ಹೊಸಪುಸ್ತಕ
ಆಂಧ್ರದಿಂದ ಬಂದ ಅನುಭಾವಿಯ ಕನ್ನಡ ಸ್ವರವಚನಗಳ ಅಪೂರ್ವ ಸಂಕಲನ
ಪುಸ್ತಕದ ಹೆಸರು : ಶ್ರೀ ಘನಮಠ ಶಿವಯೋಗಿಗಳವರ ಸ್ವರವಚನಗಳು
ಸಂಪಾದಕರು : ಡಾ. ಕೆ. ಶಶಿಕಾಂತ
ಪ್ರಕಾಶಕರು : ಶ್ರೀ ಘನಮಠೇಶ್ವರ ಮಠ, ಸಂತೆಕೆಲ್ಲೂರ, ೨೦೨೪
ಪುಟ : ೨೩೨ ಬೆಲೆ : ರೂ. ೧೫೦
ಸಂಪಾದಕರ ಸಂಪರ್ಕವಾಣಿ : ೭೯೭೫೮೫೧೨೦೮
‘ಶ್ರೀ ಗುರು ಬಸವಲಿಂಗಾಯ ನಮಃ’ ಎಂಬ ಮಂತ್ರವನ್ನು ಹಾಡಿನ ರೂಪದಲ್ಲಿ ಸಮಸ್ತ ಬಸವಭಕ್ತರ ಮನಸ್ಸಿನಲ್ಲಿ ಬೇರೂರುವಂತೆ ಮಾಡಿದ ಮೊಟ್ಟ ಮೊದಲ ಕೀರ್ತಿ ಘನಮಠದ ನಾಗಭೂಷಣ ಶಿವಯೋಗಿಗಳವರಿಗೆ ಸಲ್ಲುತ್ತದೆ. ಬಸವಣ್ಣನವರ ನಾಮವು ಮಂತ್ರವಾಗಿ ನಿತ್ಯ ಪಠಿಸಬೇಕೆಂಬ ಹಂಬಲದಿಂದ ಶಿವಯೋಗಿಗಳು ತಮ್ಮ ಸ್ವರವಚನಗಳ ಮೂಲಕ ಲೋಕದ ಜನರಿಗೆ ತಿಳಿಸುವ ಕಾರ್ಯವನ್ನು ಮಾಡಿದರು. ಅಪ್ಪಟ ಬಸವತತ್ವವನ್ನು ಅಕ್ಷರಶಃ ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಿದ್ದ ಘನಮಠ ಶಿವಯೋಗಿಗಳು ನಿಜವಾದ ಶರಣಧರ್ಮದ ಮರ್ಮವನ್ನು ತೋರಿದವರು.
ಲಿಂಗಾಯತ ಧರ್ಮವನ್ನು ಅನುರಿಸುವರು ಬಹುತೇಕ ಕೃಷಿಕರು. ಹೀಗಾಗಿ ಕೃಷಿಕರ ಬದುಕು ಬಂಗಾರವಾಗಲೆಂದು ಘನಮಠ ಶಿವಯೋಗಿಗಳು ‘ಕೃಷಿಜ್ಞಾನ ಪ್ರದೀಪಿಕೆ’ ಎಂಬ ಮೌಲಿಕ ಗ್ರಂಥವನ್ನು ರಚನೆ ಮಾಡಿದರು. ಒಬ್ಬ ಸಾಧಕನು ರೈತನಾಗಿ ಲೋಕದ ಜನತೆಗೆ ಆಹಾರ ಬೆಳೆಯುವಂತೆ, ತನ್ನ ದೇಹವನ್ನೇ ಕೃಷಿಭೂಮಿಯಂತೆ ಪರಿಭಾವಿಸಿ, ಆತ್ಮಕಲ್ಯಾಣವನ್ನು ಸಾಧಿಸುವ ಉಭಯ ಉಪಯೋಗಿ ವಿಚಾರಗಳನ್ನು ಕೃಷಿಜ್ಞಾನ ಪ್ರದೀಪಿಕೆ ಕೃತಿಯ ಮೂಲಕ ತಿಳಿಸಿದ ಶ್ರೇಷ್ಠ ಚಿಂತಕರು ಘನಮಠ ಶಿವಯೋಗಿಗಳು. ಹಾಗೆಯೇ ಸ್ವರವಚನಗಳನ್ನು ರಚಿಸುವ ಮೂಲಕ ಸಾಮಾನ್ಯ ಜನರೂ ಪರತತ್ವ ಚಿಂತನೆಯನ್ನು ಅರಿಯಲು ದಾರಿ ತೋರಿದ್ದಾರೆ. ಇಂತಹ ಮಹಾ ಅನುಭಾವಿಗಳ ೧೫೦ ಅಮೂಲ್ಯ ಸ್ವರವಚನಗಳನ್ನು ಶಾಸ್ತ್ರಶುದ್ಧವಾಗಿ ಶ್ರಮ-ಶ್ರದ್ಧೆಯಿಂದ ಸಂಪಾದಿಸಿದವರು ಡಾ. ಕೆ. ಶಶಿಕಾಂತ ಅವರು.
