ವಿಶ್ವ ಜನಸಂಖ್ಯಾ ದಿನಾಚರಣೆ
ಪ್ರತಿ ವರ್ಷ ಜುಲೈ 11 ರಂದು ವಿಶ್ವದಾದ್ಯಂತ ವಿಶ್ವಜನ ಸಂಖ್ಯಾದಿನ ಎಂದು ಆಚರಿಸಲಾಗುತ್ತದೆ. ಏರುತ್ತಿರುವ ಜನಸಂಖ್ಯೆಯಿಂದಾಗುವ ಜಾಗತಿಕ ತೊಂದರೆ, ಸಮಸ್ಯೆ ಮತ್ತು ಪರಿಣಾಮ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ಆಚರಣೆಯನ್ನು ದಿನಾಂಕ 11 ಜುಲೈ 1989 ರಿಂದ ಜಾರಿಗೆ ತರಲಾಯಿತು. ಕ್ಷಣ-ಕ್ಷಣಕ್ಕೆ ಏರುತ್ತಿರುವ ಜನಸಂಖ್ಯಾ ಜಾತಿಕವಾದ ಬಹುದೊಡ್ಡ ಸಮಸ್ಯೆ ಎಂದರೂ ತಪ್ಪಲ್ಲ ಒಂದು ಅಂಕಿ ಅಂಶಗಳ ಪ್ರಕಾರ ಜಾಗತಿಕವಾಗಿ ಪ್ರತಿದಿನ 3,53,000 ಶಿಶುಗಳು ಜನಿಸುತ್ತವೆ. (ಪ್ರತಿ ನಿಮಿಷಕ್ಕೆ 265 ಮತ್ತು ಪ್ರತಿ ಕ್ಷಣಕ್ಕೆ 5 ಶಿಶುಗಳ ಜನನ) ಆದರೆ ಪ್ರತಿದಿನ ಜಾಗತಿಕವಾಗಿ 1,53,000 ವ್ಯಕ್ತಿಗಳು ಸಾವನ್ನಪ್ಪುತ್ತಾರೆ. (ಪ್ರತಿ ನಿಮಿಷಕ್ಕೆ 110 ಮತ್ತು ಪ್ರತಿಕ್ಷಣಕ್ಕೆ 2 ವ್ಯಕ್ತಿಗಳ ಮರಣ) ಕ್ಷಣ ಕ್ಷಣಕ್ಕೂ ಏರುತ್ತಿರುವ ಈ ಜನಸಂಖ್ಯಾವನ್ನು ನಿಯಂತ್ರಿಸುವ ಅನಿವಾರ್ಯತೆ ಖಂಡಿತವಾಗಿ ಇದೆ. ಎಲ್ಲವಾದಲ್ಲಿ ಪ್ರಾಥಮಿಕ ಮೂಲಭೂತ ಅವಶ್ಯಕತೆಗಳಾದ ಅನ್ನ, ನೀರು, ವಸತಿ, ವಿದ್ಯಾಭ್ಯಾಸ ಮತ್ತು ಆರೋಗ್ಯ ಅವಶ್ಯಕತೆಗಳನ್ನು ಪೂರೈಸುವದು ಕಷ್ಟವಾಗಿ ಭೂಮಂಡಲದಲ್ಲಿ ಜೀವಿಸುವುದೇ ಅಸಾಧ್ಯವಾಗಬಹುದು. 1987 ಜುಲೈ 11 ರಂದು ನಮ್ಮ ವಿಶ್ವದ ಜನಸಂಖ್ಯೆ ಅಧಿಕೃತವಾಗಿ 5 ಮಿಲಿಯನ್ (500 ಕೋಟಿ) ತಲುಪಿತು.
ಜನರಲ್ಲಿ ಜನಸಂಖ್ಯೆಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಅಮೇರಿಕ ಆಡಳಿತ ಪರಿಷತ್ತು 1989 ರಂದು ವಿಶ್ವ ಜನಸಂಖ್ಯಾ ದಿನದ ಆಚರಣೆಯನ್ನು ಜಾರಿಗೆ ತಂದಿತು. 2014 ಜನವರಿ 1ರ ಅಂಕಿ ಅಂಶಗಳ ಪ್ರಕಾರ ವಿಶ್ವದ ಜನಸಂಖ್ಯೆ 7,137,661,030 (ಸುಮಾರು 713 ಕೋಟಿ) 2015 ಜನವರಿ 1ರ ಪ್ರಕಾರ ಜನಗಣತಿಯಂತೆ ಈ ಜನಸಂಖ್ಯಾ 7,145,680,000 ಎಂದು ತಿಳಿದು ಬಂದಿದೆ. (ಸುಮಾರು 714 ಕೋಟಿ) ಈ ಜನಸಂಖ್ಯೆಯಲ್ಲಿ ಸುಮಾರು ಶೇ.60 ಮಂದಿ ಏಷ್ಯಾ ಖಂಡದಲ್ಲಿ ವಾಸಿಸುತ್ತಾರೆ. ವಿಶ್ವಜನಸಂಖ್ಯೆಯ ಶೇ. 50 ಮಂದಿ ಚೀನಾದಲ್ಲಿ, ಶೇ. 18 ಮಂದಿ ಭಾರತದಲ್ಲಿ, ಶೇ.12 ಮಂದಿ ಆಫ್ರೀಕ ದೇಶದಲ್ಲಿ, ಶೇ.11 ಮಂದಿ ಯುರೋಪದೇಶದಲ್ಲಿ, ಶೇ.8 ಮಂದಿ ಉತ್ತರ ಅಮೇರಿಕದಲ್ಲಿ ಮತ್ತು ಶೇ.5.5 ಮಂದಿ ದಕ್ಷಿಣ ಅಮೇರಿಕದಲ್ಲಿ ವಾಸಿಸುತ್ತಾರೆ ಎಂದು ಅಂಕಿಅಂಶಗಳಿಂದ ತಿಳಿದು ಬಂದಿದೆ. ನಮ್ಮ ಕರ್ನಾಟಕದಲ್ಲಿ ಶೇ.5.5 ಕೋಟಿ ಜನಸಂಖ್ಯೆ ಇದ್ದು ಭಾರತದ ಜನಸಂಖ್ಯೆ 125 ಕೋಟಿ ಗಿಂತಲೂ ಜಾಸ್ತಿಯಾಗಿರುವುದಂತೂ ಸತ್ಯ.
