ಕಂದದ ಕಾಯ

ಕಂದದ ಕಾಯ

ನಾಚಿಕೆಯಾಗಬೇಕು
ಈ ದೇಹಕ್ಕೂ ಮುಪ್ಪು
ತಾಗಿಸುತ್ತೇನೆಂಬ ಭ್ರಮೆಯ
ಎಪ್ಪತ್ತಕ್ಕೆ.. …….

ಈ ದೇಹದಲ್ಲಿ ಮುಪ್ಪಿನ
ಕುರುಹು ಎಲ್ಲಿದೆ ಎಂದು
ಇದು ಒಮ್ಮೆ ಹೇಳಲಿ,

ಕ್ರಾಪು ತಿದ್ದಿ ಬಾಚಿದ
ತಲೆಯ ಕಪ್ಪು ಕೂದಲು ,
ಚಿತ್ರದ ನಾಯಕನಂತೆ
ಕಣ್ಣ ಮೇಲಿರುವ ಕನ್ನಡಕ ,
ಸುಕ್ಕನರಿಯದ ಸದಾ
ಲಕಲಕ ಹೊಳೆಯುವ ಮುಖ ,
ಇಸ್ತ್ರಿ ಮಾಡಿದ ಜುಬ್ಬಾ
ಪಂಚೆಯನುಟ್ಟು
ಹಂಗಾಮಿನ ಹುಡುಗನೇ
ದಂಗಾಗುವಂತೆ ಹರದಾರಿಯ
ಊರೂರುಗಳಿಗೆ ಎಡೆಬಿಡದೆ
ಓಡಾಡುವ ಚುರುಕುತನ,

ತಪಸಿಯೇ ಬೆರಗಾಗುವಂತೆ
ಅಲುಗಾಡದೇ ಕುಳಿತು
ಪುಸ್ತಕವನೋದುವ,
ಆಫ್ಘಾನಿನ ಗುಡ್ಡಗಳಲಿ
ಓಡಿ ಓಡಿ ಬೆವೆತು ರಕ್ತ
ಬಸಿಯುವ ಚೆಂಗೀಜ್ ಖಾನನ
ಯುದ್ಧದ ಕುದುರೆಯಂತೆ
ಲೆಕ್ಕವಿಲ್ಲದ ಹಾಳೆಗಳ ಮೇಲೆ
ದಣಿವೇ ದಣಿಯುವಂತೆ
ಬರೆಯುವ
ಕೈಯ ಬೆರಳಲಿ ಸಿಕ್ಕ ಲೆಕ್ಕಣಿಕೆಯೇ
ಹೇಳುತ್ತದೆ ಈತನೊಬ್ಬ
ನವ ಯುವಕನೆಂದು

ಓದಿನ ಅರಿವಿಗೆ ಮುಪ್ಪಿಲ್ಲ
ಬರೆಯುವ ಅಕ್ಕರಕೆ ಮುಪ್ಪಿಲ್ಲ
ಪ್ರೀತಿ ಕಕ್ಕುಲತೆ ಸೊರಗಿಲ್ಲ
ಗುಡ್ಡದಂಥ ಬದುಕಿನ
ಅಬ್ಬರಕೆ ತಲೆಬಾಗುವ
ದೌರ್ಬಲ್ಯವಿಲ್ಲ
ಬಾಳಗಿರಿಗೇ ಅಪ್ಪನಂತಿರುವ
ಈ ಗಿರಿಯಪ್ಪನ ಮುಪ್ಪಿಗೆ
ಧೈರ್ಯವಿದ್ದರೆ
ಒಮ್ಮೆ ಸಾಕ್ಷಿ ಹೇಳಿಬಿಡು
ಕಾಲವೇ……
ಸುಮ್ಮನೆ ಭ್ರಮೆಯಲಿ
ಕಳವಳಿಸಬೇಡ……
ಹೊತ್ತು ಹೊತ್ತಿಗೂ
ನಿನ್ನ ವಿರುದ್ಧವೇ
ಸಾಕ್ಷಿ ಹೇಳುತ್ತವೆ
ಈ ‘ಗಿರಿರಾಜ’ನೊರೆದ
‘ಗಿರಿ’ ಯಂಥ ಹೊತ್ತಿಗೆಗಳು,
ತಿದ್ದಿ ತೀಡಿ ಬದುಕನು
ಕಲಿತ ಈ ಅಪ್ಪನ
ಕುಡಿಗಳು.

-ಕೆ.ಶಶಿಕಾಂತ
ಲಿಂಗಸೂಗೂರ

Don`t copy text!