ಡಾ. ಕೆ. ಶಶಿಕಾಂತ ಅವರು ಘನಮಠ ಶಿವಯೋಗಿಗಳ ಜೀವನ-ಸಾಧನೆ-ಅವರ ಸ್ವರವಚನಗಳ ಕುರಿತು ಕಳೆದ ಇಪ್ಪತ್ತೈದು ವರ್ಷಗಳಿಂದ ಅಧ್ಯಯನ-ಸಂಶೋಧನೆ ಮಾಡುತ್ತ ಬಂದಿದ್ದಾರೆ. ‘ಘನಮಠದರ‍್ಯರ ತತ್ವಪದಗಳು : ಒಂದು ಅಧ್ಯಯನ’ ಎಂಬ ಸಂಶೋಧನಾ ಪ್ರಬಂಧವನ್ನು ಬರೆದು ೨೦೦೧ರಲ್ಲಿಯೇ ಎಂ.ಫಿಲ್ ಪದವಿ ಪಡೆದಿದ್ದರು. ಈ ಕೃತಿಯನ್ನು ದೇಶನೂರು ವಿರಕ್ತಮಠದ ‘ಲಿಂಗಾಯತ ಅಧ್ಯಯನ ಸಂಸ್ಥೆ’ಯವರು ಪ್ರಕಟಮಾಡಿದ್ದರು.
ಡಾ. ಕೆ. ಶಶಿಕಾಂತ ಅವರು ಘನಮಠದರ‍್ಯರ ಕುರಿತು ನಿರಂತರವಾಗಿ ಅಧ್ಯಯನ ಮಾಡುತ್ತಲೇ ಬಂದಿದ್ದಾರೆ. ಈ ಅಧ್ಯಯನದ ಫಲವಾಗಿ ೧೫೦ ಸ್ವರವಚನಗಳನ್ನು ಸಂಗ್ರಹಿಸಿ ೨೦೦೬ರಲ್ಲಿ ಪ್ರಕಟಿಸಿದ್ದರು. ಈಗ ಮತ್ತಷ್ಟು ಪರಿಷ್ಕರಿಸಿ ನೂತನ ಆವೃತ್ತಿಯನ್ನು ೧೪ ಜನೆವರಿ ೨೦೨೪ರಂದು ಹೊರತಂದಿರುವುದು ನಿಜಕ್ಕೂ ಅಧ್ಯಾತ್ಮ ಮುಮುಕ್ಷಗಳಿಗೆ ಕೈಪಿಡಿಯೊಂದನ್ನು ಕೊಟ್ಟಂತಾಗಿದೆ.
ಘನಮಠ ಶಿವಯೋಗಿಗಳು ರಚಿಸಿದ ಸ್ವರವಚನ ಸಾಹಿತ್ಯ ಪ್ರಕಾರದ ಹುಟ್ಟು ಬೆಳವಣಿಗೆ ಬಗ್ಗೆ ಡಾ. ಕೆ. ಶಶಿಕಾಂತ ಅವರು ಅಭ್ಯಾಸಪೂರ್ಣ ಪ್ರಸ್ತಾವನೆಯಲ್ಲಿ ಚರ್ಚಿಸಿದ್ದಾರೆ. ತತ್ವಪದ, ಕೈವಲ್ಯಪದ, ಅನುಭಾವ ಪದ, ಹಾಡುಗಬ್ಬ ಹೀಗೆ ನಾನಾ ಹೆಸರುಗಳಿಂದ ಕರೆಯುವ ಗೀತ ಸಾಹಿತ್ಯವನ್ನು ಎರಡು ವಿಧದಲ್ಲಿ ಸಂಪಾದಕರು ವಿಂಗಡಿಸಿರುವುದು ಅವರ ಔಚಿತ್ಯಜ್ಞಾನಕ್ಕೆ ನಿದರ್ಶನವಾಗಿದೆ. ಅವಧೂತರು ಬರೆದ ಪದಗಳನ್ನು ‘ತತ್ವಪದ’ಗಳೆಂದು, ಶರಣ ಮಾರ್ಗಾವಲಂಬಿ ಶಿವಯೋಗಿಗಳು ರಚಿಸಿದ ಪದಗಳನ್ನು ‘ಸ್ವರವಚನ’ಗಳೆಂದು ಸ್ಪಷ್ಟವಾಗಿ ಗುರುತಿಸಿರುವುದು ಅವರ ನಿಶ್ಚಿತ ಪಾಂಡಿತ್ಯಕ್ಕೆ ಸಾಕ್ಷಿಯಾಗಿದೆ.