ಜನಸಂಖ್ಯೆ ಜಾಸ್ತಿಯಾದಂತೆ ಮೂಲಭೂತ ಅವಶ್ಯಕತೆಗಳು ಮತ್ತು ಸೌಲಭ್ಯಗಳು ದೊರಕದಿರುವುದೇ ಬಹುದೊಡ್ಡ ವಿಪರ್ಯಾಸ. ಇದರಿಂದಾಗಿ ನೂರಾರು ಸಮಸ್ಯೆಗಳು ತಲೆಎತ್ತಿವೆ. ಒಂದು ದೇಶದ ಪ್ರಗತಿ ಮತ್ತು ಪರಿಪೂರ್ಣ ಬೆಳವಣಿಗೆಗೆ ಮನುಷ್ಯ ಸಾಮಧ್ಯ ಎಷ್ಟು ಅಗತ್ಯವೋ ಅಷ್ಟೇ ರೀತಿಯಲ್ಲಿ ಏರುತ್ತಿರುವ ಜನಸಂಖ್ಯೆ ಕೂಡಾ ಬೆಳವಣಿಗೆಗೆ ಕಡಿವಾಣ ಹಾಕುತ್ತದೆ ಎಂಬುದು ನಂಬಲೇಬೇಕಾದ ಸತ್ಯ. 1987 ಜುಲೈ 11 ರಂದು 500 ಕೋಟಿ ಇದ್ದ ವಿಶ್ವದ ಜನಸಂಖ್ಯೆ 2015 ರಲ್ಲಿ ಅಂದರೆ ಕೇವಲ 28 ವರ್ಷಗಳಲ್ಲಿ 715 ಕೋಟಿಗೆ ತಲುಪಿರುವದು ಆಶ್ವರ್ಯವಿಲ್ಲ. ಭಾರತದ ಜನಸಂಖ್ಯೆ 2015ರ ಜುಲೈ ತಿಂಗಳ ಆರಂಭದಲ್ಲಿ 128 ಕೋಟಿ ತಲುಪಿದೆ. 1950 ರಲ್ಲಿ 40 ಕೋಟಿಯಷ್ಟಿದ್ದ ಜನಸಂಖ್ಯೆ 2000 ಇಸ್ವಿ ಹೊತ್ತಿಗೆ 100 ಕೋಟಿ ದಾಟಿತ್ತು.
