ತನುವ ತೋಟವ,ಮನವ ಗುದ್ದಲಿಯ ಮಾಡಿ,
ಅಗಿದು ಕಳೆದನಯ್ಯ ಭ್ರಾಂತಿನ ಬೇರ.ಒಡೆದು ಸಂಸಾರದ
ಹೆಂಟೆಯ,ಬಗಿದು ಬಿ toತ್ತಿದೆನಯ್ಯ ಬ್ರಹ್ಮ ಬೀಜವ.
ಅಖಂಡ ಮಂಡಲವೆಂಬ ಬಾವಿ,ಪವನವೇ ರಾಟಾಳ,
ಸುಷುಮ್ನನಾಳದಿಂದ ಉದಕವ ತಿದ್ದಿ,ಬಸವಗಳೈವರು
ಹಸಗೆಡಿಸಿಹವೆಂದು ಸಮತೆ ಸೈರಣೆಯೆಂಬ ಬೇಲಿಯನಿಕ್ಕಿ ,
ಆವಾಗಳು ಈ ತೋಟದಲ್ಲಿ ಜಾಗರವಿದ್ದು ಸಸಿಯ ಸಲಹಿದೆನು ಕಾಣಾ ಗುಹೇಶ್ವರಾ.
ವಚನ ವಿಶ್ಲೇಷಣೆ
ಹೀಗೆ ಶರಣರ ವಚನಗಳು ಓದಲು ಸರಳ ಆದರೆ ಅರ್ಥ ಬಹಳ.ಮತ್ತು ತತ್ವಾರ್ಥಗಳನ್ನು ಒಳಗೊಂಡಿರುತ್ತವೆ.
ಚರಜಂಗಮರಾಗಿ ನಾಡನ್ನೆಲ್ಲಾ ಸುತ್ತುತ್ತಾ ಬಂದ ಅಲ್ಲಮಪ್ರಭುಗಳು ಗೊಗ್ಗಯ್ಯನ ತೋಟಕ್ಕೆ ಬರುತ್ತಾರೆ.ಆಗ ಗೊಗ್ಗಯ್ಯ ತಾನು ಕೃಷಿ ಮಾಡಿದ ತೋಟವನ್ನು ತೋರಿಸುತ್ತಾ ಕೃಷಿಯಲ್ಲಿ ತಾ ಹೇಗೆಲ್ಲಾ ಸಾಧನೆ ಮಾಡಿದ್ದೇನೆ ಎಂದು ಅಹಂಭಾವದಿಂದ ಹೇಳಿಕೊಳ್ಳುತ್ತಾನೆ.ಕೃಷಿ ಕಾಯಕದ ಚಿತ್ರವನ್ನು ಕೊಡುತ್ತಾನೆ.ನಾನು ಇಷ್ಟೆಲ್ಲ ಮಾಡಿದೀನಿ,ನೀವೇನು ಮಾಡಿರಿ ಹೀಗೆ ಸಂಚಾರ ಮಾಡ್ತಾ ಹೊಂಟಿರಿ ಅಂದಾಗ ಅಲ್ಲಮಪ್ರಭು ಹೇಳ್ತಾರೆ ‘ಗೊಗ್ಗಯ್ಯ ನೀನು ಮಾಡಿರುವದು ಒಂದು ಬಹಿರಂಗ ತೋಟ,ಲೌಕಿಕ ಜೀವನದಲ್ಲಿ,ಕಾಯಕದ ಹಿನ್ನೆಲೆಯಲ್ಲಿ ಮಾಡಿರುವ ತೋಟ.ನಾನು ಅನುಭಾವದ ಹಿನ್ನೆಲೆಯಲ್ಲಿ ಅಂತರಂಗದ ತೋಟ ಮಾಡೀನಿ.ನೀನು ಮಾಡಿರುವ ತೋಟ ಅದರ ಅಭಿವೃದ್ಧಿ ಅದು ಬಹಿರಂಗವಾದದ್ದು.