ಶರಣರು ರಚಿಸಿದ ಈ ಹಾಡುಗಳಿಗೆ ಮೊದಲು ‘ವಚನ’ ಎಂದು ಕರೆಯುತ್ತಿದ್ದಂತೆ ಕಂಡುಬರುತ್ತದೆ. ಮುಂದೆ ಗದ್ಯಗಂಧಿಯಾದ ಅವರ ವಚನಗಳಿಂದ ರಾಗ ತಾಳ ಸಮನ್ವಿತವಾದ ಈ ಹಾಡುಗಳನ್ನು ಬೇರ್ಪಡಿಸಿ ಹೇಳಲು ಗೀತ, ಹಾಡು, ಸ್ವರಪದ, ಸ್ವರವಚನ, ತತ್ವಪದ ಎಂದು ಕರೆಯತೊಡಗಿದರೆಂದು ಕಾಣುತ್ತದೆ. ಆದರೆ ಈ ಶರಣರ ಸ್ವರವಚನ ಸಾಹಿತ್ಯದ ದಿಕ್ಕನ್ನು ತಪ್ಪಿಸಿದವರು ಡಾ. ಎಲ್. ಬಸವರಾಜು ಅವರು. ‘ಶಿವದಾಸ ಗೀತಾಂಜಲಿ’ ಎಂಬ ಸಂಕಲನದ ಮೂಲಕ ಶರಣರನ್ನು ದಾಸರ ಮಟ್ಟಕ್ಕೆ ತಂದು ನಿಲ್ಲಿಸಿದರು. ೧೨ನೇ ಶತಮಾನದಲ್ಲಿ ಈ ಸಾಹಿತ್ಯದ ಉಗಮವಾಯಿತು ಎಂದು ಹೇಳುವ ಎಲ್. ಬಸವರಾಜು ಅವರ ವಿವರಣೆ ಹೀಗಿದೆ:
“ಇಡೀ ಭಾರತೀಯ ಸಾಹಿತ್ಯಕ್ಕೆ ವಚನವೆಂಬ ಅಭೂತಪೂರ್ವ ಕಾಣಿಕೆಯನ್ನು ಕೊಟ್ಟ ಶಿವದಾಸರು ತಮ್ಮ ಕಾಲಕ್ಕೆ ಅಥವಾ ತತ್ಪೂರ್ವಕ್ಕೆ ಕನ್ನಡದಲ್ಲಿಲ್ಲದಿದ್ದ ಹಾಡುಗಳನ್ನು ಬರೆಯಲೂ ಮೊದಲಿಗರಾದರು. ಶಿವಶರಣರು ಬರೆದ ಈ ಹಾಡುಗಳು ಪಲ್ಲವದಿಂದ ಕೂಡಿ ಬೇರೆ ಬೇರೆ ರಾಗಗಳಲ್ಲಿ ಹಾಡಲು ಅನುವರಿತು ರಚಿತವಾದ ಗೇಯಕೃತಿಗಳು. ಮುಂದೆ ೧೫-೧೬ನೆಯ ಶತಮಾನಗಳಲ್ಲಿ ಹರಿದಾಸರು ಯಾವ ಕೀರ್ತನ ಸಾಹಿತ್ಯ ಪ್ರಕಾರದಿಂದ ಇಡೀ ದಕ್ಷಿಣ ಭಾರತದ ಸಂಗೀತ ಮತ್ತು ಸಾಹಿತ್ಯ ಪ್ರಪಂಚಗಳೆರಡರಲ್ಲೂ ಅದ್ವಿತೀಯ ಕೀರ್ತಿಯನ್ನು ಗಳಿಸಿದರೋ ಆ ಕೀರ್ತನ ಪ್ರಕಾರಕ್ಕೆ ೧೨ನೆಯ ಶತಮಾನದ ಬಸವಾದಿ ಶಿವದಾಸರ ಈ ಗೀತಾ (ಹಾಡುಗಳ) ಪ್ರಕಾರವು ಮೂಲವೂ ಮಾದರಿಯೂ ಆಗಿದ್ದವು.”
