಲ್ಲಿ ಕಲ್ಯಾಣೇಶ್ವರ ಮಠವೆಂಬುದಿದೆ. ಆಗ ಅಲ್ಲಿಓರ್ವ ಸ್ವಾಮಿಗಳಿರುತ್ತಿದ್ದರು ಆ ಮಠಕ್ಕೆ ನಾಗಯ್ಯನವರು ಆಗಾಗ ಹೋಗಿ ಬರುತ್ತಿದ್ದರು.
ಅಧ್ಯಾತ್ಮದತ್ತ ತಿರುಗಿದ ಅವರ ಮನವನ್ನು ಸಂಸಾರದತ್ತ ಎಳೆಯಲು ಅವನಿಗೊಬ್ಬಳು ಕನ್ನೆಯನ್ನು ಹುಡುಕಿ ಮದುವೆ ಮಾಡಬೇಕೆಂದು ಅವನ ತಂದೆಯವರು ವಿಚಾರಿಸಿದರು. ಕನ್ಯಾಶೋಧನೆ ಆರಂಭವಾಯಿತು.
ಬಂಬರಗಿಯಲ್ಲಿ ಗುರುಲಿಂಗಯ್ಯನೆಂಬ ಸಾತ್ವಿಕ ಶರಣನಿದ್ದನು. ಅವನ ಹೆಂಡತಿಯ ಹೆಸರು ನೀಲಮ್ಮ. ಇಬ್ಬರೂ ಬಸವಣ್ಣ ದೇವರ ಪರಮ ಭಕ್ತರು. ಅವರಿಗೆ ಅಕ್ಕಮ್ಮನೆಂಬ ಗುಣವತಿಯಾದ ಶರಣೆ ಸಂಪನ್ನೆಯಾದ ಮಗಳಿದ್ದಳು. ಅವಳೊಡನೆ ನಾಗಯ್ಯನ ಲಗ್ನ ಮಾಡಬೇಕೆಂದು ವಿಚಾರವು ಅವರ ತಲೆಯಲ್ಲಿ ಒಡಮೂಡಿತು. ತನ್ನ ವಯಸ್ಸಿನ 24 ನೇ ವರ್ಷಕ್ಕೆ ನಾಗಯ್ಯನ ಲಗ್ನವು ಶರಣರ ಚರಿತ್ರೆಗಳನ್ನು ಕೇಳುತ್ತಾ, ಓದುತ್ತಾ ಕಾಲಕಳೆದ ಅಕ್ಕಮ್ಮರೊಡನೆ ಆಯಿತು. ಅಕ್ಕಮ್ಮ ನಾಗಯ್ಯನಿಗೆ ತಕ್ಕ ಸತಿ. ದಿನಳೆದಂತೆ ಈ ದಂಪತಿಗಳಿಗೆ ಬಸಯ್ಯ,ಶಿವಮೂರ್ತಯ್ಯರೆಂಬ ಗಂಡು ಮಕ್ಕಳೂ, ನೀಲಮ್ಮ, ಬಾಳಮ್ಮರೆಂಬ ಹೆಣ್ಣು ಮಕ್ಕಳೂ ಜನಿಸಿದರು. ಪ್ರಾಪಂಚಿಕ ಜೀವನದಲ್ಲಿ ಅಷ್ಟೊಂದು ಆಸಕ್ತಿಯನ್ನು ತೋರಿಸದಿರಲು ಇವನ ಸಹೋದರರು ಇವರನ್ನು ಮನೆಬಿಟ್ಟು ಹೊರಗೆ ಹಾಕಲು, ಹನ್ನೆರೆಡು ವರ್ಷಗಳವರೆಗೆ ಅನೇಕ ಪುಣ್ಯಕ್ಷೇತ್ರಗಳ ದರ್ಶನ ಪಡೆದು ಬಂದರು.
ತದನಂತರ ಬಡೇಕೊಳ್ಳದಲ್ಲಿಯ ಹುಲಿಯಪ್ಪನ ಗವಿಯಲ್ಲಿ, ಅತ್ತಿಯ ಮರದ ಮಂಚದಲ್ಲಿ ಬಂದು ಧ್ಯಾನ ಮಾಡುತ್ತಿದ್ದರು. ಒಂದೇ ಸ್ಥಳದಲ್ಲಿ ತಿಂಗಳುಗಟ್ಟಲೇ ಕುಳಿತು ತಪಗೈದರು. ಸಮಾಧಿ ಸ್ಥಿತಿಯಲ್ಲಿ ಮೈಮರೆತು ಕುಳತ ಅವರನ್ನು ಕಂಡು ಅನೇಕರು ಬೆರಗಾದರು. ಹೀಗೆಯೇ ಕೆಲದಿನ ಯೋಗಸಾಧನೆಗೈದರು. ಹಲವು ದಿನಗಳವರೆಗೆ ಗಿಡಗಳ ಟೊಂಗೆಯ ಮೇಲಿದ್ದು ತಪಗೈದರೆ ಮತ್ತೆ ಕೆಲವು ದಿನಗಳವರೆಗೆ ನೆಲದ ಮೇಲೆ ನೆಲೆಸಿದ್ದು ತಪಗೈದರು. ಎಷ್ಟೋ ದಿನಗಳವರೆಗೆ ನಿರಾಹಾರಿಯಾಗಿ ನಿದ್ದೆ ನೀರಡಿಕೆಗಳ ಪರಿವೆಯಿಲ್ಲದೆ ಪರಶಿವನಲ್ಲಿ ಅಚಲಭಕ್ತಿಯನ್ನಿರಿಸಿ ತಪಗೈದರು. ಈ ತಪೋಬಲದಿಂದ ಹೃನ್ಮನಗಳಲ್ಲಿ ಚಿರಶುದ್ಧಿ ಆವರಿಸಿತ್ತು. ನಾನೆಂಬ ಭಾವವು ಅಳಿದವನಾಗಿ ಸರ್ವವಸ್ತುಗಳಲ್ಲಿ ಪರಮಾತ್ಮನನ್ನು ಕಾಣುವ ದೃಷ್ಟಿವೈಶಾಲ್ಯತೆ ಬೆಳೆದು ಬಂದಿತ್ತು ಹಿರಿಯರು, ಕಿರಿಯರು, ಅವರಿವರು, ಬಂಟರಿವರು, ಅರಿಗಳಿವರು,ಮಿತ್ರರಿವರು ಎಂಬ ಭೇದಗಳ ಸುಳಿವು ಅವರಲ್ಲಿ ಇಲ್ಲದೇ ಸಂಪೂರ್ಣವಾಗಿ ಲಿಂಗದಲ್ಲಿ ಮನಬೆರೆದವರಾಗಿದ್ದರು. ಅವರಿಗೆ ಇದು ಸುಖ, ಇದು ದುಖಃ, ಇದು ಮಾನ, ಇದು ಅಪಮಾನವೆಂಬ ಭಾವನೆಗೆ ಅಲ್ಲಿ ಲವಲೇಶವೂ ಅವಕಾಶವಿಲ್ಲದಾಗಿತ್ತು. ಆ ಮಹಾಪರಶಿವನೇ ನಾನೆಂಬ ಭಾವನೆಯ ಬೆಳವಣೆಗೆ ಹೃದಯದಲ್ಲಿ ನೆಲೆಸಿತ್ತು. ಮಾಯೆ ಮಮತ್ವಗಳನ್ನಳಿದು ಅವರು ನಿತ್ಯವೂ ಬ್ರಹ್ಮಾನಂದ, ಆತ್ಮಾನಂದಗಳನ್ನು ಅನುಭವಿಸುತ್ತಿದ್ದರು. ಈ ರೀತಿ ಪೂರ್ಣಜ್ಞಾನಿಯಾದ, ಪರಿಪೂರ್ಣಜ್ಞಾನಿಯಾದ, ವುವಹಾರಿಕ ಜ್ಞಾನದೆಡೆಗೆ ಲಕ್ಷವನ್ನೀಯದ ನಾಗಯ್ಯ ಮಹಾಸ್ವಾಮಿಗಳು ಸಾಮಾನ್ಯರ ದೃಷ್ಟಿಯಲ್ಲಿ ಹುಚ್ಚರಾಗಿಯೂ, ಪೆದ್ದರಾಗಿಯೂ ಸುಜ್ಞಾನಿಗಳ, ಸುವಿಚಾರಿಗಳ ದೃಷ್ಟಿಯಲ್ಲಿ ದಿವ್ಯಜ್ಞಾನಿಗಳಾಗಿಯೂ, ಮಹಾಮಹಿಮರಾಗಿಯೂ ಮಹಾನುಭಾವರಾಗಿಯೂ ಕಂಡರು. ದೃಷ್ಟಿಯಂತೆ ಸೃಷ್ಟಿಯಲ್ಲವೇ?