ನಾನು ಮಾಡಿರುವ ಸಾಧನೆಯ ತೋಟ ಅಂತರಂಗದ್ದು.ಇಲ್ಲಿ ಗೊಗ್ಗಯ್ಯ ಮತ್ತು ಅಲ್ಲಮಪ್ರಭುಗಳು ಪ್ರತೀಕಾತ್ಮಕವಾಗಿ ಬಳಕೆಯಾದರೂ ಕೂಡ ವ್ಯಕ್ತಿಯಲ್ಲಿ ಪ್ರತಿಯೊಬ್ಬ ಭಕ್ತನ ಬದುಕಿನಲ್ಲಿ ಅಂತರಂಗ ಮತ್ತು ಬಹಿರಂಗ ಎರಡೂ ಇವೆ.ಪ್ರತಿಯೊಬ್ಬ ಭಕ್ತನಲ್ಲಿ ಅಂತರಂಗದಲ್ಲಿ ಜ್ಞಾನವಾಗಿ ಇರುತ್ತದೆ.ಬಹಿರಂಗದಲ್ಲಿ ಕ್ರಿಯೆಯಾಗಿ ವ್ಯಕ್ತವಾಗುತ್ತವೆ.ಅಂತರಂಗದಲ್ಲಿ ಅರಿವು,ಬಹಿರಂಗದಲ್ಲಿ ಆಚಾರ,ಅಂತರಂಗದಲ್ಲಿ ಸುಜ್ಞಾನ,ಬಹಿರಂಗದಲ್ಲಿ ಸತ್ ಕ್ರಿಯೆ.ಜ್ಞಾನ ಮತ್ತು ಕ್ರಿಯೆಗೆ ಅವಿನಾಭಾವ ಸಂಭಂದ ಇದೆ.ಒಂದನ್ನು ಬಿಟ್ಟು ಇನ್ನೊಂದು ಅಪೂರ್ಣವಾಗುತ್ತದೆ.ಅಲ್ಲಮಪ್ರಭು ಹೇಳ್ತಾರೆ ,ಗೊಗ್ಗಯ್ಯ ನೀನು ಅಂತರಂಗದ ಕೃಷಿ ಮಾಡಬೇಕು,ಅಂತರಂಗದ ಕೃಷಿ ಅಂದರೆ ಆಧ್ಯಾತ್ಮದ ಕೃಷಿ,ಪಾರಮಾರ್ಥಿಕ ಕೃಷಿ,ಬಹಿರಂಗದ್ದು ಲೌಕಿಕ ಕೃಷಿ.ಈ ಲೌಕಿಕ ಮತ್ತು ಪಾರಮಾರ್ಥಿಕ ಎರಡೂ ಸರಿಯಾಗಿ ನಡೆಸುವವ ಆತ ಶರಣ.ಶರಣರಿಗೆ ಲೌಕಿಕ ಮತ್ತು ಪಾರಮಾರ್ಥಿಕ ಎರಡೂ ಭಿನ್ನ ಭಿನ್ನ ಅಲ್ಲ.ಶರಣರ ಪೂರ್ವದಲ್ಲಿ ಲೌಕಿಕವನ್ನು ಸಂಸಾರಿಗಳು ಅನ್ನುತ್ತಿದ್ದರು.ಪಾರಲೌಕಿಕವನ್ನು ಸಂನ್ಯಾಸಿಗಳ ಸಾಧನೆ ಅನ್ನುತ್ತಿದ್ದರು.ಶರಣ ರು ಸಂಸಾರ ಮತ್ತು ಸನ್ಯಾಸ ಇವೆರಡನ್ನೂ ನಿರಸನಗೈದರು.ಶರಣರಿಗೆ ಸಂಸಾರ ಅನ್ನುವದು ಕೇವಲ ಇಂದ್ರಿಯಜನ್ಯ ಭೋಗ ಅಲ್ಲ,ಸನ್ಯಾಸ ಅಂದರೆ ಹೆಂಡತಿ ಮಕ್ಕಳನ್ನು ತ್ಯಾಗ ಮಾಡಿ ಮೋಕ್ಷ ಸಾಧನೆಗಾಗಿ ಕಾಡಿಗೆ ಹೋಗಿ ಗೆಡ್ಡೆ ಗೆಣಸು ತಿಂದು ತಪಸ್ಸು ಮಾಡುವದಲ್ಲ. ಶರಣರಕ್ಕಿಂತ ಮುಂಚಿನವರ ದೃಷ್ಟಿಯಲ್ಲಿ ಹಾಗಿತ್ತು.