ಹರಿದಾಸರಿಗಿಂತ ಶಿವಶರಣರಿಗೆ ಹೆಚ್ಚಿನ ತೂಕ ತಂದುಕೊಡುವ ಅಭಿಮಾನದ ಅವರಸದಲ್ಲಿ ಘನ ವಿದ್ವಾಂಸರಾದ ಬಸವರಾಜು ಅವರು ತಮ್ಮ ಸಂಕಲನಕ್ಕಿಟ್ಟ ‘ಶಿವದಾಸ ಗೀತಾಂಜಲಿ’ ಹೆಸರು ತಪ್ಪಾಗಿದೆ. ಹರಿದಾಸರಿಗೆ ಶಿವಶರಣರನ್ನು ಪ್ರತಿಸ್ಪರ್ಧಿಗಳಂತೆ ಕಲ್ಪಿಸಿ ‘ಶಿವದಾಸ’ರನ್ನಾಗಿಸಿದರು. ‘ಶರಣ’ ‘ದಾಸ’ ಎಂಬ ಪದಗಳ ನಿಘಂಟಿನ ಅರ್ಥಗಳಲ್ಲಿ ಸಾಮ್ಯತೆ ಇರಬಹುದು. ಆದರೆ ಅವುಗಳಿಗಿರುವ ಸಾಂಸ್ಕೃತಿಕ ಅರ್ಥವನ್ನು ಬಸವರಾಜು ಅವರು ಗ್ರಹಿಸದೇ ಹೋದರು. ‘ದಾಸರು’ ಎಂದರೆ ಹರಿದಾಸರು ಮಾತ್ರ ಶರಣರು ಎಂದರೆ ಶಿವಶರಣರು ಮಾತ್ರ. ‘ಶಿವ’ಶರಣರನ್ನು ‘ದಾಸ’ರನ್ನಾಗಿಸುವುದು, ‘ಹರಿ’ದಾಸರನ್ನು ಹರಿ ‘ಶರಣ’ರನ್ನಾಗಿಸುವುದು ಸಂಸ್ಕೃತಿಯ ಮಿಡಿತನವನ್ನರಿಯದ ಪಾಂಡಿತ್ಯದ ಕಸರತ್ತು ಅಷ್ಟೇ.
ಈ ಸಂಕಲನಕ್ಕೆ ‘ಗೀತಾಂಜಲಿ’ ಎಂದುದೇಕೆ? ನಮ್ಮಲ್ಲಿ ‘ಹಾಡು’ ‘ಪದ’ ರೂಢಿಯಲ್ಲಿವೆ. ‘ಗೀತ’ ಎಂಬುದು ಒಂದು ಕಾಲಕ್ಕೆ ಶುದ್ಧಶಾಸ್ತ್ರೀಯವಾಗಿ ಹಾಡುತ್ತಿದ್ದ ಒಂದು ರಚನೆ. ಇದು ಶಿವಶರಣರಿಗೆ ಮೇಲ್ತರದ ಅಂತಸ್ತು ದೊರಕಿಸಿಕೊಡುವ ಉದ್ದೇಶದಿಂದ ನಡೆಸಿದ ಸಂಸ್ಕೃತೀಕರಣದ ಪ್ರಕ್ರಿಯೆ ಏನೋ ಎಂದೆನಿಸುತ್ತದೆ.
ಈ ಅನುಭಾವ ಸಾಹಿತ್ಯವನ್ನು ಸ್ವರವಚನಗಳು ಎಂಬ ಹೆಸರಿನಿಂದ ಕರೆಯುವುದು ಎಷ್ಟು ಔಚಿತ್ಯ ಎಂಬುದನ್ನು ಈ ಹಿಂದೆ ಡಾ. ಬಸವರಾಜ ಮಲಶೆಟ್ಟಿ ಅವರು ‘ಸ್ವರವಚನ : ಒಂದು ಮರುಚಿಂತನೆ’ ಎಂಬ ಸಂಶೋಧನಾತ್ಮಕ ಲೇಖನವನ್ನು ಸಂಕ್ರಮಣದಲ್ಲಿ ಪ್ರಕಟಿಸಿ, ತತ್ವಪದ, ಕೈವಲ್ಯಪದ, ಅನುಭಾವ ಪದ, ಹಾಡುಗಬ್ಬ ಎಂಬ ಈ ಸಾಹಿತ್ಯವನ್ನು ಕೆಲವು ವಿದ್ವಾಂಸರು ಉದ್ದೇಶಪೂರ್ವಕವಾಗಿ ಇಡೀ ಸಾಹಿತ್ಯ ಚರಿತ್ರೆಯಲ್ಲಿಯೇ ಇಲ್ಲದ ‘ಸ್ವರವಚನ’ ಎಂಬ ಹೆಸರಿನಿಂದ ಕರೆದು ತಪ್ಪು ಮಾಡುತ್ತಿದ್ದಾರೆ ಎಂದು ಬರೆದಿದ್ದರು.