ತದನಂತರ ಅವರ ಧರ್ಮಪತ್ನಿ ಅವರು ಅಲ್ಲಿಯೇ ಬಂದು ಅವರೊಂದಿಗೆ ಇರುತ್ತಾರೆ. ನಾಗಯ್ಯಜ್ಜನವರು ಸಂಸಾರದಲ್ಲಿ ಇದ್ದರೂ ಕೆಸರಿನಲ್ಲಿದ್ದ ಕಮಲದಂತೆ ಇದ್ದರು.
ನಾಗೇಂದ್ರಯೋಗಿ ಮಹಾಜ್ಞಾನಿ. ಅವರು ನಿರಹಂಕಾರಿಯೂ ಹೌದು. ಅವರ ಮನಸ್ಸು ಭಕ್ತಿಯ ಸಾಗರ. ಅಪಾರ ಅಚಲ ಭಕ್ತಿಯಿಂದ ಅದು ತುಂಬಿ ತುಳಕುತ್ತಿತ್ತು. ಜಗದ ಜನರಂತೆ ಅವರ ವ್ಯವಹಾರ, ಆಚರಣೆಗಳಿರಲಿಲ್ಲ ಜಗದ ಜಂಜಡಗಳಿಂದ ಅಲಿಪ್ತರಾಗಿದ್ದರು. ಆದರೆ ಕೆಲ ಭಕ್ತರು ಅವರನ್ನು ನಿಜವಾದ ಶರಣನಂದರಿಯದೆ ಸರಸವಾಡಿದವರೂ ಉಂಟು. ಅಪ್ಪ ಬಸವಣ್ಣನವರ ವಾಕ್ಯದಂತೆ “ ಶರಣರೊಡನೆ ಶಿವಯೋಗಿಯೊಡನೆ ಸರಸವಾಡುವುದೆಂದರೆ ಹಾವಿನ ಹೆಡೆಯಕೊಂಡು ಕೆನ್ನೆಯ ತುರಿಸಿಕೊಂಡಂತೆ.ಹುಲಿಯ ಮೀಸೆಯ ಹಿಡಿದು ಉಯ್ಯಾಲೆಯ ನಾಡಿದಂತೆ, ಸುಣ್ಣದ ಕಲ್ಲು ಕಟ್ಟಿಕೊಂಡು ಮಡುವಿನಲ್ಲಿ ಬಿದ್ದಂತೆ” ಹೀಗಿರುವಾಗ ಕೆಲಭಕ್ತರು ಅವರೊಡನೆ ಸರಸವಾಡಿ ತಮ್ಮ ಕಾಲ ಮೇಲೆ ತಾವೇ ಕಲ್ಲ ಚೆಲ್ಲಿಕೊಂಡಿದ್ದಾರೆ. ಅವರನ್ನು ಬೈದು, ಬಡಿದು, ಹೀಯಾಳಿಸಿ ನುಡಿದು ಅನೇಕ ಕಷ್ಟ ನಷ್ಟಗಳನ್ನು ಅನಭವಿಸಿದ್ದಾರೆ. ಆದ್ದರಿಂದ ಶರಣರೊಡನೆ ಶಿವಯೋಗಿಗಳೊಡನೆ ಸರಸ ತರವಲ್ಲ.
ಸತ್ಯ ಶುದ್ಧ ಕಾಯಕ ಮಾಡುವವನಿಗೆ ಗುರುಬಲ ಹೆಚ್ಚಾಗಿ ಹಾವಿನಂದದಿ ಬರುವ ಕಷ್ಟಗಳೆಲ್ಲ ಕೋಲಿನಂದದಿ ಕಂಡು ಬರುವವೆಂಬುದು ಇದರ ಅರ್ಥ. ನಮ್ಮ ದುಷ್ಕರ್ಮಗಳೇ ನಮ್ಮ ದುರಾಚಾರಗಳೇ ನಮ್ಮ ಶತ್ರುಗಳು” ಆಚಾರವೇ ಸ್ವರ್ಗ, ಅನಾಚಾರವೇ ನರಕ” ಎಂಬ ನುಡಿಯ ಅರ್ಥವೂ ಇದೆ ಆಗಿದೆ.ಸದಾಚಾರಸಂಪನ್ನರು ನಾವಾಗಬೇಕೆಂಬುದೇ ಶಿವಯೋಗಿಯ ಉಪದೇಶ.ಗುರುಸನ್ನಿಧಿಯಲ್ಲಿ ದೇವೋಪಾಸನಗೈದರೆ ಮನಸ್ಸು ಪರಿವರ್ತನೆ ಹೊಂದಿ ಅದು ಸತ್ಯ ಶುದ್ಧ ಕಾಯಕದತ್ತ ಒಲಿಯುವದು. ಆದ್ದರಿಂದ ಗುರುವಿನಡೆಗೆ, ಗುರುವಿನ, ಶರಣರ ಸಂಗದಿಂದ ಸಮಾಜಕಲ್ಯಾಣ ಕಾರ್ಯ ಮಾಡುವ ಮೂಲಕ ಮಾನವ ಜೀವನವನ್ನು ಸಾರ್ಥಕ ಮಾಡಿಕೊಂಡವರು ಅನೇಕರು.
ಬೆಳಗಾವಿ ಸುತ್ತಮುತ್ತಲಿನ ತಾರೀಹಾಳ, ಸಿಂದೊಳ್ಳಿ, ಹಿರೇಬಾಗೇವಾಡಿ, ಕನವಿಕರವಿನಕೊಪ್ಪ, ಹಲಗಾ, ಕಾಕತಿ, ಮಾಸ್ತಮರ್ಡಿ, ಮುಂತಾದ ಊರುಗಳಲ್ಲಿ ಸಂಚಾರ ಮಾಡಿ ಅನೇಕ ಲೀಲೆಗಳನ್ನು ಮಾಡಿದ್ದನ್ನು ಜನ ಮೆಚ್ಚಿ ಮಾತನಾಡುತ್ತಾರೆ. ಬಸಲಿಂಗಮ್ಮ ಸಾಣಿಕೊಪ್ಪ ಅವರು ನಾಗಯ್ಯಜ್ಜನ ಬಗ್ಗೆ ಹೇಳುತ್ತಾ ನಾಗೇಂದ್ರ ಶಿವಯೋಗಿಗಳು ಬಹಳ ಖಡಕ್‌ ಇದ್ದರು,ಅವರ ಸಿಟ್ಟ ಬಹಳ ಕೆಟ್ಟ ಇತ್ತು ಎಂದು ತಿಳಿಸುತ್ತಾರೆ.
