ವಚನ ಬೆಳಗು

ವಚನ ಬೆಳಗು

ಕನ್ನಡದ ಮೊದಲ ಕವಯಿತ್ರಿ ಅಕ್ಕನ ವಚನಗಳು ಸುಮಧುರ ಭಾವ ಗೀತೆಗಳು…ತನ್ನ ಆರಾಧ್ಯ ದೈವ ಚೆನ್ನಮಲ್ಲಿಕಾರ್ಜುನ ದೇವನನ್ನು ಆರಾಧಿಸುತ್ತಾ ಅರಸುತ್ತಾ, ನಂಬಿ ನಡೆದ ವೀರ ವಿರಾಗಿಣಿ ಅವಳು.. ವೈರಾಗ್ಯ ನಿಧಿ…
ಅಂತರಂಗವನ್ನು ವಿಶ್ಲೇಷಣೆಗೆ ಒಳಪಡಿಸಿ ಅದರ ಹರಿವನ್ನು ವಿಸ್ತಾರಗೊಳಿಸುತ್ತ ನಮ್ಮನ್ನು ನಾವು ಒರೆಗೆ ಹಚ್ಚಿ ನೋಡಿಕೊಳ್ಳುವ, ಕನ್ನಡಿಯಂತೆ ಸ್ವಚ್ಚ, ಸುಂದರ, ಮಧುರ ಭಾವಪೂರ್ಣ…. ಅಕ್ಕನ ವಚನಗಳ ಆಳ, ಅಗಲ, ಉದ್ದ ಇವುಗಳನ್ನು ಮಾಪನ ಮಾಡಲಾಗದು….
ವಿಸ್ತಾರದ ರೂಹು ಅಳೆಯಲಾಗದ್ದು….
ಅಕ್ಕನೆಂದರೆ ಆರಾಧನೆ, ಅರ್ಪಣೆ, ಸಮರ್ಪಣೆ…
ಮಹಾದೇವಿ ಅಕ್ಕ ಅಧ್ಯಾತ್ಮದ ಮಹೋನ್ನತ ಮಹಾಮೇರು…
ಅಕ್ಕನ ಒಂದು ವಚನ ಬೆಳಗಿನ ಬೆಳಕಾಗಿ….

ತುಂಬಿದುದು ತುಳುಕದು ನೋಡಾ
ನಂಬಿದುದು ಸಂದೇಹಿಸದು ನೋಡಾ
ಒಲಿದುದು ಓಸರಿಸದು ನೋಡಾ
ನೆರೆಯರಿದುದು ಮರೆಯದು ನೋಡಾ
ಚೆನ್ನಮಲ್ಲಿಕಾರ್ಜುನಯ್ಯ ನೀನೊಲಿದ ಶರಣಂಗೆ
ನಿಸ್ಸೀಮ ಸುಖವಯ್ಯ