ಇಂತಹ ಎಲ್ಲ ಅಪಸವ್ಯಗಳನ್ನು ದೂರೀಕರಿಸಿ ಸಂಪಾದಕರಾದ ಡಾ. ಕೆ. ಶಶಿಕಾಂತ ಅವರು ಘನಮಠ ಶಿವಯೋಗಿಗಳ ಪದಗಳನ್ನು ‘ಸ್ವರವಚನಗಳು’ ಎಂಬ ಹೆಸರಿನಿಂದ ಗುರುತಿಸಿದ್ದು ಯಥಾಯೋಗ್ಯವಾದ ನಿರ್ಣಯವಾಗಿದೆ. ಸ್ವರ ವಚನವೆಂದರೆ ಪ್ರಾರಂಭದಲ್ಲಿ ಪಲ್ಲವಿ ಇಲ್ಲವೆ ಅನುಪಲ್ಲವಿ ಆಮೇಲೆ ಕೆಲವು ಪದ್ಯಗಳು, ಕೊನೆಗೆ ಕಡ್ಡಾಯವಾಗಿ ಅಂಕಿತದ ಮುದ್ರಿಕೆ. ಇದು ಸ್ವರವಚನದ ರೂಪಮುದ್ರೆ. ಸಾಮಾನ್ಯವಾಗಿ ಪ್ರತಿಯೊಂದು ತತ್ವಪದದ ತಲೆಯ ಮೇಲೆ ರಾಗಗಳ ಕೆಲವೊಮ್ಮೆ ತಾಳಗಳ ನಿರ್ದೇಶನವಿರುತ್ತದೆ. ಈ ಮಾದರಿಯನ್ನು ಮುಂದಿಟ್ಟುಕೊಂಡು ಶರಣ ಪರಂಪರೆಯ ನಿಜಗುಣ ಶಿವಯೋಗಿ, ಸರ್ಪಭೂಷಣ ಶಿವಯೋಗಿ, ಬಾಲಲೀಲಾ ಮಹಾಂತ ಶಿವಯೋಗಿ, ಘನಮಠ ಶಿವಯೋಗಿ ಮೊದಲಾದವರು ಒಂದು ದೊಡ್ಡ ಪರಂಪರೆಯನ್ನೇ ನಿರ್ಮಾಣ ಮಾಡಿದರು. ಅಂತೆಯೆ ಇಂದಿಗೂ ಉತ್ತರ ಕರ್ನಾಟಕದ ಜನಸಾಮಾನ್ಯರ ತುದಿ ನಾಲಿಗೆಯ ಮೇಲೆ ಈ ಸ್ವರವಚನಗಳು ಉಳಿದುಕೊಂಡು ಬಂದಿರುವುದು ಅವುಗಳ ಶಕ್ತಿ ಸಾಮರ್ಥ್ಯಕ್ಕೆ ಉಜ್ವಲ ನಿದರ್ಶನವಾಗಿವೆ.
ಡಾ. ಕೆ. ಶಶಿಕಾಂತ ಅವರು ‘ಕೈವಲ್ಯ’ ‘ಅನುಭಾವ’ ‘ಸ್ವರ’ ಮೊದಲಾದ ಪದಗಳ ನಿಷ್ಪತ್ತಿಯನ್ನು ಕುರಿತು ಅತ್ಯಂತ ಸ್ಪಷ್ಟವಾಗಿ ವಿವರಣೆ ನೀಡುತ್ತ, ಸ್ವರವಚನ ಎಂಬ ಪದವೇ ಸೂಕ್ತ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.