ಅತ್ಯಂತ ಶ್ರಮಜೀವಿಯಾದ ನಾಗಯ್ಯ ಅಜ್ಜನವರು ತಮ್ಮ ಹೊಲದಲ್ಲಿ ಬಿತ್ತುತ್ತಿರುವಾಗ ಪಕ್ಕದ ರೈತ ತನ್ನ ಹೊಲದಲ್ಲಿ ಬಿತ್ತಲೂ ಯಾರು ಇಲ್ಲ ಸ್ವಲ್ಪ ಭಿತ್ತಿ ಕೊಡಿ ಎಂದು ಕೇಳಿದರೆ, ತನ್ನ ಕೆಲಸ ಬಿಟ್ಟು ಅವರ ಹೊಲದ ಕೆಲಸ ಮಾಡುತ್ತಿದ್ದರಂತೆ ಒಂದು ಸಾರಿ ಹೀಗೆ ಪಕ್ಕದ ರೈತ ಬಿತ್ತಿ ಕೊಡಲು ಕೇಳಿದಾಗ ತನ್ನ ಹೊಲದ ಬಿತ್ತು ಕಾರ್ಯ ಬಿಟ್ಟು ಅವರ ಹೊಲಕ್ಕೆ ಬಿತ್ತಲು ಹೋದರಂತೆ ಆಗ ನಾಗಯ್ಯಜ್ಜನವರ ತಂದೆ ಸಿಟ್ಟಿಗೇರಿದರಂತೆ, ಆದರೂ ಆ ರೈತನ ಹೊಲದ ಬಿತ್ತುವ ಕಾರ್ಯಕ್ಕೆ ಹೋದರಂತೆ. ಬಿತ್ತುವ ಕಾರ್ಯ ಮುಗಿಲು ಬಂದಿತ್ತಂತೆ ಇನ್ನು ಅರ್ಥ ಎಕರೆ ಬಿತ್ತುವದಿತ್ತು ಅಷ್ಟರಲ್ಲಿ ಜೋಳದ ಬೀಜ ಖಾಲಿಯಾಯಿತಂತೆ. ರೈತ ಮನೆಗೆ ಹೋಗಿ ತರಬೇಕೆಂದರೆ ಹೊತ್ತು ಮುಳುಗುತ್ತಿತಂತೆ ಆಗ ರೈತ ಕಣ್ಣಿರ ಹಾಕಲಿಕ್ಕೆ ಸುರು ಮಾಡಿದನಂತೆ ಆಗ ಚಿಂತಿ ಮಾಡಬ್ಯಾಡ ನಿಲ್ಲು ಅಂತ ಹೇಳಿ ಬಿತ್ತು ಕಾಳಿರುವ ಜೋಳಿಗಿ ಒಳಗ ಮಣ್ನನ್ನು ಹಾಕಿಕೊಂಡು ಮಣ್ಣನ್ನೇ ಭಿತ್ತಿದರಂತೆ. ಆಗ ರೈತ ಹೆಂಗಪಾ ನಾಗಯ್ಯ ಮಣ್ಣನ್ನೇ ಭಿತ್ತುತ್ತಿರುವಿಲ್ಲ ಎಂದರಂತೆ. ಆಗ ಇರಲಿ ನಡಿ ಅಂತ ಹೇಳಿ ಮಣ್ಣನ್ನೇ ಬಿತ್ತಿದರಂತೆ. ಒಂದು ವಾರದಲ್ಲಿ ಇಡೀ ಹೊಲವೆಲ್ಲ ಅತ್ಯಂತ ಸುಂದರವಾಗಿ ಪ್ರಫುಲ್ಲವಾಗಿ ಹುಟ್ಟಿ ಬಂದಿತ್ತು ಮಣ್ಣು ಬಿತ್ತಿದ ಸ್ಥಳ ವಿಶೇಷವಾಗಿ ಹುಟ್ಟಿ ಬಂದಿತ್ತು ಹೀಗೆ ಮಣ್ಣು ಬಿತ್ತಿ ಬೆಳಿಸಿದ ಪುಣ್ಯಾತ್ಮರು ಎಂದು ಹಾಡಿ ಹೋಗಳುತ್ತಾರೆ.
ಬಡೇಕೊಳ್ಳದಿಂದ ನಾಗಯ್ಯಜ್ಜನವರು ಹಿರೇಬಾಗೇವಾಡಿಗೆ ಮೇಲಿಂದ ಮೇಲೆ ನಡೆದುಕೊಂಡು ಬರುತ್ತಿದ್ದರು. ಒಂದು ಸಾರಿ ಬಸಲಿಂಗಮ್ಮ ಸಾಣಿಕೊಪ್ಪ ಹಾಗೂ ಈರಸಂಗಮ್ಮ ಅಂಗಡಿ ಇವರು ಮಂಗಳವಾರ ಪ್ಯಾಟಿ ಓಣಿಯಲ್ಲಿ ಮನಿಯೊಳಗೆ ಬಜಿ ಮಾಡಿ ಹಿರೇಬಾಗೇಡಿಯಲ್ಲಿ ಮಾರುತ್ತಿದ್ದರು. ಕಟ್ಟಿ ಮ್ಯಾಲ ಕಿರಾಣಿ ಅಂಗಡಿ ಇತ್ತು ಅಲ್ಲಿ ಬಜಿ ಮಾಡಿ ಮಾರಾಕ ಇಟ್ಟಿದ್ದರು ಆವಾಗ ಬಡೇಕೊಳ್ಳದ ನಾಗಯ್ಯಜ್ಜನವರು ಅಲ್ಲಿಗೆ ಬಂದರು ಇವರು ಇಟ್ಟಿದ್ದ ಬುಟ್ಟಿಯಲ್ಲಿಯ ಬಜಿಗಳನ್ನು ತೆಗೆದುಕೊಂಡು ಎಲ್ಲವನ್ನೂ ಅಲ್ಲಿದ್ದವರಿಗೆ ಹಂಚಿಬಿಟ್ಟರು. ಆವಾಗ ಇವರಿಬ್ಬರೂ ಸುಮ್ಮನೇ ಕುಳಿತರು ಆವಾಗ ಬಸಲಿಂಗಮ್ಮನವರು ಒಂದು ಸಂಕಷ್ಟದಲ್ಲಿ ಸಿಲುಕಿದ್ದರು. ನಾಗಯ್ಯಜ್ಜ ಎಲ್ಲ ಬಜಿ ಕೊಟ್ಟು, ಏನವ್ವಾ ನಿಮ್ಮ ಅಂಗಡಿ ಒಳಗಿನ ಎಲ್ಲ ಬಜಿಯನ್ನು ತೆಗೆದುಕೊಂಡು ಖಾಲಿ ಮಾಡಿದೆನು. ನಿಮಗೆ ಸಿಟ್ಟು ಬಂದಿತೇ? ಎಂದು ಕೇಳಿದರು ಆವಾಗ ಈರಸಂಗಮ್ಮ ಹಾಗೂ ಬಸಲಿಂಗಮ್ಮನವರು ಒಂದು ಮಾತನ್ನು ಹೇಳಿದರಂತೆ, ಅದೇನೆಂದರೆ, “ ಎಪ್ಪಾ ಅಂಗಡಿನು ನಿಮ್ಮದ, ಅಂಗಡಿ ಒಳಗಿರುವ ಬಜಿನೂ ನಿಮ್ಮದೇ, ನಿನ್ನ ಅಂಗಡಿ ಒಳಗಿಂದ ನಿನ್ನ ಬಜಿ ತೊಗೊಂಡ ನಿನಗೆ ಬೇಕಾದವರಿಗೆ ಕೊಟ್ಟರ ಸಿಟ್ಟ ಮಾಡಕೊಳ್ಳಾವ್ರು ನಾವ್ಯಾರು “ ಅಂತ ಕೇಳಿದರಂತೆ. ನೋಡ್ರೀ ಹೆಂಗ ನಡ್ಕೊಳ್ಳಬೇಕು ಗುರುಗಳ ಜೊತೆಗೆ ಅಂತ ನಾವೆಲ್ಲರೂ ಕಲಿಬೇಕು ಅಲ್ಲವೇ?.
