ವಚನ ಸಂಶೋಧನೆ ಪಿತಾಮಹ ಡಾ.ಹಳಕಟ್ಟಿ ಫಕ್ಕಿರಪ್ಪನವರು

 ವಚನ ಸಂಶೋಧನೆ ಪಿತಾಮಹ ಡಾ.ಹಳಕಟ್ಟಿ ಫಕ್ಕಿರಪ್ಪನವರು
ವಚನ ಸಂಶೋಧನೆ ಪಿತಾಮಹ ಡಾ. ಹಳಕಟ್ಟಿ
ಫಕ್ಕಿರಪ್ಪನವರು – ಅಧ್ಯಯನ ಗ್ರಂಥ
ಲೇಖಕರು – ಡಾ. ಎಸ್.ಆರ್.ಗುಂಜಾಳ
ಬೆಲೆ – ರೂ.೫೦
ಪುಟಗಳು – ೧೧೬
ಪ್ರಕಾಶಕರು – ಬಸವಧರ್ಮ ಪ್ರಸಾರ ಸಂಸ್ಥೆ ಹಿರೇಮಠ
ಸಂಸ್ಥಾನ ಭಾಲ್ಕಿ, ಜಿ. ಬೀದರ

ವಚನ ಸಾಹಿತ್ಯ ಕನ್ನಡ ಸಾಹಿತ್ಯದ ಒಂದು ಪ್ರಮುಖ ರೂಪಗಳಲ್ಲಿ ಒಂದು. ಹನ್ನೆರಡನೆಯ ಶತಮಾನದಲ್ಲಿ ಲಿಂಗಾಯತರ ಆಂದೋಲನದ ಭಾಗವಾಗಿ ಬೆಳೆದು ಬಂತು. ಇದು ಸಾಹಿತ್ಯದ ಪರಿಭಾಷೆಯಾಗಿ ಒಂದು ಪ್ರಕಾರದ ಕಾವ್ಯ ಎನ್ನಬಹುದು. ಹಾಡಿದರೆ ಹಾಡಾಗುವ, ಓದಿದರೆ ಗದ್ಯವಾಗುವ ಕನ್ನಡದ ವಿಶಿಷ್ಟ ಕಾವ್ಯ ಪ್ರಕಾರ.ವಚನ ಸಾಹಿತ್ಯವು ತನ್ನ ಕಾಲದಲ್ಲಿ ಅಭಿವ್ಯಕ್ತಿಗೆ ಸಂಗಾತಿಯಾಯಿತು.