ಸAಪಾದಕರು ಪ್ರಸ್ತಾವನೆಯಲ್ಲಿ ಘನಮಠ ಶಿವಯೋಗಿಗಳ ಜೀವನ-ಸಾಧನೆಯ ವಿವರಗಳನ್ನು ಸಂಕ್ಷಿಪ್ತವಾಗಿಯಾದರೂ ಸಮಗ್ರವಾಗಿ ನೀಡಿದ್ದಾರೆ. ಆಂಧ್ರಪ್ರದೇಶದ ಅತ್ರಾಫ್ ಬಲ್ದಾ ಜಿಲ್ಲೆಯ ದೋರ್ವಾಡ (ದಾರೂರು) ಎಂಬ ಗ್ರಾಮದಲ್ಲಿ ಜನಿಸಿದ ಘನಮಠ ಶಿವಯೋಗಿಗಳು ಕನ್ನಡ ನಾಡಿಗೆ ಬಂದು, ಕನ್ನಡ ಭಾಷೆಯನ್ನು ಕಲಿತು, ಕನ್ನಡದಲ್ಲಿ ಸಾಹಿತ್ಯ ನಿರ್ಮಿಸಿದ್ದು ನಿಜಕ್ಕೂ ಸಾಹಸದ ಸಂಗತಿಯೇ ಆಗಿದೆ. ಬಾಲ್ಯದಲ್ಲಿಯೇ ವೈರಾಗ್ಯದತ್ತ ಸಾಗಿದ ಅವರು ಹಳ್ಳಿಗೆ ಏಕರಾತ್ರಿ; ಪಟ್ಟಣಕ್ಕೆ ಪಂಚರಾತ್ರಿ ಎಂಬಂತೆ ಲೋಕ ಸಂಚಾರ ಮಾಡುತ್ತ, ಬಸವ ತತ್ವ ನಿಷ್ಠೆಯನ್ನು ಜನಮನದಲ್ಲಿ ಬಿತ್ತಿ ಬೆಳೆಯುತ್ತ ಸಂತೆಕೆಲ್ಲೂರಿಗೆ ಬಂದು ನೆಲೆನಿಲ್ಲುತ್ತಾರೆ. ತಾವು ಲಿಂಗೈಕ್ಯರಾದ ನಂತರ, ತಮ್ಮ ದೇಹವನ್ನು ಅಂತ್ಯಸಂಸ್ಕಾರ ಮಾಡಬೇಡಿ, ಮೇಲಾಗಿ ಗದ್ದುಗೆ ಕಟ್ಟಬೇಡಿ ಎಂದು ನಿಷ್ಠುರವಾಗಿ ಹೇಳುತ್ತಾರೆ. ಗದ್ದುಗೆ ಕಟ್ಟಬೇಡಿರೆಂದು ಹೇಳಿದ ಏಕೈಕ ಶಿವಯೋಗಿ ಎಂದರೆ ಘನಮಠ ಶಿವಯೋಗಿಗಳು. ಇಷ್ಟಲಿಂಗ ನಿಷ್ಠೆ, ಬಸವ ತತ್ವದ ದಾರಿಯಿಂದ ವಿಮುಖರಾಗಿ ಗದ್ದುಗೆ ಪೂಜೆಯಲ್ಲಿಯೇ ಲಿಂಗಾಯತರು ಕಾಲಕಳೆಯಬಾರದು ಎಂಬ ಉದಾತ್ತ ಆಶಯ ಅವರದಾಗಿತ್ತು ಎಂಬುದು ಇದರಿಂದ ತಿಳಿದು ಬರುತ್ತದೆ.