ಅಷ್ಟ ಹೇಳುವಷ್ಟರಲ್ಲಿ ಬಡೇಕೊಳ್ಳದ ನಾಗಲಿಂಗಯ್ಯಜ್ಜನರು ಬಸಲಿಂಗಮ್ಮನವರ ತಲೆಯ ಮೇಲೆ ಕೈ ಇಟ್ಟು ಚಿಂತಿ ಮಾಡಬ್ಯಾಡ ಮಗಳ, ನಾಳೆ ನಿನ್ನಂತನ ತೀರ್ಪು ಬರ್ತೈತಿ ಅಂತ ಆಶೀರ್ವಾದ ಮಾಡಿ ಬಡೆಕೊಳ್ಳಕ್ಕೆ ಹೋದರಂತೆ. ಮರುದಿನ ಯಾವ ಒಂದು ದುಖಃದಲ್ಲಿ ಇದ್ದರು ಬಸಲಿಂಗಮ್ಮ ಸಾಣಿಕೊಪ್ಪ ಅವರು ಆ ದುಖಃದಿಂದ ನಿವೃತ್ತರಾದರು ಎಂದು ಇಲ್ಲಿಯ ಜನಪದರು ಮಾತನಾಡುತ್ತಾರೆ. ಇಂತಹ ಮಹಾತಪಸ್ವಿಗಳು, ಅವತಾರಿ ಪುರುಷರು, ಪವಾಡಪುರುಷರು ಬಡೇಕೊಳ್ಳದ ನಾಗೇಂದ್ರ ಶಿವಯೋಗಿಗಳು, ಅಥವಾ ನಾಗಯ್ಯಜ್ಜನವರು.

*ಉತ್ತರಾಧಿಕಾರಿಗಳಾಗಿ ಶ್ರೀ ವೀರಯ್ಯ ಸ್ವಾಮಿಗಳು*
ಸಂತಿ ಬಸ್ತವಾಡ ಗ್ರಾಮವು ಬೆಳಗಾವಿ ತಾಲೂಕಿಲ್ಲಿದೆ. ಅಲ್ಲಿ ಸಿದ್ಧಯ್ಯ ಚಿಕ್ಕಮಠರೆಂಬುವರಿದ್ದರು ಚೆನ್ನಮ್ಮ ಅವರ ಧರ್ಮಪತ್ನಿ. ಸಂತಿಬಸ್ತವಾಡದಲ್ಲೊಂದು ಬಸವೇಶ್ವರ ಮಂದಿರವಿದೆ. ಚಿಕ್ಕಮಠ ಮನೆತನದವರೇ ಬಸವಣ್ಣ ದೇವರ ಪೂಜೆಯನ್ನು ಭಯಭಕ್ತಿಗಳೊಂದೊಡಗೂಡಿ ಮಾಡುತ್ತಿದ್ದರು. ಈ ತೆರನಾಗಿ ಬಸವಣ್ಣ ದೇವರ ಪೂಜಾವೃತ್ತಿಯು ಅನೇಕ ತಲೆಮಾರುಗಳಿಂದ ನಡೆದು ಬಂದಿತ್ತು. ಆದುದರಿಂದಲೇ ಈ ಮನೆತನಕ್ಕೆ ಪೂಜಾರಿ ಮನೆತನ ಹೆಸರು ಬಂದಿರಬೇಕು. ಆದಕಾರಣ ಜನರೆಲ್ಲರೂ ಈ ಮನೆತನವನ್ನು ಚಿಕ್ಕಮಠ ಎಂದು ಕರೆಯುವದಕ್ಕಿಂತ ಹೆಚ್ಚಾಗಿ ಪೂಜಾರಿ ಮನೆತನವೆಂದು ಕರೆಯುತ್ತಿದ್ದರು, ಗುರ್ತಿಸುತ್ತಿದ್ದರು.
ಈ ಪೂಜಾರಿ ಮನೆತನದ ಸಿದ್ಧಯ್ಯ, ಚೆನ್ನಮ್ಮರೆಂಬ ದಂಪತಿಗಳ ತೃತೀಯ ಪುತ್ರರೇ ವೀರಯ್ಯ ಸ್ವಾಮಿಗಳು. ದಿ 1-12-1928 ರಂದು ಇವರ ಜನನವಾಯಿತು. ಶ್ರೀ ನಾಗಯ್ಯ ಸ್ವಾಮಿಗಳು ಸಂತೀಬಸ್ತವಾಡಕಕ್ಕೆ ಮೇಲಿಂದ ಮೇಲೆ ಬರುವಾಗ ಇವರ ಮನೆಗೂ ಬಂದು ನೆಲೆಸಿ ಪ್ರಸಾದವನ್ನು ಕರುಣಿಸುತ್ತಿದ್ದರು. ಮಗು ವೀರಯ್ಯನಿಗೆ ಆರು ವರ್ಷಗಳಾಗಲು ತಂದೆಯು ಶಾಲೆಗೆ ಕಳಿಸಿದರು. ವೀರಯ್ಯ ಶಾಲೆಯಲ್ಲಿ ಗುರುಗಳ ಅಚ್ಚುಮೆಚ್ಚಿನ ಶಿಷ್ಯನಾಗಿ ಬೆಳೆದ.
ಪರಮಪೂಜ್ಯ ನಾಗಯ್ಯ ಸ್ವಾಮಿಗಳು ಲಿಂಗೈಕ್ಯರಾಗುವ ಕಾಲಸನ್ನಿಹಿತವಾಗಿತ್ತು. ಅದರೊಳಗಾಗಿಯೇ ಮಠದ ಉತ್ತರಾಧಿಕಾರಿಯನ್ನು ನಿಯಮಿಸುವ ಶುಭದಿನವನ್ನು ಪ್ರಕಟಿಸಿದರು. ಆದರೆ ಯಾರನ್ನು ಉತ್ತರಾಧಿಕಾರಿಯೆಂದು ನಿಯಮಿಸುವರೆಂದು ಭಕ್ತರು ಕೇಳಿದಾಗ” ಶಿವನಪ್ಪಣೆಯಂತೆ ಮಾಡೋಣ” ಎಂದರು
ಅಂತೂ ಇಂತೂ ಉತ್ತರಾಧಿಕಾರಿಯನ್ನು ಆಯ್ಕೆಮಾಡಿ ನಿಯಮಿಸುವ ಶುಭದಿನ ಬಂದಿತು. ಪೂಜ್ಯ ನಾಗಯ್ಯನವರಿಗೆ ಅನೇಕ ಜನ ಸಮೀಪದ ಸಹೋದರರಿದ್ದರು. ಆಸಹೋದರರ ಅನೇಕ ಪುತ್ರರಿದ್ದರು. ಎಲ್ಲ ಸೋದರರು ತಮ್ಮ ತಮ್ಮ ಮಕ್ಕಳೊಡನೆ ಮಠಕ್ಕಾಗಮಿಸಿ ಗುರುವು ಯಾರನ್ನು ಕರೆಯುವನೋ ಏನೋ ಎನ್ನುತ್ತಾ ಗುರುವಿನ ಕರೆಯನ್ನೇ ನರೀಕ್ಷಿಸುತ್ತ ಕುಳಿತಿದ್ದರು.