–ವೀರ ವಿರಾಗಿಣಿ ಅಕ್ಕಮಹಾದೇವಿ

ತುಂಬಿದುದು ತುಳುಕದು ನೋಡಾ
ಪರಿಪೂರ್ಣ ವ್ಯಕ್ತಿತ್ವ ಹೊಂದಿದ ಜ್ಞಾನಿಗಳು ತುಂಬಿದ ಕೊಡದಂತೆ ಸಪ್ಪಳ ಹಾಗೂ ತುಳುಕಾಡುವಿಕೆ ಇಲ್ಲದ ಶಾಂತ ಹಾಗೂ ಸ್ಥಿರ ನಿರ್ಮಲ ಚಿತ್ತವುಳ್ಳವರು…ನಿಗರ್ವಿಗಳು ಆಗಿರುತ್ತಾರೆ. ಅವರು ಎಲ್ಲರಿಗೂ ಒಳಿತು ಬಯಸುವ ಹದುಳ ಹೃದಯಿಗಳು.
ನಂಬಿದುದು ಸಂದೇಹಿಸದು ನೋಡಾ
ಜೀವನದಲ್ಲಿ ನಂಬಿಕೆ ಬಹಳ ಮುಖ್ಯವಾದದ್ದು..
ಸ್ನೇಹದಲ್ಲಿ ಭಕ್ತಿಯಲ್ಲಿ ಪ್ರೀತಿಯಲ್ಲಿ ನಂಬಿಕೆ ಇರಬೇಕು
ನಂಬಿ ಕರೆದೊಡೆ ಓ ಎಂಬನೇ ಶಿವನು ಎಂದು ಶರಣರು ನುಡಿದಿದ್ದಾರೆ. ಮಗು ತಾಯಿಯ ಮೇಲೆ ಎಂದೂ ಸಂದೇಹ ಪಡುವುದಿಲ್ಲ. ಇದೇ ನಂಬಿಕೆ ಅಕ್ಕ ತನ್ನ ಆರಾಧ್ಯ ದೈವ ಚೆನ್ನಮ್ಮಲ್ಲಿಕಾರ್ಜುನನಲ್ಲಿ ಇಟ್ಟಿದ್ದಾರೆ..
ಒಲಿದುದು ಓಸರಿಸದು ನೋಡಾ
ನಿಜವಾದ ಭಕ್ತಿ ಭಾವ ತುಂಬಿದ ಆರಾಧನೆ, ಅರ್ಪಣೆ, ಸಮರ್ಪಣೆ ಎಂದೂ ದೂರವಾಗುವುದಿಲ್ಲಾ.. ಏನೇ ಅಡೆ ತಡೆಗಳು ಬಂದರೂ ಎದುರಿಸುವುದೇ ಪ್ರೀತಿ ಪ್ರೇಮ ಸ್ನೇಹ ಭಕ್ತಿಯ ರೀತಿ..
ನೆರೆಯರಿದುದು ಮರೆಯದು ನೋಡಾ
ಪಾಪ ಪುಣ್ಯದ ಒಡಲಾದ ಈ ದೇಹ ಮನಸಿನಲ್ಲಿ ಅರಿವು ಮೂಡಿ ಆ ಅರಿವಿನ ಬೆಳಕಿನಲ್ಲಿ ಯಾವುದು ಸರಿ, ಯಾವುದು ತಪ್ಪು ಎಂದು ಮನನವಾದಾಗ , ಆ ಅರಿವು ಎಂದೂ ಮರೆತು ಹೋಗುವುದಿಲ್ಲ.. ನಂದಾ ದೀಪದಂತೆ ಬೆಳಗಿ ದಾರಿ ದೀಪವಾಗಿ ಸನ್ಮಾರ್ಗದಲ್ಲಿ ನಡೆಸುತ್ತದೆ
ಚೆನ್ನಮಲ್ಲಿಕಾರ್ಜುನಯ್ಯ ನೀನೊಲಿದ ಶರಣಂಗೆ ನಿಸ್ಸೀಮ ಸುಖವಯ್ಯ
ಅಕ್ಕ ಹೇಳುತ್ತಾರೆ.ಆನಂದದ ಅಲೆಗಳ ಮೇಲೆ ಭಕ್ತನ ಹೃನ್ಮನಗಳ ಉಯ್ಯಾಲೆ. ಪರಮಾತ್ಮನೊಲಿದಾಗ ಈ ಭವದ ಜೀವಿಗಳ ಆನಂದಕ್ಕೆ ಪಾರವೇ ಇಲ್ಲ. ನೀನೊಲಿದ ಮೇಲೆ ನೋವುಗಳಿಲ್ಲ… ದುಃಖವಿಲ್ಲ… ಪರಮೋನ್ನತ ಭಕ್ತಿಯ ಸಂತಸದ ಭಾವ ಬಂಧುರದ ಭಾಗ್ಯ ತನ್ನಂತೆ ಪರರ ಕಾಣುವ , ಪ್ರೀತಿ ಸ್ನೇಹ ಹೃದಯದಲ್ಲಿ ತುಂಬಿ ಕೊಂಡ ಪರಿಪೂರ್ಣ ನಿರ್ಮಲ ಚರಿತ್ರರು ನೀನೊಲಿದ ಸಕಲ ಹೃದಯಗಳು ಎಂಬ ಭಾವವನ್ನು ಈ ವಚನದಲ್ಲಿ ಬಿಂಬಿಸಿ ಮಹಾತ್ಮರ ಜ್ಞಾನಿಗಳ ವ್ಯಕ್ತಿತ್ವವನ್ನು ಕಟ್ಟಿಕೊಟ್ಟಿದ್ದಾರೆ ಅಕ್ಕ..

-ಇಂದಿರಾ ಮೋಟೆಬೆನ್ನೂರ. ಬೆಳಗಾವಿ

Don`t copy text!