ಘನಮಠ ಶಿವಯೋಗಿಗಳ ೧೫೦ ಸ್ವರವಚನಗಳನ್ನು ಸಂಪಾದಕರು ೯ ವಿಷಯಗಳಲ್ಲಿ ವಿಭಾಗಿಸಿದ್ದಾರೆ. ಬಸವಸ್ತುತಿ ಭಾಗದಲ್ಲಿ ೨೮, ಗುರುಸ್ತುತಿ ಭಾಗದಲ್ಲಿ ೭, ಶರಣ ಸ್ತುತಿ ಭಾಗದಲ್ಲಿ ೧೪, ಇಷ್ಟಲಿಂಗ, ಪ್ರಾಣಲಿಂಗ ಭಾವಲಿಂಗ ಜಂಗಮಲಿಂಗ ಭಾಗದಲ್ಲಿ ೪, ಭಕ್ತಿಯ ವಿಧಾನ ಭಾಗದಲ್ಲಿ ೫, ಆತ್ಮಸಿದ್ಧಿಯ ಮಾರ್ಗ ಭಾಗದಲ್ಲಿ ೫, ವ್ಯಕ್ತಿ-ಸಾಮಾಜಿಕ-ನೀತಿ ಖಂಡನೆ-ವಿಡಂಬನೆ ಭಾಗದಲ್ಲಿ ೧೬, ಶಿವಸ್ತುತಿ ಭಾಗದಲ್ಲಿ ೫೬, ಮಂಗಳಾರತಿ ಭಾಗದಲ್ಲಿ ೧೫ ಸ್ವರವಚನಗಳನ್ನು ಸಂಗ್ರಹಿಸಿ ಕೊಟ್ಟಿದ್ದಾರೆ. ೧೯೪೩ರಲ್ಲಿಯೇ ಸಂ. ಶಿ. ಭೂಸನೂರಮಠ ಅವರು ‘ಭಕ್ತಿ ಸುಧಾಸಾರ’ ಎಂಬ ಹೆಸರಿನಿಂದ ಘನಮಠ ಶಿವಯೋಗಿಗಳ ೧೪೮ ಸ್ವರವಚನಗಳನ್ನು ಸಂಗ್ರಹಿಸಿ ಧಾರವಾಡ ಮುರುಘಾಮಠದಿಂದ ವಿಸ್ತೃತ ಪ್ರಸ್ತಾವನೆಯೊಂದಿಗೆ ಪ್ರಕಟಿಸಿದ್ದರು.
ತದನಂತರ ಸಂತೆಕೆಲ್ಲೂರಿನ ಶ್ರೀಗಳು ‘ಘನಮಠೇಶ ತತ್ವಪದಗಳು’ ಎಂಬ ಹೆಸರಿನಿಂದ ಪ್ರಕಟಿಸಿದ್ದರು. ಈ ಎಲ್ಲ ಸಂಗ್ರಹಗಳಿಗಿಂತ ಹೆಚ್ಚು ಪರಿಷ್ಕರಣ ಮಾಡಿ, ಶಾಸ್ತçಶುದ್ಧವಾದ ಗ್ರಂಥಸಂಪಾದನೆ ನೆಲೆಯಲ್ಲಿ ಡಾ. ಕೆ. ಶಶಿಕಾಂತ ಅವರು ಪ್ರಸ್ತುತ ಕೃತಿಯನ್ನು ಪ್ರಕಟಿಸಿದ್ದಾರೆ. ಮೂರು ಹೊಸ ಸ್ವರವಚನಗಳನ್ನು ಶೋಧಿಸಿ ಒಟ್ಟು ೧೫೦ ಸ್ವರವಚನಗಳನ್ನು ಸಂಗ್ರಹಿಸಿದ್ದಾರೆ.
‘ಬಸವೇಶಾ ಪಾಲಿಸೋ ಶಶಿಭೂಷಾಕರನೇ’, ‘ಧ್ಯಾನವ ಮಾಡೋ ನಿಜಗುರು ಧ್ಯಾನವ ಮಾಡೋ’, ‘ಗುರು ತೋಂಟದ ಸಿದ್ಧಗೆ ಬೆಳಗಿರಿ’, ‘ಏಳು ಮನುಜರರಿ’, ‘ನಿಟಿಲಾಕ್ಷನ ಭಜಿಸೋ’, ‘ಓದಿ ಓದಿಯೇನಾದಿ ಮರುಳೆ’, ‘ಕಾಗಿ ಕರೆಯುತಾದೋ’, ‘ದೂಷಣೆ ಮಾಡಲದೊಂದೆ ಜನರತಿ ಭೂಷಣ ಮಾಡಲದೊಂದೆ’ ಮೊದಲಾದ ಸ್ವರವಚನಗಳು ನಿತ್ಯನೂತನವಾಗಿವೆ. ಎಷ್ಟು ಸಲ ಓದಿದರೂ, ಕೇಳಿದರೂ ಮತ್ತೆ ಮತ್ತೆ ಮನನ ಮಾಡಬೇಕೆನಿಸುತ್ತದೆ. ಮಾನವ ಜೀವನಕ್ಕೆ ದಾರಿದೀಪವೂ ತೋರು ಬೆರಳೂ ಆಗಿರುವ ಈ ಸ್ವರವಚನಗಳು ಇಂದಿಗೂ ನಮ್ಮ ಗ್ರಾಮೀಣ ಜನರ ಮನದಲ್ಲಿ ಭಕ್ತಿಯ ಬೆಳೆಯನ್ನು ಬೆಳೆಯುತ್ತಿವೆ.