ಇತ್ತ ಬಸ್ತವಾಡದಲ್ಲಿರುವ ಶ್ರೀ ಸಿದ್ಧಯ್ಯನವರು ಬಡೇಕೊಳ್ಳ ಮಠಕ್ಕೆ ಹೋಗಿ ಬಹಳ ದಿನಗಳಾದವು ಇಂದು ಹೋಗಿ ಬರೋಣವೆಂದು ಸಾಯಕಲ್ಲ ತೆಗೆದುಕೊಂಡು ಮಠಕ್ಕೆ ಹೊರಟರು. ಆ ಕಾಲಕ್ಕೆ ಮಗು ವೀರಯ್ಯ ರಸ್ತೆಯಲ್ಲಿ ಆಡತ್ತಿದ್ದನು. ತಮ್ಮಾ ನಾನು ಮಠಕ್ಕೆ ಹೋಗಿ ಬರುವೆ ನೀನು ಮನೆಗೆ ಹೋಗೆಂದು ಹೇಳಿದರು. ಆಗ ಮಗು ವೀರಯ್ಯ “ ಅಪ್ಪಾ ನಾನೂ ಮಠಕ್ಕೆ ಬರುವೆನೆಂದನು” ಸಿದ್ಧಯ್ಯನವರು ಅವನನ್ನು ಬೆದರಿಸಿ ಹಾಗೆಯೇ ಮುಂದೆ ಸಾಗಿದರು. ಎರಡು ಫರ್ಲಾಂಗ್‌ ಮುಂದೆ ಹೋಗಿ ಹೊರಳಿ ನೋಡಿದರು. ಮಗನೂ ಸಾಯಕಲ್ಲ ಹಿಂದಿನಿಂದ ಓಡಿ ಬರುತ್ತಿದ್ದನು. ಇದನ್ನು ಕಂಡು ಆಶ್ಚರ್ಯವಾಯ್ತು. ಎಂದೂ ಹಠಮಾಡದ ಇವನು ಇಂದೇಕೇ ಹಠಮಾಡುತ್ತಿರುವನೆಂದು ಮಗುವಿನ ಹಠಕ್ಕೆ ಮಣೆದು ಅವನನ್ನು ಸಾಯಿಕಲ್ಲ ಮೇಲೆ ಕೂಡ್ರಿಸಿಕೊಂಡು ಮಠಕ್ಕೆ ಬಂದರು.
ಅತ್ತ ಗುರುವರನು ಒಬ್ಬ ಸೇವಕನನ್ನು ಕರೆದು ಸಂತಿಬಸ್ತವಾಡದ ಸಿದ್ಧಯ್ಯನನ್ನೂ ಅವನ ಮಗ ವೀರಯ್ಯನನ್ನೂ ಕರೆದುಕೊಂಡು ಬಾ ಎಂದು ಹೇಳಿ ಕಳಿಸಿದರು. ಆ ಸೇವಕನಿಗೂ ಸಿದ್ಧಯ್ಯನವರಿಗೂ ದಾರಿಯಲ್ಲಿ ಬೇಟಿಯಾಗಲಿಲ್ಲ ಸಿದ್ಧಯ್ಯನವರು ಮಠಕ್ಕೆ ಬಂದು ಎರಡು ತಾಸುಗಳ ನಂತರ ಸೇವಕನು ಬಂದು ಯಪ್ಪಾ ಅವರು ಮಠಕ್ಕನೇ ಬಂದಿರುವರೆಂದು ಹೇಳಿದನು. ತುಸು ಸಮಯದ ನಂತರ ಮಹಾಮಹಿಮ ನಾಗಯ್ಯರು ವೇಲಂಗಿ ತುಳಸಾಬಾಯಿಯನ್ನು ಕರೆದು”ವೀರಯ್ಯನನ್ನು ಕರೆದುಕೊಂಡುಹೋಗಿ ಸ್ನಾನಮಾಡಿಸಿ ಕರೆದುಕೊಂಡು ಬಾ” ಎಂದರು ತುಳಸಮ್ಮ ಗುರು ಪೇಳಿದಂತೆ ಸ್ನಾನ ಮಾಡಿಸಿದಳು ನಂತರ ನಾಗಯ್ಯಜ್ಜರು ವೀರಯ್ಯನವರನ್ನು ಕೂಡ್ರಿಸಿ ಪೂಜೆಗೈದು ಮಂಗಳಪಾಡಿ ಇವನೇ ಈ ಮಠದ ಉತ್ತರಾಧಿಕಾರಿಯೆಂದು ಭಕ್ತ ಸಮೂಹಕ್ಕೆ ತಿಳಿಸಿದರು ಆಗ ವೀರಯ್ಯನವರು ಇನ್ನೂ ಚಿಕ್ಕವರಿದ್ದರು. ಈ ಶುಭಸಮಾರಂಭವು 8-10-1934 ರಂದು ನಡೆಯಿತು. ಅಂದಿನಿಂದ ಗುರುಗಳು ಲಿಂಗೈಕ್ಯರಾಗುವತನಕ ನಾಗಯ್ಯಜ್ಜನವರ ಸೇವೆಯನ್ನುಗೈದರು.