ಶರಣರು ಇವೆರಡೂ ಅಂಶಗಳನ್ನು ಅಲ್ಲಗಳೆದು ಲೌಕಿಕ ಭೋಗ ಜೀವನವು ಸರಿ ಅಲ್ಲ,ಕೇವಲ ಪಾರಮಾರ್ಥಿಕ ಸನ್ಯಾಸ ಜೀವನವು ಸರಿ ಅಲ್ಲ ಅಂದರು.ಶರಣರು ಎರಡನ್ನೂ ಸಮನ್ವಯಗೊಳಿಸಿ “ಲಿಂಗಭೋಗೊಪಭೋಗಜೀವನ”ಅನ್ನುವುದನ್ನು ತೋರಿಸಿ ಕೊಟ್ಟರು.ಬಹಿರಂಗದಲ್ಲಿ ತೋಟ ಮಾಡಲು ಎಕರೆನೋ ಎಷ್ಟೋ ತೋಟ ಮಾಡ್ತೀವಿ,ಆದರೆ ಇಲ್ಲಿ ನಮ್ಮ ತನು ಅಂದರೆ ನಮ್ಮ ದೇಹವನ್ನೇ ತೋಟ ಮಾಡಬೇಕು,ತೋಟದಲ್ಲಿ ಆಳವಾಗಿ ಬೆಳೆದಿರುವ ಕರಿಕೆ ಬೇರುಗಳನ್ನುಅಗಿದು ತೆಗೆಯಬೇಕು.ಈ ದೇಹಕ್ಕೆ ಮನಸ್ಸೇ ಗುದ್ದಲಿ ಆ ಗುದ್ದಲಿಯಿಂದ ಭ್ರಾಂತಿನ ಮೂಲ ಬೇರುಗಳನ್ನು ಆಳವಾಗಿ ಅಗಿದು ತೆಗೆಯಬೇಕು.ಇಲ್ಲವಾದರೆ ಅವು ಮತ್ತ ಮತ್ತ ಬೆಳಿತಾವು.ಭ್ರಾಂತಿ ತನುವಿನಲ್ಲಿ ಎಲ್ಲಿದೆ ಅಂದರೆ ತನುವಿನ ತೋಟದಲ್ಲಿ ಮನ ಇದೆ ಮನದ ಗರ್ಭದಲ್ಲಿ ಭಾವ ಇದೆ.ತನು ಮನ ಭಾವ .ಭಾವದಲ್ಲಿ ಎರಡು ವಿಧ 1ಬಯಕೆ 2 ಭ್ರಾಂತಿ.ಆ ಭಾವದಲ್ಲಿ ಭ್ರಾಂತಿ ಇದ್ದರೆ ಮನುಷ್ಯ ಭ್ರಮೆಗೆ ಒಳಗಾಗುತ್ತಾನೆ.ಭ್ರಾಂತಿಗೆ ಒಳಗಾದರೆ ಸತ್ಯದ ದರ್ಶನ ಆಗುವದಿಲ್ಲ.ತನುವೆಂಬ ತೋಟದಲ್ಲಿ ಮನಸ್ಸು ಎಂಬ ಗುದ್ದಲಿ ಹಿಡಿದು ಭ್ರಾಂತಿಯ ಬೇರುಗಳನ್ನು ಅಗಿದು ತೆಗೆಯಬೇಕು.ಇವು ಭಾವ ಭೂಮಿಯ ಆಳದಲ್ಲಿವೆ ಈ ಭ್ರಾಂತಿಯ ಬೇರುಗಳೕ ಮನುಷ್ಯನಿಗೆ ಭವಕ್ಕೆ ಕಾರಣವಾಗುತ್ತವೆ.