ವಚನ ಎಂದರೆ ಪ್ರಮಾಣ ಎಂದರ್ಥ. ಸಾಹಿತ್ಯದ ದೃಷ್ಟಿಯಲ್ಲಿ ವಚನ ಎಂದರೆ ಪರಿಶುದ್ಧ, ನೀತಿಯುಕ್ತ ಮಾತು ಎಂದರ್ಥ. ಆದರೆ ವ್ಯಾಕರಣ ದೃಷ್ಟಿಯಿಂದ ವಚನ ಎಂದರೆ ಸಂಖ್ಯೆ ಎಂದರ್ಥ. ವಚನ ಕನ್ನಡದ ಪ್ರಾಚೀನ ಸಾಹಿತ್ಯದಡಿಯಲ್ಲಿ ವರ್ಗಾಯಿಸಲ್ಪಟ್ಟಿದೆ. ಸ್ವಂತಿಕೆಯಿಂದ ಮೆರೆವ ವಚನಗಳು ಕನ್ನಡ ಸಾಹಿತ್ಯದಲ್ಲಿ ಪ್ರಭಾವಶಾಲಿ ಆತ್ಮ ವಿಮರ್ಶೆಯ ಮಾಧ್ಯಮವಾಗಿ ಸ್ವತಂತ್ರವಾಗಿ ಬೆಳೆದು ವಿಜೃಂಭಿಸಿ ಮುಂದಿನ ಸಾಹಿತ್ಯ ಪರಂಪರೆಯ ಮೇಲೆ ಪ್ರಭಾವ ಬೀರಿ ವಿಶ್ವ ಸಾಹಿತ್ಯದಲ್ಲೂ ಒಂದು ಅವಿಭಾಜ್ಯ ಅಂಗವಾಗಿ ಉಳಿದಿದೆ. ವಚನ ಸಾಹಿತ್ಯವನ್ನು ವಚನ ಗುರು ದೇವರ ದಾಸಿಮಯ್ಯ, ಮಾದಾರ ಚನ್ನಯ್ಯನವರ ಆದಿಯಾಗಿ ಗುರು ಬಸವಣ್ಣನವರು ಮತ್ತು ಅವರ ಸಮಕಾಲೀನ ಶರಣರು ನೀಡಿದರು.
ವಚನ ಪಿತಾಮಹ ಡಾ. ಹಳಕಟ್ಟಿ ಫಕ್ಕಿರಪ್ಪನವರ ಅದ್ಭುತ, ಮೌಲ್ಯಯುತವಾದ ಕೃತಿಯನ್ನು ಡಾ. ಎಸ್. ಆರ್. ಗುಂಜಾಳರವರು ನೀಡಿದ್ದಾರೆ. ಇದಲ್ಲದೆ ಗುಂಜಾಳರವರು ಹಳಕಟ್ಟಿರವರ ಕುರಿತು ಆರು ಕೃತಿಗಳನ್ನು ಸಾರಸ್ವತ ಲೋಕಕ್ಕೆ ಅರ್ಪಣೆ ಮಾಡಿದ್ದಾರೆ. ಅವುಗಳು – ವಚನ ಪಿತಾಮಹ ಡಾ. ಹಳಕಟ್ಟಿ ಫಕ್ಕಿರಪ್ಪನವರು, ಡಾ. ಹಳಕಟ್ಟಿ ಫಕ್ಕಿರಪ್ಪನವರು, ಡಾ. ಫ. ಗು. ಹಳಕಟ್ಟಿಯವರ ಶಿವಾನುಭವ ಪತ್ರಿಕೆಯ ಲೇಖನ ಸೂಚಿ ಇತ್ಯಾದಿಗಳಾಗಿವೆ. ಪ್ರಸ್ತುತ ಕೃತಿ ವಚನ ಸಂಶೋಧನೆ ಪಿತಾಮಹ ಡಾ. ಹಳಕಟ್ಟಿ ಫಕ್ಕಿರಪ್ಪನವರು. ಹದಿನೆಂಟು ಭಾಗಗಳನ್ನು ಮಾಡಿದ್ದು ಒಂದೊಂದು ಭಾಗದಲ್ಲೂ ಅನುಪಮ ವಿವರಣೆ ನೀಡುತ್ತಾ ಹೋಗಿದ್ದಾರೆ.