*ಗೀಗೀ ಮಲ್ಲಪ್ಪನಿಗೆ ಲಿಂಗಧಾರಣೆ ಮಾಡಿಸಿದರು*
ಬಸವನ ಕುಡಚಿಯಲ್ಲಿ ಗೀಗೀಪದ ಹಾಡುವ ಮಲ್ಲಪ್ಪ ಎಂಬ ಹರಿಜನ ಭಕ್ತನಿದ್ದನು. ಮೇಲಿಂದ ಮೇಲೆ ಶ್ರೀಮಠಕ್ಕೆ ಬಂದು ಸ್ವಾಮಿಗಳ ಆಶೀರ್ವಾದ ಪಡೆದು ಅಲ್ಲಲ್ಲಿ ತನ್ನ ಗೀಗೀಪದ ಕಾರ್ಯಕ್ರಮ ಕೊಡುತ್ತಿದ್ದನು. ಆಗಿನ ಕಾಲದಲ್ಲಿ ಗೀಗೀಪದ ಹಾಡುವಲ್ಲಿ ಬಹಳೇ ಪ್ರಸಿದ್ಧನಾಗಿದ್ದನು. ಆಗ ಜನಪದ ಕಲೆಯನ್ನು ಪೋಷಿಸುವ ಕಲಾಪ್ರೀಯ ಜನರೂ ಇದ್ದರು. ಕಲಾರಸಿಕರ ಅಭಿಪ್ರಾಯದಂತೆ ಗೀಗೀ ಪದಕ್ಕೆ ವಸ್ತುವನ್ನಾಗಿರಿಸಿಕೊಂಡು ಹಾಡಿ ಅವರು ಕೊಟ್ಟಷ್ಟು ಸಂತೃಪ್ತ ಜೀವನ ಸಾಗಿಸುವ ಮಲ್ಲಪ್ಪನು ಒಮ್ಮೆ ಮಠಕ್ಕೆ ಬಂದು ಶ್ರೀ ನಾಗೇಂದ್ರ ಸ್ವಾಮಿಗಳಿಗೆ ಅಭಿವಂದಿಸಿದನು ಆಗ ಸ್ವಾಮಿಗಳು ನಾವು-ನೀವು ಒಂದೇ ಎಂದು ಅವನಿಗೆ ಲಿಂಗ ಕಟ್ಟಿದರು ಮತ್ತು ಮಠದ ಸುತ್ತಲಿನ ಎಲ್ಲ ಗಿಡಗಂಟಿಗಳಿಗೂ ಆ ಮಲ್ಲಪ್ಪನ ಹಸ್ತದಿಂದ ನಾವೂ ನೀವು ಒಂದೇ ಎಂದು ಅವನಿಗೆ ಲಿಂಗಕಟ್ಟುತ್ತಾ ಹೋಗು ಎಂದು ಆಜ್ಞಾಪಿಸಿದರು. ಗುರುವಚನ ಪಾಲಿಸಿದ ಮಲ್ಲಪ್ಪನು ಎಲ್ಲ ಗಿಡಕಂಟಿಗಳಿಗೆ ಲಿಂಗ ಕಟ್ಟಿ ಅದೇ ವಾಕ್ಯವನ್ನು ಉಚ್ಚರಿಸುತ್ತಾ ಬಂದನು ಸ್ವಾಮಿಗಳು ಹರ್ಷಭರಿತರಾದರು. ಹೀಗೆ ಶರಣರ ಸಮಸಮಾಜವನ್ನು ನಿರ್ಮಿಸುವ ಮಹತ್ತರ ಆಶಯವನ್ನು ನಾಗೇಂದ್ರ ಶಿವಯೋಗಿಗಳು ನಡೆನುಡಿಯಲ್ಲೂ ಕಾಣಬಹುದಾಗಿದೆ.

*ಕೊನೆಯ ದಿನಗಳು*
ಸದ್ಗುರುವಿನ ಚಿತ್ತ ಯಾರಿಗೂ ತಿಳಿಯದು ಶ್ರೀ ನಾಗೇಂದ್ರಸ್ವಾಮಿಗಳ ಪ್ರಕೃತಿಯೂ ಇಳಿಯುತ್ತ ಬಂದಿತು. ಶರೀರಕ್ಕೆ ಬಾವು ಬರತೊಡಗಿತು ಮಠಕ್ಕೆ ಬಂದ ಭಕ್ತರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಭಿನ್ನವಿಸತೊಡಗಿದರು. ಎಂಥೆಂಥ ಮಹಾರೋಗವನ್ನು ಗುಣಪಡಿಸಿದ ನೀವು ನಿಮ್ಮ ಆರೋಗ್ಯವನ್ನು ಕಾಪಾಡಲಾರಿರಾ? ಎಂದು ಪ್ರಶ್ನಿಸಿದಾಗ, ಇದು ಪ್ರಾರಬ್ದಬೋಗ ಇದನ್ನು ಅನುಭವಿಸಲೇಬೇಕು ಎಂದು ಹೇಳಿ ಸುಮ್ಮನಾಗಿಬಿಡುತ್ತಿದ್ದರು. ಭಕ್ತಸ್ತೋಮ ದೂರದೂರದಿಂದ ಬರತೊಡಗಿತು. ಭಕ್ತರು ನಡೆದಾಡುವ ದೇವರನ್ನೇ ಕಳೆದುಕೊಳ್ಳುತ್ತಿದ್ದೇನೆ ಎಂದು ದುಖಿಃಸಿದಾಗ “ ಆತ್ಮ ಅಮರ, ಅವಿನಾಶಿ, ಅದು ಸಾಯುವದಿಲ್ಲ ಹುಟ್ಟು ಸಾವು ದೇಹಕ್ಕೆ ಮಾತ್ರ, ಇದು ಸೃಷ್ಠಿಯ ನಿಯಮ ಹಳೆಯ ಬಟ್ಟೆಗಳನ್ನು ಬಿಟ್ಟು ಹೊಸ ಬಟ್ಟೆಯನ್ನು ತೊಟ್ಟುಕೊಳ್ಳುವಂತೆ ಈ ದೇಹ ಬಿಟ್ಟು ಬೇರೆ ದೇಹ ಪಡೆಯುವುದೇ ಜನನ ಮರಣ. ಆತ್ಮವು ಹೊಳೆಯುವ ಜ್ಯೋತಿ ಎಂಬುದಾಗಿ ಭಕ್ತರಿಗೆ ಆತ್ಮದ ಪರಿಚಯ ಮಾಡಿಕೊಟ್ಟರು.
ಒಂದು ದಿನ ಸ್ವಾಮಿಗಳು ಬೆಳಿಗ್ಗೆ ಎದ್ದು ನಿತ್ಯಕರ್ಮ ಮುಗಿಸಿ ಭಕ್ತರೊಂದಿಗೆ ಸಮಾಲೋಚಿಸುತ್ತಾ ದನಕರುಗಳಿಗೆ ಮೇವು ಹಾಕುತ್ತಾ ಪೂಜಾ ಕಾರ್ಯಗಳನ್ನು ನೇರವೇರಿಸುತ್ತಾ ಅತ್ಯಾನಂದದಿ ಕಾಲಕಳೆದರು ವೀಲಕ್ಷಣ ತೇಜವು ಮುಖಾರವಿಂದದಿಂದ ಹೊರಸೂಸುತ್ತಿತ್ತು. ಸಾಯಂಕಾಲ ಪೂಜೆ ಮುಗಿಸಿ ಸಮಾಧಿ ಸ್ಥತಿಯಲ್ಲಿ ಕುಳಿತರು. ಅರೆಮುಚ್ಚಿದ ಕಂಗಳಿಂದ ಧ್ಯಾನಸ್ಥರಾದರು ಇದೇ ಸಮಯದಲ್ಲಿ 18-11-1936 ರಂದು ಗುರುವಾರ ದಿವಸ ಪೂಜ್ಯರ ಪ್ರಾಣೋತ್ಕ್ರಮಣವಾಯಿತು. ಬಯಲಲ್ಲಿ ಬಯಲಾದರು.ಎಲ್ಲ ಭಕ್ತರು ಓಂ ನಮಃ ಶಿವಾಯ ಮಹಾಮಂತ್ರ ಘೋಷಣೆ ಮಾಡುತ್ತಿದ್ದರು. ಅವರ ಅಗಲುವಿಕೆ ಎಲ್ಲರ ಮನಸ್ಸಿನಲ್ಲಿ ಗಾಢ ಪರಿಣಾಮ ಬೀರುತ್ತಿತ್ತು. ಭಕ್ತರ ಸಂಕಟ ನಿವಾರಿಸಿದ, ಬೇಡಿದ ಭಕ್ತರಿಗೆ ಕಾಮದೇನುವಾದ, ನೊಂದವರ ಕಣ್ಣೀರು ಒರೆಸಿದ, ಮಹಿಳೆಯರಿಗೆ ತಂದೆಯಂತೆ ಕೃಪಾ ಛತ್ರ ಇಟ್ಟಿಕೊಂಡ ಸದ್ಗುರು ನಾಗೇಂದ್ರ ಮಹಾಸ್ವಾಮಿಗಳು ಭೌತಿಕವಾಗಿ ಇಲ್ಲವಾದರೂ ಇಂದಿಗೂ ಸೂಕ್ಷ್ಮವಾಗಿ ಇದ್ದಾರೆಂಬ ಅಚಲಭಕ್ತಿ ಭಾವಿಕರಲ್ಲಿದೆ.