ಭಾವಶುಧ್ಧವಾಗದ ವಿನಹ ಭವದ ಬೇರು ಭವದಿಂದ ಮುಕ್ತವಾಗಲು ಸಾಧ್ಯವಿಲ್ಲ.ಅಗಿದ ಬಳಿಕ ದೊಡ್ಡ ದೊಡ್ಡ ಮಣ್ಣಿನ ಹೆಂಟೆಗಳು ಬರುತ್ತವೆ.ಅವು ಸಂಸಾರದ ಹೆಂಟೆಗಳು.ಇವೆಲ್ಲ ಪ್ರತಿಕಾತ್ಮದ ಪದಗಳು.ಸಂಸಾರ ಅಂದರೆ ಮನುಷ್ಯನಿಗೆ ಐದು ಜ್ಞಾನದ ರೂಪದ ಇಂದ್ರಿಯಗಳು,ಐದು ಕರ್ಮದ ರೂಪದ ಇಂದ್ರಿಯಗಳು.ಹೀಗೆ ದಶವಿಧ ಇಂದ್ರಿಯಗಳಲ್ಲಿ ನಮ್ಮ ಬದುಕು ನಡೆಯುತ್ತದೆ.ಐದು ಜ್ಞಾನೆಂದ್ರೀಯಗಳು ಕಣ್ಣು ಕಿವಿ ಮೂಗು ನಾಲಿಗೆ ಚರ್ಮ.ಮನಸ್ಸು ಅಂತರಂಗದ ನಾಲ್ಕು ಇಂದ್ರೀಯ.ಐದು ಕರ್ಮದ ಇಂದ್ರೀಯಗಳು ವಾಕ್,ಪಾಣಿ,ಪಾದ,ಗುಹ್ಯ,ಗುದ. ಇವು ತರ್ಮೇಂದ್ರಿಯಗಳು.ಹತ್ತು ಪ್ರಕಾರದ ಇಂದ್ರೀಯಗಳ ಮುಖಾಂತರ ಭೋಗ ಇದೆ.ಈ ಹತ್ತು ಇಂದ್ರಿಯಗಳು ತಮ್ಮ ಪಾಡಿಗೆ ತಾವು ನಿಷ್ಕ್ರಿಯ .ಎಂದೂ ಕ್ರಿಯಾಶೀಲವಾಗಿ ಕೆಲಸ ಮಾಡುವುದಿಲ್ಲ.ಆತ್ಮ ಎಂದರೆ ಚೈತನ್ಯ,ನಮ್ಮ ಶರಣರು ಅದನ್ನು ಚಿತ್ ಚೈತನ್ಯ ಅಂತ ಕರೆದರು.ಜೀವವು ಚೈತನ್ಯದೊಂದಿಗೆ ಸಂಯೋಗಗೊಂಡಿರುವದರಿಂದ ಜೀವಾತ್ಮ ಅಂತ ಕರೆದರು. ಜೀವಾತ್ಮ ಎಲ್ಲ ಭೋಗವನ್ನು ಭೋಗಿಸುತ್ತದೆ.ಈ ಜೀವಾತ್ಮ ದಶವಿಧ ಇಂದ್ರಿಯಗಳ ಮುಖಾಂತರ ಭೋಗಿಸುತ್ತದೆ.ಕಣ್ಣಿನಿಂದ ನೋಡಿದಾಗ ಬೇಕು ಅಂತ ಭಾವಿಸುತ್ತದೆ.ಶರಣರು ಭಾವವನ್ನು ಸೂಕ್ಷ್ಮವಾಗಿ ಗಮನಿಸಿದರು.ಶರಣರ ಪೂರ್ವದಲ್ಲಿರುವ ಆಧ್ಯಾತ್ಮ ಜೀವಿಗಳು ಮನಸ್ಸಿಗೆ ನಿಂತಿದ್ದರು.