ಇದೇ ವೇಗದಲ್ಲಿ ಮುನ್ನಡೆದರೆ 2050 ರ ಹೊತ್ತಿಗೆ ಭಾರತದ ಜನಸಂಖ್ಯೆ 170ಕೋಟಿ ತಲೂಪಿದರೂ ಆಶ್ವರ್ಯಪಡಬೇಕಿಲ್ಲ. ಜನಸಂಖ್ಯೆಯ ಆಧಾರದಲ್ಲಿ ಭಾರತಕ್ಕೆ ಚೀನಾದ ತನಂತರದ 2ನೇ ಸ್ಥಾನ ದೊರಕಿದೆ. 2025ರ ಸಮಯಕ್ಕೆ ಭಾರತ ಚೀನಾ ದೇಶವನ್ನು ಹಿಂದಿಕ್ಕಿ ಜನಸಂಖ್ಯೆ ಆಧಾರಲ್ಲಿ ಒಂದನೇ ಸ್ಥಾನಕ್ಕೆ ಜಿಗಿಯಲಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಆದರೆ ಸಂತಸದ ಸಂಗತಿಯೆಂದರೆ ಈ ಜನಸಂಖ್ಯೆಯ ಶೇ.50 ಮಂದಿ 25 ವರ್ಷಗಳಿಗಿಂತ ಕೆಳಗಿನವರು ಮತ್ತು ಶೇ. 65 ಮಂದಿ 35 ವರ್ಷಗಳಿಗಿಂತ ಕಡಿಮೆ ವಯಸ್ಸಿನವರಾಗಿರುತ್ತಾರೆ. 2020ರ ಹೊತ್ತಿಗೆ ಸರಾಸರಿ ಭಾರತೀಯ ಪ್ರಜೆಯ ವಯಸ್ಸು 29 ಆಗಿರುತ್ತದೆ ಎಂಬುದು ಸಮಾಧಾನಕರ ಅಂಶ. (ಸರಾಸರಿ ಚೀನಾ ಪ್ರಜೆಯ ವಯಸ್ಸು 37 ಮತ್ತು ಜಪಾನ ದೇಶದ ಸರಾಸರಿ ವಯಸ್ಸು 48) ಭಾರತದ ಈ ಯುವಶಕ್ತಿಯನ್ನು ಸದುಪಯೋಗಪಡಿಸಿಕೊಂಡಲ್ಲಿ ಮಾತ್ರ ಭಾರತದೇಶ ವಿಶ್ವದ ಹಿರಿಯಣ್ಣನಾಗಿ ಹೊರಮೊಮ್ಮಿವುದರಲ್ಲಿ ಯಾವುದೇ ಸಂದೇಹವಿಲ್ಲ.
700 ಕೋಟಿ ಜಾಗತಿಕ ಜನಸಂಖ್ಯೆಯಲ್ಲಿ ಸುಮಾರು 180 ರಿಂದ 200 ಕೋಟಿ ಮಂದಿ ಯುವ ಜನಾಂಗಕ್ಕೆ ಸೇರಿರುತ್ತಾರೆ. ಈ ಯುವಕ-ಯುವತಿಯರು ತಮ್ಮ ಜವಾಬ್ದಾರಿ ಅರಿತು ಜನಸಂಖ್ಯೆ ಸ್ಪೋಟದಿಂದಾಗುವ ದುಷ್ಪರಿಣಾಮಗಳ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿ ತಮ್ಮ ಜವಾಬ್ದಾರಿಯನ್ನು ಸೂಕ್ತವಾಗಿ ನಿರ್ವಹಿಸಿದಲ್ಲಿ ಬಹುತೇಕ ಜಾಗತಿಕ ತೊಂದರೆಗಳಾದ ಬಡತನ, ಅನಕ್ಷರತೆ, ಅಜ್ಞಾನ, ಅನಾರೋಗ್ಯ, ಅತ್ಯಾಚಾರ,
ಅಸುರಕ್ಷಿತ ಜೀವನಶೈಲಿ ಮುಂತಾದವುಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು.
ಅತೀ ತುರ್ತು ಜನಸಂಖ್ಯೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಯುವಕರು ಮತ್ತು ಯುವತಿಯರು ಕುಟುಂಬ ನಿಯಂತ್ರಣ ಯೋಜನೆ, ಸುರಕ್ಷಿತವಾದ ಸೆಕ್ಷ, ಹೆಣ್ಣು ಮಕ್ಕಳ ವಿದ್ಯಾಭ್ಯಾಸ, ಲಿಂಗ ತಾರತಮ್ಯದ ವಿರೋಧಿಸುವಿಕೆ ತಾಯಿ ಮತ್ತು ಮಗುವಿನ ಆರೋಗ್ಯ, ಬಡತನ, ಮಾನವ ಹಕ್ಕುಗಳು ಮತ್ತು ಆರೋಗ್ಯದ ಹಕ್ಕು ಇತ್ಯಾದಿಗಳ ಬಗ್ಗೆ ಹೆಚ್ಚು ನಿಗಾವಹಿಸಿದಲ್ಲಿ ಜನಸಂಖ್ಯೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಜನಸಂಖ್ಯೆ ಸ್ಪೋಟಗೊಂಡು ತುತ್ತು ಕೂಳಿಗೂ ತತ್ಪಾರವಾಗಿ, ಹೊತ್ತು-ಹೊತ್ತಿನ ಊಟಕ್ಕೂ ಜಗಳವಾಡಬೇಕಾದ ದುಸ್ಥಿತಿ ಬರಲೂಬಹುದು. ಪ್ರತಿಯೊಬ್ಬ ಪ್ರಜೆಯು ತನ್ನ ಜವಾಬ್ದಾರಿಯನ್ನು ಅರಿತು ಸೂಕ್ತವಾಗಿ ನಿಭಾಯಿಸಬೇಕಾದ ಅನಿವಾರ್ಯತೆ ಇದೆ. ಅದರಲ್ಲಿಯೇ ನಮ್ಮೆಲ್ಲರ ಒಳಿತು ಮತ್ತು ಜಗತ್ತಿನ ಹಿತ ಅಡಗಿದೆ.
-ಜಯಶ್ರೀ ಭ. ಭಂಡಾರಿ
ನೂತನ ಪ್ರೌಢ ಶಾಲೆ
ಜಾಲಿಹಾಳ,ಬಾದಾಮಿ