*ದಣಿವರಿಯದ ವ್ಯಕ್ತಿತ್ವ*
ಶ್ರೀ ನಾಗೇಂದ್ರ ಸ್ವಾಮಿಗಳು ಭೂಮಾತೆಯ ಸೇವೆಯನ್ನು ನಿಷ್ಠೆಯಿಂದ ಮಾಡುವ ಸಂಕಲ್ಪ ಮಾಡಿ ಒಕ್ಕಲುತನದ ಕಾರ್ಯವನ್ನು ಆರಂಭಿಸಿದರು.ತಂದೆ ಕಲ್ಲಯ್ಯನವರಿಗೆ ಸ್ವಲ್ಪ ವಿಶ್ರಾಂತಿ ಸಿಗಹತ್ತಿತು. ಅಷ್ಟೇನೂ ಹೇಳಿಕೊಳ್ಳುವಷ್ಟು ಜಮೀನು ಇಲ್ಲದೇ ಹೋದರೂ ಇದ್ದಷ್ಟು ಜಮೀನು ಸ್ವಚ್ಛವಿರಬೇಕು. ಕಸ ಕಳೆಯಿಂದ ಮುಕ್ತವಿರಬೇಕೆಂಬ ಸದುದ್ದೇಶದಿಂದ ಬೆಳಗಿನ ಜಾವ ನಾಲ್ಕು ಗಂಟೆಗೆ ಎದ್ದು ತಮ್ಮ ಪ್ರಾತಃರ್ವಿಧಿಗಳನ್ನು ಮುಗಿಸಿಕೊಂಡು ಆರುಗಂಟೆಯವರೆಗೆ ಸ್ನಾನ, ಪೂಜೆ, ಜಪಗಳನ್ನು ಮುಗಿಸಿಕೊಂಡು ಏಳುಗಂಟೆಗೆ ರೊಟ್ಟಿಬುತ್ತಿಕಟ್ಟಿಕೊಂಡು ಹೆಗಲಿಗೆ ಗುದ್ದಲಿ ಏರಿಸಿ ಹೊಲಕ್ಕೆ ಹೋಗುತ್ತಿದ್ದರು. ಹೊಲದಲ್ಲಿ ಬೆಳೆದಿದ್ದ – ಕಂಟಿಗಳನ್ನು ಸವರಿ ನೆಲ ಅಗೆಯಲಿಕ್ಕೆ ಆರಂಭಿಸಿದರೆಂದರೆ ಎಡಬಿಡದೆ ಹನ್ನೊಂದು ಗಂಟೆಗಳವರೆಗೆ ದುಡಿಯುವರು. ಈ ತರಹದ ದುಡಿಮೆಯನ್ನು ಕಂಡು ಇತರ ರೈತರು ಬೆರಳು ಕಚ್ಚುತ್ತಿದ್ದಲ್ಲದೇ ಏನ್‌ ಸ್ವಾಮಿಗಳೇ ಇಷ್ಟು ದುಡಿದರೆ ಹೇಗೆ? ಸ್ವಲ್ಪವಾದರೂ ವಿಶ್ರಾಂತಿ ಬೇಡವೇ? ಎಂದು ಯಾರಾದರೂ ಅಂದರೆ ಇದು ನಾಶವಾಗುವ ಶರೀರ, ಜೀವಿಸಿರುವತನಕ ಇದನ್ನು ದುಡಿಸಿ, ದುಡಿಸಿ ಮಣಿಸಬೇಕು. ಈ ದೇಹವು ಅನಿತ್ಯ, ನಿತ್ಯವನ್ನು ಕೊಡಬೇಕಾದರೆ ಅನಿತ್ಯ ತೊರೆಯಬೇಕು. ಅದಕ್ಕಾಗಿ ಮಾನವನ ಸಹಜ ಧರ್ಮವಾದ ಕಾಯಕ ವೃತ್ತಿಯನ್ನು ನಂಬಿ ಬದುಕಬೇಕೆಂದು ಬೋಧಿಸುತ್ತಿದ್ದರು.
ತನುವ ತೋಂಟವ ಮಾಡಿ, ಮನವ ಗುದ್ದಲಿಯ ಮಾಡಿ,
ಅಗೆದು ಕಳೆದೆನಯ್ಯಾ ಭ್ರಾಂತಿನ ಬೇರ;
ಒಡೆದು ಸಂಸಾರವ ಹೆಂಟೆಯ, ಬಗೆದು ಬಿತ್ತಿದೆನಯ್ಯಾ ಬ್ರಹ್ಮ ಬೀಜವ;
ಅಖಂಡ ಮಂಡಲವೆಂಬ ಬಾವಿ, ಪವನವೇ ರಾಟಾಳ,
ಸುಷುಮ್ನ ನಾಳದಿಂದ ಉದಕವ ತಿದ್ದಿ,
ಬಸವಗಳೈವರು ಹಸಗೆಡಿಸಿಹವೆಂದು, ಸಮತೆ ಸೈರಣೆ ಎಂಬ ಬೇಲಿಯನಿಕ್ಕಿ,
ಆವಾಗಲೂ ಈ ತೋಟದಲ್ಲಿ ಜಾಗರವಿದ್ದು, ಸಸಿಯ ಸಲಹಿದೆನು ಕಾಣಾ ಗುಹೇಶ್ವರಾ II
ಎಂಬ ವಚನೋಕ್ತಿಯಂತೆ ಅಧ್ಯಾತ್ಮದ ಉತ್ತುಂಗ ಶಿಖರವೇರಿ ಕಾಯಕದಲ್ಲಿ ನಿರತರಾಗುತ್ತಿದ್ದರು. ಯಾವುದೇ ಗ್ರಂಥವನ್ನು ಓದದೇ, ವಿಶ್ವವಿದ್ಯಾಲಯದ ಪದವಿ ಪಡೆಯದೇ ಅದ್ಭುತವಾದ ಅಲೌಕಿಕ ವಿಷಯ ಹೇಳುವ ರಸ ಋಷಿಗಳಾಗಿದ್ದರು. ಹೊಲದಲ್ಲಿ ಅವ್ಯಾಹತವಾಗಿ ಕೆಲಸ ಮಾಡಿದರೂ ದಣಿವೆಂಬುದು ಇವರಿಗೆ ಗೊತ್ತೇ ಇರಲಿಲ್ಲ. ತಾವಾಡಿದುದನ್ನು ಆಚರಿಸುತ್ತಿದ್ದರು ಅಂದರೆ ಶರಣರಂತೆ ನುಡಿದಂತೆ ನಡೆ, ನಡೆದಂತೆ ನುಡಿ ಇತ್ತು. ಪ್ರತಿ ಗುದ್ದಲಿ ಪೆಟ್ಟು ಹಾಕುವಾಗ ಓಂ ನಮಃ ಸಿದ್ಧಾಯ ಎಂಬ ನಾಮೋಚ್ಚಾರಣೆಯಲ್ಲಿ ಮಗ್ನರಾಗುತ್ತಿದ್ದರಿಂದ ಹೊರಗಿನ ಯಾವುದೂ ಅರಿವಾಗುತ್ತಿರಲಿಲ್ಲ. ತಮ್ಮ ಮನಸ್ಸಿನ ಜೊತೆಗೆ ತಾವೇ ಮಾತನಾಡಿಕೊಳ್ಳುತ್ತ ಜರಾಮರಣದಿಂದ ಈ ಪ್ರಪಂಚವು ಸ್ಥಿರವಲ್ಲ ನಿತ್ಯ ನೆನೆ ಓ ನಮಃ ಸಿದ್ಧಾಯ ಎಂದು ಆತ್ಮಸಾಕ್ಷಾತ್ಕಾರದಿಂದ ಜೀವನ ಸಾಗಿಸುತ್ತಿದ್ದರು.