ಮನವೇ ಮನುಷ್ಯನ ಬಂಧನಕ್ಕೂ,ಮೋಕ್ಷಕ್ಕೂ ಕಾರಣ ಅಂತ ಅಲ್ಲಿಗೆ ನಿಂತಿದ್ದರು.ಮನಸ್ಸು ಕಂಟ್ರೋಲ್ ಮಾಡಲಿಕ್ಕೆ ಪ್ರಯತ್ನ ಮಾಡಿದರು.ಆದರೆ ಶರಣರು ಈ ಮನಸ್ಸನ್ನು ದಾಟಿ ಮುಂದೆ ಹೋದರು.ಮನಸ್ಸು ತೊಂದರೆ ಕೊಡುತ್ತದೆ ಅಂದರೆ ಆ ಮನಸ್ಸಿಗೆ “ಮಹಾಲಿಂಗ ಸಂಸ್ಕಾರ” ಕೊಟ್ಟುಕೊಂಡರು.ಅದಕ್ಕೆ ಮನ,”ಘನಮನ”ಆಗಬೇಕು ಅಂದರು.ಇಲ್ಲಿ ಸಂಸಾರವೆಂಬ ಹೆಂಟೆ ಒಡೆದು ಇಂದ್ರಿಯಜನ್ಯ ಭೋಗದಲ್ಲಿ ತನ್ಮಯವಾಗಿರುವ ಜೀವಾತ್ಮ ಅದರಲ್ಲಿಯೇ ಸುಖ.ಅ ಸಂಸಾರದ ಹೆಂಟೆಗಳನ್ನು ಒಡಿಬೇಕು.ಹೆಂಟೆ ಒಡಿದು ಪುಡಿ ಪುಡಿ ಆಗಿ ಮಣ್ಣಾದ ಬಳಿಕ ಅಲ್ಲಿ ಭೂಮಿ ಹದ ಆಗುತ್ತದೆ.ಅಲ್ಲಿ ಬಗಿದು ಬಿತ್ತಿದೆನಯ್ಯ ಬ್ರಹ್ಮ ಬೀಜವ .ಬ್ರಹ್ಮಬೀಜ ಅಂದರೆ ಮೂಲ ಚೈತನ್ಯದ ಬೀಜ.ಭೂಮಿ ಹದಗೊಳಿಸಿದ ಬಳಿಕ ಬಿತ್ತಿದೆ.ಬಿತ್ತಿದ ಬಳಿಕ ಬೆಳೆದು ಒಳ್ಳೆಯ ಫಸಲು ಬರಲು ನೀರು,ಗಾಳಿ ಬೇಕಲ್ಲ,ಈ ತನುವಿನಲ್ಲಿ ಒಂದು ಬಾವಿ ಇದೆ.ಅದು ಅಖಂಡ ಮಂಡಲವೆಂಬ ಬಾವಿ.ಅದು ನಮ್ಮ ನಡುನೆತ್ತಿಯಲ್ಲಿ ಇದೆ.ಅದಕ್ಕೆ ಸಹಸ್ರ ದಳ ಕಮಲ,ಸಹಸ್ರಾರು ಚಕ್ರ *Divine window)ಅಂತ*( ಇವೆಲ್ಲ ಯೋಗದ ಪರಿಭಾಷೆ )ಕರಿತಾರೆ.ಭೂಮಿಯ ಆಳದೊಳಗೆ ಅಮೃತ ತತ್ವ ಅದಕ್ಕೇ ಅಮೃತ ಅಂತ ಕರೆದರು.ಶರಣರು ಅದಕ್ಕೆ “ಚಿದ್ ರಸ”ಅಂತ ಕರೆದರು ಈ ಚಿದ್ ರಸವೇ ಬಹಿರಂಗದಲ್ಲಿ ಪಾದೋದಕ ಅನಿಸಿದೆ.ಅಂತರಂಗದಲ್ಲಿ ಇರುವುದು ಚಿದ್ ರಸ,ಮೂಲ ಚೈತನ್ಯದ ಕರುಣಾಮೃತ.ಅಖಂಡ ಮಂಡಲವೆಂಬ ಬಾವಿಯಲ್ಲಿರುವ ಉದಕ ಹೊರಗೆ ತೆಗಿಯಬೇಕಾದರೆ ಒಂದು ರಾಟಾಳ ಬೇಕು.