ಕೃತಿಯ ಮೊದಲ ಭಾಗ ವಚನ ಗುಮ್ಮಟದಲ್ಲಿ ಕನ್ನಡದ ಕಣ್ಮಣಿಯರಾದ ಬಿ. ಎಂ. ಶ್ರೀಕಂಠಯ್ಯನವರು ನಾಡಹಬ್ಬದ ಭಾಷಣ ಮಾಡಲು ಬಿಜಾಪುರಕ್ಕೆ ಇಂದಿನ ವಿಜಯಪುರಕ್ಕೆ ಬಂದಾಗ ಹಳಕಟ್ಟಿಯವರನ್ನು ಭೇಟಿಯಾಗಿ ಕೃತಾರ್ಥನಾದೆನೆಂದು ತಿಳಿಸಿದ್ದಾರೆ. ಲೋಕ ಪ್ರಸಿದ್ಧವಾದ ಗೋಲ ಗುಮ್ಮಟ ಬಿಜಾಪುರದಲ್ಲಿದ್ದರೂ ವಚನಗಳ ಸಾಹಿತ್ಯ ಸಂಗ್ರಹಿಸಿ, ಪ್ರಕಟಣೆ ಹಾಗೂ ಪ್ರಚಾರ ಮಾಡುವ ಕಾರ್ಯ ಮಾಡಿದ ಹಳಕಟ್ಟಿಯವರನ್ನು ಹೆಮ್ಮೆಯಿಂದ ವಚನ ಗುಮ್ಮಟ ಎಂದು ಕರೆದು ತಾಲೂಕು, ಜಿಲ್ಲೆ, ರಾಜ್ಯಕ್ಕೆ ಅಷ್ಟೇ ಅಲ್ಲ ಜಗತ್ತಿನ ಸಕಲ ಹೃದಯಗಳ ಮನ ಗೆಲ್ಲುವ ಕಾರ್ಯ ಮಾಡಿದ್ದಾರೆ ಎಂದು ಅಭಿನಂದನಾ ಪೂರ್ವಕವಾಗಿ ಸ್ಮರಿಸಿದ್ದಾರೆ.
ಮುಂದುವರೆದು ಹಳಕಟ್ಟಿ ಎಂಬ ಮಹಾನ್ ಚೇತನ ಗಂಧದಂತೆ ತನ್ನ ಸರ್ವಸ್ವವನ್ನು ತೇದು ವಚನ ಸಂಗ್ರಹಣೆ, ಸಂಶೋಧನೆ, ಪ್ರಕಟಣೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಕುರಿತು ಹಾಗೂ ಇಂತಹ ಒಂದು ಮಹೋನ್ನತ ಮೂರ್ತಿ ರಚಿತವಾಗಲು ಅದರ ಹಿಂದಿನ ಕಾರ್ಯ ಅವರ ತಂದೆ ಗುರುಬಸಪ್ಪನವರು ಮಾಡಿದರೆಂದು ಘಟನಾವಳಿಗಳು ಕಣ್ಣಿಗೆ ಹಾಣುವಂತೆ ವಿವರಿಸಿದ್ದಾರೆ. ಗುರುಬಸಪ್ಪನವರು ಶಿಕ್ಷಣ ಹೊಂದದ ವ್ಯಕ್ತಿ ಪಶುವಿಗೆ ಸಮಾನ ಎಂದು ಅರಿತಿದ್ದರು. ಆದುದರಿಂದ ತಮ್ಮ ಸುಪುತ್ರ ಫಕ್ಕಿರಪ್ಪನವರಿಗೆ ಮೌಲ್ಯಯುತವಾದ ಶಿಕ್ಷಣ ದೊರಕಬೇಕೆಂದು ಅರಿತು ಮಗನ ಭವ್ಯ ಬದುಕನ್ನು ಬೆಳಗಿಸಿದರು. ತಂದೆಯ ಪ್ರಯತ್ನದಿಂದಾಗಿ ಪರಿಮಳ ಸೂಸುವ ಪುಷ್ಪದಂತಾದರೆಂದು ಸ್ವಾರಸ್ಯಕರವಾಗಿ ವಿವರಣೆ ನೀಡಿದ್ದಾರೆ.