ಹೊಲದ ಹಾದಿ ಹಿಡಿದು ಯಾರಾದರೂ ಸಾಧು ಸಂತರು ಬಂದರೆ ಶ್ರೀ ನಾಗೇಂದ್ರ ಶಿವಯೋಗಿಗಳು ಅತ್ಯಂತ ಆದರದಿಂದ ಅವರಿಗೆ ಅಭಿನಂದಿಸಿ ಆತ್ಮ ಪರಮಾತ್ಮ ವಿಚಾರದಲ್ಲಿ ಗಹನವಾದ ಚರ್ಚೆ ಮಾಡುತ್ತಿದ್ದರು. ಅವರಿಗೆ ತಮ್ಮಲ್ಲಿದ್ದ ಹಣ, ಅರಿವೆ,, ಊಟ ಹೀಗೆ ಎಲ್ಲವುಗಳನ್ನು ಆನಂದದಿಂದ ನೀಡಿ ತೃಪ್ತಿಪಡಿಸುತ್ತಿದ್ದರು. ಸಾಧು ಸಂತರಲ್ಲದವರೂ ಕೂಡ ಏನಾದರೂ ಕೇಳಿದರೆ ಮರು ವಿಚಾರ ಮಾಡದೇ ತಮ್ಮಲ್ಲಿದ್ದ ವಸ್ತುಗಳನ್ನು ಕೊಟ್ಟು ಬಿಡುವ ತ್ಯಾಗ ಗುಣವಿತ್ತು. ಎದುರಿಗೆ ಬೇಡಿ ಬಂದವನು ಆ ಗುಣ ರೂಪನ ಸ್ವರೂಪವೇ ಎಂದು ಭಾವಿಸಿ ಕೊಟ್ಟು ತೃಪ್ತಿಯಾಗುತ್ತಿದ್ದರು. ಲಾಂಛನಕ್ಕೆ ಶರಣೆಂಬೆ ಎಂಬ ಅಣ್ಣ ಬಸವಣ್ನನ ತತ್ವವು ಇವರ ಜನ್ಮಜಾತ ಗುಣವಾಗಿದ್ದಿತು. ಈ ಎಲ್ಲ ವಸ್ತುಗಳನ್ನು ನಾನು ಹುಟ್ಟುವಾಗ ತಂದಿಲ್ಲ. ನಾನು ಹೋಗುವಾಗಲೂ ಒಯ್ಯುವುದಿಲ್ಲ. ನಡುವೆ ಈ ವಸ್ತುಗಳು ನನ್ನವು ಹೇಗಾಗುತ್ತವೆ? ಎಂಬ ಸಾರ್ವತ್ರಿಕ ಸತ್ಯವನ್ನು ಅನುಷ್ಟಾನಕ್ಕೆ ತಂದ ಮಹಾನುಭಾವ ಪರಮಾತ್ಮನ ವಸ್ತುವನ್ನು ಪರಮಾತ್ಮನಿಗೇ ಒಪ್ಪಿಸುತ್ತಿರುವೆ ಎಂಬ ವನೀತ ಭಾವದಿಂದ ಕೊಟ್ಟು ಬಿಡುತ್ತಿದ್ದರು. ತಮ್ಮ ಮನೆಯವರಿಗೆ ಆವಸ್ತು ಇಲ್ಲದೇ ಹೋದರೆ ತೊಂದರೆ ಆದೀತೆಂಬ ವಿಚಾರವನ್ನೂ ಕಿಂಚಿತ್ತೂ ಮಾಡುತ್ತಿರಲಿಲ್ಲ.
ಕೈಯಲ್ಲಿ ಒಂದು ಬೆತ್ತ ಹರಕು ಅರಿವೆ(ಕೆಲವೊಮ್ಮೆ ಲಂಗೋಟಿ ಮಾತ್ರ) ಈ ವೇಷದಿಂದ ಯಾರಿಂದಲೂ ತೊಂದರೆಯಾಗದ ರುದ್ರಭೂಮಿಯಲ್ಲಿ ಕಾಲಕಳೆಯತೊಡಗಿದರು. ಇವರು ದೈವತ್ವದ ವಿಚಾರದ ಜೊತೆಗೆ ಕಾಯಕವನ್ನೂ ಬೆಳೆಸಿಕೊಂಡು ನಡೆಯುತ್ತಿದ್ದರು. ಕಾಯಕ ಹಾಗೂ ದೈವತ್ವ ಇವೆರಡೂ ಒಂದೇ ನಾಣ್ಯದ ಎರಡು ಮುಖಗಳು, ಕಾಯಕವಿಲ್ಲದೇ ದೈವತ್ವ ಇಲ್ಲ, ದೈವತ್ವ ಇಲ್ಲದೇ ಕಾಯಕವಿಲ್ಲ. ಎಂದು ಬಲವಾಗಿ ನಂಬಿ ನಡೆಯುತ್ತಿದ್ದರು. ಅಣ್ಣ ಬಸವಣ್ಣನ ಕಾಯಕವೇ ಕೈಲಾಸ ಎಂಬ ಉಕ್ತಿಯನ್ನು ಕರಗತ ಮಾಡಿಕೊಂಡಿದ್ದರು. ಹೀಗೆ ಬಡೇಕೊಳ್ಳದ ನಾಗಯ್ಯಜ್ಜನವರು ಶರಣರಂತೆ ಬಾಳಿ ಬದುಕಿ ಮಹಾನ್‌ ಶಿವಯೋಗಿಗಳಾದರು. ಹಾಗೂ ಬಡೆಕೊಳ್ಳದ ಸುತ್ತಮುತ್ತಲಿನ ಜನರಿಗೆ ಪವಾಡ ಪುರುಷರಾದರು. ಜನಮನ ಹೃದಯದಲ್ಲಿ ಚಿರಂತನವಾಗಿ ನೆಲೆಯೂರಿದರು.

*ಆಧಾರಗ್ರಂಥಗಳು*
1. ಶ್ರೀ ನಾಗೇಂದ್ರ ಶಿವಯೋಗಿ ಬಡೆಕೊಳ್ಳ (ತಾರಿಹಾಳ) – ವ್ಹಿ.ಜಿ ಪಾಟೀಲ,ಬೆಳಗಾವಿ.
2. ಶ್ರೀ ನಾಗೇಂದ್ರ ಸ್ವಾಮಿಗಳ ಪುಣ್ಯಚರಿತ್ರೆ – ಅರುಣ ರಾ. ಕುಲಕರ್ಣಿ
3. ಬಡೆಕೊಳ್ಳಮಠದ ಶಿವಯೋಗಿ ಶ್ರೀ ನಾಗೇಂದ್ರ ಮಹಾಸ್ವಾಮಿಗಳವರ ಚರಿತ್ರೆ – ಶ್ರೀಶೈಲ ಕಳಸದ
4. ಭಕ್ತರ ಮನದ ಇಚ್ಛೆ ಪೂರೈಸುವ ಬಡೇಕೊಳ್ಳಮಠ – ವಿಜಯ ಕರ್ನಾಟಕ ಪತ್ರಿಕೆ ದಿನಾಂಕ 24-11-2023

ಡಾ. ದಾನಮ್ಮ ಝಳಕಿ

Don`t copy text!