ಹಿಂದಿನ ಕಾಲದಲ್ಲಿ ಬಾವಿಯ ನೀರು ಹೊರಗೆ ತೆಗಿಯಬೇಕಾದರೆ ಏತ,ರಾಟಾಳ ಉಪಯೋಗಿಸುತ್ತಿದ್ದರು ಇಲ್ಲಿ ಪವನವೇ ರಾಟಾಳವಾಗಿ ನೀರು ಹೇಂಗ ಬರುತ್ತದೆ ಅಂದರೆ ಕಾಲುವೆ ಮುಖಾಂತರ ಅಂದರೆ ಸುಷುಮ್ನನಾಳದಿಂದ.ಉದಕವ ತಿದ್ದಿ .ಇಲ್ಲಿ ಪವನ ಅಂದರೆ ವಾಯು . ಸುಷುಮ್ನನಾಳದಿಂದ ಚಿದ್ ರಸ ಪ್ರವಹಿಸುತ್ತದೆ.ಮೂಲ ಚೈತನ್ಯದ ,ಪರಮ ಚೈತನ್ಯ,(Spiritual Seeds) ಆಧ್ಯಾತ್ಮದ ಬೀಜಗಳಿಗೆ,ಅಖಂಡ ಮಂಡಲವೆಂಬ ಬಾವಿಯಲ್ಲಿರುವ ಚಿದ್ ರಸ ವೆಂಬ ಜಲವನ್ನು ಸುಷುಮ್ನನಾಳದ ಮೂಲಕ ಅಲ್ಲಿಯವರೆಗೂ ಹರಿಸಿದೆ.ಇಲ್ಲಿ ಬಸವಗಳೈವರ(ಇಲ್ಲಿ ಪಶು ಮತ್ತು ಬಸವ ತತ್ಸಮ,ತದ್ಭವಗಳಾಗಿವೆ)ಐದು ಪ್ರಕಾರದ ಇಂದ್ರೀಯಗಳು,ಅಂದರೆ ಐದು ಪ್ರಕಾರದ ಪಶುಗಳು ಚಿಗುರನ್ನು,ಮೊಳಕೆ ಒಡೆಯುವಾಗ ತಿಂದು .ಹಾಕಲು ಕಾಯ್ದು ಕುಳಿತಿವೆ.ಆದ್ದರಿಂದ ಈ ತೋಟಕ್ಕೆ ಸಮತೆ ಮತ್ತು ಸೈರಣೆಯೆಂಬ ಬೇಲಿಯನ್ನು ಹಾಕಿದೆ.ಬೇಲಿ ಹಾಕಿದರೂ ಒಮ್ಮೊಮ್ಮೆ ಪಶುಗಳು ಬೇಲಿ ಹಾರಿ ಅಥವಾ ಬೇಲಿ ಮುರಿದು ಒಳಗೆ ಬರಬಹುದು.ಆಗ ಸುಮ್ಮನೆ ಕೂಡದೇ ಈ ತನುವೆಂಬ ತೋಟದಲ್ಲಿ ಯಾವಾಗಲೂ ಜಾಗರವಿದ್ದು (pure Conscience) ಪ್ರಜ್ಞಾಸ್ಥಿತಿ ಅಂದರೆ ಅಂತ್ ಪ್ರಜ್ಞೆ ಇರಬೇಕು.ಇದು ಯಾವಾಗಲೂ ಜಾಗೃತವಾಗಿರಬೇಕು.ಒಂದು ಕ್ಷಣ ಆ ಜಾಗೃತಿಯಿಂದ ಮರೆವಿಗೆ ಒಳಗಾದರೆ ಬೆಳೆದಿದ್ದ ಸಸಿ ಹಾಳಾಗುತ್ತದೆ.ಅಂದರೆ ಶುದ್ಧ ಅರಿವಿನ ಎಚ್ಚರ. ಇದು ಸದಾ ಜಾಗೃತವಾಗಿರಬೇಕು.ಹೀಗೆ ಜಾಗೃತವಾಗಿ ಸಸಿಯ ಸಲಹಬೇಕು.ಅಲ್ಲಿ ಬರುವ ಫಲ ಅಮೃತ ಫಲ ,ಅದನ್ನು ಶರಣರು ಅಂತರಂಗದ ಪ್ರಸನ್ನತೆ,ಅದೇ ಪ್ರಸಾದ ಅನ್ನುವರು.
–ಶ್ರೀಮತಿ ಸುಧಾ ಕಬ್ಬೂರ
ಧಾರವಾಡ