ಫ. ಗು. ಹಳಕಟ್ಟಿಯವರು ಕಾಯಿದೆ ಪರೀಕ್ಷೆ ಪಾಸಾಗಿ ಧಾರವಾಡಕ್ಕೆ ಬಂದು ಪ್ರಾಸಿಕ್ಯೂಟರ್ ಹುದ್ದೆ ಅಲಂಕರಿಸಿ ಪರೋಪಕಾರ ಕಾರ್ಯ ಮಾಡುತ್ತ ಹಳ್ಳಿ ಹಳ್ಳಿಗಳಿಗೆ ತೆರಳಿದಾಗ ಅನೇಕ ತಾಡ ಓಲೆ ಗ್ರಂಥಗಳನ್ನು ವಿಫುಲವಾಗಿ ಕಂಡ ಹಳಕಟ್ಟಿಯವರು ಇಂತಹ ಗ್ರಂಥಗಳು ಕನ್ನಡ ಭಾಷೆಯಲ್ಲಿ ಇದ್ದು ಅವು ದೇವರ ಕೋಣೆಯೊಳಗೆ ಪೆಟ್ಟಿಗೆಯಲ್ಲಿ ಹುಳುಗಳ‌ ಪಾಲಾಗುತ್ತಿರುವುದನ್ನು ಕಂಡು ವ್ಯಥೆ ಪಟ್ಟು ಮಹತ್ವದ ನಿಧಿಯಂತಿದ್ದ ತಾಳೆ ಗ್ರಂಥಗಳನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸುವ ಕಾರ್ಯಕ್ಕೆ ತಮ್ಮ ಸಮಯವನ್ನು ಮೀಸಲಾಗಿಸಿ ತಮ್ಮ ವಕೀಲಿ ವೃತ್ತಿಯನ್ನು ತ್ಯಜಿಸಿದರು. ಹೀಗೆ ಸುಮಾರು ನೂರೆಂಟು ಗ್ರಂಥಗಳನ್ನು ಸಂಶೋಧಿಸಿ, ಪರಿಷ್ಕರಿಸಿ ಹಿತಚಿಂತಕ ಮುದ್ರಣಾಲಯದ ಮೂಲಕ ಶರಣ ಸಾಹಿತ್ಯ ಮುದ್ರಿಸಿ ಬೆಳಕಿಗೆ ತಂದರೆಂದು ಅವರ ಮಹೋನ್ನತ ಕಾರ್ಯದ ಕುರಿತು ವಿಶ್ಲೇಷಣಾತ್ಮಕವಾಗಿ ವಿವರಿದ್ದಾರೆ.
ಸಾಹಿತ್ಯದಲ್ಲಡಗಿದ ಅದ್ಭುತ ಶಕ್ತಿಯನ್ನರಿತ ಹಳಕಟ್ಟಿಯವರು ರೆ. ಜೆ. ಎಸ್. ಪಾರಕಹಾರ ಎಂಬ ಆಂಗ್ಲ ಪಂಡಿತರ ಸಲಹೆಯ ಮೇರೆಗೆ ಬಸವಣ್ಣನವರ ಕೆಲವು ವಚನಗಳನ್ನು ಇಂಗ್ಲೀಷಿಗೆ ಭಾಷಾಂತರಿಸಿ’ ಇಂಡಿಯನ್ ಎಂಟಿಕ್ವರಿ’ ಎಂಬ ಪತ್ರಿಕೆಯಲ್ಲಿ ಪ್ರಕಟಿಸಿದರು. ಶರಣರ ತತ್ವಗಳನ್ನು ಜಗತ್ತಿಗೆ ಪ್ರಚಾರ ಮಾಡಬೇಕೆಂಬ ಮಹಾದಾಸೆ ಹಳಕಟ್ಟಿಯವರು ಹೊಂದಿದ್ದರು. ಆಸೆಯನ್ನು ಶ್ರದ್ಧೆಯಿಂದ ಈಡೇರಿಸಿದರು. ಲಿಂಗಾಯತ ಸಮಾಜ, ಸಾಹಿತ್ಯ, ಸಂಸ್ಕೃತಿ, ಕೃಷಿ, ಇತಿಹಾಸ ಇತ್ಯಾದಿ ರಂಗಗಳಲ್ಲಿ ಮಹತ್ವದ ಪಾತ್ರ ವಹಿಸಿದರು. ಡಾ. ಫ. ಗು. ಹಳಕಟ್ಟಿ ಇಪ್ಪತ್ತನೆಯ ಶತಮಾನದಲ್ಲಿ ಲಿಂಗಾಯತ ಸಮಾಜದ ಸಮಗ್ರ ಏಳಿಗೆಗಾಗಿ ತಮ್ಮ ಕೊನೆಯ ಉಸಿರಿರುವವರೆಗೆ ಶ್ರಮಿಸಿದ ಮಹಾನ್ ವ್ಯಕ್ತಿಯಾಗಿದ್ದರು ಎಂಬ ನುಡಿಗಳ ಮೂಲಕ ಉತ್ತಮವಾಗಿ ವಿಶ್ಲೇಷಿಸಿದ್ದಾರೆ.
