ಅಂತರಂಗದ ‘ ಮುದ’ ರಂಗ
ಕವಿತೆಯ ಸಾರ್ಥಕತೆ ಯಾವಾಗ ….?
ಅಪಾರವಾದ ಕಾವ್ಯ ಸಂಸಾರದಲ್ಲಿ ಕವಿಯೇ ಬ್ರಹ್ಮ. ಅವನ ಇಷ್ಟದಂತೆ ಇಡೀ ವಿಶ್ವವೇ ಪರಿವರ್ತನೆ ಪಡೆಯುತ್ತದೆ ಎಂಬ ಆನಂದವರ್ಧನನ ಮಾತು ಅರ್ಥ ವತ್ತಾದುದು. ವ್ಯಾಪಕವಾಗಿ ಕಾವ್ಯಕ್ಕೂ ಜಗತ್ತಿಗೂ ಇರುವ ಆಂತರಿಕ ಸಂಬಂಧದ ಪರಿಕಲ್ಪನೆಗೆ ಕಾರಣವಾಗುವ ಕವಿಕರ್ಮದ ರಹಸ್ಯವನ್ನು ಹಿಡಿದಿಟ್ಟಿದೆ. ಕಾವ್ಯಧರ್ಮಕ್ಕೆ ಲೋಕಧರ್ಮವೇ ಮೂಲ ! ಕಾವ್ಯಾನುಭವದ ಮೊದಲ ಅಂಗ ಈ ಲೋಕ; ಎರಡನೆಯ ಅಂಗ ಕವಿ; ಮೂರನೆಯದು ಕಾವ್ಯ; ನಾಲ್ಕನೆಯದು ಓದುಗ ಅಥವಾ ಸಹೃದಯಿ ! ಕಾವ್ಯ ಎನ್ನುವುದು ವಸ್ತು ಅಥವಾ ಘಟನೆಗಳ ಯಥಾವತ್ತಾದ ನಿರೂಪಣೆ ಅಲ್ಲ. ಅದೊಂದು ಹೃದಯದಿಂದ ದೀಪ್ತವಾದ ಸೌಂದರ್ಯಾನುಭವದ ಸುಂದರ ಉಕ್ತಿ ! ಆಂಗ್ಲ ಕವಿ ಟಿ.ಎಸ್. ಎಲಿಯಟ್ ನ ಮಾತಿನಂತೆ- ” ಒಂದು ಒಳ್ಳೆಯ ಕಾವ್ಯವನ್ನು ಓದಿದಾಗ, ಅದು ಅರ್ಥವಾಗುವ ಮುಂಚೆಯೇ ಓದುಗನಿಗೆ ರಸಾನುಭವ ಉಂಟಾಗುತ್ತದೆ..” ಅರ್ಥ ಪೂರ್ಣ ಮಾತು! ಕಾವ್ಯ ಅದಕ್ಕನುಗುಣವಾಗಿ ಭಾಷೆ , ಅಲ್ಲಿ ಸಾಮಾನ್ಯ ಆಡು ಮಾತಿನಿಂದ ಭಿನ್ನವಾಗಿ ಒಂದು ವಿಶಿಷ್ಟವಾದ ಬಾಗುವಿಕೆಯನ್ನು ಪಡೆಯುತ್ತದೆ. ಕಾವ್ಯ ಸೌಂದರ್ಯ ಮತ್ತು ಸಂತೋಷಗಳನ್ನು ಒಟ್ಟಿಗೆ ಬೆಸೆಯುವ ಕಲೆ ! ಅದಕ್ಕೆ ಕಾವ್ಯದಲ್ಲಿ ಭಾವಾಭಿವ್ಯಕ್ತಿ ,ಆಶಯ ಒಳಗೊಂಡಾಗ, ರಸಪ್ರಕಾಶ , ಔಚಿತ್ಯ ವಿವೇಕ ಇದ್ದಾಗ ಕವಿತೆ ರಸಭರಿತವಾಗಿ ಓದುಗನ ಮನದೊಳಗೆ ಇಳಿದು ಹೃದಯ ತಟ್ಟುತ್ತದೆ. ಆಗ.. ಕವಿತೆ ಸಾರ್ಥಕತೆ ಹೊಂದುತ್ತದೆ .
–ಹಮೀದಾ ಬೇಗಂ ದೇಸಾಯಿ ಸಂಕೇಶ್ವರ.