ನ್ಯಾಯನಿಷ್ಠುರಿ ದಾಕ್ಷಿಣ್ಯಪರನಾನಲ್ಲ ಎಂಬ ಬಸವವಾಣಿಯಂತೆ ಘನಮಠ ಶಿವಯೋಗಿಗಳು ಕೆಲವು ಸಲ ಲೋಕದ ಜನರ ರೀತಿ ನೀತಿ ನಡಾವಳಿ ಕಂಡು ಕ್ರೋಧಗೊಂಡಿದ್ದಾರೆ. ಆ ಕೋಪ ಅವರ ಸ್ವರವಚನಗಳಲ್ಲಿಯೂ ಮೂಡಿ ಬಂದಿದೆ. ನಾಗರ ಪಂಚಮಿ ದಿನ ಭಕ್ತರ ಮನೆಗೆ ಭಿಕ್ಷೆಗೆ ಹೋದಾಗ ಮನೆಯ ಯಜಮಾನ ‘ಇನ್ನೂ ನಾಗಪ್ಪಗ ಹಾಲ ಹಾಕಿಲ್ಲ, ಇನ್ನು ನಿನಗೇನ ನೀಡತಾರ ಹೋಗು’ ಎಂದು ಹೇಳಿದಾಗ ಘನಮಠ ಶಿವಯೋಗಿಗಳು ಕನಲಿ ಕೆಂಡವಾಗಿ ಅಲ್ಲಿಯೇ ಆಶುಕವಿತ್ವದಿಂದ ‘ಎಲ್ಲಿ ಭಕ್ತಿಯದೆಲ್ಲಿ ಮುಕ್ತಿಯದೋ ಈ ಸೂಳೆ ಮಕ್ಕಳಿಗೆಲ್ಲಿ ಭಕ್ತಿಯದಲ್ಲಿ ಮುಕ್ತಿಯದೋ’ ಎಂದು ಹಾಡಿದ ಸಂಗತಿಯನ್ನು ಸಂಪಾದಕರು ತುಂಬ ಅರ್ಥಪೂರ್ಣವಾಗಿ ದಾಖಲಿಸಿದ್ದಾರೆ.
ಒಟ್ಟಾರೆ, ಡಾ. ಕೆ. ಶಶಿಕಾಂತ ಅವರ ಪರಿಶ್ರಮ ಕಾರಣವಾಗಿ ಘನಮಠ ಶಿವಯೋಗಿಗಳ ಈ ಸ್ವರವಚನ ಸಾಹಿತ್ಯ ಮತ್ತೊಮ್ಮೆ ಪ್ರಕಟವಾಗಿರುವುದು ಅತ್ಯಂತ ಸಂತೋಷದ ಸಂಗತಿಯಾಗಿದೆ. ಅಧ್ಯಾತ್ಮಜೀವಿಗಳಿಗೆ ಇಲ್ಲಿಯ ಪದಗಳು ಹಾಲುಜೇನಿನಂತಿವೆ. ಭವ ಸಾಗರವನ್ನು ದಾಟುವ ಮಾರ್ಗಕ್ರಮವನ್ನು ತೋರುವ ಇಂತಹ ಸ್ವರವಚನಗಳ ಅಧ್ಯಯನ-ಅನುಸಂಧಾನ-ಅನುಷ್ಠಾನವಾಗಬೇಕಾದ ಅನಿವರ‍್ಯತೆ ಇಂದು ಬಹಳಷ್ಟಿದೆ. ಜಾಗತೀಕರಣದ ಸುಳಿಗಾಳಿಗೆ ಸಿಲುಕಿ, ಭೋಗದ ಬೆನ್ನು ಹತ್ತಿರುವ ಮನುಷ್ಯನ ಮನಸ್ಸಿಗೆ ಶಾಂತಿ ಸಮಾಧಾನ ದೊರೆಯಬೇಕಾದರೆ ಇಂತಹ ಸ್ವರವಚನಗಳಿಗೆ ಮೊರೆ ಹೋಗದೇ ಬೇರೆ ದಾರಿ ಇಲ್ಲ. ಇಂತಹ ಅಪರೂಪದ ಸ್ವರವಚನಗಳನ್ನು ಸಂಪಾದಿಸಿದ ಡಾ. ಕೆ. ಶಶಿಕಾಂತ ಅವರಿಗೆ ವಂದನೆ-ಅಭಿನಂದನೆಗಳು.
–ಪ್ರಕಾಶ ಗಿರಿಮಲ್ಲನವರ
ಬೆಳಗಾವಿ
ಮೊ: ೯೯೦೨೧೩೦೦೪೧