ಶಿವಾನುಭವ ಗ್ರಂಥಮಾಲೆ ಮೂಲಕ ಶರಣರ ಚರಿತ್ರೆ ಮತ್ತು ವಚನ ಸಾಹಿತ್ಯ ಕುರಿತು ನೂರಾರು ಸ್ವತಂತ್ರ ಗ್ರಂಥಗಳನ್ನು ಪ್ರಕಟಿಸಿ ಕನ್ನಡಿಗರ ಪ್ರೀತಿ, ಆದರಗಳಿಗೆ ಪಾತ್ರರಾದರು. ಅವರ ಜನಪ್ರಿಯತೆ, ಪಾಂಡಿತ್ಯ, ಜನೋಪಯೋಗಿ ಕಾರ್ಯಗಳನ್ನು ಮನಗಂಡ ಅಂದಿನ ಸರ್ಕಾರ ರಾವ್ ಸಾಹೇಬ್ ಎಂಬ ಬಿರುದನ್ನಿತ್ತು ಗೌರವಿಸಿತು. ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿಯನ್ನಿತ್ತು ಸನ್ಮಾನ ಮಾಡಿತು. ಇದರಿಂದಾಗಿ ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಎಂದೇ ಪ್ರಸಿದ್ಧಿಗೆ ಬಂದರು ಎಂದು ಹಳಕಟ್ಟಿಯವರ ಕುರಿತು ಉತ್ತಮ ವಿವರಣೆ ನೀಡುವ ಮೂಲಕ ಮೌಲ್ಯಯುತವಾದ ಮಾಹಿತಿ ತಿಳಿಸಿದ್ದಾರೆ.
ಹೀಗೆ ಮುಂದುವರೆದು ಕಾಯಕ ಜೀವಿ, ಕೃಷಿ ಹಾಗೂ ಸಹಕಾರ ಕ್ಷೇತ್ರದಲ್ಲಿ ಸೇವೆ, ಬರಗಾಲ ನಿವಾರಣೆಯಲ್ಲಿ ಅವರ ಪಾತ್ರ, ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ಮತ್ತು ಡಾ. ಫ. ಗು. ಹಳಕಟ್ಟಿಯವರು ಹೀಗೆ ಹದಿನಾರು ಭಾಗಗಳಲ್ಲಿ ಡಾ. ಎಸ್. ಆರ್. ಗುಂಜಾಳರವರು ಡಾ. ಹಳಕಟ್ಟಿ ಫಕ್ಕಿರಪ್ಪನವರ ಕುರಿತಾದ ಸಂಪೂರ್ಣ ಮಾಹಿತಿ ನೀಡುವ ಮೌಲ್ಯಯುತ ಕೃತಿ ನೀಡಿದ್ದಾರೆ. ಅವರಿಗೆ ಅನಂತ ಅಭಿನಂದನೆಗಳು.
ಡಾ. ಎಸ್. ಆರ್. ಗುಂಜಾಳರವರಿಂದ ಇನ್ನೂ ಹೆಚ್ಚಿನ ಕೃತಿಗಳು ಮೂಡಿಬರಲಿ ಎಂಬುದೇ ನನ್ನ ಮನದ ಮಹದಾಸೆ.

 

ಶಬಾನ ಅಣ್ಣಿಗೆರಿ

 

 

 

 

Don`t copy text!